ಲಹರಿ

ಮಡದಿ ಇಲ್ಲದ ಮನೆ !

Share Button

(ಒಂದು ಸ್ವಕಥನ)
ಮಡದಿ ಇಲ್ಲದ ಮನೆ; ಅದು ಮನೆಯಲ್ಲ, ಮಸಣ! ಅದರಲೂ ನನ್ನ ಪಾಲಿಗೆ. ‘ಸದ್ಯ ಮನೆಯಿಂದಾಚೆ ಹೆಂಡತಿಯಾದವಳು ಹೊರಗೆ ಹೋದರೆ ಸಾಕು, ಮನೆಯಲ್ಲಿ ನಿರುಮ್ಮಳವಾಗಿರಬಹುದಪ್ಪ; ಪಾರ್ಟಿ ಮಾಡಬಹುದಪ್ಪ’ ಎನ್ನುವ ಜಾಯಮಾನದವರು ನನ್ನ ಮಾತನ್ನು ಒಪ್ಪಲಾರರು ಎಂಬುದು ಗೊತ್ತಿದೆ. ಅದು ಅವರ ಕರ್ಮ; ಬಾಳಸಂಗಾತಿಯೇ ಬದುಕಿನ ಸಕಲವೂ ಎಂಬುದು ನನ್ನಂಥವರ ಧರ್ಮ! ಇರಲಿ. ಎಲ್ಲೋ ಒಂದರ್ಧ ದಿನ ಊರಿಗೋ ಕೇರಿಗೋ ಶಾಪಿಂಗಿಗೋ ಹೋದರೆ ನಾನು ತಡೆದುಕೊಳ್ಳುವೆ. ಅಷ್ಟೇಕೆ, ನನ್ನಾಕೆಯು ತವರುಮನೆಗೆ ಹೋದರೂ ಸುಮ್ಮನಾಗುವೆ. ಏಕೆಂದರೆ ನನ್ನಂತೆಯೇ ಅವಳೂ. ಪರಸ್ಪರ ಬಿಟ್ಟು ಇರಲಾರೆವು ಮತ್ತು ಬದುಕಲಾರೆವು! ಎರಡು ದಿವಸದಲ್ಲೇ ನನ್ನ ಕುರಿತು ಚಿಂತಿತಳಾಗಿ ನಾನಿರುವ ಬಳಿಗೆ ಓಡಿ ಬಂದು ಬಿಡುತ್ತಾಳೆ. ಸದಾ ನನ್ನ ಆರೋಗ್ಯದ ಚಿಂತೆ; ಮನೆಯನ್ನು ಚೊಕ್ಕಟವಾಗಿಡಬೇಕೆಂಬ ಚಿಂತೆ. ಇಷ್ಟಕೂ ಒಂದೆರಡು ದಿವಸಗಳ ಮಟ್ಟಿಗೆ ಹೋದರೂ ನನಗೆ ತೊಂದರೆಯಾಗಬಾರದೆಂದು ಸಕಲೆಂಟು ಸಿದ್ಧತೆಗಳನ್ನು ಮಾಡಿಟ್ಟು ಹೋಗಿರುತ್ತಾಳೆ. ಉಪ್ಪಿಟ್ಟು ರವೆ ಹುರಿದು ಅದಕೆ ಎಲ್ಲವನೂ ಹಾಕಿ ‘ರೆಡಿ ಟು ಈಟ್’ ಹಂತಕ್ಕೆ ತಂದಿಡುವುದು. ಉಪ್ಪಿಟ್ಟು ಮಾಡುವುದೇ ಸುಲಭ; ಅದರಲ್ಲೂ ನನ್ನಾಕೆಯು ಹೀಗೆ ಅರ್ಧ ರೆಡಿ ಮಾಡಿರುತ್ತಾಳೆ. ನೀರು ಬಿಸಿ ಮಾಡಿ, ಈರುಳ್ಳಿ, ಟೊಮ್ಯಾಟೊ ಒಗ್ಗರಣೆ ಹಾಕಿ, ಹುರಿದಿಟ್ಟ ರವೆಯನ್ನು ಸುರುವಿದರೆ ಉಪ್ಪಿಟ್ಟು ಸಿದ್ಧ. ಇನ್ನು ಕೈಯಾರೆ ಸಿದ್ಧಪಡಿಸಿದ ಸಾರಿನ ಪುಡಿ, ಹುಳಿಪುಡಿ ಮತ್ತು ಪಲ್ಯದ ಪುಡಿಗಳು ನಮ್ಮ ಮನೆಯಲ್ಲಿ ಯಾವಾಗಲೂ ಸ್ಟಾಕು. ಇದು ಸಾಲದೆಂಬಂತೆ, ರೆಡಿಮೇಡ್ ರಸಂ ಪೌಡರು, ಎಳ್ಳುಪುಡಿ ಚಿತ್ರಾನ್ನದ ಗೊಜ್ಜು, ಕಾಯಿಸಾಸುವೆ ಗೊಜ್ಜು, ಹುಣಸೇಹಣ್ಣಿನ ಪೇಸ್ಟು, ಒಣಕೊಬ್ಬರಿಯನ್ನು ತುರಿದು ಡಬ್ಬಿಗೆ ಹಾಕಿಡುವುದು, ನಾನು ಬಳಸುವ ತರಕಾರಿಗಳು, ಜೀರಿಗೆ ಮತ್ತು ಮೆಣಸಿನ ಪುಡಿಯ ಮಿಶ್ರಣ, ಒಂದೆರಡು ದಿವಸಗಳಿಗಾಗುವಮಟ್ಟಿಗೆ ಒಗ್ಗರಣೆ, ದೋಸೆ ಹಿಟ್ಟು ರುಬ್ಬಿಡುವುದು, ರವೆದೋಸೆ ಮಿಶ್ರಣ, ಚಪಾತಿ ಮಾಡಿಕೊಂಡರೆ ಅನುಕೂಲವಾಗಲೆಂದು ಪ್ರೆಸ್ಸಿಂಗ್ ಮಣೆ, ಅಂಟದೇ ಇರಲೆಂದು ಬಾಳೆನಾರಿನ ಶೀಟು, ದೋಸೆಯ ತವ ಬೇರೆ; ಚಪಾತಿ, ರೊಟ್ಟಿ ಮಾಡಿಕೊಳ್ಳುವುದಾದರೆ ಬೇರೆ ಎಂದು ಅದರ ಗುರುತನ್ನು ತಿಳಿಸುವುದು. ಒಗ್ಗರಣೆಗೆ ಸುಲಭವಾಗಲೆಂದು ಕಡಲೇಬೇಳೆ, ಉದ್ದಿನಬೇಳೆ ಮತ್ತು ಸಾಸುವೆಗಳನ್ನು ಹದವಾಗಿ ಮಿಶ್ರಣ ಮಾಡಿಟ್ಟ ಡಬ್ಬಿ, ಒಣಮೆಣಸಿನಕಾಯಿಯ ತೊಟ್ಟು ಮುರಿದು, ಅದನ್ನು ಎರಡು ಭಾಗ ಮಾಡಿಟ್ಟ ಡಬ್ಬಿ, ಕೈಗೆ ಸಿಗುವಂತೆ, ಗಟ್ಟಿ ಅವಲಕ್ಕಿ, ಬೆಲ್ಲ, ಉಪ್ಪು, ಇಂಗು. ತಕ್ಷಣಕೆ ಗೊತ್ತಾಗಲೆಂದು ಗೋದಿಹಿಟ್ಟು, ಅಕ್ಕಿಹಿಟ್ಟು ಮತ್ತು ರಾಗಿಹಿಟ್ಟು ಎಂದು ಲೇಬಲ್ ಅಂಟಿಸಿಡುವುದು. ಇಷ್ಟು ಮಾತ್ರವಲ್ಲದೇ ನಾನು ಬಳಸುವ ಪಾತ್ರೆಗಳು, ಕುಕ್ಕರು, ಬಾಣಲೆ ಎಲ್ಲವನ್ನೂ ಚೊಕ್ಕಟವಾಗಿ ಜೋಡಿಸಿಟ್ಟು ಅಡುಗೆಮನೆಯನ್ನು ‘ನನಗೆ ಹೇಗೆ ಬೇಕೋ ಹಾಗೆ ಅಣಿ ಮಾಡಿಟ್ಟು’ ಊರಿಗೆ ಹೋಗುವವಳು. ಊರಿಗೆ ಹೋದರೂ ಅಲ್ಲೇ ಮೈ ಮರೆತು ಇರದೇ ಸಮಯಕ್ಕೆ ಸರಿಯಾಗಿ ಫೋನು ಮಾಡಿ ಆರೋಗ್ಯ ವಿಚಾರಿಸಿ, ನಾನು ತೆಗೆದುಕೊಳ್ಳುವ ಮಾತ್ರೆಗಳನ್ನು ನೆನಪಿಸಿ, ‘ಹುಷಾರಾಗಿದೀರಿ ತಾನೇ?’ ಎಂದು ಆತಂಕಿತಳಾಗುವವಳು. ಬಟ್ಟೆಗಳನ್ನು ಐರನ್ನು ಮಾಡಿಸಿಟ್ಟು ಹೋಗುವವಳು. ಮನೆಯ ಕೆಲಸ ಮಾಡುವಾಕೆಗೆ ಯಾವಾಗ ಬರಬೇಕೆಂದು ಸೂಚನೆಗಳನ್ನು ತಪ್ಪದೇ ಕೊಡುವಳು. ಬೆಳಗಿನ ವೇಳೆಯಲ್ಲಿ ನಾನು ತಿಂಡಿ, ಅಡುಗೆಗಳ ತಯಾರಿಯಲ್ಲಿರುತ್ತೇನೆಂದೂ ಅದರಿಂದ ತೊಂದರೆಯಾಗಬಾರದೆಂದೂ ಮನೆಯ ಬೀಗದ ಕೀಲಿಕೈಗಳನ್ನು ಎದುರು ಮನೆಗೆ ಕೊಟ್ಟು, ನಾನು ಕಾಲೇಜಿಗೆ ಹೋದ ಮೇಲೆಯೇ ಆಕೆ ಬಂದು ಮನೆಯ ಕಸ ತೊಡೆದು, ಒರೆಸಿ ಹೋಗುವ ಏರ್ಪಾಡು ಮಾಡಿಟ್ಟು, ಜೊತೆಗೆ ‘ಅವರ ಆರೋಗ್ಯವನ್ನು ವಿಚಾರಿಸುತ್ತಿರಿ’ ಎಂದೂ ಮನವಿ ಸಲ್ಲಿಸಿ ಹೋಗುವವಳು. ಊರು ಕೇರಿಗೆ ಪ್ರವಾಸಕ್ಕೆ ಹೋಗುವ ಆಕೆಯ ಸಿದ್ಧತೆಯಲ್ಲಿ ಈ ಎಲ್ಲ ನನ್ನ ಬಗೆಗಿನ ಕಾಳಜಿಯದೇ ಸಿಂಹಪಾಲು! ಅವಳು ಹೋಗುವ ಸಂಭ್ರಮಕಿಂತ ‘ನನ್ನ ಬಿಟ್ಟು ಹೋಗಬೇಕಲ್ಲ’ ಎಂಬ ಸಂಕಟವೇ ಅವಳಿಗೂ!! ಅಕ್ಕಿ ಮೇಲಾಸೆ; ನೆಂಟರ ಮೇಲೆ ಪ್ರೀತಿ ಎಂಬಂತೆ ಹೋಗಲೂಬೇಕು; ಇಲ್ಲಿ ಇರಲೂಬೇಕು ಎಂಬ ಡೋಲಾಯಮಾನ. ಎಲ್ಲಿಗೆ ಹೋದರೂ ಅವಳ ಮನಸೆಲ್ಲಾ ಇಲ್ಲೇ; ನಾನಿರುವಲ್ಲೇ!

ಈಗ ಹೇಳಿ, ಇಷ್ಟು ಪ್ರೀತಿಸುವ, ಕಾಳಜಿ ಮಾಡುವ, ತನ್ನ ಜೀವದ ಒಂದಂಗವೆಂದೇ ಭಾವಿಸುವ ಬದುಕಿನ ಸರ್ವಸ್ವವೂ ಈತನೇ ಎನ್ನುವ ಮಡದಿಯು ಮನೆಯಲ್ಲಿ ಇಲ್ಲವೆಂದರೆ ಅದು ಸ್ಮಶಾನವಾಗದೇ ಉದ್ಯಾನವನವಾದೀತೇ? ಗಂಡನು ಹೊರಗೆ ಹೋದರೆ ಹೆಂಡತಿಯಾದವಳು ಅಷ್ಟುದ್ದದ ಪಟ್ಟಿಯನ್ನು ಕೊಟ್ಟು ‘ಬರುವಾಗ ಇವೆಲ್ಲವನ್ನೂ ತಪ್ಪದೇ ತನ್ನಿ’ ಎನ್ನುತ್ತಾಳಂತೆ. ಅದೇ ಹೆಂಡತಿಯು ಹೊರಗೆ ಹೋಗುವಾಗ ಗಂಡನಾದವನು ‘ಸದ್ಯ, ನೀನು ಮನೆಯಿಂದಾಚೆ ಹೋದರೆ ಸಾಕು’ ಎನ್ನುವನಂತೆ. ಇಂಥ ಬದುಕು ನನ್ನದಲ್ಲ ಮತ್ತು ಪುಣ್ಯಕ್ಕೆ ನನ್ನದಾಗಲಿಲ್ಲ! ನಾನಂತೂ ಸಂನ್ಯಾಸಿ, ಎಲ್ಲಿಗೂ ಹೋಗುವವನಲ್ಲ, ಇದ್ದ ಜಾಗವನ್ನೇ ಸ್ವರ್ಗ ಮಾಡಿಕೊಂಡು (ಹಾಗೆ ಸ್ವರ್ಗ ಮಾಡಿಕೊಳ್ಳುವುದು ಹೇಗೆಂದು ಗೊತ್ತಿರುವುದರಿಂದ) ಊಟ, ನಿದ್ದೆ, ಓದು, ಬರೆಹ, ಉದ್ಯೋಗ ಅದರ ಸಂಬಂಧದ ಕಾಷ್ಠ ವ್ಯಸನಗಳ ಜೊತೆಗೆ ತವರುಮನೆಯ ಉಡುಗೊರೆಯಾಗಿ ಬಂದ ಅರೆತಲೆಶೂಲೆ, ಅದರ ಔಷಧ ಮಾತ್ರೆ ಮತ್ತದರ ಸೈಡ್ ಎಫೆಕ್ಟುಗಳೊಂದಿಗೆ ಜೀವಿಸುತ್ತಿರುವ ನಾನು ಇದ್ದ ಕಡೆಯಲ್ಲೇ ಬೇರು ಬಿಟ್ಟು ಬದುಕುವ ಪ್ರಾಣಿ. ನಾನಂತೂ ಹೀಗಾಗಿದ್ದರಿಂದ ನನ್ನ ಮಡದಿಯೂ ಹೀಗೇ ಇರಬೇಕೆಂದು ನಾನು ಬಯಸುವವನಲ್ಲ. ಹೆಂಡತಿಯನ್ನು ಪ್ರೀತಿಸುವುದೆಂದರೆ ಅವಳಿಗೆ ಸರಿ ಕಂಡಿದ್ದನ್ನು ಜೀವಿಸುವ ಮತ್ತು ಸಂಪೂರ್ಣ ಸ್ವಾತಂತ್ರ್ಯ-ಆತ್ಮಾಭಿಮಾನದಿಂದ ಬದುಕುವ ಎಲ್ಲ ಅವಕಾಶಗಳನ್ನು ನೀಡುವುದೆಂದೇ ಅರ್ಥ. ಅವಳ ಬಯಕೆಗಳನ್ನು ಗುರುತಿಸಿ, ಬವಣೆಗಳನ್ನು ಪರಿಹರಿಸಿ ಸದಾ ಸಂತಸದಲ್ಲಿಡಬೇಕೆಂಬ ಮನುಷ್ಯನೂ ಆಗಿರಬೇಕೆಂದೂ ಅರ್ಥ. ಹೀಗೆ ನಾನು ನಂಬಿದವ ಮತ್ತು ಅದರಂತೆ ನಡೆದುಕೊಳ್ಳುವವ. ಯಾವಾಗಲೂ ನನ್ನ ಸೇವೆಯಲ್ಲಿ ಇದ್ದು, ಗೃಹವು ಬಂಧನವಾಗಬಾರದೆಂದು ಆಕೆ ಎಲ್ಲಿಗೆ ಹೊರಟರೂ ಬೇಡವೆಂದವನಲ್ಲ. ಆದರೆ ಆಕೆಯು ಮನೆಯಲ್ಲಿ ಇರದೆ ಹೋದಾಗ ಇನ್ನಷ್ಟು ಮೌನಿಯಾಗುವೆ.

ಬಿಟ್ಟು ಒಂದೆರಡು ದಿನ ಇರಬಲ್ಲೆ; ವಾರಾನುಗಟ್ಟಲೆ ಇರಲು ಸಾಧ್ಯವೇ ಇಲ್ಲ ಎಂಬುದು ಗೊತ್ತಾಗಿದ್ದು ಒಮ್ಮೆ ಭರ್ತಿ ಒಂದು ತಿಂಗಳು, ಅವಳು ಮಗನ ಜೊತೆ ಬೆಂಗಳೂರಿನಲ್ಲಿ ಇದ್ದಾಗ. ಮಗನ ಪರೀಕ್ಷಾ ಸಮಯ. ಹಾಗಾಗಿ ಪ್ರತಿ ವಾರವೂ ಮೈಸೂರು ಬೆಂಗಳೂರು ಎಂದು ಓಡಾಡದೇ ಅಲ್ಲಿಯೇ ಅಂದರೆ ಮಗನ ಓದಿಗಾಗಿ ಮಾಡಿದ್ದ ಬಾಡಿಗೆಯ ಮನೆಯಲ್ಲೇ ಉಳಿದು ಬಿಟ್ಟಿದ್ದಳು. ವಿರಹ ಎಂದರೇನೆಂದು ನನಗಾಗ ಅರ್ಥವಾಯಿತು. ಒಂಟಿಗಳ ಬದುಕು ಎಷ್ಟು ದುರ್ಭರ ಎಂಬುದು ಮನದಟ್ಟಾಯಿತು. ನಾನು ಹಿಂದೆ ಇದ್ದ ಕಾಲೇಜಿನ ಅಟೆಂಡರು ಕೂಡ ‘ಯಾಕ್ ಸರ್, ಮೇಡಮ್ಮೋರು ಊರಲಿಲ್ವಾ? ಸಾಂಬಾರಿನ ಸ್ಮೆಲ್ಲೇ ಬೇರೆ ಥರ ಇದೆ!’ ಎಂದು ಕಂಡು ಹಿಡಿಯುವಷ್ಟು ನನ್ನಾಕೆಯ ಗೈರುಹಾಜರಿ ಗುರುತಾಯಿತು. ಜೊತೆಗೆ ನನಗೆ ಗೊತ್ತಾಗದ ಆದರೆ ಆತ್ಮೀಯರಿಗೆ ತಕ್ಷಣ ಗೊತ್ತಾಗುವಂಥ ನನ್ನ ಮುಖಲಕ್ಷಣ. ‘ಯಾಕ್ ಸರ್, ಸಪ್ಪಗಿದೀರಿ, ವೈಫು ಊರಲ್ಲಿಲ್ಲವಾ?’ ಎಂದು ಸಹೋದ್ಯೋಗಿ ಸನ್ಮಿತ್ರರು ಕಂಡು ಹಿಡಿಯುತ್ತಿದ್ದರು. ಮನೆ, ಕುಟುಂಬ, ಗೃಹಿಣಿ, ಸಂಸಾರ, ಜೀವನ ಎಂಬುದನ್ನು ಯಾರು ಮಾಡಿದರು? ನಾವು ಎಷ್ಟೊಂದು ಸುಖಿಗಳು, ನಮ್ಮದು ಎಂಥ ಅನ್ಯೋನ್ಯ ದಾಂಪತ್ಯ! ಎಂದು ನಾನೇ ಅಚ್ಚರಿಪಡುವಷ್ಟು, ನೋಡಿದ ಬೇರೆಯವರು ಹೊಟ್ಟೆಕಿಚ್ಚು ಪಡುವಷ್ಟು ಸಂತಸದಿಂದ ಸಮೃದ್ಧವಾಗಿ ಬದುಕುತ್ತಿದ್ದೇವಲ್ಲ ಎಂದು ಆಲೋಚಿಸಿ, ಭಗವಂತನಿಗೊಂದು ಧನ್ಯವಾದ ಸಮರ್ಪಿಸುತ್ತೇನೆ.

ಉತ್ತರಭಾರತ ಪ್ರವಾಸಕ್ಕೆ ಅದರಲ್ಲೂ ಕುಂಭಮೇಳಕ್ಕೆ ಹೋದಾಗಲೂ ಹತ್ತು ಹದಿನೈದು ದಿವಸಗಳ ಕಾಲ ನಾನು ವನವಾಸ ಪಟ್ಟಿದ್ದುಂಟು. ಇದೀಗ ಮನೆಯಾಕೆಯು ವಿದೇಶಕ್ಕೇ ಹಾರಿದ್ದಾಳೆ! ಹತ್ತಿರ ಹತ್ತಿರ ಒಂದು ತಿಂಗಳ ಕಾಲ ನಾನು ಅವಳಿಲ್ಲದೇ ಇರಬೇಕಿದೆ. ಬರೀ ತಿಂಡಿ, ಊಟ, ಆರೋಗ್ಯದ ಕಾಳಜಿಗಳಿಗಷ್ಟೇ ಅಲ್ಲ, ಅರ್ಧಾಂಗಿಯು ಜೊತೆಗಿರಬೇಕು. ಮೂವತ್ತು ವರುಷಗಳ ಕಾಲ ಜೊತೆಗಿದ್ದು ‘ಎರಡು ದೇಹ; ಒಂದು ಜೀವ’ ಎಂಬಂತಾಗಿ, ನಾವು ಭಾವನಾತ್ಮಕವಾಗಿ ಅದ್ವೈತವೇ ಆಗಿದ್ದೇವೆ. ಮನೆಯಲ್ಲಿ ಮಡದಿಯಿದ್ದರೆ ಒಂಥರಾ ನಿರಾಳ ಮತ್ತು ನೆಮ್ಮದಿ. ಆಕೆಯು ಏನೇ ಪೂರ್ವ ಸಿದ್ಧತೆಗಳನ್ನು ಮಾಡಿಟ್ಟು ಹೋದರೂ ಅವಳ ಅನುಪಸ್ಥಿತಿ ಎದ್ದು ಕಾಣುತ್ತದೆ. ಮನೆಯ ಯಾವ ಮೂಲೆಗೆ ಹೋದರೂ ಅವಳ ನೆನಪು ಕಾಡುತ್ತದೆ. ಅವಳು ಬಳಸುವ ವಸ್ತುಪದಾರ್ಥಗಳು ಕಣ್ಣಿಗೆ ಕಂಡಾಗಲಂತೂ ಇದು ಇನ್ನೂ ಹೆಚ್ಚು. ಇಷ್ಟಕೂ ಮರೆಯದೇ ಇರುವ ವ್ಯಕ್ತಿಯನ್ನು ನೆನಪಿಸಿಕೊಳ್ಳುವುದಾದರೂ ಹೇಗೆ? ಸದಾ ನನ್ನ ಜೊತೆಗೇ ಇರುವ ಜೀವವನ್ನು ಬಿಟ್ಟು ಬದುಕುವುದಾದರೂ ಹೇಗೆ? ಏನೇ ಅಧ್ಯಾತ್ಮ, ತತ್ತ್ವಜ್ಞಾನ, ಮಹಾತ್ಮರ ಉಪನ್ಯಾಸ, ಪ್ರವಚನ, ಬದುಕಿನ ನಿರರ್ಥಕತೆಗಳನ್ನು ಕುರಿತ ಚಿಂತನೆಗಳು ಮತ್ತಿಂಥವು ಬುದ್ಧಿಗೆ ನಿಲುಕಿದ್ದನ್ನು ಹೃದಯಕ್ಕೆ ಇಳಿಸುವುದಾದರೂ ಹೇಗೆ? ಇಂಥಲ್ಲಿ ಮಿದುಳಿಗೂ ಕರುಳಿಗೂ ಆಗುವ ಸಂಘರ್ಷಕ್ಕೆ ನಾನು ಮೂಕಸಾಕ್ಷಿಯಾಗಬೇಕಿದೆ. ಲೌಕಿಕದ ಬಳಕೆ ನನ್ನಲ್ಲಿ ಕಡಮೆ; ನನ್ನನ್ನು ನಾನೇ ಅಂತರದಲ್ಲಿಟ್ಟು ನೋಡುವ ಸಾಕ್ಷೀಭಾವವನ್ನು ಆದಷ್ಟೂ ಹೊಂದಲು ಪ್ರಯತ್ನಿಸುವಂಥ ಹೊತ್ತಲ್ಲೇ ಈ ಅನುಭವ! ಮಡದಿಯು ವಿದೇಶಕ್ಕೆ ಹೋಗಿದ್ದರಿಂದ ಈ ಪಡಿಪಾಟಲು ಎಂದೇನೂ ನನಗೆ ಅನಿಸಿಲ್ಲ. ಮನಸಾರೆ ಕಳುಹಿಸಿ ಕೊಟ್ಟಿದ್ದು ಸತ್ಯ; ಆದರೆ ಈಗ ನಾನು ಎದುರಿಸುತ್ತಿರುವ ಖಾಲಿ ಖಾಲಿ ಅನುಭವವೂ ಸತ್ಯ! ಈ ಅನಿವಾರ್ಯವನ್ನು ನಾನು ಎದುರಿಸಲು ಸಾಕಷ್ಟು ಸಿದ್ಧತೆಯನ್ನೂ ಮಾಡಿಕೊಂಡಿರುತ್ತೇನೆ. ಹೆಚ್ಚು ಹೊತ್ತು ಕಾಲೇಜಿನ ಕೆಲಸದಲ್ಲೇ ತೊಡಗಿಸಿಕೊಳ್ಳುವುದು, ಓದುವ ಪುಸ್ತಕಗಳನ್ನು ಎತ್ತಿಟ್ಟುಕೊಳ್ಳುವುದು, ಬರೆವಣಿಗೆ ಮಾಡುವುದು, ಹಿಂದೆ ಬರೆದಿದ್ದನ್ನು ಸಿಸ್ಟಮಿನಲ್ಲಿ ಹುಡುಕಿ, ಪುಸ್ತಕ ರೂಪದಲ್ಲಿ ತರಲು ಒಂದೆಡೆ ಸಂಗ್ರಹಿಸುವುದು ಇವೇನೇ ಮಾಡಿದರೂ ಮನಸು ಮತ್ತೆ ಮತ್ತೆ ಮಡದಿಯ ನೆನಪಿಗೇ ಜಾರುತ್ತದೆ. ಸಿಸ್ಟಮಿನಲ್ಲಿರುವ ಹಳೆಯ ಫೋಟೊಗಳ ಸಂಗ್ರಹಾಗಾರದಲ್ಲೇ ಸಿಲುಕಿ, ಅವಳನ್ನೇ ಹುಡುಕಲು ಶುರುವಿಡುತ್ತದೆ!

‘ಅದು ತನ್ನಿ, ಇದು ತನ್ನಿ’ ಎಂದು ಪದೇ ಪದೇ ಪೀಡಿಸುತ್ತಿದ್ದ ಹೆಂಡತಿಯಿಂದ ರೋಸಿ ಹೋದ ಗಂಡನು ‘ನಾನು ಹೊಳೆಗೆ ಹಾರಿ ಪ್ರಾಣ ಬಿಡುತ್ತೇನೆ’ ಎಂದಾಗ, ‘ನೀರಿಗೆ ಹಾರಿದ ಮೇಲೆ, ಅಪ್ಪೀ ತಪ್ಪೀ ಮೇಲಕ್ಕೆ ಬಂದರೆ ಮೀನು ತನ್ನಿ’ ಎಂದು ಹೆಂಡತಿಯು ಅಪ್ಪಣೆ ಮಾಡಿದಳಂತೆ. ಇದು ಜೋಕು. ಅಷ್ಟೇ ಅಲ್ಲ; ಬಹುತೇಕರ ಬದುಕು! ನಾವು ಹಾಗಿಲ್ಲ. ಕೇಳಿದಾಕ್ಷಣ ತಂದು ಕೊಡುವ, ತಕ್ಷಣ ಲಭ್ಯವಾಗದಿದ್ದರೆ, ಆನ್‌ಲೈನಿನಲ್ಲಿ ಬುಕ್ ಮಾಡುವ ಜಾಯಮಾನದವ ನಾನು. ಇಷ್ಟಕೂ ನನ್ನ ಮಡದಿಯೆಂದೂ ದುಬಾರಿಯದನ್ನು ಇಲ್ಲಿಯವರೆಗ ಕೇಳಿಯೇ ಇಲ್ಲ. ಬೆಳ್ಳಿ ಬಂಗಾರ ವಜ್ರಗಳಿಂದ ಆಕೆ ದೂರ. ಇನ್ನು ವಸ್ತ್ರಗಳ ವಿಚಾರ. ತನಗೆ ಬೇಕಾದುದನ್ನು ತನ್ನ ಗೆಳತಿಯರ ಜೊತೆಗೂಡಿ ಹೋದಾಗ ತೆಗೆದುಕೊಂಡು ಬರುತ್ತಾಳೆ. ತೆಗೆದುಕೊಳ್ಳುವಾಗ ಕೇಳುತ್ತಾಳೆ. ನಾನೆಂದೂ ಬೇಡ ಎಂದಿಲ್ಲ. ತಂದ ಮೇಲೆ ಹಾಕಿಕೊಂಡು ತೋರಿಸಿ, ‘ಹೇಗಿದೆ?’ ಎಂದು ಅಭಿಪ್ರಾಯ ಕೇಳುತ್ತಾಳೆ. ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮನೆಯ ಪದಾರ್ಥಗಳು ಇವೆ. ಹೊಸದಾಗಿ ಏನಾದರೂ ಕಂಡರೆ, ಅದರಿಂದ ಉಪಯೋಗವಿದೆ ಎಂದು ಗೊತ್ತಾದರೆ ಇಬ್ಬರು ಕೂಡಿಯೇ ಬುಕ್ ಮಾಡುತ್ತೇವೆ. ಇನ್ನು ನಾನಂತೂ ಬೆಳ್ಳಿ ಬಂಗಾರದಿಂದ ಬಹುದೂರ. ಅವನ್ನು ನೋಡುವುದಿರಲಿ, ಕೈಯಿಂದಲೂ ಮುಟ್ಟಿಲ್ಲ! ‘ನಾನೇ ಬಂಗಾರ; ನನಗೇಕೆ ಬಂಗಾರ?’ ಎಂದು ಹಾಸ್ಯ ಮಾಡುತ್ತಿರುತ್ತೇನೆ. ಅಂದರೆ ನಾನು ಭಗವಂತನಲ್ಲಿ ಏನನ್ನೂ ಕೇಳದೇ ಇದ್ದುದರಿಂದಲೂ ಬಡತನದಲ್ಲೇ ಬಾಲ್ಯ ಕಳೆದಿದ್ದರಿಂದಲೂ ಮಧ್ಯಮ ವರ್ಗದ ಜನರಾದ ನಾವು ಹಣದಲ್ಲಿ ಬಡವರಿರಬಹುದು; ಆದರೆ ಸ್ವಾಭಿಮಾನದಲ್ಲಿ ಬಡವರಾಗಬಾರದು ಎಂಬ ಪಾಲಿಸಿಯನ್ನು ಪಾಲಿಸಿಕೊಂಡು ಬಂದಿದ್ದರಿಂದಲೂ ಸಾಕ್ಷಾತ್ ಪರಮಾತ್ಮನ ಕೃಪಾಕಟಾಕ್ಷಕ್ಕೆ ಒಳಗಾದೆ. ‘ನೀನು ಏನನ್ನೂ ಕೇಳಲೇ ಇಲ್ಲವಲ್ಲ’ ಎಂದಾತ ಸ್ವಲ್ಪ ಹೆಚ್ಚೇ ಕೊಟ್ಟನು; ಸರಳವಾಗಿಯೂ ನಿರಾತಂಕವಾಗಿಯೂ ಜೀವನ ಮಾಡಲು ಎಷ್ಟು ಬೇಕೋ ಅಷ್ಟು. ಮಡದಿಯೊಂದಿಗೆ ರಾಯರ ಮಠಕ್ಕೆ ಹೋದರೆ ನಾನು ನನ್ನೊಳಗೆ ಮೌನವಾಗಿ ಹೇಳಿಕೊಳ್ಳುವುದಿಷ್ಟು: ‘ಭಗವಂತ, ಸಾಕು. ಇನ್ನೇನು ಬೇಡ, ಕೊಟ್ಟಿರುವುದನ್ನು ಉಳಿಸು, ಆರೋಗ್ಯ ಕೊಟ್ಟು ಕಾಪಾಡು’ ಎಂದು. ಏಕೆಂದರೆ ನಾನು ಯಾವ ದೇವರಲ್ಲೂ ಬೇಡುವುದಿಲ್ಲ. ಬೇಡಬಾರದು ಎಂದಿಲ್ಲ. ಭಗವಂತನನ್ನು ಕಂಡರೆ ನನಗೆ ಹೆದರಿಕೆ ಇಲ್ಲ, ಆತ ನನ್ನ ಬೇಕು ಬೇಡಗಳನ್ನು ನನಗಿಂತ ಚೆನ್ನಾಗಿ ಬಲ್ಲವನು. ಒಂಥರಾ ಆತ್ಮೀಯ ಮಿತ್ರನಿದ್ದಂತೆ. ಮಿತ್ರನ ಕೂಡ ಭಯವೇಕೆ?

ಈ ಸಲ ನನ್ನ ಮಡದಿಯು ಮಗನಿರುವ ವಿದೇಶಕ್ಕೆ ಹೋಗಿದ್ದಾಳೆ. ಸಾಕಷ್ಟು ಸಿದ್ಧತೆ ಮಾಡಿಟ್ಟು ಆಕೆಯು ಹೋಗಿದ್ದರೂ ನನಗೆ ಅವಳಿಲ್ಲದ ಕೊರತೆ ಪ್ರತಿಕ್ಷಣ ಕಾಡುತ್ತಿದೆ. ಒಂದು ಹಂತ ಕಳೆದ ಮೇಲೆ ದಾಂಪತ್ಯವೆಂಬುದು ‘ಹೂವು, ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ’ಗಳಾಚೆ ಅರಳಿ ಘಮಿಸುವ ಕುಸುಮವಲ್ಲರಿ. ಮೊದಲಿಗೆ ಅಂದಚೆಂದವಾಗಿ ಕಾಣುತಿದ್ದವು ಈಗ ಬದಲಾಗಿವೆ. ಇದೀಗ ಎಲ್ಲಕಿಂತ ವ್ಯಕ್ತಿತ್ವ ಮುಖ್ಯ; ಗುಣವಂತಿಕೆಯೂ ಹೃದಯವಂತಿಕೆಯೂ ಇದ್ದರೇನೇ ಚೆಲುವು ಎಂಬ ಶಾಶ್ವತ ಸತ್ಯವನ್ನು ಅರಿತ ಪಕ್ವತೆಯ ಪರಿಸ್ಥಿತಿ; ಹೆಣ್ಣಿನ ಮುಡಿಯೇರಿ ನಗುವ ಹೂವಿಗಿಂತ ದೇವರ ವಿಗ್ರಹಕೆ ಮಾಲೆಯಾಗುವುದು ಶ್ರೇಷ್ಠವೆಂಬ, ಸಾರ್ಥಕವೆಂಬ ಮನಸ್ಥಿತಿ.

ನಾವೆಲ್ಲ ಕೆಎಸ್‌ನ ಅವರ ‘ಮೈಸೂರ ಮಲ್ಲಿಗೆ’ಯ ಕವಿತೆಗಳನ್ನು ಓದಿ ಬೆಳೆದವರು; ಆ ಹಾಡುಗಳನ್ನು ಎದೆಯಲ್ಲಿಟ್ಟು ಕಾಪಾಡಿದವರು. ಅಡಿಗರ ಬುದ್ಧಿಗಮ್ಯ ನವ್ಯಕಾವ್ಯವು ಪಾಠ ಮಾಡಲಷ್ಟೇ; ಬದುಕಲು ಅಲ್ಲ ಎಂದು ತಿಳಿದವರು. ‘ನೀವು ವಿಪರೀತ ಭಾವುಕರು’ ಎಂದು ಯಾರಾದರೂ ಹೇಳಿದರೆ ಅದನ್ನು ದೋಷ ಎಂದು ಪರಿಗಣಿಸದೇ ಗುಣವೆಂದೇ ಸ್ವೀಕರಿಸಿದವರು. ಹೇಳೀ ಕೇಳೀ ಭಾಷಾ ಸಾಹಿತ್ಯದ ಅಧ್ಯಾಪಕ. ವೃತ್ತಿಯೂ ಪ್ರವೃತ್ತಿಯೂ ಒಂದೇ ಆಗಿರುವಾತ. ಹೀಗಿರುವಾಗ ನನ್ನೊಳಗೊಬ್ಬ ವ್ಯಾವಹಾರಿಕ ಎಚ್ಚೆತ್ತುಕೊಳ್ಳುವ ಪ್ರಶ್ನೆಯೇ ಇಲ್ಲ! ಕುಂತರೂ ನಿಂತರೂ ಭಾವನೆಯದೇ ತುಂತುರು. ಈ ಭಾಗ್ಯ ಎಷ್ಟು ಜನರಿಗಿದೆ? ಗೊತ್ತಿಲ್ಲ. ನನಗಂತೂ ಇದೆ, ಈ ಜೀವ ಮತ್ತು ಜೀವನವು ನಾಲಗೆ ಮೇಲೆ ಸತತ ಬೀಳುವ ಸ್ವರ್ಗಲೋಕದ ಸುಧೆ.

ಮಡದಿ ಮಾಡುವ ಕೆಲಸ ಕಾರ್ಯಗಳನ್ನು ನಾನೂ ಮಾಡುತ್ತೇನಾದರೂ ಅವುಗಳ ಗುಣಮಟ್ಟ ತೀರಾ ಕಡಮೆ; ಜೊತೆಗೆ ವಿಪರೀತ ನಿಧಾನ. ಬೆಳಗಿನ ಜಾವ ಐದು ಗಂಟೆಗೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ತಿಂಡಿ ಮಾಡಿ, ತಿಂದು, ಮಧ್ಯಾಹ್ನಕೆ ಅಡುಗೆ ಮಾಡಿ, ಪ್ಯಾಕು ಮಾಡಿ ಹೊರಟು ನಿಂತಾಗ ಅದು ಹೇಗೋ ಒಂಬತ್ತು ಗಂಟೆ ಆಗಿಹೋದದ್ದು ಗೊತ್ತಾಗುವುದೇ ಇಲ್ಲ! ಒಂದೊಂದು ದಿನ ಬೆಳಗಿನ ತಿಂಡಿಗಾಗಿ ಹೊಟೆಲಿನ ಇಡ್ಲಿಯನ್ನು ಆಶ್ರಯಿಸುವುದುಂಟು. ಒಮ್ಮೊಮ್ಮೆ ಸಂಜೆಯ ಊಟದ ಬದಲಿಗೆ ಅದೇ ಹೊಟೆಲಿನ ದೋಸೆಯನ್ನು ತಿನ್ನುವುದುಂಟು. ಮಧ್ಯಾಹ್ನಕಷ್ಟೇ ತಯಾರಿ ಮಾಡಿಕೊಳ್ಳಬೇಕು. ಹಿಂದಿನ ದಿನವೇ ರಾತ್ರಿಯೂಟವಾದ ಮೇಲೆ ವಾಕಿಂಗ್ ಹೋಗುವಾಗ ತಲೆ ತುಂಬ ಚಿಂತೆ. ‘ತಿಂಡಿ ಮಾಡಿಕೊಳ್ಳುವುದಾ? ಹೊಟೆಲಿಗೆ ಹೋಗುವುದಾ? ಮಧ್ಯಾಹ್ನದ ಊಟಕಾಗಿ ಏನು ಅಡುಗೆ ಮಾಡಿಕೊಳ್ಳುವುದು?’ ಇದು ಬಗೆಹರಿಯುವುದರೊಳಗೆ ವಾಕಿಂಗ್ ಮುಗಿದಿರುತ್ತದೆ. ಇನ್ನೊಂದು ವಿಶೇಷವೆಂದರೆ ನಾನು ವಾಸವಿರುವ ಏರಿಯಾದ ಪ್ರತಿಯೊಬ್ಬರಿಗೂ ನನ್ನೊಬ್ಬನದೇ ವಾಕಿಂಗು ಪ್ರಶ್ನಾರ್ಹವಾಗುತ್ತದೆ. ‘ಮೇಡಂ ಇಲ್ವಾ ಸರ್, ಊರಲ್ಲಿ?’ ಎಂದೇ ಕೇಳುತ್ತಾರೆ ಮತ್ತು ಉತ್ತರಿಸುವುದರೊಳಗೆ ನನ್ನನ್ನು ಅನುಕಂಪದಿಂದ ನೋಡುತ್ತಾರೆ. ‘ಒಬ್ಬರೇ ಆಗಿಬಿಟ್ಟಿದ್ದೀರಿ? ಹೇಗಿರ್ತೀರಿ’ ಎಂದೂ ಕೇಳಿ ಬಿಡುತ್ತಾರೆ. ಆಮಟ್ಟಿಗೆ ನಮ್ಮಿಬ್ಬರ ಜೀವನ ಸಂಜೀವನವು ಗೊತ್ತಾಗಿ ಹೋಗಿದೆ. ಮಡದಿಯು ವಾಪಸ್ ಬಂದ ಮೇಲೆ, ‘ನೀವಿಲ್ಲದೇ ಇದ್ದಾಗ ಸರ್ ಮುಖ ನೋಡೋಕಾಗಲ್ಲ’ ಎಂದು ಹೇಳಿ ನಗೆಯಾಡುತ್ತಾರೆ. ನಾನು ಮಾಮೂಲಿನಂತೆಯೇ ಇರುತ್ತೇನೆ ಎಂದುಕೊಂಡಿರುತ್ತೇನೆ. ಅವರ ಮಾತು ಕೇಳಿ ಪೆಕರು ಪೆಕರಾಗಿ ನಗುತ್ತೇನೆ. ಬಾಯಲ್ಲಿ ಹೇಳದಿದ್ದರೂ ಮುಖದಲ್ಲಿ ನಮ್ಮ ಮನೆಯ ಎಲ್ಲ ವರದಿ-ವ್ಯವಹಾರಗಳು ಗೊತ್ತಾಗುತ್ತದೆಂದು ತಿಳಿದು ಹೌಹಾರುತ್ತೇನೆ. ನನಗೆ ನಾನೇ ಅಪರಿಚಿತನಾಗುತ್ತೇನೆ. ಆದರೇನು? ಅವಳು ಎಲ್ಲಿದ್ದರೂ ನಾನು ಇಲ್ಲಿದ್ದರೂ ಫೋನಿದೆ, ವಾಟ್ಸಾಪ್ ವಿಡಿಯೋ ಕಾಲ್ ಇದೆ. ಮಾತಾಡುತ್ತೇವೆ. ಅಲ್ಲಿಯ ಅವಳ ಹೊಸ ಅನುಭವಗಳನ್ನೆಲ್ಲಾ ಹಂಚಿಕೊಳ್ಳುತ್ತಾಳೆ. ಅವಳ ಉತ್ಸಾಹ-ಬೆರಗು-ಸಂವೇದಿಸುವ ತಾಜಾತನವನ್ನು ಕೇಳಿ ಪುಳಕಗೊಳ್ಳುತ್ತೇನೆ. ‘ನೀನು ಕಂಡು ಬಾ; ನಿನ್ನ ಕಣ್ಣಿನಲ್ಲಿ ಅವೆಲ್ಲವನ್ನು ನಾನೂ ಕಾಣುವೆ’ ಎಂದಾಗ ನಗುವ ಮಂದಹಾಸಕ್ಕೆ ಜೊತೆಯಾಗುತ್ತೇನೆ.

ನಮ್ಮ ಸಂಸ್ಕೃತಿಯ ಕುಟುಂಬ, ಸಂಸಾರ, ದಾಂಪತ್ಯವೆಂಬವು ಕೇವಲ ಪರಿಕಲ್ಪನೆಗಳಲ್ಲ; ಅವು ಘನತರ ಮೌಲ್ಯಗಳೆಂದು ನಂಬಿ ಬಾಳುವೆ ಮಾಡುತ್ತಿರುವವರು. ‘ಒಲುಮೆ ಒಂದು ದಿವ್ಯ ರಕ್ಷೆ ಇಹ ಸಮಸ್ಯೆಗೆ! ಮದುವೆ ಅದಕೆ ಮಧುರ ದೀಕ್ಷೆ ಗೃಹ ತಪಸ್ಯೆಗೆ!’ ಎಂಬುದು ಕವಿ ಕುವೆಂಪು ಮಾತು. ನವೋದಯ ಕಾವ್ಯವು ಚಿತ್ರಿಸುವ ದಾಂಪತ್ಯವಾಗಲೀ, ನವೋದಯ ಕಥಾಸಾಹಿತ್ಯವು ಕಟ್ಟಿಕೊಡುವ ಕುಟುಂಬ ಮತ್ತು ಸಂಸಾರಗಳ ಚಿತ್ರಣವಾಗಲೀ ನಮ್ಮ ದೇಶದ ಒಂದು ಕಾಲಘಟ್ಟದ ಅದ್ಭುತ ಚರಿತ್ರೆ. ಲೋಕಕ್ಕಿಂದೂ ಆದರ್ಶವೇ. ಚಿಕ್ಕ ಪುಟ್ಟ ಕಾರಣಕ್ಕೆಲ್ಲ (ಕಾರಣವಲ್ಲ; ನೆಪ) ವಿಚ್ಛೇದನಗಳೂ ಮುಖ ಮುನಿಸುಗಳೂ ಆಗುತ್ತಿರುವ ಈ ಹೊತ್ತಲ್ಲಿ ನಮ್ಮ ಸನಾತನ ಸಂಸ್ಕೃತಿಯ ಕುಟುಂಬ ಪರಿಕಲ್ಪನೆಯ ಮಹತ್ವ ಎಂದಿಗಿಂತ ಇಂದು ಹೆಚ್ಚಾಗಿದೆ. ಏಕೆಂದರೆ ನಮ್ಮಲ್ಲಿ ಕುಟುಂಬ ಎಂಬುದು ಕೇವಲ ಪರಿಕಲ್ಪನೆಯಲ್ಲ; ಅದೊಂದು ಗುರುತರ ಮೌಲ್ಯ. ಅದನ್ನು ಕಟ್ಟಿ ಬೆಳೆಸಲು ಎಲ್ಲರೂ ಬೆಲೆ ತೆರಬೇಕು. ಆಗಲೇ ಅದಕೆ ಅರ್ಥ; ಇಲ್ಲದಿರೆ ವ್ಯರ್ಥ. ಮನೆತನ, ವಂಶ ಎಂದೆಲ್ಲಾ ನಮ್ಮ ಹಿಂದಿನವರು ಒದ್ದಾಡಿಕೊಳ್ಳುತ್ತಿದ್ದುದು ಇದಕ್ಕಾಗಿ ಎಂಬುದು ನಮಗೆ ಅರಿವಾಗಿದೆ; ಆದರೆ ನಮ್ಮ ನಂತರದವರಿಗೆ ಅರಿವಾಗಬೇಕಿದೆ. ಇರಲಿ. ಜಗತ್ತಿಗೆ ಭಾರತವು ನೀಡಿದ ಹಲವು ಅಮೂಲ್ಯ ಕೊಡುಗೆಗಳಲ್ಲಿ ಕುಟುಂಬ ಪರಿಕಲ್ಪನೆಯೂ ಒಂದೆಂದು ಹೇಳಲು ಸಮಾಜಶಾಸ್ತ್ರವನ್ನೇ ತಿರುವಿ ಹಾಕಬೇಕಿಲ್ಲ; ಅರ್ಥಪೂರ್ಣ ದಾಂಪತ್ಯ ಸಾಕು. ಕುಟುಂಬವು ಹೊಂದಿಕೊಂಡು ಬಾಳುವುದನ್ನು ಹೇಳಿಕೊಡುತ್ತದೆ. ಸ್ವಾರ್ಥಕಿಂತ ತ್ಯಾಗವೇ ಶ್ರೇಷ್ಠವೆಂದೂ ಬಿಟ್ಟು ಕೊಡುವುದರಲ್ಲಿ ಬದುಕಿದೆ ಎಂದೂ ಬೋಧಿಸುತ್ತದೆ. ಪ್ರೀತಿ ಎಂದರೆ ಪೊಸೆಸಿವ್ ಅಲ್ಲ; ಅಗ್ರೆಸಿವ್ ಅಂತೂ ಅಲ್ಲ; ಅದು ಕರ್ತವ್ಯದ ನೆಪದಲ್ಲಿ ನಮ್ಮೊಳಗೆ ಅಡಗಿರುವ ಔದಾರ್ಯ ಎಂಬುದನ್ನು ತಿಳಿಸಿ ಕೊಡುತ್ತದೆ. ಯೌವನದ ದಿನಗಳಲ್ಲಿ ಇದ್ದ ಆಕರ್ಷಣೆಯು ನಿಧಾನವಾಗಿ ಮರೆಯಾಗಿ, ಅದರ ಜಾಗದಲ್ಲಿ ಗುಣವಂತಿಕೆಯನ್ನು ಕೊಂಡಾಡುವ ಗುಣಗ್ರಾಹೀ ಮನೋಧರ್ಮದತ್ತ ವಾಲುತ್ತದೆ. ಬದುಕೆಂದರೇನು? ಎಂಬುದರ ಉತ್ತರದ ಹುಡುಕಾಟವು ಸ್ವಾನುಭವದ ನೆಲೆಯದು. ಅದಕಾಗಿಯೇ ಆಕರ್ಷಣೆಯೇ ಪ್ರೀತಿಯಲ್ಲ; ಅದು ಪರಸ್ಪರ ಅನುನಯದ ಜೀವಂತಿಕೆ ಎಂಬುದು ಮನದಟ್ಟಾಗಲು ಮಧ್ಯವಯಸು ದಾಟಬೇಕು. ಆಗ ನನಗಾಗಿ ಜೀವ ಸವೆಸಿದವರತ್ತ ಮನಸು ಯೋಚಿಸಲು ಶುರುವಿಡುತ್ತದೆ. ಇಷ್ಟು ದಿವಸದ ಮೂರ್ಖ ನಿರ್ಣಯಗಳನ್ನೂ ತಪ್ಪು ತಪ್ಪಾದ ನಿರ್ಧಾರಗಳನ್ನೂ ಮೆಲುಕು ಹಾಕಿ ಪಶ್ಚಾತ್ತಾಪ ಪಡುತ್ತದೆ. ಇನ್ನಾದರೂ ನನ್ನ ವೈಯಕ್ತಿಕತೆಯನ್ನು ಕಡಮೆ ಮಾಡಿಕೊಂಡು ನನಗಾಗಿ ಒದ್ದಾಡುವ ಜೀವವನ್ನು ಕುರಿತು ಚಿಂತಿಸಬೇಕೆಂದು ಹೊರಡುತ್ತದೆ. ಇಂಥಲ್ಲಿಯೇ ಸಂಬಂಧದ ವಾವೆಗಳಲ್ಲಿ ಇರುವ ಬದುಕಿನ ದರ್ಶನವು ಸ್ವಾನುಭವಗೊಳ್ಳುವುದು. ನಾನೆಂಬುದೊಂದು ವರ್ಣರಂಜಿತ ಚಿತ್ರ ಎಂದಷ್ಟೇ ನೋಡುತ್ತಿದ್ದ ಮನಸಿಗೆ ಕುಟುಂಬವು ಈ ಚಿತ್ರವನ್ನು ಎತ್ತಿ ತೋರಿಸಲು ಹಿನ್ನೆಲೆಯಾಗಿರುವ ಸಮರ್ಥ ಭಿತ್ತಿ ಎಂಬ ಜ್ಞಾನ ಮೊಳೆತಾಗಲೇ ಮಾಗುವಿಕೆಗಿದು ಪಕ್ವಕಾಲ ಎಂದು ತಿಳಿಯಬೇಕು. ನಮ್ಮ ಪೂರ್ವಿಕರು ಇನ್ನೂ ಮುಂದಕ್ಕೆ ಹೋಗಿ, ‘ವಸುಧೈವ ಕುಟುಂಬಕಂ’ ಎಂದರು. ಇಡೀ ಭೂಮಂಡಲವೇ ಒಂದು ಕುಟುಂಬ ಎಂಬ ಭಾವವು ತರುವ ಔದಾರ್ಯತೆಯನ್ನೂ ಸೌಹಾರ್ದತೆಯನ್ನೂ ಎಷ್ಟು ಹೊಗಳಿದರೂ ಸಾಲದು.

Absence, the highest form of Presence ಎಂಬೊಂದು ಮಾತಿದೆ. ಅನುಪಸ್ಥಿಯು ಉಪಸ್ಥಿತಿಯ ಅತ್ಯುನ್ನತ ರೂಪ ಎಂಬುದಕ್ಕೆ ನನ್ನ ಈಗಿನ ಸ್ಥಿತಿಯೇ ನಿದರ್ಶನ. ಇಲ್ಲದಿರುವುದೇ ಇರುವುದಕ್ಕಿಂತಲೂ ಹೆಚ್ಚು ತೀವ್ರವಾಗಿ ಅನುಭವವಾಗುವ ಕ್ಷಣವಿದು. ಇದೇ ಅನುಪಸ್ಥಿತಿಯ ಮಹಿಮೆ. ಇಲ್ಲದಿರುವುದೇ ಕೆಲವೊಮ್ಮೆ ಅತ್ಯಂತ ಆಳವಾದ ಇರುವಿಕೆ. Absence will tell you the importance of Presence ಎಂಬ ಇನ್ನೊಂದು ಮಾತಿನಂತೆ, ಜೊತೆಗಿರುವುದರ ಸಾರ್ಥಕತೆ ಅರಿವಾಗಬೇಕಾದರೆ ಒಂಟಿತನ ಎದುರಿಸಬೇಕು. ಎಲ್ಲವೂ ಅಷ್ಟೇ: ಒಬ್ಬರ ಮೌಲ್ಯ ಅರಿವಾಗುವುದೇ ಜೊತೆಗಿಲ್ಲದಿದ್ದಾಗ. ಏನಾದರೂ ಬರೆಯುವಾಗ ಅಂದರೆ ಟೈಪಿಸುವಾಗ ಸೂಕ್ತ ಪದವೊಂದು ಹೊಳೆಯದೇ ತಕ್ಷಣ ನೆನಪಾಗದೇ ಒದ್ದಾಡುವಂತೆಯೇ, ನನಗೆ ಮನೆಯಲ್ಲಿ ಮಡದಿ ಇಲ್ಲದಿದ್ದಾಗ! ‘ದಂಪತಿ’ಯಲ್ಲಿ ಪತಿಯ ದಮ್ ಇರುವುದೆಲ್ಲಾ ಮಡದಿಯಲ್ಲೇ ಎಂದರೆ ತಪ್ಪಾಗಲಾರದು. ಮಡದಿಗೆ ಸೋತವನು ಜಗತ್ತನ್ನೇ ಗೆದ್ದಿರುತ್ತಾನೆ. ಏಕೆಂದರೆ ಸುಖ ಮತ್ತು ನೆಮ್ಮದಿಗಳೆರಡೂ ಅವನನ್ನು ಹುಡುಕಿಕೊಂಡು ಬಂದು ಜೊತೆಗೆ ಕುಂತು, ಹರಟೆ ಹೊಡೆಯುತ್ತವೆ. ಆಗ ಅವೆರಡು ಒಂದು ಕಿವಿಮಾತು ಹೇಳುತ್ತವೆ: ‘ಪ್ರೀತಿಸುವುದೆಂದರೆ ಬರೀ ಪ್ರೇಮಿಸುವುದಲ್ಲ! ಬಿಟ್ಟು ಕೊಡುವುದು. ನಿನ್ನ ಸಂಗಾತಿಯ ಪರ್ಸನಲ್ ಸ್ಪೇಸ್ ಅನ್ನು ಗೌರವಿಸುವುದು ಮತ್ತು ಎಲ್ಲಕಿಂತ ಹೆಚ್ಚಾಗಿ ಆಕೆಯ ಮೂಲಕ ನಿನ್ನನ್ನು ಅರ್ಥ ಮಾಡಿಕೊಳ್ಳುವುದು’ ಎಂದು.

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *