ಅಮ್ಮನೊಡನೆ ಹೊಸವರ್ಷ

Share Button
Pushpa Nagatihalli

ಪುಷ್ಪಾನಾಗತಿಹಳ್ಳಿ.

ಪ್ರತಿವರ್ಷದಂತೆ ಅಮ್ಮನೊಡನೆ ನಾನು ನನ್ನತಮ್ಮ ಹೊಸವರ್ಷ ಆಚರಿಸಲು ನಾಗತಿಹಳ್ಳಿಗೆ ಹೊರಟಿದ್ದೆವು. ಹೊಸವರ್ಷಕ್ಕೆ ಕೇಕ್ ಕಟ್ ಮಾಡುವುದು, ಪಬ್ ಗಳಿಗೆ ಹೋಗುವುದು ಕುಡಿಯುವುದು, ಕುಣಿಯುವುದು,  ಪಟಾಕಿ ಒಡೆಯುವುದೆಲ್ಲ ಅವರವರ ಸಂತೋಷಕ್ಕೆ ಬಿಟ್ಟದ್ದು.ಆದರೆ ಅಮ್ಮನಿಗೆ  ಮಕ್ಕಳು ಹೊಸವರ್ಷವನ್ನ ನನ್ನಜೊತೆ ಆಚರಿಸಲು ಬರುತ್ತಾರೆ ಎನ್ನುವುದೇ ಕೇಕ್ ಗಿಂತಲೂಸಿಹಿ .ಇಲ್ಲದಿದ್ದಲ್ಲಿ ಅಮ್ಮನ ಮನಸ್ಸು ಟುಸ್ ಪಟಾಕಿಯಾಗುತ್ತದೆ, ಎಂದು ನನಗೆ ಗೊತ್ತು. ಯಾಕೆಂದರೆ ನಾನು ಒಬ್ಬ ಅಮ್ಮನಾಗಿರುವುದರಿಂದ. ಆದ್ದರಿಂದ ನನಗೆ ಅಮ್ಮನೊಡನೆ ಹೊಸವರ್ಷ ಮಹತ್ವಪೂರ್ಣ.ಮೊದಲೆಲ್ಲ ಊರಿಗೆ ನಮ್ಮಪ್ರಯಾಣ ಮೂರುಗಂಟೆ  ತೆಗೆದುಕೊಳ್ಳುತ್ತಿತ್ತು.ಈಗ ಹಾಗಿಲ್ಲ. ಬೆಂಗಳೂರು ಮಂಗಳೂರು ಹೆದ್ದಾರಿ ನೆಲಮಂಗಲ ಬಿಟ್ಟರೆ ಒಂದೇ ಗಂಟೆಯ ದಾರಿ.ಕುಣಿಗಲ್ ಮತ್ತು ಎಡೆಯೂರನ್ನು ಪಕ್ಕಕ್ಕೆ ತಳ್ಳಿ  ಮೇಲುಸೇತುವೆಯೇರಿ “ಸರ್ರ್ ” ಎಂದು ಜಾರಿ ಜಾರುಗುಪ್ಪೆಯಿಂದ ಮರಳ ಮೇಲೆ ಉರುಳುವ ಮಗುವಿನಂತೆ ಊರಿನಲ್ಲಿ ಬೀಳುತ್ತೇವೆ. ಹಾಗೆ ಜೊತೆಗೆ  ದಾರಿಯಲ್ಲಿ ಕುಣಿಗಲ್ ಕೆರೆಯ ತಣ್ಣನೆಯ ಗಾಳಿ ,ತಲೆದೂಗುತ್ತಿರುವ ಹಸಿರು ಅಡಿಕೆ ಮತ್ತು ತೆಂಗು,“ಮೂಡಲ್ ಕುಣಿಗಲ್ ಕೆರೆ ನೋಡೋಕ್ ಒಂದ್ ವೈಭೋಗ ಮೂಡಿ  ಬತ್ತಾನೆ ಚಂದಿರಾಮ” ಕವಿಯ ಹಾಡನ್ನು ನೆನಪಿಗೆ ತರುತ್ತದೆ.ಜೊತೆಗೆ ಮಯೂರ ಹೋಟೆಲ್ ಕಾಫಿ ಮುದಕೊಡುತ್ತದೆ.
ಅಮ್ಮ ಎರಡು ಸಾರಿ ಸಾವಿನ ವಿರುದ್ಧ ಹೋರಾಡಿ .ವಾಪಸ್ಸಾಗಿದ್ದಾಳೆ .ಅವಳ ಸ್ವಭಾವವೇ ಅಂತಹದು . ಅನ್ಯಾಯ, ಸೋಮಾರಿತನ, ಅಸಡ್ಡೆಯ ಜೀವನದ ವಿರುದ್ಧ ಸಿಡಿದೇಳುತ್ತಿದ್ದಳು. ಸಿಟ್ಟು ಅವಳ ಮೂಗಿನ ತುದಿಯಲ್ಲಿಯೇ ಇತ್ತು. ಆ ಸಿಟ್ಟಿಗೆ ನಮಗೆ ಬಿದ್ದ ಬೈಗುಳ ಏಟುಗಳಿಗೆ ಲೆಕ್ಕವೇ ಇಲ್ಲ. ಈ ಸಿಟ್ಟು ನಮಗೆ ಮಾತ್ರವಲ್ಲದೆ,  ಬೆಳಕು  ಕೊಡುವ ಸೂರ್ಯನನ್ನೂ ಬಿಡುತ್ತಿರಲಿಲ್ಲ.ತೋಟದಲ್ಲಿ ಇನ್ನೂ ಕೆಲಸ ಉಳಿದಿದ್ದು ಸೂರ್ಯ ಮುಳುಗಿದರೆ ಸೂರ್ಯನಿಗೆ ಬೈಗುಳ ಗ್ಯಾರಂಟಿ. “ಹಾಳದವನಿಗೆ ಏನು ಅವಸರನೋ ಮುಳುಗಿ ಮರೆಯದಾಲ್ಲೋ” ಎಂದು ಬೈಯುತ್ತಾ ಅವನಿಗೇ ಸವಾಲಾಕುವಂತೆ ಬೆಳಗಿನ ಜಾವ ನಾಲ್ಕು  ಘಂಟೆಗೇ ಎದ್ದು ಕೆಲಸ ಶುರು ಮಾಡುತ್ತಿದ್ದಳು.ಕಸ ಮುಸುರೆ ಮುಗಿಸಿ,ಮನೆಯ. ಮುಂದೆ ಸಾರಿಸಿ ರಂಗೋಲಿ ಹಾಕಿ ಎಮ್ಮೆ ದನಗಳನ್ನು ಆಚೆ ಕಟ್ಟಿ ಹಾಲು ಕರೆದು ಒಲೆ ಮೇಲೆ ಕಾಫಿಗೆ ಬೆಲ್ಲ ಬೇಯಲು ಇಡುತ್ತಿದ್ದಳು.  ಬೆಲ್ಲದ ವಾಸನೆಗೂ ನಾವು ಏಳದಿದ್ದರೆ ಬೈಗುಳದ ಸುಪ್ರಭಾತ ಶುರುವಾಗುತ್ತಿತ್ತು .

ಸೂರ್ಯ ಹುಟ್ಟೋಕು ಮುಂಚೆಯೇ  ತಲೆಯ ಮೇಲೆ ಕಸ ಹೊತ್ತು ತೋಟಕ್ಕೆ ಎಸೆದು ಬರುತ್ತಿದ್ದಳು. ದುಡಿದು ತಿನ್ನು ಹಸಿದವರಿಗೆ ಅನ್ನಹಾಕು “ ಅವಳ ಮಂತ್ರವಾಗಿತ್ತು.  ಹಾಗೆಂದು  ಅವಳೇನೂ ಅನಕ್ಷರಸ್ತೆಯಲ್ಲ. 7 ದಶಕದ ಹಿಂದೆಯೇ ಲೋಯರ್ ಸೆಕೆಂಡರಿ (8ನೇ ತರಗತಿ) ಪಾಸುಮಾಡಿದ್ದಳು.  ಸ್ವಾತಂತ್ರ್ಯ. ಬಂದ ದಿನ ( 1947)ಶಾಲಾ ಆವರಣದಲ್ಲಿ ಭಾಷಣ ಮಾಡಿದ್ದೆ  ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು. ಕೆಲ ದಿನ ಟೀಚರ್ ಕೆಲಸ ಮಾಡಿ ನಮ್ಮನ್ನು ಸಂಭಾಳಿಸಲಾರದೆ ಬಿಟ್ಟದ್ದು ಉಂಟು. ತನ್ನ ಮೋಟು ಗುಂಗುರು ಕೂದಲಿಗೆ ಚವಲಿಯಿಂದ ಉದ್ದ ಜಡೆ ಎಣೆದು ಹಣೆಗೆ ದೊಡ್ಡ ಕುಂಕುಮ ಇಟ್ಟರೆ,  ತಾರೆ ನರ್ಗೀಸ್, ತರಹ ಕಾಣುತ್ತಿದ್ದಳು.  ಜೀವನದುದ್ದಕ್ಕೂ  ದುಡಿದು ಪರಿಪಾಟಲು ಬಿದ್ದ ಅಮ್ಮ, ಕಲ್ಲಿನಂತೆ ಗಟ್ಟಿಮುಟ್ಟಾಗಿದ್ದ ಅಮ್ಮ., ಮೆತ್ತಗಾಗಿದ್ದಾಳೆ. ಅವಳ ಗಟ್ಟಿದನಿ  ಮೆಲುವಾಗಿದೆ. ಅವಳಿಗೆ ಅಳವಡಿಸಿರುವ  ಕೃತಕ ಮಂಡಿಗಳೂ, ಆಪರೇಷನ್ ಆಗಿರುವ ಕಣ್ಣುಗಳೂ, ಶ್ರವಣಸಾಧನಗಳು  ಅವಳು ಹೇಳಿದ ಮಾತು ಕೇಳಲೊಲ್ಲವು.
Nagatihalli- Chandrashekar- mother-Pushpa
ಅದೇನೆ ಇರಲಿ ನಾವು ಊರು  ತಲುಪುವ ವೇಳೆಗಾಗಲೆ ಒಬ್ಬಟ್ಟು ಮಾಡಲು ಬೇಳೆ ಬೇಯಿಸಿ, ಬೆಲ್ಲ ಕುಟ್ಟಿ ಪುಡಿಮಾಡಿ  ಮಲಗಿಬಿಟ್ಟಿದ್ದಳು. ಬೇಯುತ್ತಿದ್ದ ಹೋಳಿಗೆಯ ಸಾರಿನ. ಘಮಘಮ ಸುವಾಸನೆ ಮನೆಯೆಲ್ಲ  ತುಂಬಿತ್ತು.  ನಂತರದ ಕೆಲಸ ನಾನು ವಹಿಸಿಕೊಂಡರೂ  ಊರಿನ ಯುವಕ ಯುವತಿಯರ. ಮಂಡಳಿಯ ಮೀಟಿಂಗ್ ಮುಗಿಸಿಕೊಂಡು  ಬಂದ  ತಮ್ಮ ಮತ್ತು ಅವನ ಸ್ನೇಹಿತರ ಬಳಗಕ್ಕೆಲ್ಲಾ “ಎಲ್ಲರಿಗೂ  ಹೊಸವರ್ಷದ ಶುಭಾಶಯಗಳು”
“ಹೊಟ್ಟೆ ತುಂಬಾ ಊಟ ಮಾಡ್ರಪ್ಪಾ “ಎಂದಳು.
 Obbattu
obbattu rasam
ಅಮ್ಮಾ ಯಾಕೆ ತೊಂದರೆ  ತಗೊಂಡಿರಿ? ಆಂದರೆ “ತೊಂದರೆ ಏನು ಬಂತು  ಆ ಹಾಳು ದೇವರು ಶಕ್ತಿನೆಲ್ಲಾ ಕಿತ್ತುಕೊಂಡ. ಮುಂದಿನವರ್ಷ ನನ್ನ ಪಾಲಿಗೆ ಇದೆಯೋ ಇಲ್ಲವೋ”...ಎಂದು ದೀರ್ಘವಾಗಿ ನಿಟ್ಟುಸಿರುಬಿಟ್ಟಳು. ನನ್ನಮ್ಮನಿಗೆ  ಎಪ್ಪತ್ತೊಂಬತ್ತು ವರ್ಷಗಳು.  ಅವಳು ಇನ್ನೂ ಹತ್ತಾರು  ವರ್ಷಗಳು  ಬದುಕಬೇಕು.  ಇಲ್ಲದಿದ್ದರೆ  ನಮ್ಮ ಊರಿನ, ನಮ್ಮ ಮನೆಯ ಬಾಗಿಲು ಮುಚ್ಚಿಹೋಗುತ್ತದೆ.  ಅವಳ ಗಟ್ಟಿದನಿ ಆ ಮನೆಯಲ್ಲಿ ಗಂಟೆಯಂತೆ ಮೊಳಗುತ್ತಿದ್ದರೇ ಚೆಂದ.

ವಾಪಸ್ಸಾಗುವಾಗ ನನ್ನೂರಿಗೆ ಹೇಳಿ ಬಂದಿದ್ದೇನೆ.‘ನಾನು  ಇಲ್ಲಿಗೆ ಬಂದು ಹೋಗುವುದು ನಿನಗೆ ಸಮ್ಮತವಿದ್ದರೆ  ಪ್ರತಿವರ್ಷ ಅಮ್ಮನೊಡನೆ ಹೊಸವರ್ಷ ಆಚರಿಸಕೊಳ್ಳುವ ಅವಕಾಶ ಮಾಡಿಕೊಡು. ಇಲ್ಲದಿದ್ದಲ್ಲಿ  ನೀನೂ ನನ್ನನ್ನು ಕಳೆಕೊಳ್ಳುತ್ತಿ’ ಎಂದು.

 

ಪುಷ್ಪಾನಾಗತಿಹಳ್ಳಿ.

 

4 Responses

  1. Shruthi Sharma says:

    ಬಹಳ ಅರ್ಥಪೂರ್ಣವಾದ ಆಚರಣೆ, ಆಪ್ತವಾದ ನಿರೂಪಣೆ.. 🙂

  2. jayashree b kadri says:

    ತುಂಬಾ ಚೆನ್ನಾಗಿದೆ ಮೇಡಂ. ಲಂಕೇಶರ ‘ಅವ್ವ’ ಕವನದಂತೆ.

  3. Pushpa says:

    ನಿಮ್ಮ ಅನಿಸಿಕೆಗೆ ಧನ್ಯವಾಧಗಳು

  4. krisnaveni kidoor says:

    ನಿಮ್ಮ ಅಪರೂಪದ ಅನುಬಂಧ ಇನ್ನಷ್ಟು ಜನರಿಗೆ ಮಾದರಿ ಆಗಲಿ ಅಂತ ಓದಿದಾಗ ಅನ್ನಿಸ್ತು .ಅಂತಕರಣ ಕ್ಕೆ ತಾಗಿದ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: