ಪ್ರವಾಸ

ರೇಣುಕೆಯು ಯಲ್ಲಮ್ಮನಾದಾಗ

Share Button

‘ಛಟೀಲ್ ಛಟೀಲ್ ಎಂದು ಬಿತ್ತು ಕೊಡಲಿಯ ಏಟು. ಹಾರಿತ್ತು ರೇಣುಕೆಯ ರುಂಡ, ಆಯಿತು ನೂರಾರು ಹೋಳು. ಆದವು ಎಲ್ಲರ ತಾಯಿಯಾದ ಯಲ್ಲಮ್ಮನ ಶಿರಗಳು, ಅಪ್ಪಿಕೊಂಡಳು ಮಂಗಳಮುಖಿಯರಾದ ತನ್ನೊಡಲಿನ ಕಂದಮ್ಮಗಳನ್ನು. ಕಾದಳು ಈ ಗಂಡುಗಳ ದಬ್ಬಾಳಿಕೆಯಲ್ಲಿ ನೊಂದು ನರಳಿದ ಹೆಂಗಸರನ್ನು.’ ಈ ಕರುಣಾಜನಕ ಕಥೆ ಯಾರದಿರಬಹುದು? ಮತ್ಯಾರದು ಹೇಳಿ – ತನ್ನ ಪತಿ ಜಮದಗ್ನಿಯ ಕೋಪಕ್ಕೆ ತುತ್ತಾಗಿ, ತನ್ನ ಕಂದ ಪರಶುರಾಮನಿಂದಲೇ ಹತಳಾಗಿ ಮರುಜನ್ಮ ಪಡೆದ ತಾಯಿ ರೇಣುಕೆಯದು. ರೇಣುಕೆಯ ಕಥೆಯನ್ನು ಕೇಳಿ ಮನ ಮಿಡಿದಿತ್ತು. ಎಲ್ಲರ ಮನೆ ಮನಗಳಲ್ಲಿ ನೆಲೆ ನಿಂತಿದ್ದ ಯಲ್ಲಮ್ಮನ ಪವಿತ್ರ ತಾಣವನ್ನು ನೋಡಲೇಬೇಕೆಂಬ ಆಸೆ ಮನದಲ್ಲಿ ಚಿಗುರೊಡೆಯತೊಡಗಿತ್ತು.

ನಾವು ಇತ್ತೀಚೆಗೆ ನಿರ್ಮಲಕ್ಕ ಮತ್ತು ಕುಮಾರ್ ಭಾವನವರೊಂದಿಗೆ ಶ್ರೀಕ್ಷೇತ್ರ ಸವದತ್ತಿಗೆ ತೆರಳಿ ಯಲ್ಲಮ್ಮನ ದರ್ಶನ ಮಾಡಿದೆವು. ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿಯಿಂದ ಐದು ಕಿ.ಮೀ ದೂರದಲ್ಲಿರುವ ಯಲ್ಲಮ್ಮನ ಗುಡ್ಡದ ಬುಡದಲ್ಲಿ ನೆಲೆಯಾಗಿರುವ ದೇಗುಲವಿದು. ಏಳು ಕೊಂಡದ ತಾಯಿ ಯಲ್ಲಮ್ಮ ಏಳು ಗುಡ್ಡಗಳ ಮಧ್ಯೆ ನೆಲಸಿರುವಳು. ಈ ಗುಡ್ಡಗಳ ಹೆಸರು – ಸೌಗಲಾ ಗುಡ್ಡ, ನವಿಲು ತೀರ್ಥ, ಯಲ್ಲಮ್ಮ ಗುಡ್ಡ, ಮೂರುಗೋಡು, ಮನವಲ್ಲಿ ಗುಡ್ಡ, ಸವದತ್ತಿ ಗುಡ್ಡ ಹಾಗೂ ಪರಶುಗಾಡ ಗುಡ್ಡ. ಕುಂಕುಮ ಹೊಂಡ, ಅರಿಶಿಣ ಹೊಂಡ ಮತ್ತು ಎಣ್ಣೆ ಹೊಂಡಗಳೂ ಯಲ್ಲಮ್ಮನ ದೇಗುಲವನ್ನು ಸುತ್ತುವರೆದಿವೆ. ಏಳು ಗುಡ್ಡಗಳ ಮಧ್ಯೆ ಇರುವ ಈ ಪುಣುಕ್ಷೇತ್ರವೇ ಮಹರ್ಷಿ ಜಮದಗ್ನಿಗಳ ಆಶ್ರಮವಾಗಿತ್ತು. ಮಹರ್ಷಿಗಳು ನಡೆಸಿದ ಯಜ್ಞ ಯಾಗಾದಿಗಳು, ಜಪ ತಪಗಳಿಂದ ಇದು ಪುಣ್ಯ ಭೂಮಿಯಾಗಿತ್ತು. ಇಂದು ಈ ಪವಿತ್ರ ಕ್ಷೇತ್ರದಲ್ಲಿ ‘ಉಧೋ ಉಧೋ ಯಲ್ಲಮ್ಮ’ ಎಂಬ ಕೂಗು ಎಲ್ಲೆಡೆ ಮಾರ್ದನಿಗೊಳ್ಳುತ್ತಿತ್ತು.

ದಕ್ಷಿಣ ಭಾರತದ ಶಕ್ತಿ ದೇವತೆಯಾದ ಸವದತ್ತಿ ಯಲ್ಲಮ್ಮ ಕೋಟ್ಯಾಂತರ ಜನರ ಆರಾಧ್ಯ ದೈವ. ಭವ್ಯವಾದ ಇತಿಹಾಸವುಳ್ಳ ಈ ಪವಿತ್ರ ಕ್ಷೇತ್ರಕ್ಕೆ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಆಧ್ಯಾತ್ಮಿಕ ಪರಂಪರೆಯೂ ಇದೆ. ವಾಸ್ತುಶಿಲ್ಪಿಗಳ ಅಂದಾಜಿನಂತೆ ಈ ದೇಗುಲದ ನಿರ್ಮಾತೃಗಳು ಚಾಲುಕ್ಯರು, ರಾಷ್ಟ್ರಕೂಟರು ಹಾಗೂ ದ್ರಾವಿಡರು. ಪುರಾತತ್ವಶಾಸ್ತ್ರಜ್ಞರ ಸಂಶೋಧನೆಯ ಪ್ರಕಾರ ಕ್ರಿ.ಪೂ. ಮೂರನೆಯ ಶತಮಾನದಲ್ಲಿಯೇ ಈ ಕ್ಷೇತ್ರ ತಾಂತ್ರಿಕರ ನೆಲೆಯಾಗಿತ್ತು. ಅಂದು ಸಿದ್ದಾಚಲ ಪರ್ವತವೆಂದು ಕರೆಯಲ್ಪಡುತ್ತಿದ್ದ ಈ ಸ್ಥಳವು ಹಲವು ಸಿದ್ದರ ವಾಸಸ್ಥಾನವಾಗಿದ್ದು, ಇಲ್ಲಿನ ಮಣ್ಣಿನ ಕಣಕಣದಲ್ಲೂ ಫಲವತ್ತತೆಯ ನಾದ ಹೊಮ್ಮುವುದು. ಇತಿಹಾಸ ತಜ್ಞರ ಅನಿಸಿಕೆಯಂತೆ ಸುಮಾರು ಏಳು ಅಥವಾ ಎಂಟನೆಯ ಶತಮಾನದಲ್ಲಿ ಈ ದೇಗುಲದ ನಿರ್ಮಾಣವಾಗಿರಬಹುದು. ಮುಂದೆ ೧೫೧೪ ರಲ್ಲಿ ಬೊಮ್ಮಪ್ಪ ನಾಯಕನು ಈ ದೇಗುಲವನ್ನು ಅಭಿವೃದ್ದಿಪಡಿಸಿದ. ಸಪ್ತಮಾತೃಕೆಯರಲ್ಲಿ ಒಬ್ಬಳಾದ ದೇವಿ ಯಲ್ಲಮ್ಮ ದೀನ ದಲಿತರ ಕುಲದೇವತೆಯಾಗಿದ್ದಳು.

ರೇಣುಕೆ ಯಾರು? ಯಲ್ಲಮ್ಮ ಯಾರು? ಇವರ ಕಥೆಯೇನು ಎಂಬುದರ ಪೌರಾಣಿಕ ಹಿನ್ನೆಲೆಯನ್ನು ಅವಲೋಕಿಸೋಣ ಬನ್ನಿ – ಕಾಶ್ಮೀರದ ದೊರೆ ಸೂರ್ಯವಂಶದ ಕುಡಿ ಪ್ರಸೇನಜಿತ್‌ನ ಪುತ್ರಿ ರೇಣುಕೆ. ರಾಜನಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ಅವನು ಸಂತಾನಪ್ರಾಪ್ತಿಗಾಗಿ ಯಜ್ಞವನ್ನು ಮಾಡಿದಾಗ ಧಗಧಗನೆ ಉರಿಯುತ್ತಿದ್ದ ಅಗ್ನಿಯಿಂದ ಚಿಮ್ಮಿದ ಕೂಸು ಚಿನ್ನದಂತೆ ಕಂಗೊಳಿಸುತ್ತಿದ್ದಳು. ಹಾಗಾಗಿ ಇವಳು ‘ಅಗ್ನಿಜ’ ಎಂದೂ ತಾಯಿಯ ಗರ್ಭದಿಂದ ಜನಿಸಿಲ್ಲವಾದ್ದರಿಂದ ‘ಅಯೋನಿಜ’ಳೆಂದೂ ಕರೆಯಲ್ಪಡುವಳು. ಒಮ್ಮೆ ಸಪ್ತರ್ಷಿಗಳಲ್ಲಿ ಒಬ್ಬನಾದ ಜಮದಗ್ನಿ ಮಹರ್ಷಿಯು ಕಾಶ್ಮೀರಕ್ಕೆ ಬೇಟಿಯಿತ್ತಾಗ ರೇಣುಕೆಯನ್ನು ಕಂಡು ಮೋಹಿತನಾಗಿ, ತನಗೆ ಅವಳನ್ನು ಕೊಟ್ಟು ವಿವಾಹ ಮಾಡಬೇಕೆಂದು ರಾಜನಲ್ಲಿ ಕೋರುವನು. ಅರಮನೆಯಲ್ಲಿ ಬೆಳೆದ ರಾಜಕುವರಿಯು ಜಮದಗ್ನಿಯನ್ನು ಮದುವೆಯಾಗಿ ಅವರ ಆಶ್ರಮದಲ್ಲಿ ಸಂತೃಪ್ತ ಜೀವನವನ್ನು ನಡೆಸುವಳು. ಅವಳ ಪಾತಿವ್ರತ್ಯ ಧರ್ಮ ಎಷ್ಟಿತ್ತೆಂದರೆ, ತನ್ನ ಪತಿಯ ಪೂಜೆ ಪುನಸ್ಕಾರಗಳಿಗೆ ನೀರನ್ನು ನದಿಯಿಂದ ತರಲು, ನದಿಯ ದಡದಲ್ಲಿರುವ ಮರಳಿನಿಂದ ಕೊಡವನ್ನು ಮಾಡಿ, ಹಾವನ್ನು ಸುರುಳಿ ಮಾಡಿ ತಲೆಯ ಮೇಲಿಟ್ಟು, ಕೊಡದ ತುಂಬಾ ನೀರನ್ನು ತುಂಬಿಸಿ ತಮ್ಮ ಆಶ್ರಮಕ್ಕೆ ಹೊತ್ತು ತರುತ್ತಿದ್ದಳು. ಒಂದು ದಿನ ಎಂದಿನಂತೆ ರೇಣುಕೆಯು ನದಿಯಿಂದ ನೀರು ತರಲು ಹೋದಾಗ, ಆ ನದಿಯಲ್ಲಿ ಗಂಧರ್ವ ರಾಜನೊಬ್ಬ ತನ್ನ ಮಡದಿಯರೊಡನೆ ಜಲಕ್ರೀಡೆಯಾಡುತ್ತಿದ್ದುದನ್ನು ಕಂಡು ಒಂದು ಕ್ಷಣ ಚಂಚಲಚಿತ್ತಳಾಗುವಳು. ಆಗಲೇ ಅವಳು ಹೊತ್ತಿದ್ದ ಮರಳಿನ ಕೊಡ ಚೂರು ಚೂರಾಗಿ ಕೆಳಗೆ ಬಿದ್ದು, ನೀರೆಲ್ಲಾ ಚೆಲ್ಲಿ ಹೋಗುವುದು, ಅದರಡಿ ಸಿಂಬೆಯಾಗಿದ್ದ ಹಾವು ಸರಸರನೆ ಹರಿದು ಹೋಯಿತು. ಕಕ್ಕಾಬಿಕ್ಕಿಯಾದ ರೇಣುಕೆಯು ಏನು ಮಾಡಬೇಕೆಂಬುದು ತೋಚದೆ ತಲೆ ತಗ್ಗಿಸಿ ಮನೆಗೆ ಮರಳಿದಳು. ಬರಿಗೈಲಿ ಹಿಂತಿರುಗಿದ ಕಳಾಹೀನಳಾಗಿದ್ದ ಮಡದಿಯನ್ನು ನೋಡಿ ಜಮದಗ್ನಿಯು ತನ್ನ ದಿವ್ಯದೃಷ್ಟಿಯಿಂದ ನಡೆದುದೆಲ್ಲವನ್ನೂ ಕಂಡು ಕೆಂಡಾಮಂಡಲವಾದನು. ತಕ್ಷಣವೇ ತನ್ನ ಮಕ್ಕಳನ್ನು ಕರೆದು ತಮ್ಮನ್ನು ಹಡೆದ ತಾಯಿಯ ರುಂಡವನ್ನು ಕತ್ತರಿಸಲು ಆಜ್ಞಾಪಿಸಿದರು. ಮೊದಲ ನಾಲ್ಕು ಮಕ್ಕಳೂ ತಾಯಿಯ ಹತ್ಯೆ ಮಾಡಲು ನಿರಾಕರಿಸಿದರು. ಕೋಪದಿಂದ ಬುಸುಗುಟ್ಟುತ್ತಾ ಜಮದಗ್ನಿಯು ಅವರನ್ನೆಲ್ಲಾ ತನ್ನ ಶಾಪದಿಂದ ದಹಿಸಿದನು. ಆದರೆ ಕೊನೆಯ ಮಗನಾದ ಪರಶುರಾಮನು ತಂದೆಯ ಮಾತನ್ನು ಪಾಲಿಸಲು ಸಿದ್ಧನಾಗಿ ತನ್ನ ಗಂಡುಗೊಡಲಿಯಿಂದ ತಾಯಿಯ ಶಿರಚ್ಛೇದನ ಮಾಡಿದನು. ಪಿತೃವಾಕ್ಯ ಪರಿಪಾಲನೆ ಮಾಡಿದ ಮಗನನ್ನು ಕಂಡು ಹರ್ಷಿತರಾದ ಮಹರ್ಷಿಗಳು, ‘ನಿನಗೆ ಬೇಕಾದ ಮೂರು ವರಗಳನ್ನು ಬೇಡು’ ಎಂದರು. ಆಗ ಪರಶುರಾಮನು ತನ್ನ ತಾಯಿಗೆ ಪುನರ್ಜನ್ಮ ನೀಡಬೇಕು, ತನ್ನ ಅಣ್ಣಂದಿರನ್ನು ಬದುಕಿಸಬೇಕು ಹಾಗೂ ಮಹರ್ಷಿಗಳು ತಮ್ಮ ಕೋಪವನ್ನು ತ್ಯಜಿಸಿ ಶಾಂತಚಿತ್ತರಾಗಬೇಕು ಎಂದು ಬೇಡಿದನು.

ಮತ್ತೊಂದು ಕಥೆ ಹೀಗಿದೆ – ಒಂದು ಕ್ಷಣ ಚಂಚಲಚಿತ್ತಳಾದ ರೇಣುಕೆಗೆ ಜಮದಗ್ನಿಯು, ‘ನೀನು ಚರ್ಮರೋಗದಿಂದ ನರಳುವೆ’ ಎಂದು ಶಾಪವನ್ನಿತ್ತರು. ಆಗ ರೇಣುಕೆಗೆ ತೊನ್ನು ರೋಗ ಬಂದು, ಅವಳು ಊರ ಹೊರಗಿದ್ದ ಬುಡಗಟ್ಟು ಜನಾಂಗದವರ ಬಳಿ ಬರುವಳು. ಅವರ ನಾಯಕರಾದ ಏಕನಾಥ ಮತ್ತು ಜೋಗಿನಾಥ ಎಂಬುವರು ರೇಣುಕೆಯನ್ನು ಆದರದಿಂದ ಸತ್ಕರಿಸಿ, ಅವಳ ಚರ್ಮಕ್ಕೆ ಗಿಡ ಮೂಲಿಕೆಗಳ ರಸವನ್ನು ಸವರುವರು, ಅಲ್ಪ ಸಮಯದಲ್ಲಿಯೇ ಗುಣಮುಖಳಾದ ರೇಣುಕೆಯು ತನ್ನ ಪತಿಯ ಕೋಪ ಶಮನವಾಗಲೆಂದು, ಏಕನಾಥನ ಸಲಹೆಯಂತೆ, ಶಿವಲಿಂಗವನ್ನು ಪ್ರತಿಷ್ಠಾಪಿಸಿ ನಿತ್ಯ ಭಕ್ತಿಯಿಂದ ಪೂಜೆಗೈವಳು. ತನ್ನ ಪತಿಯ ಕೋಪ ತಣ್ಣಗಾಗಿರಬಹುದೆಂದು ಭ್ರಮಿಸಿ, ಆಶ್ರಮಕ್ಕೆ ಹಿಂತಿರುಗವಳು. ಅವಳನ್ನು ಕಂಡಾಕ್ಷಣ, ಮುನಿಯು ರೋಷಾವೇಷದಿಂದ, ‘ನಿಮ್ಮ ತಾಯಿಯ ರುಂಡವನ್ನು ಕತ್ತರಿಸಿ ಹಾಕಿ’ ಎಂದು ಮಕ್ಕಳ ಮುಂದೆ ಗುಡುಗುವನು. ಹಿರಿಯರಾದ ನಾಲ್ಕು ಮಕ್ಕಳೂ ತಮ್ಮ ತಂದೆಯ ಆದೇಶವನ್ನು ಪಾಲನೆ ಮಾಡಲು ನಿರಾಕರಿಸಿದಾಗ ಮಹರ್ಷಿಯು, ‘ನಿಮ್ಮ ಪುರುಷತ್ವ ನಾಶವಾಗಲಿ’ ಎಂದು ಶಪಿಸುವರು. ಕಿರಿಯವನಾದ ಪರಶುರಾಮನು ತನ್ನ ತಂದೆಯ ಆಜ್ಞೆಯಂತೆ ತಾಯಿಯ ರುಂಡವನ್ನು ಕತ್ತರಿಸಿದನು. ಅಗ್ನಿಯಿಂದ ಜನಿಸಿದ್ದ ಶಕ್ತಿ ದೇವತೆಯಾಗಿದ್ದ ರೇಣುಕೆಯ ತಲೆಯು ನೂರಾರು ಶಿರಗಳಾಗಿ ಎಲ್ಲೆಡೆ ಸಿಡಿದು ಮಂಗಳಮುಖಿಯರಾಗಿದ್ದ ತನ್ನ ಪುತ್ರರ ಕಾವಲಿಗೆ ನಿಲ್ಲುವಳು. ಜಮದಗ್ನಿಯು ಪರಶುರಾಮನಿಗೆ ದಯಪಾಲಿಸಿದ ವರಗಳಿಂದ ಪುನರ್ಜನ್ಮ ಪಡೆದ ರೇಣುಕೆಯು ಯಲ್ಲಮ್ಮನಾಗಿ ನಿಲ್ಲುವಳು. ಪುರುಷತ್ವ ಕಳೆದುಕೊಂಡ ತನ್ನ ಮಕ್ಕಳಿಗೆ ಅಭಯಹಸ್ತ ಚಾಚಿದವಳು ಯಲ್ಲಮ್ಮ. ಇಂದಿಗೂ ಮಂಗಳಮುಖಿಯರು ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ಆಶ್ರಯ ಪಡೆದಿರುವುದನ್ನು ಕಾಣಬಹುದು. ಪ್ರತಿವರ್ಷ ಯಲ್ಲಮ್ಮನ ಜಾತ್ರೆಯ ಸಮಯದಲ್ಲಿ ಮಂಗಳಮುಖಿಯರ ದಂಡೇ ಇಲ್ಲಿ ನೆರೆಯುವುದು.

ಈ ಶ್ರೀಕ್ಷೇತ್ರದಲ್ಲಿ ಅಕ್ಟೋಬರ್ ತಿಂಗಳಿನಿಂದ ನವೆಂಬರ್‌ವರೆಗೆ ಹಾಗೂ ಜನವರಿ ತಿಂಗಳಿನಿಂದ ಫೆಬ್ರವರಿಯವರೆಗೆ ಬನದ ಹುಣ್ಣಿಮೆ ಹಾಗೂ ಭರತ ಹುಣ್ಣಿಮೆಗಳಂದು ವಿಶೇಷ ಜಾತ್ರೆಗಳು ನಡೆಯುತ್ತವೆ. ಡಿಸೆಂಬರ್ ತಿಂಗಳಿನಲ್ಲಿ ಜರುಗುವ ಹೊಸ್ತಿಲು ಅಥವಾ ರಂಡಿ ಹುಣ್ಣಿಮೆಯಂದು ಯಲ್ಲಮ್ಮನ ಭಕ್ತರಾದ ಮಂಗಳಮುಖಿಯರು ತಮ್ಮ ಬಳೆ, ಮಾಂಗಲ್ಯವನ್ನು ಕಿತ್ತೆಸೆದು ವಿಧವೆಯರಾಗುವರು. ರೇಣುಕೆಯ ರುಂಡವನ್ನು ಪರಶುರಾಮನು ತುಂಡರಿಸಿದ ಕ್ಷಣದ ರೂಪಕವಿರಬಹುದಲ್ಲವೇ? ನಂತರ ಜನವರಿ ತಿಂಗಳ ಬನದ ಹುಣ್ಣಿಮೆಯಲ್ಲಿ ಮಾಂಗಲ್ಯ, ಬಳೆಗಳನ್ನು ಧರಿಸಿ ಮುತ್ತೈದೆಯರಾಗುವುದು ಇಲ್ಲಿನ ವಾಡಿಕೆ. ರೇಣುಕೆಯ ಪುನರ್ಜನ್ಮದ ಪ್ರತೀಕ ಇದು. ಕರ್ನಾಟಕ, ಗೋವಾ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಿಂದ ಭಕ್ತಾದಿಗಳ ಸಾಗರವೇ ಹರಿದು ಬರುತ್ತದೆ. ಹಲವಾರು ಬಡ ಕುಟುಂಬದವರ ಹಾಗೂ ಕೆಳಜಾತಿಯವರ ಆರಾಧ್ಯದೈವವಾದ ಯಲ್ಲಮ್ಮ, ಅವರ ಸಂಕಷ್ಠಗಳನ್ನೆಲ್ಲಾ ಪರಿಹರಿಸುವ ದೈವವಾಗಿ ನಿಲ್ಲುವಳು. ವಿವಾಹ ಭಾಗ್ಯ, ಸಂತಾನ ಪ್ರಾಪ್ತಿ, ದಾಂಪತ್ಯ ಕಲಹ ಹಾಗೂ ಚರ್ಮರೋಗಗಳ ನಿವಾರಣೆಗಾಗಿ ಜನ ಹರಕೆ ಸಲ್ಲಿಸುವರು.

ನಾವು ಯಲ್ಲಮ್ಮನ ಗುಡ್ಡಕ್ಕೆ ತೆರಳುವ ಮೊದಲು ಸತ್ಯಮ್ಮನ ದೇಗುಲಕ್ಕೆ ಭೇಟಿಯಿತ್ತೆವು. ಇಲ್ಲಿಯೂ ಜನಜಾತ್ರೆಯೇ ನೆರೆದಿತ್ತು. ದೇವಿಯ ಭಕ್ತರು ಅಲ್ಲಿದ್ದ ಜೋಗುಳಭಾವಿಯಲ್ಲಿ ಮಿಂದು ಹೊಸ ಉಡುಪು ಧರಿಸಿ ಸತ್ಯಮ್ಮದೇವಿಯ ದರ್ಶನ ಮಾಡಿಯೇ ಯಲ್ಲಮ್ಮನ ಗುಡ್ಡಕ್ಕೆ ತೆರಳುವುದು ಇಲ್ಲಿನ ವಾಡಿಕೆ. ಕೆಲವರು ತಮ್ಮ ಇಷ್ಠಾರ್ಥಿ ಸಿದ್ದಿಗಾಗಿ ಬೇವಿನ ಸೀರೆಯುಟ್ಟು ಬಾಯಿಯಲ್ಲಿ ಬೇವಿನ ಚಿಗುರು ಕಚ್ಚಿ ದೇಗುಲದ ಪ್ರದಕ್ಷಿಣೆ ಹಾಕುತ್ತಿದ್ದರು. ಮಲಪ್ರಭಾ ನದಿಯ ಹಿನ್ನೀರಿನಲ್ಲಿ ಜೋಗುಳಭಾವಿಯ ನಿರ್ಮಾಣವಾಗಿರುವುದರಿಂದ ಇಲ್ಲಿ ವರ್ಷವಿಡೀ ನೀರಿನ ಹರಿವು ಇರುವುದು. ದೇವಿಯ ಭಕ್ತರು ಕಡುಬು, ಹೋಳಿಗೆ, ಹಾಗೂ ರೊಟ್ಟಿ, ಕಾಯಿಪಲ್ಯೆ, ಅನ್ನ ,ಸಾರಿನ ನೈವೇದ್ಯವನ್ನು ದೇವಿಗೆ ಅರ್ಪಿಸಿ ನಂತರದಲ್ಲಿ ಐದು ಜೋಗಿತಿಯರ ಪಡ್ಲಿಗೆಗಳಲ್ಲಿ ಎಡೆಯನ್ನು ಇಡುತ್ತಿದ್ದರು.

ನಾವು ಸತ್ಯಮ್ಮ ದೇವಿಯ ದರ್ಶನ ಮಾಡಿ, ಅಲ್ಲಿ ನೆರೆದಿದ್ದ ಜನರ ಶ್ರದ್ಧೆ ಭಕ್ತಿಯನ್ನು ಕಂಡು ಬೆರಗಾಗಿ ದಕ್ಷಿಣ ಭಾರತದ ಶಕ್ತಿ ದೇವತೆಯೆಂದೇ ಹೆಸರಾದ ಯಲ್ಲಮ್ಮನ ಗುಡ್ಡಕ್ಕೆ ಹೊರಟೆವು. ಏಳು ಗುಡ್ಡಗಳ ಮಧ್ಯೆ ಇರುವ ದೇಗುಲಕ್ಕೆ ಹೋಗಲು ಹತ್ತಾರು ಮೆಟ್ಟಿಲುಗಳನ್ನು ಇಳಿಯಬೇಕಿತ್ತು. ಅಕ್ಕಪಕ್ಕದಲ್ಲಿ ಕುಂಕುಮ, ಅರಿಶಿಣ ಹಾಗೂ ಪೂಜಾ ಸಾಮಗ್ರಿಗಳನ್ನು ಮಾರುವ ಅಂಗಡಿಗಳು. ದೇವಿಯ ದರ್ಶನ ಮಾಡಿ ಬಂದ ಭಕ್ತರು, ಮೆಟ್ಟಿಲುಗಳ ಮೇಲೆ ಕುಳಿತು ರೊಟ್ಟಿ, ಪಲ್ಲೆಯ ಜೊತೆಗೆ ಮೆಣಸಿನಕಾಯಿ ಈರುಳ್ಳಿ ನೆಂಚಿಕೊಂಡು ಉಣ್ಣುತ್ತಿದ್ದರು. ದೇಗುಲದ ಹಿಂದಿದ್ದ ಎಣ್ಣೆ ಹೊಂಡದಲ್ಲಿ ಜಳಕ ಮಾಡಿದರೆ ಚರ್ಮರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಅವರಲ್ಲಿ ಆಳವಾಗಿ ಬೇರೂರಿತ್ತು. ಬೆಟ್ಟ ಗುಡ್ಡಗಳಿಂದ ಹರಿದು ಬರುವ ಈ ನೀರಿನಲ್ಲಿ ಸಾಕಷ್ಟು ಗಂಧಕದ ಅಂಶವಿದ್ದು ಔಷಧೀಯ ಗುಣಗಳಿರುವುದು ಸಹಜ ಅಲ್ಲವೇ? ಅವರ ಇಷ್ಠಾರ್ಥ ಸಿದ್ಧಿಗಾಗಿ ಕುಂಕುಮ ಹಾಗೂ ಅರಿಶಿಣ ಹೊಂಡದಲ್ಲಿದ್ದ ಪವಿತ್ರ ಜಲವನ್ನು ಪ್ರೋಕ್ಷಣೆ ಮಾಡಿಕೊಳ್ಳುತ್ತಿದ್ದರು. ಮುತ್ತೈದೆಯರ ಆಭೂಷಣವಾದ ಅರಿಶಿಣ ಕುಂಕುಮ ತಮ್ಮೆಲ್ಲಾ ಸಂಕಷ್ಟಗಳನ್ನು ನಿವಾರಣೆ ಮಾಡುವುದು ಎಂಬ ನಂಬಿಕೆ ಅವರಲ್ಲಿ ಆಳವಾಗಿ ಬೇರೂರಿತ್ತು. ಅಲ್ಲಿದ್ದ ಪುರೋಹಿತರು ನಮ್ಮ ಮೇಲೆಯೂ ಆ ಪವಿತ್ರ ಜಲದ ಪ್ರೋಕ್ಷಣೆ ಮಾಡಿದರು.

ದೇಗುಲದ ಮುಂದೆ ಎತ್ತರವಾದ ದೀಪಸ್ತಂಭವಿದ್ದು ಜಾತ್ರೋತ್ಸವದಂದು ದೀಪಾಲಂಕಾರ ಮಾಡುವರು. ಭವ್ಯವಾದ ಮಹಾದ್ವಾರ, ದೇಗುಲದ ಪ್ರಾಂಗಣದಲ್ಲಿ ನಿಂತಿದ್ದ ಸಾಲು ಸಾಲು ಕಂಬಗಳು ಕವಿಯ ಸಾಲುಗಳನ್ನು ನೆನಪಿಗೆ ತಂದವು, ‘ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು’. ಜನ ಜಂಗುಳಿ ಹೆಚ್ಚಾಗಿದ್ದುದರಿಂದ ನಾವು ದೇವಿ ದರ್ಶನಕ್ಕೆಂದು ವಿಶೇಷ ಟಿಕೇಟು ಪಡೆದು ಸರತಿ ಸಾಲಿನಲ್ಲಿ ಸಾಗಿದೆವು. ನಾವು ಸಾಗುವ ಹಾದಿಯುದ್ದಕ್ಕೂ ಭಕ್ತರು ಅರಿಶಿಣದ ಹುಡಿಯನ್ನು ಎರಚಿದ್ದರಿಂದು ಎಲ್ಲವೂ ಹಳದಿಮಯವಾಗಿತ್ತು. ಸರ್ವಾಲಂಕಾರ ಭೂಷಿತೆಯಾದ ಯಲ್ಲಮ್ಮ ತನ್ನ ಬಳಿ ಬಂದ ಭಕ್ತರನ್ನು ಹರಸುತ್ತಾ ನಿಂತಿದ್ದಳು. ನಾವು ಭಕ್ತಿಭಾವದಿಂದ ದೇವಿಗೆ ತಲೆಬಾಗಿ ವಂದಿಸಿದೆವು. ದೇಗುಲದ ಸುತ್ತಲೂ ಪರಿವಾರದ ದೇವರುಗಳಾದ ಗಣೇಶ, ಮಲ್ಲಿಕಾರ್ಜುನ, ಪರಶುರಾಮ, ಮಾತಂಗಿ ಗುಡಿಗಳಿದ್ದವು. ದೇಗುಲದಿಂದ ಸುಮಾರು ಆರು ಕಿ.ಮೀ. ದೂರದಲ್ಲಿ ಜಮದಗ್ನಿಯ ಗುಡಿ ಇತ್ತು. ದೇಗುಲದ ಸುತ್ತ ಕೆಲವರು ಉರುಳು ಸೇವೆ, ದಂಡ ನಮಸ್ಕಾರ ಹಾಕುತ್ತಾ ತಮ್ಮ ಸಂಕಷ್ಠಗಳನ್ನು ಪರಿಸರಿಸು ಎಂದು ದೇವಿಯಲ್ಲಿ ಬೇಡುತ್ತಿದ್ದರು. ತಮ್ಮ ಮಕ್ಕಳ ವಿವಾಹ ಭಾಗ್ಯಕ್ಕಾಗಿ ದೇವಿಗೆ ಸೀರೆಯೊಂದಿಗೆ ಮಂಗಳದ್ರವ್ಯಗಳನ್ನು ಅರ್ಪಿಸುತ್ತಿದ್ದರು. ಕಾಯಿ, ಹೂವು, ಹಣ್ಣುಗಳೊಂದಿಗೆ ಸೀರೆಯನ್ನೂ ದೇವಿಗೆ ಉಡಿ ತುಂಬುತ್ತಿದ್ದರು. ತಾಯಿಯ ಬಂಢಾರವನ್ನು ಧರಿಸಿದರೆ ಭಯ, ದುಃಖ ಮತ್ತು ರೋಗಗಳಿಂದ ಮುಕ್ತರಾಗುವೆವು ಎಂಬ ನಂಬಿಕೆಯೂ ಅವರಲ್ಲಿ ಮನೆ ಮಾಡಿತ್ತು.

ದೇಗುಲದ ಸುತ್ತ ಹೆಜ್ಜೆ ಹೆಜ್ಜೆಗೂ ಜೋಗಿತಿಯರು ನಮ್ಮ ಹಣೆಗೆ ಬಂಡಾರವನ್ನು ಬಳಿದು ಏನನ್ನೋ ಗುಣಗುಣಿಸಿ ಭಿಕ್ಷೆ ಬೇಡುವುದು ಸಾಮಾನ್ಯವಾಗಿತ್ತು. ಈ ಜೋಗಿತಿಯರೊಂದಿಗೆ ಜೋಗಪ್ಪಗಳೂ ತಮ್ಮ ಪಡ್ಲಿಗೆ ಮುಂದೆ ಮಾಡಿ ಭಿಕ್ಷೆ ಬೇಡುತ್ತಿದ್ದರು. ಇವರೆಲ್ಲಾ ಯಾರು? ಬದುಕಿನಲ್ಲಿ ಸಂಕಷ್ಠಗಳು ಎದುರಾದಾಗ ಪುರೋಹಿತರ ಸಲಹೆಯಂತೆ ತಮ್ಮ ಮಕ್ಕಳನ್ನು ದೇವಿಯ ಸೇವೆಗೆ ಮುಡಿಪಾಗಿಡುವುದು ಸಂಪ್ರದಾಯವಾಗಿ ಬೆಳೆದು ಬಂತು. ಧರ್ಮದ ಹೆಸರಿನಲ್ಲಿ ಎಳೆಯ ಪ್ರಾಯದ ಹೆಣ್ಣುಮಕ್ಕಳಿಗೆ ಮುತ್ತು ಕಟ್ಟಿ, ದೇವಿಗೆ ಮದುವೆ ಮಾಡಿ ಅವಳಿಗೆ ಜೋಗಿತಿಯ ಪಟ್ಟ ಕಟ್ಟಿದರೆ, ಗಂಡು ಮಕ್ಕಳನ್ನೂ ದೇವರ ಸೇವೆಗೆಂದು ಮೀಸಲಿಟ್ಟು ಅವರನ್ನು ಜೋಗಪ್ಪನೆಂದು ಕರೆದರು. ಜೋಗಿತಿಯರು ನಿರಂತರವಾಗಿ ಲೈಂಗಿಕ ಶೋಷಣೆಗೆ ಗುರಿಯಾದರು. ಇವರು ದೇವರ ಸೇವೆಗೆಂದೇ ಮುಡಿಪಾದವರು, ಯಾವ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವಂತಿಲ್ಲ. ಹಾಗಾಗಿ ತಮ್ಮ ಹೊಟ್ಟೆ ಹೊರೆಯಲು ವೇಶ್ಯೆಯರಾದರು. ಸರ್ಕಾರವು ಈ ಅನಿಷ್ಠ ಪದ್ಧತಿಯನ್ನು ಬಹಳ ವರ್ಷಗಳ ಹಿಂದೆಯೇ ನಿಷೇಧಿಸಿದೆ. ಹಲವು ಸಂಸ್ಥೆಗಳು ಈ ಜೋಗಿತಿಯರ ಪುನರ್ವಸತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಜೋಗಪ್ಪನಾಗಿದ್ದು, ತನ್ನಂತೆಯೇ ಶೋಷಣೆಗ ಗುರಿಯಾದ ಹಲವರ ಬದುಕನ್ನು ಹಸನುಗೊಳಿಸಲು ತನ್ನ ಬಾಳನ್ನೇ ಮುಡಿಪಾಗಿಟ್ಟ ಮಂಜಮ್ಮ ಜೋಗತಿಗೆ 2021 ರಲ್ಲಿ ಭಾರತ ಸರ್ಕಾರದ ವತಿಯಿಂದ ‘ಪದ್ಮಶ್ರೀ ಪ್ರಶಸ್ತಿ’ ದೊರೆತಿದ್ದು ಹೆಮ್ಮೆಯ ವಿಷಯವಲ್ಲವೇ?

ಉಧೋ ಉಧೋ ಯಲ್ಲಮ್ಮ ! ಉಧೋ ಉಧೋ ! ‘ ಭಕ್ತರ ಕೂಗು ಎಲ್ಲೆಡೆ ಪ್ರತಿಧ್ವನಿಸುತ್ತಿತ್ತು. ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ಹಿಂದಿರುಗುವಾಗ ಹಲವು ಗೊಂದಲುಗಳು ಮನದಲ್ಲಿ ಮೂಡಿದ್ದವು. ಒಂದೇ ಒಂದು ಕ್ಷಣ ಚಿತ್ತ ಚಾಂಚಲ್ಯಕ್ಕೆ ಒಳಗಾದ ರೇಣುಕೆಗೆ, ಅವಳ ಪತಿಯಾದ (ಸಪ್ತರ್ಷಿಗಳಲ್ಲಿ ಒಬ್ಬನಾದ) ಜಮದಗ್ನಿಯು ನೀಡಿದ ಕಠೋರ ಶಿಕ್ಷೆ ಎಷ್ಟು ಸರಿ? ಪಿತೃವಾಕ್ಯ ಪರಿಪಾಲನೆಗಾಗಿ ತನ್ನ ತಾಯಿಯ ರುಂಡವನ್ನೇ ಕಡಿದ ಪರಶುರಾಮನ (ವಿಷ್ಣುವಿನ ಅವತಾರ) ಕೃತ್ಯ ಎಷ್ಟು ಸರಿ? ಪುನರ್ಜನ್ಮ ಪಡೆದ ರೇಣುಕೆ ಎಲ್ಲರ ಅಮ್ಮ ಯಲ್ಲಮ್ಮನಾಗಿ, ತನ್ನ ಭಕ್ತರ ಆರಾಧ್ಯ ದೈವವಾಗಿ ಶಕ್ತಿದೇವತೆಯಾಗಿ ಪೂಜೆಗೊಳ್ಳುತ್ತಿರುವಳು. ಆದರೆ ಸಪ್ತರ್ಷಿಗಳಲ್ಲಿ ಒಬ್ಬನಾದ, ಜ್ಞಾನಜ್ಯೋತಿಯೇ ಆದ ಜಮದಗ್ನಿಯ ಗುಡಿ ದೂರದಲ್ಲಿದ್ದು, ಅಲ್ಲಿಗೆ ಹೋಗುವ ಭಕ್ತರ ಸಂಖ್ಯೆ ಬೆರಳೆಣಿಕೆಯಷ್ಟು. ಯಲ್ಲಮ್ಮನ ಕಥನವನ್ನು ಹೇಗೆ ನೋಡಲಿ – ಸಾಮಾಜಿಕ ನಿಯಮಗಳ ವಿರುದ್ಧ ಸ್ತ್ರೀಯ ಪ್ರತಿಭಟನೆಯ ರೂಪಕವಾಗಿ ನಿಲ್ಲುವಳೇ ಯಲ್ಲಮ್ಮ? ಪುರುಷ ಪ್ರಾಬಲ್ಯದ ವಿರುದ್ಧ ನಡೆದ ಧಾರ್ಮಿಕ ಕ್ರಾಂತಿಯೇ? ದಮನಕಾರೀ ಜಾತಿವ್ಯವಸ್ಥೆಯ ವಿರುದ್ಧ ನಡೆದ ಹೋರಾಟವೇ? ಹಾಗಿದ್ದಲ್ಲಿ ದೇವಿಯ ಹೆಸರಿನಲ್ಲಿ ಭಿಕ್ಷೆ ಬೇಡುವ ಜೋಗಪ್ಪ ಜೋಗಿತಿಯರನ್ನು ಏನೆಂದು ಕರೆಯಲಿ? ಸರ್ಕಾರದ ಆದೇಶದ ವಿರುದ್ಧವೂ ನಡೆಯುತ್ತಲೇ ಇರುವ ಈ ಅನಿಷ್ಟ ಪದ್ಧತಿ ಹಿಂದುಳಿದ ವರ್ಗಗಳ ಶೋಷಣೆಯಲ್ಲವೇ? ನೀವೇ ಹೇಳಿ.

ಡಾ.ಗಾಯತ್ರಿ ದೇವಿ ಸಜ್ಜನ್, ಶಿವಮೊಗ್ಗ

4 Comments on “ರೇಣುಕೆಯು ಯಲ್ಲಮ್ಮನಾದಾಗ

  1. ಸವದತ್ತಿ ತೀರ್ಥ ಯಾತ್ರೆ ಮಾಡಿದಷ್ಟು ಸಂತೃಪ್ತಿಯಾಯಿತು.

  2. ಹೊಸ ವರ್ಷದ ಶುಭಾಶಯಗಳು ಮೇಡಂ.
    ಚೆಂದದ ಬರಹ.
    ನಾವು ಏಳೆಂಟು ವರ್ಷಗಳ ಮೊದಲು ಸವದತ್ತಿಗೆ ಭೇಟಿ ಕೊಟ್ಟಿದ್ದೆವು. ಆ ದಿನ ಅಲ್ಲಿದ್ದ ಜನಜಂಗುಳಿ, ಅಲ್ಲಲ್ಲಿ ಎರಚಿದ್ದ ಅರಸಿನ ಕುಂಕುಮ, ಕಾಲಿಡಲು ಜಾಗವಿಲ್ಲದಂತೆ ತುಂಬಿದ್ದ ಸಾಲು ಸಾಲು ಅಂಗಡಿಗಳು,ಜನರ ಮಾತು ಗದ್ದಲ ಜೊತೆಗೆ ಸೆಕೆಯೂ ಮೇಳೈಸಿತ್ತು. ಜನರನ್ನು ಬೇಡುತ್ತಿದ್ದ, ಕಾಡುತ್ತಿದ್ದ ಜೋಗತಿಯರು, ಅವರ ಬದುಕಿನ ಜಂಜಡಗಳು, ಅದರ ಹಿಂದಿನ ಸಾಮಾಜಿಕ ಶೋಷಣೆ ಹಾಗೂ ಮೂಢನಂಬಿಕೆ ಇವೆಲ್ಲವೂ ಸೇರಿ, ನಮಗೆ ದೇಗುಲಕ್ಕೆ ಭೇಟಿ ಕೊಟ್ಟ ಆಹ್ಲಾದಕರ ಭಾವ ಬಂದಿರಲಿಲ್ಲ.

    1. ನನ್ನ ಲೇಖನವನ್ನು ಪ್ರಕಟಿಸಿದ್ದಕ್ಕೆ ವಂದನೆಗಳು
      ಹೌದು ನಿಮ್ಮ ಅನಿಸಿಕೆ ಸರಿಯಾಗಿದೆ
      ನನಗೂ ಕಾಡುವ ಬೇಡುವ ಜೋಗಿತಿಯರನ್ನು ಮಂಗಳಮುಖಿಯನ್ನು ಕಂಡು ಬೆಚ್ಚಿ ಬೀಳುವಂತಾಯಿತು

  3. ಬರೆಹವು ಸುಪುಷ್ಟ ಮಾಹಿತಿಯೊಂದೊಡಗೂಡಿ ವಿಚಾರಶೀಲವಾಗಿದೆ, ಧನ್ಯವಾದ ಮೇಡಂ.

    ಪೌರಾಣಿಕ ಹಿನ್ನೆಲೆಯ ಮೂಲಕ ನೀವು ಹಾಯ್ದು ಬಂದಿದ್ದು ಸಮರ್ಪಕ ಮತ್ತು ಸುಸಂಗತ.

    ಲೇಖನದ ಕೊನೆಯ ಸಾಲುಗಳ ಚಿಂತನ ಮಂಥನದಿಂದಲೇ ನಿಮ್ಮ ಬರೆಹ ಪಕ್ವವಾಗಿದೆ.
    ಹೀಗೆ ಕೇಳಿಕೊಳ್ಳದಿದ್ದರೆ ಆತ್ಮವಂಚನೆಯಾದೀತು.

    ಸುಮ್ಮನೆ ಮಾಹಿತಿ ಇರುವ ಬರೆಹ ಕಳಿಸುವವರಿಗೆ ಇದೊಂದು ಅರ್ಥಪೂರ್ಣ ಮಾದರಿ.
    ಅಭಿನಂದನೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *