ದಶಮ ಸ್ಕಂದ – ಅಧ್ಯಾಯ – 11 – ಉತ್ತರಾರ್ಧ
ಜರಾಸಂಧ
ಜರಾಸಂಧ ಹತ್ತು ಸಾವಿರ ಆನೆಯ ಬಲವುಳ್ಳವ
ಅವನ ಸೆರೆಯಲಿ ಸಹಸ್ರಾರು ರಾಜರುಗಳು
ಬಂಧಿತರಾಗಿ ನರಳುತ್ತಿರೆ
ಕೃಷ್ಣನ ಬಳಿ ಬಂದು ಜರಾಸಂಧನನು ಜಯಿಸಿ
ಎಲ್ಲ ಸಹಸ್ರ ರಾಜರ ರಕ್ಷಿಸಲು
ಅವರೆಲ್ಲರ ದೂತ ವಿನಂತಿಸಿದನು
ಧರ್ಮರಾಜನು ರಾಜಸೂಯಯಾಗ ಮಾಡುವ
ಸಂದರ್ಭದಲಿ ಲೋಕದೆಲ್ಲ ರಾಜವೃಂದವನು ಜಯಿಸಿ
ಮತ್ತೆ ಶತೃಪಕ್ಷದ ಪ್ರಭಲ ಪರಾಕ್ರಮಿ ಜರಾಸಂಧನ
ಭೀಮಾರ್ಜುನರು ಮಲ್ಲಯುದ್ಧದಿ ಸೋಲಿಸಿ
ಸೆರೆಯಲ್ಲಿರ್ಪ ಸಹಸ್ರಾರು ರಾಜರುಗಳ
ಬಂಧಮುಕ್ತರನ್ನಾಗಿ ಮಾಡದೆ
ರಾಜಸೂಯಯಾಗ ಅಸಾಧ್ಯ ಎಂದರಿತ ಕೃಷ್ಣ
ದೂತನಿಗೆ, ತಾವು ಶೀಘ್ರದಲಿ ಹೊರಟು
ಜರಾಸಂಧನ ವಧಿಸಿ ಎಲ್ಲ ಬಂಧಿತರ ಬಂಧಮುಕ್ತರನ್ನಾಗಿ
ಮಾಡುವೆವಂದು ಅರುಹಿದ
ಧರ್ಮರಾಜನು ತನ್ನ ಅನುಜರಾದ ಭೀಮಾರ್ಜುನ
ನಕುಲ ಸಹದೇವರನು ಜೈತ್ರ ಯಾತ್ರೆಗೆ ಕಳುಹಿಸೆ
ದೇಶ ಕೋಶಗಳ ಗೆದ್ದು ಅಪಾರ ಧನ ಸಂಗ್ರಹಿಸಿ
ಅಗ್ರಜನಿಗೊಪ್ಪಿಸೆ, ಧರ್ಮಜ ಸಂತುಷ್ಟನಾದರೂ
ರಾಜಕುಲಾಂತಕನಂತಿದ್ದ ಜರಾಸಂಧನ ಜಯಿಸದೆ
ರಾಜಸೂಯ ಯಾಗಾರಂಭ ಮಾಡುವ ಯೋಚನೆ
ದುಸ್ತರವೆಂದರಿತು ಚಿಂತಾಕ್ರಾಂತನಾದನು
ಕೃಷ್ಣ, ಧರ್ಮರಾಜನ ಸಂತೈಸಿ
ಭೀಮಾರ್ಜುನರೊಡನೆ ತಾನೂ ಬ್ರಾಹ್ಮಣ ವೇಷದಿ ತೆರಳಿ
ಅವನ ನಿಗ್ರಹಿಸುವೆನೆಂದರುಹಿ, ಗಿರಿವ್ರಜ ಪಟ್ಟಣವ ಸೇರಿ
ಜರಾಸಂಧ ನಿತ್ಯಕರ್ಮಗಳ ಮುಗಿಸಿ
ಬ್ರಾಹ್ಮಣರಿಗೆ ಆತಿಥ್ಯ ಸಮರ್ಪಿಸುವ ಸಮಯದಿ
ಅವನ ಭೇಟಿ ಮಾಡಿ
ತಾವು ಬಂದಿಹ ಉದ್ದೇಶ ನೆರವೇರಿಸಿಕೊಡುವಂತೆ
ವಾಗ್ದಾನ ಮಾಡಲೆಂದು ಕೇಳೆ
ಜರಾಸಂಧ ಒಪ್ಪಿ ವಾಗ್ದಾನ ಮಾಡಲು
ಕೃಷ್ಣ, ತಾವು ಬ್ರಾಹ್ಮಣರಲ್ಲ
ಭೀಮಾರ್ಜುನ ಕೃಷ್ಣರೆಂದು
ಯುದ್ದಾರ್ಥಿಗಳಾಗಿ ಬಂದಿರುವವರೆಂದರುಹಲು
ಜರಾಸಂಧ ಗಹಗಹಿಸಿ ನಕ್ಕು
ಗೊಲ್ಲ ಶ್ರೀ ಕೃಷ್ಣನು ಒಮ್ಮೆ ಸೋತು ಓಡಿದವನಾದ್ದರಿಂದ
ಅರ್ಜುನನು ಇನ್ನೂ ಚಿಕ್ಕವನಾದುದರಿಂದ
ಭೀಮ ತನಗೆ ಸಮಜೋಡಿಯೆಂದು
ಅವನೊಡನೆ ಯುದ್ಧಮಾಡಲೊಪ್ಪಿದನು
ನಗರದ ಬರ್ಹಿಭಾಗ ರಣರಂಗ
ಮಹಾವೀರರಾದ ಭೀಮ ಜರಾಸಂಧರು
ಗಧಾಪಾಣಿಗಳಾಗಿ ಯುದ್ಧಾವೇಶದಿ ಕಾದಾಡೆ
ಗಧೆಗಳು ವಜ್ರಾಯುಧದ ಪರಿ
ಒಂದಕ್ಕೊಂದು ಘಟ್ಟಿಸಿ ಸಿಡಿಲಿನಂತೆ
ಭಯಂಕರ ಶಬ್ಧವ ಸೃಷ್ಟಿಸಿ
ಎದುರಾಳಿಗಳು ಒಬ್ಬರನ್ನೊಬ್ಬರು
ಘಾತಿಸುತ್ತಿರೆ
ಹದಿನೈದು ದಿನಗಳ ನಂತರದಿ
ಮಲ್ಲಯುದ್ಧದ ಪಟ್ಟುಗಳಿಂದ
ಬಂಧಿಸಿ ಕೆಡುಹಲು ಹವಣಿಸೆ
ಜರಾಸಂಧನ ಜನ್ಮವೃತ್ತಾಂತವ ತಿಳಿದ ಶ್ರೀಕೃಷ್ಣ
ಒಂದು ಕಡ್ಡಿಯನು ಹಿಡಿದು ಅದ ಎರಡಾಗಿ ಸೀಳಿ
ಭೀಮನಿಗೆ ಸೂಚನೆಯನಿತ್ತೊಡೆ
ಭೀಮ ಮರ್ಮವನರಿತು
ಜರಾಸಂಧನ ಒಂದು ಪಾದವ ಮೆಟ್ಟಿ
ಮತ್ತೊಂದು ಕಾಲ ಹಿಡಿದು
ದೇಹವ ಎರಡು ಹೋಳಾಗಿ ಸೀಳಿ
ಬಿಸುಟಿದರೂ ಎರಡು ಸೀಳಲ್ಪಟ್ಟ ತುಂಡುಗಳು
ಮತ್ತೆ ಮತ್ತೆ ಪೂರ್ಣದೇಹವಾಗಿ ರೂಪುಗೊಂಡು
ಮೇಲೇಳತೊಡಗೆ
ಕೃಷ್ಣ ಸೀಳಲ್ಪಟ್ಟ ತುಂಡುಗಳ
ತಲೆಕೆಳಗಾಗಿ ಹಾಕುವಂತೆ ಸೂಚಿಸಲು
ಭೀಮ ಅದರಂತೆ ತಲೆಕೆಳಗಾಗಿ
ದೇಹದ ತುಂಡುಗಳ ಬಿಸುಡೆ
ಅವು ಸೇರಲಾರದೆ
ಜರಾಸಂಧ ಹತನಾದನು
ತರುವಾಯ ಜರಾಸಂಧ ಪುತ್ರ
ಸಹದೇವ ಕುಮಾರನಿಗೆ
ರಾಜ್ಯವನಿತ್ತು ಸೆರೆಯಲ್ಲಿದ್ದ
ಇಪ್ಪತ್ತು ಸಾವಿರದೆಂಟುನೂರು
ರಾಜಪುತ್ರರ ಬಂಧಮುಕ್ತಗೊಳಿಸಿ
ಇಂದ್ರಪ್ರಸ್ಥ ರಾಜಧಾನಿಯ ಸೇರಿ
ಧರ್ಮರಾಜನ ರಾಜಸೂಯ ಯಾಗ
ಸುಸಂಪನ್ನವಾಗಿ ನಡೆಯುವಂತೆ
ಅನುಗ್ರಹಿಸಿದನು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45441

-ಎಂ. ಆರ್. ಆನಂದ, ಮೈಸೂರು

