ಪೌರಾಣಿಕ ಕತೆ

ಕಾವ್ಯ ಭಾಗವತ 102 : ಕೃಷ್ಣನ ಗೃಹಸ್ಥ ಧರ್ಮ ಪಾಲನೆ

Share Button

ದಶಮಸ್ಕಂದ – ಅಧ್ಯಾಯ – 10 – ಉತ್ತರಾರ್ಧ
ಕೃಷ್ಣನ ಗೃಹಸ್ಥ ಧರ್ಮ ಪಾಲನೆ

ನರಕಾಸುರನ ಸೆರೆಯಲ್ಲಿದ್ದ
ಹದಿನಾರು ಸಹಸ್ರ ನೂರು ಕನ್ಯೆಯರ ಪತಿಯಾಗಿ
ಎಲ್ಲರಿಗೆ ದ್ವಾರಕೆಯಲಿ ವಿಶ್ವಕರ್ಮ ನಿರ್ಮಿತ ಅರಮನೆಗಳಲಿ
ಎಲ್ಲರೊಡನೆ ಏಕಕಾಲದಿ ಗೃಹಸ್ಥನಾಗಿ ತೋರಿದ
ಲೀಲಾವಿನೋದಗಳೆಷ್ಟು ಸುಂದರ!

ನಾರದ ಮಹರ್ಷಿ
ಕೃಷ್ಣನು ಸಹಸ್ರಾರು ಕನ್ಯೆಯರೊಡಗಿನ
ಸಂಸಾರ ನಡೆಸುವ ಪರಿಯನರಿಯಲು
ದ್ವಾರಕೆಯ ಪ್ರವೇಶಿಸೆ
ದಿವ್ಯ ಗೃಹೋದ್ಯಾನದ ತಿಳಿಗೊಳದ ಸರೋವರದಲಿ
ಕಮಲ ಕಲ್ಪಾರಾದಿ ಪುಷ್ಪಗಳು
ಪಟ್ಟಣದ ಸರ್ವಾಂಗ ಸುಂದರ ಗೃಹಗಳ
ನೋಡಿ ಬೆರಗಾಗಿ ವಿಶ್ವಕರ್ಮ ನಿರ್ಮಿತ
ಸುಂದರ ಗೃಹಗಳ ಮಧ್ಯೆ ಕಂಗೊಳಿಸುತಿರ್ಪ
ಕೃಷ್ಣನರಮೆನಯ ಪ್ರವೇಶಿಸೆ
ರುಕ್ಮಿಣಿಯ ಚಾಮರ ಸೇವೆಯ ಬಿಟ್ಟು
ಮಹರ್ಷಿಗೆ ಸಕಲ ವಿಧದಲಿ ಸತ್ಕರಿಸಿ ಪಾದಪೂಜಿಸೆ
ನಾರದ ಸಂತೃಪ್ತಿಯಿಂ ನಿರ್ಗಮಿಸಿ

ನಂತರದಿ ಕೃಷ್ಣನಿನ್ನೋರೋರ್ವ ಭಾರ್ಯೆಯ ಗೃಹವ ಪ್ರವೇಶಿಸೆ
ಕೃಷ್ಣ ರಮಣಿಯ ಜೊತೆಯಲಿ ಪಗಡೆಯಾಟವಾಡುತಿರೆ
ಬೆರಗಾಗಿ ಮತ್ತೆ ಅವನಾತಿಥ್ಯ ಸ್ವೀಕರಿಸಿ
ಸಮೀಪದ ಮತ್ತೊಂದು ಮನೆಯಲಿ
ಕೃಷ್ಣ ಎಳೆಬಾಲಕರೊಡನೆ ವಿನೋದದಿಂದಿರೆ
ಪರಮಾಶ್ಚರ್ಯದಿ ಮತ್ತೆ ಕೃಷ್ಣನಾತಿಥ್ಯ ಸ್ವೀಕರಿಸಿ
ಬೇರೊಂದು ಮನೆಯ ಪ್ರವೇಶಿಸೆ
ಬ್ರಾಹ್ಮಣ ಸಂತರ್ಪಣೆ ನಡೆಯಿಸಿ
ಶೇಷಾನ್ನ ಭೋಜನ ಮಾಡುತಿರ್ಪ
ಕೃಷ್ಣ ಕಂಡು ಮುಂದುವರೆಯೆ

ಮಗದೊಂದು ಗೃಹದಲಿ ಮೂಗು ಹಿಡಿದು
ಮೌನಧಾರಣೆಯಲ್ಲಿರೆ
ಕೃಷ್ಣ ದರ್ಶನ ಮಾಡಿ
ನಂತರದಿ ಸಮೀಪದ ಮಗದೊಂದು ಗೃಹದಲಿ
ಕತ್ತಿವರಸೆಯಾಡುತ ಗುರಾಣಿ ಕತ್ತಿ ಹಿಡಿದು
ಸಮರಾಭ್ಯಾಸದಲ್ಲಿರೆ

ನಾರದ ಮುಂದೆ
ಕೃಷ್ಣ ವಿಪ್ರರೊಡನೆ ವೇದ ಶಾಸ್ತ್ರ
ಪುರಾಣಗಳ ಚರ್ಚೆಯಲಿ ಭಾಗಿಯಾಗಿರೆ
ಮತ್ತೊಂದು ಮನೆಯಲಿ ದಾನಧರ್ಮಗಳಾಚರಣೆ
ಬಲರಾಮನೊಂದಿಗೆ ಲೋಕಕ್ಷೇಮ ವಿಚಾರ
ಹೆಣ್ಣು ಮಕ್ಕಳಿಗೆ ಯೋಗ್ಯ ವರಗಳನ್ನೂ
ಗಂಡು ಮಕ್ಕಳಿಗೆ ಅನುರೂಪ ಕನ್ಯೆಯರನೂ ಹುಡುಕುತ
ಹೀಗ ವಿವಿಧ ಸ್ಥಳಗಳಲಿ ವಿವಿಧ ಸಾಂಸಾರಿಕ ಕಾರ್ಯಗಳಲಿ
ನಿರತನಾಗಿ ಗೃಹಸ್ಥ ಧರ್ಮವ ನಿರ್ವಹಿಸಿಪ ಪರಿಯ ಕಂಡು
ಕೃಷ್ಣನ ಅದ್ಭುತ ಶಕ್ತಿಯ ಮರ್ಮವ ತಿಳಿಯದೆ
ಅವನ ವಿಶ್ವರೂಪವ ಕಂಡು ಧನ್ಯನಾದ ನಾರದ ಮಹರ್ಷಿ

ಕೃಷ್ಣ ತಾನು ಜಗತ್ತಿಗೆ ಬೋಧಿಪ ಮಾರ್ಗವ ತಾನೇ ಆಚರಿಸುತ
ಜಗದ ಸಕಲ ಚರಾಚರ ಶರೀರಗಳಲ್ಲೂ ಅಂತರಾತ್ಮನಾಗಿ
ನಡೆಸುತಿರ್ಪ ಲೀಲಾವಿನೋದಕೆ ಎಣೆಯುಂಟೆ!

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
 https://surahonne.com/?p=45411

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *