ಬೇಸಿಗೆ ರಜಾ ಪ್ರಾರಂಭವಾಗುವುದಕ್ಕೆ ಸರಿಯಾಗಿ ಮಾವಿನ ಹಣ್ಣಿನ ಸೀಸನ್ ಪ್ರಾರಂಭವಾಗುವುತ್ತಿತ್ತು. ನಾನಾ ನಮೂನೆ, ತರಹೇವಾರಿ, ಮಾವಿನ ಹಣ್ಣುಗಳ ರಾಶಿ ನಮ್ಮ ಅಜ್ಜಿ ಮನೆಯಲ್ಲಿ. ನಮ್ಮ ಅಜ್ಜಿಯವರ ಕಟ್ಟೆ ಜಮೀನಿನಲ್ಲಿ ಒಟ್ಟು 12 ಮಾವಿನ ಮರಗಳು, ಗಿಡ್ಡ ಕಪಿಲೆಯಲ್ಲಿ ಒಂದು ಕಸಿ ಮಾವಿನ ಮರ ಇದ್ದವು. ಒಟ್ಟು ಹದಿಮೂರು ಮರಗಳು. ಒಂದು ಕಡೆ ಏಳು ಮಾವಿನ ಮರದ ಪಟ್ಟಿ ಇನ್ನೊಂದು ಕಡೆ ಎರಡು ಮಾವಿನ ಮರ, ಮತ್ತೊಂದು ಕಡೆ ಮೂರು ಮಾವಿನ ಮರಗಳು ಗುಂಪು ಗುಂಪಾಗಿದ್ದವು. ಮೂರು ಮಾವಿನ ಮರಗಳು ದೂರದಿಂದ ನೋಡಿದರೆ ನಮ್ಮ ಬೆಂಗಳೂರಿನ ದೊಡ್ಡ ಆಲದಮರ ನೋಡಿದ ಹಾಗೆ ಅನ್ನಿಸುತ್ತಿತ್ತು. ಮರಗಳ ಎತ್ತರ 30 – 35 ಅಡಿ ಇದ್ದರೂ ಅವುಗಳ ರೆಂಬೆಗಳು ನೆಲದಿಂದ ಎರಡು – ಎರಡುವರೆ ಅಡಿ ಎತ್ತರದಲ್ಲಿರುತ್ತಿದ್ದವು. ಚಿಕ್ಕ ಮಕ್ಕಳಾದರೂ ಮಾವಿನಹಣ್ಣುಗಳು ನಮ್ಮ ಕೈಗೆ ಸಿಗುತ್ತಿದ್ದವು. ದೂರದಿಂದ ನೋಡಿದರೆ ಆ ಮರಗಳಲ್ಲಿ ಎಲೆಗಳಿಗಿಂತ ಕಾಯಿಗಳೇ ಹೆಚ್ಚಾಗಿ ಕಾಣುತ್ತಿದ್ದವು.
ಆ ಮರಗಳಲ್ಲಿ ಒಂದೊಂದು ಮರ, ಒಂದೊಂದು ತಳಿ. ಎಲ್ಲಾ ಸ್ಥಳೀಯ ನಾಟಿ ತಳಿಗಳು. ಅಭಿವೃದ್ಧಿ ಪಡಿಸಿದ ಈಗಿನ ಬಾದಾಮ್, ರತ್ನಗಿರಿ, ರಸಪೂರಿ ಮಲ್ಲಿಕಾ, ಬೈಗನ್ ಪಲ್ಲಿ ತರಹ ಅಲ್ಲ. ಇವೆಲ್ಲ ಕೃಷಿ ವಿಙ್ನಾನಿ ಗಳು ಅಭಿವೃದ್ಧಿ ಪಡಿಸಿದ ತಳಿಗಳು. ಆದರೆ ಇವು ನಾಟಿ ತಳಿಗಳು. ಹೋಳಿಗೆ ಮಾವು, ಸೀಕರಣೆ ಮಾವು, ಉತ್ತತ್ತಿ ಮಾವು, ಕೊಬ್ಬರಿ ಮಾವು, ಕತ್ತೆ ಮಾವು, ಉಪ್ಪಿನ ಕಾಯಿ ಮಾವು, ಕರಿಮಾವು, ಸಜ್ಜಿಟ್ಟಿನ ಮಾವು, ಸಕಲಾತಿ ಮಾವು, ಜೀರಿಗೆ ಮಾವು, ಹೀಗೆ ಒಂದೊಂದು ಮರ ಒಂದೊಂದು ನಮೂನೆ. ತಿನ್ನುವ ವಿಧಾನದಲ್ಲೂ, ರುಚಿಯಲ್ಲೂ, ಉಪಯೋಗದಲ್ಲೂ, ಗಾತ್ರದಲ್ಲೂ, ಬಣ್ಣದಲ್ಲೂ.
ಹೋಳಿಗೆ ಮಾವು ಹೋಳಿಗೆಯಷ್ಟು ಸಿಹಿ,
ಸೀಕರಣೆ ಮಾವಿನ ತಿರುಳು ನಾರಿಲ್ಲದೇ ಸೀಕರಣೆಗೆ ಅತ್ಯಂತ ಸೂಕ್ತವಾಗಿರುತ್ತಿತ್ತು.
ಉತ್ತತ್ತಿ ಮಾವು ಉತ್ತತ್ತಿ ತರಹ ಚಿಕ್ಕ ಹಣ್ಣು,
ಕೊಬ್ಬರಿ ಮಾವು, ಹಣ್ಣಿಗಿಂತಲೂ ಕಾಯಿ ಸಿಹಿಯಾಗಿರುತ್ತಿತ್ತು. ಕಾಯಿಯನ್ನು ಹಾಗೇ ಕಚ್ಚಿ ತಿಂದರೆ ಕೊಬ್ಬರಿ ತಿಂದ ಹಾಗೆ ಆಗುತ್ತಿತ್ತು.
ಕತ್ತೆ ಮಾವು ತಳಿಯ ಹಣ್ಣಿನ ಸಿಪ್ಪೆ ಕತ್ತೆಯ ಚರ್ಮದ ತರಹ ತರ ದಪ್ಪ,
ಉಪ್ಪಿನಕಾಯಿ ಮಾವು ಉಪ್ಪಿನಕಾಯಿ ಹಾಕಲು ಸೂಕ್ತ,
ಜೀರಿಗೆ ಮಾವು ಜೀರಿಗೆ ಯಂತೆ ರುಚಿ.
(ಉಳಿದವುಗಳ ವಿಶೇಷತೆ ಈಗ ನೆನಪಿಲ್ಲ)
ಈ ಹಣ್ಣುಗಳನ್ನು ತಿನ್ನುವ ರೀತಿ ಕೂಡ ವಿಭಿನ್ನ. ಎಲ್ಲಾ ಹಣ್ಣುಗಳನ್ನು ಒಂದೇ ರೀತಿ ತಿನ್ನುತ್ತಿರಲಿಲ್ಲ. ಒಂದು ಹಣ್ಣಿನ ತುದಿಯನ್ನು ಸ್ವಲ್ಪ ಕಚ್ಚಿ ರಂಧ್ರ ಮಾಡಿಕೊಂಡು, ನಂತರ ಹಣ್ಣನ್ನು ಹಿಚುಕಿ,ಹಿಚುಕಿ, ಬಂದ ರಸವನ್ನು ರಂಧ್ರದ ಮೂಲಕ ಹೀರಿ ಹೀರಿ, ಎಲ್ಲಾ ಮುಗಿದ ಮೇಲೆ ರಂಧ್ರದ ಗಾತ್ರ ದೊಡ್ಡದು ಮಾಡಿಕೊಂಡು ವಾಟೆಯನ್ನು ಹೊರಗೆತೆಗೆದು, ನೆಕ್ಕಿ, ನೆಕ್ಕಿ ಅನುಭವಿಸಿ ತಿನ್ನುತ್ತಿದ್ದೆವು. ಇನ್ನೊಂದು ತಳಿ ನಾರು ಇರುತ್ತಿತ್ತು. ಅದನ್ನು ಸಿಪ್ಪೆ ಪೂರ್ತಿ ತೆಗೆದು, ನಾರಿನ ಮೂಲಕ ರಸ ಹೀರಿಕೊಂಡು ತಿನ್ನುತ್ತಿದ್ದೆವು. ಒಂದೊಂದು ತಳಿಗಳೂ ಒಂದೊಂದು ವಿಶೇಷ. ಸೀಕರಣೆ ಮಾವಿನಲ್ಲಿ ನಾರು ಇರುತ್ತಿರಲಿಲ್ಲ ಆದರೆ ಸಿಹಿ ಇರುತ್ತಿತ್ತು ಆದ್ದರಿಂದ ಸೀಕರಣೆ ಮಾಡಿ ಹೋಳಿಗೆ, ಅಂಗರೋಳಿಗೆ ಮಾಡಿಕೊಡುತ್ತಿದ್ದರು.
ಈ ಹಣ್ಣುಗಳನ್ನು ಕೊಯ್ಲು ಮಾಡುವುದಕ್ಕೆ ಮಾವಿನ ಮರ “ಇಳಿಸುವುದು“ ಎನ್ನುತ್ತಿದ್ದರು. ಮಾಗಿದ ಕಾಯಿಗಳು ಹಣ್ಣಾಗಿ ಕೆಳಗೆ ಬೀಳುವ ಮೊದಲೇ, ಆಳುಗಳು ಮರ ಏರಿ, ಕೆಳಗೆ ಅಗಲವಾಗಿ ಹಿಡಿದ ಗೋಣಿಚೀಲದಲ್ಲಿ ಹಾಕುತ್ತಿದ್ದರು. ನೆಲದ ಮೇಲೆ ಬಿದ್ದರೆ ಕಾಯಿಗೆ/ ಹಣ್ಣಿಗೆ ಏಟಾಗಿ ಹಾಳಾಗುವ ಸಂಭವ ಇರುತ್ತಿತ್ತು. . ಈ ರೀತಿ ಇಳಿಸಿದ ಮಾವಿನ ಹಣ್ಣು/ ಕಾಯಿಗಳನ್ನು ಮನೆಗೆ ತಂದು, ಹಿಂದಲ ಮನೆಯ ಕೊನೆಯ ಮೂಲೆಗೆ ನಮ್ಮ ದೊಡ್ಡಮ್ಮ ನೆಲ್ಲು ಹುಲ್ಲಿನ ಹಾಸಿಗೆ ಮಾಡಿ ಅದರ ಮೇಲೆ ಒಂದಕ್ಕೊಂದು ತಗಲದಂತೆ ಇಡುತ್ತಿದ್ದರು. ಮತ್ತೆ ಅವುಗಳ ಮೇಲೆ ಹುಲ್ಲು ಮುಚ್ಚಿ ಇಡುತ್ತಿದ್ದರು. ಇದಕ್ಕೆ “ಮಾಗಿ“ ಹಾಕುವುದು ಎನ್ನುತ್ತಿದ್ದರು. ಹೀಗೆ ಮಾಗಿ ಹಾಕಿದ ಕಾಯಿಗಳು ಸ್ವಲ್ಪ ದಿನದಲ್ಲಿ ಅಂದರೆ ಐದರಿಂದ ಏಳು ದಿನದಲ್ಲಿ ಹಣ್ಣಾಗುತ್ತಿದ್ದವು. ಹಣ್ಣು ಆದ ಆದ ಹಾಗೆ ಬುಟ್ಟಿಯಲ್ಲಿ ತುಂಬಿಕೊಂಡು ಹೊರಗೆ ತರುತ್ತಿದ್ದರು. ನಾವೆಲ್ಲ ರಜೆಗೆ ಹೋದ ಹುಡುಗರೆಲ್ಲ, ದೊಡ್ಡವರು, ಚಿಕ್ಕವರು, ಎಲ್ಲರೂ ಬುಟ್ಟಿಗಳು ಖಾಲಿಯಾಗುವ ತನಕ ತಿಂದು, ತಿಂದು, ದನ ಕಟ್ಟುವ “ದೆನೆಕೆ“ ಯಲ್ಲಿ ಹಾಕುತ್ತಿದ್ದೆವು. ತಿನ್ನೋದೆಲ್ಲ ಮುಗಿದ ಮೇಲೆ ಯಾರಾದರೂ ದೊಡ್ಡವರು ಅದನ್ನೆಲ್ಲ ಸ್ವಚ್ಛ ಮಾಡುತ್ತಿದ್ದರು. ಇದಲ್ಲದೆ ಹೋಳಿಗೆ ಸೀಕರಣೆಯ ಸಮಾರಾಧನೆ ಆಗುತ್ತಿತ್ತು. ಅವರಿಗೆ ಇವರಿಗೆ ಹಂಚುವುದು, ನೆಂಟರಿಷ್ಟರಿಗೆ ಕಳುಹಿಸುವುದು ಮಾಡುತ್ತಿದ್ದರು. ನಮ್ಮ ಅಜ್ಜಿಯವರು ಮಾವಿನ ಹಣ್ಣುಗಳನ್ನು ಮಾರಿದ್ದು ನಮಗೆ ನೆನಪೇ ಇಲ್ಲ.
ಆದರೂ ಒಮ್ಮೆ ಒಂದು ಬುಟ್ಟಿಯಲ್ಲಿ ಸುಮಾರು 25 ಹಣ್ಣುಗಳನ್ನು ಇಟ್ಟು 5 ಪೈಸೆಗೆ ಒಂದರಂತೆ ಮಾರಿಕೊಂಡು ಬರಲು ನನ್ನನ್ನು, ನನ್ನ ತಂಗಿಯನ್ನು ಕಳುಹಿಸಿದರು. ನಾವು ಅಷ್ಟು ದೂರ ಹೋಗುತ್ತಿದ್ದಂತೆ ಪೋಸ್ಟ್ ಗೌರಮ್ಮ ಸಣ್ಣಿ, ಕರೆದು ಕೇಳಿದಾಗ ನಾವು 5 ಪೈಸೆಗೆ ಒಂದು ಎಂದು ತಿಳಿಸಿದರೆ, ಅವರು ಇಡೀ ಬುಟ್ಟಿಯನ್ನು ಇಟ್ಟುಕೊಂಡು 25 ಪೈಸೆ ಕೊಟ್ಟು ಕಳುಹಿಸಿಬಿಟ್ಟರು. ಇದನ್ನು ನೋಡಿ ನಮ್ಮ ದೊಡ್ಡಮ್ಮ, ಈ ರೀತಿ ವ್ಯಾಪಾರ ಮಾಡುವುದಕ್ಕಿಂತ ಸುಮ್ಮನೆ ಮನೆಯಲ್ಲಿ ತಿನ್ನೋದು ಮೇಲು, ಎಂದು ಮತ್ತೆ ಹಣ್ಣು ಮಾರುವ ಗೋಜಿಗೆ ಹೋಗಲಿಲ್ಲ.
ಮತ್ತೊಮ್ಮೆ ನಮ್ಮಣ್ಣ ಮೆತ್ತಗೆ ಹಿಂದಲ ಮನೆಗೆ ಕಳ್ಳತನದಲ್ಲಿ, ಹೋಗಿ 8 – 10 ಮಾವಿನ ಹಣ್ಣುಗಳನ್ನು ಪಂಚೆಯಲ್ಲಿ ಇಟ್ಟುಕೊಂಡು, ಪಂಚೆ ಮೇಲೆ ಕಟ್ಟಿಕೊಂಡು, ಮೆತ್ತಗೆ ಮಾಳಿಗೆ ಮೇಲೆ ಹೋಗಿ ಹಣ್ಣನೆಲ್ಲಾ ತಿಂದು ಏನೂ ಗೊತ್ತಿಲ್ಲದವರಂತೆ ವಾಪಸು ಬರುತ್ತಿದ್ದರು. ಒಮ್ಮೆ ನಮ್ಮ ಪತ್ತೆದಾರಿ ಕಣ್ಣಿಗೆ ಸಿಕ್ಕಿ ಹಾಕಿಕೊಂಡು, ನಾವು ಅವರನ್ನು ಹಿಂಬಾಲಿಸಿದಾಗ ಯಾರಿಗೂ ಹೇಳಬೇಡ್ರೋ ಅಂತ ನಮಗೂ ಒಂದೊಂದು ಹಣ್ಣು ಲಂಚ ಕೊಟ್ಟಿದ್ದರು.
ಇನ್ನೊಮ್ಮೆ ನಾವು ಅಣ್ಣನವರ ಜೊತೆ ಕಟ್ಟೆ ಜಮೀನಿನಲ್ಲಿ ,ಬಾವಿಯಲ್ಲಿ ಈಜಾಡಿಕೊಂಡು, ಹಸಿ ಬಟ್ಟೆಗಳನ್ನು ತಲೆಯ ಮೇಲೆ ಹಾಕಿಕೊಂಡು, ಬರುತ್ತಾ ಇದ್ದೆವು. ಮೂರು ಮಾವಿನ ಮರದ ಪಟ್ಟಿಯ ಬಳಿ ಬಂದಾಗ, ಮಾವಿನ ಮರದ ಕೆಳಗೆ ನೆಲದ ಮೇಲೆ ಮಣ್ಣಿನ ಅಡಿಯಲ್ಲಿ ಮಾವಿನಹಣ್ಣಿನ ಸಿಪ್ಪೆ ಕಂಡ ಹಾಗಾಯಿತು. ಕುತೂಹಲದಿಂದ ಕಾಲಿನಲ್ಲಿ ಹಾಗೇ ಸವರಿದರೆ, ಅದು ಸಿಪ್ಪೆ ಯಾಗಿರದೇ ಪೂರ್ತಿ ಹಣ್ಣೇ ಆಗಿತ್ತು. ಹಾಗೇ ತೆಗೆಯುತ್ತಾ ಹೋದರೆ ಸುಮಾರು 20 ರಿಂದ 25 ಹಣ್ಣುಗಳು ಸಿಕ್ಕವು. ಯಾರೋ ಹಣ್ಣು ಕದ್ದು, ಅಲ್ಲಿ ಮುಚ್ಚಿಟ್ಟಿದ್ದು, ನಮಗೆ ಸಿಕ್ಕಿತು. ಹಾಗೇ ಹಣ್ಣುಗಳನ್ನು ತೆಗೆದುಕೊಂಡು ವಾಪಸ್ ಬಾವಿಯ ಬಳಿಗೆ ಹಿಂದಕ್ಕೆ ಹೋಗಿ, ಆ ಹಣ್ಣುಗಳನ್ನೆಲ್ಲಾ ತಿಂದು ಕೈಬಾಯಿ ತೊಳೆದುಕೊಂಡು, ಏನೂ ಗೊತ್ತಿಲ್ಲದವರ ಹಾಗೆ ಮನೆಗೆ ಹೋದೆವು. ಹೀಗೆ ಮಾವಿನ ಹಣ್ಣುಗಳ ಜೊತೆ ನಾವು ಆಡದ ಆಟ ಇರಲಿಲ್ಲ.
ಆದರೆ ಬರ ಬರುತ್ತಾ, ನಾವು ದೊಡ್ಡವರಾದಂತೆಲ್ಲಾ ಈ ಎಲ್ಲಾ ಮರಗಳೂ ಹಳೆಯದಾಗುತ್ತಾ ಬಂದು, ಮಳೆ ಬೆಳೆ ಕಡಿಮೆಯಾಗಿ, ಕಾಯಿ ಕಚ್ಚೋದು ಕಡಿಮೆಯಾಗಿ, ಜೋನಿ ಎನ್ನುವ ಕೀಟ ಭಾದೆಯಿಂದ, ಇಳುವರಿ ಇಲ್ಲದೆ, ಮರಗಳು ಬರಡಾದವು. ಇತ್ತೀಚೆಗೆ ಈ ಎಲ್ಲಾ 12 ಮರಗಳನ್ನು ಕಡಿದು ಸೌದೆಯಾಗಿ ಮಾರಿಬಿಟ್ಟರು. ಈಗ ಆ ಕಟ್ಟೆಯ ಜಮೀನಿಗೆ ಹೋದರೆ ಒಂದೇ ಒಂದು ಮಾವಿನ ಮರವಿಲ್ಲ. ಹಳೆಯದೆಲ್ಲ ನೆನಪಿಗೆ ಬಂದು ಕಣ್ಣು ತೇವವಾಗುತ್ತದೆ.

ಟಿ ವಿ ಬಿ ರಾಜನ್, ಬೆಂಗಳೂರು



Yes very well narrated, I was also 12 yrs old when enjoyed the village mangoes at the same orchard. The article took me about 60 years back of the childhood enjoyment. Thanks
ನಿಮ್ಮ ಮಾವಿನಹಣ್ಣಿನ ಭಂಡಾರ ಲೇಖನದಲ್ಲಿ ಅನುಭವದ ಸವಿ ನೆನಪು ನಮ್ಮ ನ್ನು ಬಾಲ್ಯ ಕ್ಕೆ ಕರದೊಯ್ಯತು ಸಾರ್..ಪ್ರವಾಸ ಕಥನ ದ ಬರೆಹಕ್ಕುಂತ ನಿಮ್ಮ ಅನುಭವದ ಕಥನದ ಬರೆಹ ಸೊಗಸಾಗಿ ಬರುತ್ತಿದೆ… ಅನ್ಯಥಾ ಭಾವಿಸಬೇಡಿ ನನ್ನ ಅನಿಸಿಕೆ.. ಸಾರ್
ಮಾವಿನ ಹಣ್ಣಿನಂತೆ ಸವಿಸುವಿಯಾದ ಬರಹ
ವಂದನೆಗಳು
ಅತ್ಯುತ್ತಮವಾಗಿ ಮೂಡಿ ಬಂದಿದೆ ಮಾವಿನಹಣ್ಣು ತಿಂದಷ್ಟೇ ಸವಿದಷ್ಟೇ ರಸವತ್ತಾಗಿದೆ
Excellent narration by Mr Rajan. I liked the way it is written in simple Kannada . The aroma of ripening mangos is felt all over the article.
It’s a known fact ,my wife read it out to me
We both enjoyed your wonderful write-up.
Thanks for taking us to our younger days.
Golden days indeed.
ನೆನಪುಗಳ ಸವಿ ಮಧುರ, ಅತಿ ಮಧುರ. ಅದರಲ್ಲೂ,60 ರನಂತರ ಬಹುತೇಕರು ಅವರ ಬಾಲ್ಯದ ನೆನಪಿನಂಗಳಕ್ಕೆ ಹೋಗುತ್ತೇವೆ.
ಬಾಲ್ಯದಲ್ಲಿ,ಮರದಿಂದ ಕದ್ದು ಕಿತ್ತುಕೊಂಡು ಸವಿಯುವ ಆನಂದವೇ ಬೇರೆ..ನಿಮ್ಮ ಬರವಣಿಗೆ ನನ್ನನ್ನೂ ಭಾಲ್ಯದ ದಿನಗಳಿಗೆ ಕರೆದೊಯ್ತು..
ನಾವು ಗೆಳತಿಯರ ರಜೆ ಬಂತೆಂದರೆ ಸಾಕು,ಎಲ್ಲರ ಮನೆಯ ಸೀಬೆ,ಮಾವು,ಹಲಸು,ನೇರಳೆ ,ಕಿರು ನೆಲ್ಲಿಕಾಯಿ ಮರಗಳಿಗೆ ಲಗ್ಗೆ ಹಾಕುವುದೇ ಒಂದು ಸಂಭ್ರಮ..ಉಪ್ಪು ಕಾರ ಹಚ್ಚಿ,ಕಣ್ಣಲ್ಲಿ ನೀರು ಬರಸಿಕೊಂಡು ತಿನ್ನುವ ಖುಷಿ ಇಂದಿನ ಮಕ್ಕಳಿಗೆ ತಿಳಿದೇ ಇಲ್ಲ..
ಸರ್,ತಮ್ಮ ನೆನಪುಗಳ ಬುತ್ತಿ,ಸುಂದರ ವಾಗಿದೆ.ಅದರ ಪ್ರೇರಣೆಯೇ ನನ್ನನ್ನು ಇಷ್ಟು ಬರೆಯುವಂತೆ ಮಾಡಿತು. ಧನ್ಯವಾದ ಗಳು.ನಿಮ್ಮ ಮೇಡಂಗೂ ವಂದನೆ ಗಳು.
ಸವಿಯಾದ ನೆನಪುಗಳು
ಬಾಲ್ಯದಲ್ಲಿ ಅನುಭವಿಸಿದ ಮಾವಿನ ಒಡನಾಟದ ರಸಭರಿತ ವರ್ಣನೆ..
ಚಂದದ ಲೇಖನ.
ನೆನಪಿನ ದೋಣಿ..ಚೆಂದದ ಬರಹ.
ಓದುಗರನ್ನು ತಮ್ಮ ಬಾಲ್ಯದತ್ತ ಒಯ್ದ ಬರೆಹವು ಮಾವಿನ ಹಣ್ಣಿನಷ್ಟೇ ಮಧುರವಾಗಿದೆ!
ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದಗಳು