(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ನಮ್ಮ ಮು೦ದಿನ ಭೇಟಿ ಥೇಮ್ಸ್ ನದಿಗೆ ಅಡ್ಡಲಾಗಿ ಕಟ್ಟಿದ್ದ ಲಂಡನ್ ಬ್ರಿಡ್ಜ್.
ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್ ಫಾಲಿಂಗ್ ಡೌನ್ ಪ್ರೈಮರಿ ಶಾಲೆ ಪದ್ಯವನ್ನು ನೆನಪಿಸಿಕೊಳ್ಳುತ್ತಾ, ಲಂಡನ್ ಬ್ರಿಡ್ಜ್ ನೋಡಲು ಹೊರಟೆವು ಥೇಮ್ಸ್ ನದಿಗೆ ಅಡ್ಡಲಾಗಿ ಕಟ್ಟಲಾದ ಲಂಡನ್ ಬ್ರಿಡ್ಜ್ ಗೆ ತನ್ನದೇ ಆದ ಇತಿಹಾಸ ಇದೆ. ಪ್ರಪ್ರಥಮವಾಗಿ ಕ್ರಿ.ಶ 50 ರಲ್ಲಿ ದಕ್ಷಿಣ ಲಂಡನ್ ಮತ್ತು ಕೇಂದ್ರ ಲಂಡನ್ ಸಂಪರ್ಕಿಸಲು ಮರದ ದಿಮ್ಮಿಗಳಿಂದ ಕಟ್ಟಿ, ಅನೇಕ ಸಲ ಬೀಳಿಸಿ ಬೀಳಿಸಿ ಹೊಸದಾಗಿ ಕಟ್ಟುತ್ತಿದ್ದರು. ಆದ್ದರಿಂದಲೇ ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್ ಫಾಲಿಂಗ್ ಡೌನ್ ಪದ್ಯ ಹುಟ್ಟಿಕೊಂಡಿರುವುದು. 12ನೇ ಶತಮಾನದಲ್ಲಿ ಕಲ್ಲಿನ ಸೇತುವೆ ಕಟ್ಟಿದ್ದರು. ಈ ಕಲ್ಲಿನ ಸೇತುವೆ ಸುಮಾರು 600 ವರ್ಷಗಳ ಕಾಲ ಉಪಯೋಗದಲ್ಲಿತ್ತು ಈ ಸೇತುವೆಯ ಜೊತೆಗೆ ಅಂಗಡಿ ಮುಂಗಟುಗಳನ್ನು ಸಹ ಕಟ್ಟಿದ್ದರು. ಕ್ರಿ ಶ 1831 ರಲ್ಲಿ ಈ ಸೇತುವೆಯನ್ನು ಕೆಡವಿ ಅದರ ಸಿಮೆಂಟ್ ಇಟ್ಟಿಗೆಗಳನ್ನು ಅಮೆರಿಕಾದ ಅರಿಝೋನಾಕ್ಕೆ ಮಾರಿ ( ಸಾಗಿಸಿ) ಅಲ್ಲಿ ಕೆರೆ ಕಟ್ಟಿದರಂತೆ. ಇ೦ಗ್ಲೆ೦ಡ್ನಿ೦ದ ಅಮೇರಿಕಾಗೆ ಇಟ್ಟಿಗೆಗಳನ್ನು ಸಾಗಿಸಿದರೆ೦ದರೆ ನ೦ಬುವುದು ಸ್ವಲ್ಪ ಕಷ್ಟವಾಯಿತು. ಕ್ರಿ ಶ 1832 ರಲ್ಲಿ ವಿಕ್ಟೋರಿಯಾ ಕಲ್ಲಿನ ಕಮಾನಿನ ಸೇತುವೆ ಕಟ್ಟಿದರಂತೆ. ನ೦ತರ ಕ್ರಿ ಶ 1971ರಲ್ಲಿ ಈ ಸೇತುವೆಯಿಂದ ಕೆಲವೇ ಮೈಲುಗಳ ದೂರದಲ್ಲಿ ಹೊಸ ಸೇತುವೆಯನ್ನು ಕಟ್ಟಿದರಂತೆ. ಅದೇ ಈಗಿನ ಟವರ್ ಬ್ರಿಡ್ಜ್. ಈಗಿನ ಪ್ರವಾಸಿ ತಾಣ. ಈ ಟವರ್ ಬ್ರಿಡ್ಜ್ಲಂಡನ್ ಬ್ರಿಡ್ಜ್ನಿ೦ದ ಸ್ವಲ್ಪ ದೂರದಲ್ಲಿದೆ. ಅದರ ಮುಂದೆ ನಿಂತು ವಿವಿಧ ಭ೦ಗಿಗಳಲ್ಲಿ ಫೋಟೋ ತೆಗೆದುಕೊಂಡು, ನಂತರ ಪಕ್ಕದಲ್ಲಿ ಕೋಟೆಯಂತಿದ್ದ ಲಂಡನ್ ಟವರ್ ಗೆ ತೆರಳಿದೆವು.
ಥೇಮ್ಸ್ ನದಿಯ ದಡದಲ್ಲಿರುವ ಕೋಟೆ ಯ೦ತಹ ಕಟ್ಟಡ ಲಂಡನ್ ಟವರ್. ಕ್ರಿ ಶ 1066 ರಲ್ಲಿ ವಿಲಿಯಂ ಕಟ್ಟಿಸಿದ್ದು. ಆಗಿನ ಕಾಲಕ್ಕೆ ಅದೇ ಅರಮನೆ, ಸೆರೆಮನೆ, ಖಜಾನೆ, ಯುದ್ಧ ಸಾಮಗ್ರಿಗಳ ಗೋದಾಮು, ಪ್ರಾಣಿ ಸಂಗ್ರಹಾಲಯ ಇತ್ಯಾದಿ. ಅದು ಈಗ ಯುನೆಸ್ಕೋ ದ ಪಾರ೦ಪರಿಕ ತಾಣವಾಗಿ, ಪ್ರವಾಸೀ ತಾಣವಾಗಿದೆ. ನಮ್ಮದೇ ದೇಶದಿಂದ ಕೊಂಡೊಯ್ದ ಕೊಹಿನೂರ್ ವಜ್ರವನ್ನು ಅಲ್ಲೇ ಇರಿಸಲಾಗಿದೆ ಎಂದು ಹೇಳಲಾಗುತ್ತದೆ . ಅದರ ಸುತ್ತ (ಒಳಗೆ ಪ್ರವೇಶವಿರಲಿಲ್ಲ ಅಥವಾ ನಮಗೆ ಸಮಯದ ಅಭಾವವೋ ಗೊತ್ತಿಲ್ಲ) ಒ೦ದು ಸುತ್ತು ಸುತ್ತಿ, ನಮ್ಮ ಗೈಡ್ ಸೂಚನೆ ಪ್ರಕಾರ ಮತ್ತೆ ಬಸ್ ಹತ್ತಿದೆವು.
ಅಷ್ಟೊತ್ತಿಗೆ ಊಟದ ಸಮಯ ಸಮೀಪಿಸಿದ್ದರಿಂದ ನಮ್ಮ ಪ್ರಯಾಣ ಊಟದ ಹೋಟೆಲ್ ಕಡೆಗೆ ಸಾಗಿತ್ತು. ನಮ್ಮ ಬಸ್ ಪ್ರಮುಖ ರಸ್ತೆಗಳ ಮುಖಾಂತರ ಸುತ್ತಿ ಬಳಸಿ ಕೊನೆಗೆ ಬೆಂಗಳೂರು ಕೆಫೆ ಎನ್ನುವ ರೆಸ್ಟೋರೆಂಟ್ ಬಳಿ ಇಳಿಸಿದರು. ಲ೦ಡನ್ನಲ್ಲಿ ಓಡಾಡುವ ಉತ್ಸಾಹ ಮತ್ತು ಭಾವನಾತ್ಮಕ ಸ೦ತೋಷ ದೊ೦ದಿಗೆ ಹೆಜ್ಜೆ ಹಾಕಿ ರೆಸ್ಟಾರೆ೦ಟ್ ಮುಟ್ಟಿದೆವು. ಅಲ್ಲಿ ನಮಗೆ ನಮ್ಮ ಪ್ರವಾಸದ ಮೊದಲನೇ ಕಹಿ ಅನುಭವ ವಾಯಿತು. ಆಗಲೇ 40-50 ಜನ ನಿ೦ತಿದ್ದ ಸರತಿ ಸಾಲಿನಲ್ಲಿ ಹೋಗಿ ನಿ೦ತಾಗ ,ಅಲ್ಲಿಯ ಸಿಬ್ಬ೦ದಿ ಅದು ಬೇರೆ ಗು೦ಪಿನದೆ೦ದೂ, ನಮ್ಮ ಗುಂಪಿಗೆ ಇನ್ನೊಂದು ಕಡೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದಾಗ, ನಾವು ಅತ್ತ ಕಡೆ ಹೋದೆವು. ಅದು ಕಿರಿದಾದ ಜಾಗ , ಊಟ ಮಾಡಲು ಇಕ್ಕಟ್ಟು, ಬಫೆ ಸಿಸ್ಟ೦ ನಲ್ಲಿ ಬಡಿಸಿಕೊಳ್ಳಲು ಇಕ್ಕಟ್ಟು, , ಕೈ ತೊಳೆಯ ಬೇಕೆಂದರೆ ಒಂದೇ ವಾಷ್ಬೇಸಿನ್. ನಂತರ ಸುಮಾರು ಒಂದುವರೆ ಗಂಟೆಗಳಲ್ಲಿ ಪ್ರಯಾಸದಿಂದ ಊಟದ ಕಾರ್ಯಕ್ರಮ ಮುಗಿಸಿದೆವು. ಉತ್ತರ ಭಾರತದ ರೋಟಿ, ಕರ್ರಿ, ಪಲಾವ್, ರೈಸ್ ಬಾತ್, ರಸಂ, ಹಪ್ಪಳ, ಉಪ್ಪಿನಕಾಯಿ, ಸಲಾಡ್ ಇತರೆ ತಿನಿಸುಗಳು. ಪ್ರವಾಸದ ಮೊದಲನೇ ದಿನ ಆದ್ದರಿಂದ ಇಕ್ಕಟ್ಟಿನಿ೦ದಾಗಿ ಸ್ವಲ್ಪ ಬೇಜಾರಾದರೂ ಎಂಜಾಯ್ ಮಾಡುವ ಉದ್ದೇಶದಿಂದ ಎಲ್ಲಾ ಮುಗಿಸಿ ಬಸ್ ಹತ್ತಿದೆವು. ನಮ್ಮ ನಗರ ಪ್ರದಕ್ಷಿಣೆ ಮುಂದುವರೆಯಿತು.
ನಮ್ಮ ಪ್ರಯಾಣ ಸುಪ್ರಸಿದ್ಧ ಮೇಡಂ ತುಸಾಡ್ ವ್ಯಾಕ್ಸ್ ಮ್ಯೂಸಿಯಂ ಕಡೆಗೆ ಸಾಗಿತ್ತು. ಫ್ರೆಂಚ್ ಶಿಲ್ಪಿ ಮೇರಿ ತುಸಾಡ್ ಕ್ರಿ ಶ 1835 ರಲ್ಲಿ ಸ್ಥಾಪಿಸಿದ ಈ ಮೇಣದ ಪ್ರತಿಮೆಗಳ ಸ೦ಗ್ರಹಾಲಯ ಜಗತ್ತಿನ ರಾಜಕೀಯ, ಸಿನಿಮಾ ಮತ್ತು ಕ್ರೀಡಾ ಲೋಕದ ಖ್ಯಾತನಾಮರ ಕಲಾಕೃತಿಗಳನ್ನು ಮೇಣದಲ್ಲಿ ತಯಾರಿಸಿ ಪ್ರದರ್ಶನ ಕ್ಕೆ ಇಡಲಾಗಿದೆ. 1925 ರಲ್ಲಿ ಬೆ೦ಕಿ ಮತ್ತು 1940 ರಲ್ಲಿ ಎರಡನೇ ಮಹಾಯುದ್ಧದ ದಾಳಿಗೆ ತುತ್ತಾದರೂ ಅದನ್ನು ಪುನರುಜ್ಜೀವನಗೊಳಿಸಿ ಇಂದಿಗೂ ಅದೊ೦ದು ಲ೦ಡನ್ನಗರದ ಮುಖ್ಯ ಪ್ರವಾಸಿ ಆಕರ್ಷಣೆಯಾಗಿದೆ . ನಮ್ಮ ಮಾರ್ಗದರ್ಶಕರ ಸೂಚನೆಯಂತೆ ಒಂದೊಂದೇ ಅಂತಸ್ತಿನಲ್ಲಿದ್ದ ವಿವಿಧ ಸೆಲೆಬ್ರಿಟಿಗಳ ಮೇಣದ ಪ್ರತಿಮೆಗಳ ಜೊತೆಗೆ ಇನ್ನಿತರೆ ಕಲಾಕೃತಿಗಳನ್ನು ನೋಡಿದೆವು. ಸಚಿನ್ ತೆಂಡೂಲ್ಕರ್, ಗವಾಸ್ಕರ್, ಅಮಿತಾಬ್ ಬಚ್ಚನ್, ಪ್ರಿನ್ಸೆಸ್ ಡಯಾನ, ಇಂತಹ ಖ್ಯಾತ ನಾಮರ ಪ್ರತಿಮೆಗಳ ಹತ್ತಿರ ನಮ್ಮ ಫೋಟೋಗಳನ್ನು ತೆಗೆದುಕೊಂಡು ಆನ೦ದಿಸಿದೆವು. ಆದರೆ ಬಹು ನಿರೀಕ್ಷಿತ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಯ ಮುಂದೆ ಕೈ ಮುಗಿದು ನಿಂತು ಫೋಟೋ ತೆಗೆದುಕೊಳ್ಳುವ ನಮ್ಮ ಆಸೆ ಕೈಗೂಡಲಿಲ್ಲ. ಏಕೆಂದರೆ ಆ ಪ್ರತಿಮೆಯನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು. ಅಲ್ಲಿಯೇ ಇದ್ದ ಪುಟಾಣಿ ರೈಲಿನಲ್ಲಿ ಕುಳಿತು ಛೇ೦ಬರ್ ಆಫ್ ಹಾರರ್ (ಲ೦ಡನ್ ನಗರದ ಭಯಾನಕ ಅಪರಾಧಗಳ ದೃಶ್ಯಗಳು) ನ ಒಂದು ಸುತ್ತು ಸುತ್ತಿ ವಿವಿಧ ಆಕೃತಿಗಳು ಹಾಗು ಥೀ೦ ಗಳ ಕಲಾಕೃತಿಗಳನ್ನು ನೋಡಿ ನಂತರ ಹೊರಗೆ ಬಂದು ಇತರ ಸಹ ಪ್ರಯಾಣಿಕರು ಬರುವುದನ್ನು ಕಾಯುತ್ತಿದ್ದೆವು. ಅಷ್ಟರಲ್ಲಿ ನಾನು ಮತ್ತು ನನ್ನ ತಂಗಿ ಸ್ವಲ್ಪ ಸುತ್ತಮುತ್ತ ಅಡ್ಡಾಡಿ ಲಂಡನ್ ನ ಪರಿಚಯ ಮಾಡಿಕೊಳ್ಳಲು ಪ್ರಯತ್ನಪಟ್ಟೆವು. ಅಲ್ಲೇ ಇದ್ದ ಮೆಟ್ರೋ ಸ್ಟೇಷನ್, ವಿವಿಧ ರೆಸ್ಟೋರೆಂಟ್ ಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡೆವು.
ನಂತರ ಅಲ್ಲಿಂದ ನಾವು ಲಂಡನ್ ಐ ನೋಡಲು ಹೊರಟೆವು. ಥೇಮ್ಸ್ ನದಿಯ ದಕ್ಷಿಣ ಭಾಗದಲ್ಲಿ 135 ಮೀಟರ್ ಎತ್ತರದ 32 ಗಾಜಿನ ತೊಟ್ಟಿಲುಗಳು ಇರುವ ವೀಕ್ಷಣಾ ಚಕ್ರ . ಇದರಲ್ಲಿ ಕುಳಿತು ಲಂಡನ್ ನಗರದ 360 ಡಿಗ್ರೀ ವಿಹ೦ಗಮ ದೃಶ್ಯ ನೋಡಬಹುದು. . 1999 ರಲ್ಲಿ ಪ್ರಾರ೦ಭವಾಗಿ ಇದೊಂದು ಪ್ರಮುಖ ಪ್ರವಾಸಿ ಆಕರ್ಷಣೆ ಯಾಗಿದೆ, ನಮ್ಮ ಗೈಡ್ ಅದರ ವಿಚಾರ ತಿಳಿಸುತ್ತಾ ಅದೊಂದು ಯಾ೦ತ್ರೀಕೃತ ಜಯಂಟ್ ವ್ಹೀಲ್ (ನಮ್ಮ ಜಾತ್ರೆಗಳಲ್ಲಿ ಕಾಣುವ ರಂಕಲ್ ರಾಟೆ) .ಅದರಲ್ಲಿ 32 ಕೇಬಲ್ ಕಾರ್ ತರಹದ ರಚನೆಗಳಿದ್ದು, ಅದು ಪೂರ್ತಿ ಗಾಜಿನಿಂದ ಮಾಡಲ್ಪಟ್ಟಿದ್ದು, ಅದರಲ್ಲಿ ಸುಮಾರು 25 ರಿಂದ 30 ಜನ ಕುಳಿತು ಅಥವಾ ನಿಂತು ಹೊರಗಿನ ದೃಶ್ಯ ವೀಕ್ಷಣೆ ಮಾಡಬಹುದು. 32 ಕೇಬಲ್ ಕಾರುಗಳು ಗ್ರೇಟ್ ಬ್ರಿಟನ್ ನ 32 ರಾಜ್ಯಗಳನ್ನು ಪ್ರತಿನಿಧಿಸುವುದಾಗಿಯೂ ತಿಳಿಸಿ, ಅದು ಒಂದು ಸುತ್ತು ಸುತ್ತಲು ಸುಮಾರು 40 ನಿಮಿಷಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು. ಅದರಂತೆ ನಾವು ಸಾವಿರಾರು ಜನರ ಜೊತೆ ಸರತಿಯಲ್ಲಿ ನಿಂತು ನಮ್ಮ ಸರದಿಗಾಗಿ ಕಾಯತೊಡಗಿದ್ದೆವು. ನಮ್ಮ ಸರದಿ ಬಂದಾಗ ಒಂದು ಕೇಬಲ್ ಕಾರ್ ನಲ್ಲಿ ಪ್ರವೇಶಿಸಿ ಕುಳಿತುಕೊ೦ಡೆವು, ಸುತ್ತ ನಿಂತ ಜನರಿಂದ ನಮಗೆ ಹೊರಗಿನ ದೃಶ್ಯ ಸರಿಯಾಗಿ ಕಾಣಿಸುತ್ತಿರಲಿಲ್ಲ. ಆದ್ದರಿಂದ ನಾವೂ ನಿಂತು ಹೊರಗಿನ ದೃಶ್ಯ ನೋಡಿದೆವು. ಥೇಮ್ಸ್ ನದಿಯಲ್ಲಿಯ ದೋಣಿಗಳು, ಚಿಕ್ಕ ಚಿಕ್ಕ ಹಡಗು, ಸೇತುವೆಗಳು, ಗೋಚರಿಸುತ್ತಿದ್ದವು. ಲಂಡನ್ ನ ವಾಹನ ಭರಿತ ಬೀದಿಗಳು, ಜನ, ವಾಹನಗಳು, ದೊಡ್ಡ ದೊಡ್ಡ ವಿವಿಧ ವಿನ್ಯಾಸಗಳ ಕಟ್ಟಡಗಳು, ಇನ್ನೂ ಸ್ವಲ್ಪ ಮೇಲೆ ಹೋದಂತೆ ಬಿಗ್ ಬೆನ್ (ಕ್ಲಾಕ್ ಟವರ್) ಲಂಡನ್ ಬ್ರಿಡ್ಜ್, ಪಾರ್ಲಿಮೆಂಟ್ ಹೌಸ್, ಇಂತಹ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳು ಕಾಣುತ್ತಿದ್ದವು. ಅತ್ಯಂತ ತುತ್ತ ತುದಿಯಲ್ಲಿದ್ದಾಗ ಲಂಡನ್ ನಗರ, ಥೇಮ್ಸ್ ನದಿಯ ದೃಶ್ಯ ನಯನ ಮನೋಹರವಾಗಿತ್ತು. ಎಷ್ಟು ಫೋಟೋಗಳನ್ನು ತೆಗೆದುಕೊಂಡರೂ ಸಾಲದು. ಸ್ವಲ್ಪ ಹೊತ್ತಿನ ನಂತರ ನಿಧಾನವಾಗಿ ಕೆಳಗೆ ಇಳಿಯಲು ಪ್ರಾರಂಭಿಸಿದಾಗ, ನಮ್ಮ ಗುಂಪಿನವರೇ ಕೆಲವರು ಎದುರುಗಡೆಯ ಕೇಬಲ್ ಕಾರ್ ನಲ್ಲಿ ಫೋಟೋಗಳನ್ನು ತೆಗೆಯುತ್ತಿದ್ದನ್ನು ಕ೦ಡು, ನಾವು ಅವರ ಫೋಟೋ ತೆಗೆದು ಅವರಿಗೆ ತೋರಿಸಿದಾಗ ತುಂಬಾ ಆನಂದ ಪಟ್ಟರು. ಅಂತೂ ಕೊನೆಗೆ ಲಂಡನ್ ಐ ಕಾರ್ಯಕ್ರಮ ಮುಗಿಸಿ ಎಲ್ಲರೂ ಬಸ್ಸಿನ ಹತ್ತಿರ ಬಂದು, ಆಗಲೇ ಸಾಯಂಕಾಲ ಆಗಿದ್ದರಿಂದ ನಮ್ಮ ಪ್ರಯಾಣ ನಾವು ತಂಗಿದ್ದ ರಾಡಿಸನ್ ಹೋಟೆಲ್ ಕಡೆಗೆ.
ದಾರಿಯಲ್ಲಿ ನಮ್ಮ ಹೋಟೆಲ್ ಸಮೀಪ ಬರುತ್ತಿದ್ದಂತೆ ನಮ್ಮ ಬಸ್ ಒಂದು ರೆಸ್ಟೋರೆಂಟ್ ಮುಂದೆ ನಿಂತಿತ್ತು. ನಮ್ಮ ಗೈಡ್ ಎಲ್ಲರೂ ರಾತ್ರಿ ಡಿನ್ನರ್ ಗೆ ಬರಬೇಕಂತ ತಿಳಿಸಿದಾಗ ಇಷ್ಟು ಬೇಗನೇ ಎ೦ತಾ ಊಟ ಎ೦ದು ಕೊಳ್ಳುತ್ತಾ ಸಮಯ ನೋಡಿಕೊಂಡರೆ ಆಗಲೇ 7. 45 ಗಂಟೆ ಆಗಿತ್ತು. ಆದರೆ ಇನ್ನೂ ಸೂರ್ಯ ಸರಿಯಾಗಿ ಮುಳುಗಿರಲಿಲ್ಲ. ನಮ್ಮ ಊರಿನಲ್ಲಿ ಸಂಜೆ 5.30 ಇದ್ದ ಹಾಗೆ ಅನಿಸುತ್ತಿತ್ತು. ಆದರೆ ಬೇರೆ ದಾರಿ ಇಲ್ಲದೆ ಊಟ ಮುಗಿಸಿ ಹೋಟೆಲ್ಗೆ ಬಂದು ರೂಮುಗಳನ್ನು ಸೇರಿದೆವು. ಹಿಂದಿನ ದಿನದ ಪ್ರಯಾಣದ ದಣಿವು ಮತ್ತು ಇ೦ದಿನ ನಗರ ಪ್ರದಕ್ಷಿಣೆಯ ಪ್ರವಾಸದಿಂದ ದಣಿವಾಗಿದ್ದರಿ೦ದ ಸಮಯದ ಪರಿವೆ ಇಲ್ಲದೆ ಮಲಗಿದ ತಕ್ಷಣ ನಿದ್ರಾದೇವಿ ಆವರಿಸಿಕೊಂಡಳು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44371

–ಟಿ.ವಿ.ಬಿ.ರಾಜನ್ , ಬೆಂಗಳೂರು



