ಪ್ರತಿಯೊಬ್ಬರ ಜೀವನದಲ್ಲಿ ಕೆಲವೊಂದು ಕ್ಷಣಗಳು ಮರೆಯಲಾರದ ನೆನಪುಗಳಾಗಿ ಉಳಿಯುತ್ತವೆ. ಯಾವುದೇ ರೀತಿಯ ವೈಯಕ್ತಿಕ ಘಟನೆಗಳು ಮೊದಲ ಬಾರಿ ಸಂಭವಿಸಿದಾಗ ಅವಿಸ್ಮರಣೀಯವಾಗಿ ಇರುತ್ತವೆ. ಮೊದಲ ಉದ್ಯೋಗ, ಮದುವೆಯ ದಿನ, ಮಗುವಿನ ಜನನ, ಮೊದಲ ಭಡ್ತಿ, ಮನೆ ಖರೀದಿ ಹೀಗೆ ಹಲವಾರು ಮಧುರ ಕ್ಷಣಗಳು ಅಚ್ಚಳಿಯದೆ ಉಳಿಯುವ ಅಮೂಲ್ಯ ನೆನಪುಗಳು. ಅದೇ ರೀತಿ ಬರಹಗಾರ್ತಿಯಾಗಿ ತನ್ನದೇ ಕೃತಿಯನ್ನು ಲೋಕದ ಮುಂದೆ ಪರಿಚಯಿಸುವ ಸಂತೋಷವು ಅನನ್ಯ. ನನ್ನ ಪುಸ್ತಕ ಪ್ರಕಟವಾದಂದು ನಾನು ಅನುಭವಿಸಿದ ಸಂತೋಷ, ಹೆಮ್ಮೆ ಹಾಗೂ ಕೃತಜ್ಞತಾಭಾವ ಮರೆಯಲಾಗದ್ದು.
ಅಂದು ಮಾರ್ಚ್ ೨೯. ನನ್ನ ಚೊಚ್ಚಿಲ ಕೃತಿ ‘ ಮನಸಿನ ಪುಟಗಳ ನಡುವೆ’ ಬಿಡುಗಡೆಯ ದಿನ. ಆ ದಿನ ನನ್ನ ಜೀವನದ ಅತ್ಯಂತ ವಿಶೇಷ ದಿನವಾಗಿತ್ತು. ಅದು ಕೇವಲ ಒಂದು ಪುಸ್ತಕವಾಗಿರದೆ, ನನ್ನ ಸ್ವಂತ ಅನುಭವ ಮತ್ತು ಮನಸ್ಸಿನ ಭಾವನೆಗಳ ಪ್ರತಿಬಿಂಬವಾಗಿತ್ತು. ಆ ನೆನಪುಗಳೆಲ್ಲಾ ಪದಗಳಾಗಿ ಮೂಡಿ ಕೃತಿಯಾಗಿತ್ತು. ಪುಸ್ತಕ ಬಿಡುಗಡೆಯು ಚಿಕ್ಕದಾದ, ಚೊಕ್ಕವಾದ ಕಾರ್ಯಕ್ರಮವಾಗಿತ್ತು. ನಾನು ಆಹ್ವಾನಿಸಿದ ಎಲ್ಲಾ ಅತಿಥಿಗಳು ತಮ್ಮ ಸೌಜನ್ಯಯುತ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ಗೌರವ ತುಂಬಿದರು. ನನ್ನ ಕುಟುಂಬದವರು, ಸ್ನೇಹಿತರು ಮತ್ತು ಆತ್ಮೀಯರು ಈ ಸಂದರ್ಭದಲ್ಲಿ ನನ್ನೊಂದಿಗೆ ಇದ್ದು, ಬೆಂಬಲ ಹಾಗೂ ಪ್ರೋತ್ಸಾಹ ನೀಡಿದ್ದು, ನನಗೆ ಅಪಾರ ಸಂತೋಷವನ್ನು ತಂದು ಕೊಟ್ಟಿತ್ತು. ನನ್ನ ಕೈಯಲ್ಲಿ ನನ್ನದೇ ಪುಸ್ತಕವನ್ನು ಹಿಡಿದಾಗ, ನನ್ನ ಕನಸು ನನಸಾದ ಕ್ಷಣವಾಗಿತ್ತು.
ಈ ಪುಸ್ತಕ ಬರೆಯುವ ಪ್ರಕ್ರಿಯೆಯು ಸುಲಭವಾಗಿರಲಿಲ್ಲ. ಕೆಲವೊಮ್ಮೆ ಮನಸ್ಸಿನ ಆಳದ ಭಾವನೆಗಳನ್ನು ಪದಗಳ ರೂಪದಲ್ಲಿ ವ್ಯಕ್ತ ಪಡಿಸಲು ಕಷ್ಟವಾಗುತ್ತಿತ್ತು. ಹಲವು ಸಂದರ್ಭಗಳಲ್ಲಿ ಭಾವುಕಳಾಗಿ ಬರೆಯುವುದನ್ನು ನಿಲ್ಲಿಸಿಬಿಡುತ್ತಿದ್ದೆ. ಸರಿಯಾದ ಪದಗಳು ಸಿಕ್ಕದೇ ಇರುವಾಗ ಯಾರಿಗೆ ಕರೆ ಮಾಡುವುದು ಎಂದು ಆತಂಕ ಬೇರೆ. ಎಲ್ಲರೂ ಅವರವರ ಕೆಲಸದಲ್ಲಿ ಮಗ್ನರಾಗಿರುವಾಗ ಏನೋ ಹಿಂಜರಿಕೆ ನನ್ನನ್ನು ಕಾಡಿದರೂ, ನಂತರ ನನ್ನ ನಿರೀಕ್ಷೆಗೂ ಮೀರಿ ಸ್ನೇಹಿತರಿಂದ ಬೆಂಬಲ ದೊರೆಯಿತು. ಪುಸ್ತಕವನ್ನು ಮುದ್ರಿಸುವ ಪ್ರಕ್ರಿಯೆಯೂ ಸವಾಲಿನಿಂದ ಕೂಡಿದರೂ, ನನ್ನ ಮನಸ್ಸಿನ ನಂಬಿಕೆ ಹಾಗೂ ಬೆಂಬಲಿಸಿದವರ ಪ್ರೋತ್ಸಾಹದಿಂದ ಈ ಹಂತವನ್ನೂ ಸುಗಮವಾಗಿ ಮುಗಿಸಿದೆ. ಪುಸ್ತಕ ಮುದ್ರಣವಾದ ಮೇಲೆ ಕೆಲವೊಂದು ಲೇಖನಗಳನ್ನು ಇನ್ನಷ್ಟು ಉತ್ತಮವಾಗಿ ಬರೆಯಬೇಕಿತ್ತು, ಇನ್ನೂ ಕೆಲವು ವಿಚಾರಗಳನ್ನು ಸೇರಿಸಬಹುದಿತ್ತು ಎಂದು ಅನಿಸಿತ್ತು. ಆದರೆ ಈ ಎಲ್ಲಾ ಭಾವನೆಗಳು ನನ್ನ ಮುಂದಿನ ಬರವಣಿಗೆಯ ದಾರಿಯನ್ನು ಸಮೃದ್ಧಿಗೊಳಿಸಲು ಸಹಕಾರಿಯಾಯಿತು. ಓದುಗರಿಂದ ಸಿಕ್ಕ ಪ್ರತಿಕ್ರಿಯೆಗಳು, ಅವರು ಪುಸ್ತಕವನ್ನು ಓದಿ, ಮೆಚ್ಚಿ ಕರೆ ಮಾಡಿದಾಗ ನನ್ನ ಪ್ರಯತ್ನ ಸಾರ್ಥಕವಾಯಿತು ಎಂಬ ಭಾವನೆ ಮೂಡಿತು. ಓದುಗರು ಸಂದೇಶಗಳ ಮೂಲಕ ಪುಸ್ತಕವನ್ನು ಪ್ರಶಂಸಿಸಿದರು. ನನ್ನ ಒಬ್ಬರು ಹಿರಿಯ ಲೇಖಕ ಮಿತ್ರರು ಪುಸ್ತಕದ ಬಗ್ಗೆ ಚೆನ್ನಾಗಿ ವಿಮರ್ಶಾತ್ಮಕ ಅಭಿಪ್ರಾಯವನ್ನು ಹಂಚಿಕೊಂಡು, ಉಪಯುಕ್ತ ಸಲಹೆಗಳನ್ನೂ ನೀಡಿದರು. ನನ್ನ ಕೆಲವು ಹೊರರಾಜ್ಯದ ಬಂಧುಗಳೂ, ಸ್ನೇಹಿತರೂ ಪುಸ್ತಕವನ್ನು ಕಳುಹಿಸಲು ವಿನಂತಿ ಮಾಡಿದಾಗ ಅವರೆಲ್ಲರಿಗೂ ಪ್ರತಿಯೊಂದನ್ನು ಕಳುಹಿಸಿದ್ದೆ. ಪುಸ್ತಕವನ್ನು ಓದಿದ ಬಳಿಕ ನನಗೆ ಕರೆ ಮಾಡಿ, ನನ್ನ ಬರವಣಿಗೆಯನ್ನು ಶ್ಲಾಘಿಸುತ್ತಾ, ಕೃತಿಯನ್ನು ವಿಮರ್ಶಿಸಿ, ಪುಸ್ತಕದ ಕೊನೆಯ ಭಾಗಗಳು ತುಂಬಾ ಹೃದಯಸ್ಪರ್ಶಿಯಾಗಿದೆ ಅಲ್ಲದೇ ತಮ್ಮದೇ ಜೀವನದ ಅನುಭವಗಳನ್ನು ನೆನೆಪಿಸಿಕೊಂಡೆವು ಎಂದು ಹೇಳಿದರು. ಎಲ್ಲಾ ಪ್ರತಿಕ್ರಿಯೆಗಳು ನನ್ನಲ್ಲಿ ಧೈರ್ಯವನ್ನು ತುಂಬಿ, ಬರವಣಿಗೆಯ ಮೌಲ್ಯವನ್ನು ಅರಿಯಲು ಸಹಕಾರಿಯಾಯಿತು.
ಇಂದಿನ ಡಿಜಿಟಲ್ ಯುಗದಲ್ಲಿ ಓದುವ ಅಭ್ಯಾಸ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದರೂ, ಬರವಣಿಗೆಯ ಮೌಲ್ಯ ಎಂದಿಗೂ ಕಡಿಮೆಯಾಗಲಾರದು. ಈಗಿನ ಪೀಳಿಗೆಯ ಯುವ ಜನರು ಪುಸ್ತಕ ಓದುವುದಕ್ಕಿಂತ ಆನ್‌ಲೈನ್ ವಿಷಯಗಳತ್ತ ಹೆಚ್ಚು ಒಲವು ತೋರಿಸುತ್ತಿರುವುದು ಹೊಸ ಬರಹಗಾರರಿಗೆ ದೊಡ್ಡ ಸವಾಲಾದರೂ, ಸತ್ಯವಾದ ಭಾವನೆಗಳಿಂದ ಬರೆಯಲಾದ ಉತ್ತಮ ಪುಸ್ತಕವೊಂದು ಯಾವಾಗಲೂ ಓದುಗರ ಹೃದಯವನ್ನು ತಟ್ಟುತ್ತದೆ. ಬರವಣಿಗೆಯ ಪಯಣವು ಒಂದು ನಿರಂತರ ಕಲಿಕೆಯ ಪ್ರಕ್ರಿಯೆ. ಪ್ರತಿಯೊಂದು ಕೃತಿಯು ಒಂದು ಹೊಸ ಪಾಠ.
ಪುಸ್ತಕ ಬಿಡುಗಡೆ ಎಂಬುದು ಒಂದು ಅಂತ್ಯವಲ್ಲ. ಬರಹಗಾರನ ಮುಂದಿನ ಪಯಣಕ್ಕೆ ಬಲ ಹಾಗೂ ಆತ್ಮವಿಶ್ವಾಸವನ್ನು ನೀಡುವ ಈ ಪ್ರಕ್ರಿಯೆಯು, ಒಂದು ಹೊಸ ಆರಂಭವೇ ಸರಿ. ಇದು ನನ್ನ ಕೇವಲ ಸಾಧನೆಯಾಗಿರದೆ, ಓದುಗರಿಗೆ ಉತ್ತಮ ಬರಹಗಳನ್ನು ನೀಡುವ ಹೊಣೆಗಾರಿಕೆಯೂ ಹೌದು. ಓದುಗರಿಂದ ಬಂದ ಪ್ರತಿಕ್ರಿಯೆಗಳು ನನ್ನನ್ನು ಇನ್ನಷ್ಟು ಬರೆಯಲು ಪೇರೇಪಿಸಿದೆ. ಬರವಣಿಗೆಯ ಪಯಣವು ನಮ್ಮ ಭಾವನೆಗಳ, ಅನುಭವಗಳ ಮತ್ತು ಆತ್ಮಾವಲೋಕನದ ಒಂದು ಸಂಗಮವೆಂದೇ ನನ್ನ ಅನಿಸಿಕೆ. ನನ್ನ ಬರಹದ ಪಯಣ ಇನ್ನೂ ಮುಂದುವರಿಯುತ್ತಿದೆ, ಹೊಸ ಕನಸುಗಳೊಂದಿಗೆ, ಹೊಸ ಉತ್ಸಾಹದೊಂದಿಗೆ.

ಶೈಲಾರಾಣಿ ಬಿ , ಮಂಗಳೂರು

