ಲಹರಿ

ಎತ್ತೆಣಿಂದೆತ್ತ ಸಂಬಂಧವಯ್ಯಾ !- ಭಾಗ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮದ್ಯಪಾನದ ಸುತ್ತ ; ಬಂಧನಗಳ ಹುತ್ತ

ಕನ್ನಡ ಎಂಎ ಮಾಡುವಾಗ ನನ್ನ ಸಹಪಾಠಿ ಗೆಳೆಯ (ಕನ್ನಡದ ಈಗಿನ ಖ್ಯಾತ ವಿಮರ್ಶಕ ಹಾಗೂ ಸಾಹಿತಿ) ಎಚ್ ಎಸ್ ಸತ್ಯನಾರಾಯಣನು ವಿದ್ಯಾರ್ಥಿ ಸೆಮಿನಾರಿಗೆ ಈ ಕವನ ಸಂಕಲನವನ್ನು ಆಯ್ದುಕೊಂಡಿದ್ದನು. ಎಲ್ಲರಿಗೂ ಒಂದಿಲ್ಲೊಂದು ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದ ಆಗಿನ ಇನ್ನೋರ್ವ ಸಹಪಾಠಿಯು ‘ರಾಜರತ್ನಂ ಅವರು ಕುಡಿಯದೇ ಬರೆದರೆಂದು ನಾನು ನಂಬಲಾರೆ, ಇದಕ್ಕೆ ನೀವೇನು ಹೇಳುತ್ತೀರಿ?’ ಎಂಬ ಪ್ರಶ್ನೆಯನ್ನೆಸೆದಾಗ, ಸತ್ಯಣ್ಣನು ‘ಜಿ ಪಿ ರಾಜರತ್ನಂ ಅವರ ವೈಯಕ್ತಿಕ ಬದುಕು ಮತ್ತು ಬರೆಹಗಳ ನಿಷ್ಠೆಯನ್ನು ಕಂಡ ಸಮೀಪವರ್ತಿಗಳ ಮಾತನ್ನು ಗೌರವಿಸಿ ನಂಬಬೇಕು’ ಎಂಬಂಥ ಉತ್ತರ ಕೊಟ್ಟು ಸುಮ್ಮನಾಗಿಸಿದ್ದನು.

ರಾಜರತ್ನಂ ಅವರು ಹೀಗೆ ಕುಡಿತದ ಚಟವಿರುವ ಶ್ರಮಿಕರ ಕನ್ನಡನಿಷ್ಠೆಯನ್ನು ಅನಾವರಣ ಮಾಡಿದ ಮೇಲೆ ಅವರ ಬಳಿ ಪಾಠ ಕೇಳಿದ ಎನ್ ಪ್ರಹ್ಲಾದರಾಯರೆಂಬುವರು ನೂರ ತೊಂಬತ್ತೆಂಟು ಪದ್ಯಗಳಿರುವ ‘ಅಮಲಿನ ವಚನ’ಗಳನ್ನು ಕುಡಿದೇ ಬರೆದರೆಂದು ನನ್ನ ವಿದ್ಯಾಗುರುಗಳಾದ ಹಾ ಮಾ ನಾಯಕರು ಒಮ್ಮೆ ಹೇಳಿದ್ದರು. ಅಷ್ಟೇ ಅಲ್ಲ, ಕುಡಿದು ಬರೆದ ಅಮಲಿಗಿಂತ ಕುಡಿಯದೇ ಕಲ್ಪಿಸಿಕೊಂಡು ಬರೆದ ಪದ್ಯಗಳೇ ಸರ್ವಕಾಲಕ್ಕೂ ನಿಲ್ಲಬಲ್ಲಂಥ ಕಾವ್ಯಗುಣ ಹೊಂದಿವೆ ಎಂದಿದ್ದರು. ಸಾಹಿತಿಗಳು ಕುಡಿದಾಗ ಬರೆಯುತ್ತಾರೆಯೋ? ಅಥವಾ ಬರೆದು ಪ್ರಕಟಿಸಿದ ಸುಖ ಸಂಕಟಗಳಿಗಾಗಿ ಕುಡಿದು ತಮ್ಮ ಇನ್ನಷ್ಟು ಒಳಗಿನ ತುಡಿತ ಮಿಡಿತಗಳನ್ನು ಹೊರ ಹಾಕುತ್ತಾರೆಯೋ? ಇದು ಚಿದಂಬರ ರಹಸ್ಯ! ಅಂತೂ ಸಾಹಿತಿಗಳಿಗೂ ಆಲ್ಕೋಹಾಲಿಗೂ ಅತ್ಯಂತ ಸಮೀಪವಾದ ಮತ್ತು ಆಪ್ತವಾದ ಸಂಬಂಧ. ಎಲ್ಲರೂ ಅಲ್ಲದಿದ್ದರೂ ಕುಡಿತದ ನಂಟು ಇರದ, ಕುಡಿಯುವವರೊಂದಿಗೆ ಕುಳಿತು ಕುಡಿಯದ ಬರೆಹಗಾರರು ತುಂಬಾ ಕಡಮೆ. ದೊಡ್ಡ ದೊಡ್ಡ ಸಾಹಿತಿ ಬರೆಹಗಾರರ ಹಾಗೂ ಅಕಡೆಮಿಕ್ ವಲಯದಲ್ಲಿ ಹೆಸರು ಮಾಡಿದ ಮಹಾನುಭಾವರ ಸಂಪರ್ಕದಲ್ಲಿ ಇರಲು ಅವರೊಂದಿಗೆ ಕುಳಿತು ಕುಡಿಯುವುದು ಅನಿವಾರ್ಯ. ಅಷ್ಟೇ ಅಲ್ಲ, ಅವರ ಸ್ನೇಹಾಭಿಮಾನಗಳನ್ನು ನಿರಂತರವಾಗಿ ಕಾಯ್ದುಕೊಳ್ಳಲು ಆಗಿಂದಾಗ್ಗೆ ಅವರನ್ನು ಕಂಡು ಮಾತಾಡಿಸಿ, ಕುಡಿಸಿ ಖರ್ಚು ಮಾಡಿಕೊಳ್ಳಬೇಕು. ತೀರಾ ಗಂಭೀರವಾದ ಸಾಹಿತ್ಯಕ ಚರ್ಚೆ, ಸಂವಾದ, ಸಲಹೆ ಸೂಚನೆಗಳು ಬೇಕೆಂದರೆ ಇಂಥ ‘ಎಣ್ಣೆಪಾರ್ಟಿ’ ಅನಿವಾರ್ಯ ಎಂಬುದು ಅಲಿಖಿತ ಒಪ್ಪಂದ. ಇಂಥ ಸಂದರ್ಭದಲ್ಲಿ ಕುಡಿಯದವರಿಗೆ ಪ್ರವೇಶವಿರುವುದಿಲ್ಲ. ಅವರನ್ನು ಇವರು ಅಸಡ್ಡೆಯಿಂದ ನೋಡುತ್ತಾ ತುಚ್ಛವಾಗಿ ಕಾಣುವರು. ಇಂಥ ಮನೆಹಾಳರ ಪ್ರಕಾರ (ಬರೀ ಮನೆಹಾಳರಲ್ಲ; ಇಂಥವರು ತೀವ್ರಥರದ ವಿತಂಡವಾದಿಗಳಾಗಿದ್ದು, ದೇಶವಾಸಿಗಳನ್ನು ಅವಜ್ಞೆಯಿಂದ ಕಾಣುವವರೂ ಆಗಿರುತ್ತಾರೆ) ನಿಶಾದೇವತೆಗೆ ಒಲಿಯದಿದ್ದರೆ ಮಹತ್ವದ ಬರೆಹ ಜನಿಸುವುದಿಲ್ಲ ಎಂಬ ಭ್ರಮೆ! ತಾವು ನಂಬಿದ ತತ್ತ್ವ ಸಿದ್ಧಾಂತಗಳ ಮುಂದುವರಿಕೆಗಾಗಿ ಕುಡಿತದ ಪಾರ್ಟಿಯ ಮೂಲಕ ಕಿರಿಯರನ್ನು ಬೆಳೆಸುತ್ತಿದ್ದೇವೆಂಬುದು ಇವರ ಇನ್ನೊಂದು ಭ್ರಾಂತಿ!! ಅಷ್ಟೇ ಅಲ್ಲ, ದೊಡ್ಡವರ ಮುನ್ನುಡಿ ರೂಪದ ಆಶೀರ್ವಾದ ಬೇಕಾದರೆ, ಪುಸ್ತಕ ಲೋಕಾರ್ಪಣೆಗೆ ಕರೆಯಬೇಕಾದರೆ ಮೊದಲು ಅಥವಾ ಆನಂತರ ಎಣ್ಣೆಪಾರ್ಟಿ ಕೊಡಿಸಲೇಬೇಕು. ಅದರಲ್ಲೂ ಉದಯೋನ್ಮುಖ ಸಾಹಿತಿಗಳೂ ಚಿಕ್ಕ ಪುಟ್ಟ ವಯೋಮಾನದಲ್ಲಿ ಬರೆದು ಪುಸ್ತಕ ಪ್ರಕಟಿಸುವವರೂ ಆದಂಥವರಿಗೆ ಇದೆಲ್ಲಾ ಸಾಹಿತ್ಯದ ಅವಿಭಾಜ್ಯ ಅಂಗ ಎಂಬ ಸೂಡೋ ಕಾನ್ಸೆಪ್ಟನ್ನು ತಲೆಗೆ ತುಂಬಿ ಎಲ್ಲ ಕಾಲದಲ್ಲೂ ಎಲ್ಲರೂ ಹೀಗೆಯೇ ನಡೆದುಕೊಂಡಿದ್ದರೇನೋ ಎಂಬ ತೀರ್-ಮಾನ ತರಿಸಿ ಬಿಡುತ್ತಾರೆ. ನವ್ಯಸಾಹಿತಿಗಳಲ್ಲಿ ಬಹುತೇಕರೂ ವಿಶ್ವವಿದ್ಯಾನಿಲಯದಲ್ಲಿ ಇದ್ದ ಮತ್ತು ಇರುವ ಅಕಡೆಮಿಶಿಯನ್ನುಗಳಲ್ಲಿ ಹಲವರೂ ಪತ್ರಿಕಾರಂಗದ ಆಯಕಟ್ಟಿನ ಜಾಗಗಳಲ್ಲಿ ಕೆಲಸ ಮಾಡುವ ಕೆಲವು ನಿಯಂತ್ರಕರೂ ಇಂಥ ಕೆಟಗರಿಯವರು! ನನ್ನ ಕುಟುಂಬಮಿತ್ರರೂ ಸಾಹಿತಿಗಳೂ ಆದ ಹೆಣ್ಣುಮಗಳು ತಮ್ಮ ಮೊದಲನೆಯ ಭಾವಗೀತೆಯ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕಾಗಿ ಹೆಸರು ಮಾಡಿದ ಬಹು ದೊಡ್ಡ ಭಾವಗೀತ ರಚನಾಕಾರರನ್ನು ಕರೆಸಿದಾಗಿನ ಅನುಭವವನ್ನು ಹೇಳಿದಾಗ ನನಗೆ ಅಸಹ್ಯ ಎನಿಸಿತು. ಸಮಾರಂಭಕ್ಕೆ ಖರ್ಚು ಮಾಡಿದಷ್ಟೇ ಮೊತ್ತದ ಹಣವನ್ನು ಇವರ ಮತ್ತು ಇವರು ಕರೆದುಕೊಂಡು ಬಂದ ಸಹವರ್ತಿ ಸಾಹಿತಿಗಳ ‘ಗುಂಡುಮೇಜಿಗೆ’ ಸುರಿಯಬೇಕಾಯಿತಂತೆ. ಸತ್ಯಣ್ಣನೇ ಹೇಳಿದ ಹಲವು ಪ್ರಕರಣಗಳಲ್ಲಿ ಕಚ್ಚೆ ಕೈ ಬಾಯಿಗಳು ಹಿಡಿತವಿಲ್ಲದ ತ್ರಿಕರಣದೋಷಕ ಸಾಹಿತ್ಯಜೀವಿಗಳ ಕತೆ ಬಹಳ ದೀರ್ಘವಿವೆ. ಇಂಥದೇ ಮಹಾಶಯರೊಬ್ಬರು ಪುಸ್ತಕ ಬಿಡುಗಡೆಗೂ ಮುನ್ನ ತಾವು ಕುಡಿದದ್ದಲ್ಲದೇ ಬೆಲೆ ಬಾಳುವ ಬಾಟಲೊಂದನ್ನು ಮನೆಗೂ ತೆಗೆದುಕೊಂಡು ಹೋದರಂತೆ. ಇವರೆಲ್ಲಾ ಆಮೇಲೆ ವೇದಿಕೆಯಲ್ಲಿ ಬಹಳ ದೊಡ್ಡ ದೊಡ್ಡ ಜೀವನದರ್ಶನಗಳನ್ನೂ ಆದರ್ಶಗಳನ್ನೂ ಬಾಯ್ತುಂಬಾ ಮಾತಾಡುತ್ತಾರೆ. ‘ಕುಡಿಯದವರು ಬರೆಹಗಾರರೇ ಅಲ್ಲ’ ಎಂದು ಫರ್ಮಾನು ಹೊರಡಿಸುತ್ತಾರೆ. ನವೋದಯ ಸಾಹಿತಿಗಳನ್ನು ವಿಡಂಬಿಸುತ್ತಾರೆ; ಅವರ ಜೀವನ ಬದ್ಧತೆಯನ್ನು ಅರಿಯದ ಹೆಳವರಾಗುತ್ತಾರೆ. ಅಂಥ ದಿಗ್ಗಜ ಪರ್ವತಗಳ ಮುಂದೆ ನಿಂತು, ಅವರ ಬಗ್ಗೆ ಹಗುರವಾಗಿ ಮಾತಾಡಿ, ಅವರ ಕುಂಟುರೋಮಕ್ಕೂ ಸರಿಸಾಟಿಯಾಗಲಾರದೆ ಕುಬ್ಜರಾಗುತ್ತಾರೆ. ರಾಜರತ್ನಂ ಅವರ ವ್ಯಕ್ತಿತ್ವವಿರಲಿ, ಯೆಂಡ್ಕುಡುಕ ರತ್ನನ ಕನ್ನಡಾಭಿಮಾನದ ಬಳಿಗೂ ಬರಲಾಗದ ಎಡಬಿಡಂಗಿಗಳಾಗುತ್ತಾರೆ. ‘ನಶೆಯೇರಿಸಿಕೊಂಡರೇನೇ ಸಾಹಿತ್ಯ ಮತ್ತು ಸಾಹಿತಿ’ ಎಂಬುದಿವರ ಅಂತಿಮ ನಿರ್ಣಯ. ‘ಕುಡಿದು ಬರೆಯುವುದಾದರೆ ಅಂಥ ಸಾಹಿತ್ಯವೇ ಬೇಡ ಎಂದೂ ಕುಡುಕ ಸಾಹಿತಿಗಳನ್ನು ಕರೆಸಿಯೇ ಪುಸ್ತಕ ಬಿಡುಗಡೆ ಮಾಡಿಸಬೇಕೆಂದಾದರೆ ಅಂಥ ಸಾಹಿತಿಯೇ ಬೇಡ’ ಎಂದೂ ನಿರ್ಧಾರಕ್ಕೆ ಬರಲು ಎಂಟೆದೆ ಬೇಕು; ಒಂದು ಲಿವರು ಸಾಕು! ಇಂಥ ನಶೆ ಸಾಹಿತಿಯೊಬ್ಬ ಸತ್ತು ಯಮಧರ್ಮನ ಬಳಿಗೆ ಹೋದಾಗ ಹೇಳಿದನಂತೆ: ‘ಮುಂದಿನ ಜನುಮದಲ್ಲಿ ನನಗೆ ಒಂದೇ ಹಲ್ಲು ಸಾಕು; ಹೇಗೋ ತಿಂದು ಬದುಕುವೆ. ಆದರೆ ಲಿವರು ಮಾತ್ರ ಮೂವತ್ತೆರಡು ಬೇಕು; ಕುಡಿದು ಬರೆಯುವೆ’ ಎಂದನಂತೆ! ಇದು ಜೋಕಾದರೂ ಹಲವರ ಹಾರೈಕೆಯ ಬದುಕು!! ವೈಯೆನ್ಕೆ ಎಂದೇ ಖ್ಯಾತರಾಗಿದ್ದ ವೈ ಎನ್ ಕೃಷ್ಣಮೂರ್ತಿಯವರು ಸಾಹಿತಿ ಹಾಗೂ ಪತ್ರಕರ್ತರಾಗಿ ಜಗತ್ಪ್ರಸಿದ್ಧರಾದವರು ಮದ್ಯಪಾನಕ್ಕೆ ಗುಂಡು ಎಂದು ನಾಮಕರಣ ಮಾಡಿದ್ದರು. ಮಹಾನ್ ಗುಂಡುಪ್ರಿಯ ಗುಂಡೂರಾಯರೀತ. ಮದ್ಯಪಾನದ ಜೊತೆಗೆ ಧೂಮಪಾನವೋ; ಧೂಮಪಾನದ ಜೊತೆ ಮದ್ಯಪಾನವೋ? ಒಟ್ಟಿನಲ್ಲಿ ಇವೆರಡರ ಜೊತೆ ಒಂಚೂರು ಬದುಕನ್ನು ಹಂಚಿಕೊಂಡು ನಂಚಿಕೊಂಡು ಬಾಳುವೆ ಮಾಡಿದ್ದವರು. ಇವರ ಎರಡೇ ಸಾಲಿನ ಲಿರಿಕ್ಕುಗಳು ಲಿಕ್ಕರಿನಂತೆಯೇ ಕಿಕ್ ಕೊಡುತ್ತಿದ್ದವು. ‘ದೂರವಿರು ದೂರ್ವಾಸನೆ; ಬರುತಲಿದೆ ದುರ್ವಾಸನೆ!’ ಎಂದು ಬರೆದಿದ್ದರು. ‘ವಿಶ್ವಾಮಿತ್ರ ಮೇನಕೆ, ಡಾನ್ಸ್ ಮಾಡೋದು ಏನಕೆ? ಆಸ್ಕ್ ಮಿಸ್ಟರ್ ವೈಯೆನ್‌ಕೆ’ ಎಂದೇ ಪ್ರಶ್ನಿಸುತ್ತಿದ್ದರು. ‘ಕಪಿಲವಸ್ತುವಿನ ರಾಜ ಶುದ್ಧೋದನ, ಅವನ ಮಗ ರಾತ್ರೋರಾತ್ರೀ ಎದ್ದೋದನ!’ ಎಂಬಂಥವು ಇವರ ಪಂಚಿಂಗ್ ಪದ್ಯಗಳು. ಇವರು ‘ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ?’ ಎಂಬ ಸಂಕಲನ ತಂದ ಮೇಲೆ ಇನ್ನೊಂದು ಬಂತು ನೋಡಿ: ಅದರ ಹೆಸರು ‘ತೀರ್ಥ-ರೂಪ!’ ಇದರ ಉಪಶೀರ್ಷಿಕೆಯೇ ಎದೆಗೆ ಗುಂಡು ಹೊಡೆದಂತಿದೆ: ‘ಮದ್ಯ ಇಷ್ಟು ಟೈಟಾದರೆ ಹೇಗೆ ಸ್ವಾಮಿ?’ ‘ಬೆಳಗ್ಗೆ ಸಂಜೆ ಮಧ್ಯಾಹ್ನ ಕುಡೀತೀನಿ ನಾನು ಮದ್ಯಾನ, ಪೆಗ್ಗಲಿ ಅಳಿತೀನಿ ಜೀವ್ನಾನ’ ಎಂದು ಬರೆದವರು. ಹೊಸಗನ್ನಡದ ವಿಡಂಬನಾಚಾರ್ಯ ಕೈಲಾಸಂ ಅವರಿಂದ ಸಾಹಿತ್ಯಕ್ಕೂ ಜೀವನಕ್ಕೂ ಪ್ರೇರಿತರಾಗಿದ್ದ ವೈಯೆನ್ಕೆಯವರು ಮದ್ಯವನ್ನೂ ಮದ್ಯಪಾನವನ್ನೂ ಮದ್ಯಪ್ರಿಯರನ್ನೂ ಓವರಾಗಿಯೇ ವೈಭವಿಸಿದರು. ಅಂದರೆ ಇಂಥವರ ಪ್ರಕಾರ ಸೃಜನಶೀಲತೆ ಮತ್ತು ಪ್ರತಿಭೆಗಳಿಗೆ ಮದ್ಯಪಾನವು ಅತೀ ಆವಶ್ಯಕ!

ಮೈಸೂರಿನ ವಿಜಯನಗರ ನಾಲ್ಕನೇ ಹಂತದ ಸರ್ಕಲಿನಲ್ಲಿ ಸಂಜೆಯ ವೇಳೆ ಕುಟುಂಬಸ್ನೇಹಿಯೊಬ್ಬರನ್ನು ಕಾಯುತ್ತಾ ನಿಲ್ಲುವ ಸಂದರ್ಭ ಬಂದಾಗ ಕಣ್ಣಾರೆ ನೋಡಿದ ದೃಶ್ಯವೊಂದರಿಂದಾಗಿ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ಅಲ್ಲೊಂದು ಲಿಕ್ಕರು ಶಾಪು. ಚಿಲ್ಲರೆ ಮದ್ಯ ಸಿಕ್ಕುವುದಿಲ್ಲ; ಬರಬೇಕು; ಕೊಂಡು ಹೋಗಬೇಕು. ಅಲ್ಲಿಯೇ ನಿಂತು ಕುಡಿಯುವಂತೆಯೂ ಇಲ್ಲ! ಸುಮಾರು ಹದಿನೈದು ನಿಮಿಷಗಳಲ್ಲಿ ಏನಿಲ್ಲವೆಂದರೂ ಐವತ್ತಕಿಂತಲೂ ಹೆಚ್ಚು ಮಂದಿ ಆಗಮಿಸಿ, ಮದ್ಯದ ಬಾಟಲಿಗಳನ್ನೂ ಔಷಧೀ ಸಿರಪ್ಪಿನಂಥ ಪುಟ್ಟ ಪುಟ್ಟ ಪ್ಯಾಕೆಟನ್ನೂ ಜೇಬಿಗೆ ಸೇರಿಸಿಕೊಂಡು ಹೋದರು. ಕೆಲವರಷ್ಟೇ ಕಾರಿನಲ್ಲಿ ಬಂದು ದೂರದಲ್ಲಿ ಪಾರ್ಕು ಮಾಡಿ, ಸುತ್ತಾಮುತ್ತಾ ಕತ್ತನಲ್ಲಾಡಿಸಿ, ಆಚೆ ಈಚೆ ನೋಡಿ, ಸರಕ್ಕನೆ ಒಳಹೋಗಿ, ಮದ್ಯದಬಾಟಲಿಯನ್ನೂ ನೀರಿನ ಬಾಟಲಿಯನ್ನೂ ಕೊಂಡು ಧಡಕ್ಕನೆ ಹೊರ ಬಂದು ಕಾರಿನತ್ತ ಧಾವಿಸಿದರು. ಆದರೆ ನನಗೆ ಸಂಕಟವಾಗಿದ್ದೇನೆಂದರೆ, ಸೈಕಲ್ಲು, ಮೋಟಾರುಬೈಕು ಮತ್ತು ಕೆಲವರು ನಡೆದು ಬಂದವರೆಲ್ಲಾ ಶ್ರಮಿಕ ವರ್ಗದವರಾಗಿದ್ದರು. ಅದರಲ್ಲೂ ಮನೆ ಕಟ್ಟಿ ಕೊಡುವ ಕಟ್ಟಡ ಕಾರ್ಮಿಕರಾಗಿದ್ದರು. ಸೂಕ್ತ ರೀತಿಯಲ್ಲಿ ಇನ್ನೂ ಮೈ ಕೈ ತೊಳೆದುಕೊಂಡಿರಲೇ ಇಲ್ಲ; ಅವರ ಬಟ್ಟೆಬರೆಗಳಲ್ಲಿ ಇನ್ನೂ ಅವರು ಕೆಲಸ ಮಾಡಿದ್ದರ ಕುರುಹು ಇದ್ದೇ ಇತ್ತು. ಅವರ ಮಾತುಕತೆ ವೇಷಭೂಷಣಗಳಲ್ಲಿಯೇ ಅವರು ಪ್ರತಿದಿನವೂ ದುಡಿದೇ ತೀರಬೇಕೆಂಬ, ಇಲ್ಲದಿದ್ದರೆ ಸಂಸಾರದ ಬಂಡಿ ಸಾಗದೆಂಬ ವಾಸ್ತವವನ್ನು ಅರಿಯಬಹುದಾಗಿತ್ತು. ಆದರೆ ಇಂಥವರಲ್ಲಿ ಹಲವರು ಈ ಮದ್ಯವ್ಯಸನಿಗಳು. ಇಡೀ ದಿವಸ ಕೆಲಸ ಮಾಡಿದ್ದರ ಶ್ರಮವನ್ನು ಹೀಗೆ ಮರೆಯಲು ಮತ್ತು ಮೆರುಗಾಗಲು ಇಂಥ ದಾರಿಯೊಂದನ್ನು ಆಯ್ದುಕೊಂಡಿದ್ದರು.

ಇನ್ನು ಚಿಂತಕರೂ ತತ್ತ್ವಶಾಸ್ತ್ರ ಮಾತಾಡುವ ಬುದ್ಧಿಜೀವಿಗಳೂ ಎನಿಸಿಕೊಂಡವರಿಗೂ (ಹಾಗೆ ಎನಿಸಿಕೊಳ್ಳಬೇಕೆಂದಾದರೆ) ಆಲ್ಕೋಹಾಲಿಗೂ ಗಳಸ್ಯ (ಗ್ಲಾಸಸ್ಯ!) ನಂಟು. ಕ್ಲಾಸ್‌ಮೇಟ್ ಅಲ್ಲದಿದ್ದರೂ ‘ಗ್ಲಾಸ್‌ಮೇಟ್’ ಆಗಲೇಬೇಕು. ಪ್ರಗತಿಪರರು ಎನಿಸಿಕೊಳ್ಳಬೇಕಾದರೆ, ನಾವು ಸನಾತನಿಗಳಲ್ಲ, ಮಡಿವಂತರಲ್ಲ, ಔಟ್‌ಡೇಟೆಡ್ ಅಲ್ಲ ಎನಿಸಿಕೊಳ್ಳಬೇಕಾದರೆ ಅವರಿಗೆ ಕಂಪೆನಿ ಕೊಡಬೇಕು. ನಮ್ಮ ಬ್ರಾಂಡನ್ನು ಕಂಡುಕೊಳ್ಳಬೇಕು. ಕುಡಿಯೋದ್ರಲ್ಲಿ ಕ್ಲಾರಿಟಿ ಮತ್ತು ಕ್ವಾಂಟಿಟಿ ಇರಬೇಕು ಎಂಬುದು ಲೋಕನಿಯಮ. ನನ್ನ ತಂದೆಯ ಕಡೆಯ ದೂರದ ಬಂಧುಗಳೊಬ್ಬರು ಕೋಟ್ಯಧಿಪತಿಗಳು. ಅವರು ಹೀಗೆ ತಮಗೆ ಗೊತ್ತಿರುವ ತಮ್ಮ ಸಂಪರ್ಕದಲ್ಲಿ ಇರುವ ಮಾಡರ್ನ್ ಸಾಹಿತಿಗಳೂ ಚಿಂತಕ ಶಿಖಾಮಣಿಗಳೂ ಸೀರಿಯಲ್ ನಟ ನಟಿಯರೂ ನಿರ್ಮಾಪಕ ನಿರ್ದೇಶಕರೂ ರಾಜಕೀಯ ನಂಟಿರುವ ಪುಡಾರಿಗಳೂ ಪ್ರವೃತ್ತ ನಿವೃತ್ತ ಅಧಿಕಾರಿಗಳೂ ಆದವರನ್ನು ಕರೆದು ಅವರೊಂದಿಗೆ ಕುಳಿತು ಕುಡಿಯಲು ಮತ್ತು ಹರಟಲು (ಪುಕ್ಸಟ್ಟೆ ಮಾತು) ಮೈಸೂರಿನಲ್ಲಿ ದೊಡ್ಡ ಬಂಗಲೆಯನ್ನೇ ಕಟ್ಟಿಸಿಕೊಂಡಿದ್ದಾರೆ. ರಾಜಧಾನಿ ಬೆಂಗಳೂರು ಬೋರಾದಾಗಲೆಲ್ಲಾ ಮೈಸೂರು ಕಳೆಗಟ್ಟುತ್ತದೆ. ಸಂಜೆಯ ಹಸೀ ಬಿಸೀ ತೊದಲುರಾಗಕ್ಕೆ ಬಾನು ಕೆಂಪೇರುತ್ತದೆ. ಅನಾಯಾಸವಾಗಿ ಬಂದ ಸಂಗ್ರಹವಾದ ದುಡ್ಡು ಕರಗುತ್ತದೆ. ಯಜ್ಞ ಮಾಡುವಾಗ ದೆವ್ವಕ್ಕಿಷ್ಟು, ದಾನವರಿಗಿಷ್ಟು ಎಂದು ಪಾಲು ತೆಗೆದಿರಿಸುತ್ತಿದ್ದರಂತೆ. ಅದರಂತೆ, ಇಂಥವರು ಜೀವನಕ್ಕಿಷ್ಟು, ಆಳುಕಾಳುಗಳ ಕೂಲಿಗಿಷ್ಟು, ಆಲ್ಕೋಹಾಲಿಗಿಷ್ಟು! ಎಂದು ತೆಗೆದಿರಿಸುತ್ತಾರೆ. ಅಮಲಿಗಾಗಿ ಎಷ್ಟೆಲ್ಲಾ ಸಿದ್ಧತೆ ಮತ್ತು ಬದ್ಧತೆ ಎಂದು ನಾನು ಸಖೇದಾಶ್ಚರ್ಯಗೊಳ್ಳುತ್ತೇನೆ. ನೆಂಟತನದ ದಾಕ್ಷಿಣ್ಯಕ್ಕಾಗಿ ಒಂದೆರಡು ಸಲ ಇಂಥ ಅವರ ಎಣ್ಣೆಪಾರ್ಟಿಗಳಲ್ಲಿ ಅನಿವಾರ್ಯವಾಗಿ ಸುಮ್ಮನೆ ಕೂರಬೇಕಾದಾಗ ಈ ತೆರನಾದ ಅಧ್ವಾನಗಳನ್ನು ಕಣ್ಣಾರೆ ಕಂಡಿದ್ದೇನೆ. ‘ಕುಡಿಯದಿದ್ದರೆ ಬದುಕು ವ್ಯರ್ಥ’ ಎಂದು ಅಪಲಾಪಿಸುವ ಇವರ ಪಾಲಿಗೆ ಕುಡಿಯದೇ ಇರುವ ನಾನು ಕ್ಷುದ್ರಜೀವಿ! ಆದರೆ ಅವರು ಕುಡಿದೂ ಕುಡಿದೂ ಉಳಿದ ಬದುಕನ್ನೂ ವ್ಯರ್ಥ ಮಾಡಿಕೊಳ್ಳುತ್ತಿರುವುದು ಅವರ ಗಮನಕ್ಕೆ ಬರುವುದಿಲ್ಲ!! ಸಂಜೆಯ ಮದ್ಯಪಾನ ಗೋಷ್ಠಿಗೆ ಕಂಪೆನಿ ಕೊಡುವುದಿಲ್ಲವೆಂಬ ಕಾರಣಕ್ಕೆ ನನ್ನನ್ನು ಹಂಗಿಸಿ ದೂರವಿಟ್ಟರು; ನಾನು ಇಂಥವರ ಹಿಂಸಾನಂದಕ್ಕೆ ಬಲಿಯಾಗದೇ ದೂರವಾದೆ; ಏನನ್ನೂ ಯಾರನ್ನೂ ದೂರದೇ ನನ್ನ ಮನದ ಆರೋಗ್ಯವನ್ನು ಕಾಪಾಡಿಕೊಂಡಿರುವೆ.

ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=43679
(ಮುಂದುವರಿಯುವುದು)

ಡಾ. ಹೆಚ್ ಎನ್ ಮಂಜುರಾಜ್ ಹೊಳೆನರಸೀಪುರ

6 Comments on “ಎತ್ತೆಣಿಂದೆತ್ತ ಸಂಬಂಧವಯ್ಯಾ !- ಭಾಗ 4

  1. ಎತ್ತಣಿಂದಿತ್ತೆ ಸಂಭಂದವಯ್ಯಾ ಲೇಖನ ಪ್ರತಿಕಂತೂ ಓದಿಸಿಕೊಂಡುಹೋಗುತ್ತಿದೆ..ಕುತೂಹಲ ವಂತೂ ಇದೆ..ನೋಡೋಣ..

    1. ಧನ್ಯವಾದ ಮೇಡಂ………..ನೀವು ನನ್ನೀ ಲೇಖನದ ಪ್ರತಿ ಕಂತನೂ ಓದುತಿರುವಿರಿ ಎಂಬುದೇ ಸಂತೋಷ…….
      ತಪ್ಪದೇ ಪ್ರತಿಕ್ರಿಯಿಸುತ್ತೀರಿ, ನಿಮಗಿದೋ ಧನ್ಯವಾದ.

  2. ಕುಡಿತದ ಕುರಿತೂ ಇಷ್ಟೊಂದು ಬರೆಯಬಹುದಾ???????

    1. ಬರೆಯಬಹುದು ಮೇಡಂ………ಇನ್ನೂ ಬರೆಯಬಹುದು!

      ಬಹುಶಃ ಕುಡಿದಿದ್ದರೆ ಬರೆಯುತ್ತಿರಲಿಲ್ಲವೇನೋ !?

      (ಓದು, ಬರೆಹವೂ ಒಂದು ರೀತಿಯ ಅಮಲು ಎಂದೇ ಹೇಳಬಹುದೇನೋ……………)

      ನಿಮ್ಮ ಪ್ರತಿಕ್ರಿಯೆಯ ಆಳದಲ್ಲಿ ಹುದುಗಿದ ಮೆಚ್ಚುಗೆಗೆ ಧನ್ಯವಾದಗಳು.

  3. ಕುಡಿತದ ಕುರಿತು ಮೂಡಿಬರುತ್ತಿರುವ ವಿಸ್ತೃತ ಲೇಖನಮಾಲೆಯು ಅಚ್ಚರಿಯ ಜೊತೆ ಕುತೂಹಲವನ್ನೂ ಹುಟ್ಟುಹಾಕಿದೆ!

    1. ಧನ್ಯವಾದ ಮೇಡಂ

      ನಿಮ್ಮ ಕಥನ ಕುತೂಹಲಕ್ಕೆ ಮೋಸವಾಗದು

Leave a Reply to H N MANJURAJ Cancel reply

 Click this button or press Ctrl+G to toggle between Kannada and English

Your email address will not be published. Required fields are marked *