ಬೊಗಸೆಬಿಂಬ

ಚಟಗಳ ಚಟಕ್ಕೆ ಬಿದ್ದು

Share Button
Smith Amritaraj
ಸ್ಮಿತಾ ಅಮೃತರಾಜ್

ಬೆಳಗಿನ ಸಿಹಿ ನಿದ್ದೆಯಿಂದ ಆಕಳಿಸುತ್ತಾ ಎದ್ದು ಮತ್ತೆ ರಾತ್ರೆಯ ನಿದ್ದೆಗೆ ಅಮರಿಕೊಳ್ಳುವವರೆಗೆ ಒಂದೊಂದೇ ಮಾಡಿ ಮುಗಿಸಲೇ ಬೇಕಾದ ಅನಿವಾರ್ಯ ಕೆಲಸಗಳಿರುತ್ತವೆ.ಅಚ್ಚರಿಯ ಸಂಗತಿಯೆಂದರೆ ಆ ಪುರುಸೊತ್ತಿಲ್ಲದ ಕೆಲಸಗಳ ನಡುವೆಯೂ ತಮ್ಮ ಏಕತಾನತೆಯನ್ನು ನೀವಾಳಿಸಿಕ್ಕೊಂಡು ಮತ್ತೆ ಉಲ್ಲಸಿತರಾಗಿ ಗೆಜ್ಜೆ ಕಟ್ಟಿಕ್ಕೊಂಡು ಕುಣಿಯುವಷ್ಟು ಹುರುಪು ಆವಾಹಿಸಿಕ್ಕೊಳ್ಳಲು ಸಾಮಾನ್ಯವಾಗಿ ಒಬ್ಬೊಬ್ಬರು ಒಂದೊಂದು ಚಟಕ್ಕೆ ಬಿದ್ದಿರುತ್ತಾರೆ ಎಂಬುದು ಸೋಜಿಗದ ಸಂಗತಿ.

ಬೆಳಗ್ಗೆ ಎದ್ದೊಡನೇ ಅರಳಿಕೊಳ್ಳುವ ನಸುಕಿನಲ್ಲಿ ಜನರು ವಾಕ್ ಹೋಗುವುದು ,ಹಾದಿ ತುಂಬಾ ಜಾಗಿಂಗ್ ಮಾಡುತ್ತಾ ಕುಣಿಯುತ್ತಾ ಸಾಗುವುದು ಎಲ್ಲೆಡೆ ಸರ್ವೇ ಸಾಮಾನ್ಯ.ಕೆಲವರ ಮನೆಯ ನಾಯಿಗಳಿಗೂ ಈ ಸೌಭಾಗ್ಯ.ಮೊದ ಮೊದಲಿಗೆ ಆರೋಗ್ಯ ಕಾಪಾಡಿಕೊಳ್ಳಲು ಕಂಡು ಕ್ಕೊಂಡ ಉಪಾಯ ಇದಾದರೂ ತದನಂತರ ಇದೊಂದು ಚಟವಾಗಿ ಪರಿಣಮಿಸುವುದೂ ಸುಳ್ಳೇನಲ್ಲ.ಎ.ಸಿ.ಕಾರ್ ನೊಳಗೆ ಕುಳಿತು ಪಾರ್ಕಿನ ತನಕ ಡ್ರೈವ್ ಮಾಡಿಕ್ಕೊಂಡು ಹೋದರೂ ಅಡ್ಡಿ ಇಲ್ಲ.ಪಾರ್ಕಿನೊಳಗೆ ಮಾತ್ರ ಅಚ್ಚುಕಟ್ಟಾಗಿ ಎಲ್ಲರ ಜೊತೆಗೂಡಿ ಬಿರುಸಿನ ಹೆಜ್ಜೆ ಹಾಕದಿದ್ದರೆ ಮಾತ್ರ ಅವರುಗಳಿಗೆ ಸಮಾಧಾನವೇ ಇಲ್ಲ.

ಕೆಲವರಿಗೆ ಮಧ್ಯಾಹ್ನ ಹೊತ್ತು ಸಣ್ಣಗೊಂದು ನಿದ್ದೆ ತೆಗೆಯುವ ಅಭ್ಯಾಸವಿದೆ.ಅಂತವರ ಮನೆಗೆ ಹೊತ್ತು ಗೊತ್ತಿಲ್ಲದೆ ನೀವು ದಾಳಿ ಮಾಡಿದಿರೋ ,ನಿಮಗೆ ಅಂತಹ ಭವ್ಯ ಸ್ವಾಗತವಂತು ಖಂಡಿತಾ ಸಿಗಲಾರದು.ತನ್ನ ನಿದ್ದೆ ಹಾಳು ಮಾಡಲು ಬಂದ ಶುದ್ಧ ವೈರಿಗಳೆಂದೇ ಪರಿಗಣಿಸಿ ಔಪಚಾರಿಕತೆಯ ನಾಲ್ಕು ಮಾತನಾಡಿದರೇ ಹೆಚ್ಚು.

ಅಂತೆಯೇ ಮನೆ ಮನೆಯಲ್ಲಿ ನಿರಂತರ ಓತಪ್ರೋತವಾಗಿ ಧಾರಾಕಾರವಾಗಿ ಧಾರವಾಹಿಗಳ ಧಾರೆಗೆ ಮನಸ್ಸೊಡ್ಡಿಕ್ಕೊಂಡು ಸುಖಿಸುವ ಮನೆ ಮಂದಿಯ ನಡುವೆ ಕುಳಿತು ನೀವು ಮಾತಿನ ಧಾರೆ ಎರೆಯಲು ಶುರುವಿಟ್ಟಿರೋ ಅದು ಅಪಶಕುನ ಎಳೆದುಕ್ಕೊಂಡಂತೆ.ಇದರಲ್ಲಿ ತಪ್ಪೆಷ್ಟೋ ಒಪ್ಪೆಷ್ಟೋ..ಅದು ಅವರವರ ಭಾವಕ್ಕೆ ಬಿಟ್ಟ ವಿಷಯ.ಅದೇನೇ ಇರಲಿ ಕೆಲವೊಂದು ಚಟಕ್ಕೆ ನಾವು ಬಿದ್ದು ಬಿಟ್ಟೆವೆಂದರೆ,ಅದರಿಂದ ಹೊರಬರುವುದು ನೀರಿನಿಂದ ತೆಗೆದ ಮೀನಿನಂತ ಚಡಪಡಿಕೆ.

Black teaನನ್ನಪ್ಪನಿಗೆ ಆಗಾಗ್ಗೆ ಕಪ್ಪು ಚಹಾ ಅಂದರೆ, ಕಣ್ಣ ಚಹಾ ಕುಡಿಯುವ ಅಭ್ಯಾಸ ಇತ್ತು.ಇದು ಬಹುಷ: ಹೆಚ್ಚಿನ ಅಪ್ಪಂದಿರ ಚಟವೂ ಹೌದು.ಕೆಲಸದ ನಡುವೆ ಒಂದು ಕಪ್ ಕಪ್ಪು ಚಹಾ ಅದು ಎಷ್ಟು ರೂಡಿಯಾಗಿಬಿಟ್ಟಿತ್ತು‌ಎಂದರೆ,ಇಡೀ ದಿನ ಕೆಲಸವಿಲ್ಲದೆ ಕಾಲ ಕಳೆದರೂ ಕೂಡ ಒಂದು ಲೋಟ ಕರಿ ಚಹಾ ಅಂತು ಒದಗಿ ಬರಲೇಬೇಕಿತ್ತು.ಈ ವಿಷಯದಲ್ಲಿ ನೆಂಟರಿಷ್ಟರ ಆಗಮನವಾಯಿತೆಂದರೆ ಬೇರೆ ಕೇಳಬೇಕೆ? ಡಬಲ್ ಧಮಾಕ.

ನನ್ನ ವಿಷಯಕ್ಕೆ ಬಂದರೆ,ನನ್ನದೊಂದು ಸ್ವಲ್ಪ ವಿಚಿತ್ರ ಚಟ.ಕೆಲ ವರುಷಗಳ ಹಿಂದೆ ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪನವರ ಯಾವುದೋ ಒಂದು ಪುಸ್ತಕ ಓದುತ್ತಿದ್ದೆ.ಬಹುಷ:ಪಾಪು ಪ್ರಪಂಚ ಇರಬಹುದು.ಅದರಲ್ಲಿ ದಿನದಲ್ಲಿ 15 ನಿಮಿಷವಾದರೂ ಓದುವ ಅಭ್ಯಾಸ ಬೆಳೆಸಿಕ್ಕೊಳ್ಳಿ ಅಂತ ಓದಿದ್ದೊಂದೇ ಗೊತ್ತು.ಅಲ್ಲಿಂದ ಮೇಲೆ ಹೆಚ್ಚು ಕಡಿಮೆ ಈ ಒಂದು ಕೆಲಸವನ್ನು ಒಂದು ವ್ರತದಂತೆ ಇಲ್ಲಿಯವರೆಗೆ ಪಾಲಿಸಿಕ್ಕೊಂಡು ಬಂದಿರುವೆ.ಅಪ್ಪಿ ತಪ್ಪಿ ಎರಡಕ್ಷರ ಓದಲಿಕ್ಕಾಗದ ದಿನ ಮಾತ್ರ ಏನೋ ಕಳಕ್ಕೊಂಡ ಉದಾಸಭಾವ.ಆದರೆ ವೃತ್ತ ಪತ್ರಿಕೆ ಓದೋದ್ರಲ್ಲಿ ಮಾತ್ರ ನಾ ಸ್ವಲ್ಪ ಹಿಂದು.ನಂದು ಏನಿದ್ರೂ ಸಾಹಿತ್ಯಕೃತಿಗಳು,ಕೈಗೆ ಸಿಕ್ಕ ಮ್ಯಾಗಜಿನ್‌ಗಳು.ಹೆಚ್ಚೆಂದರೆ ನ್ಯೂಸ್ ಪೇಪರ್ ಮೇಲೆ ಕಣ್ಣಾಡಿಸೋದಕ್ಕೆ ನಂಗೆ ಎರಡೇ ಎರಡು ನಿಮಿಷ ಸಾಕು.ಹಾಗಾಗಿ ನನ್ನ ಸಾಮಾನ್ಯ ಜ್ನಾನವೋ ದೇವರೇ ಬಲ್ಲ.ಆದರೆ ಬೆಳಗ್ಗಿನ ಒಂದು ಗಂಟೆ ಹೊತ್ತು ಎಲ್ಲಾ ಕೆಲಸಗಳನ್ನು ಬದಿಗೊತ್ತಿ ವೃತ್ತ ಪತ್ರಿಕೆಗಳ ಪದ ಪದಗಳ ಮೇಲೂ ಕಣ್ಣಾಡಿಸಿ,ಎಲ್ಲಾ ಸಮಾಚಾರಗಳನ್ನು ಜೀರ್ಣಿಸಿಕ್ಕೊಂಡು ಜಗತ್ತಿನ ಎಲ್ಲಾ ವಿಚಾರಗಳನ್ನು ತಿಳಿದುಕ್ಕೊಂಡೆನೆಂದು ಭೀಗುತ್ತಾ ನನ್ನ ಪತಿರಾಯ ಬರುವಾಗ ನನಗೆ ಹೊಟ್ಟೆಕಿಚ್ಚು ಬರೋದಿದೆ.

ಹೀಗೊಂದು ದಿನ ದಡಬಡಿಸಿ ಕೆಲಸ ಮುಗಿಸಿ ಮೆಲ್ಲಗೆ ಪುಸ್ತಕ ಬಿಡಿಸಿ ಕುಳಿತ್ತಿದ್ದೆ ಅಷ್ಟೆ.ಅಷ್ಟರಲ್ಲಿ ಪರಿಚಿತರೊಬ್ಬರು ಸುಮ್ಮಗೆ ಮಾತನಾಡಿಸಿ ಕಾಡು ಹರಟೆ ಮಾಡಿಹೋಗಲು ಬಂದಿದ್ದರು.ಅತಿಥಿ ದೇವೋಭವ ಅಂತಾರೆ.ಇತ್ತ ಬಂದವರ ಉಪಚಾರ.ಅತ್ತ ಬಿಡಿಸಿ ಓದಲು ಶುರುವಿಟ್ಟಪುಸ್ತಕ. ನನಗೆ ಹೇಳಿಕೊಳ್ಳಲಾಗದ ತಳಮಳ.ಅವರಿಗೆ ಮಾಮೂಲಿನಂತೆ ಔಪಚಾರಿಕ ಉಪಚಾರ ಮಾಡಿದರೂ ಮನಸ್ಸು ಪುಸ್ತಕದ ನಡುವೆಯೇ ತೇಲಿ ಹೋಗುತ್ತಿದೆ.
ಮತ್ತೆ ವಿರಾಮ ನಮ್ಮ ಕಾಲ ಬಳಿ ಸುರಿದುಕ್ಕೊಂಡು ಬಿದ್ದರೂ ನಮಗೆ ಅದರತ್ತ ಆಸ್ಥೆ ಮೂಡುವುದಿಲ್ಲ.ಅದು ನಮ್ಮ ಮನಸ್ಸಿನ ನಿಯಮವೋ ಅಥವ ನಮ್ಮದೇ ನಿರ್ಧಾರವೋ?

skyಅದೇನೋ ಗೊತ್ತಿಲ್ಲ.ನಿಗದಿತ ಸಮಯ ಮೀರಿಬಿಟ್ಟರೆ ಕೆಲವೊಮ್ಮೆ ಚಟಗಳೂ ಹಠಕ್ಕೆ ಬಿದ್ದು ಬಿಡುತ್ತವೆ.ಇದು ಹಗಲಿಗೆ ನೇತು ಹಾಕಿಕ್ಕೊಂಡ ನನ್ನ ಚಟವಾದರೆ ಸಂಜೆಯ ಹೊತ್ತಿಗೆ ಮತ್ತೊಂದು ಅಭ್ಯಾಸ. ಅದು ಅಂತಿಂತ ಚಟವಲ್ಲ. ಅನಂತ ಆಗಸವನ್ನ ಸಿಕ್ಕಷ್ಟೂ ಬಾಚಿ ಕಣ್ಣಲ್ಲಿ ತುಂಬಿಟ್ಟು ಕೊಳ್ಳುವ ಹಠ.ಸಂಜೆಯ ಏಕಾಂತದಲ್ಲಿ ಎಣೆಯಿಲ್ಲದ ಆಗಸಕ್ಕೆ ಲಗ್ಗೆಯಿಟ್ಟು ,ಅಲ್ಲಲ್ಲಿ ಚದುರಿಕ್ಕೊಂಡ ನಕ್ಷತ್ರ ಕನಸುಗಳನ್ನು ಬಿಡದೇ ಪೋಣಿಸುವುದು ಒಂದು ಸುಂದರ ಅನುಭೂತಿ.

ಸಂಜೆ ಗೂಡಿಗೆ ತೆರಳುವ ಹಕ್ಕಿಗಳು.ಕತ್ತಲು ಪೂರ್ತಿ ಮೆತ್ತಿಕೊಳ್ಳುವವರೆಗೂ ಕೆಲಸ ಮಾಡುತ್ತಾ ಓಡಾಡುವ ಇರುವೆ ದಂಡು.ಬೆಟ್ಟದಂಚಿಗೆ ನೇತುಕ್ಕೊಂಡ ಆಗಸ.ಸಂಜೆಯೊಂದು ಧ್ಯಾನಸ್ಥ ಸ್ಥಿತಿಯಲ್ಲಿ ಕಳೆದು ಹೋಗುತ್ತಿರುವಾಗ,ಖಾಲಿ ಆಗಸವನ್ನು ಶೂನ್ಯ ಮನದಾಳಕ್ಕೆ ಎಳೆದುಕೊಳ್ಳುತ್ತಿರುವ ಹೊತ್ತಿಗೆ ,ಸುಮ್ಮಗೆ ಹಾಳು ಹರಟೆ ಹೊಡೇಯೋದಿಕ್ಕೆ ಮನಸ್ಸು ಹೇಗೆ ತಾನೇ ಒಪ್ಪೀತು?

ಇಂತಹ ಒಂದು ಪುಟ್ಟ ಸುಂದರ ಚಟದಿಂದ ಮತ್ತೆ ಮುಂದೆ ಮಾಡಬೇಕಾದ ಕೆಲಸಗಳು ಚಟಪಟಾ ಅಂತ ಜಟ್ ಪಟ್ ಸಾಗುವ ಹಾಗಿದ್ದರೆ..ತಡವೇಕೆ?

ನೀವ್ಯಾಕೆ ಚಟವೊಂದಕ್ಕೆ ದಾಸರಾಗಬಾರದು?.ಗಮನಿಸಿ ದಯವಿಟ್ಟು ದುಶ್ಟಗಳಿಗಂತೂ ಖಂಡಿತಾ ಅಲ್ಲ.

 

-ಸ್ಮಿತಾ ಅಮೃತರಾಜ್, ಸಂಪಾಜೆ.

7 Comments on “ಚಟಗಳ ಚಟಕ್ಕೆ ಬಿದ್ದು

  1. ಸುಲಲಿತವಾಗಿ ಓದಿಸಿಕೊಂಡು ಹೋಗುವ ಸಾಲುಗಳು….. ನಿಮ್ಮ ಚಟ ನಿರಾತಂಕವಾಗಿ ಮುಂದುವರೆಯಲಿ,,,..ನನ್ನ ಚಟದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ….

  2. ಎಸ್ ಮೇಡಂ ಮೊಬೈಲಿನಲ್ಲಿ ಮುಖಪುಸ್ತಕದ ಕಥೆ ಕವನಗಳಿಂದ ಆಸಕ್ತಿ ಹೆಚ್ಚಾಯಿತು. ವಿದ್ಯಾರ್ಥಿ ಜೀವನದಲ್ಲಿಯೂಇಷ್ಚು ಓದಿಲ್ಲವೇ ಬರಿ ಪಾಠ ಕೇಳಿದಷ್ಷೆ ಬರದರೂ ಪಾಸ್ ಅಗತಿದ್ದ್ವಿ ಅಷ್ಟು ಚಂದ
    .ಪಾಠ ಹೇಳುತ್ತಿದ್ದರು. ಈಗಾ ಎರಡೇ ದಿನಗಳಲ್ಲಿ ಕೆಲಸದ ಒತ್ತಡದಲ್ಲಿ ಇನ್ನೂರು ಪುಟಗಳ ಕಾದಂಬರಿ ಓದಿ ಮುಗಿಸುವಷ್ಟು ಆಸಕ್ತಿಬೆಳೆದಿದೆ.ನಿಮ್ಮ ಬರಹ ಚನ್ಮಾಗಿದೆ ಚಹಾ ಅಂದಗ
    ನಮ್ಮ ಚಿಕ್ಕಪ್ಪ ಅವರ ರಜೆ ದಿನಾ ನಾನು ಮನೆಯಲ್ಲಿ ಇದ್ದರೆ ನನ್ನ ರು

    1. ನನ್ನ. ತಂಗಿಗೆ ಹತ್ತಿರ ಬೈಸಿಕೊಳ್ಳುವಷ್ಟು ಚಹಾ ಕುಡಿತಾ ಇರತೀವಿ

Leave a Reply to Fakeeragouda Siddanagoudar Cancel reply

 Click this button or press Ctrl+G to toggle between Kannada and English

Your email address will not be published. Required fields are marked *