ಬಡಾವಣೆಯ ಗಣೇಶನೂ ರಥೋತ್ಸವವೂ..
ನೆರೆಯ ಕೇರಳದಲ್ಲೇ ಹುಟ್ಟಿ ಬೆಳೆದ ನನಗೆ ಮೈಸೂರಿನ ಆಚಾರ, ಆಚರಣೆಗಳು ಹೊಸತು. ಮೊನ್ನೆಯಷ್ಟೇ ಗಣೇಶ ಚತುರ್ಥಿಯ ಅಂಗವಾಗಿ ಮೈಸೂರಿನ ರೂಪಾನಗರ ಬಡಾವಣೆಯಲ್ಲಿ ರಥೋತ್ಸವವಿದೆ ಎಂದು ಕೇಳಿದಾಗ ಅದರ ಗೌಜಿ ಯ ಸ್ಪಷ್ಟ ಚಿತ್ರಣ ಸಿಕ್ಕಲಿಲ್ಲ. ಅಂದು ಮಧ್ಯಾಹ್ನ ಊಟದ ನಂತರ ಅಕ್ಕ ಹುಮ್ಮಸ್ಸಿನಿಂದ ಹಳೆಯ ಬಕೆಟ್ ನಲ್ಲಿನ ರಂಗೋಲಿ ಪುಡಿ ಯ ಕಟ್ಟುಗಳ ಧೂಳು ಕೊಡವಿ ತೆಗೆದು ರಂಗೋಲಿ ಹಾಕುವ ತಯಾರಿ ಮಾಡುತ್ತಾ ವರ್ಣಿಸಿದ್ದರು. “ಈ ಬಡಾವಣೆಯ ಗಣಪತಿ ದೇವಸ್ಥಾನದ ಉತ್ಸವ ಮೂರ್ತಿಯ ರಥೋತ್ಸವ ನಾಲ್ಕು ಘಂಟೆಗೆ ಬರಲಿದೆ. ಬಡಾವಣೆಯಲ್ಲಿ ಒಂದು ಸುತ್ತು ಹಾಕಿ ಪಕ್ಕದ ಹಳ್ಳಿಗೂ ಒಮ್ಮೆ ಭೇಟಿ ಕೊಟ್ಟು ದೇವಸ್ಥಾನಕ್ಕೆ ವಾಪಸಾಗಿ ಮಹಾಪೂಜೆ, ಮಂಗಳಾರತಿ, ಪ್ರಸಾದದ ಕಾರ್ಯಕ್ರಮವಿದೆ. ನಾವು ಮನೆ ಮುಂದೆ ಬೆಳಗ್ಗೆ ಹಾಕಿದ ಪುಟ್ಟ ರಂಗೋಲಿಯನ್ನು ಅಳಿಸಿ ಪೂರ್ಣ ಕುಂಭಗಳಿರುವ ದೊಡ್ಡದೊಂದು ಚಿತ್ತಾರವೇ ಹಾಕೋಣ”. ಹಣ್ಣು ಕಾಯಿಗಳ ತಟ್ಟೆ ಅದಾಗಲೇ ಮೇಜಿನ ಮೇಲೆ ತಯಾರಾಗಿ ಕುಳಿತಿತ್ತು. ನಮ್ಮೂರಿನಲ್ಲಿ ಗಣೇಶ ಚತುರ್ಥಿಯ ಅಂಗವಾ್ಗಿ ಗಣೇಶನ ದೊಡ್ಡ ಮೂರ್ತಿ ಒಂದನ್ನು ಸ್ಥಾಪಿಸಿ ಪೂಜಿಸುವ ಕ್ರಮವಿದ್ದರೂ ಮನೆಮನೆಗೆ ಆ ಮೂರ್ತಿಯ ಸಂಚಾರ ಇಲ್ಲವೆಂದೆನ್ನಬಹುದು.
ಅಂತೂ ಇಂತೂ ನಡು ಮಧ್ಯಾಹ್ನ ಅಕ್ಕನ ಜೊತೆ ಸೇರಿ ಬಾಗಿಲ ಮುಂದೆ ನೀರು ಸುರಿದು, ರಥದ ಸ್ವಾಗತಕ್ಕಾಗಿ ದೊಡ್ದ ರಂಗೋಲಿ ಒತ್ತಿದಾಗ ಮನೆ ಒಮ್ಮೆ ಕಳೆಕಟ್ಟಿತೆನಿಸಿದ್ದು ನಿಜ. ಅಕ್ಕ ಪಕ್ಕದ ಮನೆಯವರೂ ರಂಗೋಲಿ ಬಿಡಿಸಿ ಹಣ್ಣು ಕಾಯಿಗಳ ತಟ್ಟೆಯನ್ನು ಓರಣವಾಗಿಟ್ಟು ರಥದ ಬರುವಿಕೆಗಾಗಿ ಕಾಯುತ್ತಿದ್ದಾಗ ಬೀದಿಯಿಡೀ ಒಂದು ಹಬ್ಬದ ವಾತಾವರಣ.
ರಥ ಬಂದೇ ಬಿಟ್ಟಿತೆನ್ನುವಾಗ ಮೊದಲು ಮುಂದಿನ ಸಾಲಿನಲ್ಲಿ ಡೋಲು, ಡೊಳ್ಳು ಕುಣಿತ, ಜೈಕಾರದ ಸದ್ದು ಸಮೀಪಿಸುತ್ತಿದ್ದಂತೆ ಎಲ್ಲರೂ ಅಲರ್ಟ್! ಮನೆ ಮುಂದೆ ಹೂವು, ಹಣ್ಣು, ತೆಂಗಿನಕಾಯಿಗಳ ಹರಿವಾಣದೊಂದಿಗೆ ಸ್ವಾಗತಕ್ಕೆ ರೆಡಿ.! ರಥದ ಮುಂದೆ ಡೊಳ್ಳು ಕುಣಿತ ವೇಷಧಾರಿಗಳು, ತೇರನ್ನೆಳೆಯುತ್ತಿದ್ದ ಪುಟ್ಟ ಮಕ್ಕಳು, ರೇಷಿಮೆ ಸೀರೆಯುಟ್ಟು ಬಂದು ಮೆರವಣಿಗೆಗೆ ಮೆರುಗು ನೀಡುತ್ತಿದ್ದ ಮಹಿಳೆಯರು. ಒಟ್ಟಿನಲ್ಲಿ ಕಣ್ಣಿಗೆ ಹಬ್ಬವೆನಿಸಿದ್ದು ಸತ್ಯ!
ಪ್ರತಿ ಮನೆಯಿಂದಲೂ ಅರ್ಪಿಸಿದ ಹೂವು ಹಣ್ಣುಗಳನ್ನು ಗಣೇಶನಿಗೆ ನೈವೇದ್ಯ ಮಾಡಿ ಪ್ರಸಾದವಾಗಿ ಹಿಂದಿರುಗಿಸುತ್ತಾ, ಜೈಕಾರ ಕೂಗುತ್ತಾ ರಥ ಮುಂದೆ ಹೋಗುತ್ತದೆ. ಉತ್ಸಾಹದಿಂದ ನಾವೂ ರಥಕ್ಕೆ ಜೊತೆಗೂಡಿದೆವು. ಸ್ವಲ್ಪ ದೂರ ರಥವನ್ನು ಮುಟ್ಟಿ ತಳ್ಳಿದಾಗ ರಥೋಥ್ಸವದ ಸಕ್ರಿಯ ಪಾಲುಗಾರರಾದಂಥ ಹೆಮ್ಮೆ! ರೇಷಿಮೆ ಲಂಗದ ಪುಟ್ಟ ಪೋರಿಯರು, ಬರಿಗಾಲಿನಲ್ಲಿ ಅಷ್ಟುದಕ್ಕೂ ತೇರನ್ನೆಳೆಯುತ್ತಿದ್ದ ಪುಟ್ಟ ಮಕ್ಕಳು, ಭಜನೆ ಹಾಡುತ್ತಾ ಜೊತೆಗೂಡುತ್ತಿದ್ದ ಮಹಿಳೆಯರು, ಇವೆಲ್ಲಕ್ಕಿಂತ ಮಿಗಿಲಾಗಿ ಎಲ್ಲರ ನಡುವಿನ ಆಪ್ತತೆ, ಹೊಸಬರನ್ನು ಪರಿಚಯ ಮಾಡಿಕೊಳ್ಳುವ ಉತ್ಸಾಹ, ಒಂದೇ ಮನೆಯ ಸಮಾರಂಭವೇನೋ ಎನ್ನುವ ಸಡಗರ ಮೂಡಿಸುತ್ತದೆ. ಅಲ್ಲಿ ಜಾತಿ, ಊರು ಭಾಷೆಗಳ ಭೇದವಿರಲಿಲ್ಲ. ಅವರವರದೇ ಹುಟ್ಟೂರಿನ ರೀತಿಗಳಲ್ಲಿ ರಥವನ್ನು ಸ್ವಾಗತಿಸುತ್ತಿದ್ದವರ ಮುಖದಲ್ಲಿ ಸಂಭ್ರಮ, ಸಂತಸ ಮಾತ್ರ! ತಮ್ಮ ತಮ್ಮ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿರುತ್ತಿದ್ದವರೂ ಕೂಡಾ ಒಮ್ಮೆ ಮನೆಯ ಮುಂದೆ ಬಂದು ನೋಡಿ “ಊರ ಹಬ್ಬ”ದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದರು. ದಾರಿಯುದ್ದಕ್ಕೂ ಮುಖ ಪರಿಚಯವಿದ್ದ ಹಲವರ ಮನೆಗಳನ್ನು ಗುರುತು ಮಾಡಿಕೊಂಡು ಎಲ್ಲರ ಮನೆಯ ರಂಗೋಲಿ ಡಿಸೈನ್ ಗಳನ್ನು ನೋಡುತ್ತಾ ಸಾಗಿದ್ದೆವು. ಜೊತೆಗೆ ಬೇರೆ ಬೇರೆ ಊರುಗಳವರ ಸ್ವಾಗತ ಕ್ರಮಗಳನ್ನೂ ತಿಳಿಯುತ್ತಾ ನಡೆದುದೇ ಚೆನ್ನ..!
ಮುಂದೆ ಪಕ್ಕದ ಹಳ್ಳಿಯ ಕಡೆಗೆ ಮೆರವಣಿಗೆ ತಿರುಗಿತ್ತು. ಅಲ್ಲೂ ಅಷ್ಟೆ! ತುಂಬು ಸಂಭ್ರಮದಿಂದ ಜನ ತೇರನ್ನು ನಿರೀಕ್ಷಿಸುತ್ತಾ ಮನೆಗಳ ಮುಂದೆ, ಕಟ್ಟೆಯ ಮೇಲೆ ಕುಳಿತಿದ್ದರು. ಮಕ್ಕಳನ್ನು ಎತ್ತಿ ಹಿಡಿದು ಗಣೇಶನನ್ನು ತೋರಿಸುವ ಅಮ್ಮಂದಿರು, ಬಿಡುಬೀಸಾಗಿ ಕುಣಿಯುತ್ತಾ ತಪ್ಪಿಸಿ ಓಡುವ ಮಕ್ಕಳನ್ನು ಹಿಡಿದು ಸುಸ್ತಾಗುವ ಇನ್ನು ಕೆಲವು ತಾಯಂದಿರು!
ಡೋಲು ಬಡಿಯುವ ತಂಡ ಸುಸ್ತಾಗಿ ಒಂದು ಕ್ಷಣ ನಿಲ್ಲಿಸಿದರೂ ಅವರನ್ನು ಬೈದು ಮತ್ತೆ ಡೋಲು ಬಡಿಸಿ ಮತ್ತೆ ತಾನೂ ಕುಣಿಯುತ್ತಿದ್ದ ಹಣ್ಣು ಮುದುಕ ಶಿವಣ್ಣ! ಖಂಡಿತಾ ಇವರೆಲ್ಲರ ಉತ್ಸಾಹ ಮೆಚ್ಚತಕ್ಕದ್ದೇ! ಈ ಉತ್ಸಾಹ ರಥೋತ್ಸವದ ಕೊನೆಯಲ್ಲಿ ಬಡಾವಣೆಯ ಗಣೇಶನ ದೇವಸ್ಥಾವ ತಲುಪಿ, ಪೂಜೆ, ಬಳಿಕ ಮೊಸರನ್ನ, ಬಿಸಿಬೇಳೆ ಭಾತ್ ನ ಪ್ರಸಾದ ಸ್ವೀಕರಿಸಿ ವಿದಾಯ ಹೇಳಿ ಮನೆ ತಲುಪುವ ತನಕವೂ ಇದ್ದಿದ್ದು ಇನ್ನೂ ವಿಶೇಷ..!
ಆಚರಣೆಯ ನೆಪದಲ್ಲಿ ಎಲ್ಲರೂ ಜೊತೆಯಲ್ಲಿ ಬೆರೆತು, ಹೊಸಬರ ಪರಿಚಯ ಮಾಡಿಕೊಂಡು, ಸಂಭ್ರಮದಿಂದ ಒಂದಷ್ಟು ಹೊತ್ತು ಜೊತೆಯಲ್ಲಿ ಕಳೆದಾಗ ನಿಜಕ್ಕೂ ಅಷ್ಟು ಹೊತ್ತನ್ನು ಉತ್ತಮವಾಗಿ ಕಳೆದೆವೆನಿಸುತ್ತದೆ, ಇದು ಪ್ರತಿಯೊಬ್ಬರಿಗೂ ಅವಿಸ್ಮರಣೀಯ ಅನುಭವವೇ ಸರಿ.
– ಶ್ರುತಿ ಶರ್ಮಾ, ಮೈಸೂರು.
thumbaa chennagi barediddiya shruthi 🙂
nanna baalyada nenapaayithenage!
ಧನ್ಯವಾದಗಳು, ವಿನಯ್! 🙂