ಅಂತರ್ ರಾಷ್ಟ್ರೀಯ ಧ್ಯಾನ ದಿನವನ್ನು ಆಚರಿಸಲು ವಿಶ್ವಸಂಸ್ಥೆಯು, ಭಾರತದ ಪ್ರಸ್ತಾವನೆಯನ್ನು ಅಂಗೀಕರಿಸಿದ್ದು, ಪ್ರತಿ ವರ್ಷ ಡಿಸೆಂಬರ್ 21 ರಂದು ನಡೆಸಲಾಗುತ್ತಿದೆ.
ಧ್ಯಾನ ಎಂದರೆ ಏಕಾಗ್ರತೆ, ತಲ್ಲೀನತೆ, ಅದು ಸ್ವಪರೀಕ್ಷೆಯ ಕ್ರಿಯೆ, ತನ್ನೊಳಗಿನ ದೈವತ್ವವನ್ನು ಹುಡುಕುವ ಕ್ರಿಯೆ. ದೈಹಿಕ ಚಟುವಟಿಕೆ ಹಾಗೂ ಮಾನಸಿಕ ಸ್ಥಿತಿಯ ಬಗೆಗೆ ಧೀರ್ಘಚಿಂತನೆಯೂ ಹೌದು. ಧ್ಯಾನ ಎಂದರೆ ಆತ್ಮವನ್ನು ಪೂರ್ಣ ಅರಿತುಕೊಳ್ಳುವ ಕ್ರಿಯೆ. ಅಷ್ಟಾಂಗ ಯೋಗದಲ್ಲಿ ಏಳನೇ ಅಂಗವೇ ಧ್ಯಾನ. ನಿತ್ಯ ಧ್ಯಾನದ ಅಭ್ಯಾಸ ಮಾಡಲು ಶಿಸ್ತು ಹಾಗೂ ಮಾನಸಿಕ ಸಿದ್ಧತೆ ಇರಬೇಕು. ನಾವು ನಮ್ಮೊಳಗಿನ ಪ್ರಪಂಚ ಹಾಗೂ ಹೊರ ಪ್ರಪಂಚಗಳನ್ನು ತೂಗಿಸುವ ಸಾಮರ್ಥ್ಯ ಬೆಳಸಿಕೊಂಡಾಗ ಹೊರ ಪರಿಸರ ಮತ್ತು ನಮ್ಮ ಆಂತರಿಕ ಪ್ರಪಂಚವನ್ನು ಸ್ಥಿರಗೊಳಿಸಿ ಧ್ಯಾನಾಭ್ಯಾಸಕ್ಕೆ ಅನುವು ಮಾಡಿಕೊಡುತ್ತದೆ. ‘ಮೌನ’ದ ಆಚರಣೆಯ ಮೂಲಕ ಮನಸ್ಸನ್ನು ನಿಗ್ರಹಿಸಿ ಸದ್ವಿಚಾರ, ಆತ್ಮಾವಲೋಕದೆಡೆಗೆ ತರಲು ಪ್ರಯತ್ನಿಸಬೇಕು. ಚಂಚಲ ಮನಸ್ಸಿನ ಆಲೋಚನ ಲಹರಿಯನ್ನು ನಿಯಂತ್ರಿಸಿ ಆಲೋಚನ ರಹಿತ ಸ್ಥಿತಿಗೆ ತಲುಪಲು ಪ್ರಯತ್ನಿಸಬೇಕು. ಧ್ಯಾನದಿಂದ ನಮ್ಮ ಆತ್ಮವನ್ನು ಜಾಗೃತಗೊಳಿಸಿ ಅನಂತ ಶಕ್ತಿಯೊಂದಿಗೆ ಸಮನ್ವಯಗೊಳಿಸಲು ಸಾಧ್ಯ.
ಬುದ್ಧಿ, ಹೃದಯ ಎರಡರ ಸಂಗಮವೇ ಧ್ಯಾನ. ಧ್ಯಾನದಿಂದಲೇ ಸೃಷ್ಟಿ. ಧ್ಯಾನವು ಪರೋಕ್ಷವಾಗಿ ಒಂದು ದೀರ್ಘ ನಿದ್ರೆಯಂತೆ. ತನ್ನ ಇರುವು, ತನ್ನತನಗಳನ್ನು ಮರೆಯುವುದು ಗಾಢನಿದ್ರೆಯ ಸ್ವಭಾವವಾದರೆ ಧ್ಯಾನವು ಸದಾ ಮನಸ್ಸನ್ನು ಎಚ್ಚರದಲ್ಲಿಟ್ಟು ಪರಮಸುಖ ನೀಡುತ್ತದೆ. ನಿದ್ರೆಯು ದೇಹ ಮನಸ್ಸುಗಳ ಆಯಾಸವನ್ನು ದೂರ ಮಾಡಿ ಮತ್ತೆ ಕೆಲಸಕ್ಕೆ ತೊಡಗಲು ಪ್ರೇರಣೆ ನೀಡಿದರೆ ಧ್ಯಾನವು ಹೊಸ ಬೆಳಕನ್ನೇ ಸಾಧಕನಿಗೆ ನೀಡುತ್ತದೆ. ಧ್ಯಾನಿಸುವವ ಹಾಗೂ ಧ್ಯಾನವು ಒಂದಾಗಿ, ಸಾಧಕನಲ್ಲಿ ಲವಲವಿಕೆ, ಉತ್ಸಾಹ ಉಲ್ಲಾಸ ಉಂಟಾಗುತ್ತದೆ. ಹಸಿವು, ಬಾಯಾರಿಕೆ, ನಿದ್ರೆ, ಆಸೆ, ದುರಾಸೆ, ಕೋಪ, ಇವು ಅವನನ್ನು ಕಾಡುವುದಿಲ್ಲ. ಸಾಧಕನಿಗೆ ಕನ್ನಡಿಯಲ್ಲಿ ಕಾಣುವ ಹಾಗೆ ಸ್ಪಷ್ಟವಾಗಿ ಆತ್ಮದರ್ಶನವಾಗುತ್ತದೆ.
ನಿಯಂತ್ರಣವಿಲ್ಲದ ಮನಸ್ಸು ಸದಾ ಎಲ್ಲೆಂದೆಲ್ಲಿಗೋ ಹಾರುತ್ತಿರುತ್ತವೆ. ಧ್ಯಾನವು ಮನಸ್ಸನ್ನು ಹತೋಟಿಯಲ್ಲಿಟ್ಟು-ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುತ್ತದೆ. ಸಾಧಕನು ತನ್ನೊಳಗಿನ ಆತ್ಮದ ಅರಿವಿಗಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಸಮಾಧಿಗಳತ್ತ ಹಂತ ಹಂತವಾಗಿ ಸಾಗಬೇಕಾಗುತ್ತದೆ. ಇದಕ್ಕಾಗಿ ಏಕಾಗ್ರತೆ, ಪರಿಶ್ರಮಗಳು ಅತೀ ಅಗತ್ಯ. ಯಮ ನಿಯಮಗಳೆಂದರೆ ನೀತಿ ಪ್ರದಾಯಕ ಮಾನಸಿಕ ಶಿಸ್ತು, ಆಸನ ಪಾಣಾಯಾಮದಿಂದ ದೇಹಕ್ಕೆ ಶಿಕ್ಷಣ, ಪ್ರತ್ಯಾಹಾರ ಧಾರಣಗಳಿಂದ ಇಂದ್ರಿಯ ನಿಗ್ರಹ ಹಾಗೂ ಅಂತರ್ಯದ ಎಚ್ಚರ ಪ್ರಾಪ್ತಿ. ಇದೇ ಧ್ಯಾನ, ಸಮಾಧಿಯ ಸ್ಥಿತಿಯಲ್ಲಿ ಜೀವಾತ್ಮನು ಪರಮಾತ್ಮನೊಂದಿಗೆ ಐಕ್ಯನಾಗುತ್ತಾನೆ.
ಧ್ಯಾನವನ್ನು ಆರಂಭಿಸುವಾಗ ಮಂತ್ರಗಳು, ಪ್ರಾರ್ಥನೆಗಳನ್ನು ಹೇಳುತ್ತೇವೆ. ಎತ್ತೆತ್ತಲೊ ಹರಿದಾಡುವ ಮನಸ್ಸನ್ನು ಕೇಂದ್ರೀಕರಿಸಲು ಇದು ಒಂದು ಸಾಧನ. ಧ್ಯಾನದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಧ್ಯಾನ ಎಂಬ ಮೂರು ವಿಧಾನಗಳುಂಟು. ರಾವಣ, ಕುಂಭಕರ್ಣ, ವಿಭೀಷಣ, ಈ ಮೂರು ಸಹೋದರರು ದೈವೀಜ್ಞಾನಕ್ಕಾಗಿ ತಪಸ್ಸು ಮಾಡಿದಾಗ- ಕುಂಭಕರ್ಣನಿಗೆ ಸಿದ್ದಿಸಿದ್ದು ಮರಣವನ್ನು ಹೋಲುವ ತಾಮಸಿಕ ಸಿದ್ಧಿ (ಸದಾ ನಿದ್ರಾಸ್ಥಿತಿ). ರಾವಣನಿಗೆ ಸಿದ್ದಿಸಿದ್ದು ರಾಜಸಿಕ ಸಿದ್ದಿ (ಅಪಾರ ಭೌತಿಕ ಆಸೆ ಆಕಾಂಕ್ಷೆಗಳು) ವಿಭೀಷಣನಿಗೆ ಸಿದ್ದಿಸಿದ್ದು ಸಾತ್ವಿಕ ಸಿದ್ದಿ (ಸತ್ಯಸಾಧಕ ಸ್ಥಿತಿ). ಧ್ಯಾನವು ದೇಹ, ಮನಸ್ಸು, ಬುದ್ಧಿ, ದೃಢಚಿತ್ತ, ಜಾಗ್ರತಾವಸ್ಥೆ, ಎಲ್ಲವನ್ನೂ ಒಂದುಗೂಡಿಸುತ್ತದೆ.
ಕೆಲವು ತಜ್ಞರು ಧ್ಯಾನವನ್ನು ಮೂರು ಸ್ಥಿತಿಗಳನ್ನಾಗಿ ವಿಂಗಡಿಸುತ್ತಾರೆ.
- ಸ್ಥೂಲ ಧ್ಯಾನ – ತನ್ನ ಇಷ್ಟದೇವತೆ ಅಥವಾ ಗುರುವನ್ನು ಧ್ಯಾನಿಸುವುದು ಸ್ಥೂಲ ಧ್ಯಾನ. ತನ್ನ ಅಭೀಷ್ಟ ದೇವತೆ ಅಥವಾ ಗುರುವಿನ ಜಪದ ಮೂಲಕ ಕಣ್ಣನ್ನು ಮುಚ್ಚಿ ಸ್ಥೂಲ ಧ್ಯಾನವನ್ನು ಆರಂಭಿಸಬೇಕು. ಸುಂದರವಾದ ಪ್ರಕೃತಿಯನ್ನು ಮನದಲ್ಲಿಯೇ ಕಾಣುತ್ತಾ, ಝುಳು ಝುಳು ಹರಿಯುವ ನದಿ, ಇಂಪಾಗಿ ಹಾಡುವ ಪಕ್ಷಿಗಳು, ನಗುನಗುತ್ತಾ ನಲಿಯುತ್ತಿರುವ ಹೂಗಳು ಮುಂತಾದವುಗಳನ್ನು ಕಲ್ಪಿಸಿಕೊಂಡು ತನ್ನ ಇಷ್ಟದೇವತೆಯನ್ನು ಅಲಂಕರಿಸಿದ ಸಿಂಹಾಸನದಲ್ಲಿ ಕುಳ್ಳಿರಿಸಬೇಕು. ಪದ್ಮಾಸನದಲ್ಲಿ ಕುಳಿತು ಧ್ಯಾನವನ್ನು ಆರಂಭಿಸಬೇಕು.
- ಜ್ಯೋತಿರ್ಧ್ಯಾನ ಅಥವಾ ತೇಜೋಧ್ಯಾನ – ಪ್ರಕೃತಿ ಅಥವಾ ಜ್ಯೋತಿರೂಪ ಬ್ರಹ್ಮನನ್ನು ಧ್ಯಾನಿಸುವುದು. ಸಾಧಕನು ಜ್ಯೋತಿರೂಪನಾದ ಭಗವಂತನನ್ನು ಧ್ಯಾನಿಸುವುದು. ಅಥವಾ ಭ್ರೂಮಧ್ಯದಲ್ಲಿರುವ ಓಂಕಾರ ಸ್ವರೂಪನಾದ ಜ್ಯೋತಿಯನ್ನು ಧ್ಯಾನಿಸುವುದು.
- ಸೂಕ್ಷ್ಮಧ್ಯಾನ _ ಘೇರಂಡ ಮುನಿಗಳ ಪ್ರಕಾರ ಈ ಧ್ಯಾನವು ಅತ್ಯಂತ ಶ್ರೇಷ್ಟವಾದುದು. ಸಾಧಕನು ಶಾಂಭವಿ ಮುದ್ರೆಯೊಂದಿಗೆ ಕುಂಡಲಿನಿಯನ್ನು ಧ್ಯಾನಿಸುವುದು. ಮೂಲಾಧಾರದಲ್ಲಿರುವ ಕುಂಡಲಿನಿ ಸರ್ಪಾಕಾರದಲ್ಲಿದೆ. ಈ ಸ್ಥಾನದಲ್ಲಿ ಜೀವಾತ್ಮನು ಸ್ಥಿರವಾಗಿರುವನು. ಈ ಧ್ಯಾನವು ದೇವತೆಗಳಿಗೂ ಕಷ್ಟಸಾಧ್ಯವಾಗಿದೆ.
ಸ್ಥೂಲ ಧ್ಯಾನಕ್ಕಿಂತಲೂ ಜ್ಯೋತಿರ್ಧ್ಯಾನವು ನೂರ್ಮಡಿ ಶ್ರೇಷ್ಟವಾಗಿದೆ. ಮತ್ತು ಜ್ಯೋತಿರ್ಧ್ಯಾನಕ್ಕಿಂತಲೂ ಸೂಕ್ಷ್ಮಧ್ಯಾನವು ಶತ ಸಹಸ್ರಪಟ್ಟು ಶ್ರೇಷ್ಟವಾಗಿದೆ. ಇನ್ನೂ ಕೆಲವು ತಜ್ಞರು ಓಂಕಾರಧ್ಯಾನಕ್ಕೆ ಹೆಚ್ಚು ಮಹತ್ವವನ್ನು ನೀಡಿದ್ದಾರೆ. ಸೂಕ್ತವಾದ ಧ್ಯಾನದ ಭಂಗಿಯಲ್ಲಿ ಕುಳಿತು, ಕಣ್ಣುಗಳನ್ನು ಮೃದುವಾಗಿ ಮುಚ್ಚಿ, ಓಂಕಾರ ಧ್ಯಾನವನ್ನು ಮಾಡಬೇಕು. ಧ್ಯಾನದ ಅವಧಿಯನ್ನು ಸುದೀರ್ಘಗೊಳಿಸುತ್ತಾ ಬ್ರಹ್ಮಾನಂದ ಸ್ಥಿತಿ ಅಥವಾ ಸಮಾಧಿ ಸ್ಥಿತಿ ತಲುಪುವುದು. ಅಂತಿಮವಾಗಿ ಧ್ಯಾನದ ಸ್ಥಿತಿಯಲ್ಲಿ ಎಲ್ಲವನ್ನೂ ತೊರೆದು ವಿಶ್ರಾಂತ ಸ್ಥಿತಿ ತಲುಪುವುದು. ಹೀಗೆ ಉಂಟಾದ ದಿವ್ಯ ಮೌನದ ಅನುಭವವು ಪರಮಾತ್ಮನ ಅನಂತ ಪ್ರೀತಿ, ಕರುಣೆಯೆಡೆಗೆ ಸಾಗುವುದು. ಈ ದಿವ್ಯ ಮೌನವೇ ಸೃಷ್ಟಿಯ, ಶಕ್ತಿಯ, ಜ್ಞಾನದ, ಆನಂದದ ಮೂಲದ್ರವ್ಯ. ಆಳವಾದ ವಿಶ್ರಾಂತ ಸ್ಥಿತಿಯೇ ‘ಅಜಪ’ ಸ್ಥಿತಿ.
ಶಂಕರರು ಧ್ಯಾನ ಮಾಡುವಾಗ ಉಸಿರಾಟದ ಕ್ರಿಯೆಯನ್ನು ಹೀಗೆ ವಿವರಿಸುತ್ತಾರೆ ‘ಮನಸ್ಸಿನಲ್ಲಿರುವ ಭ್ರಮೆಯನ್ನು ತೆಗೆದು ಹಾಕುವುದೇ ರೇಚಕ, ನಾನು ಆತ್ಮ ಎನ್ನುವುದೇ ಪೂರಕ, ಮನಸ್ಸು ಸ್ಥಿರವಾದಾಗ ಕುಂಭಕ’. ಮನಸ್ಸೇ ಮಾನವನ ಬಂಧನಕ್ಕೆ ಅಥವಾ ಮುಕ್ತಿಗೆ ಕಾರಣ. ಆತ್ಮ ಸಾಕ್ಷಾತ್ಕಾರ ಪಡೆದು ಪರಿಪೂರ್ಣತೆಯತ್ತ ಸಾಗುವುದೇ ಧ್ಯಾನ. ನೀರು ಅದನ್ನು ಹೊತ್ತ ಪಾತ್ರೆಯ ಆಕಾರ ತಾಳುವಂತೆ, ಪರಬ್ರಹ್ಮನನ್ನು ಧ್ಯಾನಿಸುವ ಮನಸ್ಸು ಭಗವಂತನ ಆಕಾರವನ್ನೇ ತಾಳುತ್ತದೆ. ಏಕಾಗ್ರತೆಯು ಎಣ್ಣೆಯನ್ನು ಒಂದು ಪಾತ್ರೆಯಿಂದ ಇನ್ನೊಂದಕ್ಕೆ ಸುರಿಯುವಾಗ ಆಗುವ ಏಕಧಾರೆಯಂತೆ ಇರಬೇಕು. ಧ್ಯಾನಸ್ಥನಾದ ಯೋಗಿಯು ಮನದಲ್ಲಿ ಒಂದು ಜ್ಯೋತಿಯನ್ನು ಕಾಣುತ್ತಾನೆ, ನಂತರ ಅವನೇ ಜ್ಯೋತಿ ಸ್ವರೂಪನಾಗುತ್ತಾನೆ. ಪ್ರಾರ್ಥನೆ, ಭಜನೆ, ಭಕ್ತಿಗೀತೆಗಳು, ಮಂತ್ರಗಳು ಇವುಗಳನ್ನು ಭಜಿಸುತ್ತಾ ಜ್ಞಾನೋದಯ ಪಡೆಯುವನು. ಲಯಬದ್ಧವಾದ ಉಸಿರಾಟ, ಭಾವನೆಗಳ ನಿಯಂತ್ರಣ, ಯುಕ್ತಾಹಾರ, ಸುಸಂಸ್ಕೃತ ನಡೆ ನುಡಿ – ಇವುಗಳು ಧ್ಯಾನಮಾಡುವವನಿಗೆ ಅವಶ್ಯಕ. ಮಲಗಿದರೆ ಮರಣ, ಕೂತರೆ ರೋಗ, ನಿಂತರೆ ಆರೋಗ್ಯ, ಓಡಾಡಿದರೆ ಆಯುಷ್ಯ. ಮಾನವನ ಸರ್ವತೋಮುಖ ಬೆಳವಣಿಗೆಯ ಜೊತೆಗೆ, ಅವನ ಸುತ್ತ ಇರುವ ಸಮಾಜ ಸುಶಿಕ್ಷಿತವಾಗಿ, ಸುಭದ್ರವಾಗಿ ರೂಪುಗೊಳ್ಳುತ್ತದೆ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಭಾವನೆಯೊಂದಿಗೆ ಈ ಶರೀರಕ್ಕೆ ಶಕ್ತಿ, ಮನಸ್ಸಿಗೆ ಶಾಂತಿ, ಬುದ್ದಿಗೆ ಯುಕ್ತಿ, ಭಾವನೆಗೆ ಭಕ್ತಿ, ಜೀವನಕ್ಕೆ ಮುಕ್ತಿಗಾಗಿ ಭಗವಂತನಲ್ಲಿ ಬೇಡೋಣ.

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ


ವಿಶ್ವ ಧ್ಯಾನ ದಿನ ಪರಿಚಯಾತ್ಮಕ ಲೇಖನ.. ಚೆನ್ನಾಗಿ ಅನಾವರಣ ವಾಗಿಸಿದ್ದೀರಾ ಗಾಯತ್ರಿ ಮೇಡಂ.. ಶಿಕ್ಷಕಿ ಎಂಬ ಅಭಿದಾನ..ನಿಮಗೆ ನೂರಕ್ಕೆ ನೂರು ..ಒಪ್ಪುತ್ತದೆ..ವಂದನೆಗಳು
ತಮ್ಮ ಅಭಿಮಾನ ಪೂರ್ವಕ ನುಡಿಗಳಿಗೆ ತುಂಬು ಹೃದಯದ ವಂದನೆಗಳು ಮೇಡಂ
ಚೆನ್ನಾಗಿದೆ
Thanks Nayana
ಶಂಕರರ ಧ್ಯಾನ ವಿವರ ಅಮೋಘ. ಬರೆಹವು ಧ್ಯಾನಸ್ಥವಾಯಿತು.
ಧ್ಯಾನದ ಪೂರ್ಣ ಮಾಹಿತಿಯನ್ನು ನೀಡುತ್ತಾ ಅದರಿಂದಾಗುವ ಸಕಾರಾತ್ಮಕ ಪರಿಣಾಮಗಳನ್ನು ವಿವರಿಸಿರುವ ಪರಿ ಮನ್ನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಧ್ಯಾನಕ್ಕೆ ಪ್ರೇರೇಪಿಸುವಂತಿದೆ.