ಪ್ರವಾಸ

ವರ್ಷಕ್ಕೊಮ್ಮೆ ದರ್ಶನ ನೀಡುವ  ‘ಹಾಸನಾಂಬೆ’.

Share Button

ವಿಶ್ವವಿಖ್ಯಾತ ಮೈಸೂರು ದಸರಾ ಮುಗಿದಿದೆ. ಅದರ ನೆನಪು ಮಾಸುವ ಮುಂಚೆ ಹಾಸನ ನಗರದಲ್ಲಿ 12ನೇ ಶತಮಾನದಲ್ಲಿ ಸ್ಥಾಪನೆಯಾಗಿರುವ ಹಾಸನಾಂಬಾ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಜಾತ್ರೋತ್ಸವಕ್ಕೆ ಇಡೀ ಹಾಸನ ನಗರ ಸಜ್ಜಾಗಿದೆ, ಹಾಸನ ನಗರದ ಪ್ರಮುಖ ವೃತ್ತಗಳು, ರಸ್ತೆಗಳು ವೈವಿಧ್ಯಮಯವಾಗಿ ಸಿಂಗಾರಗೊಂಡಿವೆ. ರಸ್ತೆ ಎರಡು ಕಡೆಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ನವ ವಧುವಿನಂತೆ ಸಿಂಗಾರಗೊಂಡು ಎಲ್ಲರ ಗಮನ ಸೆಳೆಯುತ್ತಿವೆ. ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಮತ್ತು ಜಿಲ್ಲಾಡಳಿತ, ಹಾಸನ ಸಕಲ ರೀತಿಯಲ್ಲಿ ತಯಾರಾಗಿದೆ. ಅದರಲ್ಲೂ ದೇವಾಲಯದ ಒಳ- ಹೊರಗೂ ಸಿಂಗಾರ, ಹೂವಿನ ಅಲಂಕಾರ, ವರ್ಣರಂಜಿತ ವಿದ್ಯುತ್ ಸ್ಪರ್ಶದೊಂದಿಗೆ ರಂಗೇರಿಸುವಂತೆ ಮಾಡಿದೆ. ಹಾಸನಾಂಬೆ ಜಾತ್ರೆ ರೀತಿಯ ಮಹೋತ್ಸವ ಅಕ್ಟೋಬರ್-09 ರಿಂದ ಪ್ರಾರಂಭಗೊಂಡು 23 ರವರಿಗೂ ಹಾಸನಾಂಬ ದೇವಿಯ ದರ್ಶನ ಇರುತ್ತದೆ. ಆದರೆ ಅಕ್ಟೋಬರ್ 09 ಮತ್ತು ಅಕ್ಟೋಬರ್ 23 ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ ಎಲ್ಲಾ ದಿನಗಳಲ್ಲೂ ಅಂದರೆ 13 ದಿನ (ಅಕ್ಟೋಬರ್ 10 ರಿಂದ 22 ರವರೆಗೆ) ಕೂಡ ದಿನದ 24 ಗಂಟೆಗಳ ಕಾಲ ದರ್ಶನಕ್ಕೆ ಅವಕಾಶ ಇರುತ್ತದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ ಎಸ್ ಲತಾ ಕುಮಾರಿ ಅವರು ತಿಳಿಸಿದ್ದಾರೆ.

09.10.2025 ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಮತ್ತು ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀ ಸಿದ್ದಗಂಗಾ ಮಠ ತುಮಕೂರು ಇವರ ದಿವ್ಯ ಸಾನಿಧ್ಯದೊಂದಿಗೆ ಉದ್ಘಾಟನೆ ಆಗಲಿದೆ. ವರ್ಷಕ್ಕೊಮ್ಮೆ ದೇವಿಯ ದರ್ಶನ ಪಡೆಯಲು ಭಕ್ತಾದಿಗಳ ಕುತೂಹಲ ಹೆಚ್ಚುತ್ತಿದೆ. ಸಾಕಷ್ಟು ಕಾಲಾವಕಾಶ ಇರುವುದರಿಂದ ತಮಗೆ ಅನುಕೂಲ ವಾಗುವ ದಿನಗಳಂದು ದೇವಿ ದರ್ಶನ ಪಡೆಯಬಹುದು. ಈ ದೇವಿಯ ದರ್ಶನಕ್ಕೆ ಕೇವಲ ರಾಜ್ಯವಲ್ಲದೆ… ಅಂತರ ರಾಜ್ಯಗಳಿಂದಲೂ ಕೂಡ ಭಕ್ತಾದಿಗಳು ಆಗಮಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ದೇವಿಯ ಪೌರಾಣಿಕ ಹಿನ್ನಲೆ ಪ್ರತಿಯೊಬ್ಬರಿಗೂ ಕೂಡ ರೋಮಾಂಚನ ಅನುಭವ ನೀಡುವುದರೊಂದಿಗೆ ಭಕ್ತಿ-ಭಾವ ಮೂಡಿಸುತ್ತದೆ.

ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ತೆರೆಯುವ ಹಾಸನಾಂಬ ದೇಗುಲ ಈ ಬಾರಿ 13 ದಿನ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ದೇಗುಲದ ಬಾಗಿಲು ತೆರೆದು ಪೂಜಿ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ದೇವ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಬಾ ರಿಯ ವಿಶೇಷ ದರ್ಶನಕ್ಕೆ 300, ಮತ್ತು 1000 ರೂಪಾಯಿಗಳ ಟಿಕೆಟ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಹಾಸನಾಂಬ ದೇವಿಯ ದರ್ಶನದ ನೆಪದಲ್ಲಿ ಇಡೀ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ. ಎರಡು ದಿನ ಬಿಡುವು ಮಾಡಿಕೊಂಡು ಬಂದರೆ ಇವೆಲ್ಲವನ್ನೂ ನೋಡಬಹುದಾಗಿದೆ. ಹಾಸನಾಂಬೆಯ ದೇಗುಲದ ಬಾಗಿಲು ವರ್ಷಕ್ಕೊಮ್ಮೆ 7 ದಿನಗಳಿಗಿಂತ ಕಡಿಮೆ ಮತ್ತು 16 ದಿನಗಳಿಗಿಂತ ಹೆಚ್ಚು ದಿನ ತೆರೆಯುವುದಿಲ್ಲ ಇದೊಂದು ವಿಶೇಷ!. ದೇವಿ ಎದುರು ಪ್ರಾಣಿಗಳಿಗೆ ಅವಕಾಶ ಇರುವುದಿಲ್ಲ. ಹಾಗಾಗಿ ದೇಗುಲ ತೆರೆಯುವ ಸಂದರ್ಭದಲ್ಲಿ ಬಾಳೆಕಂದು ಕಡಿದು ಶಾಂತಿ ಮಾಡುತ್ತಾರೆ. ಇದು ಕೂಡ ಒಂದು ವಿಶೇಷ!. ಬಾಗಿಲ ಮರೆಯಲ್ಲಿ ಇರುವ ದೇವಿ ಒಮ್ಮೆಲೇ ಬೀರುವ ದೃಷ್ಟಿಯು ಕ್ರೂರವಾಗಿರುತ್ತದೆ ಎನ್ನುವ ನಂಬಿಕೆಯೂ ಕೂಡ ಇರುವುದರಿಂದ ಭಕ್ತರಿಗೆ ಆ ರೀತಿಯ ತೊಂದರೆ ಆಗಬಾರದು ಎನ್ನುವ ಕಾರಣ ಬಾಳೆಕಂದು ಕಡಿಯಲಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.ಕೊನೆಯ ದಿನ ಪೂಜೆ ಸಲ್ಲಿಸಿದ ಬಳಿಕ ಗರ್ಭಗುಡಿಯ ಬಾಗಿಲು ಮುಚ್ಚುವ ಸಂದರ್ಭದಲ್ಲಿ ದೇವಿಗೆ ಹೂಗಳನ್ನು ಅರ್ಪಿಸಿ, ದೀಪವನ್ನು ಹಚ್ಚಲಾಗುತ್ತದೆ.

ಸಪ್ತ ಮಾತೃಕೆಯರು ವಾರಣಾಸಿಯಿಂದ ದಕ್ಷಿಣದ ಕಡೆಗೆ ವಾಯುವಿಹಾರಕ್ಕಾಗಿ ಬಂದರೆಂಬುದರ ಪ್ರತೀತಿ ಇದೆ. ಜೊತೆಗೆ ಸಪ್ತಮಾತ್ರುಕೆಯರಾದ ಬ್ರಾಹ್ಮೀ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ಇವರನ್ನು ಎಲ್ಲರೂ ಕೂಡ ನೆನಪಿಸಿಕೊಳ್ಳುತ್ತಾರೆ. ಸಪ್ತ ಮಾತೃಕೆಯರಲ್ಲಿ ವೈಷ್ಣವಿ, ಮಹೇಶ್ವರಿ ಮತ್ತು ಕೌಮಾರಿ ದೇವಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿದ್ದಾರೆ. ಬ್ರಹ್ಮದೇವಿಯು ಆಲೂರು ತಾಲೂಕು ಕೆಂಚಮ್ಮನ ಹೊಸಕೋಟೆಯಲ್ಲಿ, ಚಾಮುಂಡಿ, ವಾರಹಿ ಮತ್ತು ಇಂದ್ರಾಣಿಯು ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದ್ದಾರೆ.

ಹಾಸನಾಂಬೆಗೆ ಅನೇಕ ಪೌರಾಣಿಕ ಹಿನ್ನೆಲೆಯೂ ಕೂಡ ಇದೆ. ಬಾಗಿಲು ತೆಗೆಯುವ ದಿನ ಹಾಸನದಲ್ಲಿ ನೆಲೆಸಿರುವ ತಾಳವಾರ ಮನೆತನದವರು ದೇವಿಯ ಎದುರಿಗೆ ನೆಡಲಾಗಿರುವ ಬಾಳೆಕಂದನ್ನು ಭಕ್ತಿ- ಭಾವದಿಂದ ಕತ್ತರಿಸಿದ ನಂತರ ದೇವಾಲಯ ಗರ್ಭಗುಡಿಯ ಬಾಗಿಲನ್ನು ತೆಗೆಯುವ ಪದ್ಧತಿ ಇಂದಿಗೂ ಕೂಡ ರೂಢಿಯಲ್ಲಿದೆ. ಹಾಸನ ಜಿಲ್ಲೆಯ ಹೆಸರಿನೊಂದಿಗೆ ಈ ದೇವತೆ ನೆಲೆಗೊಂಡಿದ್ದಾಳೆ. ಹಾಸನಾಂಬೆಯಾಗಿ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಪಾಡುತ್ತ ಬರುತ್ತಿದ್ದಾಳೆ.ವರ್ಷಕ್ಕೊಮ್ಮೆ ಬರುವ ದೇವಿಯ ದರ್ಶನ ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಈ ಗುರುವಾರದಂದು 09.10.2025 ಬಾಗಿಲು ತೆರೆದರೆ ನಂತರ ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುತ್ತಾರೆ. ಪುನಃ ಒಂದು ವರ್ಷದ ಕಾಲ ದೇವಿಯ ದರ್ಶನ ಇರುವುದಿಲ್ಲ. ಇದೊಂದು ಹಾಸನಾಂಬೆಯ ವಿಶೇಷಗಳಲ್ಲಿ ವಿಶೇಷ.

ದೇವಿಯ ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪ ಆರುವುದಿಲ್ಲ…. ದೇವಿಗೆ ಮುಡಿಸಿರುವ ಹೂವು ಬಾಡುವುದಿಲ್ಲ…. ಇದೊಂದು ಹಾಸನಾಂಬೆ ದೇವಿಯ ಮತ್ತೊಂದು ಮಹಿಮೆ ಹಾಗೂ ದೇವಾಲಯದಲ್ಲಿ ನಡೆದು ಬಂದ ಪ್ರತೀತಿ. ಮೊದಲೇ ಹೇಳಿದಂತೆ ಮತ್ತೊಂದು ಸಂಗತಿ ಎಂದರೆ…… ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ದೇವಿಯ ದರ್ಶನವನ್ನು ಮಾಡಲು ಭಕ್ತಾದಿಗಳಿಗೆ ಯಾವತ್ತೂ ಕೂಡ ಅವಕಾಶವಿರುವುದಿಲ್ಲ. ಅರಸು ಕುಟುಂಬದವರು ಬಾಳೆ ಗಿಡವನ್ನು ಕಡಿದ ನಂತರ ಅವರೆಲ್ಲ ಪೂಜೆ ಮಾಡಿದ ನಂತರ ಮಾರನೇ ದಿನ ಭಕ್ತಾದಿಗಳ ಪ್ರವೇಶ ಪ್ರಾರಂಭವಾಗುವುದು. ಹೀಗೆ ಮಾಡದಿದ್ದರೆ ಏನಾದರೊಂದು ತೊಂದರೆಯಾಗುತ್ತದೆ ಎಂಬ ನಂಬಿಕೆಯು ಕೂಡ ಭಕ್ತಾದಿಗಳ ಮನದಲ್ಲಿ ಅಡಗಿದೆ.

ದೇವಿಯ ಕುರಿತಾಗಿ ಹಲವು ಚಾರಿತ್ರಿಕ ಘಟನೆಗಳು ಕೂಡ ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿವೆ. ಒಮ್ಮೆ ದೇವಿಯ ಆಭರಣಗಳನ್ನು ಅಪರಿಸಲು ಸಲುವಾಗಿ ಹೊಂಚು ಹಾಕಿ ನಾಲ್ಕು ಜನ ಕಳ್ಳರು ದೇವಾಲಯದ ಒಳಗೆ ನುಗ್ಗಿ….. ಆಭರಣಗಳಿಗೆ ಕೈ ಹಾಕಿದಾಗ ಇದರಿಂದ ಕೋಪಗೊಂಡ ದೇವಿ ನಾಲ್ಕು ಮಂದಿ ಕಳ್ಳರಿಗೂ ಶಾಪ ಹಾಕಿದ್ದರ ಫಲವಾಗಿ ಇವತ್ತಿಗೂ ಕೂಡ ಆ ನಾಲ್ಕು ಜನ ಕಳ್ಳರು ಕಲ್ಲಾಗಿದ್ದಾರೆ! ಇಲ್ಲಿ ಕಳ್ಳತನ ಮಾಡಲು ಬಂದಂತಹ ಆ ನಾಲ್ವರು ಕಳ್ಳರಿಗೂ ಕೂಡಾ ಗುಡಿ ನಿರ್ಮಾಣವಾಗಿದೆ. ಅದು “ಕಳ್ಳಪ್ಪನ ಗುಡಿ” ಎಂದು ಕೂಡ ಇವತ್ತಿಗೂ ನಾವು ದೇವಾಲಯದ ಆವರಣದಲ್ಲಿ ನೋಡಬಹುದು.

ಹಾಸನಾಂಬ ದೇವಾಲಯ ದ್ವಾರ ಪ್ರವೇಶ ಮಾಡಿದರೆ ಸಿದ್ದೇಶ್ವರ ಸ್ವಾಮಿ ದೇವಾಲಯ ಕಾಣಸಿಗುತ್ತದೆ. ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ಆಕಾರದಲ್ಲಿನ ಚಿತ್ರಣ ಕೂಡ ಕಣ್ಮುಂದೆ ಕಾಣುತ್ತದೆ. ಜೊತೆಗೆ ದೇವಾಲಯದ ಆವರಣದಲ್ಲಿ 108 ಲಿಂಗವನ್ನು ಒಂದೇ ಸಲ ನೋಡುವ ಅವಕಾಶ ಕೂಡ ಭಕ್ತರಿಗೆ ಸಿಗುತ್ತದೆ. ಗುಡಿಯ ಮೇಲ್ಭಾಗದಲ್ಲೂ ಕೂಡ ನಾಲ್ಕು ಅಡಿ ಎತ್ತರದ ಮಹಾಲಿಂಗ ಕೂಡ ಇದೆ. ದೇವಾಲಯದ ಬಾಗಿಲನ್ನು ತೆರೆಯುವುದಕ್ಕೆ ಮುಂಚೆ ಅರಸು ಕುಟುಂಬದವರು ತಮ್ಮ ಪೂಜಾ ವಿಧಾನಗಳೊಂದಿಗೆ ಅತ್ಯಂತ ಭಯ- ಭಕ್ತಿಯಿಂದ ಎಲ್ಲರಿಗೂ ಒಳಿತ ಆಗುವ ದೃಷ್ಟಿಯಿಂದ ಸೇವೆ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ.

ಈ ಸಲ ಭಕ್ತಾದಿಗಳಿಗೆ ಗುಣಮಟ್ಟದ ಲಡ್ಡು ಪ್ರಸಾದ ನೀಡುವ ಸಂಬಂಧ ಹಲವು ಕೌಂಟರ್ ತೆರೆಯಲಾಗಿದೆ. ಅಲ್ಲದೆ ಮೊಬೈಲ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಹಾಸನಾಂಬ ದೇವಾಲಯದವರೆಗೂ ಬ್ಯಾರಿಕೇಡ್, ನೆಲಹಾಸು, ವಿದ್ಯುತ್ ದೀಪ, ಕುಡಿಯುವ ನೀರು, ಸಂಚಾರ ಶೌಚಾಲಯ ವ್ಯವಸ್ಥೆ ಕೂಡ ಮಾಡಲಾಗಿದೆ. ಹಾಸನಾಂಬ ದೇವಾಲಯಕ್ಕೆ 2021 ರಲ್ಲಿ 1ಲಕ್ಷ, ನಂತರದಲ್ಲಿ 2022 ರಲ್ಲಿ 3ಲಕ್ಷ, 2023ರಲ್ಲಿ 6 ಲಕ್ಷ, 2024ರಲ್ಲಿ 20 ಲಕ್ಷ ಜನರು ಭೇಟಿ ನೀಡಿದ್ದರು ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಅದೇ ರೀತಿ ಈ ವರ್ಷ 25 ಲಕ್ಷ ಜನರು ಬರುವ ನಿರೀಕ್ಷೆಯನ್ನು ಪರಿಗಣಿಸಿ ಎಲ್ಲಾ ಇಲಾಖೆ ಗಳನ್ನು ಒಳಗೊಂಡಂತೆ ಸುಗಮ ವ್ಯವಸ್ಥೆಗಾಗಿ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ. ಅಕ್ಟೋಬರ್ 9 ರಿಂದಲೇ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಇದಕ್ಕಾಗಿ ಮೂರು ವೇದಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಒಂದು ವೇದಿಕೆಯಲ್ಲಿ ಜಾನಪದ ಜಾತ್ರೆ ನಡೆಸಲಾಗುವುದು. ಈ ವೇದಿಕೆಯಲ್ಲಿ ನಾಡಿನ ನಾನಾ ಭಾಗದ ಜಾನಪದ ಕಲಾವಿದರು ನೃತ್ಯ ಪ್ರದರ್ಶಿಸಲಿದ್ದಾರೆ. ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಜೊತೆಗೆ ಮೂಲ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಉಳಿದ ಎರಡು ವೇದಿಕೆಗಳಲ್ಲಿ ಸ್ಥಳೀಯ ಯುವಕ- ಯುವತಿಯರು, ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಿದ್ದಾರೆ. ಇವೆಲ್ಲದರ ಜೊತೆಗೆ ಎಂದಿನಂತೆ ಟೆಲಿ ಟೂರಿಸಂ, ಫಲ ಪುಷ್ಪ ಪ್ರದರ್ಶನವೂ ಇದೆ. ಮುಖ್ಯವಾಗಿ ಸ್ತ್ರೀಶಕ್ತಿ ಸಂಘಗಳಿಂದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಕೂಡ ಏರ್ಪಡಿಸಲಾಗಿದೆ. ಜೊತೆಗೆ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಹಾಸನ ಟೂರ್ ಪ್ಯಾಕೇಜ್ ಅನ್ನು ಕೂಡ ಎಂದಿನಂತೆ ಏರ್ಪಡಿಸಲಾಗುವುದು. ದಟ್ಟ ಜನಸಂಖ್ಯೆಯನ್ನು ನಿಯಂತ್ರಿಸಲು ಸಲುವಾಗಿ 2,000 ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ. 280 ಹೆಚ್ಚು ಕಡೆ ಮುಂಜಾಗ್ರತ ಕ್ರಮವಾಗಿ ಸಿಸಿಟಿವಿ ಅಳವಡಿಸಲಾಗಿದೆ. ಇವೆಲ್ಲದರ ಜೊತೆಗೆ ಡ್ರೋನ್ ಕ್ಯಾಮೆರಾ ಸಹ ಬಳಕೆಯಲ್ಲಿದ್ದು, ಎಲ್ಲದಕ್ಕೂ ಕೂಡ ಎಐ ತಂತ್ರಜ್ಞಾನ ಬಳಸಲಾಗಿದೆ ಎಂದು ಉಸ್ತುವಾರಿ ಸಚಿವರು ಶಾಸಕರ, ಸಂಸದರ, ಅಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದಾರೆ. ಈ ಬಾರಿಯೂ ಕೂಡ 24 ಗಂಟೆಗಳ ಕಾಲ ದೇವಸ್ಥಾನ ಬಾಗಿಲು ತೆರೆಯಲಿದ್ದು, ಪೂಜಾ ಸಮಯ ಹೊರತುಪಡಿಸಿ ಉಳಿದೆಲ್ಲ ಸಮಯದಲ್ಲಿ ಭಕ್ತಾದಿಗಳಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕಳೆದ ಬಾರಿ 6.80 ಕೋಟಿ ರೂಪಾಯಿ ಹಣ ಖರ್ಚಾಗಿದ್ದು, ಈ ವರ್ಷ ಇನ್ನು ಸ್ವಲ್ಪ ಹೆಚ್ಚಿನ ಹಣ ಖರ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ದಿನಪೂರ್ತಿ ವಿಐಪಿ ದರ್ಶನ ವ್ಯವಸ್ಥೆ ಇರುವುದಿಲ್ಲ ಎಂದಿದ್ದಾರೆ. ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಮಾತ್ರ ವಿಐಪಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. 300 ರೂಪಾಯಿ ಮತ್ತು ಸಾವಿರ ರೂಪಾಯಿಗಳ ಟಿಕೆಟ್ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದ್ದು ಭಕ್ತಾದಿಗಳು ಈ ವ್ಯವಸ್ಥೆ ಉಪಯೋಗಿಸಿಕೊಂಡರೆ ಸ್ವಲ್ಪ ಬೇಗ ದರ್ಶನ ಪಡೆಯಬಹುದು. ಇಲ್ಲದಿದ್ದರೆ ಸರತಿಯ ಸಾಲಿನಲ್ಲಿ ನಿಂತು ಧರ್ಮ ದರ್ಶನವನ್ನು ಪಡೆಯಬಹುದಾಗಿದೆ.

ಮುಂದುವರಿದು ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಹಾಗೂ ಮಾಹಿತಿ ಪಡೆಯಲು ಸಲುವಾಗಿ ಸಹಾಯವಾಣಿ ತೆರೆಯಲಾಗಿದ್ದು ಇದರಲ್ಲಿ ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳು, ಉಪ ವಿಬಾಗಾಧಿಕಾರಿ, ತಹಸಿಲ್ದಾರ್, ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್, ಜಿಲ್ಲಾ ಆರೋಗ್ಯ ಅಧಿಕಾರಿ, ಅಗ್ನಿಶಾಮಕ ದಳದ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಹಾಗೂ ನಗರಸಭೆಯ ಸೂಪರಿಟೆಂಡೆಂಟ್ ರವರುಗಳ ನಂಬರ್ ಗಳನ್ನು ಕೂಡ ನೀಡಲಾಗಿದೆ. ಇವರೆಲ್ಲರ ನೆರವಿನಿಂದ ದೇವಿಯ ದರ್ಶನಕ್ಕೆ ಜಿಲ್ಲಾಡಳಿತದಿಂದ ಹೈಟೆಕ್ ಸ್ಪರ್ಶ ನೀಡಲಾಗಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಹಾಸನಂಬೆ ಭಕ್ತಾದಿಗಳಿಗೆ ಅತ್ಯಾಧುನಿಕ ಸೇವೆ ನೀಡಲು ಮುಂದಾಗಿರುವ ಜಿಲ್ಲಾಡಳಿತ ಭಕ್ತಾದಿಗಳಿಗೆ 6366105589 ವಾಟ್ಸಪ್ ನಂಬರ್ ನೀಡಿದ್ದು ಈ ನಂಬರ್ ಸೇವ್ ಮಾಡಿಕೊಂಡು ವಾಟ್ಸಪ್ ನಲ್ಲಿ “ಹಾಯ್” ಎಂದು ಮೆಸೇಜ್ ಮಾಡಿದರೆ ಭಾಷೆ ಆಯ್ಕೆ ಬರುತ್ತದೆ. ಕನ್ನಡ ಅಥವಾ ಇಂಗ್ಲಿಷ್ ಭಾಷೆಯ ಆಯ್ಕೆಯನ್ನು ಮಾಡಿಕೊಂಡು ಯಾವ ಭಾಷೆಯಲ್ಲಿ ಕೂಡ ಮಾಹಿತಿಯನ್ನು ಪಡೆಯಬಹುದು. ಹಾಸನಾಂಬ ದೇವಿಯ ದರ್ಶನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಲಭ್ಯವಾಗಲಿವೆ. ಎಂದಿನಂತೆ ಈ ಬಾರಿ ಧರ್ಮದರ್ಶನ ಸಾಲಿನ ಜೊತೆಗೆ 300,1000 ಟಿಕೆಟ್ ಅಲ್ಲದೆ ಗೋಲ್ಡ್ ಕಾರ್ಡ್ ಸೇರಿದಂತೆ ಒಟ್ಟು ನಾಲ್ಕು ಸರತಿಯ ಸಾಲುಗಳು ಇರಲಿದೆ. ವಾಟ್ಸಾಪ್ ಚಾಟ್ ಮೂಲಕ ಸರತಿ ಸಾಲುಗಳಿಗೆ ಹೋಗುವ ದಾರಿಯ ಬಗ್ಗೆ ಮಾಹಿತಿ ಹಾಗೂ ಸರತಿ ಸಾಲಿನಲ್ಲಿರುವ ಜನಸಂದಣೆ ಬಗ್ಗೆಯೂ ಕೂಡ ಕುಳಿತಲ್ಲೇ ಮಾಹಿತಿ ಪಡೆಯಬಹುದಾಗಿದೆ. ಈ ಬಾರಿ ಆನ್ಲೈನ್ ಮೂಲಕವೂ ಹಾಸನಂಬೆಯ ದರ್ಶನಕ್ಕೆ ಟಿಕೆಟ್ ಬುಕ್ ಮಾಡುವ ಅವಕಾಶ ನೀಡಲಾಗಿದೆ.

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ. ಸಾವಿರಕ್ಕೂ ಹೆಚ್ಚು ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ. ಈ ಬಾರಿ ಮೈಸೂರು ದಸರಾ ಮಾದರಿಯ ಚಿತ್ತಾಕರ್ಷಕ ಲೈಟಿಂಗ್ ಮಾಡಲಾಗಿದೆ. ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜನೆ ಮಾಡಲಾಗಿದೆ. ಎಲ್ಲಾ ಸವಲತ್ತುಗಳನ್ನು ಭಕ್ತಾದಿಗಳು ಪಡೆದುಕೊಳ್ಳಲು ಜಿಲ್ಲಾಡಳಿತ ಸಜ್ಜುಗೊಳಿಸಿದೆ. ಈ ಬಾರಿ ಹಾಸನಾಂಬ ದೇವಿಯ ದರ್ಶನವನ್ನು ಎಲ್ಲಾ ಭಕ್ತಾದಿಗಳು ಉತ್ಸವದಲ್ಲಿ ಭಾಗಿಯಾಗಬಹುದು. ದೇವಿಯ ದರ್ಶನ….. ದೇವಿಯ ಇತಿಹಾಸ….. ದೇವಾಲಯದ ಒಳ-ಹೊರಗಿನ ವೈಶಿಷ್ಟ್ಯ….. ಸಪ್ತ ಮಾತೃಕೆಯರ ಇತಿಹಾಸ….. ಹೀಗೆ ಎಲ್ಲವೂ ಕೂಡ ಭಕ್ತಾದಿಗಳ ಮೈಮನಗಳಿಗೆ ರೋಮಾಂಚನವನ್ನುಂಟು ಮಾಡುವುದರ ಜೊತೆಗೆ ಭಕ್ತಿ- ಭಾವ ಮೂಡಿಸುತ್ತದೆ. ನಾನು ಕೂಡ ಮೂರ್ನಾಲ್ಕು ಬಾರಿ ದೇವಿಯ ಉತ್ಸವದಲ್ಲಿ ಪಾಲ್ಗೊಂಡಿದ್ದೇನೆ. ಸರತಿಯ ಸಾಲಿನಲ್ಲಿ ತಾಳ್ಮೆಯಿಂದ ನಿಂತು, ದೇವಿಯ ದರ್ಶನ ಮಾಡುವುದೇ ಒಂದು ರೀತಿಯಲ್ಲಿ ಹೆಮ್ಮೆ ಉಂಟುಮಾಡುತ್ತದೆ. ಬೆಳಿಗ್ಗೆ ಬೇಗ ಸರತಿಯ ಸಾಲಿನಲ್ಲಿ ನಿಂತರೆ ಮಧ್ಯಾಹ್ನದಷ್ಟರಲ್ಲಿ ದರ್ಶನ ಮಾಡಬಹುದು. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಕೌಂಟರ್ ಮೂಲಕ ದೇವಸ್ಥಾನದಲ್ಲಿ ಕೂಡ ಮಾಡಲಾಗಿದೆ. ಅಲ್ಲದೆ ಹಲವು ಕಡೆ ಸಂಘ-ಸಂಸ್ಥೆಗಳು ಇತರ ಭಕ್ತಾದಿಗಳು ಕೂಡ ಪ್ರಸಾದ ವ್ಯವಸ್ಥೆಯನ್ನು ಮಾಡೇ ಮಾಡುತ್ತಾರೆ. ಒಟ್ಟಿನಲ್ಲಿ ಹಾಸನಾಂಬ ದೇವಿಯ ದರ್ಶನ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದೆ.

ಎಲ್ಲರಿಗೂ ಹಾಸನಾಂಬ ದೇವಿಯ ಮಹೋತ್ಸವಕ್ಕೆ ಹಾರ್ದಿಕ ಶುಭಾಶಯಗಳು.

ಕಾಳಿಹುಂಡಿ ಶಿವಕುಮಾರ್, ಮೈಸೂರು.

3 Comments on “ವರ್ಷಕ್ಕೊಮ್ಮೆ ದರ್ಶನ ನೀಡುವ  ‘ಹಾಸನಾಂಬೆ’.

  1. ಹಾಸನಾಂಬೆ..ದೇವಿಯ ಬಗ್ಗೆ ಮಾಹಿತಿಯನ್ನು ಕೊಟ್ಟಿರುವ ಲೇಖನ ಚೆನ್ನಾಗಿ ಬಂದಿದೆ ಸಾರ್… ಧನ್ಯವಾದಗಳು

  2. ಸಾಕಷ್ಟು ವಿಚಾರಗಳನ್ನು ಒಳಗೊಂಡ ಬರಹ. ಚೆನ್ನಾಗಿದೆ

  3. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು, ಭಕ್ತರಿಗೆ ನೋಡುವ ಅವಕಾಶವಿರುವ ಹಾಸನಾಂಬೆಯ ಜಾತ್ರೆಯ ವಿವರ ಚೆನ್ನಾಗಿದೆ…ಕುತೂಹಲಕಾರಿಯಾಗಿದೆ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *