ಪರಾಗ

ಅಭಿಮಾನ.

Share Button

ಬೆಳಗ್ಗೆ ಎದ್ದಾಗಿನಿಂದ ಏನೋ ಒಂದು ರೀತಿಯ ಅನ್ಯ ಮನಸ್ಕತೆ, ಯಾವುದರಲ್ಲೂ ಉತ್ಸಾಹವೇ ಇಲ್ಲ. ಅದೇ ಸ್ಥಿತಿಯಲ್ಲಿ ಹಿಂದಿನ ರಾತ್ರಿ ಎತ್ತಿಟ್ಟಿದ್ದ ದೋಸೆಯ ಹಿಟ್ಟಿಗೆ ಪಲ್ಯ, ಚಟ್ಣಿ ತಯಾರಿಸಿದ್ದಳು ಕುಸುಮ. ನೆನ್ನೆಯಷ್ಟೇ ಹಿರಿಯ ಅಳಿಯ ಅಮರ್‌ನ ಅಣ್ಣ ಶ್ರೀಕಂಠಪ್ಪ ಫೋನ್ ಮಾಡಿ ಹೇಳಿದ್ದ ವಿಷಯ ಮನಸ್ಸಿನಲ್ಲಿತ್ತು. ಅವರು ಹೇಳಿದ್ದು “ಅಕ್ಕಾವರೇ, ನಾಳೆ ಯಾವುದೋ ಕೆಲಸಕ್ಕೆಂದು ಅಮರ್ ಮೈಸೂರಿಗೆ ಹೋಗಬೇಕೆಂದು ಹೇಳುತ್ತಿದ್ದ. ಹಾಗೇ ನಿಮ್ಮನ್ನೂ ಕಂಡು ಬರುತ್ತೇನೆಂದೂ ಹೇಳಿದ್ದ. ನಿಮಗೆ ನಾನು ಹಿಂದೆ ಹೇಳಿದ್ದ ವಿಷಯ ನೆನಪಿರಬಹುದು. ಜ್ಞಾಪಿಸೋಣವೆಂದು ಫೋನ್ ಮಾಡಿದೆ. ನೀವಾದರೂ ಸ್ವಲ್ಪ ಅವನಿಗೆ ಹೇಳಿ ಒಪ್ಪಿಸಿ. ನಿಮ್ಮ ಮಾತಿಗೆ ಅವನು ತುಂಬ ಗೌರವ ಕೊಡುತ್ತಾನೆ. ನನಗೆ ಅವನ ಒಂಟಿಜೀವನ ನೋಡಲಾಗುತ್ತಿಲ್ಲ.” ಎಂದು ಅಲವತ್ತುಕೊಂಡಿದ್ದರು. ಅದೇ ಯೋಚನೆಯಿಂದಾಗಿ ಕುಸುಮಳಿಗೂ ರಾತ್ರಿ ಸರಿಯಾಗಿ ನಿದ್ರೆ ಬಾರದೆ ಅತ್ತಿತ್ತ ಹೊರಳಾಡುತ್ತಲೇ ಬೆಳಕು ಹರಿದಿತ್ತು. ಹೌದು ನನಗೂ ಇದರ ಬಗ್ಗೆ ವ್ಯಥೆಯಿದೆ. ಆದರೆ ಏನೆಂದು ಹೇಳಿ ಆತನನ್ನು ಒಪ್ಪಿಸಲಿ. ಓ ದೇವರೇ ನೀನೇ ದಾರಿ ತೋರಬೇಕು. ಬಂದದ್ದನ್ನೆಲ್ಲ ಶಕ್ತಿಮೀರಿ ನಿವಾರಿಸಿಕೊಳ್ಳುತ್ತ ಒಂದು ದಡಕ್ಕೆ ಬದುಕನ್ನು ಸೇರಿಸಿದೆ ಅನ್ನುವಷ್ಟರಲ್ಲಿ ನೀನೇ ಹೀಗೆ ಅನಿರೀಕ್ಷಿತ ತಿರುವನ್ನು ನೀಡಿಬಿಟ್ಟೆ ಪರಮಾತ್ಮಾ. ಛೇ..ಏನಾಗಿಹೋಯಿತು. ಆಕೆಯ ಅಂತರಂಗದ ಕದ ತೆರೆಯುತ್ತ ಆಕೆ ಮಾಡಿದ ಸಾಧನೆಗಳು, ಅನುಭವಿಸಿದ ಬವಣೆಗಳ ಪದರುಗಳನ್ನು ಬಿಡಿಸತೊಡಗಿತು.

ತುಮಕೂರು ಜಿಲ್ಲೆಯ ಗುಬ್ಬಿತಾಲೂಕಿನ ಸಮೀಪದ ಊರಿನ ರೈತಾಪಿ ಕುಟುಂಬದ ಯಜಮಾನ ಸಾವಂದಪ್ಪ, ಸುನಂದಮ್ಮ ದಂಪತಿಗಳ ಮೂರುಜನ ಮಕ್ಕಳಲ್ಲಿ ಶಿವಾನಂದನೇ ಕಿರಿಯವನು. ತನ್ನ ಅಕ್ಕಂದಿರಾದ ಶೈಲಾ, ಶಾಂತ ಮತ್ತು ತಾಯಿಯೂ ಕಿರಿಯವನೆಂದು ಇವನನ್ನು ಅತಿಯಾದ ಮುದ್ದಿನಿಂದ ಬೆಳೆಸಿದ ಪರಿಣಾಮವಾಗಿ ಅವನು ಓದಿನ ಕಡೆಗೆ ಹೆಚ್ಚು ಗಮನವೀಯುತ್ತಿರಲಿಲ್ಲ. ಇದನ್ನು ಗಮನಿಸಿದ ಸಾವಂದಪ್ಪನವರು ಮನೆವರೆಲ್ಲರ ವಿರೋಧದ ನಡುವೆಯೂ ಅವನನ್ನು ಮನೆಯಿಂದ ದೂರ ಸಿದ್ಧಗಂಗಾಮಠದ ವಿದ್ಯಾರ್ಥಿನಿಲಯದಲ್ಲಿಟ್ಟು ಅಲ್ಲಿಯೇ ಹೈಸ್ಕೂಲು ವಿದ್ಯಾಭ್ಯಾಸ ಮುಂದುವರೆಸುವಂತೆ ಮಾಡಿದ್ದರು. ಅದು ಅವನ ಬದುಕಿನ ದಿಕ್ಕನ್ನೇ ಬದಲಿಸಿತು. ಅಲ್ಲಿ ಎಸ್.ಎಸ್.ಎಲ್.ಸಿ., ಪಾಸಾಗಿ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪಿ.ಯು.ಸಿ., ಬಿ.ಎಸ್.ಸಿ ಪದವಿಯನ್ನೂ ಪಡೆದುಕೊಂಡನು. ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎಸ್.ಸಿ., ಸ್ನಾತಕೋತ್ತರ ಪದವಿಯನ್ನೂ ಮುಡಿಗೇರಿಸಿಕೊಂಡನು. ಅವನ ಅದೃಷ್ಟಕ್ಕೆ ಗುಬ್ಬಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನ ಹುದ್ದೆಯೂ ದೊರಕಿತು. ಅವನ ಬದುಕು ಸರಿಯಾದ ದಿಕ್ಕಿನಲ್ಲಿ ನೆಲೆಗೊಂಡಿತು.

ಅಷ್ಟರಲ್ಲಿ ಅವನ ಅಕ್ಕಂದಿರ ವಿವಾಹಗಳಾಗಿ ಅವರು ತಮ್ಮ ಪತಿಗೃಹಗಳಿಗೆ ಹೋಗಿದ್ದರು. ಉಳಿದವನು ಇವನೊಬ್ಬನೇ. ತಂದೆ ತಾಯಿಗಳು ಸಮೀಪದ ಊರಿನಿಂದ ನೀಲಾಂಬಿಕೆ ಎಂಬ ಹೆಣ್ಣು ತಂದು ಅವನಿಗೆ ಮದುವೆ ಮಾಡಿ ಗೃಹಸ್ಥನನ್ನಾಗಿ ಮಾಡಿ ತಮ್ಮ ಕರ್ತವ್ಯ ಮುಗಿಸಿದರು. ಅವರು ಗುಬ್ಬಿಯಲ್ಲೇ ಇದ್ದು ಅವರ ಸಹೋದರರೊಡಗೂಡಿ ಮಾಡಿಕೊಂಡು ಬಂದಿದ್ದ ಸಾಗುವಳಿಯನ್ನ ಮುಂದುವರಿಸಿದ್ದರು.
ಶಿವಾನಂದನಿಗೆ ಪತ್ನಿಯಾಗಿ ಬಂದಿದ್ದ ನೀಲಾಂಬಿಕೆ ಬಹಳ ಹಠ ಸ್ವಭಾವದವಳು. ಮನೆಯಲ್ಲಿ ತನ್ನದೇ ಆಡಳಿತ ನಡೆಯಬೇಕೆಂಬುದೇ ಅವಳಿಚ್ಛೆಯಾಗಿತ್ತು. ಒಟ್ಟು ಸಂಸಾರದಲ್ಲಿ ಪ್ರತಿ ವಿಷಯದಲ್ಲೂ ಏನಾದರೊಂದು ಕೊಂಕು ತೆಗೆದು ಮಾತನಾಡವುದೆಂದರೆ ಅವಳಿಗೆ ಎಂತದ್ದೋ ಹಿಗ್ಗು. ಹಿರಿಯರು ತಮ್ಮೊಡನೆಯೇ ಇರುವುದರ ಬಗ್ಗೆ ತನ್ನ ಅಸಮಾಧಾನವನ್ನು ಅನೇಕ ರೀತಿಯಲ್ಲಿ ತೋರ್ಪಡಿಸುತ್ತಿದ್ದಳು. ಇದೆಲ್ಲವನ್ನೂ ಗಮನಿಸಿದ ಶಿವಾನಂದ ಪರಿಸ್ಥಿತಿ ಬಿಗಡಾಯಿಸುವ ಮೊದಲೇ ಬೇರೇನಾದರೂ ಏರ್ಪಾಡು ಮಾಡಬೇಕೆಂದು ಆಲೋಚಿಸುತ್ತಿದ್ದ. ಅದಕ್ಕೆ ಸರಿಯಾಗಿ ಅವನಿಗೆ ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ವರ್ಗಾವಣೆಯಾಯಿತು. ‘ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲೂ ಅನ್ನ’ ಎಂಬಂತೆ ಆಯಿತು. ಪ್ರತಿದಿನ ಗುಬ್ಬಿಯಿಂದಲೇ ತುಮಕೂರಿಗೆ ಹೋಗಿಬರುವುದು ಕಷ್ಟವೆಂದು ಗಂಡಹೆಂಡತಿ ತುಮಕೂರಿನಲ್ಲಿಯೇ ಬಾಡಿಗೆ ಮನೆ ಮಾಡಿ ಪ್ರತ್ಯೇಕವಾಗಿ ಸಂಸಾರ ಹೂಡಿದರು. ಶಿವಾನಂದನ ತಂದೆ ತಾಯಿಗಳು ವಿದ್ಯಮಾನವನ್ನು ಅವಲೋಕಿಸಿ ಮೌನವಾಗಿ ಪರಿಸ್ಥಿತಿಗೆ ಹೊಂದಿಕೊಂಡು ತಾವು ಗುಬ್ಬಿಯಲ್ಲಿಯೇ ಉಳಿದರು. ಅಷ್ಟೇನೂ ದೂರವಿಲ್ಲವಲ್ಲ, ಬೇಕಾದಾಗ ಮಕ್ಕಳಾಗಲೀ, ತಾವಾಗಲೀ ಹೋಗಿಬರಬಹುದು ಎಂದು ಸಮಾದಾನಪಟ್ಟುಕೊಂಡರು.

ವರ್ಷಗಳುರುಳಿದವು, ಶಿವಾನಂದ ನೀಲಾಂಬಿಕೆಗೆ ಕುಸುಮಾ. ಕಾವ್ಯ, ಕಿರಣ್ ಎಂಬ ಮೂರು ಮಕ್ಕಳಾದರು. ಸರ್ವೀಸಿನಲ್ಲಿ ಬೇರೆಬೇರೆ ಊರುಗಳಿಗೆ ವರ್ಗವಾಗುತ್ತಿದ್ದರೂ ಸಂಸಾರವನ್ನು ತುಮಕೂರಿನಿಂದ ಬದಲಾಯಿಸದೆ ಅಲ್ಲಿಯೇ ಇರಿಸಿದ್ದ ಶಿವಾನಂದ. ಇದರಿಂದ ಮಕ್ಕಳ ಬಾಲ್ಯ ಮತ್ತು ವಿದ್ಯಾಭ್ಯಾಸವೆಲ್ಲವೂ ತುಮಕೂರಿನಲೇ ನಡೆಯಿತು. ಊರಿನಿಂದ ಅಜ್ಜಿ ತಾತ ಅವರಲ್ಲಿಗೆ ಹೆಚ್ಚು ಬರುತ್ತಿರಲಿಲ್ಲ. ಆದರೂ ಮೊಮ್ಮಕ್ಕಳು ಮಾತ್ರ ರಜಾದಿನಗಳಲ್ಲಿ ಗುಬ್ಬಿಯಲ್ಲಿದ್ದ ಅಜ್ಜಿ ತಾತನ ಮನೆಯಲ್ಲಿ ಠಿಕಾಣಿ ಹೂಡುತ್ತಿದ್ದರು. ಮಕ್ಕಳು ಬೆಳೆದಂತೆಲ್ಲ ಅವರಿಗೆ ತಮ್ಮ ತಾಯಿ ಮತ್ತು ಅಜ್ಜಿ ತಾತನವರ ಗುಣಸ್ವಭಾವಗಳು ಅರ್ಥವಾಗತೊಡಗಿದವು. ಸಾಧು ಸ್ವಭಾವದ ಅಜ್ಜಿ, ತಾತ, ತಂದೆ ಮತ್ತು ಹಠಮಾರಿ ಸ್ವಭಾವದ ಅಮ್ಮ ಹೀಗಾಗಿ ಅವರ ನಡುವೆ ಹೊಂದಾಣಿಕೆ ಏಕಿಲ್ಲ ಎನ್ನುವುದೂ ತಿಳಿಯುತ್ತಿತ್ತು.

ಸರ್ಕಾರಿ ಸೇವೆ ಮುಗಿಸಿ ನಿವೃತ್ತನಾದ ಮೇಲೆ ಮಗ ಶಿವಾನಂದ ಊರಿಗೆ ಹಿಂತಿರುಗಬಹುದು. ಅಷ್ಟೊತ್ತಿಗೆ ಏನೇನು ಬದಲಾವಣೆಗಳಾಗುತ್ತವೋ ಎಂದು ಮುಂದಾಲೋಚಿಸಿ ಸಾವಂದಪ್ಪನವರು ತಮ್ಮ ತಮ್ಮನ ಮಕ್ಕಳಿಗೆ ಜಮೀನಿನ ಸ್ವಲ್ಪ ಭಾಗದ ಉಸ್ತುವಾರಿಯನ್ನು ವಹಿಸಿಕೊಟ್ಟು ಮಿಕ್ಕದ್ದನ್ನು ತಮ್ಮನ್ನೂ ಸೇರಿಸಿಕೊಂಡು ಮೂರು ಭಾಗಮಾಡಿ ತಮ್ಮ ಮೂರೂ ಮಕ್ಕಳಿಗೆ ಹಂಚಿಕೆ ಮಾಡಿಬಿಟ್ಟರು. ತಾವಿದ್ದ ಮನೆಯನ್ನು ಮಾತ್ರ ಮಗನ ಹೆಸರಿಗೆ ಉಳಿಸಿದ್ದರು.

ಶಿವಾನಂದನ ಹಿರಿಯ ಮಗಳು ಕುಸುಮಾ ಪಿ.ಯು.ಸಿ. ಮುಗಿಸಿ ಪ್ರಥಮ ವರ್ಷದ ಪದವಿ ಕಾಲೇಜಿನಲ್ಲಿದ್ದಳು. ಅವಳ ತಾಯಿ ನೀಲಾಂಬಿಕೆಯ ತವರಿನ ಕಡೆಯಿಂದ ಕುಸುಮಾಳಿಗೆ ಕಂಕಣ ಬಲ ಕೂಡಿಬಂತು. ಮುಂದಕ್ಕೆ ಓದಲು ಇಷ್ಟವಿದ್ದರೂ ತಾಯಿ ಅವಳಿಗೆ “ಹುಡುಗ ಇಂಜಿನಿಯರ್, ಅವರೇ ಮನೆಯ ಬಾಗಿಲಿಗೆ ಕನ್ಯಾರ್ಥಿಯಾಗಿ ಬಂದಿದ್ದಾರೆ. ಬಿಂಕ ಬಿಟ್ಟು ಒಪ್ಪಿಕೋ, ಸುಖವಾಗಿರ‍್ತೀಯ” ಎಂದು ಧಮಕಿ ಹಾಕಿದಾಗ ಎದುರಾಡದೆ ತಾಳಿಗೆ ಕೊರಳೊಡ್ಡಿದಳು. ತಂದೆ ಶಿವಾನಂದ ಮೂಕ ಪ್ರೇಕ್ಷಕನಾಗಿದ್ದನೇ ಹೊರತು ಹೆಂಡತಿಗೆ ಎದುರಾಡಲಿಲ್ಲ. ತಂದೆಯ ಅಸಹಾಯಕತೆಯ ಅರಿವಿದ್ದುದರಿಂದ ಅವನನ್ನು ದೂಷಿಸದೆ ತನ್ನ ಹಣೆಬರಹವೆಂದು ಮದುವೆಯಾಗಿ ಗಂಡನ ಮನೆಗೆ ಸೇರಿದಳು ಕುಸುಮಾ.

ಮೈಸೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಇಂಜಿನಿಯರಾಗಿದ್ದ ಕುಸುಮಾಳ ಪತಿ ನಿರಂಜನ ಸರಳ, ಸಜ್ಜನ ವ್ಯಕ್ತಿಯಾಗಿದ್ದ. ದುಡಿದು ತರುವುದಷ್ಟೇ ಅವನ ಕಾಯಕವೆಂದು ತಿಳಿದಿದ್ದ. ತನ್ನ ಕೆಲಸ ಬಿಟ್ಟು ಬೇರೆ ಯಾವುದಕ್ಕೂ ತಲೆ ಹಾಕುತ್ತಿರಲಿಲ್ಲ, ಸಾಲದ್ದಕ್ಕೆ ಅವನ ತಮ್ಮ ತಂಗಿಯರ ಜವಾಬ್ದಾರಿಯೂ ಅವನ ಹೆಗಲ ಮೇಲಿತ್ತು. ಹಾಸನ ಜಿಲ್ಲೆಯ ಹೊಳೆನರಸೀಪುರ ಅವರೂರು. ಅಲ್ಲಿ ನಿರಂಜನನ ತಂದೆತಾಯಿಗಳು ಮಿಕ್ಕ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಹಿರಿಯರಿಂದ ಅವರಿಗೆ ಬಂದಿದ್ದ ಒಂದುಮನೆ, ಸ್ವಲ್ಪ ಜಮೀನು, ಮತ್ತು ಚಿಕ್ಕದೊಂದು ಪೂಜಾಸಾಮಗ್ರಿ ಮಾರುವ ಅಂಗಡಿಯಿತ್ತು. ನಿರಂಜನ ತಮ್ಮೂರಿನಿಂದ ಹಾಸನಕ್ಕೆ ಓಡಾಡಿಕೊಂಡೇ ಬಿ.ಇ. ಪಾಸು ಮಾಡಿದ್ದ. ನಂತರ ಕೆಲಸಕ್ಕೆ ಸೇರಿ ಮದುವೆಯಾಗಿ ಮೈಸೂರಿನಲ್ಲಿ ಸಂಸಾರ ಹೂಡಿದ್ದ. ನಂತರ ಅವನ ತಮ್ಮ ಗಣೇಶ ಮತ್ತು ತಂಗಿ ಮಾದೇವಿ ಅವನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸುವ ಏರ್ಪಾಡಾಯಿತು.

ಕುಸುಮಾ ಬೆಳೆದಿದ್ದ ಹಿನ್ನೆಲೆಯಲ್ಲಿ ಆಕೆಯ ತಾಯಿಯ ಹಠಸ್ವಭಾವ ಮತ್ತು ಆಕೆಯು ತಾನು ಮನೆಯ ಹಿರಿಯರೊಂದಿಗೆ ಹೊಂದಿಕೊಳ್ಳದೆ ಅವರಿಗೆ ಗೌರವ ಕೊಡದೆ ಇದ್ದುದು ಚೆನ್ನಾಗಿ ಅರಿವಿತ್ತು. ತನ್ನ ಮನೆಯಲ್ಲಿ ಹಾಗಿರಬಾರದೆಂದು ಅತ್ತೆ ಮಾವನವರು ಮತ್ತು ನಾದಿನಿ, ಮೈದುನರೊಡನೆ ಒಳ್ಳೆಯ ಸೌಹಾರ್ದಯುತ ಸಂಬಂಧವನ್ನು ಬೆಳೆಸಿಕೊಂಡಿದ್ದಳು. ಏನೇ ಅಸಮಾಧಾನಗಳು ಉಂಟಾದರೂ ಅವುಗಳನ್ನು ಮನಸ್ತಾಪವಾಗಿ ಬೆಳೆಸಿಕೊಳ್ಳದೆ ಅಲ್ಲಿಗಲ್ಲಿಗೇ ಕೊನೆಗಾಣಿಸಿ ಪ್ರೀತಿ ವಿಶ್ವಾಸಗಳಿಗೆ ಧಕ್ಕೆಯಾಗದಂತೆ ಚಾಕಚಕ್ಯತೆಯಿಂದ ನೋಡಿಕೊಳ್ಳುತ್ತಿದ್ದಳು. ಇದರಿಂದಾಗಿ ಕುಸುಮಾ ಎಲ್ಲರಿಗೂ ಪ್ರೀತಿ ಪಾತ್ರಳಾಗಿದ್ದಳು.

ನಾದಿನಿ, ಮೈದುನರ ವಿದ್ಯಾಭ್ಯಾಸ ಮುಗಿದು ಅವರ ಮದುವೆ ಮುಂತಾದ ಎಲ್ಲ ಕರ್ತವ್ಯಗಳನ್ನು ಚ್ಯುತಿ ಬಾರದಂತೆ ಮಾಡಿ ಮುಗಿಸಿದಳು. ನಿರಂಜನ ಕುಸುಮ ದಂಪತಿಗಳಿಗೂ ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳಾಗಿದ್ದು ಅವರನ್ನೂ ಒಳ್ಳೆಯ ರೀತಿಯಲ್ಲಿ ಬೆಳೆಸಿದ್ದಳು ಕುಸುಮ.

ಇತ್ತ ಆಕೆಯ ತವರಿನ ಕಡೆ ಆಕೆಯ ತಂಗಿ ತಮ್ಮನೊಡನೆಯೂ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಳು. ಆಕೆಯ ತಾಯಿ ನೀಲಾಂಬಿಕೆಯು ಹೆಚ್ಚಾಗಿ ಹಚ್ಚಿಕೊಳ್ಳದಿದ್ದ ತನ್ನ ಸೋದರತ್ತೆಯರ ಬಂಧುತ್ವವನ್ನೂ ಬಿಡದೆ ಹಾಗೂ ಅಜ್ಜಿ ತಾತನವರ ಸಾನ್ನಿಧ್ಯವನ್ನೂ ಮುಂದುವರೆಸಿಕೊಂಡು ಬಂದಿದ್ದಳು. ತಂಗಿಯ ಮದುವೆಯನ್ನೂ ತನ್ನ ಮದುವೆಯಂತೆ ಆತುರಾತುರವಾಗಿ ಮಾಡಲು ಮುಂದಾಗಿದ್ದ ತಾಯಿಯ ವಿರುದ್ಧ ಪ್ರತಿಭಟಿಸಿ ಆಕೆಯು ಪದವೀಧರಳಾಗುವವರೆಗೆ ವಿದ್ಯಾಭ್ಯಾಸ ಮುಂದುವರೆಸಲು ಕಾರಣಳಾಗಿದ್ದಳು. ಆದರೆ ಕೊನೆಗೆ ತಂಗಿಗಿಂತ ವಯಸ್ಸಿನಲ್ಲಿ ಬಹಳ ಹಿರಿಯನಾಗಿದ್ದ ವರನೊಡನೆ ಮದುವೆ ಮಾಡುವುದನ್ನು ತಪ್ಪಿಸಲು ಅವಳಿಂದ ಸಾಧ್ಯವಾಗಲಿಲ್ಲ. ಕಾರಣ ಅವಳ ತಾಯಿ ನೀಲಾಂಬಿಕೆ “ನಿನಗೇನು ಗೊತ್ತೇ? ಅವರು ಆಗರ್ಭ ಶ್ರೀಮಂತರು. ನಿನ್ನ ಗಂಡನಂತೆ ಸಂಬಳದ ನೌಕರರಲ್ಲ. ಅವರ ಕೈಕೆಳಗೇ ಹಲವಾರು ಜನರು ಕೆಲಸ ಮಾಡುತ್ತಾರೆ” ಎಂದು ಆರ್ಭಟಿಸಿ ಅವಳ ಬಾಯಿಮುಚ್ಚಿಸಿದ್ದರು. ಆಗಲೂ ನಿಸ್ಸಹಾಯಕರಾಗಿದ್ದ ತಂದೆಯನ್ನು ಕಂಡು ಮೊದಲ ಬಾರಿಗೆ ಅವರ ಮೇಲೆ ಸಿಟ್ಟು ತೋರಿದಳು. ಮರುಕ್ಷಣವೇ ಅವರು ಹಾಗಿಲ್ಲದಿದ್ದರೆ ಅಪ್ಪ ಅಮ್ಮನ ನಡುವಿನ ಸಂಬಂಧ ಇಲ್ಲಿಯವರೆಗೆ ಉಳಿಯಲು ಎಲ್ಲಿ ಸಾಧ್ಯವಾಗುತ್ತಿತ್ತು ಎಂದು ಮರುಕಪಟ್ಟಳು. ಗಂಡು ಹೆಣ್ಣಿನ ನಡುವೆ ವಯಸ್ಸಿನ ಅಂತರ ಹೆಚ್ಚು ಎನ್ನುವುದನ್ನು ಬಿಟ್ಟರೆ ತಂಗಿ ಸೇರಿದ ಕುಟುಂಬದವರು ಒಳ್ಳೆಯವರು ಎಂದು ನೆಮ್ಮದಿ ತಂದುಕೊಂಡಳು.

ಅಕ್ಕಂದಿರಿಗಿದ್ದ ಅಕ್ಷರಗಳ ಮೇಲಿನ ಅಕ್ಕರೆ ಗಂಡುಮಗ ಕಿರಣನಿಗಿರಲಿಲ್ಲ. ಹಾಗೂ ಹೀಗೂ ಪದವಿ ಮುಗಿಸಿ ವಿದ್ಯೆಗೆ ಶರಣು ಹೊಡೆದಿದ್ದ. ಯಾವುದೋ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಆತನಿಗೂ ಮದುವೆಯಾಯಿತು. ಆದರೆ ಕುಸುಮಾಳ ತಾಯಿ ನೀಲಾಂಬಿಕೆ ಸೊಸೆಯೊಡನೆಯೂ ಹೊಂದಿಕೊಳ್ಳಲಿಲ್ಲ. ಅಷ್ಟರಲ್ಲಿ ಊರಿನಲ್ಲಿದ್ದ ಕುಸುಮಾಳ ಅಜ್ಜಿ ತಾತನವರು ದೈವಾಧೀನರಾಗಿದ್ದರಿಂದ ಪೂರ್ವೀಕರ ಮನೆಗೆ ತಮ್ಮ ಕಿರಣನ ಸಂಸಾರ ರವಾನೆಯಾಯಿತು. ಅಲ್ಲಿದ್ದ ತಾತನವವರ ತಮ್ಮನ ಮಕ್ಕಳು ಅವನಿಗೆ ಒತ್ತಾಸೆಯಾಗಿ ಅವನ ಸಂಸಾರ ನಿರಾತಂಕವಾಗಿ ಸಾಗಿತ್ತು. ಅವನಿಗೊಬ್ಬ ಮಗನೂ ಹುಟ್ಟಿದನು.

ಕುಸುಮಾಳ ತಂದೆ ಶಿವಾನಂದರು ಸೇವಾನಿವೃತ್ತರಾಗಿದ್ದರೂ ಮನೆಯಲ್ಲಿ ಸುಮ್ಮನೆ ಕೂರಲಾರದೆ ಒಂದು ಟ್ಯುಟೋರಿಯಲ್ ಸೆಂಟರ್‌ನಲ್ಲಿ ಪಾಠ ಮಾಡುತ್ತಿದ್ದರು. ಯಾವುದೇ ಖಾಯಿಲೆ ಕಸಾಲೆಯಿಲ್ಲದೆ ಗಟ್ಟಿಮುಟ್ಟಾಗಿದ್ದ ಕುಸುಮಾಳ ತಮ್ಮ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ತೀರಿಕೊಂಡನು. ಇದರಿಂದ ಆಘಾತಕ್ಕೊಳಗಾದ ಅವನ ತಂದೆಯವರೂ ಮಗನ ಹಾದಿಯನ್ನೇ ಹಿಡಿದರು. ಕುಸುಮಾಳ ತಾಯಿ ನೀಲಾಂಬಿಕೆ ಈಗಲೂ ತಮ್ಮ ಸೊಸೆ ಮತ್ತು ಮೊಮ್ಮಗನ ಜೊತೆಯಲ್ಲಿ ಇರಲು ಒಡಂಬಡಲೇ ಇಲ್ಲ. ಸೊಸೆ ತನ್ನ ಮಗನೊಡನೆ ತನ್ನ ತವರುಮನೆಗೆ ಹೋಗಿಬಿಟ್ಟಳು. ಆಗ ಖಾಲಿಯಾಗಿದ್ದ ಪೂರ್ವೀಕರ ದೊಡ್ಡ ಮನೆಯಲ್ಲಿ ತಾಯಿ ಒಬ್ಬರೇ ವಾಸವಾಗಿದ್ದರು . ಅವರಿಗೆ ಸಕ್ಕರೆ ಖಾಯಿಲೆ ಮತ್ತು ರಕ್ತದೊತ್ತಡಗಳೇ ಸಾಥಿಯಾಗಿದ್ದವು. ಜೀವನ ಪೂರ್ತಿ ಯಾರ ಜೊತೆಯಲ್ಲಿಯೂ ಉತ್ತಮ ಸಂಬಂಧ ಬೆಳೆಸಿಕೊಳ್ಳದ ಹಠಮಾರಿ ಕೊನೆಗೂ ಒಂಟಿಯಾಗಿರುವುದು ಕುಸುಮಾಳಿಗೆ ಒಂದು ಕಡೆ ನೋವು ಮತ್ತೊಂದು ಕಡೆ ಅವರ ಬಗ್ಗೆ ಜಿಗುಪ್ಸೆ ತಂದಿತ್ತು. ಆದರೂ ಮನಸ್ಸು ತಡೆಯದೆ ಆಗಿಂದಾಗ್ಗೆ ಊರಿಗೆ ಹೋಗಿ ಬರುತ್ತಾ ತಾಯಿಯ ಬಗ್ಗೆ ಕೂಡ ಕಾಳಜಿ ವಹಿಸುತ್ತಿದ್ದಳು.

ಕುಸುಮಾಳ ಹಿರಿಯ ಮಗಳು ರಜನಿ ಬಿ.ಎ. ಬಿ.ಎಡ್., ಓದಿಕೊಂಡು ಕೆಲಸಕ್ಕಾಗಿ ಹುಡುಕಾಟದಲ್ಲಿದ್ದಳು. ಅದೇ ಸಮಯದಲ್ಲಿ ಅಮರ್ ಎಂಬ ಬಿ,ಇ. ಪದವೀಧರನೊಬ್ಬ ಬೆಂಗಳೂರಿನಲ್ಲಿ ಸ್ವಂತ ಕಾಂಟ್ರಾಕ್ಟ್ ಮಾಡಿಕೊಂಡಿದ್ದ. ಅಮರನ ಮನೆಯವರು ರಜನಿಯ ಸಂಬಂಧ ಕೇಳಿಕೊಂಡು ಬಂದಿದ್ದರು. ಅವರು ಮೊದಲಿನಿಂದಲೂ ಕುಸುಮಾಳ ಪತಿ ನಿರಂಜನನ ಪರಿಚಯಸ್ಥರು. ಅವರಿಗೆ ಮೂರು ಗಂಡು ಮಕ್ಕಳು ಎಲ್ಲರೂ ಬೆಂಗಳೂರಿನ ನಿವಾಸಿಗಳು. ಪ್ರತಿಯೊಬ್ಬರೂ ತಮ್ಮ ಸ್ವಂತ ಬ್ಯುಸಿನೆಸ್ ಹೊಂದಿದ್ದರು. ಅವರ ತಂದೆಯವರು ಮಿಲಿಟರಿ ಸರ್ವೀಸಿನಲ್ಲಿದ್ದು ನಿವೃತ್ತರಾದ ನಂತರ ಬಂದ ಹಣ ಮತ್ತು ಊರಿನಲ್ಲಿದ್ದ ಅವರ ಆಸ್ತಿಮಾರಿದ ಹಣ ಎಲ್ಲವನ್ನೂ ತಮ್ಮ ಮಕ್ಕಳ ವಹಿವಾಟುಗಳಿಗೆ ಬಂಡವಾಳ ಹೂಡಿದ್ದರು. ನೆಮ್ಮದಿಯಾಗಿದ್ದರು. ಎಲ್ಲರಿಗಿಂತ ಕಿರಿಯವನೇ ಅಮರ್. ಸಂಬಂಧವನ್ನು ನಿರಾಕರಿಸಲು ಕಾರಣಗಳೇ ಇರಲಿಲ್ಲ. ಆದ್ದರಿಂದ ಕುಸುಮಾ ನಿರಂಜನ ದಂಪತಿಗಳು ಮಗಳು ರಜನಿಯನ್ನು ಅಮರ್‌ಗೆ ಕೊಟ್ಟು ವಿವಾಹ ಮಾಡಿದರು. ಇನ್ನು ಮಗ ಚಿನ್ಮಯಿ ಇಂಜಿನಿಯರಿಂಗ್ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ಹೋದನು. ಅಲ್ಲಿಂದ ಹಿಂದಿರುಗಿದ ನಂತರ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತ ತನ್ನ ಸಹೋದ್ಯೋಗಿ ದೇವಿಕಾಳನ್ನು ವರಿಸಿದ.

‘ಕಾಲಾಯ ತಸ್ಮೈ ನಮಃ’ ಎಂಬಂತೆ ಬದಲಾವಣೆಗಳಿಗೆ ಕುಸುಮಾ ಹೊಂದಿಕೊಂಡಳು. ಮಗಳ ಎರಡು ಮಕ್ಕಳು, ಮಗನ ಒಬ್ಬ ಮಗ ಸೇರಿ ಮೂರು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತ ಪತಿಯೊಡನೆ ದಿನ ಕಳೆಯುತಿದ್ದಳು. ಅಂತೂ ಎಲ್ಲವೂ ಒಂದು ಘಟ್ಟಕ್ಕೆ ಬಂತೆಂದು ತೃಪ್ತಿ ಪಟ್ಟುಕೊಂಡಳು. ಆದರೆ ಈ ಸಂತೋಷ ಬಹಳಕಾಲ ಉಳಿಯಲಿಲ್ಲ. ಅವಳ ತಾಯಿಯ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯವಾಯಿತು. ಸಾಲದ್ದಕ್ಕೆ ಆಕೆಯ ಪತಿ ನಿರಂಜನನ ಆರೋಗ್ಯದಲ್ಲಿಯೂ ಇತ್ತೀಚೆಗೆ ಸಮಸ್ಯೆಗಳು ತಲೆದೋರಿದವು. ತಾಯಿಯು ಅಂಥಹ ಪರಿಸ್ಥಿತಿಯಲ್ಲೂ ತಮ್ಮೊಡನೆ ಬಂದಿರಿ ಎಂದರೆ ಒಪ್ಪಲಿಲ್ಲ. ಕಾರಣ ಬದಲಾಗದ ಅವರ ಹಠಮಾರಿತನ. ಅವರನ್ನು ನೋಡಿಕೊಳ್ಳಲು ಪೂರ್ಣಾವಧಿಯ ಕೇರ್‌ಟೇಕರ್ ಒಬ್ಬರನ್ನು ನೇಮಿಸೋಣವೆಂದರೆ ಅವರೊಂದಿಗೂ ಹೊಂದಿಕೊಳ್ಳಲಿಲ್ಲ. ತಮ್ಮನಂತೂ ಮೊದಲೇ ಶಿವನಪಾದ ಸೇರಿಬಿಟ್ಟಿದ್ದ. ಇನ್ನು ತಂಗಿ, ತನಗೂ ತಾಯಿಗೂ ಏನೂ ಸಂಬಂಧವಿಲ್ಲವೆಂಬಂತೆ ನಿರಾಳವಾಗಿದ್ದಳು. ನೀಲಾಂಬಿಕೆ ಆಕೆಯ ಸ್ವಂತ ತಾಯಿಯೆ ಆದರೂ ಅವರನ್ನು ಸಹಿಸಿಕೊಳ್ಳುವುದು ದುಸ್ತರವಾಗಿತ್ತು.

ಈ ಮಧ್ಯೆ ತಮ್ಮನ ಮಗನನ್ನೂ ತಮ್ಮ ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದಳು. ಅವನೂ ಇಂಜಿನಿಯರಿಂಗ್ ಪೂರೈಸಿ ವಿದೇಶಕ್ಕೆ ಹಾರಿಹೋಗುವವರೆಗೆ ಜವಾಬ್ದಾರಿ ವಹಿಸಿದ್ದಳು ಕುಸುಮಾ.
ತಾಯಿ ಮತ್ತು ಗಂಡನ ಆರೋಗ್ಯಗಳು ದಿನೇದಿನೇ ಬಿಗಡಾಯಿಸಿಕೊಂಡವು. ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಕೆಲವೇ ದಿನಗಳ ಅಂತರದಲ್ಲಿ ಇಹಲೋಕದ ವ್ಯಾಪಾರ ಮುಗಿಸಿ ಹೋಗಿಬಿಟ್ಟರು. ಎಲ್ಲ ಹೊಡೆತಗಳಿಂದ ಜರ್ಝರಿತಳಾಗಿದ್ದ ಕುಸುಮಾಳಿಗೆ ಮತ್ತೊಂದು ಮಾರಂಣಾಂತಿಕ ಪೆಟ್ಟು ಕೊಟ್ಟ ಭಗವಂತ. ಕುಸುಮಾಳ ಹಿರಿಯ ಮಗಳು ರಜನಿಗೆ ಬೈನ್ ಟ್ಯೂಮರ್ ತೊಂದರೆ ಇದೆಯೆಂದು ತಿಳಿದುಬಂತು. ಆದರೆ ಚಿಕಿತ್ಸೆ ಪ್ರಾರಂಭಿಕ ಹಂತದಲ್ಲಿರುವಾಗಲೇ ಆಕೆ ನಿಧನಳಾದಳು. ಅವಳ ದೊಡ್ಡ ಮಗಳು ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಮತ್ತು ಕಿರಿಯ ಮಗ ಒಂಬತ್ತನೆಯ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಲವತ್ತೆಂಟು ವರ್ಷ ಬಯಸ್ಸಿನ ಅಳಿಯ ಅಮರ್ ಈಗ ಮಕ್ಕಳ ಯೋಗಕ್ಷೇಮವನ್ನು ಮತ್ತು ತನ್ನ ಬ್ಯುಸಿನೆಸ್ಸನ್ನೂ ಒಬ್ಬನೇ ನೋಡಿಕೊಳ್ಳುತ್ತಿದ್ದ. ಅದೀಗ ಅನಿವಾರ್ಯವೂ ಆಗಿತ್ತು. ಕೇವಲ ಒಂದೆರಡು ವರ್ಷಗಳ ಅವಧಿಯಲ್ಲಿ ಕುಸುಮಾ ತನ್ನ ತಾಯಿ, ಪತಿ ಮತ್ತೀಗ ಮಗಳ ಅಗಲುವಿಕೆಯಿಂದ ತತ್ತರಿಸಿಹೋಗಿದ್ದಳು. ತನ್ನ ಮೊಮ್ಮಕ್ಕಳ ಸ್ಥಿತಿ ಮತ್ತಷ್ಟು ದುಃಖವನ್ನು ತಂದಿತ್ತು. ಮೊಮ್ಮಗ ರೋಹನ್ ರೆಸಿಡೆನ್ಷಿಯಲ್ ಶಾಲೆಯಲ್ಲಿ ಓದುತ್ತಿದ್ದುದರಿಂದ ಸದ್ಯಕ್ಕೆ ಪರವಾಗಿಲ್ಲ. ಆದರೆ ಮೊಮ್ಮಗಳು ರೂಪಾ ಮೈಸೂರಿನ ಕಾಲೇಜಿನಲ್ಲಿ ಓದುತ್ತಿದ್ದಳು. ಅವಳಿಗೋಸ್ಕರವಾಗಿಯೇ ಮಗಳು ರಜನಿ ಮೈಸೂರಿನಲ್ಲಿ ಮನೆ ಮಾಡಿಕೊಂಡಿದ್ದಳು. ಅಮರ್‌ನ ಕಾರುಬಾರೆಲ್ಲ ಬೆಂಗಳೂರಿನಲ್ಲಿತ್ತು. ಹಾಗಾಗಿ ಅವನು ಬಂದು ಹೋಗುತ್ತಿದ್ದ. ಈಗಿನ ಪರಿಸ್ಥಿತಿಯಲ್ಲಿ ಮೊಮ್ಮಗಳು ಒಬ್ಬಳೇ ಹೇಗಿರುತ್ತಾಳೆಂದು ಆಲೋಚಿಸಿ ಅವಳನ್ನು ಒಂದುವರ್ಷದವರೆಗೆ ತಮ್ಮೊಡನೆಯೇ ಇರಿಸಿಕೊಂಡು ಅವಳ ಪದವಿ ಪೂರೈಸುವವರೆಗೂ ಹೇಗೋ ನಿಭಾಯಿಸಿದರು. ಅವಳಿಗೆ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಕೆಲಸ ಸಿಕ್ಕಿ ಬೆಂಗಳೂರಿನ ಕಂಪನಿಯೊಂದಕ್ಕೆ ಸೇರಿಕೊಂಡಳು.

ರಜನಿ ತೀರಿಕೊಂಡ ಒಂದು ವರ್ಷದ ನಂತರ ಅಮರ್‌ನ ಹಿರಿಯ ಸೋದರರು ಅವನ ಒಂಟಿತನಕ್ಕೊಂದು ಪರಿಹಾರ ಒದಗಿಸಲು ಅವನನ್ನು ಮರುಮದುವೆ ಮಾಡಿಕೋ ಎಂದು ಒತ್ತಾಯಿಸುತ್ತಿದ್ದರು. ಅವನು ಅದಕ್ಕೆ ಒಪ್ಪದಿದ್ದುದರಿಂದ ಈಗ ಅವನ ಅತ್ತೆ ಕುಸುಮಾಳ ಮೂಲಕ ಅವನನ್ನು ಹೇಗಾದರೂ ವಿವಾಹದ ಪ್ರಸ್ತಾವನೆಗೆ ಒಪ್ಪಿಸುವುದು ಅವರ ಇಚ್ಛೆಯಾಗಿತ್ತು. ಇನ್ನು ಅವನ ಮಗಳು ರೂಪಾಳನ್ನು ಮದುವೆ ಮಾಡಿ ಕಳುಹಿಸಿದ ಮೇಲೆ ಮನೆಯನ್ನು ನಿರ್ವಹಿಸಲು ಹಾಗೂ ದುಡಿದು ಬಂದ ಪತಿಯನ್ನು ಆದರಿಸಲು ಒಬ್ಬ ಸಂಗಾತಿಯು ಬೇಕೆಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಈ ಆಲೋಚನೆಯನ್ನು ಅಳಿಯನ ಬಳಿ ಹೇಗೆ ಪ್ರಸ್ತಾಪಿಸುವುದು ಎಂದು ತಿಳಿಯದೆ ಮಂಕಾಗಿದ್ದಳು ಕುಸುಮಾ. ಈಗ ಮತ್ತೆ ಶ್ರೀಕಂಠಪ್ಪನ ಫೋನ್ ಕರೆ ಬಂದಮೇಲೆ ಈ ದಿನ ಆಗಮಿಸಲಿರುವ ಅಳಿಯ ಅಮರ್ ಜೊತೆಯಲ್ಲಿ ಮಾತನಾಡಬೇಕೆಂದು ತೀರ್ಮಾನಿಸಿದಳು. ಸುದೀರ್ಘವಾದ ಆಲೋಚನೆಯಿಂದ ಹೊರಬರುವಂತೆ ಮಾಡಿದ್ದು ಜೋರಾಗಿ ರಿಂಗಣಿಸಿದ ಕಾಲಿಂಗ್ ಬೆಲ್.

ಹೊರಬಾಗಿಲ ಬಳಿ ಕಿಟಕಿಯಿಂದ ಒಮ್ಮೆ ಇಣುಕಿ ಬಂದವರಾರೆಂದು ಖಚಿತಪಡಿಸಿಕೊಂಡು ಬಾಗಿಲು ತೆರೆದು ಅಳಿಯ ಅಮರ್‌ನನ್ನು ಒಳಕ್ಕೆ ಆಹ್ವಾನಿಸಿದಳು. ಕಾಲಿಡುತ್ತಿದ್ದಂತೆ “ಚೆನ್ನಾಗಿದ್ದೀರಾ ಅತ್ತೇ?” ಎಂದು ವಿಚಾರಿಸುತ್ತಲೇ ಆತನ ಕೈಯಲ್ಲಿದ್ದ ಬ್ಯಾಗನ್ನು ಟೀಪಾಯಿಯ ಮೇಲಿಟ್ಟು ಕೈಕಾಲು ತೊಳೆದುಕೊಂಡು ಹೊರಬಂದು ಸೋಫಾದ ಮೇಲೆ ಕುಳಿತುಕೊಂಡ ಅಮರ್. ಮಗಳ ಕೆಲಸದ ಸುದ್ಧಿ, ತಮ್ಮ ಮನೆಯ ಕೆಲಸಕ್ಕೆ ಮತ್ತು ಅಡುಗೆಗೆಂದು ಒಬ್ಬ ಸಹಾಯಕರನ್ನು ನೇಮಿಸಿಕೊಂಡ ವಿಷಯ ಮುಂತಾದ ಎಲ್ಲ ವಿಚಾರಗಳನ್ನು ಅತ್ತೆಯೊಡನೆ ಹಂಚಿಕೊಂಡ.

ಎಲ್ಲವನ್ನೂ ಆಲಿಸಿದ ಕುಸುಮ ಪ್ರೀತಿಯ ಮನೆಯೊಡತಿ ಕಾಲವಾದಮೇಲೆ ಅಳಿಯ ತಾನೇ ಮನೆಯ ಜವಾಬ್ದಾರಿಯನ್ನು ಅಚ್ಚಕಟ್ಟಾಗಿ ನಿಭಾಯಿಸುತ್ತಿದ್ದಾನೆ ಎಂದುಕೊಂಡಳು. ಹಾಗೇ ಅಳಿಯನ ಅಣ್ಣನವರು ಹೇಳಿದ್ದ ಮಾತನ್ನು ಹೇಗೆ ಪ್ರಾರಂಭಿಸಬೇಕು ಎಂಬ ಗೊಂದಲ ಉಂಟಾಯಿತು. ಇರಲಿ ಆಮೇಲೆ ನೋಡೋಣವೆಂದು “ತಿಂಡಿ ತಿನ್ನುವಿರಂತೆ ಬನ್ನಿ, ಪಲ್ಯ ಚಟ್ನಿ ರೆಡಿಯಾಗಿದೆ, ದೋಸೆ ಬಿಸಿಯಾಗಿ ಹಾಕಿಕೊಡುತ್ತೇನೆ” ಎಂದು ಅಡುಗೆ ಮನೆಯ ಕಡೆ ನಡೆದಳು ಕುಸುಮ.

“ಅತ್ತೇ ನಿಮ್ಮ ಮೊಮ್ಮಗಳು ಬೆಳಗ್ಗೆ ನಾನು ಹೊರಡುವಷ್ಟರಲ್ಲಿ ಎದ್ದು ಬ್ರೆಡ್‌ ಟೋಸ್ಟ್ ಮಾಡಿಕೊಟ್ಟಿದ್ದಳು. ತಿಂದು ಕಾಫಿ ಕುಡಿದೇ ಹೊರಟದ್ದು. ಆದರೂ ನೀವು ದೋಸೆ ಎಂದಮೇಲೆ ಬಿಡಲು ಸಾಧ್ಯವೇ ಹಾಕಿಕೊಡಿ” ಎಂದು ಡೈನಿಂಗ್ ಟೇಬಲ್ ಹತ್ತಿರ ಕುಳಿತುಕೊಂಡ. “ಹಾಗೇ ಮಾತನಾಡುತ್ತಾ ತಿಂದರಾಯಿತು” ಎಂದ ಅಮರ್.

ಅಳಿಯನ ಸರಳತೆ ಕುಸುಮಾಳಿಗೆ ಹೊಸತೇನೂ ಅಲ್ಲ. ಇದೇ ಗುಣವೇ ನಿರಂಜನ ದಂಪತಿಗಳನ್ನು ಪ್ರೀತಿಯಿಂದ ಕಟ್ಟಿಹಾಕಿದ್ದು. ಆತನ ಪತ್ನಿ ರಜನಿ ಆತನ ಹಿರಿಯ ಸೋದರರು, ಅತ್ತಿಗೆಯರಿಗಿಂತ ತನ್ನ ಅಪ್ಪ ಅಮ್ಮನನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳೆಂಬ ಅಭಿಮಾನ ಅವನಿಗಿತ್ತು. ಗಂಡ ಹೆಂಡತಿ ಅಷ್ಟೇ ಅನ್ಯೋನ್ಯವಾಗಿದ್ದರು. ಆದರೆ ಕ್ರೂರ ವಿಧಿಗೆ ಇದು ಸಹ್ಯವಾಗಲಿಲ್ಲವೇನೋ ಹೀಗಾಗಿಹೋಯಿತು ಎಂದು ಯೋಚಿಸುತ್ತಲೇ ದೋಸೆ ಹಾಕಿಕೊಟ್ಟು ಅಳಿಯನನ್ನು ಉಪಚರಿಸಿದಳು.

ತಾನು ತಿಂಡಿ ತಿಂದಮೇಲೆ ಕುಸುಮಾ ಬೇಡವೆಂದರೂ ಅವರನ್ನು ಕೂಡ್ರಿಸಿ ತಾನೇ ದೋಸೆ ಹಾಕಿ ಅವರೂ ತಿನ್ನುವಂತೆ ಒತ್ತಾಯಿಸಿದ ಅಮರ್. ನಂತರ ಕಾಫಿಯನ್ನೂ ಬೆರೆಸಿ ತಾನು ಒಂದು ಕಪ್ ಅತ್ತೆಗೊಂದು ಕಪ್ ಹಾಕಿ ಗ್ಯಾಸ್ ಆರಿಸಿ “ ಬನ್ನಿ ಹೊರಗಡೆ ಕುಳಿತು ಇನ್ನಷ್ಟು ಮಾತನಾಡೋಣ. ನನ್ನ ಕೆಲಸವೇನಿದ್ದರೂ ಹನ್ನೊಂದು ಗಂಟೆಯ ಮೇಲೇನೇ. ಆಫೀಸಿನ ಬಾಗಿಲು ತೆರೆದರೂ ಅಲ್ಲಿ ಜನರು ಬರಬೇಕಲ್ಲಾ” ಎನ್ನುತ್ತಾ ಹಾಲಿಗೆ ಬಂದು ಕುಳಿತರು.

ಕಾಫಿ ಕುಡಿಯುತ್ತಲೇ ಮಾತಿಗಾರಂಭಿಸಿದಳು ಕುಸಮಾ “ಅಮರ್ ನಾನೊಂದು ವಿಷಯ ಕೇಳುತ್ತೇನೆ, ನೀವು ಅನ್ಯಥಾ ಭಾವಿಸಬಾರದು” ಎಂದು ಪೀಠಿಕೆ ಹಾಕಿದಳು.
“ಅಯ್ಯೋ ನಾನೇನು ನಿಮಗೆ ಹೊರಗಿನವನೇ? ಇದ್ಯಾಕೆ ಹೀಗೆ ಕೇಳುತ್ತೀರಿ. ಅದೇನೆಂದು ನಿಸ್ಸಂಕೋಚವಾಗಿ ಕೇಳಿ” ಎಂದ ಅಮರ್.

“ಏನಿಲ್ಲ ಲೋಕಾರೂಢಿಯಂತೆ ನೀವ್ಯಾಕೆ ಇನ್ನೊಮ್ಮೆ ಮದುವೆ ಮಾಡಿಕೊಳ್ಳಬಾರದು. ಮಗಳು ರೂಪಾಳದ್ದು ಓದು ಮುಗಿದು ಕೆಲಸವೂ ಸಿಕ್ಕಿದ್ದಾಯ್ತು. ಅಮ್ಮಮ್ಮಾ ಅಂದರೆ ಒಂದೆರಡು ವರ್ಷದೊಳಗೆ ಅವಳು ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾಳೆ. ಮಗ ರೋಹನ್ ರೆಸಿಡೆನ್ಷಿಯಲ್ ಕಾಲೇಜಿನಲ್ಲೇ ಓದು ಮುಂದುವರೆಸಬಹುದು. ಅವನಿಗದು ರೂಢಿಯಾಗಿದೆ. ಮನೆಯಲ್ಲಿ ನೀವೊಬ್ಬರೇ ಆಗುತ್ತೀರಿ. ಈಗಲೇ ಮದುವೆ ಮಾಡಿಕೊಂಡರೆ ಮನೆಗೆ, ಮಕ್ಕಳಿಗೆ, ಸನ್ನಿವೇಶಕ್ಕೆ ಅಷ್ಟೊತ್ತಿಗೆ ಎಲ್ಲವೂ ಹೊಂದಿಕೆಯಾಗಿರುತ್ತದೆ. ನಿಮಗೂ ಒಂಟಿಯೆನ್ನಿಸುವುದಿಲ್ಲ” ಎಂದಳು ಕುಸುಮಾ.
“ಹ್ಹ..ಹ್ಹ.. ಇದೆಲ್ಲ ಯಾರು ಹೇಳಿದ್ದು? ನನ್ನ ಅಣ್ಣಂದಿರು ನಿಮ್ಮ ಮೂಲಕ ಹೀಗೆ ಒತ್ತಾಯಿಸಲು ಹೇಳಿದರೆ?” ಎಂದು ಪ್ರಶ್ನಿಸಿದ ಅಮರ್.
“ಛೇ.ಛೇ.. ಅವರುಗಳು ನನ್ನ ಬಳಿ ಯಾಕೆ ಹೇಳಬೇಕು. ಒಂದು ಪಕ್ಷ ಹೇಳಿದರೂ ಏನು ತಪ್ಪು. ಅವರ ಆಲೋಚನೆ ಸರಿಯಾದದ್ದೇ. ನಿಮಗಿನ್ನೂ ಚಿಕ್ಕವಯಸ್ಸು, ಹೆಣ್ಣು ದಿಕ್ಕಿಲ್ಲದ ಮನೆ. ಮಗಳಿಗೆ ಮದುವೆ ಸೆಟ್ಟಾದರೆ ಕನ್ಯಾದಾನ ಮಾಡಲಿಕ್ಕೆ ಹಾಗೂ ನಂತರವೂ ತವರಿಗೆ ಆಕೆ ಬಂದು ಹೋಗಲಿಕ್ಕೆ ಸರಿಹೋಗುತ್ತದೆ” ಎಂದಳು.

“ಅತ್ತೇ ನಾನೀಗ ಹತ್ತಿರ ಹತ್ತಿರ ಐವತ್ತಕ್ಕೆ ಬರುತ್ತಿದ್ದೇನೆ. ಒಂದು ಪಕ್ಷ ಮದುವೆಗೆ ಒಪ್ಪಿದೆ ಅಂತಿಟ್ಟುಕೊಳ್ಳಿ, ಕೊನೇಪಕ್ಷ ಹೆಣ್ಣಿಗೆ ನಲವತ್ತರ ಮೇಲೆ ಆಗಿರಬೇಕು. ತೀರಾ ಸಣ್ಣ ವಯಸ್ಸಿನ ಹುಡುಗಿ ಆಗಲ್ಲ. ಬಡವರ ಮನೆಯ ಹುಡುಗಿಯನ್ನು ತರೋಣ, ಅವಳಿಗೂ ಒಂದು ನೆಲೆಯಾಗುತ್ತದೆ ಕೃತಜ್ಞತೆಯಿಂದ ಇರುತ್ತಾಳೆ ಎಂದು ನನ್ನ ಅಣ್ಣಂದಿರು ಕಲ್ಪಿಸಿಕೊಂಡಿದ್ದಾರೆ. ಪಾಪ ಆಕೆಯ ಅಸಹಾಯಕತೆಯನ್ನು ನಾವು ದುರುಪಯೋಗ ಪಡಿಸಿಕೊಂಡಂತೆ ಆಗುವುದಿಲ್ಲವೇ? ಇನ್ನು ಯಾರಾದರೂ ಡೈವೋರ್ಸಿಗಳು, ಮೊದಲೇ ಯಾವುದೋ ಕಾರಣಕ್ಕೆ ಸಂಬಂಧ ಮುರಿದುಕೊಂಡಿರುತ್ತಾರೆ. ಮತ್ತೆ ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳುತ್ತಾರೆಂಬ ಭರವಸೆಯೇನು? ಎರಡು ಮಕ್ಕಳ ತಂದೆ ನಾನು, ರೆಡಿಮೇಡ್ ಮಕ್ಕಳಿಗೆ ಹೊಸ ಅಮ್ಮನಾಗಿ ಅವಳು ಬರಬೆಕು. ಅಕಸ್ಮಾತ್ ಮದುವೆಯ ನಂತರ ಅವಳಿಂದಲೂ ಒಂದು ಹೊಸ ಅತಿಥಿಯ ಆಗಮನವಾದರೆ ಈ ವಯಸ್ಸಿನಲ್ಲಿ ಅದರ ಲಾಲನೆ, ಪಾಲನೆ ಅದೂ ಮೊಮ್ಮಕ್ಕಳು ಬರುವ ಸಮಯದಲ್ಲಿ, ನಮಗೆ ಮತ್ತೆ ಹೊಸ ಜವಾಬ್ದಾರಿಯನ್ನು ಹೊರುವ ಸಂಭಾಳಿಸುವ ತಾಳ್ಮೆ, ಸಹನೆ ಇರುತ್ತದೆಯೇ? ಆಯಿತು ಇವನ್ನೆಲ್ಲ ಪಕ್ಕಕ್ಕಿಟ್ಟು ನೋಡಿದರೂ ಈಗೀಗ ಮೂವತ್ತಕ್ಕೇ ಜನರಿಗೆ ಎಷ್ಟೋ ಆರೋಗ್ಯದ ಸಮಸ್ಯೆಗಳು ಕಾಲಿಟ್ಟಿರುತ್ತವೆ. ಒಂದು ವೇಳೆ ಬರುವವಳಿಗೆ ಇಂಹದ್ದೇನಾದರೂ ಸಮಸ್ಯೆಗಳು ಕಂಡುಬಂದರೆ ಅಥವಾ ಇದುವರೆಗೂ ಏನೂ ಇಲ್ಲದ ನನಗೇ ಇಂತಹ ಸಮಸ್ಯೆಗಳು ಪ್ರಾರಂಭವಾದರೆ.. ಅವೆಲ್ಲ ತಾಪತ್ರಯವೇ ಬೇಡ. ಈಗಾಗಲೇ ಮನೆಕೆಲಸಕ್ಕೆ ಸೂಕ್ತವಾದ ವ್ಯವಸ್ಥೆ ಮಾಡಿಕೊಂಡಿದ್ದೇನೆ. ನಾನು ವಾಸವಿರುವ ಫ್ಲಾಟಿನ ಎದುರು ಮನೆಯೇ ಅಣ್ಣನದ್ದು. ಅದೇ ಸಮುಚ್ಛಯದಲ್ಲಿ ಇನ್ನೊಂದು ಫ್ಲಾಟಿನಲ್ಲಿ ದೊಡ್ಡಣ್ಣನಿದ್ದಾನೆ. ಅತ್ತಿಗೆಯರು, ಅವರ ಮಕ್ಕಳೊಡನೆ ಉತ್ತಮ ಬಾಂಧವ್ಯವಿದೆ. ನನ್ನ ಮಗಳಿಗೂ ತವರು ಅದೇ ಆಗಲಿ. ನಾನು ನಿಮಗೊಂದು ಪ್ರಶ್ನೆ ಕೇಳುತ್ತೇನೆ. ಒಂದುವೇಳೆ ನಿಮ್ಮ ಮಗಳ ಬದಲು ನಾನೇ ತೀರಿಕೊಂಡಿದ್ದರೆ ನೀವು ನಿಮ್ಮ ಮಗಳಿಗೆ ಇನ್ನೊಂದು ಮದುವೆ ಮಾಡಲು ಯೋಚಿಸುತ್ತಿದ್ದಿರಾ? ಎದೆಯುದ್ದ ಬೆಳೆದು ನಿಂತಿರುವ ಮಗಳನ್ನಿಟ್ಟುಕೊಂಡು ಆಕೆಯನ್ನು ಮತ್ತೆ ಹಸೆಮಣೆ ಏರಿಸುತ್ತಿದ್ದಿರಾ? ಅವಳಿಗಾಗಿ ವರಾನ್ವೇಷಣೆ ಮಾಡುತ್ತಿದ್ದಿರಾ? ಉತ್ತರ ಕೊಡಿ ಅತ್ತೇ. ಇಂತಹ ಪ್ರಶ್ನೆಗಳಿಗೆ ಉತ್ತರವಿಲ್ಲ. ನನ್ನ ಬದುಕಿನಲ್ಲಿ ನಿಮ್ಮ ಮಗಳು ರಜನಿಯ ಸ್ಥಾನದಲ್ಲಿ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲು ನನ್ನ ಮನಸ್ಸು ಒಪ್ಪದು. ಈ ಮತ್ತೊಂದು ಮದುವೆಯ ಪ್ರಹಸನ ಇವತ್ತಿಗೆ ಇಲ್ಲಿಗೇ ಸಾಕು. ಇದು ನನ್ನ ಕೊನೆಯ ತೀರ್ಮಾನ. ನಮ್ಮ ಅಣ್ಣಂದಿರಿಗೂ ತಿಳಿಸಿದ್ದೆ ಆದರೂ ಅವರು ನಿಮ್ಮ ಮೂಲಕ ನನ್ನನ್ನು ಕೇಳುವಂತೆ ಒತ್ತಾಯಿಸಿದ್ದಾರೆ. ಈಗ ನಿಮ್ಮ ಮೊಮ್ಮಗಳಿಗೆ ಯಾವುದಾದರು ಉತ್ತಮ ಸಂಬಂಧವಿದ್ದರೆ ಹುಡುಕಿಕೊಡಿ. ಅವಳ ಮದುವೆ ಮಾಡೋಣ. ನಾನಿನ್ನು ಬರುತ್ತೇನೆ. ಹಾ ! ಇನ್ನೊಂದು ಮಾತು, ನಾನು ಈ ಮನೆಗೆ ಅಳಿಯನಾಗಿ ಕಾಲಿಟ್ಟ ದಿನದಿಂದ ಗಮನಿಸಿದ್ದೇನೆ. ನೀವು ಗೃಹಿಣಿಯಾಗಿ ನಿಮ್ಮ ಜವಾಬ್ದಾರಿಗಳನ್ನು ಹೇಗೆ ಸಮರ್ಥವಾಗಿ ನಿಭಾಯಿಸಿದ್ದೀರಿ ಎಂಬುದನ್ನು. ಈಗ ನೀವು ಹಾಯಾಗಿರಿ. ನಿಮ್ಮ ತವರಿನ ಕಡೆಯವರ ಬಳಿಗೂ ಹೋಗಿಬನ್ನಿ, ಸ್ವಲ್ಪ ಬದಲಾವಣೆ ನಿಮಗೂ ಆವಶ್ಯಕವಾಗಿದೆ. ಆಗಾಗ್ಗೆ ನಾವೂ ಬಂದು ಹೋಗುತ್ತಿರುತ್ತೇವೆ. ನನ್ನಿಂದ ಏನಾದರೂ ನೆರವು ಬೇಕಿದ್ದರೆ ಸಂಕೋಚವಿಲ್ಲದೆ ಹೇಳಿ. ನಾನಿನ್ನು ಬರುತ್ತೇನೆ. ಮಧ್ಯಾನ್ಹದ ಊಟಕ್ಕೆ ನನ್ನನ್ನು ಕಾಯಬೇಡಿ. ನಾನು ಕೆಲಸ ಮುಗಿದ ಕೂಡಲೇ ನೇರವಾಗಿ ಬೆಂಗಳೂರಿಗೆ ಹಿಂದಿರುಗಬೇಕು. ಯಾವುದಕ್ಕೂ ಫೋನ್ ಮಾಡುತ್ತಿರಿ” ಎಂದು ಹೇಳಿ ಮನೆಯಿಂದ ಹೊರಟ ಅಮರ್.

ಅವನ ವಿವೇಕಯುತ ಮಾತುಗಳನ್ನು ಕೇಳುತ್ತಾ ಅವನ ಧ್ವನಿಯಲ್ಲಿದ್ದ ದೃಢತೆ, ವಿಶ್ವಾಸಗಳನ್ನು ಕಂಡು ಕುಸುಮಾಳ ಹೃಯ ತುಂಬಿಬಂತು. ಕೆಲದಿನಗಳ ಹಿಂದೆ ಅವರು ವಾಸವಿದ್ದ ಬೀದಿಯಲ್ಲಿ ನಡೆದ ಒಂದು ವಿಚಿತ್ರ ಘಟನೆ ಆಗ ಜ್ಞಾಪಕಕ್ಕೆ ಬಂತು. ಕೊನೆಯ ಮನೆಯಲ್ಲಿ ಯಜಮಾನಿ ತೀರಿಹೋದಾಗ ಏರ್ಪಡಿಸಿದ್ದ ಅವರ ಶ್ರದ್ಧಾಂಜಲಿ ಕಾಯಕ್ರಮಕ್ಕೆ ತಾವೂ ಹೋಗಿದ್ದರು. ಆಗ ಆ ಮನೆಯ ಯಜಮಾನ ವೃದ್ಧ ಹೇಳಿದ ಮಾತುಗಳು “ಯಾರಾದರೂ ಮದುವೆಗೆ ಉಳಿದಿರುವ ಹುಡುಗಿಯಿದ್ದರೆ ತಿಳಿಸಿ. ಒಂಟಿಯಾದ ನನ್ನ ಯೋಗಕ್ಷೇಮ ನೋಡಿಕೊಳ್ಳಲು ಒಂದು ಹೆಣ್ಣು ಬೇಕು” ಎಂದು. ಅಲ್ಲಿದ್ದವರ ಮುಖದಲ್ಲಿ ನಗೆಯುಕ್ಕಿತ್ತು. ಆತನು ಪೆನ್ಷನ್ ಪಡೆಯುತ್ತಿರುವವ. ಆದರೂ ಹದಿಹರೆಯದವರಂತೆ ಬಯಕೆ ಹೋಗಿಲ್ಲ. ತಾನು ಯಾವುದಾದರೂ ವೃದ್ಧಾಶ್ರಮವನ್ನು ಸೇರಿಕೊಳ್ಳುವುದು ಬಿಟ್ಟು ಇದೆಂಥ ವಿಚಿತ್ರ ಆಸೆ ಎಂದು ಎಲ್ಲರೂ ಮುಸಿಮುಸಿ ನಕ್ಕರು. ಕುಸುಮಾ ಆ ದೃಶ್ಯಕ್ಕೆ ಸಾಕ್ಷಿಯಾಗಿದ್ದಳು.

ಈಗ ತನ್ನಳಿಯ ಅಮರ್ ಹೇಳಿದ ಮಾತುಗಳು ಅವಳ ಹೃದಯವನ್ನು ತಟ್ಟಿದವು. ಇಬ್ಬರ ನಡವಳಿಕೆಯನ್ನೂ ತುಲನೆ ಮಾಡಿದಳು. ಅಳಿಯ ಎಂಥಹ ಹೃದಯವಂತ. ಅವನೊಡನೆ ಕೊನೆಯವರೆಗೆ ಬಾಳ್ವೆ ನಡೆಸುವ ಸೌಭಾಗ್ಯ ನನ್ನ ಮಗಳಿಗಿಲ್ಲವಾಯಿತು. ಆ ಭಗವಂತನಿಚ್ಛೆಯೇ ಬೇರೆಯಾಗಿತ್ತು. ಅಳಿಯನನ್ನು ಬೀಳ್ಕೊಂಡು ಮನೆ ಮುಂಬಾಗಿಲನ್ನು ಹಾಕಿ ಅಲ್ಲಿಯೇ ಕುಂಡವೊಂದರಲ್ಲಿ ಅರಳಿದ್ದ ಗುಲಾಬಿ ಹೂವೊಂದನ್ನು ಕೈಯಲ್ಲಿ ಹಿಡಿದು ಬಂದು ಗೋಡೆಯಮೇಲೆ ಹಾಕಿದ್ದ ತಮ್ಮ ಗತಿಸಿದ ಮಗಳ ಭಾವಚಿತ್ರಕ್ಕೆ ಮುಡಿಸಿ ನಿರಾಳಭಾವದಿಂದ ಅಡುಗೆ ಮನೆಹೊಕ್ಕಳು ಕುಸುಮ. ಬೆಳಗಿನಿಂದ ಕಾಡಿದ್ದ ಅನ್ಯಮನಸ್ಕತೆ ಈಗ ತನ್ನ ಅಳಿಯ ಅಮರ್‌ನ ಮಾತುಗಳಿಂದ ಮಾಯವಾಗಿ ಅವನ ಬಗ್ಗೆ ಹೆಚ್ಚು ಹೆಚ್ಚು ಅಭಿಮಾನ ಮೂಡಿತ್ತು.

-ಬಿ.ಆರ್. ನಾಗರತ್ನ. ಮೈಸೂರು .

9 Comments on “ಅಭಿಮಾನ.

  1. ಕಥೆಯ ಶೀರ್ಷಿಕೆಯಂತೆ ಅಮರ್ ನ ಬಗ್ಗೆ ಅಭಿಮಾನ ಉಕ್ಕಿ ಬಂತು……ಮನುಷ್ಯನ ಸ್ವಭಾವಗಳೇ ವಿಚಿತ್ರ….ನೀಲಾಂಬಿಕೆಯ ಪಾತ್ರ ನೋಡಿ ಅದು ನಿಜವೆನಿಸಿತು…..ಸಣ್ಣ ಕತೆಯಲ್ಲಿ ಮೂರು ಪೀಳಿಗೆಯ ಬದುಕು ತೆರೆದಿಟ್ಟಿದ್ದು ದೊಡ್ಡ ಪ್ರಯತ್ನ….. ಬಹಳ ಚೆನ್ನಾಗಿದೆ….. ನಾಗರತ್ನ ಮೇಡಂ ಗೆ ಅಭಿನಂದನೆಗಳು…..ಇಂತಹ ಬರಹ ಕಟ್ಟಿಕೊಟ್ಟಿದ್ದಕ್ಕೆ…….ಪ್ರಕಟ ಮಾಡಿದ ಹೇಮಾಮಾಲ ಮೇಡಂ ಗೂ ಧನ್ಯವಾದಗಳು……

    1. ನಿಮ್ಮ ಓದು ಅಭಿಪ್ರಾಯ ಕ್ಕೆ ಧನ್ಯವಾದಗಳು ಸಾರ್

  2. ಸೂಕ್ತ ಚಿತ್ರದೊಂದಿಗೆ ಕಥೆಯನ್ನು ಪ್ರಕಟಿಸಿದ ಸುರಹೊನ್ನೆಯ ಸಂಪಾದಕರಿಗೆ ಧನ್ಯವಾದಗಳು..

      1. ಪ್ರತಿಕ್ರಿಯೆ ಗೆ ಅನಂತ ಧನ್ಯವಾದಗಳು ನಯನಮೇಡಂ

  3. ಅಮರ್ ನ ದಿಟ್ಟ ನಿರ್ಧಾರ ಅಪರೂಪವೆನಿಸಿತು. ಒಳ್ಳೆಯ ನಿರೂಪಣೆ, ಉತ್ತಮ ಕಥಾಹಂದರ…. ನಾಗರತ್ನ ಮೇಡಂ.

Leave a Reply to Hema Mala Cancel reply

 Click this button or press Ctrl+G to toggle between Kannada and English

Your email address will not be published. Required fields are marked *