ಪ್ರಾಣಾಯಾಮ-ಒಂದು ನೋಟ : ಭಾಗ 2

Spread the love
Share Button

 Shruti

ಪ್ರಾಣಾಯಾಮ ತಂತ್ರಗಳನ್ನು ಅರಿಯುವ ಮುನ್ನ ತಿಳಿಯಬೇಕಾದ ಕೆಲವು ವಿಷಯಗಳು:

“ಸ್ಥಿರಂ, ಸುಂ, ಆಸನಂ” – ಎಂದರೆ, ಸ್ಥಿರವಾಗಿ ಆರಾಮದಾಯಕವಾಗಿ ನಿಧಾನವಾಗಿ ಆಸನಾಭ್ಯಾಸಗಳನ್ನ್ನು ಮಾಡಬೇಕು. ಆಸನಗಳನ್ನು ಹಾಕುವಾಗ ಅಥವಾ ಪ್ರಾಣಾಯಾಮ ಮಾಡುವಾಗ ಉದ್ವೇಗಕ್ಕೆಡೆಕೊಡಬಾರದು, ಮತ್ತು ಸತತ ಅಭ್ಯಾಸಗಳಿಂದ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ.

 1. ಪೂರಕ: ಉಚ್ವಾಸ – Inhale (ಉಸಿರನ್ನು ಒಳತೆಗೆದುಕೊಳ್ಳುವುದು)
 2. ರೇಚಕ: ನಿಶ್ವಾಸ – Exhale (ಉಸಿರನ್ನು ಹೊರಬಿಡುವುದು)
 3. ಕುಂಭಕ: ಮನಸ್ಸಿನ ಚಟುವಟಿಕೆಗಳನ್ನು ನಿಯಂತ್ರಿಸಲು ಅಗತ್ಯವಾದ ಹಾಗೂ ಆಳವಾದ ಉಸಿರಾಟ ವ್ಯಾಯಾಮಗಳನ್ನು ( ಪ್ರಾಣಾಯಾಮ ) ನಡೆಸಲು ಅವಶ್ಯಕವಾದಂಥಹ ಉಸಿರಿನ ಹಿಡಿತವಾಗಿದೆ. ಇದರಲ್ಲಿ ಎರಡು ವಿಧ:
 •       – ಅಂತರ್ ಕುಂಭಕ: ಉಸಿರನ್ನು ಪೂರ್ಣವಾಗಿ ಒಳತೆಗೆದುಕೊಂಡು 2-3 ಸೆಕೆಂಡ್ ಗಳ ಕಾಲ ಹಿಡಿದಿಟ್ಟುಕೊಳ್ಳಬೇಕು.
 •       – ಬಾಹ್ಯ ಕುಂಭಕ: ಉಸಿರನ್ನು ಪೂರ್ಣವಾಗಿ ಹೊರಬಿಟ್ಟು 2-3 ಸೆಕೆಂಡ್ ಗಳ ಕಾಲ ಸ್ಥಬ್ಧಗೊಳಿಸಬೇಕು. ನಂತರ ಮತ್ತೆ ಪೂರಕ ಮಾಡುವುದು.

4. ಕುಳಿತುಕೊಳ್ಳಬೇಕಾದ ಆಸನ:

ಸ್ಥಿರವಾಗಿ ಒಂದೇ ಆಸನದಲ್ಲಿ ಕುಳಿತುಕೊಂಡು ಪ್ರಾಣಾಯಾಮವನ್ನು ಮಾಡಬೇಕು. ಪ್ರತಿಯೊಂದು ಆಸನಕ್ಕೂ ಅದರದ್ದೇ ಆದ ಹಲವಾರು ಪ್ರಯೋಜನಗಳಿವೆ, ಮಾತ್ರವಲ್ಲ ಪ್ರಾಣಾಯಾಮಕ್ಕಾಗಿ ಮನಸ್ಸು, ಶರೀರಗಳನನ್ನು ವಿಶ್ರಾಂತ ಸ್ಥಿತಿಗೆ ಸೆಳೆದು ಒಳಗಿನಿಂದ ಶಕ್ತಗೊಳಿಸುವಲ್ಲಿ ಇವು ಸಹಕಾರಿ. ಕೆಳಗೆ ಹೇಳಿದ ಯಾವುದೇ ಆಸನವನ್ನು ಅನುಸರಿಸಬಹುದು.

sukhasana

ಸುಖಾಸನ

ಸುಖಾಸನ: 

ನೆಲದ ಮೇಲೆ ಕಾಲು ನೀಡಿ ಕುಳಿತುಕೊಳ್ಳಿ,
ಕಾಲುಗಳು ಒಂದಕ್ಕೊಂದು ಅಡ್ಡ ಹಾಯುವಂತೆ ಮಡಚಿರಿ(ನೆಲದ ಮೇಲೆ ಊಟಕ್ಕೆ ಕುಳಿತುಕೊಳ್ಳುವಂತೆ)
ಬೆನ್ನು, ತಲೆ ನೇರವಾಗಿರಲಿ

 

 

 

vajrasana

ವಜ್ರಾಸನ

ವಜ್ರಾಸನ:

ನೆಲದ ಮೇಲೆ ಮಂಡಿಯೂರಿ ಕಾಲುಗಳನ್ನು ಹಿಂದಕ್ಕೆ ಮಡಚಿ ಕುಳಿತುಕೊಳ್ಳಬೇಕು.

ಪೃಷ್ಠವು ಹಿಮ್ಮಡಿಗಳ ಮೇಲೆ ಬರುವಂತೆ ಇರಬೇಕು.

ಬೆನ್ನು,ತಲೆ ನೆಟ್ಟಗಿರಲಿ, ಅಂಗೈಗಳನ್ನು ಮೃದುವಾಗಿ ತೊಡೆಗಳ ಮೇಲೆ ಇಟ್ಟುಕೊಳ್ಳಿ.

 

 

 

padamasana

ಪದ್ಮಾಸನ

ಪದ್ಮಾಸನ: 
ನೆಲದ ಮೇಲೆ ಕಾಲು ನೀಡಿ ಕುಳಿತುಕೊಳ್ಳಿ,
ಒಂದು ಕಾಲನ್ನು ಅಡ್ಡ ಮಡಚಿಕೊಳ್ಳಿ.
ಇನ್ನೊಂದು ಕಾಲು ಅದರ ಮೇಲಿಂದ ಹಾಯುವಂತೆ ಅಡ್ಡಕ್ಕೆ ,ಮಡಚಿಕೊಳ್ಳಿ
ಬೆನ್ನು, ತಲೆ ನೇರವಾಗಿರಲಿ, ಮಂಡಿಗಳು ಆದಷ್ಟು ನೆಲ ತಾಗುವಂತೆ ನೋಡಿಕೊಳ್ಳಿ.

 

 

 

ಮುದ್ರೆ:

ಗಾಳಿ, ನೀರು, ಅಗ್ನಿ, ಭೂಮಿ ಮತ್ತು ಆಕಾಶ- ಪಂಚ ಭೂತಗಳಾದ ಇವುಗಳ ಅಂಶಗಳನ್ನು ನಮ್ಮ ಭೌತಿಕ ದೇಹವು ಒಳಗೊಂಡಿದ್ದು, ಇವುಗಳಲ್ಲಿನ ಅಸಮತೋಲನವು ಶಾರೀರಿಕ ವ್ಯವಸ್ಥೆಯಲ್ಲಿ ತೊಂದರೆಯನ್ನುoಟುಮಾಡುವುದು. ಈ ಅಂಶಗಳ ಯಾವುದೇ ಕೊರತೆಗಳನ್ನು ಮುದ್ರೆಗಳ ಮೂಲಕ ಸರಿಪಡಿಸಬಹುದು ಎನ್ನಲಾಗುತ್ತದೆ.

ಮುದ್ರಾ ವಿಜ್ನಾನದಲ್ಲಿ ಸಾಧಿಸಿ ದಾಖಲಿಸಿರುವಂತೆ ಕೈಯ ಐದು ಬೆರಳುಗಳು ಮೇಲೆ ಹೇಳಿದ ಐದು ಅಂಶಗಳನ್ನು ಈ ರೀತಿಯಲ್ಲಿ ಪ್ರತಿನಿಧಿಸುತ್ತವೆ.

ಹೆಬ್ಬೆರಳು: ಅಗ್ನಿ
ತೋರು ಬೆರಳು: ಗಾಳಿ
ಮಧ್ಯದ ಬೆರಳು: ಆಕಾಶ
ಉಂಗುರ ಬೆರಳು: ಭೂಮಿ
ಕಿರು ಬೆರಳು: ನೀರು

ಹೀಗೆ ಒಂದು ಅಂಶ ಪ್ರತಿನಿಧಿಸುವ ಒಂದು ಬೆರಳು, ಹೆಬ್ಬೆರಳಿನ ಸಂಪರ್ಕಕ್ಕೆ ಬಂದಾಗ(ಮುದ್ರೆ) ದೇಹದ ವಿದ್ಯುತ್ಕಾಂತೀಯ ಪ್ರವಾಹಗಳಿಂದಾಗಿ, ಆ ಅಂಶದ ಸಮತೋಲನ ಸಾಧ್ಯವೆನ್ನಲಾಗುತ್ತದೆ.

ಇವೆಲ್ಲಾ ಪಕ್ಕಕ್ಕಿಟ್ಟು ನನ್ನ ಸ್ವಂತ ಅನುಭವದಿಂದ ಹೇಳುವುದಾದರೆ, ಮುದ್ರೆಗಳ ಸಮರ್ಪಕ ಬಳಕೆಯಿಂದಾಗಿ, ನಿಯಮಿತವಾದ, ಸತತವಾದ ಅಭ್ಯಾಸದಿಂದ ಪ್ರಾಣಾಯಾಮದಲ್ಲಿ ಉಪಯೋಗವನ್ನು ಪಡೆದ ಅನುಭವವಾಗಿದೆ. ಮಾತ್ರವಲ್ಲ ಉಸಿರಾಟದ ಮೇಲೆ ಒಳ್ಳೆಯ ಹಿಡಿತ, ಸಮರ್ಪಕವಾದ ಪೂರಕ, ರೇಚಕ, ಕುಂಭಕ ಮಾತ್ರವಲ್ಲ ಬಂಧಗಳನ್ನೂ ಹಾಕಲು ಸಾಧ್ಯವಾಗುವುದು. ಪ್ರತಿ ಮುದ್ರೆಯೂ ವಿಶೇಷತೆಯನ್ನು ಹೊಂದಿದ್ದು ಅವೆಲ್ಲದರ ಪ್ರಯೊಜನ ಪಡೆಯಲು ಖಂಡಿತಾ ಸಾಧ್ಯ.

ಮುದ್ರೆಗಳು ಹಲವಾರಿದ್ದು ಪ್ರಾಣಾಯಾಮಕ್ಕೆ ಅವಶ್ಯಕವಾದ ಕೆಲವನ್ನು ನೋಡೋಣ.


ಧ್ಯಾನ ಮುದ್ರೆ

dhyanamudra

ಧ್ಯಾನ ಮುದ್ರೆ

 

ಎಡ ಅಂಗೈಯ ಮೇಲೆ ಬಲಗೈ ಯನ್ನು ಇಟ್ಟು ಹೆಬ್ಬೆರಳುಗಳನ್ನು ಪರಸ್ಪರ ತಾಗಿಸಿ ನಾಭಿ ಪ್ರದೇಶಕ್ಕೆ ಸಮಾನಾಂತರವಾಗಿ ಆಕಾಶ ಮುಖವಾಗಿ ಇಟ್ಟುಕೊಳ್ಳಬೇಕು.

 

 

 

 

ಆದಿ ಮುದ್ರೆ:

aadimudra

ಆದಿ ಮುದ್ರೆ

ಎರಡೂ ಕೈಗಳ ಹೆಬ್ಬೆರಳುಗಳನ್ನುಮಡಚಿ. ಹೆಬ್ಬೆರಳ ತುದಿಯು ಕಿರುಬೆರಳ ಬುಡವನ್ನು ತಾಗಬೇಕು. ಈನ್ನುಳಿದ ಬೆರಳುಗಳನ್ನು ಮಡಚಿ ಕೈ ಮುಷ್ಟಿ ಮಾಡಿಕೊಳ್ಳಿ. ಜಾಸ್ತಿ ಒತ್ತಡ ಬೇಡ.

 

 

 

 

ಚಿನ್ ಮುದ್ರೆ:

chinmudra

ಚಿನ್ ಮುದ್ರೆ

ಎರಡೂ ಕೈಗಳ ತೋರು ಬೆರಳು ಹಾಗೂ ಹೆಬ್ಬೆರಳನ್ನು ತಾಗಿಸಿಕೊಂಡು ಉಳಿದ ಮೂರೂ ಬೆರಳುಗಳನ್ನು ನೇರವಾಗಿ ಬಿಡಿಸಿ ಹಿಡಿದುಕೊಳ್ಳಬೇಕು. ಬೆರಳುಗಳ ಮೇಲೆ ಜಾಸ್ತಿ ಒತ್ತಡ ಹಾಕಬಾರದು.

 

 

 

chinmaya mudre

ಚಿನ್ಮಯ ಮುದ್ರೆ

 

ಚಿನ್ಮಯ ಮುದ್ರೆ: ಎರಡೂ ಕೈಗಳ ತೋರು ಬೆರಳು ಹಾಗೂ ಹೆಬ್ಬೆರಳನ್ನು ತಾಗಿಸಿಕೊಂಡು ಉಳಿದ ಮೂರೂ ಬೆರಳುಗಳನ್ನು ಮಡಚಿ ಇಟ್ಟುಕೊಳ್ಳಬೇಕು. ಬೆರಳುಗಳ ಮೇಲೆ ಜಾಸ್ತಿ ಒತ್ತಡ ಹಾಕಬಾರದು.

 

 

 

Mrugeeya mudre

ಮೃಗೀಯ ಮುದ್ರೆ

ಮೃಗೀಯ ಮುದ್ರೆ: ಬಲಗೈಯ ತೋರು ಬೆರಳು ಹಾಗೂ ಮಧ್ಯದ ಬೆರಳನ್ನು ಮಾತ್ರ ಮಡಚಿ ಉಳಿದಂಥ ಮೂರೂ ಬೆರಳುಗಳನ್ನು ನೇರವಾಗಿಟ್ಟುಕೊಳ್ಳುವುದು. ಇದು ಕೆಲವು ಪ್ರಾಣಾಯಾಮಗಳಲ್ಲಿ ಉಪಯೋಗಿಸಲಾಗುತ್ತಿದ್ದು ಆಗ ತೋರು ಬೆರಳನ್ನು ಹುಬ್ಬುಗಳ ಮಧ್ಯೆ(ಭ್ರೂಮಧ್ಯ), ಕಿರು ಬೆರಳನ್ನು ಮೂಗಿನ ಎಡ ಭಾಗ ಹಾಗೂ ಹೆಬ್ಬೆರಳನ್ನು ಮೂಗಿನ ಬಲಭಾಗದಲ್ಲಿ ಇರಿಸಿ ಮೃದುವಾಗಿ ಒತ್ತಿ ಉಸಿರಿನ ನಿಯಂತ್ರಣ ಮಾಡಲು ಉಪಯೋಗಿಸಲಾಗುವುದು.

ಉಸಿರಾಟ ವ್ಯಾಯಾಮಗಳು

ಉಸಿರಿನ ವ್ಯಾಯಾಮಗಳಲ್ಲಿ ಹಲವಾರು ವಿಧಗಳಿವೆ. ಬೇರೆ ಬೇರೆ ರೀತಿಯಲ್ಲಿ ಇದನ್ನು ವಿಂಗಡಿಸಬಹುದು. ಪ್ರಮುಖವಾದವುಗಳನ್ನು ಇಲ್ಲಿ ವಿವರಿಸಲಾಗಿದೆ:

ಶ್ವಾಸ ಸುಧಾರಣೆ

 1.  ಕಪಾಲಭಾತಿ
 2.  ಭಸ್ತ್ರಿಕ ಪ್ರಾಣಾಯಾಮ
 3.  ಬಾಹ್ಯ ಪ್ರಾಣಾಯಾಮ

ಪ್ರಾಣಾಯಾಮ:

 1. ಅನುಲೋಮ(ಸೂರ್ಯಾನುಲೋಮ, ಚಂದ್ರಾನುಲೋಮ)
 2. ಬೇಧನ(ಸೂರ್ಯ ಬೇಧನ, ಚಂದ್ರ ಬೇಧನ)
 3. ನಾಡಿ ಶೋಧನ
 4. ಉಜ್ಜಾಯಿ ಪ್ರಾಣಾಯಾಮ
 5. ಶಬ್ದ ಪ್ರಾಣಾಯಾಮ
 6. ಭ್ರಮರಿ ಪ್ರಾಣಾಯಾಮ
 7. ಶೀತಲಿ ಮತ್ತು ಶೀತ್ಕಾರಿ

ಉಸಿರಿನ ಯಾವುದೇ ವ್ಯಾಯಾಮ ಅಭ್ಯಾಸವನ್ನು ಆಹಾರ ಸೇವನೆಗೆ ಮುನ್ನ(ಅಥವಾ ಒಂದು ಆಹಾರ ಸೇವನೆಯ ೪ ಘಂಟೆಗಳ ಬಳಿಕ) ಮಾಡಬೇಕು.

 – ಶ್ರುತಿ ಶರ್ಮಾ, ಕಾಸರಗೋಡು.

(ಮುಂದುವರೆಯುವುದು..)

ಮುಂದಿನ ಭಾಗದಲ್ಲಿ ವಿವಿಧ ಉಸಿರಾಟದ ವ್ಯಾಯಾಮಗಳನ್ನೂ ಪ್ರಾಣಾಯಾಮಗಳನ್ನೂ ಮಾಡುವ ವಿಧಾನಗಳನ್ನು ತಿಳಿಸಿಕೊಡಲಾಗುವುದು.

6 Responses

 1. Dinesh Naik says:

  Nice

 2. nishkala gorur says:

  ಉತ್ತಮವಾದ ಮಾಹಿತಿ…….

 3. krisnaveni kidoor says:

  ಶಬ್ದಕ್ಕೆ ನಿಲುಕದ ಷ್ಟು ಹಿಡಿಸಿತು .ಅಪೂರ್ವದ , ಅಷ್ಟೇ ಅವಶ್ಯಕವಾದ ವಿಚಾರಗಳು .

 4. Guru Prasad Thumbasoge says:

  Nice 🙂

 5. savithribhat says:

  ಉತ್ತಮ ಮಾಹಿತಿ ಗಳಿಗಾಗಿ ಧನ್ಯವಾದಗಳು

 6. ಜಯ ಪೂಜಾರಿ says:

  ನಾನು ಸದ್ಯ ಮೂರು ಬಾರಿ ಓಂಕಾರ ಮೂರು ಬಾರಿ ಭ್ರಮರಿ ಆ ಬಳಿಕ ಗುರುಬ್ರಹ್ಮಾ ಶ್ಲೋಕ ಅದಾದ ಬಳಿಕ ಚಿನ್ಮುದ್ರಾ ಚಿನ್ಮಯ ಮುದ್ರಾ ಆದಿ ಮುದ್ರ ಮೇರುದಂಡ ಮುದ್ರಾ ಅನುಲೋಮ ವಿಲೋಮ ಪೂರ್ಣ ಮುದ್ರಾ ಮಾಡಿ ದೌತಿ ಮಾಡುತ್ತೇನೆ. ಆ ಬಳಿಕ ಇಪ್ಪತ್ತೆರಡು ನಿಮಿಷ ಸಮಾಧಿ ಧ್ಯಾನ ಮಾಡುತ್ತೇನೆ. ದಿನಕ್ಕೆ ನಾಲ್ಕು ಅಥವಾ ಆರು ಬೀಡಿ ಸೇದೂವ ಅಭ್ಯಾಸ ಉಂಟು. ಏನಾದರು ಅಪಾಯ ಉಂಟೈ?

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: