ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಗೆಳತಿ ಸುಮನಾ ಸ್ವಲ್ಪ ಅಡ್ಡಾಗುತ್ತೇನೆಂದವಳು ಸಣ್ಣದಾಗಿ ಗೊರಕೆ ಹೊಡೆಯುತ್ತಾ ನಿದ್ರೆಗೇ ಜಾರಿಬಿಟ್ಟಿದ್ದಳು. “ಇಷ್ಟು ಬೇಗ ನಿದ್ರೆ ಹೋಗಿದ್ದಾಳೆಂದರೆ ಹಿಂದಿನ ರಾತ್ರಿ ಜಾಗರಣೆ ಮಾಡಿರಬೇಕು. ಎಲ್ಲಿಗೆ ಹೋಗಿದ್ದಳೋ, ಏನು ಕತೆಯೋ, ಸ್ವಲ್ಪ ಮಲಗಿಕೊಳ್ಳಲಿ, ಎದ್ದ ಮೇಲೆ ಮಾತನಾಡಿದರಾಯಿತು ಎಂದುಕೊಂಡಳು. ಹಾಗೇ ಮಲಗಿದ್ದವಳನ್ನು ದಿಟ್ಟಿಸಿ ನೋಡಿದಳು. ಅರವತ್ತರ ಹತ್ತಿರ ಬರುತ್ತಿದ್ದಾಳೆ, ಆದರೂ ಮಾಸದ ಚೆಲುವು, ಒಳ್ಳೆಯ ಬಣ್ಣ, ತಿದ್ದಿತೀಡಿದಂತಹ ಮುಖಲಕ್ಷಣ, ಮಧ್ಯಮ ಎತ್ತರದ ನಿಲುವು. ಈಗಲೂ ಉಳಿಸಿಕೊಂಡಿರುವ ಆಕರ್ಷಕ ಮೈಮಾಟ, ಮತ್ತೊಬ್ಬರ ಕಷ್ಟಕ್ಕೆ ಮರುಗುವ ಮೃದುಮನ ಒಂದೇ ಎರಡೇ ಗುಣಗಳು, ಹೂಂ ತನ್ನ ಕೆಲಸದಲ್ಲೂ ಅಚ್ಚುಕಟ್ಟು, ಉತ್ತಮ ಶಿಕ್ಷಕಿ ಎಂಬ ತಾರೀಫು. ವಿದ್ಯಾರ್ಥಿಗಳಿಗೆಲ್ಲ ಪ್ರೀತಿಯ ಗುರು, ಸಾತ್ವಿಕ ಸ್ವಭಾವದವಳಾದ್ದರಿಂದ ಯಾವ ಊರಿಗೇ ವರ್ಗವಾಗಲಿ ಎಲ್ಲಿಯೂ ಕೆಟ್ಟ ಹೆಸರು ಗಳಿಸಿಕೊಳ್ಳದೆ ನಿವೃತ್ತಿಯ ಅಂಚನ್ನು ತಲುಪಿದ್ದಾಳೆ. ಆದರೇನು ಇಂಥಹ ಚೆಲುವಿನ ಗುಣಸಂಪನ್ನಳಿಗೆ ಬಾಳಸಂಗಾತಿಯಾಗಲು ಒಬ್ಬ ಜೊತೆಗಾರ ಸಿಗಲೇ ಇಲ್ಲ. ಸಿಕ್ಕಲೇ ಇಲ್ಲ ಎಂದು ಸಾರಾಸಗಟಾಗಿ ಹೇಳಲಾಗದು, ಸಿಗಲಾರದಂಥಹ ಸನ್ನಿವೇಶಗಳು ಸೃಷ್ಟಿಯಾದವು. ಅದೂ ಅವಳ ಸ್ವಂತ ಹೆತ್ತಮ್ಮನಿಂದಲೇ. ಎಂಥಹ ವಿಪರ್ಯಾಸ ! ಈ ಹೇಳಿಕೆಯನ್ನು ಒಪ್ಪಿಕೊಳ್ಳಲು ಮನಸ್ಸೇ ಬರುತ್ತಿಲ್ಲ. ತ್ಯಾಗಿ, ಸಹನಾಮಯಿ, ಕ್ಷಮಯಾ ಧರಿತ್ರಿ, ತನ್ನ ಸೆರಗಿನಲ್ಲಿ ಮುಚ್ಚಿಟ್ಟು ಮಡಿಲಿನಲ್ಲಿ ಪೋಷಿಸಿ ಬದುಕುವುದನ್ನು ಕಲಿಸಿ, ಬಾಳನ್ನು ಕಟ್ಟಿಕೊಟ್ಟು, ಅದನ್ನು ನೋಡಿ ಆನಂದ ಪಡುವಂತಹ ತಾಯಿ ! ತಾನು ಹೆತ್ತ ಮಕ್ಕಳಿಗೇ ಕೊಡಲಿಯ ಕಾವಾದಳಲ್ಲ…ಛೇ..” ಮೊಬೈಲ್ ಸದ್ದಾಯಿತು. ಭಾರ್ಗವಿ ಎಚ್ಚೆತ್ತು “ಥತ್ತೇರಿ ಇವತ್ತು ಬೆಳಗಿನಿಂದ ಈ ಮೊಬೈಲಿಗೆ ಪುರುಸೊತ್ತೇ ಇಲ್ಲದಂತಾಗಿದೆ.” ಎಂದು ಅದನ್ನು ಕೈಗೆ ತೆಗೆದುಕೊಂಡು ನೋಡಿದಳು. ಸುಮನಾಳ ಸೋದರಿ ಡಾ.ಕ್ಷಮಾ. ತಕ್ಷಣವೇ “ಹಲೋ” ಎಂದಳು.

“ಅಕ್ಕಾ ನಿಮ್ಮ ಮನೆಗೆ ಹೋಗಿ ಬರುತ್ತೇನೆಂದು ಹೋದವಳು ಇನ್ನೂ ಬರಲಿಲ್ಲ. ಏನು ಮಾಡುತ್ತಿದ್ದಾಳೆ? ಬೇಗ ಕಳುಹಿಸಿಕೊಡಿ ನನಗಿಲ್ಲಿ ಡ್ಯೂಟಿಗೆ ಟೈಮಾಯಿತು. ನಮ್ಮ ಅಮ್ಮನ ಹತ್ತಿರ ಯರಾದರೊಬ್ಬರು ಇರಲೇಬೇಕು. ಇಲ್ಲದಿದ್ದರೆ ರಾಮಾರಂಪ ಮಾಡಿಬಿಡುತ್ತಾರೆ. ನರ್ಸ್ಗಳನ್ನು ಬಿಡುವಂತಿಲ್ಲ ಅವರು ಒಪ್ಪುವುದಿಲ್ಲ. ಅದು ನಿಮಗೂ ಗೊತ್ತಲ್ಲವಾ? ಬೇಗ ಕಳುಹಿಸಿಕೊಡಿ” ಎಂದು ಹೇಳಿ ಕಾಲ್ ಕಟ್ ಮಾಡಿದಳು.
ಇದೇನು ನೆನ್ನೆಯಷ್ಟೇ ಅವರ ಮನೆಗೆ ಹೋಗಿದ್ದೆ. ಅವರಮ್ಮ ಚೆನ್ನಾಗಿಯೇ ಇದ್ದರಲ್ಲ. ಆಸ್ಪತ್ರೆಗೆ ಸೇರುವಂಥಹದ್ದೇನಾಯ್ತು. ಪಾಪ ಇವಳು ಸಾಕಾಗಿ ಮಲಗಿಬಿಟ್ಟಿದ್ದಾಳೆ. ಹೇಗೆ ಎಬ್ಬಿಸುವುದು, ಇಲ್ಲವೆಂದರೆ ಮತ್ತೆ ಫೋನ್ ಬಂದೀತು. ಅಲ್ಲಿ ಪಾಪ ಕ್ಷಮಾಗೂ ಕೂಡ ತೊಂದರೆ. ಒಲ್ಲದ ಮನಸ್ಸಿನಿಂದಲೇ “ಸುಮನಾ” ಎಂದು ಕರೆದಳು.

“ಹಾಂ..ತಾಯೀ ಎದ್ದೆ, ನೀನು ಮಾತನಾಡುತ್ತಿದ್ದಾಗಲೇ ಎಚ್ಚರವಾಯಿತು. ಹಾಳಾದ್ದು ಯಾವ ಜನ್ಮದಲ್ಲಿ ಅದೇನು ಕರ್ಮ ಮಾಡಿದ್ದೆವೋ ಅಕ್ಕ ತಂಗಿಯರಾಗಿ ಇವರ ಹೊಟ್ಟೆಯಲ್ಲಿ ಹುಟ್ಟಲಿಕ್ಕೆ. ಈ ಜನ್ಮದಲ್ಲಿ ತಾಯಿಯ ರೂಪದಲ್ಲಿ ಬಂದು ನಮ್ಮನ್ನು ಕಾಡಿಸುತ್ತಿದ್ದಾರೆ. ಅದೆಷ್ಟು ದಿನ ಕಾಡಿಸುತ್ತಾರೋ ಕಾಡಿಸಲಿ, ಆ ಕರ್ಮ ಈ ಜನ್ಮದಲ್ಲೇ ಮುಗಿದುಹೋಗಲಿ” ಎಂದು ನೋವು ತುಂಬಿದ ದನಿಯಲ್ಲಿ ಹೇಳಿದಳು ಸುಮನಾ. ಮಲಗಿದ್ದಲ್ಲಿಂದ ಮೇಲೆದ್ದು ಸ್ವ;ಲ್ಪ ಮುಖಕ್ಕೆ ನೀರು ಹಾಕಿಕೊಂಡು “ಬರುತ್ತೇನೆ ಭಾರ್ಗವಿ, ಡಿಕಾಕ್ಷನ್ ಇದ್ದರೆ ಒಂದೆರಡು ಕಪ್ ಕಾಫಿ ಮಾಡಿ ಫ್ಲಾಸ್ಕಿಗೆ ಹಾಕಿಕೊಡೆ ಪ್ಲೀಸ್” ಎಂದು ಕೇಳಿದಳು ಸುಮನಾ.

“ಅಯ್ಯೋ ಅದೇನು ಹೀಗೆ ಗೋಗರೀತೀಯಲ್ಲೇ, ಇಗೋ ಈಗಲೇ ಸಿದ್ಧ ಮಾಡಿಕೊಡುತ್ತೇನೆ’ ಎಂದು ಅಡುಗೆ ಮನೆಗೆ ಹೋದಳು ಭಾರ್ಗವಿ. ಸುಮನಾ ಸರಿಯಾಗಿ ಮುಖತೊಳೆದು ಕೂದಲನ್ನು ಸರಿಮಾಡಿಕೊಂಡು, ಸುಕ್ಕಾಗಿದ್ದ ಸೀರೆಯನ್ನು ಸರಿಮಾಡಿಕೊಂಡು ತನ್ನ ವ್ಯಾನಿಟಿ ಬ್ಯಾಗ್ ಹೆಗಲಿಗೇರಿಸಿಕೊಂಡಳು. ಅಷ್ಟರಲ್ಲಿ ಫ್ಲಾಸ್ಕ್ನೊಂದಿಗೆ ಬಂದ ಭಾರ್ಗವಿ ಅದನ್ನು ಒಂದು ಬ್ಯಾಗಲ್ಲಿರಿಸಿ ಜೊತೆಗೆ ಕೆಲವು ಬಾಳೆಹಣ್ಣುಗಳು ಒಂದು ಬಿಸ್ಕತ್ ಪ್ಯಾಕೆಟ್ಟನ್ನೂ ಸೇರಿಸಿಕೊಟ್ಟಳು. ಅದನ್ನು ಕಂಡು ಸುಮನಾ “ಇಡು ಕೆಲಸಕ್ಕೆ ಬರುತ್ತೇ. ನಿನ್ನೆಲ್ಲ ಪ್ರಶ್ನೆಗಳಿಗೆ ನಾನು ಫೋನ್ ಮೂಲಕವೇ ಉತ್ತರ ಹೇಳುತ್ತೇನೆ. ಫೋನ್ ನನ್ನ ಕೈಗೆ ಬಂದಾಗ” ಎಂದು ಭಾರ್ಗವಿಯ ಕೈಯಿಂದ ಚೀಲವನ್ನು ತೆಗದುಕೊಂಡು ಮನೆಯಿಂದ ಹೊರಟಳು ಸುಮನಾ.

ಏನೂ ಪ್ರಶ್ನಿಸಲಾಗದ ಭಾರ್ಗವಿ ಬರಿ ತಲೆ ಅಲ್ಲಾಡಿಸುತ್ತಾ ಬಾಗಿಲು ತೆರೆದು ಗೆಳತಿಯನ್ನು ಬೀಳ್ಕೊಟ್ಟು ಒಳಬಂದು ಬಾಗಿಲು ಭದ್ರಪಡಿಸಿದಳು.

ದಾರಿಯಲ್ಲಿ ಸಿಕ್ಕ ಅಟೋವೊಂದನ್ನು ಹಿಡಿದು ಚಂದ್ರಕಾಂತ ನರ್ಸಿಂಗ್ ಹೋಂ ತಲುಪಿದಳು ಸುಮನಾ. ಅಟೋದಿಂದಿಳಿದು ದುಡ್ಡುಕೊಟ್ಟು ಒಳ ನಡೆದಳು. ತನ್ನ ತಾಯಿಯಿದ್ದ ವಾರ್ಡ್ ಕಡೆಗೆ ದಾಪುಗಾಲಾಕುತ್ತಲೇ ಹೋದವಳಿಗೆ ತಂಗಿ ಡಾ.ಕ್ಷಮಾ ಅಲ್ಲಿ ಶತಪಥ ತಿರುಗುತ್ತಿದ್ದುದು ಕಣ್ಣಿಗೆ ಬಿತ್ತು. ಒಂದು ಕ್ಷಣ ತಾನು ಮೈಮರೆತು ನಿದ್ರಿಸಿದ್ದಕ್ಕೆ ನಾಚಿಕೆಯಾಯಿತು. ಹೂಂ ಏನು ಮಾಡಲಿ, ರಾತ್ರಿಯೆಲ್ಲಾ ನಿದ್ರೆಯಿಲ್ಲ. ಕಣ್ಣೆವೆಗಳು ತಮಗೆ ತಾವೇ ಮುಚ್ಚಿಹೋದವು. ಅದರಿಂದ ಇವಳಿಗೆ ಆತಂಕವಾಗುವಂತೆ ಮಾಡಿದೆ. ಈಗವಳು ಏನೇ ಅಂದರೂ ನಾನು ಮಾತನಾಡಬಾರದು. ನಾನು ತಂದಿರುವ ಕಾಫಿಯಲ್ಲಿ ಒಂದು ಕಪ್ ಬಗ್ಗಿಸಿ ಅವಳಿಗೆ ಕೊಟ್ಟುಬಿಡಬೇಕು. ಕಾಫಿ ಕುಡಿದ ಕೂಡಲೇ ಅವಳ ಮುನಿಸು ಮಾಯವಾಗಿಬಿಡುತ್ತದೆ. ಹಾಂ ಅದೇ ಸರಿಯಾದ ಉಪಾಯ ಎಂದುಕೊಂಡು ವಾರ್ಡನ್ನು ಸಮೀಪಿಸಿದಳು.

ಅಕ್ಕನನ್ನು ನೋಡಿದ ಡಾ.ಕ್ಷಮಾ “ಇದೇನೇ ನಾನಷ್ಟು ಹೇಳಿ ಕಳುಹಿಸಿದ್ದರೂ ನೀನು” ಎಂದು ಹೇಳಲು ಹೊರಟಿದ್ದವಳ ಬಾಯನ್ನು ತನ್ನ ಕೈಯಿಂದ ಮುಚ್ಚಿ ರೂಮಿನ ಬಾಗಿಲನ್ನು ಒಳಗೆಳೆದುಕೊಂಡು ಹೋದಳು. ಅಲ್ಲಿದ್ದ ಮತ್ತೊಂದು ಬೆಡ್ ಮೇಲೆ ಅವಳನ್ನು ಕುಳ್ಳಿರಿಸಿದಳು. ಫ್ಲಾಸ್ಕಿನಿಂದ ಒಂದು ಕಪ್ಪಿಗೆ ಕಾಫಿ ಬಗ್ಗಿಸಿ ಬ್ಯಾಗಿನಲ್ಲಿದ್ದ ಪೊಟ್ಟಣದಿಂದ ಒಂದೆರಡು ಬಿಸ್ಕತ್ತುಗಳನ್ನು ಒಂದು ಬಾಳೆಹಣ್ಣಿನೊಡನೆ ತಂಗಿಯ ಕೈಗೆ ಕೊಟ್ಟಳು. “ನೋಡು ಸಾರೀ ಕೇಳುವುದು ಸಣ್ಣದಾಗುತ್ತದೆ, ನಾನು ಬಂದಾಯಿತಲ್ಲ, ಇವನ್ನು ತಿಂದು ಕಾಫಿ ಕುಡಿದು ನೀನು ಹೊರಡು. ಇನ್ನು ನನ್ನ ಜವಾಬ್ದಾರಿ” ಎಂದಳು ಸುಮನಾ.

ಕಾಫಿಯನ್ನು ನೋಡಿದ ಕ್ಷಮಾ, ಅದೂ ತನ್ನಕ್ಕನ ಗೆಳತಿಯ ಮನೆಯಿಂದ, ಅವರು ತನಗೂ ಅಕ್ಕನಿದ್ದಂತೆ ಕಷ್ಟಸುಖಗಳಿಗೆ ಹೆಗಲು ಕೊಡುತ್ತಿದ್ದ ಅವರ ವಿಶಾಲ ಹೃದಯಕ್ಕೆ ಮನದಲ್ಲಿಯೇ ಕೃತಜ್ಞತೆ ಸಲ್ಲಿಸುತ್ತಾ “ಅಕ್ಕಾ ನನಗೆ ಇವೆಲ್ಲ ಏನೂ ಬೇಡ, ತೆಗೆದಿಡು, ರಾತ್ರಿಗೆ ಬೇಕಾಗಬಹುದು. ನಾನಾಗಲೇ ಕ್ಯಾಂಟೀನಿನಿಂದ ಊಟ ತರಿಸಿಕೊಂಡು ತಿಂದಿದ್ದೇನೆ. ಈ ರಾತ್ರಿಯನ್ನು ಹೇಗೋ ಕಳೆಯೋಣ. ರಜನಿ ಅಕ್ಕ ಊರಿನಿಂದ ನಾಳೆ ಬರುತ್ತೇನೆಂದವಳು ವಿಷಯ ತಿಳಿದು ಈಗಲೇ ಹೊರಟಿದ್ದಾಳಂತೆ. ಬೆಳಗಿನ ಉಪಾಹಾರ ಮನೆಯಿಂದಲೇ ಬರಬಹುದು. ನಾಳೆಯಿಂದ ಎಲ್ಲ ಸರಿಹೋಗಬಹುದು.” ಎಂದು ಪಿಸುನುಡಿಯಲ್ಲಿ ಹೇಳಿ ಖಾಲಿಮಾಡಿದ ಕಾಫಿ ಕಪ್ಪನ್ನು ಅಲ್ಲಿಟ್ಟು “ಏನಾದರೂ ಅರ್ಜೆಂಟೆನ್ನಿಸಿದರೆ ಕಾಲ್ ಮಾಡು ತೊಗೋ ನಿನ್ನ ಫೋನ್ ಚೀಲದಲ್ಲಿ ಸಾಮಾನುಗಳ ತಳದಲ್ಲಿತ್ತು.” ಎಂದು ಹೇಳಿ ಹೊರನಡೆದಳು.

ಅವಳತ್ತ ಹೋಗುತ್ತಲೇ ಬಾಗಿಲು ಭದ್ರಪಡಿಸಿ ಸುಮನಾ ಕಪ್ಪನ್ನು ಮನೆಯಿಂದಲೆ ತಂದಿದ್ದ ವಾಷಿಂಗ್ ಪುಡಿಯಿಂದ ಉಜ್ಜಿ ತೊಳೆದಿಟ್ಟಳು. ತಟ್ಟೆಯಲ್ಲಿ ತೆಗೆದಿಟ್ಟಿದ್ದ ಬಿಸ್ಕತ್, ಬಾಳೆಹಣ್ಣನ್ನು ಅಲ್ಲಿಯೇ ಇಟ್ಟು ತಾಯಿಯ ಕಡೆ ದೃಷ್ಟಿ ಹಾಯಿಸಿದಳು.

ಅಲ್ಲಾ..ಈ ಪುಣ್ಯಾತಗಿತ್ತಿ ಇಷ್ಟೆಲ್ಲ ಸರಭರ ಸದ್ದಾದರೂ ಕಮಕ್ ಕಿಮಕ್ಕೆನ್ನದೆ ನಿದ್ರಿಸುತ್ತಿದ್ದಾರಲ್ಲಾ ! ನಮ್ಮೆಲ್ಲರ ಹುಟ್ಟಿಗೆ ಕಾರಣಕರ್ತನಾದ ಆ ಜನಕ ಇದ್ದಕ್ಕಿದ್ದಂತೆ ಅದೃಷ್ಯನಾಗಿಬಿಟ್ಟರು. ಆತನು ಇದ್ದಾನೋ ಇಲ್ಲವೋ ಪುಣ್ಯಾತ್ಮ, ನಮ್ಮನ್ನು ಇವರ ಜೊತೆ ಹೆಣಗಲು ಬಿಟ್ಟು. ಕಣ್ಣುಗಳು ತುಂಬಿ ಬಂದವು. ಸುಮನಾಳ ಅಂತರಂಗದಲ್ಲಿ ಮಡುಗಟ್ಟಿದ್ದದ್ದು ನದಿಯಂತೆ ಕಣ್ಣೀರಾಗಿ ಹರಿಯಿತು.

ಮೈಸೂರಿನ ಅಗ್ರಹಾರವೊಂದರಲ್ಲಿ ಹಿರಿಯರಿಂದ ತಮ್ಮ ಪಾಲಿಗೆ ಬಂದಿದ್ದ ಹಳೆಯ ಮನೆಯನ್ನು ಕೆಡವಿಸಿ ಆಧುನಿಕತೆಯ ಮೆರುಗನ್ನು ಇತ್ತು ಕಟ್ಟಿಸಿದ್ದರು ಸುಮನಾಳ ತಾತ ಶ್ರೀಕಂಠಶಾಸ್ತಿçಗಳು. ತಮ್ಮ ಧರ್ಮಪತ್ನಿ ಲಲಿತಮ್ಮ ಹಾಗೂ ಮೂರು ಹೆಣ್ಣುಮಕ್ಕಳೊಂದಿಗೆ ಅಲ್ಲಿಯೇ ವಾಸವಾಗಿದ್ದರು. ಅವರು ಮೈಸೂರಿನ ಮಹಾರಾಣಿ ಹೈಸ್ಕೂಲಿನಲ್ಲಿ ಸಂಸ್ಕೃತ ಉಪಾಧ್ಯಾಯರಾಗಿದ್ದರು. ಸರ್ಕಾರಿ ನೌಕರರಿಗೆ ವರ್ಗಾವಣೆಯು ಸಹಜವಾಗಿದ್ದರೂ ತಮಗಿದ್ದ ವಶೀಲಿಯ ಪ್ರಭಾವದಿಂದ ಮೈಸೂರಿನ ಸುತ್ತಮುತ್ತಲ ಊರುಗಳ ಶಾಲೆಗಳಲ್ಲಿಯೇ ಇದ್ದು ಕರ್ತವ್ಯ ನಿಭಾಯಿಸುತ್ತ ನಿವೃತ್ತರಾಗಿದ್ದರು.

ಹಿರಿಯರ ಕಾಲದಿಂದಲೂ ತಕ್ಕಮಟ್ಟಿಗೆ ಅನುಕೂಲವಂತರೆನಿಸಿದ್ದ ಮನೆಯಾಗಿತ್ತು. ಮೈಸೂರಿಗೆ ಸಮೀಪದ ಶ್ರೀರಂಗಪಟ್ಟಣದಲ್ಲಿ ತಾತನ ಕಾಲದಿಂದಲೂ ನಡೆಸಿಕೊಂಡು ಬಂದಿದ್ದ ವ್ಯಾಪಾರ ವಹಿವಾಟಕ್ಕೆ ಉಪಯೋಗವೆನಿಸಿದ್ದ ಮಳಿಗೆಗಳೂ ಇದ್ದವು. ಅದರಲ್ಲಿಯೂ ಸುಮನಾಳ ತಾತನವರಿಗೆ ಒಂದೆರಡು ಮಳಿಗೆಗಳು ಬಂದಿದ್ದವು. ಅವನ್ನು ತಮ್ಮ ಅಣ್ಣನ ಮಕ್ಕಳ ಸುಪರ್ದಿಗೆ ಬಿಟ್ಟಿದ್ದು ಅವರದನ್ನು ಚೆನ್ನಾಗಿ ನಿರ್ವಹಿಸುತ್ತ ಚಿಕ್ಕಪ್ಪನವರಿಗೆ ಏನು ನ್ಯಾಯವಾಗಿ ಕೊಡಬೇಕೋ ಅಷ್ಟು ಪಾಲನ್ನು ಸಂದಾಯ ಮಾಡುತ್ತ ಸಂಬಂಧವನ್ನು ಉಳಿಸಿಕೊಂಡು ಬಂದಿದ್ದರು.

ಇನ್ನು ಸುಮನಾಳ ತಾತನವರು ತಾವು ನಿವೃತ್ತರಾಗುವುದರೊಳಗೆ ತಮಗಿದ್ದ ಮೂರೂ ಹೆಣ್ಣುಮಕ್ಕಳಿಗೆ ತಕ್ಕಮಟ್ಟಿಗೆ ವಿದ್ಯೆಕಲಿಸಿ ತಮ್ಮ ಅಂತಸ್ಥಿಗೆ ತಕ್ಕಂತೆ ಕೊಟ್ಟುಬಿಟ್ಟು ಮದುವೆಮಾಡಿಕೊಟ್ಟಿದ್ದರು. ಅದರಲ್ಲಿ ಕಿರಿಯ ಮಗಳಾದ ಗಿರಿಜಳಿಗೆ ತಮ್ಮೊಡನೆಯೇ ಮನೆವಾಳ್ತೆಗೆ ಬಂದಿರಲು ಒಪ್ಪಿದ್ದ ಹುಡುಗನನ್ನು ತಂದು ವಿವಾಹ ಮಾಡಿದ್ದರು. ಅವರೇ ಸುಮನಾಳ ತಂದೆ ಚಲುವರಾಯ. ಹೆಸರಿಗೆ ತಕ್ಕಂತೆ ಚಲುವನೇ ಆಗಿದ್ದರು. ಇನ್ನು ತಾಯಿಯೂ ಒಂದು ಕೈ ಮೇಲೇ ಎನ್ನುವಂತಹ ಸುಂದರಿ. ಹೊರಗಿನವರಿಗೆ ಅನ್ಯೋನ್ಯತೆ ಕಂಡುಬಂದಷ್ಟೇ ಅನುರೂಪವಾದ ಜೋಡಿಯೂ ಆಗಿದ್ದರು. ಗಿರಿಜಾ ಮತ್ತು ಚಲುವರಾಯ ದಂಪತಿಗಳಿಗೆ ಸಾಲಾಗಿ ನಾಲ್ಕು ಹೆಣ್ಣುಮಕ್ಕಳಾದರು. ನಮಿತಾ, ಸುಮನಾ, ರಜನಿ ಮತ್ತು ಕ್ಷಮಾ. ಚಲುವಿನಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತಿದ್ದರು. ಆದರೂ ಸುಮನಾಳ ಅಜ್ಜಿಗೆ ತಮ್ಮ ಮಗಳು ವಂಶೋದ್ದಾರಕನಿಗಾಗಿ ಕಾಯುತ್ತಲೇ ಇದ್ದರೆ ಹೆಣ್ಣುಮಕ್ಕಳ ಸಂಖ್ಯೆ ಏರುತ್ತಲೇ ಇರಬಹುದೆಂದು ಮಗಳಿಗೆ “ಏ..ಗಿರಿಜಾ ನೀನೂ ನಮ್ಮ ಸಾಲಿಗೇ ಸೇರಿಬಿಟ್ಟೆ. ನಮಗಿಂತಲೂ ಒಂದು ಹೆಚ್ಚೇ. ಇನ್ನು ಸಾಕುಮಾಡಿ.” ಎಂದು ಅಳಿಯನನ್ನು ಕುಟುಂಬ ಯೋಜನೆಯ ಚಿಕಿತ್ಸೆಗೆ ಒಪ್ಪಿಸಿ ಮುಂದಿನ ಜನನಗಳಿಗೆ ವಿರಾಮ ಹಾಕಿಸಿಬಿಟ್ಟರು.

ಮನೆಯಲ್ಲಿ ಅಚಾರವಿಚಾರ ಮಡಿಹುಡಿಗಳು ಸಂಪ್ರದಾಯಗಳ ವಿಚಾರದಲ್ಲಿ ಅಜ್ಜಿತಾತಂದಿರಿಗಿಂತ ತಾಯಿ ಗಿರಿಜಾಳಿಗೇ ಹೆಚ್ಚಿನ ನಂಬಿಕೆ. ತನ್ನ ಮಕ್ಕಳಿಗೂ ಅವುಗಳ ಬಗ್ಗೆ ಪ್ರತಿದಿನ ಎಚ್ಚರಿಕೆ ವಹಿಸುವಂತೆ ಉಪದೇಶ ನೀಡುತ್ತಿದ್ದರು. ಮಕ್ಕಳಿಗೆ ಅದು ಕಿರಿಕಿರಿ ಎನ್ನಿಸಿದರೂ ಯಾರೂ ತಾಯಿಗೆ ಎದುರು ಆಡುತ್ತಿರಲಿಲ್ಲ. ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ನಿಭಾಯಿಸಿಕೊಂಡು ಹೋಗುತ್ತಿದ್ದರು. ಇನ್ನು ಸುಮನಾಳ ತಂದೆ ಒಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ಒಳಗಿನ ಹೊರಗಿನ ವ್ಯವಹಾರಗಳನ್ನು ಚಾಕಚಕ್ಯತೆಯಿಂದ ನಡೆಸಿಕೊಂಡು ಹೋಗುತ್ತಿದ್ದರು. ಸ್ವಲ್ಪ ಉಡಾಫೆಯ ಸ್ವಭಾವದವರು ಎನ್ನುವುದನ್ನು ಬಿಟ್ಟರೆ ಮಿಕ್ಕ ಯಾವುದೇ ಅವಗುಣಗಳೂ ಅವರಲ್ಲಿರಲಿಲ್ಲ. ಹೀಗೇ ಚಿಕ್ಕಂದಿನಿಂದಲೂ ಹಿರಿಯರ ಒಡನಾಟ, ಹೆತ್ತವರ ಪ್ರೀತಿ ವಾತ್ಸಲ್ಯ ಅವರಿಗೆ ದೊರಕಿದ್ದದ್ದು ಪೂರ್ವ ಜನ್ಮದ ಸುಕೃತವೆಂದೇ ಹೇಳಬೇಕು.

ಮಕ್ಕಳೆಲ್ಲರೂ ನೋಡುವುದಕ್ಕೆ ಸುಂದರಿಯರಷ್ಟೇ ಅಲ್ಲ, ಓದುವುದರಲ್ಲಿಯೂ ಮುಂದಿದ್ದರು. ತಾತನವರಂತೂ ಹೆಣ್ಣುಮಕ್ಕಳೆಂದು ಮೂದಲಿಸದೆ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದ್ದರು. ಹಿರಿಯವಳು ನಮಿತಾ ಎಸ್.ಎಸ್.ಎಲ್.ಸಿ. ತೇರ್ಗಡೆ ಆಗುತ್ತಿದ್ದಂತೆ ಒಳ್ಳೆಯ ಸಂಬಂಧಗಳು ಬರತೊಡಗಿದವು. ಮನೆಯಲ್ಲಿ ವಿವಾಹದ ಮಾತಕತೆಗಳು ನಡೆಯತೊಡಗಿದವು. ಹಾಗೂ ಹೀಗೂ ಇನ್ನೆರಡು ವರ್ಷ ಮುಂದೆ ಪಿ.ಯು.ಸಿ. ಮುಗಿಸಿದ್ದವಳಿಗೆ ಮುಂದಿನ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಕಂಡು ಬರದೆ ಇದ್ದದ್ದನ್ನು ನೋಡಿದ ಸುಮನಾಳ ಅಜ್ಜಿ ಮೊಮ್ಮಗಳ ಮದುವೆ ಮಾಡಿಬಿಡೋಣ ಎಂಬ ನಿರ್ಧಾರಕ್ಕೆ ಬಂದರು. ತಾತನವರೂ ಸಹಮತ ತೋರಿದರು. ಸಂಬಂಧವೊಂದು ಕುದುರಿಯೇ ಬಿಟ್ಟಿತು. ನಮಿತಾಳೂ ಪ್ರತಿರೋಧವೊಡ್ಡದೆ ತಾಳಿಗೆ ಕೊರಳೊಡ್ಡಿ ಗೃಹಿಣಿಯಾದಳು. ಅವಳು ಸಂಸಾರ ಹೂಡಿದ್ದು ಅವರ ಮೂಲ ಊರಾದ ಶ್ರೀರಂಗಪಟ್ಟಣದಲ್ಲಿಯೇ.

(ಮುಂದುವರಿಯುವುದು)

-ಬಿ.ಆರ್.ನಾಗರತ್ನ, ಮೈಸೂರು
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  : https://surahonne.com/?p=45460

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *