ಪ್ರವಾಸ

ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ದಿನ. 3 

ಬೆಳಗ್ಗೆ ಕಷ್ಟಪಟ್ಟು, ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿ, ನೆಲ ಮಹಡಿಯಲ್ಲಿನ ರೆಸ್ಟೋರೆಂಟ್ ನಲ್ಲಿ ಕಾಂಟಿನೆಂಟಲ್ ಬ್ರೇಕ್ ಫಾಸ್ಟ್. (ಎಲ್ಲಾ ಹಿಂದಿನ ದಿನದ ಐಟಂಗಳು. ನಾವೇ ಬದಲಾಯಿಸಿ ಏನು ಬೇಕೋ ಅದನ್ನು ತಿಂದೆವು.)  ಅವರವರ ರುಚಿಗೆ ಅನುಸಾರವಾಗಿ, ಆರೋಗ್ಯದ ದೃಷ್ಟಿಯಿಂದ, ಅವರವರ ದೇಹಕ್ಕೆ ಒಗ್ಗುವ ತಿನಿಸುಗಳನ್ನು ತಿ೦ದರು. ನಾನ೦ತೂ ಬ್ರೆಡ್, ಜಾಮು,  ಬೇಯಿಸಿದ ಮೊಟ್ಟೆ ತಿ೦ದು ಉಪಹಾರ ಮುಗಿಸಿದೆ. 

ಈ ದಿನ ನಮ್ಮ ಮೊದಲಾರ್ಧ ದಿನದ ಕಾರ್ಯಕ್ರಮ 200 ವರ್ಷಗಳ ಇತಿಹಾಸ ಇರುವ, ಕ್ರಿಕೆಟ್ ಕ್ರೀಡೆಯ ಕಾಶಿ ಎ೦ದೇ ಪ್ರಸಿದ್ಧವಾದ ಅತ್ಯಂತ ಹಳೆಯ ಲಾರ್ಡ್ಸ್ ಕ್ರಿಕೆಟ್ ಮೈದಾನಕ್ಕೆ ಭೇಟಿ.  ಅದರ ಹೆಸರು ಕೇಳಿಯೇ  ಪುಳಕಿತರಾದೆವು. ಅಲ್ಲಿಗೆ ಹೋದಾಗ  ಭಾವ ಪರವಶರಾದೆವು. ಲಾರ್ಡ್ಸ್ ಸ್ಟೇಡಿಯಂ ಕ್ರಿ ಶ 1787 ರಲ್ಲಿ ಮೊದಲಿಗೆ ಸ್ಥಾಪನೆಯಾಗಿ, 1814ರಲ್ಲಿ ಪ್ರಾರಂಭವಾಗಿ 1884ರಲ್ಲಿ ಪ್ರಪ್ರಥಮ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳ ಮಧ್ಯೆ ಆಡಲಾಯಿತು. ಕ್ರಿಕೆಟ್ ನ ಕಾಶಿ ಎಂದು ಹೆಸರಾದ ಲಾರ್ಡ್ಸ್ ಕ್ರಿಕೆಟ್ ಮೈದಾನ ಪ್ರಪಂಚದಲ್ಲೇ ಅತ್ಯಂತ ಹಳೆಯದಾದ ಕ್ರಿಕೆಟ್ ಮೈದಾನ.  ಮೆರಿಲ್ ಬೋನ್ ಕ್ರಿಕೆಟ್ ಕ್ಲಬ್ ನ ಆಡಳಿತದಲ್ಲಿರುವ ಈ ಮೈದಾನಕ್ಕೆ ತನ್ನದೇ ಆದ ಘನತೆ ಆಕರ್ಷಣೆ ಮತ್ತು ಚರಿತ್ರೆ ಇದೆ.  ಆದ್ದರಿಂದ ಇಲ್ಲಿಗೆ ತೀರ್ಥಯಾತ್ರೆಯ ತರಹ ಕ್ರಿಕೆಟ್ ಅಭಿಮಾನಿಗಳು ಭೇಟಿಕೊಡುತ್ತಾರೆ   ಪೆವಿಲಿಯನ್ ಕಡೆಯಿ೦ದ  ಪ್ರವೇಶಿಸಿದಾಗ, ಅಲ್ಲಿಯ ಒಬ್ಬ ಸಿಬ್ಬ೦ದಿ   ನಮ್ಮ ಗೈಡ್ ಆಗಿ,  ನಮ್ಮನ್ನು ವಿವಿಧ ಭಾಗಗಳಿಗೆ ಕರೆದುಕೊಂಡು ಹೋಗಿ ಪರಿಚಯಿಸಿದರು.  ಕೆಲವರು ಗ್ರಾಸ್ ಕಟ್ಟರ್ ತರಹದ ಯಂತ್ರದಿಂದ ಹುಲ್ಲನ್ನು ಸಮನಾಗಿ ಕತ್ತರಿಸಿ ಒಂದೇ ಸಮ ಇರುವಂತೆ ಮಾಡುತ್ತಿದ್ದರು. ಅವರನ್ನು ತೋರಿಸಿ ನಮ್ಮ ಗೈಡ್ ಅವರು ಸಾಮಾನ್ಯ ಜನರಲ್ಲ. ಅತ್ಯಂತ ಸುಪ್ರಸಿದ್ದ ಪಿಚ್ ಕ್ಯೂರೇಟರ್ ಎಂದು ತಿಳಿಸಿದರು ಅಲ್ಲಿಯ ಆಟಗಾರರ ಡ್ರೆಸ್ಸಿಂಗ್ ರೂಮ್ ಗೆ ಹೋದೆವು., . ಡ್ರೆಸ್ಸಿ೦ಗ್ರೂ೦ ನಲ್ಲಿ ಎರಡು ದೊಡ್ಡ ದೊಡ್ಡ ಬೋರ್ಡ್ಗಳಿದ್ದವು.  ಆ ಬೋರ್ಡ್ ಗಳಲ್ಲಿ ಶತಕ ಬಾರಿಸಿದ ಆಟಗಾರರ ಹೆಸರು ಇಸವಿ ಮತ್ತು ರನ್ ಮೊತ್ತ ನಮೂದಿಸಿದ್ದರು. ಅದೇ ತರಹ ಇನ್ನೊಂದು ಬೋರ್ಡ್ ನಲ್ಲಿ ಐದಕ್ಕಿಂತಲೂ ಹೆಚ್ಚಿಗೆ ವಿಕೆಟ್ಗಳನ್ನು ಪಡೆದ ಬೌಲರ್ಗಳ ಹೆಸರುಗಳನ್ನು ಬರೆದಿದ್ದರು. ನಮ್ಮ ಗವಾಸ್ಕರ್, ತೆ೦ಡೂಲ್ಕರ್ ಹೆಸರುಗಳು ಇಲ್ಲದ ಬಗ್ಗೆ ವಿಚಾರಿಸಿದಾಗ ಅವರು ಈ ಮೈದಾನದಲ್ಲಿ  ಶತಕ ಗಳಿಸಿಲ್ಲ ಎಂದು ತಿಳಿಸಿದರು.   ಆದರೆ ನಮ್ಮ ದಿಲೀಪ್ ವೆ೦ಗ್ ಸರ್ಕಾರ್, ಕೆ ಎಲ್ ರಾಹುಲ್ ಹಾಗೂ ಇತರೆ ಭಾರತೀಯ ಆಟಗಾರರ ಹೆಸರುಗಳಿದ್ದಿದ್ದು ನೋಡಿ ಆನಂದ ಪಟ್ಟೆವು.  ಅಲ್ಲಿಂದ ಬಾಲ್ಕನಿಯ ಮೂಲಕ ಹೊರಗೆ ಬಂದರೆ ಹಚ್ಚ ಹಸಿರಿನಿಂದ ಕೂಡಿದ ಕ್ರಿಕೆಟ್ ಮೈದಾನ. ನ೦ತರ ಡ್ರೆಸ್ಸಿ೦ಗ್ ರೂ೦ ನ  ಬಾಲ್ಕನಿಯಿ೦ದ ನಾಲ್ಕು ನಾಲ್ಕು ಜನರನ್ನು  ಗು೦ಪಾಗಿ ಕಳುಹಿಸಿ ಅಲ್ಲಿ೦ದ ನೋಡಲು ಅವಕಾಶ ಮಾಡಿ ಕೊಟ್ಟರು. ಅಲ್ಲಿ ಫೋಟೋ ಸೆಶನ್ ಮುಗಿಸಿ ಎಲ್ಲರೂ ಕೆಳಗೆ ಬಂದು ವಿವಿಧ ಸ್ಟ್ಯಾಂಡ್ ಗಳಲ್ಲಿ ಕುಳಿತು ವಿವಿಧ ಕೋನಗಳಿಂದ ಮೈದಾನದ  ಚಿತ್ರೀಕರಣ ಮುಗಿಸಿ ಸೆಲ್ಫಿಗಳನ್ನು ತೆಗೆದುಕೊಂಡು ನಂತರ ಅಲ್ಲಿಯ ಮ್ಯೂಸಿಯಂ ಗೆ ಹೊರಟೆವು. ಅಲ್ಲಿ ವಿವಿಧ ಟ್ರೋಫಿ ಗಳು, ವರ್ಲ್ಡ್ಕಪ್, ವಿವಿಧ ಆಟಗಾರರ ಬ್ಯಾಟುಗಳು, ಕ್ರಿಕೆಟ್ ಕ್ರೀಡೆಯ ವಿವಿಧ ಪರಿಕರಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

ಅಲ್ಲಿ ಎಲ್ಲಾ ಕಡೆ ಸುತ್ತಾಡಿ  ನಂತರ ನಮ್ಮ ಪ್ರಯಾಣ, ಊಟದ ಹೋಟೆಲ್ ಕಡೆಗೆ ಸಾಗಿತು. 

 ಮಧ್ಯಾಹ್ನದ ಊಟ ಮಾಡಿ ಸುಮಾರು 50-60 ಕಿಲೋಮೀಟರ್ ದೂರದ  ಬೈಸಿಸ್ಟರ್ ವಿಲೇಜ್ ಕಡೆಗೆ ಹೊರಟೆವು. .  ಅದು ವಿವಿಧ ರಾಷ್ಟ್ರೀಯ ಅಂತರಾಷ್ಟ್ರೀಯ ಬ್ರಾಂಡ್ ಗಳ ಬಟ್ಟೆ, ಡ್ರೆಸ್ ಮೆಟೀರಿಯಲ್, ಚರ್ಮದ ಸಾಮಾನುಗಳು ಇತರೆ ವಸ್ತುಗಳ ಮಳಿಗೆಗಳ ಸಮೂಹ.  1995ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಿಸರ್ಗ ಸೌಂದರ್ಯದ ಮಧ್ಯದಲ್ಲಿ 160 ಡಿಸೈನರ್ ಬ್ರಾಂಡ್ ಗಳ ಮಳಿಗೆಗಳನ್ನು ಕಟ್ಟಲಾಗಿತ್ತು. ಲಂಡನ್ನಿಂದ ಒಂದು ಗಂಟೆಯ ಪ್ರಯಾಣ.  ಬ್ರಿಟಿಷ್ ಮತ್ತು ಇಂಟರ್ನ್ಯಾಷನಲ್ ಫ್ಯಾಶನ್ ಮತ್ತು ಲೈಫ್ ಸ್ಟೈಲ್ ಬ್ರಾಂಡ್ ಗಳ ಮಳಿಗೆಗಳು.  ಬಹುತೇಕ ಬಟ್ಟೆಗಳ ಮಳಿಗೆಗಳು ಬಿಟ್ಟರೆ ಬ್ಯಾಗುಗಳು. ನಮಗೆ ಶಾಪಿಂಗ್ ಮಾಡುವ ಯೋಚನೆ / ಯೋಜನೆ ಇಲ್ಲದಿದ್ದರಿಂದ ಹೊರಗಡೆ ಒಂದು ಸುತ್ತು ಸುತ್ತಿ, ಒಂದು ಮರದ ಕೆಳಗೆ ನೆರಳಿನಲ್ಲಿ ಕುಳಿತು ಕೊ೦ಡೆವು.  ಅಲ್ಲಿ ಆ ದುಬಾರಿ ಬೆಲೆ ನೋಡಿ ದಂಗಾಗಿ ಹೋದೆವು.  ನಮ್ಮ ಊರಿನಲ್ಲಿ ನೂರು ರೂಪಾಯಿಗೆ ಸಿಗುವ ವಸ್ತು ಅಲ್ಲಿ ಸಾವಿರ ರೂಪಾಯಿ. ಚಿಕ್ಕ ಮಕ್ಕಳ ಬಟ್ಟೆ ನಮ್ಮಲ್ಲಿ 400 ರೂ  ಇದ್ದರೆ ಅಲ್ಲಿ  ಒಂದು ನೂರು ಪೌಂಡ್ ಅಂದರೆ ಹತ್ತು ಸಾವಿರ ರೂಪಾಯಿ. ಬಹಳಷ್ಟು ಜನ ಎಲ್ಲರೂ ನೋಡುವವರೇ. ಕೊಳ್ಳುವವರು ಯಾರೂ ಇರಲಿಲ್ಲ.  ಆದರೂ ಕೆಲವರು ಚಿಕ್ಕ ಪುಟ್ಟ ವಸ್ತುಗಳನ್ನು ಕೊಂಡರು. 

ಬೈಸಿಸ್ಟರ್ ವಿಲೇಜ್

ನಾವು ಮೊದಲೇ ನಿರ್ಧರಿಸಿದಂತೆ ನಮ್ಮ ಶ್ರೀಮತಿಯವರ  ಅಕ್ಕನ ಮಗಳ ಮನೆಗೆ ಹೋಗುವ ಕಾರ್ಯಕ್ರಮವಿತ್ತು. ಅಕ್ಕನ ಮಗಳು ಪಾವನ.  ಅವಳ ಪತಿ ಮಹೇಶ್ ನಾವು ತಿಳಿಸಿದ ಜಾಗದ ಗುರುತು ಹೇಳಿದ ಮೇಲೆ ಅಲ್ಲಿಗೆ ಬಂದು ನಮ್ಮನ್ನೆಲ್ಲ ಅವರ ಕಾರಿನಲ್ಲಿ ಕರೆದುಕೊಂಡು ಹೋದರು. ನಮಗೂ ಸಹ ಲಂಡನ್ ನ ಜನಜೀವನ, ಜೀವನ ಕ್ರಮ, ವಸತಿಗೃಹಗಳ ವ್ಯವಸ್ಥೆ, ಇವುಗಳನ್ನೆಲ್ಲ ನೋಡುವ ಆಸೆಯಿಂದ  ಉತ್ಸುಕರಾಗಿ   ಅವರ ಜೊತೆ  ಹೊರಟೆವು.  ಒಂದುವರೆ ಗಂಟೆ ಪ್ರಯಾಣದ ನಂತರ ಅವರ ಮನೆ ತಲುಪಿದೆವು.  ದೊಡ್ಡ ದೊಡ್ಡ ರಸ್ತೆಗಳ ಕಾಲೋನಿ, ಪೂರ್ತಿ ಕಾಲೋನಿಯಲ್ಲಿ  ಒಂದೇ ತರಹದ ಮನೆಗಳು.  ಹೊರಗಿನ ವಿನ್ಯಾಸ ಒಂದೇ ತರಹ ಇರಬೇಕೆಂದು ಅಲ್ಲಿಯ ಕಾನೂನು.  ಒಳಗಡೆ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು. ನಮ್ಮನ್ನು ನೋಡಿ ಪಾವನ ಅತ್ಯಂತ ಸಂತೋಷದಿಂದ ಬರಮಾಡಿಕೊಂಡಳು. ಅವರ ಮಗ ಮತ್ತು ಮಗಳು ಸಹ ನಮ್ಮನ್ನು ಕಂಡು ಖುಷಿಪಟ್ಟರು. ಸುಮಾರು 2-3 ಗಂಟೆ  ಕಾಲ ಕಳೆದ ನಂತರ ಬಿಸಿ ಬಿಸಿ ಪಲಾವ್ ರೆಡಿಯಾಗಿ ಅದನ್ನು ಸವಿದು, ನಂತರ ಹತ್ತಿರದಲ್ಲೇ ಇದ್ದ ಮಹೇಶ್ ರವರ ಸಹೋದರನ ಮನೆಗೆ ಭೇಟಿ ಕೊಟ್ಟು, ಅವರ ಆತಿಥ್ಯವನ್ನೂ ಸವಿದು ನಮ್ಮ ಹೋಟೆಲ್ ಕಡೆಗೆ ಹೊರಟೆವು. ಅವರ ಮನೆಯಿಂದ ಸುಮಾರು ಅರ್ಧ ಗಂಟೆಯ ಪ್ರಯಾಣ.  ಬೈ ಸಿಸ್ಟರ್ ವಿಲೇಜ್ ನಿಂದ ಹೊರಡುವಾಗ ನನ್ನ ಬ್ಯಾಕ್ ಪ್ಯಾಕ್ ಅನ್ನು ಬಸ್ಸಿನಲ್ಲಿ ಮರೆತು ಬಿಟ್ಟು ಬಂದದ್ದು ಅರ್ಧ ದಾರಿಗೆ ಬಂದಾಗ ನೆನಪಾಗಿ, ಮರುದಿನ ಬಸ್ ಬದಲಾವಣೆ ಆಗುವುದು ಇದ್ದದ್ದರಿ೦ದ  ನಮ್ಮ ಸ್ನೇಹಿತರಿಗೆ ಹೇಳಿ ಆ ಬ್ಯಾಗನ್ನು ತೆಗೆದುಕೊಂಡು ತಮ್ಮ ಬಳಿಯೇ ಇಟ್ಟು ಕೊಳ್ಳಲು ತಿಳಿಸಿದೆ.  ಆದರೂ ಅದೊಂದು ಆತಂಕ ಇದ್ದೇ  ಇತ್ತು. ಆದ್ದರಿಂದ ಆ ಬಸ್ ವಾಪಸ್ ಹೋಟೆಲ್ಗೆ ಹೋಗುವ ಮೊದಲು ನಾವು ಹೋಟೆಲ್ ಮುಟ್ಟುವ ಪ್ರಯತ್ನ ಮಾಡಿದೆವು.  ಆದರೆ ನಾವು ಹೋಗುವಷ್ಟರಲ್ಲಿ ಬಸ್ಸು ಬಂದು ಹೋಗಿತ್ತು. ನನ್ನ ಬ್ಯಾಗ್ ನಮ್ಮ ಒಬ್ಬ ಸ್ನೇಹಿತರ ಬಳಿ ಇತ್ತು. ಅದನ್ನು ಪಡೆದ ಮೇಲೆ ಸ್ವಲ್ಪ ಮನಸ್ಸು ನಿರಳವಾಯಿತು. ಈ ಆತಂಕ ಇಲ್ಲದಿದ್ದರೆ ಇನ್ನೂ ಸ್ವಲ್ಪ ಹೊತ್ತು ಅವರ ಮನೆಯಲ್ಲಿ ಕಾಲ ಕಳೆಯಬಹುದಾಗಿತ್ತು.  ನಾವು ತಪ್ಪಿಸಿಕೊಂಡ ರಾತ್ರಿಯ ಊಟಕ್ಕೆ, ನಮ್ಮ ಗುಂಪಿನವರು ಒಂದು ಸೌತ್ ಇಂಡಿಯನ್ ಹೋಟೆಲ್ ನಲ್ಲಿ ಅತ್ಯಂತ ಶುಚಿ- ರುಚಿಯಾದ ಇಡ್ಲಿ ದೋಸೆ ತಿಂದೆವು  ಎ೦ದು ಹೇಳಿದಾಗ, ನಮಗೆ ಸ್ವಲ್ಪ ನಿರಾಸೆ, ಹೊಟ್ಟೆಕಿಚ್ಚು, ಅಸೂಯೆ ಉಂಟಾಯಿತು.  

ಇಲ್ಲಿಗೆ ನಮ್ಮ ಲಂಡನ್ ಪ್ರವಾಸ ಮುಕ್ತಾಯವಾಯಿತು.

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44392

ಟಿ.ವಿ.ಬಿ.ರಾಜನ್ , ಬೆಂಗಳೂರು

6 Comments on “ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-6

  1. ಲಂಡನ್ ಪ್ರವಾಸದ ಈ ಮುಂದುವರಿದ ಭಾಗದಲ್ಲಿ ಲಾಡ್ಜ್ ಮೈದಾನದ ವರ್ಣನೆ ಓದಿ ತುಂಬಾ ಸಂತೋಷವಾಯಿತು ಅತ್ಯುತ್ತಮವಾಗಿ ತಮ್ಮ ಅನುಭವವನ್ನು ಪ್ರಚುರಪಡಿಸಿದ್ದಾರೆ ಕೆ ಎಲ್ ರಾಹುಲ್ ಕನ್ನಡಿಗ ಇವರು ಲಾರ್ಡ್ಸ್ ಮೈದಾನದಲ್ಲಿ ಎರಡು ಶತಕ ಭಾರಿಸಿರುವುದು ನಮ್ಮೆಲ್ಲರ ಹೆಮ್ಮೆ ಲೇಖಕರಿಗೆ ಧನ್ಯವಾದಗಳು

  2. ಪ್ರವಾಸ ಕಥನ ಓದಿಸಿಕೊಂಡುಹೋಯಿತು ಸಾರ್

  3. Very good detailing of the places visited especially about Lords stadium. Best Guide for the future visitors planning to take up European tour. Looking forward for next chapter. Very good carry on

  4. ಕ್ರಿಕೆಟ್ ಕಾಶಿಯ ವಿವರಣೆ ಚೆನ್ನಾಗಿದೆ. ಪ್ರವಾಸದ ಅನುಭವಗಳು ಎಂದಿಗೂ ಆಸಕ್ತಿಕರ!

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *