ಅದೊಂದು ದಿನ ಬೆಳಿಗ್ಗೆ ಎಂದಿನಂತೆ ಕಾಲೇಜು ತಲುಪಿ, ಮುಗಿಸಲು ಬಾಕಿ ಇದ್ದ ಕೆಲಸಗಳಲ್ಲಿ ಮಗ್ನಳಾಗಿದ್ದೆ. ನನ್ನ ಮೊಬೈಲ್ ಫೋನ್ ರಿಂಗಣಿಸಿತು. ಯಾರೆಂದು ನೋಡಿದಾಗ ನಮ್ಮ ಪಕ್ಕದ ಮನೆಯವರ ಕರೆ. ಅವರೆಂದೂ ಸುಮ್ಮನೆ ಕರೆ ಮಾಡುವವರಲ್ಲ. ಮನದೊಳಗೆ ‘ಏನಾಯ್ತಪ್ಪಾ’ ಅನ್ನುವ ಆತಂಕ! “ಹಲೋ… ಹೇಳಿ” ಅಂದೆ. “ಪ್ರಭಾ, ನೀವು ಎಲ್ಲಿದ್ದೀರಿ?” ಕೇಳಿದರು. “ಕಾಲೇಜಿನಲ್ಲಿ, ಯಾಕೆ ಏನಾಯ್ತು?” ಅಂತ ಪ್ರಶ್ನಿಸಿದೆ. “ಮನೆಯಲ್ಲಿ ಯಾರಿದ್ದಾರೆ? “ಅಂದರು. “ಯಾರೂ ಇಲ್ಲ “ಅಂದೆ. “ನೀವು ಮನೆಗೆ ಬೀಗ ಹಾಕಿಲ್ವಾ?” ಅಂತ ಕೇಳಿದಾಗ “ಹೌದಾ?ಸರಿಯಾಗಿ ನೆನಪಿಗೆ ಬರುತ್ತಿಲ್ಲ “ ಅಂದೆ. “ನೀವು ಬೀಗ ಹಾಕಿಲ್ಲ” ಅಂದರು. ಒಮ್ಮೆ ಹೃದಯ ಧಸಕ್ ಅಂದಿತು. ಅಷ್ಟರಲ್ಲಿ ಫೋನ್ ಸಂಪರ್ಕ ಕಡಿತಗೊಂಡಿತು. 8 ಘಂಟೆಗೆ ಮನೆ ಬಿಟ್ಟಿದ್ದೆ. ಹೆಚ್ಚು ಕಡಿಮೆ ಒಂದು ಘಂಟೆ. ಮೈಯಿಡೀ ಭಯದಿಂದ ಕಂಪಿಸಲಾರಂಭಿಸಿತು. ಮೊದಲನೆಯ ಅವಧಿಗೆ ಪಾಠವೂ ಇದೆ. ಮನೆಗೆ ಹೋಗಿ ಬರುತ್ತೇನೆ ಅಂದರೂ ಸಾಧ್ಯವಿಲ್ಲ. ಅಯ್ಯೋ,ಏನು ಮಾಡುವುದೆಂದು ಮನದೊಳಗೆ ಆಲೋಚನೆ.
ನಾನೇ ಮತ್ತೆ ಕರೆ ಮಾಡಿದೆ. “ಪ್ರಭಾ, ಗಡಿಬಿಡಿ ಮಾಡಬೇಡಿ. ಒಮ್ಮೊಮ್ಮೆ ಹಾಗೆ ಆಗುತ್ತದೆ. ನಾನು ಏನಾದರೂ ವ್ಯವಸ್ಥೆ ಮಾಡುತ್ತೇನೆ. ನೀವು ನಿಶ್ಚಿಂತೆಯಿಂದಿರಿ” ಅಂದರು. ಆದರೂ ಮನದೊಳಗೆ ಮನೆ ಮಾಡಿದ ತಳ್ಳಂಕ, ಕಳವಳ ತಹಬಂದಿಗೆ ಬರಲು ಕೆಲ ನಿಮಿಷಗಳೇ ಹಿಡಿದವು. ಅಷ್ಟು ಕಳವಳವಾಗಲೂ ಕೂಡಾ ಒಂದು ಕಾರಣವಿತ್ತು. ನಿಕಟ ಸಂಬಂಧಿಕರಲ್ಲಿ ಹಲವು ಶುಭ ಸಮಾರಂಭಗಳ ಸಾಲೇ ಇದ್ದಿದ್ದರಿಂದ ಲಾಕರಿನಲ್ಲಿಟ್ಟ ಚಿನ್ನ ಮನೆಯಲ್ಲಿತ್ತು. ಕೆಲ ವರ್ಷಗಳ ಹಿಂದೆ ನಮ್ಮ ಮನೆಯ ಆಸುಪಾಸು ಕಳ್ಳತನಗಳು ಹಗಲು ಹೊತ್ತಿನಲ್ಲಿಯೂ ನಡೆದಿದ್ದವು. “ದೇವರೇ, ಏನೂ ಆಗಿರದಿದ್ದರೆ ಸಾಕು” ಅಂತ ಬೇಡಿಕೊಂಡೆ. ಐದು ನಿಮಿಷದ ಬಳಿಕ ಮನೆಯ ಚಿಲಕ ಹಾಕಿ ಬೇರೆಯೇ ಬೀಗವನ್ನು ಹಾಕಿದ ಪಟ ಕಳುಹಿಸಿದುದನ್ನು ನೋಡಿ ಸ್ವಲ್ಪ ಸಮಾಧಾನವಾಯಿತು. ಆದರೂ ನಾನೇ ಸ್ವತಃ ಮನೆಯೊಳಗೆ ನೋಡದಿರುವ ಕಾರಣ ಮನದೊಳಗೆ ತುಸು ಹೆದರಿಕೆ ಇತ್ತು. ಸಂಜೆ ಮನೆಗೆ ಬಂದ ಬಳಿಕ ಕಾಣದ ದೇವನಿಗೆ ಮನದಲ್ಲೇ ಮತ್ತೊಮ್ಮೆ ನಮಿಸಿದ್ದೆ!
ನಾವಿರುವ ಬಡಾವಣೆಗೆ ಬಂದು 22 ವರ್ಷಗಳೇ ಕಳೆದಿವೆ. ಹಗಲು ಹೊತ್ತಿನಲ್ಲಿ ನಮ್ಮ ಮನೆಯ ಗೇಟ್ ಸದ್ದಾದರೆ ನಮ್ಮ ನೆರೆಮನೆಯವರು ಒಮ್ಮೆ ಗಮನಿಸುವುದುಂಟು. ಆ ದಿನವೂ ಹಾಗೆಯೇ ಆಗಿದೆ. ತರಕಾರಿ ಮಾರುವ ವ್ಯಕ್ತಿಯೋರ್ವ ನಮ್ಮ ಮನೆಯ ಕರೆಗಂಟೆಯನ್ನು ಒತ್ತಿ “ಅಮ್ಮಾರೇ, ಅಮ್ಮಾರೇ ” ಅಂತ ಕರೆಯುತ್ತಿದ್ದಾಗ ನಮ್ಮ ನೆರೆಮನೆಯವರು “ಅಲ್ಲಿ ಯಾರೂ ಇಲ್ಲ” ಅಂತ ಹೇಳಿದ್ದಾರೆ. ಆಗ ಆ ವ್ಯಕ್ತಿ “ಇಲ್ಲ. ಯಾರೋ ಇದ್ದಾರೆ. ಬಾಗಿಲು ಮುಚ್ಚಿಲ್ಲ” ಅಂದಿದ್ದಾನೆ. ಆಗ ನಮ್ಮ ನೆರೆಮನೆಯವರಿಗೆ ಸಂಶಯ ಬಂದು ನನ್ನ ಮೊಬೈಲಿಗೆ ಕರೆ ಮಾಡಿದ್ದಾರೆ. ಇದು ನಡೆದ ಸಂಗತಿ.
ಮನೆಯಲ್ಲಿ ನಾನೊಬ್ಬಳೇ ಇರಬೇಕಾದ ಅನಿವಾರ್ಯತೆ ಆಗಾಗ ಎದುರಾಗುತ್ತದೆ. ಮನೆಯಲ್ಲಿ ಒಬ್ಬಳೇ ಇದ್ದು ಹೊರಗೆ/ಉದ್ಯೋಗಸ್ಥಳಕ್ಕೆ ಹೊರಡುವಾಗ ಹೋಗಬೇಕೆಂದರೆ ಎಷ್ಟೊಂದು ವಿಷಯಗಳನ್ನು ಗಮನಿಸಬೇಕಲ್ವಾ? ಮನಸ್ಸು ಆ ದಿನ ಕಾಲೇಜಿನಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ, ಪಾಠದ ಬಗ್ಗೆ ಆಲೋಚಿಸಲು ಶುರು ಮಾಡಿರುತ್ತದೆ. ಅದರ ಜೊತೆಗೆ ಗೀಸರ್ ಆಫ್ ಮಾಡಿ ಆಗಿದೆಯಾ? ಗ್ಯಾಸ್ ಒಲೆ ಆಫ್ ಮಾಡಿ ಆಗಿದೆಯಾ? ಹಿಂದಿನ ಬಾಗಿಲು ಹಾಕಿದೆಯಾ? ಎಲ್ಲಾ ಫ್ಯಾನ್, ಲೈಟ್ಸ್ ಆಫ್ ಮಾಡಿದೆಯಾ? ಅಂತ ಗಮನಿಸಿಕೊಳ್ಳಬೇಕು. ಬುತ್ತಿ, ನೀರು ಜೊತೆಗೆ ನನ್ನ ಹೆಗಲಿನ ಚೀಲ ಏರಿಸಿ ಮನೆಗೆ ಬೀಗ ಹಾಕಿದ ಬಳಿಕ ಗೇಟ್ ತೆಗೆದು ಆ ಬಳಿಕ ನನ್ನ ಚತುಷ್ಚಕ್ರ ವಾಹನ ಹೊರತೆಗೆದು ರಸ್ತೆಗಿಳಿಸಿ ಆ ಬಳಿಕ ಬದಿಗೆ ನಿಲ್ಲಿಸಿ, ಮತ್ತೆ ಪುನಃ ಗೇಟನ್ನು ಹಾಕಬೇಕು. ಆ ಬಳಿಕ ನನ್ನ ಪಯಣ ಶುರು. ಆ ದಿನ ಯಾವ ಆಲೋಚನೆ ಮನದಲ್ಲಿತ್ತೋ ಗೊತ್ತಿಲ್ಲ. ಮನೆಗೆ ಬೀಗ ಹಾಕದೆ ಹೊರಟು ಬಿಟ್ಟಿದ್ದೆ. ಈ ತರಹ ಆಯಿತು ಅಂತ ಗಂಡನ ಜೊತೆ ಹೇಳಿದ್ದು ಸುಮಾರು ಎರಡು ತಿಂಗಳ ನಂತರ!
ಈ ಘಟನೆಯಿಂದಾಗಿ ನನ್ನಲ್ಲಿ ಸಣ್ಣ ಮಟ್ಟದಲ್ಲಿ ಸಂಶಯದ ಗೀಳು ಹುಟ್ಟಿಕೊಂಡಿದ್ದಂತೂ ಸತ್ಯ. ಮನೆ ಬಿಟ್ಟ ನಂತರ ಸಂಶಯ ಬರಲು ಶುರುವಾದರೆ, ಎಷ್ಟು ನೆನಪಿಸಿಕೊಂಡರೂ ಗೀಸರ್ ಆಫ್ ಮಾಡಿದ್ದು ನೆನಪಿಗೆ ಬರುತ್ತಿರಲಿಲ್ಲ. ಸ್ನಾನಕ್ಕೆ ಹೊರಡುವ ಮೊದಲೇ ಗೀಸರ್ ಸ್ವಿಚ್ ಆಫ್ ಮಾಡಿಬಿಡುವುದು ನನ್ನ ಪದ್ಧತಿ! ಮನೆಬಾಗಿಲಿಗೆ ಬೀಗ ಹಾಕಿದ್ದೇನಾ ಇಲ್ವ, ಗೇಟ್ ಹಾಕಿದ್ದೇನಾ ಇಲ್ವ ಅಂತ ಸಂಶಯ ಬರುತ್ತಿತ್ತು. ಆ ಸಂಶಯ ಎಷ್ಟು ದಟ್ಟವಾಗಿರುತ್ತಿತ್ತೆಂದರೆ ಆ ಸಂಶಯವನ್ನು ನಿವಾರಣೆ ಮಾಡಿಕೊಳ್ಳುವ ತನಕ. ಅಂದರೆ ಕಾರನ್ನು ಪುನಃ ಮನೆ ಕಡೆ ತಿರುಗಿಸಿ ಎಲ್ಲವೂ ಸರಿಯಾಗಿದೆ ಅನ್ನುವುದನ್ನು ಖಚಿತಪಡಿಸಿಕೊಂಡು ಮತ್ತೆ ತೆರಳುತ್ತಿದ್ದೆ.
ಆದರೂ ಇನ್ನೊಂದು ದಿನ ನನ್ನನ್ನು ಕಾಡಿಯೇ ಬಿಟ್ಟಿತು ಆ ಸಂಶಯದ ಗೀಳು. ಆ ದಿನ ಕಾಲೇಜಿಗೆ ರಜೆ ಇತ್ತು. ನಮ್ಮ ಮನೆಯಿಂದ ನಮ್ಮ ಊರಿಗೆ ಸುಮಾರು 32 ಕಿಲೋಮೀಟರ್ ದೂರ. ನನ್ನ ಗಂಡ ಊರಿನಲ್ಲೇ ಇದ್ದರು. ಅವರಿಗೆ ಕರೆ ಮಾಡಿ ಸಂಜೆ ಬರುತ್ತೇನೆ ಅಂತ ಹೇಳಿದ್ದೆ. ದಾರಿ ಮಧ್ಯೆ ಸಿಗುವ ಇಬ್ಬರು ಸಹೋದ್ಯೋಗಿಗಳ ಮನೆಗೆ ಭೇಟಿ ನೀಡಿ ಊರಿಗೆ ಹೋಗಿ ರಾತ್ರೆ ಅಲ್ಲೇ ಇದ್ದು ಮರುದಿನ ಬೆಳಗ್ಗೆ ಬರುವುದು ಅನ್ನುವ ಯೋಚನೆ ಮಾಡಿ ಮನೆಯಿಂದ ಹೊರಟಿದ್ದೆ. ದಾರಿ ಮಧ್ಯದಲ್ಲಿಯೇ ಮನೆಯಲ್ಲಿ ಗೀಸರ್ ಆಫ್ ಮಾಡಿದ್ದೇನಾ ಇಲ್ವ ಅನ್ನುವ ಸಂಶಯದ ಭೂತ ಮನದೊಳಗೆ ಕುಣಿಯಲಾರಂಬಿಸಿತು. ಸಹೋದ್ಯೋಗಿಗಳ ಮನೆಗೆ ಹೋದಾಗಲೂ ಅದೇ ಯೋಚನೆ. ಊರಿಗೆ ಹೋಗುವ ಯೋಚನೆಯನ್ನು ಕೈಬಿಟ್ಟು, ಗಂಡನಿಗೆ ಕರೆ ಮಾಡಿ “ಊರಿಗೆ ಬರುವುದಿಲ್ಲ. ವಾಪಸ್ ಹೋಗುತ್ತೇನೆ” ಅಂತ ಹೇಳಿ ಮನೆಗೆ ಬಂದೆ. ಆಫ್ ಮಾಡಿದ ಗೀಸರ್ ಸ್ವಿಚ್ ತಣ್ಣಗೆ ನಗುತ್ತಿತ್ತು.
ನನ್ನನ್ನು ಲಘುವಾಗಿ ಕಾಡುತ್ತಿದ್ದ ಸಂಶಯದ ಗೀಳಿನ ಸಮಸ್ಯೆಯಿಂದ ಹೊರಬರಲು ನಾನು ಅನುಸರಿಸಿದ ವಿಧಾನವೇ ಸಂಶಯ ಹುಟ್ಟುವ ಸಂದರ್ಭ ಬರದಂತೆ ನೋಡಿಕೊಂಡದ್ದು. ನನಗೆ ನಾನೇ ಸೂಚನೆ ಕೊಟ್ಟುಕೊಳ್ಳುತ್ತಾ ಅಂದರೆ “ಮನೆಯ ಎಲ್ಲಾ ಒತ್ತುಗುಂಡಿಗಳನ್ನು (ಸ್ವಿಚ್ ಮಾರಾಯರೇ) ಆಫ್ ಮಾಡಿದೆ”, “ಮನೆಯ ಹಿಂದಿನ ಬಾಗಿಲು ಹಾಕಿದೆ”, “ಬಾಗಿಲಿಗೆ ಬೀಗ ಹಾಕಿದೆ”, “ಗೇಟ್ ಹಾಕಿದೆ” ಅಂತ ನನಗೆ ನಾನು ಹೇಳಿಕೊಳ್ಳುತ್ತಾ ನೆಮ್ಮದಿಯಿಂದ ಹೊರಡುತ್ತೇನೆ. ಕಾರು ವಾಪಸ್ ಮನೆ ಕಡೆ ತಿರುಗಿಸುವ ಪ್ರಮೇಯ ಬಂದಿಲ್ಲ!

ಡಾ. ಕೃಷ್ಣಪ್ರಭ ಎಂ, ಮಂಗಳೂರು


ನಿಮ್ಮಂತೆ ಗೀಳಿನ ಧಾಳಿಗೆ ಒಳಗಾದವರಿಲ್ಲರಿಗೂ ನೀವು ನೀಡಿದ ಪರಿಹಾರ ಇಷ್ಟವಾದೀತು. ಚಂದದ ಲೇಖನ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ. ನಾನು ಅನುಸರಿಸಿದ ಪರಿಹಾರದ ವಿಧಾನ ಇತರರಿಗೂ ಇಷ್ಟವಾದರೆ ಸಂತೋಷ
Super. Really you took time to tell a story which is happening in every job going person. Good style of narration . I am typing in english as I don’t know to type in kannada. Sorry.
ಮನೆಯ ಜವಾಬ್ದಾರಿಗಳು ಹಾಗೂ ಉದ್ಯೋಗಸ್ಠಳದಲ್ಲಿ ನಿರ್ವಹಿಸಬೇಕಾದ ಕೆಲಸಗಳು ಜಾಸ್ತಿಯಾದಾಗ ನಾವು ಮಾಡುವ ಮಾಮೂಲಿ ಕೆಲಸಗಳನ್ನು ಯಾಂತ್ರೀಕೃತವಾಗಿ ಮಾಡಿಕೊಂಡು ಹೋಗುತ್ತೇವೆ. ಬೇರೆ ಯೋಚನೆಯಲ್ಲಿ ವ್ಯಸ್ತವಾಗಿದ್ದರೆ ಸ್ವ-ಸಂದೇಹಗಳು ಮನಕ್ಕೆ ದಾಂಗುಡಿಯಿಡುತ್ತವೆ. ಪ್ರತಿಕ್ರಿಯೆಗೆ ಡನ್ಯವಾದಗಳು ಸರ್
ಹಹ್ಹಾ..ಗೀಳಿನ.. ಲೇಖನ …ಮುದಕೊಟ್ಟಿತು ಮೇಡಂ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
ಇಂತಹ ಸ್ವ-ಸಂದೇಹಗಳು ಹೆಚ್ಚಿನವರ ಪಾಡು ಆಗಿರುತ್ತದೆ ಎಂದು ನನಗೆ ಅನಿಸುತ್ತದೆ. ಮುಕ್ತವಾಗಿ ಹೇಳಿಕೊಂಡಿರುವುದು ನಿಮ್ಮ ಪ್ರಾಮಾಣಿಕತೆಯನ್ನು ಸೂಚಿಸುತ್ತದೆ! ಸ್ವಲ್ಪ ದಿನದ ಮಟ್ಟಿಗೆ ಮನೆಯಿಂದ ಹೊರಗಡೆ ಹೋಗುವುದಿದ್ದರೆ ಅಡುಗೆಮನೆಯಲ್ಲಿ ಗ್ಯಾಸ್ ಆಫ್ ಆಗಿದೆಯಾ ಎಂದು ಪುನ: ಪರೀಕ್ಷಿಸುವುದು, ನೀರಿನ ನಲ್ಲಿಗಳನ್ನು ಭದ್ರಪಡಿಸಿದ್ದೇವಾ ಎಂದು ಚೆಕ್ ಮಾಡುವುದು, ಬಾಗಿಲನ್ನು ಲಾಕ್ ಮಾಡಿದ್ದೇವಾ ಎಂದು ತಳ್ಳಿ ನೋಡುವುದು, ಪಾಸ್ ಪೋರ್ಟ್/ಟಿಕೆಟ್ ಇದೆಯಾ ಎಂದು ಪದೇ ಪದೇ ದೃಢಪಡಿಸಿಕೊಳ್ಳುವುದು – ಈ ಗೀಳು ಒಂದು ರೀತಿಯಲ್ಲಿ ಒಳ್ಳೆಯದೇ. ಆಮೇಲೆ ತೊಂದರೆಗೊಳಗಾಗುವುದರಿಂದ ಎಷ್ಟೋ ವಾಸಿ. ಚೆಂದದ ಲೇಖನ.
ಇಂತಹ ಸ್ವ-ಸಂದೇಹಗಳು ಬರಲು ಜಾಸ್ತಿ ಶುರು ಆಗಿದ್ದು ಘಟನೆಯ ಬಳಿಕ. ನಾನು ಗಮನಿಸಿದಂತೆ ಎಲ್ಲರಿಗೂ ಇಂತಹ ಅನುಭವಗಳು ಆಗಿರುತ್ತವೆ. ಸ್ವ ಸಂದೇಹ ಪರಿಹರಿಸಿಕೊಳ್ಳದಿದ್ದರೆ ಮನಸ್ಸಿಗೆ ಕಿರಿಕಿರಿ ಆಗಬಾರದು ಅಷ್ಟೇ. ನನ್ನ ಲೇಖನಕ್ಕೆ ತುಂಬಾ ಚಂದದ ಸಾಂಧರ್ಭಿಕ ಚಿತ್ರ ಹಾಕಿ ಪ್ರಕಟಿಸಿದ್ದೀರಿ. ನಿಮಗೆ ತುಂಬು ಹೃದಯದ ಧನ್ಯವಾದಗಳು.
ಇತರ ಅನುಭವಗಳು ಎಲ್ಲರಿಗೂ ಸರ್ವೆ ಸಾಮಾನ್ಯ
ಚಂದದ ಲೇಖನ
ಮೊದಲು ಇಲ್ಲದ್ದು-ಆ ಘಟನೆಯ ಬಳಿಕ ನನ್ನಲ್ಲಿ ಅಂತಹ ಸಂದೇಹಗಳು ಬರಲಾರಂಭಿಸಿದ್ದು- ಈಗ ಕಡಿಮೆಯಾಗಿದೆ
ಧನ್ಯವಾದಗಳು ಮೇಡಂ
ಇತ್ತೀಚೆಗೆ ಈ ಗೀಳು ನನ್ನನ್ನೂ ಆವರಿಸಿದೆ. ಆಪ್ತ ಲೇಖನ.
ಆಪ್ತವಾಗಿ ಪ್ರತಿಕ್ರಿಯಿಸಿದ ನಯನಾ ಅವರಿಗೆ ಧನ್ಯವಾದಗಳು
ಮೊದಲು ಇಲ್ಲದ್ದು-ಆ ಘಟನೆಯ ಬಳಿಕ ನನ್ನಲ್ಲಿ ಅಂತಹ ಸಂದೇಹಗಳು ಬರಲಾರಂಭಿಸಿದ್ದು- ಈಗ ಕಡಿಮೆಯಾಗಿದೆ
ಧನ್ಯವಾದಗಳು ಮೇಡಂ
ಸ್ವಸಂದೇಹವು ಎಲ್ಲರಿಗೂ ಎಲ್ಲಾ ಹಂತಗಳಲ್ಲಿಯೂ ಸರ್ವೇ ಸಾಮಾನ್ಯ ಅನ್ನಿಸುತ್ತದೆ. ಈಗಲೂ ಬಾಗಿಲ ಚಿಲಕಗಳನ್ನು ರಾತ್ರಿ ಅಥವಾ ಹೊರಗಡೆ ಹೋಗುವಾಗ ಪದೇ ಪದೇ ಪರಿಶೀಲಿಸುವುದು ನಡೆದೇ ಇದೆ! ಯಾಕೆ ಗೊತ್ತಾ…ಹಲವು ವರ್ಷಗಳ ಹಿಂದೆ ನಮ್ಮೂರ ಜಾತ್ರೆಗೆ ಹೋಗಿ ಬಂದು ನೋಡಿದಾಗ ಹಿಂದಿನ ಬಾಗಿಲು ನೆಮ್ಮದಿಯಾಗಿ ತೆರೆದಿತ್ತು! ಇನ್ನೊಮ್ಮೆ, ರಾತ್ರಿ ಮಲಗಿ ಬೆಳಗ್ಗೆ ಎದ್ದು ನೋಡುವಾಗ ಮುಂದಿನ ಬಾಗಿಲು ಚಿಲಕದ ಬಂಧನವಿಲ್ಲದೆ ನಗುತ್ತಿತ್ತು! ಚಂದದ ಲೇಖನ ಮೇಡಂ.