ಪ್ರವಾಸ

ಸ್ಕಂದವೇಲು

Share Button

“ಸುಬ್ರಮಣ್ಯಂ ಸುಬ್ರಮಣ್ಯಂ ಷಣ್ಮುಖನಾಥ ಸುಬ್ರಮಣ್ಯಂ” ಎಂಬ ಭಜನೆ ವಿದೇಶೀಯರ ಕಂಠದಲ್ಲಿ ಬೇರೆಯದೇ ರೂಪ ತಾಳಿತ್ತು. ಈ ಭಜನೆ ಹಾಡುತ್ತಾ ಹಾಡುತ್ತಾ ಮೈಮರೆತ ತಂಡ ಭಕ್ತಿಭಾವದಿಂದ ಹಾಡಿನ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿತ್ತು. ನಾವೆಲ್ಲಾ ಬೆರಗಾಗಿ ಅವರ ಭಕ್ತಿಪೂರ್ವಕ ನಡೆಯನ್ನು ನೋಡುತ್ತಾ ನಿಂತೆವು. ಮಧ್ಯಾಹ್ನ ಹನ್ನೆರಡಕ್ಕೆ ಸರಿಯಾಗಿ ಮಂಗಳಾರತಿಯಾಯಿತು. ಗಂಟೆ ಜಾಗಟೆಗಳು ಮೊಳಗಿದವು, ಪಾಂಚಜನ್ಯ ಶಂಖದ ಸದ್ದು ಎಲ್ಲೆಡೆ ಮೊಳಗಿತು. ಕ್ರಿಶ್ಚಿಯನ್ ಪಾದ್ರಿಗಳಂತೆ ಬಿಳಿಯ ನಿಲುವಂಗಿ ಧರಿಸಿ, ಕೊರಳಿಗೆ ರುದ್ರಾಕ್ಷಿ ಮಾಲೆ ಧರಿಸಿದ ಪೂಜಾರಿಯು ಕೊನೆಯದಾಗಿ ಸಲ್ಲಿಸಿದ ಪ್ರಾರ್ಥನೆ ಕೇಳಿ, ‘ಓ ದಯಾಮಯನಾದ ದೇವರೇ, ನಮ್ಮ ಪಾಪಗಳನ್ನೆಲ್ಲಾ ಪರಿಹರಿಸು, ನಮ್ಮ ಮೇಲೆ ಕರುಣೆ ತೋರು, ನಮಗೆ ಶಾಂತಿ ನೀಡಿ ಹರಸು ತಂದೆಯೇ’.

ಇಲ್ಲಿ ನೆಲೆಸಿರುವ ಸಂತರ ಸಂಘದ ಹೆಸರು, ‘ದೇವನೊಬ್ಬ ನಾಮ ಹಲವು’ ((Community of the many names of God). ಇವರು ಭಗವದ್ಗೀತೆ ಹಾಗೂ ಸನಾತನ ಹಿಂದೂ ಧರ್ಮದ ಅನುಯಾಯಿಗಳಾಗಿದ್ದು ವೈದೀಕ ತತ್ವಗಳ ಪಾಲನೆ ಮಾಡುತ್ತಾರೆ. ನಾವು ದೇವರಿಗೆ ವಂದಿಸಿ, ಮಂಗಳಾರತಿ ತೆಗೆದುಕೊಂಡು ಹೊರಡುವಾಗ, ಅಲ್ಲಿದ್ದ ಪುರೋಹಿತರು ಪ್ರಸಾದ ತೆಗೆದುಕೊಂಡು ಹೋಗಿ ಎಂದು ಆಗ್ರಹಿಸಿದರು. ಪಕ್ಕದಲ್ಲಿದ್ದ ಭೋಜನಾಲಯಕ್ಕೆ ಹೋಗಿ ಸರತಿ ಸಾಲಿನಲ್ಲಿ ನಿಂತು ಪ್ರಸಾದವನ್ನು ಬಡಿಸಿಕೊಂಡು ಅಲ್ಲಿದ್ದ ಊಟದ ಮೇಜಿನ ಮುಂದೆ ಕುಳಿತೆವು. ಬಿಸಿ ಬಿಸಿ ಅನ್ನ ಸಾಂಬಾರ್ ಹಿತವೆನಿಸಿತ್ತು. ಸುಮಾರು ಹತ್ತು ಸಾವಿರ ಕಿ.ಮೀ. ದೂರವಿದ್ದ ಬ್ರಿಟಿಷರ ನಾಡಿನಲ್ಲಿ ಹಿಂದೂ ದೇವರಾದ ಮುರುಗನ್ ದೇಗುಲ, ಪಾಶ್ಚಿಮಾತ್ಯರೇ ನಿಂತು ನಡೆಸುತ್ತಿದ್ದ ಶಾಸ್ತ್ರೋಕ್ತವಾದ ಪೂಜೆ, ರುಚಿಶುಚಿಯಾದ ಪ್ರಸಾದ ಕಂಡು ಹೃದಯ ತುಂಬಿ ಬಂತು.

ಯು.ಕೆ.ಯಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಗನ ಬಳಿ ಹೋದಾಗ, ವೇಲ್ಸ್ ನಲ್ಲಿ ಇರುವ ಮುರುಗನ್ ದೇಗುಲಕ್ಕೆ ಬೇಟಿ ಇತ್ತಿದ್ದೆವು. ವೇಲ್ಸ್ ನ ಲಾಮ್‌ಪುಮ್‌ಸೈಂಟ್ ಗ್ರಾಮದ ಕಾರ್ಮಾರ್‌ತೆನ್‌ಶೈರ್ ಬಳಿಯಿದ್ದ ಬೆಟ್ಟದ ನೆತ್ತಿಯ ಮೇಲೆ ಈ ದೇಗುಲವನ್ನು ನಿರ್ಮಿಸಲಾಗಿತ್ತು. ಬೆಟ್ಟದ ಕಡಿದಾದ ಹಾದಿ, ಸುತ್ತಲೂ ಹಸಿರಿನ ವನಸಿರಿ, ಅಲ್ಲಲ್ಲಿ ಹರಿಯುತ್ತಿದ್ದ ತೊರೆಗಳು ನಮ್ಮ ಕಣ್ಮನ ತುಂಬಿದ್ದವು. ಬೆಟ್ಟದಿಂದ ಕೆಳಗಿಳಿಯುವ ವಾಹನ ಚಾಲಕರು, ಮೇಲೇರುವ ವಾಹನಗಳಿಗೆ ಆದ್ಯತೆ ನೀಡುತ್ತಾ, ಕೆಲವು ಬಾರಿ ಹಿಂದೆ ಸಾಗಿ ರಸ್ತೆಯ ಬದಿಯಲ್ಲಿ ನಿಂತು ಅವರಿಗೆ ಸ್ಥಳಾವಕಾಶ ಮಾಡಿಕೊಡುತ್ತಿದ್ದ ದೃಶ್ಯ ಅಚ್ಚರಿ ಮೂಡಿಸಿತ್ತು. ನಮ್ಮ ನಾಡಿನಲ್ಲಿ, ನಾ ಮುಂದೆ ತಾ ಮುಂದೆ ಎಂದು ಎಲ್ಲಾ ಸಂಚಾರ ನಿಯಮಗಳನ್ನೂ ಗಾಳಿಗೆ ತೂರಿ ರ‍್ರೋ ಎಂದು ಓಡುವ ವಾಹನಚಾಲಕರ ನೆನಪಾಗಿ ಬೇಸರವೆನಿಸಿತ್ತು.

ಆ ಕಾಡಿನ ಮಧ್ಯೆ ಸೀತೆಯನ್ನು ಆಕರ್ಷಿಸಿದ್ದ ಹೊಂಬಣ್ಣದ ಜಿಂಕೆಗಳು ಹುಲ್ಲು ಮೇಯುತ್ತಾ ವಿಹರಿಸುತ್ತಿದ್ದವು. ಪುಟ್ಟದಾದ ಪ್ರಾಣಿ ಸಂಗ್ರಹಾಲಯದಲ್ಲಿ ನವಿಲುಗಳೂ, ಬಣ್ಣ ಬಣ್ಣದ ಪಕ್ಷಿಗಳೂ ಯಾತ್ರಿಗಳನ್ನು ರಂಜಿಸುತ್ತಿದ್ದವು. ಈ ಪಕ್ಷಿಗಳಿಗೆ ಹಲವು ಬಗೆಯ ಕಾಳುಗಳನ್ನು ತಮ್ಮ ಅಂಗೈಲಿ ಹಿಡಿದು ತಿನ್ನಿಸಿ ಸಂಭ್ರಮಿಸುತ್ತಿದ್ದ ಚಿಣ್ಣರನ್ನೂ ಕಂಡೆವು. ಅಲ್ಲಲ್ಲಿ ಬೆಟ್ಟವನ್ನು ಕಡಿದು ಸಮತಟ್ಟು ಮಾಡಿ ಬೇಲಿ ಹಾಕಿ ದನಗಳನ್ನು, ಕುದುರೆಗಳನ್ನು ಮೇಯಲು ಬಿಟ್ಟಿದ್ದರು. ಬೆಟ್ಟದ ಮೇಲೆ ಆನೆಗಳ ಜೋಡಿಯೊಂದು ನಿಧಾನವಾಗಿ ಹೆಜ್ಜೆ ಹಾಕುತ್ತಾ ನಮ್ಮನ್ನು ಹರಸುತಿತ್ತು. ಈ ಆನೆಗಳ ಜೋಡಿಯನ್ನು ಶ್ರೀಲಂಕಾದ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಜಯವರ್ಧನೆಯವರು, ಲಂಡನ್‌ನಲ್ಲಿ ನೆಲಸಿದ್ದ ಶ್ರೀಲಂಕಾದ ಪ್ರಜೆಗಳಿಗೆ ನೆರವಾಗುತ್ತಿದ್ದ ಸುಬ್ರಮಣ್ಯಸ್ವಾಮಿಗಳಿಗೆ ಉಡುಗೊರೆಯಾಗಿ ನೀಡಿದರು.

ಈ ಪಾಶ್ಚಿಮಾತ್ಯರ ನಾಡಿನಲ್ಲಿ ಬೆಟ್ಟದ ನೆತ್ತಿಯ ಮೇಲೆ ಸ್ಕಂದ ಅಂದರೆ ಮುರುಗನ್ ದೇಗುಲವನ್ನು ಕಟ್ಟಿದವರು ಯಾರಿರಬಹುದು ಎಂದು ಆಲೋಚಿಸುತ್ತಿರುವಾಗ ಕಾರ್ ಪಾರ್ಕಿನ ಬಳಿಯಿದ್ದ ಒಂದು ದೊಡ್ಡದಾದ ಬೋರ್ಡ್ ಮೇಲೆ ದೇಗುಲದ ಇತಿಹಾಸವನ್ನು ಸಂಕ್ಷಿಪ್ತವಾಗಿ ಬರೆದು ಹಾಕಿದ್ದರು. ಗುರು ಸುಬ್ರಮಣ್ಯ ಸ್ವಾಮಿಯವರು ಶ್ರೀಲಂಕಾದ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದವರು. ಇವರ ತಂದೆ ವೈದ್ಯರು, ತಾಯಿ ಮುರುಗನ್‌ನ ಪರಮಭಕ್ತೆ. ಇವರಿಗೆ ಬಾಲ್ಯದಲ್ಲಿಯೇ ಮುರುಗನ್ ಸ್ವಾಮಿಯು ಮೂರು ಹೆಡೆಯ ಸರ್ಪದ ರೂಪದಲ್ಲಿ ದರ್ಶನವಿತ್ತು, ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ತನ್ನ ದೇಗುಲವನ್ನು ನಿರ್ಮಿಸಲು ಆಜ್ಞಾಪಿಸಿದನಂತೆ. ಸುಬ್ರಮಣ್ಯರು ತಮ್ಮ ಚಿಕ್ಕವಯಸ್ಸಿನಲ್ಲಿಯೇ ಲಂಡನ್‌ಗೆ ಬಂದು ಮುರುಗನ್ ಭಕ್ತರ ಸಂಘವನ್ನು ಸ್ಥಾಪಿಸಿದರು. ನಂತರದಲ್ಲಿ ದೇಗುಲ ನಿರ್ಮಾಣಕ್ಕೆಂದು ಪ್ರಶಾಂತವಾದ ಸ್ಥಳವನ್ನು ಅರಸುತ್ತಾ ಬಂದವರ ಕಣ್ಣಿಗೆ ಬಿದ್ದದ್ದು ವೇಲ್ಸ್ ಪಟ್ಟಣದ ಈ ಬೆಟ್ಟ. ಈ ಬೆಟ್ಟದ ಮೇಲೆ ಕುಟುಂಬವೊಂದು ಫಾರ್ಮ್ ಹೌಸ್ ಕಟ್ಟಿಕೊಂಡು ಪಶು ಸಂಗೋಪನೆ ಮಾಡುತ್ತಿದ್ದರು. ನಂತರದಲ್ಲಿ ಅವರು ಬೇರೆಡೆಗೆ ಸ್ಥಳಾಂತರವಾಗಿ ಇದನ್ನು ಮಾರಾಟಕ್ಕೆ ಇಟ್ಟಿದ್ದರು. ದೇಗುಲಕ್ಕೆಂದು ಈ ಸ್ಥಳವನ್ನು ಕೊಳ್ಳಲು ಯುವಕ ಸುಬ್ರಮಣ್ಯ ನಿರ್ಧರಿಸಿದರು, ಆದರೆ ಇವರ ಬಳಿ ಚಿಕ್ಕಾಸೂ ಇರಲಿಲ್ಲ. ಅವರ ನೆರವಿಗೆ ಬಂದ ಮುರುಗನ್ ಭಕ್ತರ ಸಂಘದ ಸದಸ್ಯರು ಹತ್ತು ಸಾವಿರ ಪೌಂಡ್ ಸಂಗ್ರಹಿಸಿ ಮುಂಗಡ ಹಣವನ್ನು ಪಾವತಿಸಿ, ನಂತರದಲ್ಲಿ ಬಂದ ದೇಣಿಗೆ ಹಣದಲ್ಲಿ ಇಪ್ಪತ್ತೆರೆಡು ಎಕರೆ ವಿಸ್ತೀರ್ಣವುಳ್ಳ ಫಾರ್ಮ ಅನ್ನು ಸಂಘದ ಹೆಸರಿಗೆ ರಿಜಿಸ್ಟರ್ ಮಾಡಿಸಿದರು. ಶಿಥಿಲಾವಸ್ಥೆಯಲ್ಲಿದ್ದ ತೋಟದ ಮನೆಯನ್ನೇ ಮಾರ್ಪಾಡು ಮಾಡಿ ದೇಗುಲವನ್ನು ಕಟ್ಟಲಾಯಿತು, 1973 ರಲ್ಲಿ ಮುರುಗನ್ ಸ್ವಾಮಿಯ ಮೂರ್ತಿಯನ್ನೂ ಹಾಗೂ ಮೂರು ಹೆಡೆಯ ಸರ್ಪವನ್ನೂ ಪ್ರತಿಷ್ಠಾಪನೆ ಮಾಡಿದರು. ಎಲ್ಲವೂ ಪವಾಡಸದೃಶವಾಗಿ ನಡೆಯಿತೆನ್ನಬಹುದು. ಮುಂದೆ ಭಕ್ತರು ನೀಡಿದ ದೇಣಿಗೆಯಲ್ಲಿ ಚೆಂದದ ದೇಗುಲನ್ನೂ ಕಟ್ಟಿ, ಪೂಜೆ ಪುನಸ್ಕಾರಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದರು. ದೇವರ ಅಭಿಷೇಕಕ್ಕೆ ಅಗತ್ಯವಾದ ಹಾಲು, ಮೊಸರು, ತುಪ್ಪ ಪೂರೈಕೆ ಮಾಡಲು ಹಸುಗಳನ್ನು ಸಾಕಿದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲು ಆಲೂಗೆಡ್ಡೆ, ಕ್ಯಾರೆಟ್, ಟೊಮ್ಯಾಟೋ ಮುಂತಾದ ತರಕಾರಿಗಳನ್ನು ಬೆಳೆದರು. ಇಲ್ಲಿಗೇ ನಿಲ್ಲಲಿಲ್ಲ ಇವರ ಯಶೋಗಾಥೆ. ಸ್ವಾಮಿಗಳ ಕನಸಿನಲ್ಲಿ ಆಗಾಗ್ಗೆ ಹುಲಿಯ ಮೇಲೆ ಸವಾರಿ ಮಾಡುತ್ತಾ ಈ ಪುಣ್ಯಸ್ಥಳಕ್ಕೆ ಆಗಮಿಸುತ್ತಿದ್ದ ಕಾಳಿಮಾತೆ ದರ್ಶನ ನೀಡುತ್ತಿದ್ದಳು. ಆಗ ಸ್ವಾಮಿಗಳ ಬಯಕೆಯಂತೆ ಮಹಾಶಕ್ತಿಸ್ವರೂಪಿಣಿಯಾದ ಕಾಳಿ ಮಾತೆಯ ದೇಗುಲವನ್ನು ಈ ಬೆಟ್ಟದಲ್ಲಿಯೇ ನಿರ್ಮಿಸಲಾಯಿತು. ಭಕ್ತರ ಸಂಖ್ಯೆ ಹೆಚ್ಚಾದಂತೆ, ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಹಲವು ದೇಗುಲಗಳನ್ನು ಸುತ್ತಮುತ್ತಲೂ ನಿರ್ಮಿಸಲಾಯಿತು. ಶಿರಡಿ ಸಾಯಿಬಾಬಾ ದೇಗುಲ, ಶ್ರೀ ರಂಗನಾಥಸ್ವಾಮಿ ದೇಗುಲ, ವಿಘ್ನನಿವಾರಕನಾದ ಗಣೇಶನ ದೇಗುಲಗಳು ಇಲ್ಲಿ ರಾರಾಜಿಸುತ್ತಿವೆ. ರಂಗನಾಥಸ್ವಾಮಿಯ ದೇಗುಲದ ಮುಂದೆ ಒಂದು ಸುಂದರವಾದ ಕಲ್ಯಾಣಿಯಿದ್ದು, ಸುತ್ತಲೂ ಕೃಷ್ಣ, ಶಿವ, ನಂದಿ, ನವಗ್ರಹಗಳ ಮೂರ್ತಿಗಳೂ ಕಂಗೊಳಿಸುತ್ತಿವೆ. ಈ ಕೊಳದಲ್ಲಿ ತಾವರೆ ಪುಷ್ಪಗಳು ನಸುನಗುತ್ತಾ ಯಾತ್ರಿಗಳನ್ನು ಆಹ್ವಾಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಯೇಸುವಿನ ದೇಗುಲ ಹಾಗೂ ಬುದ್ಧನ ಧೇಗುಲವೂ ಸೇರ್ಪಡೆಯಾಗಿದೆ. ‘ಜನಸೇವೆಯೇ ಜನಾರ್ಧನ ಸೇವೆ’ ಎಂಬ ಸಿದ್ಧಾಂತವನ್ನು ನಂಬಿ ನಡೆಯುವ ಇವರು. ‘ಬದುಕಿನ ಯಾತ್ರೆಯಲ್ಲಿ ಅಂತಿಮ ಘಟ್ಟ ತಲುಪಿರುವ ರೋಗಿಗಳ ಶುಶ್ರೂಷೆಗಾಗಿ ಒಂದು ಆರೈಕೆ ಕೇಂದ್ರವನ್ನೂ ಸ್ಥಾಪಿಸಿದ್ದಾರೆ’. ಇಪ್ಪತೆರೆಡು ವಿಸ್ತೀರ್ಣವಿದ್ದ ಸ್ಕಂದ ವೇಲು ಈಗ 115 ಎಕರೆಯಷ್ಟು ವಿಸ್ತಾರವಾಗಿದ್ದು, ಒಂದು ಗೋಮಾಳ ಹಾಗೂ ಅಭಯಾರಣ್ಯವನ್ನು ಒಳಗೊಂಡಿದೆ.

ಪ್ರಾಣಿ ದಯಾ ಸಂಘದವರೂ ಆದ ಇವರ ಘೋಷಣಾ ವಾಕ್ಯ, ‘ಎಲ್ಲಾ ಜೀವಿಗಳೂ ಪರಮಾತ್ಮನ ಸ್ವರೂಪ’. ಇಲ್ಲಿ ನಡೆದ ಒಂದು ಕರುಣಾಜನಕವಾದ ಒಂದು ಘಟನೆಯನ್ನು ಕೇಳೋಣ ಬನ್ನಿ – ಇವರು ಪ್ರೀತಿಯಿಂದ ಸಾಕಿ ಸಲಹಿದ್ದ ಶಂಭು ಎಂಬ ಎತ್ತು ಅನಾರೋಗ್ಯಕ್ಕೆ ತುತ್ತಾಯಿತು. ಆಗ ಅದು ಕ್ಷಯರೋಗ ಪೀಡಿತವಾಗಿದೆ ಎಂದು ತಿಳಿದಾಗ ಬ್ರಿಟಿಷ್ ಸರ್ಕಾರವು ಈ ರೋಗವು ಬೇರೆ ಪ್ರಾಣಿಗಳಿಗೆ ಹರಡದಿರಲು, ಶಂಭುವನ್ನು ತಕ್ಷಣವೇ ದಯಾಮರಣಕ್ಕೆ ಒಳಪಡಿಸಬೇಕೆಂದು ಆದೇಶಿಸಿತು. ಆದರೆ ಯಾರಿಗೂ ಶಂಭುವನ್ನು ಕೊಲ್ಲಲು ಮನಸ್ಸಾಗದೇ ಸರ್ಕಾರದ ಆದೇಶದ ವಿರುದ್ಧ ಕೋರ್ಟಿಗೆ ಅಪೀಲು ಹೋದರು. ಈ ದಯಾಮರಣದ ಕೇಸು ಐದಾರು ವರ್ಷ ನಡೆದಿರಬಹುದು, ಆದರೆ ಕೊನೆಗೆ ಸರ್ಕಾರದ ಪರವೇ ತೀರ್ಪು ಬಂದು 2007 ರಲ್ಲಿ ಶಂಭುವನ್ನು ಕೊಲ್ಲಲಾಯಿತು. ಅದೇನು ಕಾಕತಾಳೀಯ ನ್ಯಾಯವೋ ಎಂಬಂತೆ ಸ್ವಾಮಿ ಸುಬ್ರಮಣ್ಯರವರೂ ಅದೇ ವರ್ಷ ದೈವಾಧೀನರಾದರು.

ಈ ಆಶ್ರಮವನ್ನು ಮುನ್ನೆಡೆಸುತ್ತಿರುವ ಸಂತರು ಗೀತೆಯಲ್ಲಿ ಬೋಧಿಸುವಂತೆ ಕರ್ಮಯೋಗ ಮತ್ತು ಭಕ್ತಿಯೋಗವನ್ನು ಅಕ್ಷರಶಃ ಪಾಲನೆ ಮಾಡುತ್ತಾರೆ. ಕರ್ಮಯೋಗವನ್ನು ಆಚರಿಸುವ ಇವರು ತಮ್ಮ ಕೆಲಸವನ್ನು ಅತ್ಯಂತ ಶ್ರದ್ಧೆ, ಪ್ರೀತಿ ಹಾಗೂ ಸಮರ್ಪಣಾ ಭಾವದಿಂದ ಮಾಡುತ್ತಾರೆ. ಭಕ್ತಿಯೋಗವನ್ನು ಆಚರಿಸುವ ಇವರ ನೈತಿಕ ಮೌಲ್ಯಗಳು, ‘ಸತ್ಯ, ಧರ್ಮ, ಶಾಂತಿ, ಪ್ರೇಮ ಮತ್ತು ಅಹಿಂಸೆ’. ತಮ್ಮ ತಮ್ಮ ಧರ್ಮವನ್ನು ಅನುಸರಿಸುವುದರ ಜೊತೆಗೇ ಸರ್ವಧರ್ಮದವರನ್ನೂ ಆದರಿಸುವ ಇವರು ನಮಗೆ ಆದರ್ಶಪ್ರಾಯರಾಗಿ ನಿಲ್ಲುವರು. ಜಾತಿ ಮತ ಪಂಥ ಎಂದು ಸದಾ ಕಚ್ಚಾಡುವ ನಮಗೆ ಇವರು ದಾರಿದೀಪ ಎಂದರೆ ಅತಿಶಯೋಕ್ತಿಯಲ್ಲ. ತಮ್ಮ ಹೃದಯಕಮಲದಲ್ಲಿ ಪರಮಾತ್ಮನನ್ನು ಕಾಣುವ ಇವರು ಅದೈತ ಸಿದ್ಧಾಂತದ ಅನುಯಾಯಿಗಳು.

ಸ್ಕಂದವೇಲುವನ್ನು ಕಂಡು ಧನ್ಯರಾಗಿ ಹಿಂತಿರುಗುವಾಗ ಮನದ ತುಂಬಾ ಚಿಂತನೆಗಳು. ತಮಿಳುನಾಡಿನಿಂದ ಶ್ರೀಲಂಕಾಕ್ಕೆ ವಲಸೆ ಹೋದ ಕುಟುಂಬವೊಂದರಲ್ಲಿ ಹುಟ್ಟಿದ ಬಾಲಕ, ಲಂಡನ್‌ಗೆ ಹೋಗಿ ವೇಲ್ಸ್ ನಲ್ಲಿ ಸುಂದರವಾಗಿರುವ ಪ್ರಕೃತಿಯ ಮಧ್ಯೆ ನಿರ್ಮಿಸಿದ ಮುರುಗನ್ ದೇಗುಲ, ಮುಂದೆ ಹಲವು ದೇಗುಲಗಳ ನಿರ್ಮಾಣಕ್ಕೆ ನಾಂದಿ ಹಾಡಿತ್ತು. ಇದೇ ಕುವೆಂಪು ಕಂಡ ‘ಸರ್ವಜನಾಂಗದ ಶಾಂತಿಯ ತೋಟ’ ಇರಬಹುದೇ? ಇಲ್ಲಿಗೆ ಭೇಟಿ ನೀಡುವ ಯಾತ್ರಿಗಳಿಗೆಲ್ಲಾ ಉಚಿತ ಊಟ ಮತ್ತು ವಸತಿಯನ್ನು ನೀಡುವ ಇವರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಅನುಯಾಯಿಗಳೇ? ‘ಸ್ವಚ್ಛಭಾರತ್’ ಅಭಿಯಾನವನ್ನು ನಡೆಸಿದ ಮೋದಿಜಿಯವರ ಕನಸಿನ ಲೋಕವಿರಬಹುದೇ? ಮಾನವ ಮತ್ತು ಪ್ರಕೃತಿಯ ಮಧ್ಯೆ ಸಮತೋಲನವನ್ನು ಕಾಪಾಡಿಕೊಳ್ಳಲು ಕರೆ ನೀಡಿದ ಸುಂದರ್ ಲಾಲ್ ಬಹುಗುಣರವರ ಆದರ್ಶ ರಾಜ್ಯವಿರಬಹುದೇ? ದೀನದಲಿತರ ಸೇವೆಗಾಗಿ ಮುಡಿಪಾದ ಆರೈಕೆ ಕೇಂದ್ರ ಮದರ್ ಥೆರೇಸಾರವರ ಕರುಣೆಯ ಕೂಸಾಗಿರಬಹುದೇ? ಸತ್ಯ, ಧರ್ಮ, ಶಾಂತಿ, ಪ್ರೇಮ, ಅಹಿಂಸೆಯನ್ನು ಬೋಧಿಸಿದ ಹಿಂದೂ ಸನಾತನ ಧರ್ಮದ ಮೂರ್ತಸ್ವರೂಪವೇ? ನೀವೇ ಹೇಳಿ.

ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

4 Comments on “ಸ್ಕಂದವೇಲು

  1. ಇಚ್ಛಾಶಕ್ತಿ ಒಂದಿದ್ದರೆ ಏನೆಲ್ಲಾ ಸತ್ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೊಂದು ಉದಾಹರಣೆಯಾಗಿ ಮೂಡಿ ಬಂದಿದೆ ಈ ಸ್ಥಳ ಪರಿಚಯಾತ್ಮಕ ಲೇಖನ.

  2. ಸ್ಕಂದ ವೇಲು ಪರಿಚಯಾತ್ಮಕ ಲೇಖನ ಬಹಳಷ್ಟು ಮಾಹಿತಿಯನ್ನು ಒದಗಿಸಿತು..ಚಿತ್ರ ವೂ ಚೆನ್ನಾಗಿದೆ… ನಿಮ್ಮ ಪ್ರವಾಸ ಕಥನ ನಮಗೆ ಹಬ್ಬದ ಊಟವಿದ್ದಂತೆ ಗಾಯತ್ರಿ ಮೇಡಂ ವಂದನೆಗಳು….

  3. ನಿಮ್ಮ ಲೇಖನದಿಂದ ಹಲವು ವಿಚಾರಗಳು ತಿಳಿದವು. ಧನ್ಯವಾದಗಳು ಮೇಡಂ

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *