ಕಾದಂಬರಿ

ಕನಸೊಂದು ಶುರುವಾಗಿದೆ: ಪುಟ 24

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸೆಕೆಂಡ್ ಸೆಮಿಸ್ಟರ್ ಪರೀಕ್ಷೆಗಳು ಮುಗಿದವು. ಎಲ್ಲರೂ ಊರಿಗೆ ಹೊರಟರು.
“ನೀನು ಊರಿಗೆ ಹೋದರೆ ತುಂಬಾ ಬೇಜಾರಾಗತ್ತೆ ವರು.”
“ನಿಮ್ಮ ಮಗ-ಸೊಸೆ ಬರ‍್ತಿದ್ದಾರಲ್ಲಾ ನಿಮ್ಮ ಬೇಜಾರು ಕಳೆಯುವುದಕ್ಕೆ.”
“ಅದೇ ಸಮಾಧಾನದ ವಿಚಾರ . ಸಂಧ್ಯಾನೂ ಬರ‍್ತಿದ್ದಾಳಂತೆ. ನೀನು ರಾಗಿಣೀನ್ನ ನೋಡುವುದಕ್ಕೆ ಬರಲ್ವಾ?”
“ಬೆಳಿಗ್ಗೆ ಬಂದು ಸಾಯಂಕಾಲ ವಾಪಸ್ಸಾಗ್ತೀನಿ. ಅಮ್ಮನ ಫ್ರೆಂಡ್ ಮನೆಯವರು ದುಬೈನಿಂದ ಬರ‍್ತಿದ್ದಾರೆ.”
“ಓ ನೀಲಾಂಬಿಕೇಂತ ಹೇಳ್ತಿದ್ದೆಯಲ್ಲಾ ಅವರಾ?”
“ಹೌದು ಆಂಟಿ. ಇದುವರೆಗೂ ನಾನವರನ್ನು ಭೇಟಿ ಮಾಡೇ ಇಲ್ಲ. ಈಗ ರಜ ಇರುವಾಗ ನಾನು ಮೀಟ್ ಮಾಡಲೇಬೇಕು.”
“ನಿಜ. ಅವರು ನಿಮ್ಮ ಕುಟುಂಬದ ಬಗ್ಗೆ ತುಂಬಾ ಪ್ರೀತಿ ಇಟ್ಟುಕೊಂಡಿರುವಾಗ ನೀನು ಏನೂ ಕಾರಣ ಹೇಳಕ್ಕಾಗಲ್ಲ….”

“ನಾನು ನಾಳೆ ಬೆಳಿಗ್ಗೆ ಹೊರಡ್ತೀನಿ ಆಂಟಿ.”
“ಆರ್.ಜಿ.ಗೆ ಹೇಳಿದ್ದೀಯಾ?”
“ಅವರನ್ನು ಮೀಟ್ ಮಾಡಿ 2 ವಾರವಾಯ್ತು.”
“ಹಾಗಾದರೆ ಆರ್.ಜಿ. ಪರೀಕ್ಷೆಗೆ ಬಂದಿರಲಿಲ್ವಾ?”
“ಬಂದಿದ್ದರು. ಆದರೆ ಸರಿಯಾದ ಟೈಂಗೆ ಬಂದು ಹತ್ತು ನಿಮಿಷಾನೂ ಯಾರಿಗೂ ಕಾಯದೆ ಹೊರಟುಬಿಡ್ತಾರೆ.”
“ನೀನು ಕಾಲ್ ಮಾಡಬೇಕಿತ್ತು.”
“ಪರೀಕ್ಷೆ ಟೈಂನಲ್ಲಿ ಡಿಸ್ಟರ್ಬ್ ಮಾಡಕ್ಕೆ ಇಷ್ಟವಾಗಲಿಲ್ಲ.”
“ಹೋಗಲಿ ಈಗ ಕಾಲ್ ಮಾಡು.”
ವರು ಆರ್.ಜಿ.ಗೆ ಕಾಲ್ ಮಾಡಿದಳು.
“ಏನ್ರಿ ಅಪರೂಪಕ್ಕೆ ಕಾಲ್ ಮಾಡ್ತಿದ್ದೀರಾ?”
“ಪರೀಕ್ಷೆ ಇತ್ತಲ್ವಾ?………”
“ಬ್ಯುಸಿ ಇದ್ರಿ ಅಲ್ವಾ?”
“ನನಗಿಂತ ನೀವೇ ಬ್ಯುಸಿ ಇದ್ರಿ ಅನ್ನಿಸ್ತು. ಹೇಗೆ ಮಾಡಿದ್ದೀರಾಂತ ಕೇಳುವುದಕ್ಕೂ ಸಿಗಲಿಲ್ಲ.”
“ನಾನು ಮಾಮೂಲಾಗಿ ಮಾಡಿದ್ದೀನಿ. ರ‍್ಯಾಂಕ್‌ ಗೀಂಕ್ ನಿಮ್ಮಂತಹ ಕುಡುಮಿಗಳಿಗೆ ಬಿಟ್ಟುಬಿಟ್ಟಿದ್ದೀನಿ.”
“ನೋಡೋಣ ಯಾರು ರ‍್ಯಾಂಕ್ ಬರ‍್ತಾರೇಂತ, ನಾನು ನಾಳೆ ಊರಿಗೆ ಹೊರಟಿದ್ದೇನೆ.”
“ಸಾಯಂಕಾಲ ಬರ‍್ತೀನಿ.”

ಸಾಯಂಕಾಲ ಏಳು ಗಂಟೆಗೆ ಬಂದ ಆರ್.ಜಿ.
“ಓದು ಜೋರಾ? ತುಂಬಾ ಸೊರಗಿದ್ದೀಯ………”
“ಓದಿನ ಕಾರಣದಿಂದಾನೇ ಸೊರಗುತ್ತಾರಾ? ಬೇರೆ ಕಾರಣಗಳೂ ಇರಬಹುದಲ್ವಾ?”
“ಬೇರೆ ಏನು ಕಾರಣವಿರಲು ಸಾಧ್ಯ?”
“ನೀವೇ ಊಹಿಸಿ.”
ಅಷ್ಟರಲ್ಲಿ ವರು ಕಾಫಿ ತಂದಳು.
“ಯಾಕ್ರಿ ಬರೀ ಕಾಫಿ ರ‍್ತಿದ್ದೀರಾ?’
“ರಾತ್ರಿ ಊಟ ಮಾಡಿಕೊಂಡು ಹೋಗಬೇಕಲ್ಲಾ?”
“ವರು ಆರ್.ಜಿ. ತುಂಬಾ ಸೊರಗಿದ್ದಾನಲ್ವಾ?”
ವರು ಉತ್ತರ ಕೊಡಲಿಲ್ಲ.
“ಯಾಕೇಂತ ಕೇಳಿದರೆ ಉತ್ತರ ಕೊಡುತ್ತಿಲ್ಲ.”
“ಲವ್ ಬ್ರೇಕಪ್ ಆಂಟಿ.”
“ಯಾರಪ್ಪಾ ಆ ಲಕ್ಕಿ ಫೆಲೋ?”
“ಯಾರೋ ಒಬ್ಬರು ಬಿಡಿ.”
“ಆ ಹುಡುಗಿ ನಿನ್ನಂತಹವನನ್ನು ಸಾರಾಸಗಟಾಗಿ ತಿರಸ್ಕರಿಸಿದಳಾ? ಮೊದಲು ಲವ್ ಮಾಡ್ತಿದೀನೀಂತ ಹೇಳಿದ್ದಳಾ? ಯಾರವಳು ತಿಳಿಸಿ……..”
“ಕೂಲ್ ಆಂಟಿ. ನಾನು ಆ ಹುಡುಗೀನ್ನ ತುಂಬಾ ಇಷ್ಟಪಡ್ತೀನಿ. ಅವಳನ್ನು ನೋಡುವುದಕ್ಕೇ ಇಲ್ಲದ ನೆಪ ಮಾಡಿಕೊಂಡು ಹೋಗ್ತಿದ್ದೆ. ಅವಳಿಗೆ ಆ ವಿಚಾರ ಗೊತ್ತಿದ್ರೂ ನಿರ್ಲಿಪ್ತಳಾಗಿದ್ದಳು. ನನಗೂ ರೋಸಿ ಹೋಗಿ ಆ ಹುಡುಗೀನ್ನ ನೋಡೋದು, ಮಾತಾಡಿಸೋದು ಬಿಟ್ಟೆ.”
“ಸರಿ ಆಮೇಲೇನು?”
“ಆ ಹುಡುಗಿ ‘ನೀವು ಯಾಕೆ ನನ್ನ ಮೀಟ್ ಮಾಡಲು ಬರ‍್ತಿಲ್ಲ. ಯಾಕೆ ಮಾತಾಡ್ತಿಲ್ಲಾಂತ ಕೇಳಿಲ್ಲ. ಇನ್ನೂ ನಿರ್ಲಿಪ್ತವಾಗಿದ್ದಾಳೆ. ನಂಗೆ ತುಂಬಾ ಬೇಜಾರಾಗಿದೆ ಆಂಟಿ.”
“ನೀನು ಆ ಹುಡುಗಿಗೆ ‘ಐ ಲವ್ ಯೂ’ ಅಂತ ಹೇಳಿದ್ದೆಯಾ?”
“ಇಲ್ಲ.”
“ಆ ಹುಡುಗಿ ‘ಐ ಲವ್ ಯೂ’ ಹೇಳಿದ್ದಾಳಾ?”
“ಇಲ್ಲ ಆಂಟಿ.”
“ಮತ್ತೆ ಲವ್ವೇ ಇಲ್ಲ. ಬ್ರೇಕಪ್ ಹೇಗಾಯ್ತು?”
ರಾತ್ರಿ ಊಟಕ್ಕೆಂದು ಟೊಮ್ಯಾಟೋ ಉಪ್ಪಿನಕಾಯಿ ಮಾಡುತ್ತಿದ್ದ ವಾರುಣಿ ಉಕ್ಕಿ ಬಂದ ನಗೆ ತಡೆದಳು. ಆರ್.ಜಿ. ಆಂಟೀನ್ನ ಏಮಾರಿಸುವುದಕ್ಕೆ ಏನೋ ಕಥೆ ಹೇಳಿದರೆ ಆಂಟಿ ಈ ರೀತಿ ಹೇಳುವುದಾ?” ಎನ್ನಿಸಿತು.

ಕೃಷ್ಣ ರಾತ್ರಿ ಊಟ ಕಳುಹಿಸಿದ್ದರು. ಪೂರಿ, ಸಾಗು, ಅನ್ನ, ಸಾರು, ಮೊಸರನ್ನ, ಉಪ್ಪಿನಕಾಯಿ. ಊಟ ರುಚಿಯಾಗಿತ್ತು. ಆರ್.ಜಿ. ಖುಷಿಯಿಂದ ಊಟ ಮಾಡಿದ.
“ಆಂಟಿ ನಾನು ನಾಳೆ ಊರಿಗೆ ಹೋಗ್ತಿದ್ದೇನೆ.”
“ನೇರವಾಗಿ ನಿಮ್ಮ ಊರಿಗಾ?”
“ಇಲ್ಲ ಆಂಟಿ. ಬೆಂಗಳೂರಿಗೆ ಹೋಗಿ ಅಲ್ಲಿ ಕೊಂಚ ಕೆಲಸವಿದೆ. ಅದನ್ನು ಮುಗಿಸಿಕೊಂಡು ಹೋಗ್ತೀನಿ.”
“ನಿನ್ನ ರಥದಲ್ಲಿ ಹೋಗ್ತಿದ್ದೀಯಾ?”
“ಹೌದು ಆಂಟಿ”
“ಹಾಗಾದರೆ ವರೂನ್ನ ಕರೆದುಕೊಂಡು ಹೋಗಿ ಮನೆಗೆ ಬಿಡು. ಲಗೇಜ್ ಹೊತ್ತುಕೊಂಡು ರೈಲ್‌ನಲ್ಲಿ ಹೊರಟಿದ್ದಾಳೆ.”
“ರಾಜಮಾತೆಯವರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತೇನೆ. ಆದರೆ ತಮ್ಮ ರಾಜಕುಮಾರಿ ನನ್ನ ಜೊತೆ ಆಗಮಿಸುತ್ತಾರೆಯೆ?”
“ಖಂಡಿತಾ ಆಗಮಿಸುತ್ತಾರೆ. ಏನು ಹೇಳುವೆ ರಾಜಕುಮಾರಿ?”
“ಮುಂದಿನ ವರ್ಷ ಕನ್ನಡ ಎಂ.ಎ.ಗೆ ಇಬ್ಬರು ವಿದ್ಯಾರ್ಥಿಗಳು ಸಿಕ್ಕಿದರೂಂತ ಸಂತೋಷ ಪಡ್ತಿದ್ದೀನಿ.”
ಇಬ್ಬರೂ ಜೋರಾಗಿ ನಕ್ಕರು.

“ಬೆಳಿಗ್ಗೆ 10 ಗಂಟೆಗೆ ಕಾರು ತರ‍್ತೀನಿ. ರೆಡಿಯಾಗಿರಿ.”
ಆಗಲಿ ರೆಡಿಯಾಗರ‍್ತೀನಿ.
ಮರುದಿನ ಹತ್ತುಗಂಟೆಗೆ ಇಬ್ಬರೂ ಹೊರಟರು. ದಾರಿಯಲ್ಲಿ ಎಳನೀರು ಕುಡಿದರು.
“ವಾರುಣಿ ನಿಮ್ಮ ಮನೆಯಲ್ಲಿ ಯಾರ‍್ಯಾರಿದ್ದೀರಿ?”
“ನಿಜವಾಗಿ ನಿಮಗೆ ಗೊತ್ತಿಲ್ವಾ?”
“ಗೊತ್ತಿದ್ದು ಕೇಳಲು ನನಗೆ ಹುಚ್ಚಾ?”
“ಸಾರಿ. ಆಂಟಿ ನಿಮಗೆ ಹೇಳಿರಬಹುದೂಂತ ಭಾವಿಸಿದ್ದೆ.”
“ಏನೋ ಅಲ್ಪಸ್ವಲ್ಪ ಗೊತ್ತು.”
ವಾರುಣಿ ಸಂಕ್ಷಿಪ್ತವಾಗಿ ತಮ್ಮ ಕುಟುಂಬದ ಬಗ್ಗೆ ಹೇಳಿದಳು.
“ನನಗೆ ನಮ್ಮ ತಂದೆ-ತಾಯಿ ಒಂದು ಚಕ್ರವ್ಯೂಹದಲ್ಲಿ ಸಿಕ್ಕಿದ್ದಾರೆ ಅನ್ನಿಸುತ್ತಿದೆ. ಬೆಂಗಳೂರು ಬಿಟ್ಟರೆ ಈ ಸಮಸ್ಯೆ ಪರಿಹಾರವಾಗಬಹುದು ಅನ್ನುವ ಆಸೆ. ನೋಡೋಣ ಏನಾಗತ್ತೆ.”
“ಈ ಪರಿಸ್ಥಿತಿಯಲ್ಲಿ ನಿಮ್ಮ ತಂಗಿ ಮದುವೆ ಮಾಡಕ್ಕೆ ಹೊರಟಿದ್ರಾ?”
“ನಿಮಗೆ ಯಾರು ಹೇಳಿದರು?”
“ಆಂಟಿ ಹೇಳಿದ್ರು. ವರು ತಂಗಿಗೆ ಒಂದು ಪ್ರಪೋಸಲ್ ಬಂದಿತ್ತು. ಹುಡುಗ ಸರಿಯಾಗಿ ಸೆಟ್ಲ್ ಆಗಿಲ್ಲ. ಬೇಡಾಂತ ಮನೆಯವರು ತೀರ್ಮಾನ ಮಾಡಿದರೂಂತ. ನಿಮ್ಮ ತಂಗಿ ನಿಮಗಿಂತ ಮೊದಲು ಮದುವೆಯಾಗಲು ಸಿದ್ಧರಾಗಿದ್ದಾರಾ?”
“ಅವಳಿಗೆ ಓದಿನಲ್ಲಿ ಆಸಕ್ತಿಯಿಲ್ಲ. ಕೆಲಸ ಮಾಡುವುದಕ್ಕೂ ಇಷ್ಟವಿಲ್ಲ. ಮನೆಕೆಲಸ ಮಾಡ್ತಾಳೆ. ತುಂಬು ಕುಟುಂಬದಲ್ಲಿ ಬೆಳೆದಿರುವುದರಿಂದ ಹೊಂದಿಕೊAಡು ಹೋಗ್ತಾಳೇಂತ ಭಾವಿಸಿದ್ದೇನೆ. ಆದರೆ ನನ್ನ ಅನಿಸಿಕೆ ನಿಜವಾಗುತ್ತದೋ ಸುಳ್ಳಾಗುತ್ತದೋ ಗೊತ್ತಿಲ್ಲ.”
“ಯೋಚನೆ ಮಾಡಬೇಡಿ. ಒಳ್ಳೆಯವರಿಗೆ ಖಂಡಿತಾ ಒಳ್ಳೆಯದಾಗುತ್ತದೆ. ತಾಳ್ಮೆಯಿರಬೇಕಷ್ಟೆ.”
ಅವಳು ಮಾತನಾಡದೆ ನಕ್ಕಳು.

“ನಾಲ್ಕು ದಿನ ಆಂಟಿ ಜೊತೆ ಇರಬಾರದಿತ್ತಾ? ರಜ ಬಂದ ತಕ್ಷಣ ಹೊರಡುವುದಾ?”
ವರು ಅವನಿಗೆ ನೀಲಾಂಬಿಕೆ ಕುಟುಂಬದ ಬಗ್ಗೆ ಹೇಳಿದಳು.
“ನಮಗೆ ಅವರು ತುಂಬಾ ಸಹಾಯ ಮಾಡಿದ್ದಾರೆ. ನಾನು ಅವರ ಮನೆ ಮದುವೆಗೂ ಹೋಗಲಿಲ್ಲ. ಈಗ ಅವರು ಬಂದಾಗ ನಾನು ಇರದಿದ್ದರೆ ಚೆನ್ನಾಗಿರಲ್ಲ ಅಲ್ವಾ?”
“ನೀವಿರುವ ಮನೆ ತುಂಬಾ ಚೆನ್ನಾಗಿದೆಯಂತೆ……”
“ಹಳೆಯ ಕಾಲದ ಮನೆ. ತುಂಬಾ ದೊಡ್ಡದಾಗಿದೆ. ಅಲ್ಲೇ ಬೆಳೆದಿರುವುದರಿಂದ ಒಂದು ರೀತಿಯ ಅಟ್ಯಾಚ್‌ಮೆಂಟ್.”
“ನಿಮ್ಮನ್ನು ಮನೆಯವರೆಗೆ ಡ್ರಾಪ್ ಮಾಡ್ತೀನಿ ಬೇಡ ಅನ್ನಬೇಡಿ.”
ಅವಳು ‘ಆಗಲಿ’ ಎಂದಳು. ತಕ್ಷಣ ತಾಯಿಗೆ ಆರ್.ಜಿ. ಊಟಕ್ಕೆ ಬರುವ ವಿಚಾರ ಮೆಸೇಜ್ ಮಾಡಿ ತಿಳಿಸಿದಳು.

ಅವರು ಮನೆಯ ಮುಂದೆ ಇಳಿದಾಗ ಎಲ್ಲರೂ ಮನೆಯಲ್ಲಿದ್ದರು. ಆ ದಿನ ಯಾವುದೋ ಜನರಲ್ ಹಾಲಿಡೆ, ಯಾರಿಗೂ ಆರ್.ಜಿ. ಅಪರಿಚಿತನಾಗಿರಲಿಲ್ಲ. ನಾಗರಾಜನ ಮದುವೆಯಲ್ಲಿ ಚಂದ್ರಾವತಿ ಜೊತೆ ಬಂದಿದ್ದನ್ನು ನೋಡಿದ್ದರು. ಶ್ರೀನಿವಾಸರಾವ್ ಹೊರಗೆ ಬಂದು ಸ್ವಾಗತಿಸಿದರು.
“ನಾನು ಬೆಂಗಳೂರಿಗೆ ಯಾವುದೋ ಕೆಲಸದ ಮೇಲೆ ಹೊರಟಿದ್ದೆ. ಆಂಟಿ ವಾರುಣಿಯನ್ನು ಡ್ರಾಪ್ ಮಾಡಲು ಹೇಳಿದರು.”
“ಒಳ್ಳೆಯದಾಯಿತು. ಈ ನೆಪದಾಲ್ಲಾದರೂ ನೀವು ಮನೆಗೆ ಬರುವಂತಾಯಿತಲ್ಲಾ ತುಂಬಾ ಸಂತೋಷ.”
ವಾರುಣಿ ಚಿಕ್ಕಪ್ಪಂದಿರು ಬಂದರು. ದೇವಕಿ ಅವಳ ಗಂಡ ಮನೆಯಲ್ಲಿರಲಿಲ್ಲ. ಶರಣ್ಯ ಓಡಿ ಬಂದು ವರುವನ್ನು ಅಪ್ಪಿಕೊಂಡಳು. “ಅಕ್ಕ ನೀನು ಎಲ್ಲೂ ಹೋಗಬೇಡ……”
“ಆಯ್ತು ಪುಟ್ಟ ಇಲ್ಲೇ ಇರ‍್ತೀನಿ.”
“ಅಕ್ಕಾ ನಾನು ಚೆಸ್ ತೊಗೊಂಡಿದ್ದೀನಿ. ನೀನು ನನ್ನ ಜೊತೆ ಚೆಸ್ ಆಡಬೇಕು” ಅಲೋಕ ಬಂದು ಹೇಳಿದ. ಅವನ ಕೈಯಲ್ಲಿ ಚೆಸ್ ಇದ್ದ ಬಾಕ್ಸ್ ಇತ್ತು.
“ಈಗ ಆಡಕ್ಕಾಗಲ್ಲ. ಸಾಯಂಕಾಲ ಆಡೋಣ. ನೀನು ಜಾಣ ಅಲ್ವಾ?”
“ಆಗಲಿ ಅಕ್ಕ. ಇರ‍್ಯಾರಿಗೂ ಚೆಸ್ ಆಡಕ್ಕೇ ಬರಲ್ಲ.”
ಅವಳು ನಗುತ್ತಾ ಅವನ ಕೆನ್ನೆ ಹಿಂಡಿದಳು.

ನಂತರ ಕೈ, ಕಾಲು ತೊಳೆದು ಅಡಿಗೆ ಮನೆ ಪ್ರವೇಶಿಸಿದಳು.
“ಗೋರಿಕಾಯಿ ಹುಳಿ, ತಿಳಿಸಾರು ಮಾಡಿದ್ದೇನೆ. ಉಪ್ಪಿನಕಾಯಿ ಇದೆ. ಬೆಳಿಗ್ಗೆ ಚಪಾತಿಗೆ ಮಾಡಿದ್ದ ಗೊಜ್ಜಿದೆ. ಬೋಂಡ ಕರೆಯಲಾ?”
“ಬೇಡಮ್ಮ ಹಪ್ಪಳ, ಸಂಡಿಗೆ ಕರೆದರೆ ಸಾಕು.”
ಅವಳು ಮೊದಲು ಗಂಡಸರಿಗೆ ಊಟಕ್ಕೆ ತಟ್ಟೆ ಹಾಕಿದಳು. ಅಲೋಕ, ಶಂಕರ ಜೊತೆಯಲ್ಲಿ ಕುಳಿತರು.
ಶಕುಂತಲಾ, ಶೋಭಾ, ವರು ಬಡಿಸಿದರು. ಆರ್.ಜಿ. ಅಡಿಗೆಯನ್ನು ಮುಕ್ತಕಂಠದಿಂದ ಹೊಗಳುತ್ತಾ ಊಟ ಮಾಡಿದ.
ಊಟವಾಗುತ್ತಲೂ ಅವಳು ಮನೆ ತೋರಿಸಿದಳು.
“ಮನೆ ತುಂಬಾ ಚೆನ್ನಾಗಿದೆ. ಅವರು ಮಾರುವುದಾದರೆ ನನಗೆ ಹೇಳಿ.”
“ಇಲ್ಲ ಅವರು ಮಾರಲ್ಲ. ಇದನ್ನು ರಿನೋವೇಟ್ ಮಾಡಿಸಿ ಏನಾದರೂ ಶುರುಮಾಡಬೇಕೂಂತ ಇದ್ದಾರೆ.”
“ಐ.ಸೀ.”
ಊಟದ ನಂತರ ಅವನು ರಾವ್ ಜೊತೆ ಮಾತನಾಡುತ್ತಾ ಕುಳಿತರು. ಮನೆ ಹೆಂಗಸರು ಊಟ ಮುಗಿಸಿದರು.

“ನಿಮಗೆ ನಿಮ್ಮ ಊರು ಕಡೆ ಕೆಲಸಕ್ಕೆ ಸೇರುವ ಮನಸ್ಸಿದೆಯಾ?”
“ನನಗೆ ಕೆಲಸಕ್ಕೆ ಸೇರುವ ಇಷ್ಟವಿಲ್ಲ. ನನ್ನದೇ ಕೆಲವು ಕನಸುಗಳಿವೆ.”
“ಏನು ಕನಸುಗಳು ಕೇಳಬಹುದಾ?”
ಅವನು ತನ್ನ ಕನಸಿನ ಬಗ್ಗೆ ಹೇಳಿದ.
“ಸರ್. ನೀವು ರಿಟೈರ್ಡ್ ಟೀಚರ್. ತುಂಬಾ ಅನುಭವಸ್ಥರೂಂತ ನಿಮ್ಮ ಮಗಳು ಹೇಳ್ತಿರ‍್ತಾರೆ. ನೀವು ನಾನು ಶಾಲೆ ತೆಗೆಯುವುದರ ಬಗ್ಗೆ ಸಲಹೆಕೊಟ್ಟು ಮಾರ್ಗದರ್ಶನ ಮಾಡಕ್ಕಾಗುತ್ತದಾ?”
“ಖಂಡಿತಾ ಮಾಡ್ತೀನಿ” ಎಂದರು ರಾವ್.

ಅವನು ಹೊರಟಾಗ ವರು ಕಾರ್‌ವರೆಗೂ ಬಂದು ಒಂದು ಪ್ಯಾಕೆಟ್ ಕೊಟ್ಟಳು.
“ಏನಿದು?”
“ಅರಳು ಸಂಡಿಗೆ. ನಿಮ್ಮನೆಗೆ ಕೊಡಿ.”
“ಥ್ಯಾಂಕ್ಸ್. ಒಂದು ವಿಷಯ.”
“ಏನು?”
“ನಾನು ಚಂದ್ರಾವತಿ ಆಂಟಿ ತಮ್ಮನ ಮಗ, ಬೆಂಗಳೂರಿನಲ್ಲಿ ಎಂ.ಎ ಮಾಡ್ತಿದ್ದೀನೀಂತ ನಿಮ್ಮ ಮನೆಯವರು ನಂಬಿದ್ದಾರೆ.”
“ಸದ್ಯಕ್ಕೆ ಅವರು ಹಾಗೇ ನಂಬಿರಲಿ. ನಾನು ನಿಧಾನವಾಗಿ ಹೇಳ್ತೀನಿ.”
“ಓ.ಕೆ. ನಾನಿನ್ನು ಬರಲಾ?”
ಅವಳು ಕೈಬೀಸಿದಳು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ :  https://surahonne.com/?p=44419
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

5 Comments on “ಕನಸೊಂದು ಶುರುವಾಗಿದೆ: ಪುಟ 24

  1. ಆರಾಮ್ ಆಗಿ ಓದಿಸಿಕೊಂಡು ಹೋಗುತ್ತಿದೆ ಕಾದಂಬರಿ.

  2. ಸುಲಲಿತವಾಗಿ ಓದಿಸಿಕೊಂಡುಹೋಗುತ್ತಿದೆ ಕಾದಂಬರಿ… ಯಾರ್ಯಾರ ಕನಸು ನನಸಾಗುತ್ತದೆಯೋ ನೋಡುವ ಕುತೂಹಲ.. ನೋಡೋಣ..

  3. ಶುರುವಾಗಿರುವ ಕನಸಿನ ಅಂತ್ಯ ಏನಾಗುವುದೋ ಕಾದು ನೋಡೋಣ…
    ಸಹಜ, ಸುಂದರ ಕಾದಂಬರಿ ಚೆನ್ನಾಗಿದೆ.

  4. ಧಾರಾವಾಹಿ ಪ್ರಕಟಿಸುತ್ತಿರುವ ಸಂಪಾದಕಿ ಹೇಮಮಾಲಾ ಇವರಿಗೂ ಹಾಗೂ ಅಭಿಪ್ರಾಯ ತಿಳಿಸಿರುವ ಆತ್ಮೀಯ ಗೆಳತಿಯರಿಗೂ. ಧನ್ಯವಾದಗಳು
    .

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *