ಪುಸ್ತಕ-ನೋಟ

‘ಬಾಳ ನೌಕೆಯ ಬೆಳಕಿನ ದೀಪ’ (ಕವನ ಸಂಕಲನ)- ಕವಿ: ರೇವಣಸಿದ್ದಪ್ಪ ಜಿ.ಆರ್

Share Button

ಕಾವ್ಯದ ಓದು ಯಾವಾಗಲೂ ನನಗೆ ಇಷ್ಟದ ಸಂಗತಿ. ಅದು ಅಂತರಂಗವನ್ನು ಹೆಚ್ಚು ಆರ್ದ್ರ ವಾಗಿಸುತ್ತ, ನನ್ನಲ್ಲಿ ಮನುಷ್ಯತ್ವದ ಗುಣಗಳನ್ನ ಬಡಿದೆಬ್ಬಿಸುವ ಕಾರಣ ನನ್ನ ಓದಿಗೆ ದಕ್ಕಿದ ಒಂದು ಸೂಕ್ಷ್ಮ ಸಂವೇದನೆಯ ಸಮಕಾಲೀನ ಪುಸ್ತಕದ ಪರಿಚಯವನ್ನು ಕೈಗೆತ್ತಿಕೊಂಡಿರುವೆ. ಬರೆಯಬೇಕೆಂದವುಗಳನ್ನ ಬರೆಯಲಿಕ್ಕೆ ಕೂತರೆ, ಪದ ಸಂತೆಯಲ್ಲಿ ಕವಿ ಮತ್ತು ಕಾವ್ಯ ಸತ್ವ ಕಳೆದೋಗುವ ಅಪಾಯವನ್ನು ಇತ್ತೀಚಿನ ವರುಷಗಳ ಕನ್ನಡ ಕವನ ಸಂಗ್ರಹಗಳಲ್ಲಿ ಕಂಡು ಸುಸ್ತಾಗಿದ್ದ ನನಗೆ, ಶ್ರೀಯುತ ರೇವಣಸಿದ್ದಪ್ಪ ಜಿ.ಆರ್. ಅವರು ಬರೆದು ಪ್ರಶಸ್ತಿಗಳನ್ನು ತಗೊಂಡು ಪ್ರಸಿದ್ಧರಾಗಲು ಕಾರಣವಾದ ಅವರ ಎರಡೂ ಕವನ ಸಂಗ್ರಹಗಳು ಓದುವ ಖುಷಿಯನ್ನೂ, ಅರಿವಿನ ಬೆಳಕನ್ನೂ ಪ್ರಾಮಾಣಿಕ ಕಾವ್ಯ ಪ್ರೀತಿಯಲ್ಲಿ ನೀಡಿವೆ ಎಂದೇ, ವಿಶ್ವಾಸದಿಂದ ಹೇಳುತ್ತಿರುವೆ.

ಮೊದಲಿಗೆ ಅವರ ಮೊದಲ ಕವನ ಸಂಗ್ರಹದ ಕುರಿತು`ಬಾಳನೌಕೆಗೆ ಬೆಳಕಿನ ದೀಪ’ವು ತನ್ನ ವಸ್ತು ವಿಷಯಗಳ ಆಯ್ಕೆಯಲ್ಲಿ ತೋರಿದ ಪ್ರೌಢಿಮೆ ಮತ್ತು ಗಹನತೆ. ಕಾಲೇಜು ಉಪನ್ಯಾಸಕ ವೃತ್ತಿಯನ್ನು ಕೈಗೊಂಡಿರುವ ಈ ಕವಿ, ಕಾಲೇಜು ವಿದ್ಯಾರ್ಥಿಗಳಷ್ಟೇ ಅಲ್ಲದೆ, ಸಾಹಿತ್ಯದಲ್ಲಿ ಕಾವ್ಯಾಸಕ್ತಿಯನ್ನು ಬೆಳೆಸಿಕೊಳ್ಳಲು ಈ ಪ್ರಪಂಚದಲ್ಲಿ ಏನೆಲ್ಲ ಕಾರಣಗಳು, ವೈಚಾರಿಕ, ಸಾಮಾಜಿಕ ಸಂಘರ್ಷ, ಸಾಧ್ಯತೆಗಳಿವೆಯೆಂಬೋದನ್ನು ಅತ್ಯಂತ ಪ್ರಾಮಾಣಿಕವಾಗಿ ತಮ್ಮ ಕವನಗಳ ಮೂಲಕ ಪ್ರತಿಪಾದಿಸಿದ್ದಾರೆ. ಭಾಷೆ, ಕೊಂಚ ಪ್ರಬಂಧಾತ್ಮಕವೆನ್ನಿಸಿದರೂ ಕವನ ಕಟ್ಟುವ ಕುಸುರಿ, ಭಾವ ಸಮೃದ್ಧಿಯು ಎಷ್ಟೋ ಕವಿತೆಗಳನ್ನ ನಿರಾಯಾಸವಾಗಿ ಗೆಲ್ಲಿಸಿ ಬಿಟ್ಟಿವೆ! ಒಂದು ಪ್ರೌಢಶಾಲಾ ವಿದ್ಯಾರ್ಥಿ ವರ್ಗದಿಂದ ಅಂತಿಮ ಪದವಿವರೆಗಿನ ವಿದ್ಯಾರ್ಥಿಗಳಿಗೆ ಪಠ್ಯವಾಗಲು ಯೋಗ್ಯವಿರುವ ಸಾಕಷ್ಟು ಕವಿತೆಗಳು ಈ ಸಂಕಲನದಲ್ಲಿರುವುದೊಂದು ವಿಶೇಷ. ಮಕ್ಕಳಲ್ಲಿ ವೈಚಾರಿಕತೆಯನ್ನು ಕಾವ್ಯದ ಆವರಣದಲ್ಲಿ ಬಿತ್ತುವಲ್ಲಿ ಇಲ್ಲಿನ ಬಹುತೇಕ ಕವಿತೆಗಳು ಯಶಸ್ವಿಯಾಗಿವೆ. ಕಾರಣ, ಸರಳ, ಪ್ರಾಮಾಣಿಕ ಕಳಕಳಿಯಲ್ಲಿ ಜೀವನದ ಲೋಕಾಚಾರದ ಒಂದು ತಾತ್ವಿಕತೆಯನ್ನ, ಸಾಮಾಜಿಕ ಅಸಮಾನತೆಯನ್ನ ಕಣ್ಣಿಗೆ ಕಟ್ಟುವಂತೆ ವಿವರಿಸುವ ಕಲೆ, ಕವಿಗೆ ಸಿದ್ಧಿಸಿದ್ದು ಸ್ಪಷ್ಟವಿದೆ. ಉದಾಹರಣೆಗೆ, ಈ ಕೆಲ ಸಾಲುಗಳು ;

ಕವಿತೆ “ಪ್ರಕೃತಿ”
ಧಗ ಧಗ ದಹಿಸುತ್ತದೆ ಬೆಂಕಿ,
ಸುಯ್ಯನೆ ಸುಳಿಯುತ್ತದೆ ಗಾಳಿ
ಜುಳು ಜುಳು ಹರಿಯುತ್ತದೆ ನೀರು
ಪರದೆ ಹೊದಿಸಿದಂತೆ ಪಸರಿಸಿದೆ ಬಾನು ;
ಗಿರ ಗಿರ ತಿರುಗುತ್ತದೆ ಭೂಮಿ
ಫರ್ಮಾನು ಹೊರಡಿಸಿಯಾರೆ
ಯಾರೋ ಸುಮ್ಮನೆ ಇರಲು?
ಕಪ್ಪು ಬಿಳಿಯಲ್ಲ
ನೀಲಿ ಹಸಿರಲ್ಲ

ಹೇಳಬಹುದೇ ಬಣ್ಣಗಳಿಗೂ
ಬಣ್ಣ ಬದಲಾಯಿಸಲು? (ಪುಟ 46- 48)

ಇನ್ನೊಂದು ಕವಿತೆ `ಮಗುವಾದರೂ ಆಗದೆ’ ? ಲೌಕಿಕದ ಎಲ್ಲ ವಿದ್ವತ್ತು ಸಾಧನೆ, ವಿಜ್ಞಾನ, ಭಾಷೆ, ಕಲೆ, ನಾಟಕಗಳನ್ನ ಅವುಗಳ ಗಹನತೆಯನ್ನು ಬಿಚ್ಚಿಡುತ್ತಲೇ… ಇವೆಲ್ಲ ಬೇಕೆ? ಮನುಷ್ಯನಾದರೆ, ಮಗುವಾದರೆ ಸಾಲದೆ? (ಪುಟ 6- 8) ಎಂದು ಪ್ರಶ್ನೆೆಗಳೆಯುತ್ತಲೇ ಮಾನವೀಯತೆಯನ್ನು, ಸಹಜ ಬದುಕಿನ ಸೌಂದರ್ಯವನ್ನ ಬೌದ್ಧಿಕ ಕಸರತ್ತುಗಳಿಗಿಂತ ಒಂದು ಕೈ ಮೇಲಕ್ಕೇರಿಸುತ್ತಾರೆ.

ಪಂಚಭೂತಗಳಿಂದಾದ ನಮ್ಮ ಶರೀರ, ಮತ್ತದರ ಅಸ್ತಿತ್ವದ ನಶ್ವರತೆ, ಬದುಕನ್ನ ಸಹಜವಾಗಿ, ಸ್ವಂತಕ್ಕೆ ಪ್ರಾಮಾಣಿಕವಾಗಿ ಬದುಕಲು ಬಿಡದ ಕೃತ್ರಿಮ ಸಾಮಾಜಿಕ ಕಟ್ಟುಪಾಡುಗಳನ್ನ, ಕ್ರೌರ್ಯಗಳನ್ನ ವಿರೋಧಿಸುವ ಪ್ರಶ್ನಿಸುವುದು ಇಲ್ಲಿನ ಬಹುಪಾಲು ಕವಿತೆಗಳ ಗುಣವೈಶಿಷ್ಟ್ಯ. ಇದೇ ಕಾರಣಕ್ಕೆ ಈ ಸಂಕಲನ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ಯೋಗ್ಯವೆನಿಸಿತು. ಈ ಸಂಗ್ರಹದಲ್ಲಿ “ಬಿಟ್ಟು ಬಂದ ಊರು, ಚಿಟ್ಟೆ, ಕಾಯುತ ಕಾಯುತ್ತಾ ಇವಳು ಸುಳಿದಾಗ, ಬೆಂಕಿ ನನಗಿಷ್ಟವಾದ `ಕಾವ್ಯದ ಲಹರಿ ದಟ್ಟೈಸಿರುವ ಕವಿತೆಗಳು’ ತಮ್ಮ ತಾತ್ವಿಕತೆಯಿಂದ ಗಮನಸೆಳೆದ ಕವಿತೆಗಲಾಗಿವೆ. ಆದರೆ “ಬರಡಾಗಿರುವ ಮರ, ಎರಡು ಗಿಡಗಳು, ಪಯಣ, ವಾದ್ಯವೃಕ್ಷದ ಮಧ್ಯರಾತ್ರಿಯಲ್ಲಿ, ಪಲಾಯನ, ಅಪರಿಚಿತರು” ಕವಿತೆಗಳು ತನ್ನ ಚಿಂತನಶೀಲತೆಯಿಂದ ಇಷ್ಟವಾಯಿತು. ಇಂಥ ಹಲವು ಕವಿತೆಗಳು ನಮ್ಮ ಯುವ ಪೀಳಿಗೆಗೆ ಪಠ್ಯವಾಗುವ ಅರ್ಹತೆಯನ್ನು ಸಹಜವಾಗಿಯೇ ಪಡೆದಿವೆ. ಇನ್ನು ನನ್ನ ಓದುವಾಗಿನ ವೇಗಕ್ಕೆ ಮಿತಿಯೊಡ್ಡಿದ ಕೆಲಸ ಸಂಗತಿಗಳು, ಪದ ಸಮೃದ್ಧಿ, ವಿಚಾರ ಸಮೃದ್ಧಿ, ಶಿಕ್ಷಕ ವೃತ್ತಿಗಳು ಕವಿಯ ಭಾವಕೋಶದ ಅಂತರ್ಮುಖದ ಧ್ಯಾನಕ್ಕೆ ತೊಡಕಾಗಿ ಹಲವು ಉತ್ತಮ ಕವಿತೆಗಳ ಸೂಕ್ಷ್ಮ ಸಂವೇದನೆಯನ್ನ ಕೊಂದು ಹಾಕಿರುವುದು. ಇದು ಈ ಡಿಜಿಟಲ್ ಯುಗದ ಕನ್ನಡ ಕವಿತೆಗಳಿಗೆ ಬಡಿದ ಬಾಲಗ್ರಹವೆಂದರೂ ಸರಿಯೇ. ವಿಪರೀತ ವಿವರಗಳು, ಒಂದೇ ಭಾವ ಈ ನಮೂನೆಯ ಗುಚ್ಛಗಳು ಪದೇ ಪದೇ ದಾಳಿಯಿಡುವ ಮೂಲಕ ಓದುವ ಮುಖ್ಯವಾಗಿ ಓದಿ ಹಳಬಾಗಿರುವ ಅಥವಾ ಪಳಗಿದ ಕಣ್ಗಳಿಗೆ ಕಾವ್ಯದ ರಸಗ್ರಹಣಕ್ಕೆ ತಡೆಯೊಡ್ಡುವಂತಿವೆ. ಕವಿತೆಯ ಕೊನೆಯಲ್ಲಿ ಸಾರಾಂಶವನ್ನ ವಾಚ್ಯವಾಗಿ ನಿವೇದಿಸುವ ಪರಿಯಂತೂ ಕವಿತೆಯ ಮಟ್ಟಿಗೆ ಆತ್ಮಹತ್ಯಕಾರಿ. ಉದಾಹರಣೆಗೆ “ ಕೃತ್ರಿಮ ಬದುಕು” ಎನ್ನುವ ಕವನದ ಹೆಸರೇ ತೀರಾ ವಾಚ್ಯವಾಗಿ ಕವಿತೆಯ ಓದುವ ಕುತೂಹಲವನ್ನು ಮುಗಿಸಿಬಿಟ್ಟಿದೆ. ಹಾಗೆಯೇ ಇನ್ನೊಂದು ಮಿತಿಯೆಂದರೆ , ಕೆಲ ಕವಿತೆಗಳಲ್ಲಿ ಕೊನೆಯ ಹಂತದಲ್ಲಿ . ಕವಿ ತನ್ನ ಆಶಯವನ್ನ ವಾಚ್ಯವಾಗಿ ಹೇಳಿ ಮುಗಿಸಿಬಿಡುವುದು ಆ ಕವಿತೆಯ ಗಹನವಾದ ಭೂಮಿಕೆಯಲ್ಲಿ ರಸಗ್ರಹಣವಾಗಿ ಖುಷಿಯಾದ ಮನಸ್ಸುಗಳಿಗೆ ಹಠಾತ್ತಾಗಿ ನೆಲಕ್ಕೆ ಎಸೆದಂತೆ ಕೊನೆಯಲ್ಲಿ ನಿರಾಶೆಗೊಳಿಸಿಬಿಡುತ್ತೆ. ಇಂಥಲ್ಲಿ ಕವಿಯ ಸಂಯಮದ ಕುಸುರಿ ಕೆಲಸ ಮಾಡಬೇಕಿದೆ.

ಉಳಿದಂತೆ ಕವಿಯ ಭಾವ ಮತ್ತು ತಾತ್ವಿಕ ಪ್ರೌಢಿಮೆ ಜೀವನಧೃಷ್ಠಿಯ ಸತ್ವಗಳು “ ಇನ್ನಿಲ್ಲವಾದಾಗ, ಸಮಾಧಾನ ಮಾಡಿಕೊಳ್ಳೆ, ಎಳಗಾಯಿ” ಇತ್ಯಾದಿ ಕವಿತೆಗಳಲ್ಲಿ ಸಶಕ್ತವಾಗಿ ಬಂದಿವೆ.

ಪ್ರೀತಿ, ಪ್ರೇಮ, ಪ್ರಣಯ, ವಿರಹ ಆಂತರ್ಯದ ಏಕಾಕಿತನಗಳನ್ನು ಕವಿ ಸಶಕ್ತವಾಗಿ ಕಾವ್ಯ ಭಾಷೆಯಲ್ಲಿ ನಿರೂಪಿಸಿದ್ದು ಕವಿತೆಗಳಾದ, “ಸಂತೃಪ್ತ. ಹೀಗೊಂದು ಪ್ರೀತಿ ಕನಸಿನ ಚಿತ್ರ ನೆನಪಾಗಿ ಕಾಡಬಹುದು” ಹೀಗೆ ಇನ್ನೂ ಕೆಲ ಕವಿತೆಗಳಲ್ಲಿ ಚಂದವಾಗಿ ಮೂಡಿಬಂದಿವೆ.

ಈ ಅಂಶಗಳನ್ನು ಮಿತಿಗಳನ್ನು ಮುಂದಿನ ದಿನಗಳಲ್ಲಿ ಅನಾಯಾಸವಾಗಿ ಕವಿ ರೇವಣಸಿದ್ದಪ್ಪ ಮೀರುವಂತಾಗಲಿ ಮೀರಬಲ್ಲರು ಈ ಭರವಸೆಯನ್ನು ಇತರ ಕವಿತೆಗಳು ನೀಡಿವೆ.

ಅವರ ಕಾವ್ಯಯಾನಕ್ಕೆ ಈ ಲೇಖನದ ಮೂಲಕ ಎಲ್ಲ ಶುಭ ಹಾರೈಸುವೆ. ಜೊತೆಗೆ, `ಭವದ ಕಣ್ಣು’ ಎನ್ನುವ ಅವರ ಎರಡನೇ ಕವನ ಸಂಗ್ರಹವನ್ನು ಓದಲು ಕೈಗೆತ್ತಿಕೊಂಡಿರುವೆ. ಓದುವ ಖುಷಿಗೆ ಇಂಬುಗೊಡುವ ಈ ಎರಡು ಸಂಗ್ರಹ ಯೋಗ್ಯ ಪುಸ್ತಕಗಳು ಈ ಚಳಿಗಾಲದ ಓದಿಗೆ ನಿಮ್ಮ ಕೈಗೂ ಬರಲಿ ಎಂದು ಆಶಿಸುವೆ. ದಾವಣಗೆರೆಯ ಯಶೋಧ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕವು ಈ ಕೆಳಗಿನ ವಿವರಗಳಲ್ಲಿ ನಿಮ್ಮ ಕೈಸೇರಲು ಲಭ್ಯವಿವೆ.
( 9535850486)

-ರಶ್ಮಿ ಕಬ್ಬಗಾರ

2 Comments on “‘ಬಾಳ ನೌಕೆಯ ಬೆಳಕಿನ ದೀಪ’ (ಕವನ ಸಂಕಲನ)- ಕವಿ: ರೇವಣಸಿದ್ದಪ್ಪ ಜಿ.ಆರ್

  1. ತುಂಬಾ ಚೆನ್ನಾಗಿದೆ ಕವನ ಸಂಕಲನದ ಪರಿಚಯ.

  2. ಕವನ ಸಂಕಲನದ ಪರಿಚಯ ಚೆನ್ನಾಗಿ ಮೂಡಿಬಂದಿದೆ.. ಮೇಡಂ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *