ನಿಸರ್ಗವು ಅನಂತ ಅಚ್ಚರಿಗಳ ಆಗರ. ಮಾನವನ ಊಹೆಗೆ ನಿಲುಕದ ಅದ್ಭುತಗಳು ಅನೇಕ. ನಮ್ಮ ಪ್ರಕೃತಿ ಮಾತೆ ಹತ್ತು ಹಲವು ಸೋಜಿಗಗಳ ಮೊತ್ತ. ಇಲ್ಲಿನ ಮಣ್ಣು, ಗುಡ್ಡೆ,ಕಾಡು, ಮರ, ಹಳ್ಳ-ಕೊಳ್ಳಗಳಲ್ಲಿ ಅನೇಕ ಮಹಿಮೆಗಳಿವೆ. ಇಂತಹುದೇ ಒಂದು ವಿಸ್ಮಯ ತಾಣವು ನಮ್ಮೂರನ್ನು ಹತ್ತೂರಲ್ಲಿ ಪ್ರಸಿದ್ಧಿ ಪಡೆಯುವಂತೆ ಮಾಡಿದೆ. ಇದುವೇ, ರಾಷ್ಟ್ರೀಯ ಹೆದ್ದಾರಿ 275 (NH 275)ರ ಸಂಟ್ಯಾರಿನಿಂದ ಸುಮಾರು 8ಕಿ. ಮೀ. ದೂರದಲ್ಲಿರುವ, – ಬೈಲಾಡಿ ಸೀರೆ ಹೊಳೆಯ ದಡದಲ್ಲಿರುವ ಪುಣ್ಯಕ್ಷೇತ್ರ ಬೆಂದ್ರ್ ತೀರ್ಥ ಕೆರೆ. ಸ್ಥಳೀಯ ಭಾಷೆಯಾದ ತುಳುವಿನಲ್ಲಿ ಬೆಂದ್ರ್ ಅಂದರ ಬಿಸಿನೀರು ಎಂದರ್ಥ. ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆ ಗ್ರಾಮದಲ್ಲಿರುವ ಈ ಕ್ಷೇತ್ರವು, ಭಾರತೀಯ ಪುರಾತತ್ವ ಇಲಾಖೆಯ ಅಧ್ಯಯನ ಪ್ರಕಾರ ದಕ್ಷಿಣ ಭಾರತದ ಏಕೈಕ ನೈಸರ್ಗಿಕ ಬಿಸಿನೀರಿನ ಚಿಲುಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ, ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಯಲ್ಲಿತ್ತು. ಈ ವಿಶೇಷ ಚಿಲುಮೆ ಬಗ್ಗೆ ತಿಳಿದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದರೆ, ಅಸಹನೀಯ ಪರಿಸ್ಥಿತಿಯಲ್ಲಿದ್ದ ತಾಣವನ್ನು ಕಂಡು ನಿರಾಸೆಯಿಂದ ಹಿಂತಿರುಗಬೇಕಿತ್ತು. ಇದನ್ನು ಮನಗಂಡ ಸ್ಥಳೀಯರು ಇದರ ಪುನ:ಶ್ಚೇತನದ ಕಾರ್ಯಕ್ಕೆ ಸಜ್ಜಾದರು.
ಇರ್ದೆ ಗೋಪಾಲ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ನಿಕಟ ಸಂಪರ್ಕ ಹೊಂದಿರುವ ಈ ತಾಣವು ಹಲವು ಪೌರಾಣಿಕ ಹಿನ್ನೆಲೆಗಳನ್ನು ಒಳಗೊಂಡಿರುವುದು ವಿಶೇಷ. ಶತಮಾನಗಳ ಇತಿಹಾಸವಿರುವ ಈ ಕೆರೆಯು ಪುರಾಣ ಪುಣ್ಯ ವಿಶೇಷಗಳ ನೆಲೆಯೂ ಹೌದು. ಈ ಕೆರೆಯ ಪೂರ್ವ ಭಾಗದಲ್ಲಿ ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವಾಲಯವಿದೆ. ಹತ್ತಿರದಲ್ಲೇ ಧರ್ಮ ಚಾವಡಿ, ಕದಿಕೆ ಚಾವಡಿಯಿದೆ. ದಂತಕಥೆಯಂತೆ ಹಿಂದೆ, ಪವಿತ್ರವಾದ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳ ಸಂಗಮ ಕ್ಷೇತ್ರವಾಗಿರುವ ಈ ಬೈಲಿನ ಮೂಲಕ ಕಣ್ವಮಹರ್ಷಿಗಳ ಶಿಷ್ಯರು ಸಾಗುವಾಗ ಇದೊಂದು ಭಯಂಕರವಾದ ಕಾಡು ಪ್ರದೇಶವಾಗಿತ್ತು. ಇಲ್ಲಿ, ಹುಲಿ ಮತ್ತು ದನಗಳು ತಮ್ಮ ಹುಟ್ಟು ಸಹಜ ದ್ವೇಷ ಮರೆತು ಸಾಮರಸ್ಯದಿಂದ ಬದುಕುತ್ತಿರುವುದನ್ನು ಕಂಡು ಅವರಿಗೆ ಅಚ್ಚರಿಯಾಯಿತು. ಅಲ್ಲದೆ, ಈ ತಾಣದಲ್ಲಿ ಹೆಚ್ಚಾಗಿ ಆಕಳುಗಳು ಕಂಡುಬರುತ್ತಿದ್ದವು. ಆದ್ದರಿಂದ ಆ ಶಿಷ್ಯರು ಈ ಪ್ರದೇಶ ಸಾಕಷ್ಟು ವಿಶೇಷವಾಗಿದೆ ಎಂದರಿತು ಇದನ್ನು ಗೋಪಾಲ ಕ್ಷೇತ್ರವೆಂದು ಕರೆದರು. ಇದೇ ಸ್ಥಳದಲ್ಲಿ ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವರ ಬಿಂಬವನ್ನು ಪ್ರತಿಷ್ಠಾಪಿಸಿ ಪೂಜಿಸತೊಡಗಿದರು. ಮುಂದೆ ಸಂಗಮ ನದಿ ದಾಟಿ ಸಾಗಿದಾಗ ಬಿಸಿನೀರು ಜಿನುಗುತ್ತಿದ್ದ ಕೆರೆಯನ್ನು ಕಂಡು ಅದರ ತೀರ್ಥವನ್ನು ತಂದು ದೇವರಿಗೆ ಪ್ರೋಕ್ಷಣೆ ಮಾಡಿ ಆರಾಧನೆಗೆ ತೊಡಗಿದರೆಂಬ ಐತಿಹ್ಯವಿದೆ. ಅದೇ ದೇವಾಲಯ ಶ್ರೀ ವಿಷ್ಣುಮೂರ್ತಿ ಕ್ಷೇತ್ರವೆಂದು ಪ್ರಸಿದ್ಧಿ ಪಡೆಯಿತು. ಕೆರೆಯ ಬಿಸಿನೀರು ತೀರ್ಥವೆನಿಸಿತು.
ಇನ್ನೊಂದು ಪೌರಾಣಿಕ ಹಿನ್ನೆಲೆಯ ಪ್ರಕಾರ, ತೀರ್ಥ ಅಮಾವಾಸ್ಯೆಯ ಹಿಂದಿನ ದಿನ, ಅಂದರೆ ಚತುರ್ದಶಿಯಂದು, ಜಗದ್ರಕ್ಷಕನಾದ ಶ್ರೀಮನ್ನಾರಾಯಣನು ಶ್ರೀ ಲಕ್ಷ್ಮೀದೇವಿ ಸಮೇತ ಗರುಡಾರೂಢನಾಗಿ ಬಂದು ಇಂದಿಗೂ ಈ ಬೆಂದ್ರ್ ತೀರ್ಥ ಕೆರೆಯಲ್ಲಿ ತೀರ್ಥಸ್ನಾನ ಮಾಡುವರೆಂದೂ, ಇಂತಹ ಪವಿತ್ರ ಜಲದಲ್ಲಿ ನಾವೂ ಸ್ನಾನ ಮಾಡುವುದರಿಂದ ಸಕಲ ಭಾಗ್ಯಗಳು ಸಿದ್ಧಿಯಾಗುವುವು ಎಂಬ ನಂಬಿಕೆ ಈಗಲೂ ಬಲವಾಗಿದೆ. ಇನ್ನೊಂದು ಉಲ್ಲೇಖದ ಪ್ರಕಾರ, ಶ್ರೀರಾಮಚಂದ್ರನು ವನವಾಸಾನಂತರ, ರಾವಣಾದಿಗಳನ್ನು ಸಂಹರಿಸಿ, ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಹಿಂತಿರುಗುವ ಪಥದಲ್ಲಿ ಈ ಕೆರೆಯನ್ನು ಕಂಡು ಇಳಿದು, ಸೀತೆ, ಲಕ್ಷ್ಮಣ, ಸುಗ್ರೀವ ಸಮೇತ ತೀರ್ಥ ಸ್ನಾನ ಮಾಡಿ ಅನುಗ್ರಹಿಸಿದನೆಂಬ ನಂಬಿಕೆಯೂ ಬಲವಾಗಿದೆ. ಒಟ್ಟಿನಲ್ಲಿ ಬೆಂದ್ರ್ ತೀರ್ಥ ಕೆರೆಯ ಮಹಿಮೆ ಊಹೆಗೂ ನಿಲುಕದ್ದು.
ವಿಶೇಷವೆಂದರೆ, ಸಂಗಮ ಕ್ಷೇತ್ರದ ಹತ್ತಿರದಲ್ಲಿ ನೆಲೆಸಿರುವುದರಿಂದ ಈ ತೀರ್ಥ ಸಾಕಷ್ಟು ಧಾರ್ಮಿಕ ಮಹತ್ವವನ್ನು ಪಡೆದಿದೆ. ಮಾತ್ರವಲ್ಲದೆ, ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ನಿಕಟವಾದ ನಂಟು ಇರುವುದರಿಂದ ಇದೊಂದು ಹಿಂದೂಗಳ ಪಾಲಿಗೆ ಶ್ರದ್ದಾ ಕೇಂದ್ರವಾಗಿದೆ. ಅಲ್ಲದೆ, ಇದೊಂದು ಪ್ರಕೃತಿ ಸಹಜವಾದ ಬಿಸಿ ನೀರಿನ ಚಿಲುಮೆಯಾಗಿದೆ. ಇದರಲ್ಲಿ ಚಿಮ್ಮುವ ಬಿಸಿ ನೀರು, ಸಾಮಾನ್ಯ ನೀರಿಗಿಂತಲೂ ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವುದಲ್ಲದೆ ಕೆಲವು ಚರ್ಮ ಸಂಬಂಧಿತ ರೋಗಗಳಿಗೆ ರಾಮಬಾಣವೆನ್ನಲಾಗುತ್ತದೆ. ಸ್ಥಳೀಯವಾಗಿ ಸಾಕಷ್ಟು ಜನರು ಇದರ ಉಪಯೋಗ ಪಡೆಯುತ್ತಿರುವರು. ಹೊಸದಾಗಿ ವಿವಾಹವಾದವರು ಭೇಟಿ ನೀಡುವ ಸಂಪ್ರದಾಯ ಹಿಂದಿನಿಂದಲೂ ನಡೆಯುತ್ತಾ ಬಂದಿರುತ್ತದೆ. ಜಾತ್ರಾ ಸಂದರ್ಭದಲ್ಲಿ ಬೆಂದ್ರ್ ತೀರ್ಥ ಕೆರೆ ಪೂಜೆ ನಡೆದು ಅರ್ಚಕರು ಇಲ್ಲಿನ ನೀರನ್ನು ತಂದು ದೇವರ ಆರಾಧನೆಗೆ ತೊಡಗುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ.
ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಅಂದರೆ, ಆಗಸ್ಟ್ -ಸೆಪ್ಟೆಂಬರ್ ತಿಂಗಳಲ್ಲಿ ಬರುವ ತೀರ್ಥ ಅಮಾವಾಸ್ಯೆಯಂದು ಊರ ಪರವೂರಿನ ಭಕ್ತಾದಿಗಳು ಬೆಳ್ಳಂಬೆಳಗ್ಗೆ ಬಂದು, ತೀರ್ಥಕೆರೆಗೆ ಅರ್ಚಕರಿಂದ ಪೂಜೆಯಾದ ಬಳಿಕ, ಕೆರೆಯ ಪಕ್ಕದ ಸೀರೆ ಹೊಳೆಯಲ್ಲಿ ಸ್ನಾನ ಮಾಡಿ ಶುಚೀರ್ಭೂತರಾಗಿ, ಮತ್ತೆ ಬಿಸಿನೀರಿನ ಕೆರೆಯಲ್ಲಿ ಮೂರು ಮುಳುಗು ಹಾಕುವ ಪದ್ಧತಿ ಇದೆ. ವಿಶೇಷವಾಗಿ ನವ ವಧೂವರರು, ಚರ್ಮರೋಗವಿರುವವರು, ದೇವರ ಪ್ರಾರ್ಥನೆ ಮಾಡಿ,ಕೆರೆಗೆ ಪ್ರದಕ್ಷಿಣೆ ಹಾಕಿ, ಗಂಗಾಪೂಜೆ ಮಾಡಿ, ಕೈಯಲ್ಲಿ ಐದು ಎಲೆ ಮತ್ತು ಒಂದು ಅಡಿಕೆ (ಎಲೆಯಡಿಕೆ), ಒಂದು ನಾಣ್ಯ ಹಿಡಿದು ಸರ್ವದೈವದೇವರಗಳನ್ನು ಮನಸಾರೆ ಸ್ಮರಿಸಿ, ಮೂರು ಮುಳುಗು ಹಾಕಿದ ಬಳಿಕ ಬೆಂದ್ರ್ ತೀರ್ಥ ಕೆರೆಯಲ್ಲಿ ದಾನಬಿಡುವ ಪದ್ಧತಿ. ಬಳಿಕ ತೀರ್ಥಸ್ನಾನ ಮಾಡಿ, ಶುಚಿಯಾದ ಬಟ್ಟೆ ಧರಿಸಿ, ಅಶ್ವತ್ಥ ಕಟ್ಟೆಗೆ ಪ್ರದಕ್ಷಿಣೆ ಬಂದು, ದೇವಾಲಯದ ಅರ್ಚಕರಲ್ಲಿ ನಿವೇದನೆ ಮಾಡಿ, ಹಣ್ಣು ಕಾಯಿ ಕಾಣಿಕೆ ಅರ್ಪಿಸಿ ಹಿಂತಿರುಗುವರು.
ಬೆಂದ್ರ್ ತೀರ್ಥಕ್ಕೆ ವೈಜ್ಞಾನಿಕ ಕಾರಣಗಳೇನಿದ್ದರೂ, ನೀರಿಗೆ ಔಷಧೀಯ ಗುಣವಿದೆ, ಮಹಿಮೆಯಿದೆ ಎಂಬ ನಂಬಿಕೆ ಹಿರಿಯರ ಕಾಲದಿಂದಲೂ ಬಲವಾಗಿದೆ. ತುರಿಕೆ ಕಜ್ಜಿ , ವಾತ, ಗಳಗಂಡ, ಸೊಂಟನೋವು, ಕೀಲುನೋವು ಇತ್ಯಾದಿ ಯಾವುದೇ ಶಾರೀರಿಕ ಹಾಗೂ ಮಾನಸಿಕ ಸಂಬಂಧಿತ ಕಾಯಿಲೆಗಳಿದ್ದರೆ ,ತೀರ್ಥ ಸ್ನಾನವೇ ರಾಮಬಾಣ ಎಂಬುದು ಅನುಭವದ ಮಾತು. ಈ ಕಾರಣದಿಂದಲೇ ತುಳುವಿನಲ್ಲಿ “ಅಜ್ಜಿನ ಮರ್ದಾಂಡ ಅಜಿಪ್ಪೊದಿನ..ಬೆಂದ್ರ್ ತೀರ್ಥೊಡಾಂಡ ಮೂಜೇ ಮೂಜಿ ಮುಂರ್ಗು..”ಎಂಬ ಗಾದೆ ಜನಜನಿತವಾಗಿದೆ. ಅಂದರೆ, ಅಜ್ಜಿಯ ಔಷಧಿಯಾದರೆ ಗುಣವಾಗಲು ಅರುವತ್ತು ದಿನ, ಬಿಸಿನೀರಿನ ತೀರ್ಥದಲ್ಲಾದರೆ ಕೇವಲ ಮೂರೇ ಮೂರು ಮುಳುಗು ಎಂದರ್ಥ!
ಅವಗಣನೆಗೆ ಒಳಗಾಗಿದ್ದ ಈ ಪುಣ್ಯಕ್ಷೇತ್ರದ ಕೆರೆಯನ್ನು ಅಭಿವೃದ್ಧಿ ಪಡಿಸಲು ಟೊಂಕ ಕಟ್ಟಿ ನಿಂತವರು ಸ್ಥಳೀಯ ಉತ್ಸಾಹಿ ಯುವಕರು ಮತ್ತು ಶಿವಾಜಿ ಯುವಸೇನೆ(ರಿ.) ಬೆಂದ್ರ್ ತೀರ್ಥ ಇರ್ದೆ ಸಂಘಟನೆ! ಈ ಸಂಘಟನೆಯ ದಶ ಸಂದರ್ಭದಲ್ಲಿ ಈ ಪುಣ್ಯಕಾರ್ಯವನ್ನು ಪೂರೈಸುವ ಪಣದೊಂದಿಗೆ ಅಭಿವೃದ್ಧಿ ಕಾರ್ಯವನ್ನು 2026ರ ಜನವರಿ 15ರಂದು ಪ್ರಾರಂಭಿಸಿ, ಮೂರು ಹಂತಗಳಲ್ಲಿ, ಜೂನ್ 25ರಂದು ಪೂರ್ಣಗೊಳಿಸಲಾಯಿತು. ಕೇವಲ 6ತಿಂಗಳುಗಳ ಅತ್ಯಲ್ಪ ಸಮಯದಲ್ಲಿ; ಸುಮಾರು ರೂ 3.5ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಸಂಪನ್ನಗೊಂಡ ಈ ಅದ್ಭುತ ಕಾರ್ಯಕ್ಕೆ, ಸ್ಥಳೀಯ ಉತ್ಸಾಹೀ ಯುವಕರು ತಮ್ಮ ದಿನದ ದುಡಿಮೆಯ ದುಡ್ಡಿನಲ್ಲಿ ಸ್ವಲ್ಪ ಭಾಗವನ್ನು ಇದಕ್ಕಾಗಿ ಮೀಸಲಿರಿಸುವುದರ ಜೊತೆಗೆ, ಊರ ಪರವೂರ ಭಕ್ತ ಮಹನೀಯರ ದಾನವೂ ಸೇರಿಕೊಂಡಿದೆ. ಪಕ್ಷ, ಜಾತಿ, ಮತ ಭೇದವಿಲ್ಲದೆ, ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಹಿರಿಯರ ವರೆಗೆ, ಹಿರಿಯರ ಮೌಲ್ಯಯುತ ಮಾರ್ಗದರ್ಶನದಲ್ಲಿ, ಎಲ್ಲರೂ ಒಂದೇ ಮನಸ್ಸಿನಿಂದ ದಿನನಿತ್ಯ ಹಗಲಿರುಳು ದುಡಿಯುತ್ತಾ, ಭಗವಂತನ ಪಾದದಲ್ಲಿ ಒಂದು ಪುಟ್ಟ ಅಳಿಲುಸೇವೆ ಎಂಬ ಸಾತ್ವಿಕ ಮನೋಭಾವದಿಂದ, ಅತ್ಯಲ್ಪ ಸಮಯದಲ್ಲಿ ಪೂರ್ಣಗೊಳಿಸಿರುವುದು ಗ್ರಾಮದ ಜನರ ಭಕ್ತಿ, ಶ್ರದ್ಧೆ, ಒಗ್ಗಟ್ಟನ್ನು ಎತ್ತಿ ತೋರಿಸುತ್ತದೆ. ಇದಕ್ಕೆ ಪೂರಕವಾಗಿ, ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ಧನ ಸಹಾಯ ನೀಡುವುದಾಗಿ ಪುತ್ತೂರಿನ ಜನಪ್ರಿಯ ಶಾಸಕರು ಭರವಸೆ ನೀಡಿರುವುದು ಸಂಘಟನೆಗೆ ಇನ್ನಷ್ಟು ಬಲವನ್ನಿತ್ತಿದೆ.
ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯ ಆಧಾರದ ಮೇಲೆ, ಈ ನೀರಿನ ಶುದ್ಧತೆಯು ಅತ್ಯುತ್ತಮ ಗುಣಮಟ್ಟದ್ದಾಗಿದ್ದು ಕುಡಿಯಲು ಸುರಕ್ಷಿತವಾಗಿದೆ. ಆರೋಗ್ಯಕರ ಖನಿಜಗಳು ಸಮಪ್ರಮಾಣದಲ್ಲಿದ್ದು, ನೀರಿನ ತಾಪಮಾನವು ಸಾಮಾನ್ಯ ನೀರಿಗಿಂತ 10 ರಿಂದ 15 ಡಿಗ್ರಿಗಳಷ್ಟು ಹೆಚ್ಚಾಗಿದ್ದು, ಶರೀರಕ್ಕೆ ಚೆನ್ನಾಗಿ ಬಿಸಿಯ ಅನುಭವವಾಗುತ್ತದೆ. ಮೂಲ ಕೆರೆಯನ್ನು 5 ಅಡಿಗಳಷ್ಟು ಹೆಚ್ಚು ಆಳ ಮಾಡಿದ ಬಳಿಕ, ಅಭಿವೃದ್ಧಿ ಪಡಿಸಿದ ಕೆರೆಯ ಆಳವು ಪ್ರಸ್ತುತ 14.6 ಅಡಿಗಳಿವೆ. ಇನ್ನೊಂದು ಅಚ್ಚರಿ ವಿಚಾರ ಎಂಬಂತೆ, ಕೆಲಸ ಮುಗಿದ ಮರುದಿನವೇ ಶುಭ ಲಕ್ಷಣವಾಗಿ, ತೀರ್ಥಕೆರೆಗೆ ಅಮೆಯ ಪ್ರವೇಶವಾಗಿದ್ದು, ಈ ತಾಣದ ಕಾರಣಿಕಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ.
ಕಳೆದ 10 ವರ್ಷಗಳಿಂದ ಬೆಂದ್ರ್ ತೀರ್ಥದ ಅಭಿವೃದ್ಧಿ ಮತ್ತು ಧಾರ್ಮಿಕ -ಸಾಮಾಜಿಕ ವಿಚಾರ ಧಾರೆಗಳಿಗಾಗಿ ಹುಟ್ಟಿಕೊಂಡ ಶಿವಾಜಿ ಯುವಕರ ತಂಡವು ಕಳೆದ ಹಲವು ವರ್ಷಗಳಿಂದ ಬೆಂದ್ರ್ ತೀರ್ಥದ ನಿರ್ವಹಣೆ ಮಾಡುತ್ತಿದ್ದು, ಇದೀಗ ಸಂಘಟನೆಗೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ದೊಡ್ಡ ಕನಸೊಂದನ್ನು ನನಸು ಮಾಡಿದಂತಾಗಿದೆ. ಹಿರಿಯರು ಒಂದು ಕಾಲದಲ್ಲಿ ಧಾರ್ಮಿಕ ನೆಲೆಯಲ್ಲಿ ನಂಬಿಕೊಂಡು ಬಂದಿದ್ದ ಬೆಂದ್ರ್ ತೀರ್ಥವು ಮರುಹುಟ್ಟು ಪಡೆದು, ತನ್ನ ಪ್ರಕೃತಿಯ ಸೌಂದರ್ಯದ ಜೊತೆಗೆ, ದಕ್ಷಿಣ ಭಾರತದಲ್ಲೇ ಪ್ರಸಿದ್ದಿ ಪಡೆದ ಬಿಸಿನೀರಿನ ತಾಣವಾಗಿ ಹೆಸರು ಗಳಿಸುವುದೆಂಬ ನಂಬಿಕೆಯ ಭಕ್ತ ಜನರೊಂದಿಗೆ, ಊರಿನ ಹೆಮ್ಮೆಯ ಪ್ರಕೃತಿಯ ಮಡಿಲಿನ ಸುಂದರ ತಾಣವಾದ ಬೆಂದ್ರ್ ತೀರ್ಥವು ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ.

-ಶಂಕರಿ ಶರ್ಮ, ಪುತ್ತೂರು.



ಪುಣ್ಯ ಕ್ಷೇತ್ರ ಬೇಂದ್ರ್ಲೇ ತೀರ್ಥ ಲೇಖನ ಸೊಗಸಾದ ನಿರೂಪಣೆ ಯೊಂದಿಗೆ ಮೂಡಿ ಬಂದಿದೆ… ಶಂಕರಿ ಮೇಡಂ.. ಧನ್ಯವಾದಗಳು
ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ನಾಗರತ್ನ ಮೇಡಂ.
ಸೊಗಸಾಗಿ ಪ್ರಕಟಿಸಿ ಪ್ರೋತ್ಸಾಹಿಸಿದ ಮಾಲಾ… ಪ್ರೀತಿಯ ಧನ್ಯವಾದಗಳು.
ಆಕರ್ಷಕ ಹಾಗೂ ಮಾಹಿತಿಪೂರ್ಣ ಲೇಖನ