ಎಂಬತ್ತರಲ್ಲೂ ನಿಲ್ಲದೇ ಸಾಗುತಿದೆ ಮಹಾ‘ಯಾನ’

Share Button

   

ಎಸ್.ಎಲ್.ಭೈರಪ್ಪನವರು ನಾಲ್ಕು ವರ್ಷಗಳ ಬಳಿಕ ಹೊಸ ಕಾದಂಬರಿ ‘ಯಾನ’ವನ್ನು ಬರೆದಿದ್ದಾರೆ.ಎಂದಿನಂತೆ ಪ್ರತಿಗಳು ದಾಖಲೆ ಮಾರಾಟವಾಗುತ್ತಿವೆ.ಹಿಂದಿನ ಕಾದಂಬರಿಗಳಷ್ಟು ಸತ್ವವನ್ನು ಈ ಕಾದಂಬರಿ ಹೊಂದಿಲ್ಲ ಎಂದು ಕೆಲವರು ಹೇಳುತ್ತಿದ್ದರೆ,ಇನ್ನು ಕೆಲವರು ಕವಲು ಕಾದಂಬರಿ ಬರೆದಾಗಲೇ ಭೈರಪ್ಪನವರು ತಮ್ಮತನವನ್ನು ಕಳೆದುಕೊಂಡಿದ್ದರು.ಹಾಗಾಗಿ ಈ ಕಾದಂಬರಿ ನೀರಸವಾಗಿದ್ದರೆ ಆಶ್ಚರ್ಯವೇನಿಲ್ಲ ಎಂದು ಹೇಳುತ್ತಿದ್ದಾರೆ.ಆದರೆ ಭೈರಪ್ಪನವರ ಕೋಟ್ಯಾಂತರ ಅಭಿಮಾನಿಗಳು ಕಾದಂಬರಿಯನ್ನು ಮುಗಿಬಿದ್ದು ಕೊಂಡು ಓದುತ್ತಿದ್ದಾರೆ.

ಯಾನದ ಕಥೆಯೇನೂ ವೈಜ್ಞಾನಿಕ ಕಥೆ,ಕಾದಂಬರಿಗಳನ್ನು ಓದುವವರಿಗೆ ಹೊಸದಲ್ಲ.ಆದರೆ ಭೈರಪ್ಪನವರು ವೈಜ್ಞಾನಿಕ ಕಾದಂಬರಿಯನ್ನು ಹೇಗೆ ಬರೆದಿರಬಹುದು ಎಂಬ ಕುತೂಹಲಕ್ಕೇ ಎಲ್ಲರೂ ‘ಯಾನ’ವನ್ನು ಓದುತ್ತಿದ್ದಾರೆ.ಅದೊಂದು ಮಹಾಯಾನ.ದೇಶಾಂತರ ಅಲ್ಲ,ಭೂಮ್ಯಾಂತರ ಅಲ್ಲ,ಸೂರ್ಯಾಂತರ ಹೋಗಿ ‘ಪ್ರಾಕ್ಸಿಮಾ ಸೆಂಟಾರಿಸ್’ ಎಂಬ ನಕ್ಷತ್ರದ ಸುತ್ತ ಬೇರೆ ಗ್ರಹಗಳಿವೆಯೇ?ಇದ್ದರೆ ಅವು ಭೂಮಿಯಂತೆ ವಾಸಯೋಗ್ಯವೇ? ಎಂದು ತಿಳಿಯುವುದೇ ಯಾನದ ಉದ್ದೇಶ.ಈ ಯಾನ ಸಾವಿರಾರು ವರ್ಷಗಳ ಕಾಲ ಸಾಗುವಂಥದ್ದು.ಅಂಥ ಒಂದು ಮಹಾಯಾನಕ್ಕೆ ಒಬ್ಬ ಗಂಡು ಮತ್ತು ಹೆಣ್ಣನ್ನು ಗೊತ್ತು ಮಾಡಿ ನೌಕೆಯಲ್ಲಿ ಅಂತರಿಕ್ಷಕ್ಕೆ ಕಳಿಸುತ್ತಾರೆ.ಆ ನೌಕೆಯಲ್ಲಿ ಭೂಮಿಯಲ್ಲಿರುವಂತೆಯೇ ವಾತಾವರಣವಿರುತ್ತದೆ.ಭೂಮಿಯಷ್ಟೇ ಗುರುತ್ವಾಕರ್ಷಣೆ ಇರುತ್ತದೆ.ಮಳೆ ಸುರಿಯುತ್ತದೆ,ಗಾಳಿ ಬೀಸುತ್ತದೆ.ಭೂಮಿಯಂತೆ ಸಸ್ಯಗಳೂ ಬೆಳೆಯುತ್ತವೆ.ಆ ಗಂಡು ಹೆಣ್ಣು ಯಾನದಲ್ಲಿಯೇ ಲೈಂಗಿಕ ಸಂಪರ್ಕ ಮಾಡಿ ಇಬ್ಬರು ಮಕ್ಕಳನ್ನು ಪಡೆಯಬೇಕು.ನಂತರ ಆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಬಾಹ್ಯಾಕಾಶ,ಖಗೋಳ ಜ್ಞಾನ ಮತ್ತು ಇತರ ವಿಜ್ಞಾನದ ಎಲ್ಲಾ ವಿಷಯಗಳನ್ನು ಕಲಿತು,ಅವರೂ ಸಂಪರ್ಕ ಮಾಡಿ ಮಕ್ಕಳನ್ನು ಪಡೆಯಬೇಕು.ಅವರಿಗೂ ನೌಕೆಯಲ್ಲೇ ಎಲ್ಲಾ ಶಿಕ್ಷಣವನ್ನು ನೀಡಿ ಸಮರ್ಥರನ್ನಾಗಿ ಮಾಡಬೇಕು.ಹೀಗೆ ಯಾನದಲ್ಲಿಯೇ ಸಂತತಿ ಬೆಳೆಯಬೇಕು.ಆ ಮೂಲಕ ಸಹಸ್ರಾರು ವರ್ಷಗಳ ಯಾನ ಯಶಸ್ವಿಯಾಗಿ ಭಾರತ ಬಾಹ್ಯಾಕಾಶ ವಿಜ್ಞಾನದ ದೊಡ್ಡಣ್ಣನಾಗಬೇಕು.ಹೀಗೆ ಯಾನ ಹೋಗುತ್ತಿರುವಾಗ ನೌಕೆಯಲ್ಲೇ ಹುಟ್ಟಿದ ಆಕಾಶ್ ಮತ್ತು ಮೇದಿನಿ ತಮ್ಮ ಜನ್ಮ ರಹಸ್ಯವನ್ನು ತಿಳಿಯುವುದಕ್ಕಾಗಿ ತಮ್ಮ ಅಪ್ಪ-ಅಮ್ಮ ಯಾನದುದ್ದಕ್ಕೂತಮ್ಮ ತಮ್ಮ ಕಂಪ್ಯೂಟರ್ ಗಳಲ್ಲಿ  ಬರೆದಿಟ್ಟ ಸಂಗತಿಗಳನ್ನು ಓದುತ್ತಾರೆ.ಆಗ ಮತ್ತೊಂದು ಕಥೆ ಆರಂಭವಾಗುತ್ತದೆ.ಅದು ಆಕಾಶ್ ಮತ್ತು ಮೇದಿನಿಯ ತಂದೆ-ತಾಯಿಯರಾದ ಡಾ.ಸುದರ್ಶನ್ ಮತ್ತು ಉತ್ತರಾಳದ್ದು.

ಡಾ.ಸುದರ್ಶನ್ ಮತ್ತು ಉತ್ತರಾರಿಗೆ ಯಾನಕ್ಕೆ ತೆರಳುವ ಮುನ್ನ ಅವರು ನೌಕೆಯಲ್ಲೇ ಸಂಪರ್ಕ ನಡೆಸಿ ಮಕ್ಕಳನ್ನು ಪಡೆದು ಸಂತತಿಯನ್ನು ಮುಂದುವರೆಸಿ ಯಾನ ಸುಸೂತ್ರವಾಗಿ ಸಾಗುವಂತೆ ಮಾಡಲು ಸೂಚಿಸಲಾಗಿರುತ್ತದೆ.ಸಂಪರ್ಕ ಮಾಡದೇ ಪ್ರನಾಳ ಶಿಶು ವಿಧಾನದಿಂದಲೂ ಮಕ್ಕಳನ್ನು ಪಡೆಯಬಹುದೆಂದು ಸೂಚಿಸಲಾಗುತ್ತದೆ.ಆದರೆ ಯಾನ ಆರಂಭವಾದ ಮೇಲೆ ಉತ್ತರಾ ತನ್ನ ಹಳೆಯ ಪ್ರೇಮಿ ಯಾದವ್ ನ ನೆನಪಲ್ಲೇ ಉಳಿದು ಸುದರ್ಶನ್ ನನ್ನು ನಿರಾಕರಿಸುತ್ತಾಳೆ.ಯಾನ ಹೊರಡುವ ಮುನ್ನ ಮಾತು ಕೊಟ್ಟಂತೆ ನಾವು ನಡೆದುಕೊಂಡು ಸಂಪರ್ಕ ಮಾಡಿ ಕನಿಷ್ಟ ಒಂದು ಮಗುವನ್ನಾದರೂ ಪಡೆಯಬೇಕು, ಇಲ್ಲವಾದರೆ ನಾವು ವಚನಭ್ರಷ್ಠರಾದಂತಾಗುತ್ತದೆ ಎಂದು ಸುದರ್ಶನ್ ಹೇಳಿದಾಗ ಉತ್ತರಾ “ವಚನ,ಕರ್ತವ್ಯ ಎಂಬ ಭೂಮಿಯ ಮೇಲೆ ಮಾಡಿಕೊಂಡ ಕಲ್ಪನೆಗೆ ಭೂಮಿಯಿಂದ ಹೊರಗೆ ಬೆಲೆ ಇರುತ್ತದೆಯೇ?ಭೂಮಿಯ ಸಮಸ್ತ ಜನಾಂಗಕ್ಕೂ ಸೂರ್ಯನೇ ಅಧಿದೇವತೆ.ಹಾಗಾಗಿ ವಚನ,ಕರ್ತವ್ಯ ಎಲ್ಲವೂ ಸೂರ್ಯಾಧಾರಿತವಾಗಿ ನಡೆಯುತ್ತವೆ.ಆದರೆ ಇಲ್ಲಿ ಅಂತರಿಕ್ಷದಲ್ಲಿ ಸೂರ್ಯನು ಯಾವ ಶಕ್ತಿವ್ಯಾಪಿ, ಗುರುತ್ವಾಕರ್ಷಣೆಯೂ ಇಲ್ಲದ ಒಂದು ಕಿರುನಕ್ಷತ್ರವಾಗಿರುವಾಗ  ಅದರ ದೈವತ್ವದ ಕಲ್ಪನೆ ತನಗೆ ತಾನೇ ಕಳಚಿಕೊಳುತ್ತದೆ.ಅದನ್ನವಲಂಬಿಸಿದ ನಿಷ್ಠೆಯೂ ಸತ್ತು ಹೋಗುತ್ತದೆ.ಆದ್ದರಿಂದ ನಾವು ಕೊಟ್ಟ ಮಾತಿಗೆ ಬದ್ಧತೆ ಉಳಿದಿಲ್ಲ”ಎನ್ನುತ್ತಾಳೆ.ಇದು ಓದುಗರನ್ನೂ ಚಿಂತನೆಗೆ ಹಚ್ಚಿ ಕೆಲ ಕಾಲ ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ.

ಉತ್ತರಾಳ ಮಾತಿಗೆ ಸುದರ್ಶನ್ ತನ್ನ ಮನಸ್ಸಿನಲ್ಲೇ ಚಿಂತಿಸುತ್ತಾನೆ.ಸಾವಿರ-ಸಾವಿರ ಜ್ಯೋತಿರ್ವರ್ಷ ದೂರದ ನಕ್ಷತ್ರಗಳ ಗುರುತ್ವಾಕರ್ಷಣೆಗಳು ಎಲ್ಲೆಲ್ಲಿಯೂ ನೇಯ್ದ ಬಲೆಯಾಗಿರುವಾಗ ಸೂರ್ಯನಿಂದ ಸಂಪೂರ್ಣ ಸಂಪರ್ಕರಹಿತರಾಗುವುದು ಹೇಗೆ ಸಾಧ್ಯ?ಸತ್ಯವೆಂಬ ನೈತಿಕ ನಿಯಮವು ಗ್ರಹದಿಂದ ಗ್ರಹಕ್ಕೆ,ಒಂದು ಸೌರ ಮಂಡಲದಿಂದ ಇನ್ನೊಂದು ಸೂರ್ಯಮಂಡಲಕ್ಕೆ ಬದಲಾಗುತ್ತದೆಯೇ?ಒಂದು ಮಂಡಲದಲ್ಲಿ ಕೊಟ್ಟ ವಚನವು ಇನ್ನೊಂದು ಮಂಡಲದಲ್ಲಿ ಅರ್ಥ ಕಳೆದುಕೊಂಡು ನಾಶವಾಗಲು ಹೇಗೆ ಸಾಧ್ಯ?ಈ ಮಾತುಗಳೂ ಸಹ ಓದುಗನಿಗೆ ಇಷ್ಟವಾಗುತ್ತವೆ.ಇನ್ನೊಂದು ಕಡೆ ಉತ್ತರಾ “ಮಾನವ ಕುಲದ ಪ್ರಗತಿಯಾಗಬೇಕಾದರೆ ಕೆಲವರಾದರೂ ಕೆಲವು ಅಪರೂಪದ ತ್ಯಾಗಕ್ಕೆ ಸಿದ್ಧರಾಗಿರಲೇಬೇಕಾಗುತ್ತದೆ.ಅದು ನಾನೇ ಏಕಾಗಬಾರದು” ಈ ಮಾತನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಕಾರ್ಯಪ್ರವರ್ತರಾದರೆ ಪ್ರಪಂಚ ಅಭಿವೃದ್ಧಿಯಾಗುವುದನ್ನು ತಡೆಯಲು ಯಾರಿಂದಲಾದರೂ ಸಾಧ್ಯವೇ?ತನ್ನ ತಂದೆ-ತಾಯಿಯರನ್ನು,ಬಂಧು-ಬಳಗವನ್ನು,ಸ್ನೇಹಿತರನ್ನು,ಈ ಭೂಮಿಯನ್ನೇ ಬಿಟ್ಟು ಎಂದೆಂದೂ ವಾಪಾಸ್ಸು ಬಾರದ ಅಂತರಿಕ್ಷಕ್ಕೆ ಹೋಗುವವರ ಮನಸ್ಥಿತಿ ಹೇಗಿರಬಹುದು?

ತಮ್ಮ ಹಿಂದಿನ ಹಲವು ಕಾದಂಬರಿಗಳಂತೆ ಭೈರಪ್ಪನವರು ಯಾನದಲ್ಲೂ ಆಧ್ಯಾತ್ಮ,ಧ್ಯಾನ,ಯೋಗದ ಕುರಿತು ತಿಳಿಸಿದ್ದಾರೆ.ಇಲ್ಲಿ ಸೂರ್ಯನನ್ನೇ ಪ್ರಧಾನ ಕೇಂದ್ರವಾಗಿರಿಸಿಕೊಂಡು ಸೂರ್ಯನೆಂದರೆ ಯಾರು?ಆತನಿಗೂ ಮಾನವನಿಗೂ ಸಂಬಂಧವೇನು? ಎಂಬುದರ ಕುರಿತು ಚರ್ಚಿಸುತ್ತಾರೆ.”ಈ ಭೌತಿಕ ಸೂರ್ಯ ಒಂದು ಬಿಂಬ,ಒಂದು ಪ್ರತೀಕ.ಅದರ ಮೂಲಕ ನಮ್ಮೊಳಗಿನ ಸತ್ಯವನ್ನು ನಾವು ತಿಳಿಯುವುದನ್ನೇ ಸೂರ್ಯೋಪಾಸನೆ ಎನ್ನುತ್ತಾರೆ  ಬೆಸೆಯುವಿಕೆ ಆದಿತ್ಯ ಗುಣ,ಒಡೆಯುವಿಕೆ ದೈತ್ಯಗುಣ.ಸೂರ್ಯ ಜಗತ್ತನ್ನು ಪರಿಪಾತಗೊಳಿಸುವವನು.ಅಹಂ ಬ್ರಹ್ಮಾಸ್ಮಿ ಎಂಬುದನ್ನು ಅಹಂ ಆದಿತ್ಯೋಸ್ಮಿ,ಅಹಂ ಸೂರ್ಯಾಸ್ಮಿ ಎಂದೂ ಹೇಳಬಹುದು.ಎಲ್ಲಾ ನಕ್ಷತ್ರಗಳೂ ಬ್ರಹ್ಮ ಸ್ವರೂಪಿಯೇ.ಆದರೆ ಸೂರ್ಯನೆಂದರೆ ಸರ್ವವ್ಯಾಪಿಯಾದ ಪರಬ್ರಹ್ಮ” ಹೀಗೆ ಯಾನದಲ್ಲಿ ಭೈರಪ್ಪನವರು ಅದ್ವೈತ ಸಿದ್ಧಂತವನ್ನು ಸೂರ್ಯನಿಗೂ ಅಳವಡಿಸಿದ್ದಾರೆ.ಧ್ಯಾನದ ಬಗ್ಗೆ ಹೇಳುತ್ತಾ “ವಿಶ್ವದಷ್ಟೇ ನಾನೂ ಶಕ್ತ ಎಂಬ ಭಾವ ಧ್ಯಾನದ ಸಮಯದಲ್ಲಿ ಮಾತ್ರ ತುಂಬಿಕೊಳ್ಳುತ್ತದೆ” ಎಂದಿದ್ದಾರೆ.ತತ್ವಶಾಸ್ತ್ರದ ಬಗ್ಗೆ ಹೇಳುತ್ತಾ “ಕತ್ತಲಿನ ಕ್ಷೇತ್ರವು ಬೆಳಕಿನ ಕ್ಷೇತ್ರಕ್ಕಿಂತ ಕೋಟ್ಯಾಂತರ ಪಟ್ಟು ಹೆಚ್ಚು.ಕತ್ತಲಿನ ಶಕ್ತಿಯ ಮುಂದೆ ಬೆಳಕು ಸದಾ ಹೆಣಗಾಡಬೇಕಾಗುತ್ತದೆ.ಬರುಬರುತ್ತಾ ಕತ್ತಲನ್ನೇ ಪ್ರವೇಶಿಸುವುದೇ ಅಸ್ತಿತ್ವದ ಅಂತ್ಯವಾದರೆ ಇಷ್ಟೆಲ್ಲಾ ಕಷ್ಟಪಟ್ಟು ಭೂಮಿಯಿಂದ ಆ ನಕ್ಷತ್ರ ಲೋಕಕ್ಕೆ ಸಂಚರಿಸುವುದೇಕೆ?ಇರುವ ಭೂಮಿಯನ್ನು ಹಾಳುಗೆಡವಿ ಇನ್ನೊಂದು ಅಂಥದ್ದೇ ಭೂಮಿಯನ್ನು ಅನ್ವೇಷಿಸುವ ಹುಚ್ಚು ಏಕೆ?ಯಾವುದೇ ಮತ ಧರ್ಮಗಳ ಅವಲಂಬನೆಯಿಲ್ಲದೇ ಮನುಷ್ಯ ನೀತಿವಂತನಾಗಿ ಬದುಕಬಹುದು.ಆದರೆ ನೀತಿಯ ಪರಿಕಲ್ಪನೆಗಳನ್ನು ಪುನರ್ ರೂಪಿಸಿಕೊಳ್ಳಬೇಕಷ್ಟೇ”ಈ ಎಲ್ಲಾ ಮಾತುಗಳೂ ಓದುಗನನ್ನು ಕೊರೆಯುತ್ತವೆ.

ಎಂದಿನಂತೆ ಈ ಕಾದಂಬರಿಯಲ್ಲೂ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಆಧಾರವಾಗಿರಿಸಿಕೊಂಡೇ ಕಥೆಯನ್ನು ಹೆಣೆಯಲಾಗಿದೆ. ಉದಾಹರಣೆಗೆ ಭಾರತದ ವಿಜ್ಞಾನಿಗಳು ಸಾವಿರಾರು ವರ್ಷ ಸಾಗುವ ಯಾನಕ್ಕೆ ಉಪಯೋಗವಾಗುವ ಅತ್ಯಾಧುನಿಕ ಅಂತರಿಕ್ಷ ನೌಕೆಯನ್ನು ನಿರ್ಮಿಸಿ,ಪ್ರಾಕ್ಸಿಮಾ ಸೆಂಟಾರಿಸ್ ಆಚೆಗೆ ಗ್ರಹಗಳಿವೆಯೇ ಎಂದು ಹುಡುಕ ಹೊರಟಾಗ ವಿಶ್ವದ ದೊಡ್ಡಣ್ಣ ಅಮೇರಿಕಾ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕುತ್ತದೆ.ಇನ್ನೂ ಹಿಂದುಳಿದ ದೇಶ,ಹೊತ್ತಿನ ಊಟಕ್ಕೂ ಪರದಾಡುವ ಜನರಿರುವ ದೇಶ ಸಾವಿರಾರು ಕೋಟಿ ಖರ್ಚು ಮಾಡಿ ಯಾನ ನಡೆಸುವ ಅಗತ್ಯವೇನಿತ್ತು?ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಲ್ಲ ಎಂದು ಅಮೇರಿಕಾ ಕೇಳುತ್ತದೆ.ಇತ್ತೀಚೆಗೆ ಇಸ್ರೋ ಅಧ್ಯಕ್ಷ ಡಾ.ರಾಧಾಕೃಷ್ಣನ್ ‘ಮಂಗಳಯಾನ’ದ ಸಮಯದಲ್ಲಿ ರಾಕೆಟ್ ನ ಬೆಳ್ಳಿಯ ಪ್ರತಿಮೆಯನ್ನು ಮಾಡಿ ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿ ಪೂಜೆ ಮಾಡಿ,ಯಾನ ಯಶಸ್ವಿಯಾಗುವಂತೆ ಪ್ರಾರ್ಥಿಸಿದ್ದು ಅತ್ಯಂತ ವಿವಾದಕ್ಕೆ ಕಾರಣವಾಗಿತ್ತು.ವಿಜ್ಞಾನದಲ್ಲಿ ಧರ್ಮವನ್ನು ತರಬಾರದು ಎಂದು ಅನೇಕರು ವಾದಿಸಿದ್ದರು. ಸರ್ಕಾರದ ಹಣದಲ್ಲಿ ರಾಕೆಟ್ ನ ಬೆಳ್ಳಿಯ ಪ್ರತಿಮೆ ನಿರ್ಮಿಸಿ ಪೂಜಿಸುವುದು ಎಷ್ಟು ಸರಿ ಎಂದೂ ಕೇಳಿದ್ದರು.‘ಯಾನ’ ಕಾದಂಬರಿಯಲ್ಲೂ ಬಾಹ್ಯಾಕಾಶ ಕೇಂದ್ರದ ಮುಖ್ಯಸ್ಥರಾದ ಡಾ.ವೆಂಕಟ್ ಯಾನಕ್ಕೂ ಮುಂಚೆ ತಿರುಪತಿ ತಿಮ್ಮಪ್ಪನಿಗೆ ರಾಕೆಟ್ ನ ಪ್ರತಿಮೆ ಮಾಡಿ ಪೂಜಿಸಿದ್ದು ವಿವಾದವಾಗುತ್ತದೆ.ಅದಕ್ಕೆ ಡಾ.ವೆಂಕಟ್ ಉತ್ತರಿಸುತ್ತಾ “ಸಾವಿರಾರು ಕೋಟಿ ಖರ್ಚು ಮಾಡುವ ಯೋಜನೆಯಲ್ಲಿ ತೊಡಗಿರುವ ವಿಜ್ಞಾನಿಗಳ ಮನೋಬಲವನ್ನು ಎತ್ತಿ ನಿಲ್ಲಿಸಲು ಒಂದು ಪೂಜೆಯನ್ನು ಮಾಡಿದರೆ ಅದನ್ನು ಕಾನೂನು ಬಾಹಿರವೆಂದು ನಿಷೇಧಿಸುವ ಮಾನವೀಯತೆ ಎಷ್ಟು ಸರಿ?” ಎನ್ನುತ್ತಾರೆ.ಹಿಮಾಲಯದ ವರ್ಣನೆಯೂ ಕಣ್ಣಿಗೆ ಕಟ್ಟುವಂತೆ ಬರುತ್ತದೆ.ಇಪ್ಪತ್ತು ವರ್ಷಗಳ ಹಿಂದಿನ ಹಿಮಾಲಯಕ್ಕೂ ಇಂದಿನ ಹಿಮಾಲಯಕ್ಕೂ ಇರುವ ವ್ಯತ್ಯಾಸಗಳೇನು?ಅಲ್ಲಿ ಕಂಡ ಕಂಡಲ್ಲಿ ರಸ್ತೆಗಳನ್ನು ನಿರ್ಮಿಸಿದ್ದರಿಂದ ಪರಿಸರ ಹೇಗೆ ಹಾಳಾಗಿದೆ ಎಂಬುದನ್ನು ವಿವರವಾಗಿ ಭೈರಪ್ಪನವರು ಬರೆಯುತ್ತಾರೆ.ಕೇದಾರನಾಥ ದುರಂತದ ಕಥೆಯೂ ಬರುತ್ತದೆ.

ಕಾದಂಬರಿಯ ವಸ್ತು ನಲ್ವತ್ತು ವರ್ಷಗಳಿಂದ ತಲೆಯಲ್ಲಿತ್ತು.ಆದರೆ ಖಗೋಳ ಶಾಸ್ತ್ರದ ಬಗ್ಗೆ, ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಅಧ್ಯಯನವನ್ನು ನಿರಂತರವಾಗಿ ಮಾಡಿದ್ದರಿಂದ ಕಾದಂಬರಿ ಬರುವುದು ಇಷ್ಟು ತಡವಾಯಿತು ಎಂದು ‘ಯಾನ’ದ ಬಿಡುಗಡೆಗೆ ಮುನ್ನ ಭೈರಪ್ಪನವರು ಹೇಳಿದ್ದರು.ಕಾದಂಬರಿ ಓದಿದಾಗ ನಮಗೆ ಅವರು ನಿರಂತರವಾಗಿ ವಿಷಯದ ಕುರಿತು ಅಧ್ಯಯನ ಮಾಡಿ,ವೈಜ್ಞಾನಿಕ ಸಂಗತಿಗಳನ್ನು ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಲು ಎಷ್ಟು ಶ್ರಮ ಪಟ್ಟಿದ್ದಾರೆ ಎಂದು ಗೊತ್ತಾಗುತ್ತದೆ.ಉದಾಹರಣೆಗೆ ನೌಕೆಯಿಂದ ಭೂಮಿಗೆ ಫೋನ್ ಮಾಡಿದಾಗ ಒಂದೊಂದು ಶಬ್ದವೂ ಭೂಮಿಯನ್ನು ತಲುಪಲು ಅರ್ಧ ಗಂಟೆ ಬೇಕು.ನೌಕೆಯಲ್ಲಿ ಸಂಚರಿಸುವಾಗ ನಮ್ಮ ಮೂಳೆಗಳು ನಮಗೇ ಗೊತ್ತಿಲ್ಲದಂತೆ ದುರ್ಬಲಗೊಂಡು ಯಾವಾಗ ಬೇಕಾದರೂ ಮುರಿದುಕೊಳ್ಳಬಹುದು.ಹೀಗೇ ಮುಂತಾದ ಬಾಹ್ಯಾಕಾಶ ವಿಜ್ಞಾನದ ರೋಚಕ ವಿವರಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಹೇಳಿದ್ದಾರೆ.ಅಗತ್ಯವಿರುವಲ್ಲೆಲ್ಲಾ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿ ವಿವರಿಸುತ್ತಾರೆ.ಎಂಬತ್ತರ ಹರೆಯದಲ್ಲೂ ನಿರಂತರ ಅಧ್ಯಯನ,ಮಗುವಿನಂಥ ಕುತೂಹಲ,ಹರೆಯದ ವಿದ್ಯಾರ್ಥಿಗಳೂ ನಾಚುವಂಥ ಏಕಾಗ್ರತೆ,ಶಿಸ್ತಿನ ಜೀವನ ಇವು ಭೈರಪ್ಪನವರ ‘ಯಾನ’ದಲ್ಲಿ ನಮಗೆ ಎದ್ದು ಕಾಣುತ್ತದೆ.‘ದರ್ಮಶ್ರೀ’ಯಿಂದ ಹಿಡಿದು ಅವರ ಇಲ್ಲಿಯವರೆಗಿನ ಎಲ್ಲಾ ಕಾದಂಬರಿಗಳನ್ನು ಓದಿದವರಿಗೆ ‘ಯಾನ’ ಸ್ವಲ್ಪ ಸಪ್ಪೆ ಎನಿಸುತ್ತಿದೆ.ಭೈರಪ್ಪನವರು ತಮ್ಮ ಕಸುವನ್ನು ಕಳೆದುಕೊಂಡಿದ್ದಾರೇನೋ ಎಂದನ್ನಿಸುತ್ತದೆ ಎಂದು ಅನೇಕರು ಹೇಳುತ್ತಿದ್ದರೂ ಭೈರಪ್ಪನವರ ಕೆಲವೇ ಕಾದಂಬರಿಗಳನ್ನು ಓದಿದ ನನ್ನಂಥ ಹುಡುಗರಿಗೆ ಯಾನ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

ಎಂಬತ್ತರ ವಯಸ್ಸಿನಲ್ಲೂ ಯುವಕನಂತೆ ಓಡಾಡುತ್ತಾ,ಯಾವುದೇ ಹಮ್ಮು,ಬಿಂಕ ಇಲ್ಲದೇ ಎಲ್ಲರೊಂದಿಗೇ ಬೆರೆಯುವ,ಯಾವುದೇ ಪ್ರಶಸ್ತಿ, ಹುದ್ದೆಗಳಿಗೆ ಲಾಬಿ ಮಾಡದ,ಪ್ರಚಾರಕ್ಕಾಗಿ ಮೈಕ್ ಸಿಕ್ಕಲ್ಲೆಲ್ಲಾ ಮಾತನಾಡದ,ಸತ್ಯವನ್ನು ನಿರ್ಭಿಡೆಯಿಂದ ಹೇಳಲು ಎಲ್ಲೂ ಹಿಂಜರಿಯದ,ತಮ್ಮ ಬರಹಗಳ ಬಗ್ಗೆ ಯಾರೇನೇ ಅಂದರೂ ತಲೆ ಕೆಡಿಸಿಕೊಳ್ಳದ,ತಕ್ಷಣ ಮುಂದಿನ ಕಾದಂಬರಿಗಾಗಿ ಸಿದ್ಧತೆ ನಡೆಸುವ ಭೈರಪ್ಪನವರ ಮಹಾಯಾನ ನಿರಂತರವಾಗಿ ಸಾಗಲಿ.ಕನ್ನಡದ ಈ ‘ಸರಸ್ವತಿ ಸಮ್ಮಾನ’ದ ಹೆಮ್ಮೆಯ ಪುತ್ರನ ಸಾಹಿತ್ಯ ಸೇವೆ ಇನ್ನೂ ಮುಂದುವರೆಯಲಿ. ಜನರಿಗೆ ಮಾರ್ಗದರ್ಶಕವಾಗುವ ಇನ್ನೂ ಅನೇಕ ಒಳ್ಳೆಯ ಕಾದಂಬರಿಗಳು ಬಂದು ‘ಕಾದಂಬರಿ ಲೋಕಕ್ಕೊಬ್ಬರೇ ಭೈರಪ್ಪ’ ಎನ್ನುವಂತಾಗಲಿ ಎಂಬುದೇ ನನ್ನ ಆಸೆ.

– ಲಕ್ಷ್ಮೀಶ ಜೆ. ಹೆಗಡೆ, ಮಿಜಾರು

8 Responses

  1. jayashree says:

    ಉತ್ತಮ ಬರಹ. ನನಗೂ ‘ಯಾನ ‘ ಹೆಚ್ಚು ಹಿಡಿಸಲಿಲ್ಲ. ‘ಭಿತ್ತಿ’, ‘ಪರ್ವ’, ‘ಸಾಕ್ಷಿ’, ‘ಸಾರ್ಥ’ ದಲ್ಲಿ ಮೆಚ್ಚಿದ ಭೈರಪ್ಪನವರು ‘ಕವಲು’ವಿನಲ್ಲಿ ಅಪ್ಪಟ ಪಿತೃ ಪ್ರಾಧಾನ್ಯ , ಅಸಹನೆಯ ವ್ಯಕ್ತಿತ್ವದವರಂತೆ ಕಂಡು ಬಂದರು. ಈಗ ನೋಡಿದರೆ ‘ಯಾನದಲ್ಲಿ ಅವರ ವೈಚಾರಿಕ ಕಸುವು ಕೂಡ ಎಲ್ಲೋ ಕಳೆದು ಹೋದವರಂತೆ ಕಾಣುತ್ತಿದೆ.

  2. Pushpalatha Mudalamane says:

    ಅತ್ಯಂತ ಸಮರ್ಪಕವಾದ ವಿಮರ್ಶೆ !

  3. Krishnaveni Kidoor says:

    ನನಗೆ ಭೈರಪ್ಪನವರ ಬರವಣಿಗೆ ಅಂದರೆ ಬಲು ಪ್ರೀತಿ.ಯಾನ ಓದಿದ ಮೇಲೆ ಅಭಿಪ್ರಾಯಿಸುವುದೇ ಉತ್ತಮ.ಆದರೆ ನಿಮ್ಮ ಬರಹ ಚಿನ್ನಾಗಿದೆ .

  4. ತುಂಬಾ ಚೆನ್ನಾಗಿದೆ ನಿಮ್ಮ ವಿಮರ್ಶೆ!

  5. Thanks every one for reading..

  6. VINAY KUMAR V says:

    ಒಳ್ಳೆಯ ವಿಮರ್ಶೆ.
    ಭೈರಪ್ಪನವರ ವಿಚಾರಧಾರೆಯ ಆಳವನ್ನು ಊಹಿಸಲೂ ಸಾಧ್ಯವಿಲ್ಲ. ಎಲ್ಲೋ ಎಂದೋ ಹೀಗಿದ್ದರೆ ಹೇಗೆ ಎಂದು ಕಲ್ಪಿಸಿಕೊಳ್ಳುವ ವಸ್ತುವಿಗೆ ಒಂದು ಸೊಗಸಾದ ಕಥೆ ಹೆಣೆದು ಒಳ್ಳೆಯ ಕೃತಿ ಸಮರ್ಪಿಸಿದ್ದಾರೆ.
    ಹೀಗೆ ಇನ್ನಷ್ಟು ಉತ್ತಮ ಬರಹಗಳು ಮೂಡಿ ಬರಲಿ.
    ಇದು ಮಹಾಯಾನವೇ ಸರಿ. 🙂

  7. ಮಾಲಾ says:

    ಈ ವಿಮರ್ಶೆ ಓದಿ ಯಾನ ಓದಿದಂತಾಯಿತು.

  8. NeelammaBanur says:

    ವಿಮರ್ಶೆ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: