ಲಹರಿ

ನ್ಯಾನೋ ಕಥೆಗಳು-ಮೋಕ್ಷ-ಸ್ವಾತಂತ್ರ್ಯ-ವಂಶೋದ್ಧಾರಕ

Share Button
Lakshmisha J Hegade
ಲಕ್ಷ್ಮೀಶ ಜೆ.ಹೆಗಡೆ

 

ಮೋಕ್ಷ

ಗಂಡ ಹೆಂಡತಿ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಬೈಕ್ ನಲ್ಲಿ ಮಾರ್ಕೆಟ್ ಗೆ ಬಂದಿದ್ದರು.ಖರೀದಿ ಮುಗಿದ ನಂತರ ಹೆಂಡತಿ ಬೈಕ್ ನಲ್ಲಿ ಹಿಂಬದಿ ಕೂರುವ ಮೊದಲೇ ಗಂಡ ತನ್ನವಳು ಕುಳಿತಿದ್ದಾಳೆ ಎಂದು ತಿಳಿದು ಬೈಕ್ ಚಲಾಯಿಸಿಕೊಂಡು ಹೋಗೇ ಬಿಟ್ಟ.ಹೆಂಡತಿ ಎಷ್ಟು ಕೂಗಿದರೂ ಅವನಿಗೆ ಕೇಳಲೇ ಇಲ್ಲ.ತುಸು ದೂರ ಹೋಗುವಷ್ಟರಲ್ಲಿ ಎದುರಿನಿಂದ ಬಂದ ಲಾರಿಗೆ ಢಿಕ್ಕಿ ಹೊಡೆದು ಇಹಲೋಕ ತ್ಯಜಿಸಿದ. ಸಪ್ತಪದಿ ಇಡುವ ಸಮಯದಲ್ಲಿ ಹೇಳಿದಂತೆ ಧರ್ಮ,ಅರ್ಥ,ಕಾಮಗಳಲ್ಲಿ ಜೊತೆಯಾದವನಿಗೆ ಪತ್ನಿಯೊಂದಿಗೆ ಮೋಕ್ಷದೊಂದಿಗೆ ಜೊತೆಯಾಗಲು ಇಷ್ಟವಿರಲಿಲ್ಲವೋ ಏನೋ..

******************

ಸ್ವಾತಂತ್ರ್ಯ

4 ವರ್ಷದ  3- 4 ಮಕ್ಕಳು ಹಣಕೊಟ್ಟು ಶಿಕ್ಷಣ ಪಡೆಯುವ LKG ಗೆ ಮಣಭಾರದ ಚೀಲ ಬೆನ್ನಿಗೇರಿಸಿಕೊಂಡು ಹೋಗುತ್ತಿದ್ದರು.ಪಕ್ಕದಲ್ಲಿದ್ದ ರಸ್ತೆಗೆ ಡಾಂಬರು ಹಾಕುವವನ ಮಗುವೊಂದು ತನಗಿರುವ ಸ್ವಾತಂತ್ರ್ಯವನ್ನು ನೋಡಿ ಖುಷಿಯಿಂದ ನಗುತ್ತಾ ಮಣ್ಣಿನಲ್ಲಿ ಆಡುತ್ತಿತ್ತು.

******************

ವಂಶೋದ್ಧಾರಕ

ನಿನಗೆ ತಮ್ಮ ಬೇಕೋ ತಂಗಿ ಬೇಕೋ ಎಂದು ಪ್ರತಿ ಸಲವೂ 3 ವರ್ಷದ ಹೆಣ್ಣು ಮಗುವಿನ ಬಳಿ ಆಸ್ಪತ್ರೆಯ ಹೊರಗೆ ನಿಂತುಕೊಂಡು ಅಪ್ಪ ಕೇಳಿದಾಗಲೂ ಮಗು ತಂಗಿ ಬೇಕು ಎಂದೇ ಹೇಳುತ್ತಿತ್ತು.ಅಪ್ಪ ಪ್ರತಿ ಸಲವೂ ತಮ್ಮ ಬೇಕೆಂದೇ ಹೇಳಬೇಕೆಂದು ಮಗುವಿಗೆ ಗದರುತ್ತಿದ್ದ.ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಮಲಗಿರುವ ತಾಯಿಯ ಚೀರಾಟ ಜೋರಾಗುತ್ತಿದ್ದಂತೆ ಅಪ್ಪ ಮಗುವಿಗೆ ಗದರುವುದನ್ನೂ ಜೋರು ಮಾಡಿದ್ದ.ಮಕ್ಕಳ ಕೋರಿಕೆಯನ್ನು ದೇವರು ಬೇಗ ಪೂರೈಸುತ್ತಾನೋ ಏನೋ ಕೊನೆಗೂ ಮಗುವಿಗೆ ತಂಗಿಯೇ ಹುಟ್ಟಿತು.ಮಗು ಖುಷಿಯಿಂದ ನಲಿದಾಡಿತು.ಅಪ್ಪ ಮಾತ್ರ ವಂಶೋದ್ಧಾರಕನಿಗಾಗಿ ತಾನು ಇನ್ನೆಷ್ಟು ಸಲ ಪ್ರಯತ್ನಿಸಬೇಕೋ ಎಂದು ಚಿಂತಿಸತೊಡಗಿದ.

 

– ಲಕ್ಷ್ಮೀಶ ಜೆ.ಹೆಗಡೆ

4 Comments on “ನ್ಯಾನೋ ಕಥೆಗಳು-ಮೋಕ್ಷ-ಸ್ವಾತಂತ್ರ್ಯ-ವಂಶೋದ್ಧಾರಕ

  1. ಇಂಥ ಸಣ್ಣ ಕಥೆಗಳು ಚೆನ್ನಾಗಿ ಓದಿಸಿಕೊಂಡು ಖುಷಿ ಕೊಡುತ್ತದೆ .

Leave a Reply to vinay Kumar Cancel reply

 Click this button or press Ctrl+G to toggle between Kannada and English

Your email address will not be published. Required fields are marked *