ಪೌರಾಣಿಕ ಕತೆ

ಕಾವ್ಯ ಭಾಗವತ 90 : ಕಾಲಯವ

Share Button

ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ – 7
ಕಾಲಯವ

ತನಗೆ ಸಮನರಾದ ವೀರರಿಲ್ಲರೆಂಬ ಕೊಬ್ಬಿನಲಿ
ಕಾಲಯವ
ಶ್ರೀಕೃಷ್ಣ ಬಲರಾಮರ ಪರಾಕ್ರಮವ ಕೇಳಿ
ಮೂರುಕೋಟಿ ಮ್ಲೇಚ್ಛಸೇನೆಯೊಡನೆ
ಮಧುರೆಯ ಮೇಲೆ ದಂಡೆತ್ತಿ ಬರಲು
ಮತ್ತದೇ ಸಮಯದಿ ಜರಾಸಂಧ
ಮಗದೊಮ್ಮೆ ದಂಡೆತ್ತಿ ಬರುವ
ವಾರ್ತೆ ಕೇಳಿದ ಕೃಷ್ಣ
ಉಭಯ ಸೈನ್ಯಗಳ ಮಧ್ಯೆ
ಸಿಲುಕುವ ನಗರವಾಸಿಗಳ
ಕಷ್ಟನಷ್ಟವ ತಪ್ಪಿಸಲು

ವಿಶ್ವಕರ್ಮನಿಗೆ ಸಮುದ್ರಮಧ್ಯದಲಿ
ಹನ್ನೆರಡು ಯೋಜನೆ ವಿಸ್ತಾರದ
ಸರ್ವ ಸಂಪತ್ಪರಿಪೂರ್ಣವಾದ
ನಗರಿಯ ನಿರ್ಮಿಸಲು ತಿಳಿಸೆ
ವಿಶ್ವಕರ್ಮ ಶೀಘ್ರಕಾಲದೆ
ನಿರ್ಮಿತ ದ್ವಾರಕಾನಗರಿಯು
ಇಂದ್ರನ ಅಮರಾವತಿಯಂತೆ ಶೋಭಿಸೆ
ಮಹೇಂದ್ರನು ಇಷ್ಟಾರ್ಥಪ್ರದ
ಪರಿಜಾತ ಕಲ್ಪವೃಕ್ಷವ ಕಳಿಸೆ
ಕೃಷ್ಣ ಯೋಗಪ್ರಭಾವದಿಂ
ಮಧುರೆಯ ಜನರೆಲ್ಲರನು
ದ್ವಾರಕಾನಗರಿಗೆ ಸಾಗಿಸೆ

ಕೃಷ್ಣ ಸಾನಿಧ್ಯದ ದ್ವಾರಕಾನಗರ ವಾಸಿಗಳಿಗೆ
ಹಸಿವು ಬಾಯಾರಿಕೆ ಬಳಲಿಕೆ ರೋಗ ದುಃಖ
ಜರಾಮರಣಾದಿ ಬಾಧೆಗಳು ಕಾಣದಾಗೆ
ಸಕಲ ಸೌಖ್ಯವ ಅನುಭವಿಸಿ ಸಂತಸದಿಂದಿದ್ದರು

ಮಧುರೆಯ ನಿವಾಸಿಗಳೆಲ್ಲ
ಸುರಕ್ಷಿತರಾಗಿ ದ್ವಾರಕೆಯಲ್ಲಿರೆ
ಕೃಷ್ಣಬಲರಾಮರು ಕಾಲಯವನ ಎದುರಿಸಲು
ಆಯುಧವಿಹೀನರಾಗಿ ಹೊರಟರು
ನಿರಾಯುಧನಾಗಿ ಬರುತಿರ್ಪ ಕೃಷ್ಣನ ನೋಡಿ
ಕಾಲಯವ ನಿರಾಯುಧನಾಗಿಯೇ
ಕೃಷ್ಣನ ಹಿಡಿಯಲು ಓಡಿಬರಲು
ಕೃಷ್ಣನು ಅವ ಸಮೀಪಕ್ಕೆ ಬಂದೊಡನೆ
ಹಿಂದಿರುಗಿ ಓಡಲು
ಕೃಷ್ಣ, ತನಗೆ ಭಯಪಟ್ಟು ಓಡಿದನೆಂಬ ಭ್ರಮೆಯಲಿ
ಕಾಲಯವ ಅವನ ಹಿಂಬಾಲಿಸೆ

ಕೃಷ್ಣ ಪರ್ವತದ ಗುಹೆಯ ಬಳಿಗೈದು ಒಳಹೊಕ್ಕನು
ಗಾಢಾಂದಕಾರದ ಗುಹೆಯಲ್ಲಿ ಕಾಲಯವ ನಡೆಯುತ್ತಾ
ಯಾವನೋ ಓರ್ವ ಪುರುಷ ಮಲಗಿರುವುದ ಕಂಡು
ಅವನು ಕೃಷ್ಣನೆಂದು ಭ್ರಮಿಸಿ ಜೋರಾಗಿ ಕಾಲಿನಿಂದೊದೆಯೆ
ಬಹುಕಾಲದಿ ಮಲಗಿದ್ದ ಪುರುಷ ಮೇಲೆಕ್ಕೆದ್ದು ಕೋಪದಿ
ನಾಲ್ಕೂ ಕಡೆಯಲಿ ನೋಡೆ
ಆ ಪುರುಷ ದೃಷ್ಟಿ ಯವನನ ಮೇಲೆ ಬೀಳೆ
ಒಡನೆಯೇ ಕಾಲಯವನ ದೇಹದಿ ಅಗ್ನಿಜ್ವಾಜೆ ಉದ್ಭವಿಸಿ
ಕ್ಷಣಮಾತ್ರದಿ ಭಸ್ಮರಾಶಿಯಾಗಿ ಬಿದ್ದ ಕಾಲಯವ

ಗುಹೆಯಲಿ ವರುಷಗಳಿಂದ ನಿದ್ದೆಯಲಿ ಮಲಗಿದ್ದ ಪುರುಷ
ಇಕ್ಷಾಕು ವಂಶೋದ್ಭವ ಮುಚುಕುಂದ ರಾಜ
ಇಂದ್ರಾದಿ ದೇವತೆಗಳು ದೈತ್ಯದಾನವರಿಗೆ ಭಯಪಟ್ಟು
ಮುಚುಕುಂದರಾಜನ ಬೆಂಬಲದಿ ದೈತ್ಯ ದಾನವರ ಬಾಧೆಯ
ನೀಗಿಸಲ್ಪಡಲು ಸಂತೋಷದಿ
ಅವನಿಚ್ಚಿಸಿದ ಸುಖನಿದ್ರೆಯ ವರನೀಡಿರಲು
ಅವನ ನಿದ್ದೆಗೆ ಭಂಗಪಡಿಸಿದ ಕಾಲಯವನ
ಭಸ್ಮಗೊಳಿಸಿದ ನಂತರದಿ
ಕೃಷ್ಣನಿಚ್ಛೆಯಲಿ ಗುಹೆಯ ಬಿಟ್ಟು ಉತ್ತರ ದಿಕ್ಕಿನಲಿ
ನರನಾರಾಯಣಾಶ್ರಮವ ಸೇರಿದನು ಮುಚುಕುಂದ ರಾಜ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
 
https://surahonne.com/?p=44960

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *