ಪೌರಾಣಿಕ ಕತೆ

ಕಾವ್ಯ ಭಾಗವತ 77 : ವತ್ತಾಸುರ, ಬಕಾಸುರ ವಧೆ

Share Button

77 – ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ -3
ವತ್ತಾಸುರ, ಬಕಾಸುರ ವಧೆ

ಗೋಕುಲವ ನಿರ್ಗಮಿಸಿ ವೃಂದಾವನಕೆ ಬಂದರೂ
ದುಷ್ಟಸಂಹಾರ ಕಾರ್ಯಕ್ಕೆಲ್ಲಿ ವಿರಾಮ

ಗೋಪಲರೊಡಗೂಡಿ ದನಕರು ಮೇಯಿಸಿ ಬಂದ
ಬಲರಾಮ ಕೃಷ್ಣರ ವಧಿಸಲು
ಕರುವಿನ ರೂಪದಲಿ ಹಿಂಡನು ಸೇರಿದ ಕಂಸ ಭೃತ್ಯ
ವತ್ತಾಸುರ ರಕ್ಕಸನ ಪಿಡಿದು ಮೇಲಕ್ಕೆತ್ತಿ
ಗಿರಗಿರನೆ ತಿರುಗಿಸುತ ಮೇಲಕ್ಕೆಸೆಯೆ
ಅಸುನೀಗಿದ ವತ್ತಾಸುರ

ಗೋಕುಲದಿ ಉತ್ಪಾತಗಳೆಂದು
ವೃಂದಾವನಕೆ ಬಂದರೂ
ಬಾಧೆ ತಪ್ಪಲಿಲ್ಲ ಕೃಷ್ಣ ಬಲರಾಮರಿಗೆ

ನೀರು ಕುಡಿಯಲೆಂದು ಯಮುನೆಗೆ
ಬಂದ ಗೋಪಾಲಕರು ಮಹಾದೇಹಾಕೃತಿಯ
ಬಕಪಕ್ಷಿಯ ನಡುಗಡ್ಡೆಯಲ್ಲಿ ಕಂಡು ಭಯ ಭೀತರಾಗೆ
ಅದು ನೇರವಾಗಿ ಹಾರಿ ಬಂದು
ಬಾಯಿ ಅಗಲವಾಗಿ ತೆರೆದು
ನಿಂತಿದ್ದ ಬಾಲಕೃಷ್ಣನ ಒಮ್ಮೆಗೇ ನುಂಗಿಬಿಟ್ಟಿತು

ಕೃಷ್ಣ ಅಗ್ನಿಗೋಳದಂತೆ ಅದರ ಬಾಯಿ ಗಂಟಲುಗಳ ಸುಡಲು
ನುಂಗಲಾರದೆ ಅವನ ಉಗುಳಿಬಿಟ್ಟಿತು
ನಂತರದಿ ಕೃಷ್ಣನ ತನ್ನ ಕೊಕ್ಕಿನಿಂದ
ಕುಕ್ಕಿ ಕುಕ್ಕಿ ಕೊಲ್ಲಲು ಹವಣಿಸೆ
ಕೃಷ್ಣ ಬಕದ ಬಾಯೊಳಗೆ ಕ್ಷಣ ಮಾತ್ರದಿ ನುಗ್ಗಿ
ಹಂಚಿಯ ಕಡ್ಡಿಯನು ಮುರಿದಂತೆ
ಅದರ ಕೊಕ್ಕಿನ ಮೇಲಣ ಹಾಗೂ ಕೆಳಗಿನ
ಭಾಗವ ಮರಿದನು
ಬಕದ ದೇಹವಿದ್ದಡೆಯಲಿ ಘೋರಾಕಾರಿಯ
ದೈತ್ಯ ದೇಹವು ಸತ್ತುರುಳಿತು
ಬಕಾಸುರ ವಧೆಯಾಯಿತು

ನಂತರದಿ ಬಕನ ಸೋದರ ಅಘಾಸುರ
ಹೆಬ್ಬಾವಿನ ರೂಪದಿ ಬಾಯ್ಬಿಟ್ಟು ತನ್ನ
ಉಸಿರಿನ ಸೆಳೆತಕ್ಕೆ ಸಿಕ್ಕೆಲ್ಲ
ಪ್ರಾಣಿಗಳ ನುಂಗುತ್ತಲಿರೆ
ಗೋಪಾಲಕರು ಪರ್ವತದ ಗುಹೆಯಂತಿರ್ಪ
ಹೆಬ್ಬಾವಿನ ಬಾಯನ್ನು ಕಂಡು ಭಯದಿ ನಿಂತಿರಲು
ಅಸುರನು ತನ್ನುಸಿರನು ಸೇದಿಕೊಳ್ಳಲು
ಅನೇಕ ಗೋಪಾಲಕರು ಹೆಬ್ಬಾವಿನ ದ್ವಾರವ ಹೊಕ್ಕರು

ಮಿಕ್ಕ ಗೋಪಾಲಕರ ಹಾಹಾಕಾರ ಕೇಳಿ
ವಿಷಯ ತಿಳಿದ ಕೃಷ್ಣ ಸರ್ಪದ ಬಾಯನು ಹೊಕ್ಕು
ಗಂಟಲಿನ ಭಾಗದಿ ತನ್ನ ದೇಹವ ವಿಸ್ತಾರದಿ ಬೆಳಯಿಸೆ
ಅದರ ಗಂಟಲು ಹರಿದು ಬಾಯಿ ಸೀಳಿ ಹೋಯಿತು
ಒಳಗಿದ್ದ ಗೋಪಾಲಕರು ಹೊರ ಬಂದರು
ಸರ್ಪ ದೇಹದ ರಕ್ಕಸ ನಿಜರೂಪಕೆ ಬಂದು
ಮರಣಿಸಿದ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44386

-ಎಂ. ಆರ್.‌ ಆನಂದ, ಮೈಸೂರು

3 Comments on “ಕಾವ್ಯ ಭಾಗವತ 77 : ವತ್ತಾಸುರ, ಬಕಾಸುರ ವಧೆ

  1. ಎಂದಿನಂತೆ ಕಾವ್ಯ ಭಾಗವತ ಓದಿಸಿಕೊಂಡುಹೋಯಿತು.. ಸಾರ್..

  2. ಪುಟ್ಟ ಬಾಲಕ ಮುದ್ದುಕೃಷ್ಣನ ಬಾಲಲೀಲೆಗಳಿಗೆ ಲೆಕ್ಕವೆಲ್ಲಿ? ಸುಂದರ ಕಾವ್ಯ ಭಾಗವತ ಸರ್.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *