ನವಮಸ್ಕಂದ – ಅಧ್ಯಾಯ-5
ಕೌರವ – ಪಾಂಡವರು
ಶಂತನು ಹಸ್ತಿನಾವತಿಯ ರಾಜ
ಸ್ಪರ್ಶಮಾತ್ರದಿ ವೃದ್ಧರ ಯುವಕರನ್ನಾಗಿಸಿ
ಶತಾಯುಗಳನಾನಾಗಿಸುತ್ತಿದ್ದ
ಅವನ ಪೂರ್ಜನ್ಮದ ಪ್ರತಿಭೆ ಜನ್ಮಾಂತರದಲ್ಲೂ ಕಂಡು ಬಂದು
ಹಸ್ತಿನಾವತಿಯ ರಾಜನಾಗಿ ಆಳಿದ ಶಂತನು
ಬ್ರಹ್ಮನ ಶಾಪದಿಂ ಮನುಷ್ಯ ರೂಪ ಪಡೆದ
ಗಂಗೆ ಅವನರಸಿ
ಇವರ ಪುತ್ರ ದೇವವ್ರತ
ಶಾಪಮುಕ್ತಳಾಗಿ ಗಂಗೆ ಸ್ವರ್ಗಕೆ ನಿರ್ಗಮಿಸೆ
ಶಂತನು ಮೋಹಿಸಿದ ಸತ್ಯವತಿ ಓರ್ವ ಬೆಸ್ತ ಕನ್ಯೆ
ಅವಳ ಆಶಯದಂತೆ ದೇವವ್ರತ ಪಿತನ ಇಚ್ಛೆ ಈಡೇರಿಸಲು
ಆಜನ್ಮ ಬ್ರಹ್ಮಚಾರಿಯಾಗಿರುವೆನೆಂಬ
ಭೀಕರ ಶಪಥ ಮಾಡಿ ಭೀಷ್ಮನಾದನು
ಚಿತ್ರಾಂಗದ, ವಿಚಿತ್ರ ವೀರ್ಯರು
ಶಂತನು-ಸತ್ಯವತಿ ಸಂತಾನ
ಕಾಶಿ ರಾಜನ ಮಕ್ಕಳು ಅಂಬಿಕೆ, ಅಂಬಾಲಿಕೆಯರೊಡನೆ
ವಿಚಿತ್ರವೀರ್ಯನ ವಿವಾಹ
ವಿಚಿತ್ರವೀರ್ಯ ಕ್ಷಯರೋಗದಿಂ ನಿಧನನಾಗೆ
ವ್ಯಾಸಮಹರ್ಷಿಯ ಕೃಪೆಯಿಂ
ಅಂಬಿಕೆಯನನುಗ್ರಹಿಸಿ ಧೃತರಾಷ್ಟ್ರನೂ
ಅಂಬಾಲಿಕೆಗೆ ಪಾಂಡು
ದಾಸಿಯಲ್ಲಿ ವಿದುರನೂ ಜನಿಸಿ
ಕುರುಕುಲಕೆ ನಾಂದಿಯಾಯಿತು
ಹುಟ್ಟು ಕುರುಡ ಧೃತರಾಷ್ಟ್ರ ರಾಜ್ಯಕ್ಕೆ ಅನರ್ಹನಾಗಿ
ಪಾಂಡು ರಾಜನಾಗಿ ಆಳುತಿರೆ
ಧೃತರಾಷ್ಟ್ರನಿಗೆ ಗಾಂಧಾರಿಯಲಿ
ದುರ್ಯೋಧನ ದುಶ್ಯಾಸನರಾದಿಯಾಗಿ
ನೂರು ಮಕ್ಕಳು ಜನಿಸಿದರು
ಪಾಂಡುವಿಗೆ ಕುಂತಿ ಮಾದ್ರಿ ಸತಿಯರಿದ್ದರು
ಋಷಿಶಾಪದಿಂ ಪುತ್ರ ಸಂತಾನ ಪ್ರಾಪ್ತಿಯಾಗದಿರಲು
ದೂರ್ವಾಸ ಮುನಿಯ ವರದಿಂ ಪಾಂಡುವಿನ ಸಮ್ಮತಿ ಪಡೆದು
ಯಮಧರ್ಮರಾಯನಂಶದಿಂ ಧರ್ಮರಾಯನ
ವಾಯುದೇವರಂಶದಿಂ ಭೀಮಸೇನನ
ದೇವೇಂದ್ರನಂಶದಿಂ ಅರ್ಜುನನಂ ಪಡೆದಳು ಕುಂತಿ
ನಂತರದಿ ಪಾಂಡುವಿನ ಕಿರಿಯ ಸತಿ ಮಾದ್ರಿಯಲಿ
ಅಶ್ವಿನಿ ದೇವತೆಗಳಂಶದಿ ನಕುಲ ಸಹದೇವರು ಜನಿಸಿ
ಪಾಂಡುಪುತ್ರರಾದುದು, ಪಾಂಡವರಾಗಿ
ಜಗದ್ವಿಖ್ಯಾತರಾದುದು ರೋಚಕ
ಪಂಚಪಾಂಡವರೈವರಿಗೂ ದ್ರೌಪದಿಯೊಬ್ಬಳೇ ಪತ್ನಿ
ಇವಳಲ್ಲಿ ಪಾಂಡವರಿಂದ ಜನಿಸಿದ ಉಪಪಾಂಡವರು
ಮಹಾಭಾರತ ಯುದ್ಧಾಂತ್ಯದಲಿ ಅಶ್ವತ್ಥಾಮನಿಂದ ಸಂಹೃತ
ಭೀಮನಿಗೆ ಹಿಡಂಬಿಯಲ್ಲಿ ಜನಿಸಿದ ಘಟೋತ್ಕಚ
ಅರ್ಜುನಗೆ ನಾಗಕನ್ಯೆ ಉಲೂಪಿಯಲಿ ಜನಿಸಿದ ಬಭ್ರುವಾಹನ
ಕೃಷ್ಣ ಸೋದರಿ ಸುಭದ್ರೆಯಲಿ ಜನಿಸಿದ ಅಭಿಮನ್ಯು
ಕೃಷ್ಣ ಸಾರಥ್ಯದ ಧರ್ಮಯುದ್ಧದಲಿ
ಕೌರವರೆಲ್ಲ ಹತರಾಗಿ ಪಾಂಡವರು
ಧರ್ಮ ಸಂಸ್ಥಾಪಿಸಿದುದು
ಮಹಾಭಾರತ ಕಥೆಯಾಗಿ
ಎಲ್ಲರ ಜೀವನ ಜ್ಯೋತಿಯಾಗಿ
ದಾರಿದೀಪವಾಗಿ ಬೆಳಗಿದುದೊಂದು
“ಕೃಷ್ಣಕೃಪೆ”
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43657

-ಎಂ. ಆರ್. ಆನಂದ, ಮೈಸೂರು
ಎಂದಿನಂತೆ ಕಾವ್ಯ ಭಾಗವತ ಓದಿಸಿಕೊಂಡುಹೋಯಿತು..
Nice
ಕಾವ್ಯ ಭಾಗವತ ಸೊಗಸಾಗಿ ಮೂಡಿಬರುತ್ತಿದೆ.