ಲಹರಿ

‘ಹೊನ್ನಶೂಲ’ ದ ಇರುಸು ಮುರುಸು !

Share Button

ವಿಷವೆಂದು ಗೊತ್ತಿದ್ದರೂ ನಾವು ಇಷ್ಟಪಟ್ಟು ಚೂರು ಚೂರೇ ಸೇವಿಸುವ ಯಾವುದಾದರೂ ವಿಷಯ ಇದ್ದರೆ ಅದು ಹೊಗಳಿಕೆ! ಇದೊಂದು ನಿಧಾನ ವಿಷ. ಜೊತೆಗೆ ನಿಶಾ ತರಿಸುವ ಮತ್ತು ಬರಿಸುವ ಸಂಗತಿ ಕೂಡ. ‘ಹೊಗಳಿ ಹೊಗಳಿ ಎನ್ನ ಹೊನ್ನಶೂಲಕ್ಕೇರಿಸದಿರಯ್ಯಾ’ ಎಂದೇ ಸಾಮಾನ್ಯವಾಗಿ ಬಳಸುವ ಬಸವಣ್ಣನವರ ವಚನದ ಸರಿಪಾಠ ಹೀಗಿದೆ: ‘ಎನ್ನವರೊಲಿದು ಹೊನ್ನ ಶೂಲದಲಿಕ್ಕಿದರೆನ್ನ ಹೊಗಳಿ, ಹೊಗಳಿ! ಎನ್ನ ಹೊಗಳತೆ ಎನ್ನ ನಿಮ್ಮೆಯ್ಗೊಂಡಿತ್ತಲ್ಲಾ! ಅಯ್ಯೋ, ನಿಮ್ಮ ಮನ್ನಣೆಯೇ ಮಸೆದಲಗಾಗಿ ತಾಗಿತ್ತಲ್ಲಾ! ಅಯ್ಯೋ ನೊಂದೆನು, ಸೈರಿಸಲಾರೆನು: ಕೂಡಲಸಂಗಮದೇವಾ, ನೀನೆನಗೊಳ್ಳಿದನಾದರೆ ಎನ್ನ ಹೊಗಳತೆಗಡ್ಡ ಬಾರಾ, ಧರ್ಮೀ!’ ಹೊಗಳುಭಟ್ಟರನ್ನು ಇಷ್ಟಪಡದ ಬಸವಣ್ಣನವರು ತಮ್ಮನ್ನು ಹೊಗಳುವವರ ವಿರುದ್ಧವೇ ಕೂಡಲಸಂಗನಲ್ಲಿ ದೂರಿಡುತ್ತಾರೆ. ಅವರನ್ನು ಬಲ್ಲವರೇ ಹೊಗಳುತ್ತಿದ್ದರೆ ಮಸೆದ ಕತ್ತಿಯಿಂದ ಇರಿದಂತಾಗುತ್ತದಂತೆ. ಇಂಥ ಕೂರಸಿಯ ಘಾಸಿಯಿಂದಾಗಿ ಅಯ್ಯೋ ನೊಂದೆನು, ಸೈರಿಸಲಾರೆನು ಎಂದು ಅಳಲುಪಡುತ್ತಾರೆ. ಶೂಲವು ಬಂಗಾರದ್ದೇ ಇರಬಹುದು; ಆದರೆ ಅದರ ನೋವು ಯಾತನೆ!? ‘ಧರ್ಮೀ’ ಎಂದು ಪರಮೇಶ್ವರನನ್ನು ಸಂಬೋಧಿಸುವುದರಿಂದ ಹೊಗಳುವುದಾಗಲೀ ಹೊಗಳಿಕೆಯಾಗಲೀ ಧರ್ಮವಲ್ಲ ಎಂಬುದು ಅಣ್ಣನವರ ಸೂಕ್ಷ್ಮ. ಕೂಡಲಸಂಗನಿಗೇ ಒಪ್ಪಿಸುತ್ತಿರುವುದರಿಂದ ಈ ಲೋಕದ ಮುಖವಾಡಗಳು ನನಗೆ ಸಹ್ಯವಲ್ಲ ಎಂಬುದವರ ಸ್ಪಷ್ಟ ಧಾಟಿ. ‘ನೀನು ನನಗೆ ಒಳಿತು ಬಯಸುವೆಯಾದರೆ ದಯಮಾಡಿ ಈ ಹೊಗಳಿಕೆಗೆ ಅಡ್ಡ ಬಾ’ ಎಂದು ಬಿನ್ನವಿಸುತ್ತಾರೆ. ಆಗಿನಿಂದ ಈ ಹೊಗಳಿಕೆಯನ್ನು ‘ಹೊನ್ನಶೂಲ’ವೆಂದೇ ಆಲಂಕಾರಿಕವಾಗಿ ಕರೆಯುವುದು ರೂಢಿಗೆ ಬಂತು. ‘ಎನಗಿಂತ ಕಿರಿಯರಿಲ್ಲ; ಶಿವಶರಣರಿಗಿಂತ ಹಿರಿಯರಿಲ್ಲ’ ಎಂದ ಪರಮ ವಿನಯಶೀಲರಾದ ಅಣ್ಣನವರು ಹೀಗೆ ಹೇಳಬೇಕಾದದ್ದೇ. ಮೊದಲ ಬಾರಿಗೆ ಹೊಗಳಿಕೆ ಕೆಟ್ಟದ್ದು ಎಂಬುದನ್ನು ಸಾರಿದ ಕೀರ್ತಿ ಇವರಿಗೇ ಸಲ್ಲಬೇಕು. ಹಿಂದೆಲ್ಲಾ ರಾಜ ಮಹಾರಾಜರು ತಮ್ಮನ್ನು ಹೊಗಳಿಸಿಕೊಳ್ಳಲು, ಕೀರ್ತಿಯನ್ನು ಸುತ್ತೆಲ್ಲ ಪ್ರಚುರಪಡಿಸಲು ಹೊಗಳುಭಟ್ಟರನ್ನೇ ನೇಮಿಸಿಕೊಂಡಿದ್ದು ಇತಿಹಾಸ. ಸುತ್ತಲಿನ ನಾಕು ಜನ ಹೊಗಳುತ್ತಿದ್ದರೆ ಅದೇನೋ ಕೇಳುವ ಮನಸಿಗೆ ಖುಷಿ. ಅರಿವು ಕಣ್ದೆರೆದವರಲ್ಲಿ ಇದೊಂದು ಮಹಾನ್ ಮಾನಸಿಕ ಭ್ರಾಂತಿ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಹೊಗಳಿಕೆ ಕೆಟ್ಟದ್ದು ಎಂಬುದನ್ನು ಬಹುಮಂದಿಯು ಒಪ್ಪದೇ ಇರುವ ಸಾಧ್ಯತೆಯೂ ಇದೆ. ಪರಸ್ಪರ ಒಬ್ಬರನ್ನೊಬ್ಬರು ಹೊಗಳಿಕೊಂಡು ಆಯುಷ್ಯವನ್ನೇ ಮುಗಿಸಿ ಬಿಡುವ ಮಹನೀಯರೂ ಇದ್ದಾರೆ. ನಮ್ಮ ಈ ಕಾಲದಲ್ಲಿ ಜನಪ್ರತಿನಿಧಿಗಳನ್ನೂ ಸೆಲೆಬ್ರಿಟಿಗಳನ್ನೂ ಸಾಹಿತಿ ಕಲಾವಿದರನ್ನೂ ಹೊಗಳುವುದು ಸಹಜವಾಗಿ ಬಿಟ್ಟಿದೆ. ಹೊಗಳದಿದ್ದರೆ ಕೆಲಸವೇ ಆಗುವುದಿಲ್ಲ ಎಂಬಷ್ಟರಮಟ್ಟಿಗೆ ಇದು ಅತಿಯಾಗಿ ಬಲ್ಲವರ ಪಾಲಿಗೆ ವಾಂತಿಯಾಗಿ ಪರಿಣಮಿಸಿದೆ.

ಡಾ. ಹಾ ಮಾ ನಾಯಕರು ತಮ್ಮ ‘ಸೂಲಂಗಿ’ ಪ್ರಬಂಧ ಸಂಕಲನದಲ್ಲಿ ‘ಹೊಗಳಿಕೆಯನ್ನು ಮಹಾ ಮಾದಕವಸ್ತು’ ಅಂತಲೂ ‘ಮದ್ದಿನ ವಿಷ’ ಅಂತಲೂ ಕರೆದು ಅದರ ನಕಾರಾತ್ಮಕ ಪರಿಣಾಮವನ್ನು ವಿವರಿಸುತ್ತಾರೆ. ಈ ಹೊಗಳಿಕೆಯಾಗಲೀ ಪ್ರಶಂಸೆಯಾಗಲೀ ಸ್ತುತಿಯಾಗಲೀ ಒಂದೇ; ಇದಕ್ಕೆ ಧನಾತ್ಮಕ ಆಯಾಮ ಕಡಮೆ. ಹೊಗಳುತ್ತಿದ್ದಾರೆಂದು ಗೊತ್ತಿದ್ದರೂ ನಮಗದು ಸಹ್ಯವೇ ಪಥ್ಯವೇ ಆಗಿ, ಸ್ವೀಕರಿಸುತ್ತಾ ಮೈ ಮರೆತು ಬಿಡುತ್ತೇವೆ. ಆದರೆ ಶ್ಲಾಘನೆ ಹಾಗಲ್ಲ. ಇದರದು ಸಕಾರಾತ್ಮಕ ಪರಿಣಾಮ. ಹೊಗಳಿಕೆಯಲ್ಲಿ ಸ್ವಾರ್ಥವೇ ಹೆಡೆಯಾಡುತ್ತಿದ್ದರೆ, ಶ್ಲಾಘ್ಯದಲ್ಲಿ ಇದಿಲ್ಲ. ಇದೇನಿದ್ದರೂ ಮೆಚ್ಚುಮಾತು. ತಮ್ಮ ಹೃದಯದ ಆನಂದವನ್ನೂ ಪ್ರೀತಿ ಗೌರವವನ್ನೂ ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ವ್ಯಕ್ತಪಡಿಸುವ ಸಹಜ ಸಂತಸ. ಮೆಚ್ಚಿಕೊಂಡು ಮಾತಾಡುವಾಗ ನಾವು ಬಳಸುವ ಪದಗಳ ಮೇಲೆ ಅದು ಹೊಗಳಿಕೆಯೋ ಶ್ಲಾಘನೆಯೋ ಎಂಬುದು ನಿರ್ಧಾರಿತ. ಹೊಗಳಿಕೆಯಲ್ಲಿ ಉತ್ಪ್ರೇಕ್ಷೆ, ಕಲ್ಪನೆ ಮತ್ತು ಹಸೀಸುಳ್ಳುಗಳು ಸೇರಿಕೊಂಡು ಒಂದು ಕೃತಕ ಆವರಣ ನಿರ್ಮಿತವಾಗುವುದು. ಮೆಚ್ಚುನುಡಿಯಲ್ಲಿ ಅದಾಗದು. ಅದು ಹಿತವೂ ಮಿತವೂ ಆಗಿದ್ದು, ಮಾತಿಗಿಂತ ಹಾವಭಾವ ಮತ್ತು ನಮ್ಮ ಆಂಗಿಕತೆಯಲ್ಲೇ ಸಂವಹನಗೊಳ್ಳುವುದು. ಒಂದು ನಗು, ಒಂದು ಹಸ್ತಲಾಘವ, ಒಂದು ನಮಸ್ಕಾರ, ಒಂದು ಆಲಿಂಗನ, ಒಂದು ಆನಂದಾಶ್ರುಗಳು ಮೆಚ್ಚಿಕೆಯನ್ನು ವ್ಯಕ್ತಪಡಿಸುವ ಮೂಲಧಾತು. ಮಾತು ಇಲ್ಲಿ ಗೌಣ; ನಮ್ಮ ನಡೆವಳಿಕೆಯೇ ಪ್ರಧಾನ. ಏಕೆಂದರೆ ಹೃದಯಪೂರ್ವಕತೆಯು ಹೃದಯದಿಂದ ಹೊರಟು ಹೃದಯವನ್ನು ಸೇರುವ ಹಾದಿಯದು. ಅಲ್ಲಿ ಮಾತು ಮೈಲಿಗೆ, ವರ್ತನೆಯೇ ಹೋಳಿಗೆ! ಇಲ್ಲೇ ಇನ್ನೊಂದು ವಿಚಾರವನ್ನು ಪ್ರಸ್ತಾಪಿಸಲೇಬೇಕು. ಹೊಗಳಿಕೆಯು ಬಹಳಷ್ಟು ಸಲ ಮುಖಸ್ತುತಿಯೇ ಆಗಿರುತ್ತದೆ. ನಮ್ಮ ಬಗ್ಗೆ ಇನ್ನೊಬ್ಬರಲ್ಲಿ ಹೇಳುವಾಗ ಮೆಚ್ಚುಮಾತು ಕಾಣಿಸಿಕೊಳ್ಳುತ್ತದೆ. ಲೋಕವು ಹೀಗಿಲ್ಲ. ನಮ್ಮ ಮುಂದೆ ಹೊಗಳಿ, ಹಿಂದೆ ತೆಗಳುವುದೇ ಹೆಚ್ಚು. ಅದಕಾಗಿಯೇ ಸ್ತುತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ನಿಜವಾದುದನ್ನು ನುಡಿಯುವವರು ತಮ್ಮ ಹೃದಯಾಂತರಾಳದ ಅಭೀಪ್ಸೆಯನ್ನು ವ್ಯಕ್ತಪಡಿಸುವವರು ನಮ್ಮ ಮುಂದೆ ಸುಮ್ಮನಿದ್ದು, ಇನ್ನೊಬ್ಬರ ಮುಂದೆ ಪ್ರಶಂಸೆಯ ಮಳೆಗರೆದಿರುತ್ತಾರೆ. ಲೋಕದಲ್ಲಿ ಒಳಿತನ್ನು ಗುರುತಿಸಿ, ಒಳಿತನ್ನು ಹರಡುವ ಸಲುವಾಗಿ ಈ ಮೆಚ್ಚಿಕೆ ಇರುವುದು. ಆದರೆ ಮನುಷ್ಯರು ಮಾತ್ರ ತಮ್ಮ ಕೆಲಸ ಕೈಗೂಡಲು ಹೊಗಳಿಕೆಯ ಮೊರೆ ಹೋಗುತ್ತಾರೆ. ಇದು ಸುಲಭದ ಹಾದಿ. ಹೊಗಳಿಕೆಗೆ ಬಸುರಾಗುವವರು ಇರುವತನಕ ಹೊಗಳಿಯೇ ಬಸುರು ಮಾಡುವವರು ಇರುತ್ತಾರೆಂದು ನಮ್ಮಜ್ಜಿ ಆಗಾಗ ಸ್ವಲ್ಪ ಒರಟಾಗಿಯೇ ನುಡಿಮುತ್ತೊಂದನ್ನು ಉದುರಿಸುತ್ತಿದ್ದರು. ಕೇಳುವುದಕ್ಕೆ ಇದು ಅಸಭ್ಯ ಎನಿಸಿದರೂ ಇದರ ಅಂತರಂಗದಲ್ಲಿ ಸತ್ಯವಿದ್ದೇ ಇದೆ. ಟೋಪಿ ಹಾಕಿಸಿಕೊಳ್ಳುವವರು ಇರುವತನಕ ಟೋಪಿ ಹಾಕುವವರು ಇದ್ದೇ ಇರುತ್ತಾರಲ್ಲ, ಹಾಗೆ. ಇಷ್ಟಕೂ ಹೊಗಳುವವರನ್ನು ಅವಾಯ್ಡ್ ಮಾಡಲಾಗದು; ಆದರೆ ಹೊಗಳಿಕೆಗೆ ವಶವರ್ತಿಗಳಾಗುವುದೇತಕ್ಕೆ? ಇದು ನಮ್ಮ ದೌರ್ಬಲ್ಯವಲ್ಲದೇ ಮತ್ತೇನು? ನಮಗೂ ಅದು ಬೇಕು ಎಂದಾಯಿತಲ್ಲ. ಒಬ್ಬ ಮೂರ್ಖನು ತನ್ನನ್ನು ಹೊಗಳಿಸಿಕೊಳ್ಳಲು ಇನ್ನೊಬ್ಬ ಮೂರ್ಖನನ್ನು ಹುಡುಕುತ್ತಿರುತ್ತಾನೆಂಬ ನಾಣ್ನುಡಿಯೊಂದಿದೆ. ಅಂದರೆ ಹೊಗಳುವವರೂ ಮೂರ್ಖರೇ; ಹೊಗಳಿಸಿಕೊಳ್ಳುವವರು ಅದಕಿಂತಲೂ ಅತ್ತತ್ತ ಮೂರ್ಖರು. ಮೂರ್ಖರಿಗೆ ಇದೇ ಸುಖ. ಡ್ರಗ್ ಅಡಿಕ್ಟಿನಂತೆ ಹೊಗಳಿಕೆಯೂ ಒಂದು ಬಗೆಯ ಮಾದಕ ದ್ರವ್ಯ. ಸೇವಿಸಿದಷ್ಟೂ ಇನ್ನೂ ಬೇಕೆಂಬ ದಾಹ, ತೀರದ ದಾಹ ಮತ್ತು ಮಾಯ್ಕಾರ ಮೋಹ!

ಎಲ್ಲಿಯವರೆಗೆ ಮೆಚ್ಚಿಕೆ; ಎಲ್ಲಿಂದಾಚೆಗೆ ಹೊಗಳಿಕೆ ಎಂಬುದನ್ನು ಗೆರೆ ಕೊರೆದಂತೆ ವಿವರಿಸಲಾಗದು. ಒಂದು ಮಾತು, ಒಂದು ನಗು, ಒಂದು ಕಣ್ಣೋಟ ಸಾಕು ಮೆಚ್ಚಲು. ಹೊಗಳಿಕೆ ಹಾಗಲ್ಲ. ಅದಕೆ ಪದಪುಂಜಗಳು ಬೇಕು. ನೀವು ಹಾಗೆ, ನೀವು ಹೀಗೆ, ನೀವು ಆಗ ಹಾಗೆ ಮಾಡಿದ್ದವರು, ಎಂತೆಂಥ ಇಕ್ಕಟ್ಟು ಬಿಕ್ಕಟ್ಟುಗಳನ್ನು ಬಗೆಹರಿಸಿದ್ದವರು, ನಿಮ್ಮಂಥವರ ಪಾಲಿಗೆ ಇದು ಯಾವ ಲೆಕ್ಕ ಎಂದೆಲ್ಲಾ ಹಾಡಿ ಹೊಗಳಬೇಕು! ಒಂದು ಹಂತಕ್ಕೆ ಇದು ಬೂಸ್ಟಿಂಗ್! ಹನುಮಂತನನ್ನು ಹೀಗೆ ಬಾಹ್ಯವಾಗಿ ಬೂಸ್ಟ್ ಮಾಡದಿದ್ದರೆ ಅವನು ತನ್ನ ಶಕ್ತಿಸಾಮರ್ಥ್ಯಗಳನ್ನು ಸ್ಮರಣೆಗೆ ತಂದುಕೊಂಡು ಸಮುದ್ರಲಂಘನ ಮಾಡುತ್ತಲೇ ಇರಲಿಲ್ಲ! ಎಲ್ಲ ಸಂದರ್ಭಗಳಲ್ಲೂ ಹೊಗಳಿಕೆ ಕೆಟ್ಟದ್ದಲ್ಲ. ಪುಟ್ಟ ಮಕ್ಕಳನ್ನು ನಾವು ಹೊಗಳಬೇಕು. ಆತ್ಮವಿಶ್ವಾಸವನ್ನೂ ಅಭಿಮಾನವನ್ನೂ ತುಂಬಲು ಇದು ಬಳಕೆಯಾಗಬೇಕು. ಅವರಲ್ಲಿ ಇಲ್ಲದ ಭ್ರಮೆಗಳನ್ನು ಸೃಷ್ಟಿ ಮಾಡಿ ಅನಾಹುತ ಮಾಡಬಾರದು. ಚೋಟಾ ಭೀಮ್ ನೋಡಿಕೊಂಡು ಬಟ್ಟೆಯ ಬಾಲ ಕಟ್ಟಿಕೊಂಡು ತಾರಸಿಯಿಂದ ಹಾರಿ ಅನಾಹುತ ಮಾಡಿಕೊಂಡ ಮಕ್ಕಳೂ ಇದ್ದಾರೆ. ಅಂದರೆ ನೆಲಕ್ಕೆ ಕಾಲು ತಾಗಿಸಿಕೊಂಡೇ ಆಗಸಕ್ಕೆ ಹಾರುವ ಯೋಚನೆ ಮಾಡಬೇಕು. ಅದು ಬಿಟ್ಟು ಹಕ್ಕಿ ಹಾರುತ್ತದೆ, ವಿಮಾನ ಹಾರಾಟ ನಡೆಸುತ್ತದೆ, ಸಿನಿಮಾಗಳಲ್ಲಿ ಹೀರೊಗಳು ಹಾರಿ ನೆಗೆದು ಹೊಡೆಯುತ್ತಾರೆಂದು ನಾವೂ ಹಾರಿದರೆ ಏನಾದೀತು? ದುರಂತವಾದೀತು!

ಈ ಥರದ್ದು ಇನ್ನೊಂದಿದೆ: ಅದೇ ಪ್ರಶಂಸೆ ಅಥವಾ ಅಭಿನಂದನೀಯ ಮಾತು. ಸದ್ಗುಣ ಮತ್ತು ಸಾಧನೆಗಳನ್ನು ಬಾಯ್ತುಂಬ ಪ್ರಶಂಸಿಸಿ ಹಾರೈಸುವುದು ಇದರ ರೀತಿ. ಇದಕ್ಕೆ ಸ್ವಲ್ಪ ಹೋಂವರ್ಕ್ ಮಾಡಿರಬೇಕು. ಅವರದೇನು ಸದ್ಗುಣ ಅಥವಾ ಅವರೇನು ಸಾಧಿಸಿದ್ದಾರೆಂಬುದನ್ನು ಅರಿತಿರಬೇಕು. ಸುಮ್ಮನೆ ಬೇಕಾಬಿಟ್ಟಿ ಮಾತನಾಡಲಾಗದು. ಹಾಗಾದಾಗ ಅದು ಕೇವಲ ಬಾಯುಪಚಾರವಾಗಿ ಹೊಗಳಿಕೆ / ಸ್ತುತಿ ಎಂದೆನಿಸಿಕೊಳ್ಳುತ್ತದೆ. ಕೆಲವರಿರುತ್ತಾರೆ. ಕಡ್ಡಿಯನ್ನು ಗುಡ್ಡ ಮಾಡುತ್ತಾರೆ. ಇವರಿಲ್ಲದಿದ್ದರೆ ನಾವು ಉಸಿರಾಡಲೂ ಕಷ್ಟಪಡಬೇಕಾಗುತ್ತಿತ್ತೆಂದು ಹೊಗಳುತ್ತಾರೆ; ಆ ಮೂಲಕ ನೆರೆದವರ ಮುಂದೆ ನಗೆಪಾಟಲಿಗೀಡಾಗುತ್ತಾರೆ. ಇಂತಹ ಪೊಳ್ಳು, ಜೊಳ್ಳು ಟೊಳ್ಳು ವ್ಯಕ್ತಿಗಳನ್ನು ಕಂಡೇ ಬಸವಣ್ಣನವರು ಬೇಸರಿಸಿಕೊಂಡಿದ್ದಿರಬಹುದು. ಘನ ಗಾಂಭೀರ್ಯವಿಲ್ಲದ ಇಂಥವರೇ ಅವರಿಗೆ ತಲೆನೋವಾಗಿ ಪರಿಣಮಿಸಿದ್ದಿರಬೇಕು. ಇಲ್ಲದಿದ್ದರೆ ಸಾಕ್ಷಾತ್ ಸಂಗಮನಲ್ಲೇ ದೂರು ಕೊಡುವಷ್ಟು ಅವರು ಮುಂದುವರಿಯುತ್ತಿರಲಿಲ್ಲ. ಇನ್ನೊಂದು ಕೆಟಗರಿಯವರಿದ್ದಾರೆ. ತಮ್ಮನ್ನು ತಾವು ಹೊಗಳಿಕೊಂಡು ಅಡ್ಡಾಡುವವರು. ಇವರದೊಂದು ರೀತಿಯ ಹುಸಿ ವ್ಯಕ್ತಿತ್ವ. ಯಾರೂ ತಮ್ಮನ್ನು ಗಮನಿಸಲಿಲ್ಲವೆಂದು ವ್ಯಥಿತರಾಗಿ, ತಮ್ಮ ಸ್ವಾರ್ಥಪರ ಆಲೋಚನೆ ಮತ್ತು ಕಾರ್ಯಗಳನ್ನು ಮುಚ್ಚಿಟ್ಟುಕೊಂಡು, ನಾನು ಅಂಥವನಲ್ಲ ಎಂದು ತೋರಿಸಿಕೊಂಡು ಸಮಾಧಾನ ಮಾಡಿಕೊಳ್ಳಲು ಕಂಡ ಕಂಡವರ ಮುಂದೆ ತಮ್ಮ ಸಾಧನೆಯನ್ನು ಕೊಚ್ಚಿಕೊಳ್ಳುತ್ತಿರುತ್ತಾರೆ. ವ್ಯಕ್ತಿಗಳು ಎದುರು ಇಲ್ಲದಿದ್ದಾಗ ಮತ್ತು ಅವರು ದಿವಂಗತರಾದ ಮೇಲೆ ಇವರ ಬಾಯಿಗೆ ನೂರು ನಾಲಗೆ! ನನ್ನಿಂದಲೇ ಅವರಿಗೆ ಪ್ರಶಸ್ತಿ ಬಂದಿದ್ದು, ನನ್ನಿಂದಲೇ ಅವರು ಜೀವಿಸಿದ್ದು, ನನ್ನಿಂದಲೇ ಅವರು ಉಸಿರಾಡುತ್ತಿದ್ದುದು ಎಂದೆಲ್ಲಾ ಬೊಗಳೆ ಬಿಡುತ್ತಾರೆ. ಘನತೆ ಇಲ್ಲದ ಇಂಥ ಮಂದಿಯಿಂದಲೇ ಹೊಗಳಿಕೆ ಎಂಬುದು ಅಸಡ್ಡಾಳ ಆಗಿರುವುದು. ನಾನೇ ಇಂದ್ರ, ಚಂದ್ರ, ನಾನೇ ಲೋಕದ ಲಾಂದ್ರ ಎಂದೆಲ್ಲಾ ತಮ್ಮ ಬೆಳಕಿನ ಕತೆಯನ್ನು ಕಾದಂಬರಿ ಮಾಡಿಕೊಂಡು ನಾಟಕವಾಡುವ ಇಂಥ ಮಂದಿಯನ್ನು ಉಪೇಕ್ಷಿಸಬೇಕು, ಉದಾಸೀನವೇ ಸರಿ ಮದ್ದು.

‘ಹೊಗಳಲು ತುದಿಗಾಲಲ್ಲಿ ನಿಲ್ಲುವುದೇತಕ್ಕೆ? ಮತ್ತು ಹೊಗಳಿಸಿಕೊಳ್ಳಲು ಹಪಹಪಿಸುದೇತಕ್ಕೆ?’ ಎಂಬವೇ ಮೂಲಪ್ರಶ್ನೆಗಳು. ಇವು ಪ್ರಶ್ನೆಗಳಲ್ಲ; ಮಾನಸಿಕ ಸಮಸ್ಯೆಗಳು ಎಂಬುದನ್ನು ಅರ್ಥ ಮಾಡಿಕೊಂಡರೆ ಹೌಹಾರುವುದು ನಿಜ. ವಿಚಿತ್ರವೆಂದರೆ ತಮ್ಮಲ್ಲಿ ಇಲ್ಲದ ಶಕ್ತಿ ಸಾಮರ್ಥ್ಯಗಳೂ ಮಾಡಿರದ ಮತ್ತು ಮಾಡಲಾಗದ ಕೆಲಸ ಕಾರ್ಯಗಳೂ ಹೊಗಳಿಕೆಯ ಮೂಲಕ ವ್ಯಕ್ತವಾಗುತ್ತಿದೆಯೆಂದರೆ ಹೊಗಳುವವರಿಗಾಗಲೀ ಹೊಗಳಿಸಿಕೊಳ್ಳುವವರಿಗಾಗಲೀ ಗೊತ್ತಿರುವುದೆಂದೇನಿಲ್ಲ; ಆದರೂ ಇದು ಅವರ ಪಾಲಿಗೆ ಸಹ್ಯ. ಇಬ್ಬರಲೂ ಒಂದು ಬಗೆಯ ಮೆಚೂರಿಟಿ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ. ಮನುಷ್ಯರು ಮನುಷ್ಯರನ್ನೇ ಹೊಗಳುವುದಕ್ಕೂ ಮನುಷ್ಯರು ದೇವರನ್ನು ಹೊಗಳುವುದಕ್ಕೂ ವ್ಯತ್ಯಾಸವಿದೆ. ಎರಡರಲ್ಲೂ ಸ್ವಾರ್ಥವಿದ್ದರೂ ಮೊದಲನೆಯದಕಿಂತ ಎರಡನೆಯದು ಹೆಚ್ಚು ಸೂಕ್ತ. ಏಕೆಂದರೆ ಸಾಹಿತ್ಯಾದಿ ಲಲಿತಕಲೆಗಳು ಜನಿಸಿದವು ಮತ್ತು ಬೆಳೆದವು. ನಾನು ಆರಾಧಿಸುವ ದೇವರು ಎಂಥೆಂಥ ಗುಣಶೀಲ? ಎಂಬುದನ್ನು ಕೇಳುವುದೇ ಮನಸಿಗೆ ಹಿತ. ಇದು ಭಕ್ತಿಯನ್ನು ಪ್ರಚುರಪಡಿಸುವ ಸಾಧನ ಕೂಡ. ‘ಈ ಪರಿಯ ಸೊಬಗಾವ ದೇವರಲಿ ಕಾಣೆ? ಗೋಪೀಜನಪ್ರಿಯ ಗೋಪಾಲಗಲ್ಲದೇ!’ ಎಂದು ದಾಸರು ಹಾಡುತ್ತಿದ್ದರೆ ನಮ್ಮಲ್ಲೊಂದು ಸಕಾರಾತ್ಮಕತೆ ಮೈಗೂಡುತ್ತದೆ ಮತ್ತು ಕೇಳಿದ ಮನಸು ಹೃದಯಗಳು ಧನ್ಯೋಸ್ಮಿ ಎನ್ನುತ್ತವೆ. ಏಕೆಂದರೆ ಪರಮಾತ್ಮನು ಅಚ್ಯುತ, ಅನಂತ, ಅಪಾರ, ಅಸೀಮ, ಅಮೋಘ. ಆತನ ಶಕ್ತಿಯುಕ್ತಿಗಳನ್ನು ಅನುಮಾನಿಸುವುದುಂಟೆ? ಈ ಕೀರ್ತನೆಯಲ್ಲಿ ಬರುವ ‘ಗುರುವುತನದಲಿ ನೋಡೆ ಜಗದಾದಿಗುರುವು’ ಎಂಬುದೇನೂ ಸುಳ್ಳಲ್ಲ. ಇಷ್ಟಕ್ಕೂ ಭಗವಂತನನ್ನು ಸ್ತುತಿಸಿದರೆ ತಪ್ಪೇನೂ ಇಲ್ಲ, ಅದು ನಮ್ಮ ಬಕುತಿ ಮತ್ತು ನಂಬಿಕೆಯ ಸಂಗತಿ. ಆದರೆ ಹುಲುಮಾನವರನ್ನು ಸ್ತುತಿಸುವುದರ ಹಿಂದೆ ಬಹು ದೊಡ್ಡ ಮಸಲತ್ತೇ ಇರುತ್ತದೆ. ಅವರಿಂದ ನಮಗೆ ಯಾವುದೋ ಕೆಲಸ ಆಗಬೇಕಿರುತ್ತದೆ, ಶ್ಲಾಘಿಸಿ, ಅವರ ಮನಸ್ಸನ್ನು ಸಂಪ್ರೀತಗೊಳಿಸಿಯೋ ಸುಪ್ರಸನ್ನಗೊಳಿಸಿಯೋ ‘ಫೇವರ್’ ಮಾಡಿಕೊಳ್ಳುವ ಉಮೇದಿ ಇರುತ್ತದೆ. ಅದಕಾಗಿ ನಾಲಗೆ ಮುಂದಾಗುತ್ತದೆ. ಇದ್ದದ್ದು, ಇಲ್ಲದ್ದು ಎಲ್ಲವನ್ನೂ ಸೇರಿಸಿ ನಾವು ಹೊಗಳ ತೊಡಗುತ್ತೇವೆ. ನೀವೇ ಇಂದ್ರ, ಚಂದ್ರ ಎನ್ನುತ್ತೇವೆ. ಆದರೆ ಕೆಲಸವಾದ ಮೇಲೆ ಅವರನ್ನು ಕುರಿತು ಇನ್ನೊಬ್ಬರೆದುರಿಗೆ ಅದೇ ಭಾವನೆಯಲ್ಲಿ ತಮ್ಮ ‘ಕೃತಜ್ಞತೆ’ ಸಲ್ಲಿಸಬೇಕು, ಅದು ಬಿಟ್ಟು ಹೀನಾಮಾನ ಹೀಗಳೆಯಬಾರದು; ನಮ್ಮ ಸಣ್ಣತನ ತೋರಬಾರದು, ಮುಖ್ಯವಾಗಿ ಅವಕಾಶವಾದಿಗಳಾಗಬಾರದು.

‘ಲೋಕದಲಿ ಹುಟ್ಟಿರ್ದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂದಿದ್ದಾಳೆ ಶಿವಶರಣೆ ಮಹದೇವಿಯಕ್ಕ. ಬೆಟ್ಟದಾ ಮೇಲೊಂದು ಮನೆಯ ಮಾಡಿ ಎಂಬ ಆಕೆಯ ವಚನದ ಕೊನೆಯ ಸಾಲಿದು. ಸ್ತುತಿನಿಂದೆಗಳೆರಡೂ ಲೋಕದಲಿ ಸರ್ವೇ ಸಾಮಾನ್ಯ. ‘ಎದ್ದಾಗ ಕೈ ಮುಗಿಯುತ್ತಾರೆ; ಬಿದ್ದಾಗ ಕಲ್ಲು ಹೊಡೆಯುತ್ತಾರೆ’ ಎಂಬುದೊಂದು ಲೋಕಸ್ವಭಾವದ ನಾಣ್ನುಡಿ. ವಂದನೆ ಮತ್ತು ನಿಂದನೆ ಎರಡನ್ನೂ ಸಮಾನವಾಗಿ ಪರಿಗಣಿಸುವಲ್ಲಿ ನಾವು ಪಕ್ವತೆಯನ್ನು ಪಡೆದಿರಬೇಕು. ಇಲ್ಲದಿದ್ದರೆ ಎರಡಕ್ಕೂ ವಶರಾಗಿ ಅಲ್ಪರಾಗುತ್ತೇವೆ. ಸ್ತುತಿ ಮತ್ತು ನಿಂದೆ ಎರಡೂ ಜೊತೆಯಾಗಿ ಕೈ ಹಿಡಿದು ಸಾಗುವಂಥ ಲೋಕನೀತಿ. ನಿನ್ನೆ ಮೊನ್ನೆ ಸ್ತುತಿಸುತ್ತಿದ್ದವರು ಇಂದು ನಿಂದಿಸುತ್ತಿದ್ದಾರೆಂದರೆ ಒಂದೋ ನಾವು ಕೆಟ್ಟಿರಬೇಕು ಇನ್ನೊಂದೋ ಅವರು ಕೆಟ್ಟಿರಬೇಕು. ದಿನವೂ ದಾನ ಮಾಡುತ್ತಿದ್ದವರು ಒಂದು ದಿನ ತಪ್ಪಿಸಿದರೆ ನಿಂದನೆಗೆ ಒಳಗಾಗಬೇಕು. ಅದೇ ದಾನವೇ ಮಾಡದವರು ನಿಂದನೆಗೆ ಒಳಗಾಗುವುದೇ ಇಲ್ಲ. ಇದು ಲೋಕದ ರೂಢಿ. ಜನರು ಇರುವುದೇ ಹೀಗೆ. ಕೇಳಿದಾಗಲೆಲ್ಲ ಸಾಲ ಕೊಡುತ್ತಿದ್ದವರು ಒಂದೆರಡು ಬಾರಿ ಕೊಡದಿದ್ದಾಗ ನಿಷ್ಠುರಕ್ಕೆ ಒಳಗಾಗುವುದು ಮಾತ್ರವಲ್ಲದೇ, ನಿಂದನೆಗೂ ಪಾತ್ರರಾಗಬೇಕಾಗುತ್ತದೆ. ಎಂದೂ ಸಾಲ ಕೊಡದವರು ಸೇಫಾಗಿಯೇ ಇರುತ್ತಾರೆ! ಏಕೆಂದರೆ ಅವರು ಇರುವುದೇ ಹಾಗೆ. ಅದರಲ್ಲೂ ಹೊಗಳುವವರು ಬಯ್ಯಲೂ ಸಿದ್ಧರು. ಇದನ್ನು ನಾವು ಗಮನಿಸಬೇಕು. ತಮಗೆ ಲಾಭವಾದಾಗ ಹೊಗಳಿದವರು, ನಿರೀಕ್ಷೆಗಳು ಫಲಿಸದಿದ್ದಾಗ ತೆಗಳಲೂ ಹಿಂಜರಿಯರು. ಮುಂದಲ್ಲದಿದ್ದರೂ ಹಿಂದಾಡುವರು, ಅಪಪ್ರಚಾರ ನಡೆಸುವರು. ಅದಕಾಗಿಯೇ ಅಕ್ಕ ಸಲಹೆ ಕೊಡುತ್ತಾಳೆ: ‘ಮನದಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.’ ಮನಸಿನ ಸಮತೋಲನ ಬಹಳ ಮುಖ್ಯ. ಅದನ್ನು ಕಳೆದುಕೊಳ್ಳಬಾರದು. ಇದು ಸಿದ್ಧಿಸುವುದು ವಿವೇಕ ಮತ್ತು ವಿವೇಚನೆಯಿಂದ. ಅಂದ ಹಾಗೆ ಹೊಗಳಿಕೆಗೆ ಮನ ಸೋತವರು, ತೆಗಳಿಕೆಗೂ ಸಿದ್ಧರಾಗಿರಬೇಕು. ಜನರಿರುವುದೇ ಹಾಗೆ, ಅದಕಾಗಿ ಒಂದು ಬೇಕು, ಇನ್ನೊಂದು ಬೇಡವೆಂದರೆ ತಪ್ಪಾಗುವುದು. ‘ಸ್ತುತಿನಿಂದೆಗಳೆರಡೂ ಹುಟ್ಟದಂತೆ ಮಾಡಲಾಗದು’ ಎಂಬ ಸೂಕ್ಷ್ಮತೆಯೂ ಅಕ್ಕಳ ಮಾತಿನಲ್ಲಿದೆ. ‘ಸ್ತುತಿನಿಂದೆಗಳು ಬಂದಡೆ’ ಎಂಬಲ್ಲಿ ಇದು ಸ್ಪಷ್ಟ. ಸಂವೇದನಾಶೀಲರಾದವರು ಎರಡನ್ನೂ ಸಮವಾಗಿ ಸ್ವೀಕರಿಸುತ್ತಾರೆ; ನಕ್ಕು ಸುಮ್ಮನಾಗುತ್ತಾರೆ. ವಂದನೆ ಏತಕ್ಕೆ? ನಿಂದನೆ ಏತಕ್ಕೆ? ಎಂಬುದನ್ನವರು ಅರಿತವರು. ಈ ಪ್ರಮಾಣದ ಸೂಕ್ಷ್ಮತೆ ಇರುವುದರಿಂದಲೇ ಅವರು ಪ್ರಬುದ್ಧರು. ‘ನೊಂದ ಬಾಯಿಗೆ ನಿಂದೆ ಪರಮಾನ್ನ’ ಎಂಬೊಂದು ಮಾತಿದೆ. ವಂದನೆಗಿಂತಲೂ ನಿಂದನೆಯೇ ಹೆಚ್ಚು ಜಗತ್ತಿನಲ್ಲಿ. ಸುಖಾ ಸುಮ್ಮನೆ ಬಯ್ಯುವವರೂ ಇರುತ್ತಾರೆ. ಸಂಬಂಧಿಗಳನ್ನೂ ಸ್ನೇಹಿತರನ್ನೂ ಎತ್ತಾಡುವುದೇ ಅಂಥವರ ಕೆಲಸ. ಆತ್ಮಗೌರವವನ್ನೂ ಸ್ವಾಭಿಮಾನವನ್ನೂ ಕಳೆದುಕೊಂಡವರು ಅಥವಾ ಮಾರಿಕೊಂಡವರು ಇಂಥವರು. ಅವರ ಯಾವುದೋ ನಿರೀಕ್ಷೆಗಳು ಕೈಗೂಡದಿರುವುದೇ ಇದಕ್ಕೆ ಕಾರಣ. ಇಷ್ಟಕೂ ಹೊಗಳಿಕೆ ಒಂದು ಸಲವಾದರೆ ತೆಗಳಿಕೆ ನೂರು ಸಲ. ತಮಗೆ ಒಳ್ಳೆಯದನ್ನು ಮಾಡಿದಾಗ (ಇಲ್ಲಿ ಒಳ್ಳೆಯದು ಎಂದರೆ ತಮಗಿಷ್ಟವಾದ, ತಮಗೆ ಲಾಭವಾದ ಎಂದರ್ಥ) ಸ್ತುತಿಸುವವರು ಒಂದೆರಡು ಬಾರಿ ಅಷ್ಟೇ. ಅದೇ ಒಳ್ಳೆಯದು ಆಗದೇ ಹೋದಾಗ ನೂರು ಬಾರಿ ಶಪಿಸುತ್ತಾರೆ. ಈ ಲೋಕದ ನಿಯತಿಯನ್ನು ಅರಿತವರೇ ಮನದಲಿ ಕೋಪವ ತಾಳದೇ ಸಮಾಧಾನದಲ್ಲಿ ಇರುವಂಥವರು. ಹಾಗಾಗಿ ಹೊಗಳುವುದು ಯಾವತ್ತೂ ಅಗ್ಗದ ಮತ್ತು ಅಪ್ರಬುದ್ಧತೆಯ ಲಕ್ಷಣ. ಅದರಲ್ಲೂ ಮುಖಸ್ತುತಿಯಂತೂ ಬಲು ಅಪಾಯ; ಕಾರಣವಿಲ್ಲದೇ ಮಾಡುವ ಮುಖಸ್ತುತಿಯಿಂದ ನಾವು ಸಡಿಲ ವ್ಯಕ್ತಿತ್ವದವರಾಗುತ್ತೇವೆ. ಬಾಯಿ ತುಂಬಾ ಬಡಾಯಿ ಎನ್ನುವಂತೆ, ಲೂಸ್ ಟಾಕಿಗರಾಗುತ್ತೇವೆ. ಒಬ್ಬರ ಮುಂದೆ ಹಗುರವಾಗುತ್ತೇವೆ. ವಾಸ್ತವವಾಗಿ ಎಲ್ಲರಲ್ಲೂ ಒಳಿತೂ ಇರುತ್ತದೆ; ಕೆಡುಕೂ ಇರುತ್ತದೆ. ನಾವು ಹಂಸಕ್ಷೀರನ್ಯಾಯದಂತೆ, ಒಳಿತನ್ನು ಹೆಚ್ಚು ಗ್ರಹಿಸಿ, ಕೆಡುಕನ್ನು ಮರೆತು ಮುಂದಕೆ ಸಾಗಬೇಕು. ಈ ಲೋಕವು ಯಾರನ್ನು ತಾನೇ ಸಂಪೂರ್ಣವಾಗಿ ಮೆಚ್ಚಿದೆ? ಈ ಲೋಕ ಎಂದರೆ ಲೋಕದ ಜನರು! ಎಲ್ಲರೂ ಅವರವರ ಮೂಗಿನ ನೇರ. ‘ಬಿದಿಗೆ ಚಂದ್ರಮ ಡೊಂಕು; ಬೆಳದಿಂಗಳದು ಡೊಂಕೆ?’ ಎಂದು ಕವಿ ಕೇಳುವಾಗ ನಾವು ಡೊಂಕಾದ ಚಂದ್ರನನ್ನು ನೋಡಬಾರದು; ಆತ ಹರಡಿದ ಹಾಲು ಚೆಲ್ಲಿದಂಥ ಬೆಳಕಲ್ಲಿ ಮೀಯಬೇಕು; ಇಂಥ ಮೆಂಟಾಲಿಟಿ ನಮ್ಮದಾಗಬೇಕು. ಹಾಗಾಗಿ ಬೀಳ್ಕೊಡುಗೆ ಮೊದಲಾದ ಸಭೆ ಸಮಾರಂಭಗಳಲ್ಲಿ ಒಬ್ಬರನ್ನು ಕುರಿತು ಮಾತಾಡುವಾಗ ಮುಖಸ್ತುತಿಗಿಂತ ಅವರ ಒಳಿತುಗಳನ್ನು ಪಟ್ಟಿ ಮಾಡಿದರೆ ಸಾಕು, ಹೊಗಳಿ ಅಟ್ಟಕ್ಕೇರಿಸಬೇಕಿಲ್ಲ, ಪ್ರಧಾನವಾಗಿ ನಮ್ಮ ಪ್ರಾಮಾಣಿಕತೆಯು ಇಂಥದನ್ನೂ ಒಳಗೊಂಡಿರುತ್ತದೆ. ಹೊಗಳುವುದೆಂದರೆ ನಮ್ಮ ಪ್ರಾಮಾಣಿಕತೆಯನ್ನು ಬಿಟ್ಟುಕೊಟ್ಟಂತೆ. ಅತಿ ಶ್ಲಾಘನೆಯಿಂದ ನಾವು ಅಪ್ರಮಾಣಿಕರಾಗುತ್ತೇವೆ. ಇದುವೇ ಮೆಚ್ಚಿಕೆಗೂ ಹೊಗಳಿಕೆಗೂ ಇರುವ ಮೂಲ ವ್ಯತ್ಯಾಸ.

ಇಷ್ಟ ಅಥವಾ ಮೆಚ್ಚಿಕೆಗೂ ಹೊಗಳಿಕೆಗೂ ವ್ಯತ್ಯಾಸವಿದೆ. ಮೊದಲನೆಯದು ಹಾರ್ದಿಕತೆ, ಏನೂ ನಿರೀಕ್ಷಿಸದ ಶುದ್ಧ ಸ್ನೇಹ ಮತ್ತು ಪ್ರೀತಿ. ಎರಡನೆಯದು ಸ್ವಾರ್ಥತೆ, ವೈಯಕ್ತಿಕ ಲಾಭ ನಿರೀಕ್ಷೆಯ ಕೀಳುತನ. ನಾವು ಯಾಕೆ ಹೊಗಳುತ್ತೇವೆ ಅಥವಾ ಹೊಗಳಿಸಿಕೊಳ್ಳಲು ಇಷ್ಟಪಡುತ್ತೇವೆಂದರೆ ನಮ್ಮ ಬಗ್ಗೆ ನಾವೇ ಕಟ್ಟಿಕೊಂಡಿರುವ ಸೆಲ್ಫ್ ಇಮೇಜಿನ ನ್ಯೂನತೆಗಳು ಮತ್ತು ಭ್ರಮೆಗಳು. ಹೊಗಳಿಸಿಕೊಂಡಾಗ ನಾವು ಉಬ್ಬಿ ಹೋಗುತ್ತೇವೆ, ತೆಗಳಿಸಿಕೊಂಡಾಗ ಕುಸಿದು ಬೀಳುತ್ತೇವೆ. ಇದು ನಮ್ಮ ವ್ಯಕ್ತಿತ್ವದ ದೋಷ. ನಮ್ಮ ಬಗ್ಗೆ ಅಂದರೆ ನಮ್ಮ ಶಕ್ತಿಸಾಮರ್ಥ್ಯ ಮತ್ತು ಇತಿಮಿತಿಗಳನ್ನು ನಮಗಿಂತ ಚೆನ್ನಾಗಿ ಉಳಿದವರಾರೂ ಬಲ್ಲವರಲ್ಲ ಎಂಬುದೇ ಅಸರ್ಟೀವ್ ನೇಚರ್. (ವಾಸ್ತವವಾದೀ ಇತ್ಯಾತ್ಮಕ ನೋಟ) ನಮ್ಮನ್ನು ಇತರರು ಹೊಗಳಿದಾಗ ನಾವೇ ಕಟ್ಟಿಕೊಂಡಿರುವ ಇಮೇಜು ಅಳ್ಳಕವಾಗಿದ್ದರೆ ಅಂದರೆ ದೋಷಪೂರಿತವಾಗಿದ್ದರೆ ಬಹುಬೇಗ ವಶರಾಗಿ, ಅವರ ಸ್ವಾರ್ಥದ ಆಯಾಮಗಳನ್ನು ಅರ್ಥಮಾಡಿಕೊಳ್ಳಲಾರದೇ ಬಲಿಪಶುಗಳಾಗಿ ಬಿಡುತ್ತೇವೆ. ನಮ್ಮ ಇಮೇಜು ನಮಗೆ ಸ್ಪಷ್ಟವಾಗಿ ಮತ್ತು ಖಚಿತವಾಗಿ ಗೊತ್ತಿದ್ದರೆ ನಕ್ಕು ಮುಂದಕ್ಕೆ ಸಾಗುತ್ತೇವೆ. ಪ್ರತಿಯೊಬ್ಬರೂ ತಮ್ಮನ್ನು ಕುರಿತಂತೆ ಇಟ್ಟುಕೊಂಡಿರುವ ಅಥವಾ ಸಾಕಿಕೊಂಡಿರುವ ಸ್ವಂತ-ಭಾವವೇ ಸ್ವಪ್ರತೀಕಗಳು. ನಾನು ಹಾಗೆ, ಅಷ್ಟೊಂದು ಶಕ್ತಿಯುಕ್ತಿ ಪ್ರತಿಭೆಗಳಿರುವಂಥವನು, ನನ್ನ ಸಾಧನೆ ದೊಡ್ಡದು, ನನ್ನಿಂದ ಲೋಕಕ್ಕೆ ಲಾಭ ಎಂದೆಲ್ಲಾ ಅಂದುಕೊಳ್ಳುವ ಭ್ರಾಂತಮನಸ್ಥಿತಿಯವರು ತಮ್ಮ ಇಮೇಜನ್ನು ಎತ್ತರದಲ್ಲಿಟ್ಟು ಪೋಷಣೆ ಮಾಡುತ್ತಿರುತ್ತಾರೆ. ಇಂಥವರದು ಅತಿ ಆತ್ಮವಿಶ್ವಾಸ ಅಥವಾ ಅತಿ ಅಹಂಭಾವ. ಇವರು ತಮ್ಮ ಬಗೆಗಿನ ಹೊಗಳಿಕೆಗಳನ್ನು ಇಷ್ಟಪಡುತ್ತಾರೆ. ಇಷ್ಟಿದ್ದರೆ ಅಷ್ಟೂ ಎಂಬ ಕಲ್ಪಿತ ಜಗತ್ತಿನಲ್ಲಿ ಸದಾ ವಾಸಿಸಲು ಬಯಸುವ ಇವರು ತಮ್ಮನ್ನು ಹೊಗಳಿದಾಗ ಅದು ನಿಜವೇನೋ ಎಂಬಂತೆ ತಿಳಿದು ಮೈ ಮರೆಯುತ್ತಾರೆ. ಹೊಗಳಿಕೆಗೆ ವಶರಾಗದವರು ತಮ್ಮ ಇತಿಮಿತಿಗಳನ್ನು ಚೆನ್ನಾಗಿ ಅರಿತವರು. ಇಂದ್ರ ಚಂದ್ರರೆಂದೂ ನಿಮ್ಮನ್ನು ಬಿಟ್ಟರಿಲ್ಲ ಎಂದೂ ಉಬ್ಬಿಸಿದಾಗ ಅದನ್ನು ಸ್ವೀಕರಿಸದೇ ಅಲ್ಲೇ ಬಿಟ್ಟು ಮುನ್ನಡೆಯುತ್ತಾರೆ. ಇದು ಅವರ ಎಲ್ಲ ರೀತಿಯ ಬೆಳವಣಿಗೆಗೆ ಸಹಕಾರಿ ಕೂಡ. ಹಾಗಾಗಿಯೇ ಹೊಗಳಿಕೆಯು ವ್ಯಕ್ತಿಯ ನಿಜವಾದ ಸರ್ವಾಂಗೀಣ ಬೆಳವಣಿಗೆಗೆ ಅಡ್ಡಗಾಲಾಗಬಹುದು. ನಮ್ಮ ಮಕ್ಕಳಷ್ಟು ಬುದ್ಧಿವಂತರು ಬೇರಿಲ್ಲ, ಅವರನ್ನು ಮೀರಿಸಲು ಯಾರಿಂದಲೂ ಆಗದು ಎಂದು ಜಂಭ ಕೊಚ್ಚಿಕೊಳ್ಳುವ ಪೋಷಕರಿಗೆ ಕ್ರಮೇಣ ಸಮಸ್ಯೆಗಳು ಶುರುವಾಗುತ್ತವೆ. ಇದು ಸತ್ಯವೆಂದು ಭಾವಿಸಿದ ಅವರ ಮಕ್ಕಳು ಸೋಮಾರಿಗಳಾಗುತ್ತಾರೆ. ಮಿಥ್ಯಾಜಗತ್ತಿನಲ್ಲಿ ವಾಸಿಸುತ್ತಾ ಅತಿ ಅಹಂಭಾವದಿAದ ವರ್ತಿಸಿ ಮಾನಸಿಕ ಸಮಸ್ಯೆಗಳಿಗೆ ಈಡಾಗುತ್ತಾರೆ. ಹೆಮ್ಮೆ ಮತ್ತು ಅಭಿಮಾನಗಳು ಬೇರೆ; ಸುಳ್ಳುದರ್ಪ, ಬಿಂಕ ಬಿಗುಮಾನಗಳು ಬೇರೆ. ಯಾವತ್ತೂ ಮನುಷ್ಯರಿಗೆ ತಮ್ಮಲ್ಲಿಲ್ಲದ ಶಕ್ತಿಯುಕ್ತಿಗಳೂ ಕೌಶಲ್ಯಪ್ರತಿಭೆಗಳೂ ಇವೆಯೆಂದು ಹೇಳುವವರೇ ಇಷ್ಟ. ಅಂದರೆ ಮೂಲತಃ ಮನುಷ್ಯರಾದ ನಾವು ಸುಳ್ಳೆಂದು ಗೊತ್ತಿದ್ದರೂ ಕ್ಷಣಕಾಲ ಆ ಮಿಥ್ಯಾಜಗತ್ತಿನ ದೊರೆಗಳಾಗಲು ತುದಿಗಾಲಲ್ಲಿ ಕಾಯುತ್ತಿರುತ್ತೇವೆ. ಯಾರಾದರೂ ಹೊಗಳಿದರೆ ಸಾಕು, ಅವರನ್ನು ನಮ್ಮ ಅಭಿಮಾನಗಳೆಂದು ಭಾವಿಸಿ, ಅವರಿಂದ ಇನ್ನಷ್ಟು ಮತ್ತಷ್ಟು ಪರಾಕುಗಳನ್ನು ನಿರೀಕ್ಷಿಸುತ್ತಿರುತ್ತೇವೆ. ಅವರು ತಮ್ಮ ಶ್ಲಾಘನೆಯನ್ನು ಅಲ್ಲಿಗೇ ನಿಲ್ಲಿಸಿ ಸುಮ್ಮನಾದರೆ ನಮ್ಮನ್ನು ಕಂಡರೀಗ ಅವರಿಗೆ ಆಗುತ್ತಿಲ್ಲ, ಯಾರೋ ಚಾಡಿ ಹೇಳಿ ಚುಚ್ಚಿ ಕೊಟ್ಟಿದ್ದಾರೆಂದು ಹೀಗಳೆಯುತ್ತೇವೆ. ಕ್ರಮೇಣ ಶತ್ರುಗಳೆಂದು ಭಾವಿಸಿ, ವೈರತ್ವ ಸಾಧಿಸುತ್ತೇವೆ. ಹೀಗೆ ಲೋಕವೇ ಭ್ರಮಾಧೀನರ ಹುಚ್ಚುಸಂತೆ. ನಿಜವಾದ ಶಕ್ತಿ ಸಾಮರ್ಥ್ಯ ಮತ್ತು ಬುದ್ಧಿ ಭಾವಗಳನ್ನು ಮೆಚ್ಚಿದಾಗ ಮೆಚ್ಚಿದವರಿಗೂ ಮೆಚ್ಚುಗೆ ಪಡೆದುಕೊಂಡವರಿಗೂ ಖುಷಿಯಾಗುತ್ತದೆ. ಮನಸ್ಸು ಬಾಂದಳದ ಬಾನಾಡಿಯಾಗುತ್ತದೆ. ಇನ್ನಷ್ಟು ಮತ್ತಷ್ಟು ಇಂಥ ಒಳ್ಳೆಯ ಕೆಲಸಕಾರ್ಯಗಳನ್ನು ಕೈಗೊಳ್ಳಬೇಕೆಂಬ ಸಂಕಲ್ಪ ಏರ್ಪಡುತ್ತದೆ. ಇದು ಪಾಸಿಟೀವ್ ಅಪ್ರೋಚ್. ಒಂದು ರೀತಿಯಲ್ಲಿ ಬೆನ್ನು ತಟ್ಟುವ ಕೆಲಸ. ಬೆನ್ನು ತಟ್ಟುವುದು, ಬೆನ್ನಿಗಿರುವುದು (ಬೆನ್ನಿಗೆ ಇರಿಯುವುದಲ್ಲ!), ಬೆಂಗಾವಲಾಗಿರುವುದು ಸಹ ಮೆಚ್ಚಿಕೆಯ ಮುಂದುವರಿಕೆಯ ಹಂತವೇ. ಆದರೆ ಇಲ್ಲದ ಕ್ವಾಲಿಟಿಗಳನ್ನೂ ಕ್ವಾಂಟಿಟಿಗಳನ್ನೂ ಇದೆಯೆಂದು ಹೊಗಳಿ ಅಟ್ಟಕ್ಕೇರಿಸಿ, ಬೆಟ್ಟದಿಂದ ಬೀಳಿಸುವುದು ಬರೀ ಕೆಡುಕಲ್ಲ; ನಯವಂಚಕತನ ಕೂಡ. ಹೊಗಳಿ ಹೊನ್ನಶೂಲಕ್ಕೇರಿಸಿ ಪ್ರಾಣ ತೆಗೆಯುವ ಸ್ವಾರ್ಥಮಿತ್ರರಿಗಿಂತ ದೂರದಲ್ಲಿದ್ದು ವೈರತ್ವ ಸಾಧಿಸುವವರೇ ಮೇಲು. ಹೀಗಾಗಿ ಹೊಗಳಿಕೆ ಎಂಬುದು ಪ್ರಾಣವನ್ನೂ ಮಾನವನ್ನೂ ತೆಗೆದು ಬಿಡುವ ವಿಷವರ್ತುಲ. ಒಳಿತನ್ನು ಗುರುತಿಸೋಣ, ಮೆಚ್ಚೋಣ, ಅಭಿನಂದಿಸೋಣ ಮತ್ತು ಪ್ರೋತ್ಸಾಹಿಸೋಣ; ಆದರೆ ಹೊಗಳಿ ಮತ್ತು ಹೊಗಳಿಸಿಕೊಂಡು ವ್ಯಕ್ತಿತ್ವವನ್ನು ಕಳೆದುಕೊಳ್ಳುವುದು ಬೇಡ. ಮಿತಿ ಮೀರಿದ ಹೊಗಳಿಕೆಯು ಕೇವಲ ಹೊನ್ನಶೂಲವಲ್ಲ; ಅದು ಅಸಹ್ಯ ಮತ್ತು ಅಮೇಧ್ಯ.

 –ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

6 Comments on “‘ಹೊನ್ನಶೂಲ’ ದ ಇರುಸು ಮುರುಸು !

  1. ಲೇಖನ ಪ್ರಕಟಿಸಿದ ಪತ್ರಿಕೆಯ ಸಂಪಾದಕರಿಗೆ ಅನಂತ ಧನ್ಯವಾದಗಳು.

    ಓದುಗರಿಗೆ ಅಥವಾ ಸಹಲೇಖಕರಿಗೆ “ಇರುಸು ಮುರುಸು” ಆದರೆ ಕ್ಷಮೆಯಿರಲಿ.
    ನನಗನ್ನಿಸಿದ್ದು ಬರೆದಿರುವೆ.

  2. ಚೆನ್ನಾಗಿದೆ. ಕೊನೆಯ ಸಾಲುಗಳು ಅಪ್ಪಟ ಸತ್ಯ.

  3. ಎಂದಿನಂತೆ ವಿಚಾರ ಶೀಲ ಬರೆಹ…ಸೊಗಸಾದ ನಿರೂಪಣೆ.. ಇಷ್ಟ ವಾಯಿತು .. ಸಾರ್ ವಂದನೆಗಳು..

  4. ಹೊಗಳುವವರು ಮೂರ್ಖರೇ
    ಹೊಗಳಿಸಿಕೊಳ್ಳುವವರು ಇನ್ನೂ ಹೆಚ್ಚಿನ ಮೂರ್ಖರೇ ಎಂದೆನ್ನುತ್ತಾ ಚಿಂತನೆಗೆ ಹಚ್ಚುವ ಲೇಖನವನ್ನು ಬರೆದಿದ್ದೀರ
    ವಂದನೆಗಳು ಸರ್

  5. ಹಿಂದೆ ರಾಜರಿಗೆ ಹೊಗಳುಭಟ್ಟರಿರುತ್ತಿದ್ದರಂತೆ… ಹಾಗೆಯೇ ಈಗ ರಾಜಕೀಯ ಪುಡಾರಿಗಳಿಗೆ! ಹೊಗಳುವಿಕೆ ಮತ್ತು ಮೆಚ್ಚುವಿಕೆಯ ವ್ಯತ್ಯಾಸದ ಕುರಿತು ಮೂಡಿಬಂದ ವಿವರಣಾತ್ಮಕ ಲೇಖನ ಚಿಂತನಯೋಗ್ಯವಾಗಿದೆ.

  6. ಸರ್
    ಮಾತು ಮನಸಿನ ಅಭಿವ್ಯಕ್ತಿ ಹಾಗೆಯೇ ಮಾತಿಗೆ ನಾನಾ ಮುಖಗಳಿವೆ. ನಿಮ್ಮ ಈ ಲೇಖನದಲ್ಲಿ ಹೊಗಳಿಕೆ ಪ್ರಶಂಸೆ ಸ್ತುತಿ ಶ್ಲಾಘನೆ ಮೆಚ್ಚುಗೆ ಮೆಚ್ಚುನುಡಿಗಳ ಆಡುವವರ/ ಬಯಸುವವರ ( ಬೋಸ್ಟಿಂಗ್/ಬೂಸ್ಟಿಂಗ್) ಮನಸ್ಥಿತಿಯನ್ನು ಮನೋವೈದ್ಯರ ಬಗೆಯಲ್ಲಿ ಬಯಲು ಮಾಡಿದ್ದೀರಿ. ಮಾತು ಗಳನ್ನು ಆಡುವುದು/ಸ್ವೀಕರಿಸುವುದು ಇತಿ ಮಿತಿಯಿಲ್ಲಿದ್ದರೆ ಸರ್ವರೀತಿಯಲ್ಲೂ ಹಿತ ಎಂದು ಅಕ್ಕಮಹಾದೇವಿ ಬಸವಣ್ಣನವರ ವಚನಗಳಿಂದ ಮಾತಿನ ಲೌಕಿಕ ಹಾಗೂ ಅಲೌಕಿಕ ಮಗ್ಗುಲುಗಳನ್ನು ತೆರೆದಿಟ್ಟಿದ್ದೀರಿ. ಹೊಗಳಿಕೆ ನಿಂದೆಗಳೆರಡಕ್ಕೂ ನಾವೆಷ್ಟು ಅರ್ಹರು ಎಂದು ” ನಕ್ಕು ಮುಂದೆ ನಡೆಯಬೇಕು” ಎಂಬ ಮಾತಂತೂ ಮಾತುಗಳಿಗೆ ಸ್ಪಂದಿಸುವಲ್ಲಿ ವಿವೇಕ ವಿವೇಚನೆ ಎಷ್ಟು ಪ್ರಧಾನ ಎನ್ನುವುದನ್ನೂ ಸರಳವಾಗಿ ತಿಳಿಸಿಕೊಡುತ್ತದೆ. (ಸರಳವಾಗಿರುವುದು ಅಷ್ಟು ಸುಲಭವಲ್ಲ) ಮಾನವನ ಅತಿಯಾದ ಸ್ತುತಿ ಭ್ರಾಂತಿಗೆ ಕಾರಣವಾದರೆ ದೈವಸ್ತುತಿ ಅಂತರಂಗಕೆ ಶಾಂತಿಯನ್ನು ಬೇಡುವ ಪ್ರಾರ್ಥನೆಯಾಗುತ್ತದೆ. ಬಸವಣ್ಣನವರ “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂಬ ಮಾತು ಎಷ್ಟು ಔಚಿತ್ಯ ಪೂರ್ಣವೋ ಹೊಗಳಿಕೆಯ ಬಗ್ಗೆ ವಿಲಿಯಂ ಷೇಕ್ಸ್ಪಿಯರ್ ನ “Praise us as we are tasted, allow us as we prove. ” ಮಾತು ಕೂಡ ಹೊಗಳಿಕೆಯಲ್ಲಿ authenticity ಎಷ್ಟು ಮುಖ್ಯ ಎಂಬುದನ್ನೂ ತಿಳಿಸುತ್ತದೆ. ಒಟ್ಟಿನಲ್ಲಿ ನಿಮ್ಮ ಒಂದೊಂದೂ ಬರಹವೂ ಬಹುರೂಪಿ ಓದುಗರಿಗೆ ಒಂದೊಂದು ರೀತಿಯ ಥೆರಪಿ. ಇದು ಮತ್ತೆ ಹೊಗಳಿಕೆ ಬರಿಯ ಮೆಚ್ಚುಗೆ ಅಲ್ಲ ಸಹೃದಯಿ ಓದುಗನ ಒಸಗೆ

Leave a Reply to H N MANJURAJ Cancel reply

 Click this button or press Ctrl+G to toggle between Kannada and English

Your email address will not be published. Required fields are marked *