ಬಯಲುನಾಟಕ – ಜತೆಗಿರುವನು ಚಂದಿರ
ನಾಲ್ಕು ಶತಮಾನಗಳ ನಂತರವೂ ರಂಗಭೂಮಿಯ ಮೇಲೆ ತನ್ನ ಛಾಪನ್ನು ಇನ್ನೂ ಹೊಚ್ಚ ಹೊಸದೆಂಬಂತೆ ಉಳಿಸಿಕೊಂಡಿರುವ ಮಹಾನ್ ನಾಟಕಕಾರ ಮತ್ತು ಕವಿ ಷೇಕ್ಸ್ ಪಿಯರ್.
‘ಆವಿಷ್ಕಾರ’ವೇದಿಕೆಯು, ‘ಕಲೆ ಜನರಿಗಾಗಿ’ ಎಂಬ ಧ್ಯೇಯದೊಂದಿಗೆ ಸಾಹಿತ್ಯ ಸಂವಾದಗಳು, ಸಿನೆಮಾ ಪ್ರದರ್ಶನಗಳು, ಬೀದಿ ನಾಟಕಗಳು, ಪ್ರಗತಿಪರ ಗೀತೆಗಳ ಗಾಯನ, ಪುಸ್ತಕ ಪ್ರಕಟಣೆ ಇತ್ಯಾದಿ ಕಾರ್ಯಕ್ರಮgಗಳನ್ನು ನಡೆಸುತ್ತಾ ಬಂದಿದೆ. ನಿನ್ನೆ ಸಂಜೆ ಮೈಸೂರಿನ ಕೆ.ಜವರೇಗೌಡ ಉದ್ಯಾನವನದಲ್ಲಿ , ನಾನು, ಗೆಳತಿಯರೊಂದಿಗೆ ಹೋಗಿದ್ದ ಸಮಯದಲ್ಲಿ, ಅಲ್ಲಿ ಸುಶ್ರಾವ್ಯವಾಗಿ ‘ರಂಗಗೀತೆ’ಗಳನ್ನು ಹಾಡುತ್ತಿದ್ದರು. ಷೇಕ್ಸ್ ಪಿಯರ್ ನ ಜೀವನದ ಪ್ರಮುಖ ಮೈಲಿಗಲ್ಲುಗಳನ್ನು ಸೂಚಿಸುವ ಭಿತ್ತಿಪತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ಸಂಜೆ 7 ಗಂಟೆಗೆ ಶ್ರೀ ಜಯಂತ ಕಾಯ್ಕಿಣಿಯವರು ರಚಿಸಿದ ‘ಜತೆಗಿರುವನು ಚಂದಿರ‘ ನಾಟಕ ಪ್ರದರ್ಶನ ಆರಂಭವಾಯಿತು. ಈ ನಾಟಕವು ಜೋಸೆಫ್ ಸ್ಪೀನ್ ರ ‘ಫಿಡ್ಲರ್ ಆನ್ ದ ರೂಫ್” * ಅಧಾರಿತ ನಾಟಕವಾಗಿದ್ದು, ಭಾರತದ ವಿಭಜನೆಯ ಸಂದರ್ಭದಲ್ಲಿ ಸಹೃದಯ ಮುಸ್ಲಿಂ ಕುಟುಂಬವೊಂದು ಭಾರತದಿಂದ ಹೊರಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ, ಎದುರಿಸುವ ಸಂಘರ್ಷ, ಮಾನಸಿಕ ತೊಳಲಾಟ, ಭಾವನಾತ್ಮಕ ಮಾತುಗಳು ………ಇತ್ಯಾದಿ ಪ್ರೇಕ್ಷಕರ ಕಣ್ಣನ್ನು ತೇವಗೊಳಿಸುತ್ತದೆ.
ತನ್ನ ಪ್ರತಿ ಯಶಸ್ಸು ಹಾಗೂ ಸೋಲು ಎರಡರಲ್ಲೂ ದೇವರಿದ್ದಾನೆ ಎಂದು ‘ಚಂದಿರ’ನನ್ನೇ ತನ್ನ ಜತೆಗಾರನನ್ನಾಗಿಸಿ, ಅಡಿಗಡಿಗೆ ಅವನನ್ನು ಹೊಗಳುತ್ತಾ, ಕೆಲವೊಮ್ಮೆ ರೇಗುತ್ತಾ, ಜೀವನ ಸಾಗಿಸುವ ‘ಬಡೇ ಮಿಯಾ’ನ ಪಾತ್ರ ಅಚ್ಚಳಿಯದೆ ನೆನಪಿನಲ್ಲಿ ಉಳಿಯುವಂತದ್ದು. ಬೇಕರಿ ತಿನಿಸುಗಳನ್ನು ಮಾರಿ ಬರುವ ಅಲ್ಪ ಆದಾಯದಲ್ಲಿಯೇ ಸಂತೃಪ್ತ ಸಂಸಾರ ಸಾಗಿಸುತ್ತಾ, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡುವ ಈತ ತನ್ನ ಮೂರು ಹೆಣ್ಣು ಮಕ್ಕಳು ತಮಗೆ ಇಷ್ಟವಾದವರನ್ನು ಮದುವಯಾಗಲು ಹೊರಟಾಗ ಆರಂಭದಲ್ಲಿ ವಿರೋಧಿಸಿದರೂ ಆಮೇಲೆ, ಮಕ್ಕಳ ಭಾವನೆಗಳಿಗೆ ನೋವಾಗದಂತೆ ಅವರನ್ನು ಆಶೀರ್ವದಿಸಿ “ತನ್ನ ಮಕ್ಕಳು ಎಲ್ಲೇ ಇದ್ದರೂ ಅವರಿಗೆ ಮೀನಿನ ಊಟ, ಬೆಚ್ಚಗಿನ ಬಟ್ಟೆ ಸಿಗುವಂತೆ ಮಾಡು” ಎಂದು ಚಂದಿರನನ್ನೇ ಬೇಡಿಕೊಳ್ಳುವ ಅಕ್ಕರೆಯ ಅಪ್ಪನಾಗುತ್ತಾನೆ.
ಈ ನಾಟಕವನ್ನು ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ತಂಡದ ವಿಧ್ಯಾರ್ಥಿಗಳು, ಶ್ರೀ ಕಾರ್ತಿಕ್ ಎಸ್. ಅವರ ನಿರ್ದೇಶನದಲ್ಲಿ ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಿದರು. ಇದಕ್ಕೆ ಕಾರಣಕರ್ತರಾದವರೆಲ್ಲರಿಗೂ, ಸದಭಿರುಚಿಯ ಕಾರ್ಯಕ್ರಮಗಳನ್ನು ಆಯೋಜಿಸಿದ ‘ಆವಿಷ್ಕಾರ’ ವೇದಿಕೆಯ ಕಾರ್ಯಕರ್ತರಿಗೂ ಧನ್ಯವಾದಗಳು.
(*ಫಿಡ್ಲರ್ ಆನ್ ದ ರೂಫ್‘ : ಅಮೇರಿಕಾದಲ್ಲಿ ನಾಟಕರೂಪದಲ್ಲೂ, ಚಲನಚಿತ್ರವಾಗಿಯೂ ಪ್ರಸಿದ್ಧವಾದ ನಾಟಕ ಇದು. ಮೂಲಕೃತಿಯಲ್ಲಿ ಇದು ಜಾರ್ ದೊರೆಗಳ ಕಾಲದ ರಷ್ಯಾದಲ್ಲಿ ಉಚ್ಛಾಟಿಸಲ್ಪಟ್ಟು ಸರ್ವಸ್ವವನ್ನೂ ಕಳೆದುಕೊಂಡು, ವಲಸೆಹೊರಡಬೇಕಾಗಿ ಬಂದ ಅಲ್ಪಸಂಖ್ಯಾತ ಯೆಹೂದ್ಯ ಕುಟುಂಬವೊಂದರ ಕಥಾನಕ. ಮಾಹಿತಿ: ಅಂತರ್ಜಾಲ, ವಿಕಿಪಿಡಿಯ)
– ಹೇಮಮಾಲಾ.ಬಿ
ನಿಮಗೆ ನಮ್ಮ ಕಂದಗಲ್ ಹನುಮಂತರಾಯ (ಅಬಿನವ ಷೇಕ್ಸ್ ಪಿಯರ್) ನೆನಪಿದೆಯೇ ? ಕನ್ನಡ ರಕ್ತ ರಾತ್ರಿ ನಾಟಕ ಇವರು ರಚಿಸಿದ ನಾಟಕ ಮತ್ತು ಅನೇಕ ನಾಟಕಕಗಳು
ರಂಗಬೂಮಿಯಲ್ಲಿ ಪ್ರಜ್ಜ್ವಲಿಸುತ್ತಿವೆ ಇವರು ನಮ್ಮ ಷೇಕ್ಸ್ ಪಿಯ
Nice narration..
ಲೇಖನ ಚೆನ್ನಾಗಿ ಮೂಡಿ ಬಂದಿದೆ
Nice report on the program