ಬೆಳಕು-ಬಳ್ಳಿ

ಮೌನದ ಮಳಿಗೆ

Share Button

ಬೆಳಗಿನಿಂದಲೂ ದಣಿವಿಲ್ಲದ
ಗದ್ದಲಗಳ ನಡುವೆ,
ಕಿವಿಗಡಚಿಕ್ಕುವಂತೆ ಅರ್ಥವಿಲ್ಲದ
ಆಕ್ರಂದನಗಳ ಪ್ರವಾಹ!

ಪ್ರತಿ ಚೌಕದಲ್ಲೂ ಮುಗಿಯದ ಪಂಚಾಯ್ತಿಗಳೇ,
ಪ್ರತಿ ಗಂಟಲಿನಲ್ಲೂ ಗೆಲ್ಲಲೇಬೇಕೆಂಬ ಹಠವೇ,
ಯಾರಿಗೆ ಅವರೇ ಗೆಲ್ಲಬೇಕೆಂಬ ಆತುರದಲ್ಲಿ
ನಿತ್ಯವೂ ಎದ್ದೇಳುವ ವಾದಗಳ ಅಬ್ಬರದೊಂದಿಗೆ
ಡಪ್ಪಿನಂತಾದ ಈ ಜಗತ್ತಿನಲ್ಲಿ
ಬೇತಾಳನ ಕಿರುಚಾಟಕ್ಕೆ ಬೆದರಿ ಬಿಟ್ಟಿದ್ದೀರಾ?

ತೂರಿಬಂದ ಮಾತುಗಳೇನಾದರೂ ಗಾಜಿನ ಚೂರುಗಳಾಗಿ
ಹೃದಯವನ್ನು ಸೀಳುತ್ತಿದ್ದವೆಯೇ?
ಸಾವಿರಾರು ‘ಇಜಂಗಳ’ ಭಾರವನ್ನು ಹೆಗಲ ಮೇಲೆ ಹೊತ್ತು
ದಿಕ್ಕುತೋಚದೆ, ಕಿರುಚಾಟಗಳ ನಡುವೆ
ನಿದ್ದೆಗೂ ದಾರಿ ಕಾಣದೆ…
ನಲುಗಿ ಹೋಗಿದ್ದೀರಾ?

ಹಾಗಿದ್ದರೆ ಬನ್ನಿ..
ನಾನು ‘ಮೌನ’ವನ್ನು ಮಾರುವ ಅಂಗಡಿ ತೆರೆದಿದ್ದೇನೆ..
ಬಚ್ಚಿಟ್ಟ ಹಿಡಿಗಾತ್ರದ ಕನಸುಗಳನ್ನು ಕೊಡಿ ಸಾಕು,
ಅಂಜಲಿ ತುಂಬಾ ಗಾಢವಾದ ನಿಶ್ಶಬ್ದವನ್ನು ನೀಡುತ್ತೇನೆ.
ಎಂದಿಗೂ ನಿಲ್ಲದ ಅಲೆಗಳ ಅಬ್ಬರದ ಹಿಂದೆ
ಅಡಗಿರುವ ನಿಶ್ಚಲತೆಯನ್ನು,
ರಾತ್ರಿವೇಳೆ ಎಲೆಗಳು ಉದುರಿಸಿದ ಮೌನವನ್ನೆಲ್ಲಾ
ಆಯ್ದು ಆಯ್ದು ರಾಶಿ ಹಾಕಿದ್ದೇನೆ.
ಆಕಾಶವನ್ನು ಬಗ್ಗಿಸಿ ನಕ್ಷತ್ರಗಳ ನಡುವಿನ ಶೂನ್ಯವನ್ನು
ಜರಡಿ ಹಿಡಿದು, ಕೇರಿ,
ಶ್ರೇಷ್ಠವಾದ, ಉದುರಿದ ಪಾರಿಜಾತಗಳಂತಹ
‘ಮೌನಗೀತೆಯನ್ನು’ ನಿಮಗಾಗಿ ಸಿದ್ಧಪಡಿಸಿದ್ದೇನೆ.

ಎಲ್ಲವನ್ನೂ ಕೊಟ್ಟುಬಿಡುತ್ತೇನೆ.
ಒಂದೇ ಒಂದು ಬಾರಿ ಮುಖದ ಮೇಲೆ ಪೂರ್ತಿಯಾಗಿ
ಅದನ್ನು ಬಳಿದುಕೊಂಡು ಆಸ್ವಾದಿಸಿ…
ಬೆಳದಿಂಗಳ ರಾತ್ರಿಗಳಲ್ಲಿ ಎಷ್ಟು ಹಾಲುಹಾದಿಗಳಿವೆಯೋ
ಸ್ಪಷ್ಟವಾಗಿ ಎಣಿಸಬಹುದು.
ಸಮುದ್ರದ ಅಲೆಗಳ ಮೇಲೆ ನೆನಪುಗಳೊಂದಿಗೆ
ಓಟದ ಪಂದ್ಯವಾಡಬಹುದು.
ಮಂಜಿನ ನಡುವೆ ಬೆಂಕಿ ಕೊಳ್ಳಿ ಬೆಚ್ಚನೆಯ ಅನುಭವವನ್ನು
ಹೃದಯದಲ್ಲಿ ಭದ್ರವಾಗಿ ತುಂಬಿಕೊಳ್ಳಬಹುದು.
ಮುಂಜಾವಿನ ಎಳೆಬಿಸಿಲಿನ ಕಾಂತಿಯನ್ನು ಹಿಡಿದಿಡಬಹುದು.
ಸಂಧ್ಯಾ ಸಮಯದಲ್ಲಿ ಅಂತರಂಗದ ರಾಗಗಳನ್ನು
ವಿಲಾಸವಾಗಿ ಹಾಡಬಹುದು.

ಆದರೆ ಒಂದು ಸಣ್ಣ ಶರತ್ತು..
ಇಲ್ಲಿಯವರೆಗೆ ಹೆಗಲಿನಿಂದ ಇಳಿಯಲಾರೆ ಎಂದು ಹಠ ಹಿಡಿಯುತ್ತಿರುವ
ಅನಗತ್ಯ ಆಸೆಗಳನ್ನು ಮತ್ತು ನಿರಾಶೆಗಳನ್ನು,
ಭಾರವಾಗಿ ಮೈಗೆ ಅಂಟಿಕೊಂಡಿರುವ ಬೇಸರದ ಪದರಗಳನ್ನು,
ಕಾಡ್ಗಿಚ್ಚಿನಂತೆ ಆವರಿಸುವ ದುಃಖವನ್ನು
ಅಂಗಡಿಯ ಹೊಸ್ತಿಲಲ್ಲೇ ಬಿಟ್ಟು ಬರಬೇಕು.

ಮೂಟೆಯನ್ನು ಇಳಿಸಿದ ಕೂಡಲೇ ಸಿಗುವುದು ವಿಶ್ರಾಂತಿ ಮಾತ್ರವೇ,
ಆ ಶೂನ್ಯವನ್ನು ಆನಂದದಿಂದ ತುಂಬುವ ಅಮೃತವೇ ಈ ಮೌನ.
ಬೇರೆ ಯಾವ ಆತಂಕವೂ ಸೋಕದಂತೆ ಕಾಯುವ ಅದೃಶ್ಯ ಕವಚವಿದು.
ಕೆಲವು ಕನಸುಗಳ ಬೆಲೆ ತೆರಬೇಕಾದರೂ ಸರಿಯೇ..
ಸ್ವಲ್ಪವಾದರೂ ನಿಶ್ಶಬ್ದವನ್ನು
ಹೃದಯದ ಗೂಡಿನಲ್ಲಿ ಭದ್ರಪಡಿಸಿಕೊಳ್ಳಲೇಬೇಕು.
ಸರಿ ಎಂದರೆ ಮಾತ್ರ ಈ ಪ್ರಶಾಂತತೆಯನ್ನು
ನಿಮ್ಮ ಮೇಲೆ ಮಧುರವಾಗಿ ಸುರಿಯುತ್ತೇನೆ. ಏನಂತೀರಿ?

ತೆಲುಗು ಮೂಲ : ಶ್ರೀನು ಪೈಂಡ್ಲ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *