(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮರುದಿನ ಎಂಟೂವರೆಗೆಲ್ಲಾ ಅವಳು ಅತ್ತೆಯ ಮನೆಯಲ್ಲಿದ್ದಳು.
“ಹೊಸ ವೆಹಿಕಲ್ ತೆಗೆದುಕೊಂಡೆಯಾ?” ನಾಗರಾಜ ಕೇಳಿದ.
“ಇಲ್ಲ. ಇದು ನನ್ನ ಫ್ರೆಂಡ್‌ದು.”
“ತಿಂಡಿ ಆಯ್ತಾ?”
“ಅತ್ತೆ ತಿಂಡಿಗೆ ಕರೆದಿದ್ದಾರೆ.”
“ಹೌದಾ? ಅದಕ್ಕೆ ಅಮ್ಮಾ ಮಾಮೂಲು ಉಪ್ಪಿಟ್ಟು ಮಾಡದೆ ಖಾರಾಭಾತ್, ಸಜ್ಜಿಗೆ ಮಾಡ್ತಿದ್ದಾರೆ.”
“ಹೇಗಿದ್ದಾರೆ ನಿನ್ನ ಹುಡುಗಿ?”
“ಚೆನ್ನಾಗಿದ್ದಾರೆ. ನಾನೇ ಒಂದು ರೀತಿಯ ಇಬ್ಬಂದಿಯಲ್ಲಿ ಸಿಲುಕಿದ್ದೇನೆ.”
“ಇಬ್ಬಂದೀನಾ?”
“ಹುಂ. ನಾನು ನನ್ನ ಜೊತೆ ಕೆಲಸ ಮಾಡುವ ಹುಡುಗೀನ್ನ ಇಷ್ಟಪಟ್ಟಿದ್ದೇನೆ. ರಾಧಿಕಾಂತ ಅವಳ ಹೆಸರು.”
“ಪ್ರಪೋಸ್ ಮಾಡಿದ್ದೀಯಾ?”
“ಇಲ್ಲ. ಅವಳೂ ಅವಳಣ್ಣ ಇಬ್ಬರೂ ನಮ್ಮ ಫ್ಯಾಕ್ಟರಿಯಲ್ಲೇ ಕೆಲಸದಲ್ಲಿದ್ದಾರೆ. ಅವಳಣ್ಣ ರಮೇಶಂಗೆ ತಂಗಿಯನ್ನು ಸರ್ಕಾರದ ಕೆಲಸದಲ್ಲಿರುವವರಿಗೆ ಕೊಡಕ್ಕೆ ಇಷ್ಟ.”
“ರಾಧಿಕಾ ಏನಂತಾರೆ?”
“ನನಗೆ ತಿಳಿದ ಹಾಗೆ ಅವಳು ಅಣ್ಣನ ಮಾತು ಮೀರಲ್ಲ. ರಮೇಶನ ಅಣ್ಣ, ತಮ್ಮ ಎಲ್ಲರೂ ಪ್ರೈವೇಟ್ ಫ್ಯಾಕ್ಟರಿಯಲ್ಲೇ ಇರೋದು. ಒಂದು ವೇಳೆ ರಾಧಿಕಾ ಕೆಲಸ ಹೋದರೂ ಅವಳ ಗಂಡನಿಗೆ ಸಂಸಾರ ನಿಭಾಯಿಸುವ ಶಕ್ತಿ ಇರಬೇಕು” ಅನ್ನುವುದು ರಮೇಶನ ವಾದ.
“ಅವರು ಹೇಳ್ತಿರೋದು ಸರಿಯಾಗಿದೆಯಲ್ವಾ?”
ಅವನು ಮಾತಾಡಲಿಲ್ಲ.
“ನಾಗರಾಜ ನೀನು ಆ ಹುಡುಗಿಗೆ ಪ್ರಪೋಸ್ ಮಾಡಿಲ್ಲ. ಅವಳ ಹಾಗೂ ಅವಳ ಅಣ್ಣನ ಅಭಿಪ್ರಾಯ ನಿನಗೆ ಗೊತ್ತಿದೆ. ತಂಗಿ ಮದುವೆ ಮಾಡುವ ಆತುರದಲ್ಲಿರುವ ಅಣ್ಣ ನಿನಗೆ ಕೊಡುವ ಉದ್ದೇಶವಿದ್ದಿದ್ರೆ ನಿನ್ನನ್ನು ಕೇಳ್ತಿದ್ದ ಅಲ್ವಾ?”
“ಹೌದು…..”
“ನಿಮ್ಮ ತಾಯಿ ನೋಡಿರುವ ಹುಡುಗಿ ಗೌರ್ನಮೆಂಟ್ ಕೆಲಸದಲ್ಲಿದ್ದಾಳೆ. ನೋಡಕ್ಕೆ ಲಕ್ಷಣವಾಗಿದ್ದಾಳೆ. ನೀನು ಯಾಕೆ ಒಪ್ಪಬಾರದು?”
“ಅಮ್ಮಾ ಅವಳನ್ನು ತಿಂಡಿ, ಅಡಿಗೆ ಮಾಡಿಟ್ಟು ಹೋಗೂಂದ್ರೆ ಕಷ್ಟ ಅಲ್ವಾ? ನಮ್ಮಮ್ಮ ಸೊಸೆಯನ್ನು ಬಾಳಿಸ್ತಾಳೆ ಅನ್ನುವ ನಂಬಿಕೆ ನನಗಿಲ್ಲ.”
“ಆದ್ದರಿಂದ ಮದುವೆ ಇಲ್ಲದೆ ಇರ‍್ತೀಯ?” ನಿಮ್ಮಮ್ಮಂಗೆ ಹೇಳು “ನೀನು ನೋಡಿರುವ ಹುಡುಗೀನ್ನ ನಾನು ಮದುವೆಯಾಗ್ತೀನಿ ನೀನು ಅವಳನ್ನು ಚೆನ್ನಾಗಿ ನೋಡಿಕೊಂಡ್ರೆ ಸುಮಿ ಮದುವೆಗೆ ಸಹಾಯ ಮಾಡ್ತೀನಿ. ನೀನು ಅವಳಿಗೆ ತೊಂದರೆ ಕೊಟ್ಟರೆ ಬೇರೆ ಹೋಗ್ತೀನೀಂತ ಹೇಳು.”
“ಹಾಗಾದ್ರೆ ಅಮ್ಮ ನೋಡಿರುವ ಹುಡುಗೀನ್ನ ಒಪ್ಪಿಕೊಳ್ಳಲಾ?”
“ಒಪ್ಪಿಕೋ. ನಿಮ್ಮಮ್ಮ ಕೊಂಚ ತಗ್ಗಿದ್ದಾರೆ. ಆಮೇಲೆ ಇನ್ನೂ ತಗ್ಗುತ್ತಾರೆ.”
ಸುಮಾರು 10.30ರ ಹೊತ್ತಿಗೆ ಹುಡುಗಿಯ ತಾಯಿ-ತಂದೆ, ಹುಡುಗಿ, ಅವಳ ತಮ್ಮ 2 ಬೈಕ್‌ನಲ್ಲಿ ಬಂದರು. ರೇಖಾ ತಾನೇ ಬೈಕ್‌ನಲ್ಲಿ ತಮ್ಮನ ಜೊತೆ ಬಂದಳು. ಒಂದು ಸರಳವಾದ ಜರಿಯಂಚಿದ್ದ ಕಾಟನ್ ಸೀರೆ ಉಟ್ಟಿದ್ದಳು. ಆರಾಮವಾಗಿ ಎಲ್ಲರ ಜೊತೆ ಮಾತನಾಡಿದಳು.
“ನಾನು ರೇಖಾ ಜೊತೆ ಮಾತಾಡಬೇಕು ವರು” ನಾಗರಾಜ ಪಿಸುಗುಟ್ಟಿದ.
“ರೇಖಾ ನಮ್ಮ ನಾಗರಾಜ ನಿಮ್ಮ ಹತ್ತಿರ ಮಾತಾಡಬೇಕಂತೆ.”
ರೇಖಾ ಎದ್ದು ನಾಗರಾಜನ ಹಿಂದೆ ಮಹಡಿ ಹತ್ತಿದಳು. 10-15 ನಿಮಿಷಗಳ ನಂತರ ವಾಪಸ್ಸಾದ ಇಬ್ಬರ ಮುಖದಲ್ಲೂ ನಗುವಿತ್ತು. ಪಾರ್ವತಿ ಬಂದವರಿಗೆ ಸೊಗಸಾದ ಪಾನಕ ಕೊಟ್ಟರು. ಅವರು ಹೊರಟಾಗ ಗಂಡಿನವರ ಗತ್ತು ತಂದುಕೊಂಡು ಪಾರ್ವತಿ ಹೇಳಿದರು. “ನಾಳೆ ನಮ್ಮ ಅಭಿಪ್ರಾಯ ತಿಳಿಸ್ತೇನೆ.”
“ಹಾಗೇ ಮಾಡಿ” ಎಂದರು ರೇಖಾಳ ತಂದೆ.
ಹೆಣ್ಣಿನ ಮನೆಯವರು ಗೇಟು ದಾಟುತ್ತಿದ್ದಂತೆ ಪಾರ್ವತಿ ಕೇಳಿದರು. “ವರು ಏನನ್ನಿಸಿತು?”
“ರೇಖಾ ಇಷ್ಟವಾದಳು ಅತ್ತೆ. ನಾಗರಾಜ ಏನಂತಾನೋ ಕೇಳಿ.”
ನಾಗರಾಜ ಅಲ್ಲೇ ಇದ್ದವನು ಹೇಳಿದ. “ಅಮ್ಮ, ನನಗೆ ರೇಖಾ ಒಪ್ಪಿಗೆ ಆದರೆ ನನ್ನದು ಕೆಲವು ಕಂಡಿಷನ್ಸ್ಗಳಿವೆ.
“ಏನೋ ಅದು?”
“ರೇಖಾ ಬೆಳಿಗ್ಗೆ ಒಂಭತ್ತು ಗಂಟೆಗೆಲ್ಲಾ ಮನೆ ಬಿಡಬೇಕಂತೆ. ನೀನು ಅವಳೇ ಬಾಗಿಲಿಗೆ ನೀರು ಹಾಕಬೇಕು. ಅಡಿಗೆ, ತಿಂಡಿ ಮಾಡಬೇಕೂಂತ ಹಠ ಮಾಡಬಾರದು.”
“ಖಂಡಿತಾ ಇಲ್ಲಪ್ಪ. ಸುಮಿ ಬಾಗಿಲಿಗೆ ನೀರು ಹಾಕ್ತಾಳೆ. ನಾನೇ ತಿಂಡಿ ಮಾಡ್ತೀನಿ.”
“ವರದಕ್ಷಿಣೆ, ವರೋಪಚಾರಾಂತ ನೀನು ಕೇಳಬಾರದು. ಮೂರು ದಿನಗಳ ಮದುವೆಗೆ ನಾನು ಒಪ್ಪಲ್ಲ. ಒಂದೇ ದಿನದ ಮದುವೆ ಇದಕ್ಕೆ ಒಪ್ಪಿದರೆ ನಾನು ರೇಖಾನ್ನ ಮದುವೆಯಾಗ್ತೀನಿ ಇಲ್ಲದಿದ್ದರೆ ಇಲ್ಲ.”
“ಏನೋ ಹಾಗಂತೀಯಾ? ನಮ್ಮನೆಯಲ್ಲಿ ನಡೆಯುತ್ತಿರುವ ಮೊದಲನೇ ಮದುವೆ. ಗ್ರಾಂಡಾಗಿ ಮಾಡಿ ಎಲ್ಲರನ್ನೂ ಕರೆಯೋದು ಬೇಡವಾ?”
“ಬೇಡ. ಒಂದೇ ದಿನದ ಮದುವೆ. ಸರಳವಾಗಿ ನಡೆಯಬೇಕು. ನಾವು ಹುಡುಗಿಗೆ ಒಂದು ಜೊತೆ ಓಲೆ, ಮಾಂಗಲ್ಯಸರ, ಒಂದು ಜೊತೆ ಬಳೆ ಹಾಕಬೇಕು. ನೀನು ಮಾಂಗಲ್ಯಸರ ಮಾಡಿಸು. ಉಳಿದ ಖರ್ಚು ನಾನು ನೋಡಿಕೊಳ್ತೇನೆ.”
“ಹುಡುಗಿ ಮನೆಯವರಿಗೆ ಮಾತುಕಥೆಗೆ ಬರಲು ಹೇಳಲಾ?”
“ನೀನೊಬ್ಬಳೇ ಮಾತಾಡೋದು ಬೇಡ. ದೊಡ್ಡ ಮಾವ, ಅತ್ತೆ ಬರಲಿ. ನಾನೂ ಬರ‍್ತೀನಿ.”
ಪಾರ್ವತಮ್ಮ ಒಪ್ಪಲೇಬೇಕಾಯ್ತು.
“ಈ ವಾರದಲ್ಲೇ ಮಾವ, ಅತ್ತೆಗೆ ಬರಲು ಹೇಳ್ತೀನಿ.”
“ಹಾಗೇ ಮಾಡು” ಎಂದರು ಪಾರ್ವತಿ.
ಗುರುವಾರ ಒಳ್ಳೆಯ ದಿನವೆಂದು ಪಾರ್ವತಮ್ಮ ತಮ್ಮನಿಗೆ ಬರಲು ಹೇಳಿದರು. ದೇವಕಿಗೆ ಹೇಳಬೇಕೆಂದುಕೊಂಡರು. ಆದರೆ ನಾಗರಾಜ ಒಪ್ಪಲಿಲ್ಲ.
ಗುರುವಾರ ವರು ಬರಲು ಒಪ್ಪಲಿಲ್ಲ. ಹನ್ನೊಂದು ಗಂಟೆಯ ಹೊತ್ತಿಗೆ ಹುಡುಗಿ ಮನೆಯವರು ಬಂದರು. ಶ್ರೀನಿವಾಸರಾವ್ ತಮ್ಮ, ಅಕ್ಕನ ಅಭಿಪ್ರಾಯ ತಿಳಿಸಿದರು.
“ನಮ್ಮನೆಯಲ್ಲೂ ಇದು ಮೊದಲನೇ ಮದುವೆ. ದೇವರು ನನಗೆ ಅನುಕೂಲ ಕೊಟ್ಟಿದ್ದಾನೆ. ಮುಖ್ಯವಾಗಿ ನಮಗೆ ಮೈಸೂರಿನಲ್ಲಿರುವ ಹುಡುಗ ಬೇಕು. ನಿಮ್ಮ ಇಚ್ಛೆಯಂತೆ ಸರಳವಾಗೇ ಮದುವೆ ಮಾಡ್ತೀವಿ. ಬೆಳಿಗ್ಗೆ ಧಾರೆಯಾದ ಮೇಲೆ ರಿಸೆಪ್ಷನ್ ಇಟ್ಟುಕೊಳ್ಳೋಣ. ಮದುವೆ ಅಚ್ಚುಗಟ್ಟಾಗಿ ಮಾಡಿಕೊಡ್ತೇವೆ” ರೇಖಾ ತಂದೆ ಶ್ರೀಪಾದರಾಯರು ಹೇಳಿದರು.
ಪಾರ್ವತಿಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ. ಸುಮ ಚುರುಕಾಗಿ ಓಡಾಡುವುದು ನೋಡಿ ಶಕುಂತಲಾಗೆ ಖುಷಿಯಾಯಿತು.
“ಅತ್ತಿಗೆ ಸುಮಿ ಸಣ್ಣಗಾಗಿದ್ದಾಳೆ. ಮೊದಲಿಗಿಂತ ಚುರುಕಾಗಿದ್ದಾಳೆ. ಅವಳು ಹೀಗೇ ಕೆಲಸ ಮಾಡ್ತಿದ್ರೆ ಖಂಡಿತಾ ಸಣ್ಣ ಆಗ್ತಾಳೆ. ಮದುವೆ ಕಷ್ಟವಾಗಲ್ಲ.”
“ಹೌದು ಕಣೆ ಶಕ್ಕು. ನಾನೇ ನನ್ನ ಮಗಳ ಸೋಮಾರಿತನಕ್ಕೆ ಕಾರಣವಾಗಿಬಿಟ್ಟೆ.”
“ನಾಗರಾಜನ ಮದುವೆ ಬೇಗ ಮಾಡಿ ಒಂದು ಶುಭಕಾರ್ಯವಾಗುತ್ತಿರುವ ಹಾಗೆ ಹಿಂದೆ ಸಾಲುಸಾಲಾಗಿ ಶುಭಕಾರ್ಯ ನಡೆಯುತ್ತಂತೆ.”
“ನೀವೆಲ್ಲಾ ಸಹಕಾರ ನೀಡಿದರೆ ಅದೇನೂ ಕಷ್ಟವಾಗಲ್ಲ ಸೀನು.”
“ದುಡ್ಡುಕಾಸಿನ ಸಹಾಯ ಖಂಡಿತ ನನಗೆ ಮಾಡಕ್ಕಾಗಲ್ಲ ಅಕ್ಕ. ಕೆಲಸಗಳು ಹೇಳು ಮಾಡ್ತೀನಿ.”
“ನಿನ್ನ ಕಷ್ಟ ನನಗೆ ಗೊತ್ತು ಕಣೋ. ಖಂಡಿತಾ ನಾನು ಹಣಕಾಸಿನ ಸಹಾಯ ಕೇಳಲ್ಲ. ಯಾರನ್ನೂ ಏನೂ ಕೇಳಕೂಡದೂಂತ ನಾಗರಾಜ ಹೇಳಿಬಿಟ್ಟಿದ್ದಾನೆ. ಅವನು ನಾನಂದುಕೊಂಡಷ್ಟು ದಡ್ಡನಲ್ಲ. ಚೀಟಿಗೀಟಿ ಹಾಕಿಕೊಂಡು ಮದುವೆ ಖರ್ಚಿಗೆ ಹಣ ಇಟ್ಟುಕೊಂಡಿದ್ದಾನೆ.”
“ಹಾಗಾದರೆ ಸರಿ ಅಕ್ಕ.”
ಗಂಡ-ಹೆಂಡತಿ ಊಟ ಮಾಡಿಕೊಂಡು ಸರಸ್ವತಿಪುರಂಗೆ ಹೊರಟರು. ವರು ಅವರಿಗೆ ಎಲ್ಲರ ಪರಿಚಯ ಮಾಡಿಸಿದಳು. ಚಂದ್ರಾವತಿಯವರನ್ನು ಭೇಟಿಮಾಡಿದ ಶಕುಂತಲಾಗೆ ತುಂಬಾ ಖುಷಿಯಾಯಿತು. ಅವರು ಮಗಳನ್ನು ಹೊಗಳುವುದನ್ನು ಕೇಳಿ ಅವರ ತಾಯಿ ಹೃದಯ ಹಿಗ್ಗಿತು.
ಶನಿವಾರ ಮಧ್ಯಾಹ್ನವೇ ರಾಗಿಣಿ ಊರಿಗೆ ಹೊರಟಳು.
“ರಾಗಿಣಿ ಜಗಳವಾಡಬೇಡ. ನಿಧಾನವಾಗಿ ಅಮ್ಮನಿಗೆ ಹೇಳು.”
“ಖಂಡಿತ ಆಂಟಿ. ನನಗೆ ಅವರು ಹತ್ತಿರವಾಗಿದ್ದರೂ ಮಕ್ಕಳಿಂದ ದೂರವೇ ಉಳಿತಾರಲ್ಲಾಂತ ಬೇಸರವಿತ್ತು. ಆದರೆ ಈಗ ಅವರ ಅಸಹಾಯಕತೆ ಅರ್ಥವಾಗಿದೆ. ಖಂಡಿತಾ ಜಗಳವಾಡಲ್ಲ. ಅಮ್ಮನ್ನ ಒಪ್ಪಿಸ್ತೇನೆ.”
“ಆಲ್ ದ ಬೆಸ್ಟ್” ಎಂದರು ಚಂದ್ರಾ ಆಂಟಿ, ವಾರುಣಿ.
ಶನಿವಾರ ರಾತ್ರಿ ಅವಳು ತಾಯಿಗೆ ಏನೂ ಹೇಳಲಿಲ್ಲ. ಮರುದಿನ ಬೆಳಿಗ್ಗೆ ತಿಂಡಿಯಾದ ಮೇಲೆ ಕಾವೇರಿಯಮ್ಮ, ಅಯ್ಯಪ್ಪ ಹಾಗೂ ಸತ್ಯಮ್ಮ ಇರುವಾಗ ಅವರ ಮನೆಗೆ ಹೋದಳು.
“ಬಾಮ್ಮ ರಾಗಿಣಿ ಹೇಗಿದ್ದೀಯಾ?”
“ಚೆನ್ನಾಗಿದ್ದೀನಿ ಆಂಟಿ.”
“ಹೈದರಾಬಾದ್ ಟ್ರಿಪ್ ಹೇಗಿತ್ತಮ್ಮಾ?”
“ಚೆನ್ನಾಗಿತ್ತು ಆಂಟಿ.”
“ಎಲ್ಲಿ ಇಳಿದುಕೊಂಡಿದ್ರಿ?”
“ಪ್ರತಾಪರೆಡ್ಡೀಂತ ತುಂಬಾ ಫೇಮಸ್ ಲಾಯರಿದ್ದಾರೆ. ಅವರ ಮನೆಯಲ್ಲಿದ್ವಿ……….”
“ಪ್ರತಾಪರೆಡ್ಡಿ ತುಂಬಾ ಫೇಮಸ್ ಲಾಯರ್ ನಮ್ಮ ಕಸಿನ್ ಭೋಜಮ್ಮಾಂತ ಇದ್ದಾರೆ. ಅವರ ಕೇಸ್ ನಡೆಸಿ, ಅವರ ಆಸ್ತಿ ಅವರಿಗೆ ಸಿಗುವಂತೆ ಮಾಡಿದರು.”
“ಅವರು ಹೇಗೆ ನಿಮಗೆ ಪರಿಚಯ?” ಕಾವೇರಿಯಮ್ಮ ಕೇಳಿದರು.
“ಚಂದ್ರಾವತಿ ಆಂಟಿ ಸಂಧ್ಯಾ ಆಂಟಿ ಪ್ರತಾಪರೆಡ್ಡಿಯವರನ್ನು ಮದುವೆಯಾಗಿದ್ದಾರೆ……….”
“ಪ್ರತಾಪರೆಡ್ಡಿಯದು ಲವ್ ಮ್ಯಾರೇಜ್ ಅಂತ ಗೊತ್ತಿತ್ತು……..”
“ಹೌದು ಅಂಕಲ್. ಅವರದು ಲವ್ ಮ್ಯಾರೇಜ್ ಅವರ ಒಬ್ಬನೇ ಮಗ ನವೀನ್ ರೆಡ್ಡಿ ಅಂತ ಅವರೂ ಲಾಯರ್ ತಂದೆ ಜೊತೆ ಪ್ರಾಕ್ಟೀಸ್ ಮಾಡ್ತಿದ್ದಾರೆ………”
“ಓ, ಐ ಸೀ…”
“ಅಮ್ಮಾ ಅವರು ನನ್ನನ್ನು ಮದುವೆಯಾಗಲು ಇಷ್ಟಪಟ್ಟಿದ್ದಾರೆ. ಸತ್ಯಮ್ಮ ಬಾಯಿ ತೆರೆಯುವ ಮೊದಲೇ ಅಯ್ಯಪ್ಪ ಹೇಳಿದರು. “ಕಂಗ್ರಾಟ್ಸ್ ರಾಗಿಣಿ. ಅಂತಹ ಮನೆ ಸೇರುವುದಕ್ಕೆ ನೀನು ಪುಣ್ಯ ಮಾಡಿದ್ದೆ ಕಣ್ಮುಚ್ಚಿಕೊಂಡು ಒಪ್ಪಿಗೆ ಕೊಡು. ಜಾತಿಗೀತಿ ನೋಡಬೇಡ.”
“ಅಮ್ಮಾ ನೀನು ಏನು ಹೇಳ್ತೀಯಾ?”
“ನಾನು ಜಾತಿಗೀತಿ ಅಂದ್ಕೊಂಡು ನಮ್ಮ ಜಾತಿಯವರನ್ನೇ ಮದುವೆ ಮಾಡಿಕೊಂಡು ಸುಖ ಸುರಿದುಕೊಂಡಿದ್ದು ನೀನೇ ನೋಡಿದ್ದೀಯ. ನಿಮ್ಮ ತಂದೆ ಓಡಿಹೋದಾಗ ನಮ್ಮ ನೆಂಟರಿಷ್ಟರಾಗಲಿ, ಜಾತಿಯವರಾಗಲಿ ನನಗೆ ಆಶ್ರಯ ಕೊಡಲಿಲ್ಲ. ನನಗೆ ಆಶ್ರಯಕೊಟ್ಟು ನನ್ನ ಸಂಸಾರದ ಜವಾಬ್ದಾರಿ ತೆಗೆದುಕೊಂಡವರು ಈ ದೇವತೆಗಳು. ಅವರು ಮದುವೆಗೆ ಒಪ್ಪಿದ್ದಾರೆ. ನನ್ನ ಒಪ್ಪಿಗೆಯೂ ಇದೆ.”
“ಆದರೆ ನಿನಗೆ ರಾಜೂಗೆ ಒಂದು ವ್ಯವಸ್ಥೆಯಾಗದೆ ನಾನು ಮದುವೆಯಾಗಲ್ಲಮ್ಮ……..”
“ನೀನು ಏನು ವ್ಯವಸ್ಥೆ ಮಾಡಲು ಸಾಧ್ಯ? ನೀನು ಅತ್ತೆ ಮನೆಗೆ ನಮ್ಮನ್ನು ಕರೆದುಕೊಂಡು ಹೋಗ್ತೀಯ? ನಾನು ಬಡವಳಿರಬಹುದು. ಆದರೆ ಸ್ವಾಭಿಮಾನ ಬಿಟ್ಟು ಬೀಗರ ಮನೆಗೆ ಬರಲ್ಲ.”
“ನಿನ್ನ ಆತಂಕ ಅರ್ಥವಾಗುತ್ತದೆ ರಾಗಿಣಿ. ನಾವು ಮಾತಾಡಿಕೊಂಡು ನಿನಗೆ ಉತ್ತರಕೊಡ್ತೇವೆ. ನಾಳೆ ಊರಿಗೆ ಹೊರಟುಬಿಡಬೇಡ.”
“ಇಲ್ಲ ಆಂಟಿ….” ಎಂದಳು ರಾಗಿಣಿ. ಅಂದು ಸತ್ಯಮ್ಮ ಪುನಃ ಆ ವಿಚಾರ ಮಾತಾಡಲಿಲ್ಲ.
ಮರುದಿನ ಬೆಳಿಗ್ಗೆ ತಿಂಡಿಯ ನಂತರ ಕಾವೇರಿಯಮ್ಮ ರಾಗಿಣಿ ಹೇಳಿಕಳುಹಿಸಿದರು. ರಾಜು ಶಾಲೆಗೆ ಹೋಗಿದ್ದ. ಅಯ್ಯಪ್ಪ,ಸತ್ಯಮ್ಮ ಎಲ್ಲರೂ ಇದ್ದರು.
“ರಾಗಿಣಿ ನಿಮ್ಮ ತಂದೆ ನಿನ್ನನ್ನು ಬಿಟ್ಟು ಹೋದಾಗ ನೀನು ಎಸ್.ಎಸ್.ಎಲ್.ಸಿ.ಯಲ್ಲಿದ್ದೆ. ಆಗ ನಿನಗೆ 14 ವರ್ಷ ಇರಬಹುದು. 19 ವರ್ಷಕ್ಕೆ ಬಿ.ಎ. ಮುಗಿಸಿದೆ. ಆಮೇಲೆ ಕೆಲಸಕ್ಕೆ ಸೇರ‍್ತೀನೀಂತ ಮಡಿಕೇರಿಗೆ ಹೋದೆ. ಅಲ್ಲಿ ಎರಡುವರ್ಷಗಳು ಯಾವುದೋ ಆಫೀಸ್‌ನಲ್ಲಿ ಕೆಲಸ ಮಾಡಿದೆ. ಬಂದ ಸಂಬಳ ಪಿ.ಜಿಗೇ ಹೋಗ್ತಿತ್ತು. ಅದಕ್ಕೆ ನೀನು ಇಂಗ್ಲೀಷ್ ಎಂ.ಎ. ಮಾಡುವ ಮನಸ್ಸು ಮಾಡಿದೆ ಅಲ್ವಾ?”
“ಹೌದು ಆಂಟಿ.”
“ಸುಮಾರು 8 ವರ್ಷಗಳಿಂದ ನಿಮ್ಮ ತಾಯಿಗೆ 20,000ರೂ. ಸಂಬಳ ಕೊಡ್ತಿದ್ದೇನೆ. ನಿಮ್ಮ ಅಮ್ಮ ಸಾಮಾನು ತರಿಸೋರು, ಡಬ್ಬಗಳಿಗೆ ಹಾಕೋದು ಸಾಂಬಾರ್ ಪುಡಿ ಮಾಡೋದು, ಅಡಿಗೆ ಮಾಡುವುದರ ಜೊತೆಗೆ ನನ್ನ ಜೊತೆಯೇ ಇರುತ್ತಾರೆ. ಆದ್ದರಿಂದ 20,000ರೂ. ಕೊಡ್ತಿದ್ದೀನಿ. ಅದರಲ್ಲಿ 10 ಸಾವಿರ ಪೋಸ್ಟ್ ಆಫೀಸ್ ಆರ್.ಡಿ.ಗೆ ಹೋಗತ್ತೆ. ಐದು ಸಾವಿರ ಚಿನ್ನದ ಚೀಟಿಗೆ ಹೋಗ್ತಾಯಿದೆ. 5 ಸಾವಿರದಲ್ಲಿ ನಿಮ್ಮ ತಾಯಿ 2 ಸಾವಿರ ಖರ್ಚು ಮಾಡಿದರೆ ಹೆಚ್ಚು.”
“ಆಂಟಿ ಇದನ್ನೆಲ್ಲಾ ನನಗೆ ಯಾಕೆ ಹೇಳ್ತಿದ್ದೀರಾ?”
“ನಮ್ಮ ಆಸ್ತಿಗೆ-ಪಾಸ್ತಿಗೆ ವಾರಸುದಾರ ಬೇಕೂಂತ ನಾವು ಬಯಸಿದ್ದೆವು. ಆದಿನ ನಿಮ್ಮಮ್ಮ ನನ್ನನ್ನು ಡಾಕ್ಟರ್ ಬಳಿಗೆ ಕರೆದುಕೊಂಡು ಹೋಗದಿದ್ದರೆ ನನ್ನ ಮಗು ಉಳಿಯುತ್ತಿರಲಿಲ್ಲ. ಇಂದು ನಮ್ಮ ಮುತ್ತಣ್ಣ ಬದುಕಿದ್ದಾನೆ ಎಂದರೆ ಅದಕ್ಕೆ ನಿಮ್ಮ ತಾಯೀನೇ ಕಾರಣ. ಸತ್ಯಮ್ಮ ನಮಗೆ ಮಾಡಿರುವ ಉಪಕಾರಾನ್ನ ನಾವು ದುಡ್ಡಿನಲ್ಲಿ ಅಳೆಯಲು ಸಾಧ್ಯವಿಲ್ಲ…….”
“ಅಮ್ಮಾ, ಏನೇನೋ ಹೇಳಬೇಡಿ. ನಿಮ್ಮ ಉಪಕಾರದಿಂದ ನಾನು, ನನ್ನ ಮಕ್ಕಳು ಈ ದಿನ ನೆಮ್ಮದಿಯಿಂದ ಇದ್ದೇವೆ. ನಿಮ್ಮ ಉಪಕಾರದ ಋಣ ನಾವು ತೀರಿಸಲು ಸಾಧ್ಯವೇ?”
“ಆ ವಿಚಾರ ಬಿಡಿ. ನೋಡು ರಾಗಿಣಿ ನಿನ್ನ ಮದುವೆಯ ನಂತರವೂ ನಿಮ್ಮ ತಾಯಿ ಇಲ್ಲೇ ಇರ‍್ತಾರೆ. ನಿನ್ನ ತಮ್ಮ ಪಿ.ಯು.ಸಿ ದಾಟಿದೊಡನೆ ನಿಮ್ಮ ತಾಯಿ, ನಮ್ಮ ಮುನ್ನಾ ನಿನ್ನ ತಮ್ಮ ಮೂವರನ್ನೂ ಮೈಸೂರಿನ ಮನೆಗೆ ಕಳಿಸ್ತೀನಿ. ನಮ್ಮ ಕಲ್ಪನಾ ಚಂದನ ಮಕ್ಕಳನ್ನು ಇಂಡಿಯಾದಲ್ಲೇ ಓದಿಸಬೇಕೂಂತಿದ್ದಾರೆ. ಆದರೆ ಅವರಿಗೆ ಹಾಸ್ಟಲ್‌ನಲ್ಲಿ ಬಿಡಲು ಇಷ್ಟವಿಲ್ಲ. ನಿಮ್ಮಮ್ಮ ಅಡಿಗೆ ಮಾಡೋದು ಬೇಡ. ಮನೆಯ ಉಸ್ತುವಾರಿ ನೋಡಿಕೊಂಡರೆ ಸಾಕು.”
“ಆಂಟಿ……”
ತಮ್ಮ ಓದು ಮುಗಿಸುವ ವೇಳೆಗೆ ನಿಮ್ಮಮ್ಮನ ಕೈಲಿ ಕೊಂಚ ಹಣ ಸೇರಿರುತ್ತೆ. ಅದಕ್ಕೆ ಉಳಿದ ಹಣ ಸೇರಿಸಿ ಒಂದು ಚಿಕ್ಕ ಮನೆ ತೆಗೆದುಕೊಡ್ತೇವೆ. ನಿಮ್ಮ ತಾಯಿ ನಿನಗೆ ಒಂದು ಜೊತೆ ಬಳೆ, ಒಂದು ನೆಕ್ಲೇಸ್, ಝುಮುಕಿ, ಓಲೆ ಮಾಡಿಸಿದ್ದಾರೆ. ಹುಡುಗನಿಗೆ ಒಂದು ಉಂಗುರ ಕೊಟ್ಟರಾಯ್ತು.”
ರಾಗಿಣಿಗೆ ಮಾತೇ ಹೊರಡಲಿಲ್ಲ.
“ನೋಡಮ್ಮ ನೀನು ನಮ್ಮನೆ ಮಗಳು. ನಿನ್ನ ಮದುವೆ ನಾವು ಮಾಡ್ತೇವೆ. ನೀನು ಯೋಚಿಸಬೇಡ.”
“ಅಂಕಲ್, ಮೊದಲು ಅವರಿಗೆ ಒಪ್ಪಿಗೆ ತಿಳಿಸಬೇಕು. ನಂತರ ಮದುವೆ ಎಲ್ಲೀಂತ ಯೋಚಿಸೋಣ.”
“ಸರಿ ಹಾಗಾದರೆ ಪ್ರತಾಪರೆಡ್ಡಿ ನಂಬರ್ ಕೊಡು.”
“ಚಂದ್ರಾ ಆಂಟೀನ್ನ ಕೇಳಿ ಕೊಡ್ತೀನಿ.”
“ಹಾಗೇ ಮಾಡು.”
ರಾಗಿಣಿಗೆ ತುಂಬಾ ಖುಷಿಯಾಯಿತು. ಅವಳಿಗೆ ಬಾಲಾಜಿಗೆ ಫೋನ್ ಮಾಡಬೇಕೆನ್ನಿಸಿತು. ಅವಳು ಮನಸ್ಸು ಹತೋಟಿಗೆ ತಂದುಕೊಂಡು ಚಂದ್ರಾ ಆಂಟಿಗೆ ಫೋನ್ ಮಾಡಿ ವಿಷಯ ತಿಳಿಸಿದಳು.
“ತುಂಬಾ ಖುಷಿಯಾಗ್ತಿದೆ ಕಂಗ್ರಾಟ್ಸ್.”
“ಥ್ಯಾಂಕ್ಸ್ ಆಂಟಿ.”
“ಬಾಲಾಜಿಗೆ ಹೇಳಿದೆಯಾ?”
“ಇಲ್ಲ ಆಂಟಿ.”
“ಯಾಕೆ ಹೇಳಲಿಲ್ಲ?”
“ವಿಷಯ ತಿಳಿದ ತಕ್ಷಣ ಅವರು ಬಂದು ಬಿಡ್ತಾರೇನೋಂತ ಭಯವಾಯ್ತು.”
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44071
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು


ಕನಸೊಂದು ಶುರುವಾಗಿ ಧಾರಾವಾಹಿ ಓದಿ ಸಿಕೊಂಡು ಹೋಯಿತು ಮೇಡಂ..
ಬಹಳ ಸುಂದರವಾಗಿದೆ
ಸರಳ ಸುಂದರ ಕಥಾಹಂದರ…ಎಂದಿನಂತೆ ಆಸಕ್ತಿಕರವಾದ ಇದೆ ಮೇಡಂ.
ಕಾದಂಬರಿ ತೆಗೆದುಕೊಳ್ಳುತ್ತಿರುವ ಸಕಾರಾತ್ಮಕ ತಿರುವುಗಳು ಜೀವನದ ಆಶಾಭಾವವನ್ನು ಪ್ರೋತ್ಸಾಹಿಸುತ್ತಿದೆ.