(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮದ್ಯಪಾನದ ಸುತ್ತ ; ಬಂಧನಗಳ ಹುತ್ತ
ದೂರದ ಇಂಗ್ಲೆಂಡಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದು, ಕಂಪೆನಿಯ ಕೆಲಸಕಾರ್ಯಗಳ ನಿಮಿತ್ತ ದೇಶವಿದೇಶಗಳಿಗೆ ಭೇಟಿ ನೀಡಿ, ಬ್ಯುಸಿನೆಸ್ ಮೀಟಿಂಗುಗಳಲ್ಲಿ ಭಾಗಿಯಾಗುವ ಸಂದರ್ಭ ಮತ್ತು ಅಲ್ಲಿನ ಕಂಪೆನಿಗಳ ನೌಕರರುಗಳಿಗೆ ತರಬೇತಿ ನೀಡುವ ಸಂದರ್ಭಗಳು ಎದುರಾಗಿ ಇಂಥ ಪಾನಗೋಷ್ಠಿಗಳಲ್ಲಿ ಅನಿವಾರ್ಯವಾಗಿ ಪಾಲ್ಗೊಳ್ಳುವಾಗ ಅವನು ತನ್ನ ಪಾನನಿರೋಧ ಬದ್ಧತೆಯನ್ನು ಪಾಲಿಸಲು ಕಷ್ಟಪಡಬೇಕಂತೆ. ಟೇಬಲ್ ಮ್ಯಾನರ್ಸ್ ಎಂಬ ಕಾರಣಕ್ಕಾಗಿ ಯಾವುದೋ ಫ್ರೂಟ್ ಜ್ಯೂಸನ್ನು ಗ್ಲಾಸಿಗೆ ಹಾಕಿಕೊಂಡು, ಕೊಂಚ ಕೊಂಚವೇ ಸವಿಯುತ್ತಾ, ಪಾನಪ್ರಿಯ ಕ್ಲಯಿಂಟುಗಳಿಗೆ ಕಂಪೆನಿ ಕೊಡಬೇಕಾದ ಅನಿವಾರ್ಯತೆ; ಇಲ್ಲದಿದ್ದರೆ ಉದ್ಯಮಪತಿ ಗೆಸ್ಟುಗಳಿಗೆ ಅವಮಾನಿಸಿದಂತೆ. ‘ಮ್ಯಾನರ‍್ಸು, ಶಿಷ್ಟಾಚಾರ ಗೊತ್ತಿಲ್ಲದವರನ್ನು ಕಳಿಸಿದ್ದೀರಿ’ ಎಂದು ದೂರು ನೀಡುವುದಲ್ಲದೇ ಸಾವಿರ ಕೋಟಿ ವ್ಯವಹಾರಗಳು ಕಟ್! ಹೀಗೆ ಪ್ರಪಂಚವೇ ಪಾನಪ್ರಿಯ ಉದ್ಯಮಿಗಳ ಪಾಲಾಗಿದೆ. ಪಾನಗೋಷ್ಠಿಗೋಸ್ಕರ ಬ್ಯುಸಿನೆಸ್ ನಡೆಸುತ್ತಾರೋ ಬ್ಯುಸಿನೆಸ್ಸಿನ ಒಂದಂಗವಾಗಿ ಪಾನಪ್ರಿಯತೆ ಹೆಚ್ಚಾಗಿದೆಯೋ ಲಿಕ್ಕರ್ ತಜ್ಞರೇ ಹೇಳಬೇಕು. ಒಂದಂತೂ ಸತ್ಯ: ಹಲವು ವ್ಯವಹಾರಗಳೂ ವ್ಯಾಪಾರ ವಹಿವಾಟುಗಳೂ ಸಂಬಂಧ ಸುಧಾರಣೆಗಳೂ ಹೀಗೆ ಕುಡಿಯುವ ಮತ್ತು ಕುಡಿಸುವ ಕಾರಣದಿಂದಲೇ ಬಗೆ ಹರಿದ ಹಲವು ಸಾವಿರ ಉದಾಹರಣೆಗಳಿವೆ.
ನನ್ನಂತೆ ನನ್ನ ಮಗನಿಗೂ ಆಲ್ಕೋಹಾಲಿನ ಸ್ಮೆಲ್ಲು ಕಂಡರಾಗುವುದಿಲ್ಲ. ಅವನೆಷ್ಟು ಸೂಕ್ಷ್ಮಜ್ಞನೆಂದರೆ ಮುಖಕ್ಷೌರ ಮಾಡಿದ ನಂತರ ಲೇಪಿಸಿಕೊಳ್ಳುವ ಆಫ್ಟರ್ ಶೇವರ್‌ನಲ್ಲಿ ಆಲ್ಕೋಹಾಲ್ ಇರುತ್ತದೆಂಬ ಕಾರಣಕ್ಕಾಗಿ, ಭಾರತಕ್ಕೆ ಬಂದಾಗ ಪನ್ಸಾರೆ ಅಂಗಡಿಯಲ್ಲಿ ಸಿಗುವ ಸ್ಫಟಿಕದ ಕಲ್ಲನ್ನು ತೆಗೆದುಕೊಂಡು ಹೋಗಿ ಬಳಸುತ್ತಾನೆ. ನಮ್ಮಲ್ಲಿಯೇ ಕುಡಿಯದೇ ನಮ್ಮ ಪಾಡಿಗೆ ನಾವು ಇರುವುದು ಕಷ್ಟವಾಗಿರುವಾಗ ಇನ್ನು ದೂರದ ಆ ಮುಕ್ತಪಾನ ಸಾಮ್ರಾಜ್ಯದಲ್ಲಿ ಸರ್ವೈವ್ ಆಗುವುದು ಭಯಂಕರ ಕಷ್ಟ. ಹಾಗಿದ್ದರೂ ಅವನ ಮನೋಬಲ, ಇಚ್ಛಾಶಕ್ತಿ, ಫಿಟ್‌ನೆಸ್, ಆರೋಗ್ಯದ ಕಾಳಜಿ ಮತ್ತು ಕಠಿಣ ನಿರ್ಧಾರಗಳನ್ನು ಜಗತ್ತೇ ಮೆಚ್ಚಬೇಕಿದೆ; ಮುಕ್ತಕಂಠದಿಂದ ಪ್ರಶಂಸಿಸಬೇಕಿದೆ. ಪಾರ್ಟಿ ಮಾಡಲು ಸದಾ ಯಾರನ್ನಾದರೂ ಮಂಗ ಮಾಡಲು ಹೊಂಚು ಹಾಕುವ ಓರ್ವ ವ್ಯಕ್ತಿಯೊಂದಿಗೆ ಹೀಗೇ ಏನೋ ಮಾತಾಡುವಾಗ ಈ ವಿಚಾರವನ್ನು ಹಂಚಿಕೊಂಡಿದ್ದಕ್ಕೆ ‘ಅಯ್ಯೋ ಅದು ಫಾರಿನ್ನು ಸರ್, ಎಲ್ಲಾ ಮಕ್ಕಳು ತಮ್ಮ ತಾಯ್ತಂದೆಯರಿಗೆ ಹೀಗೇ ಹೇಳುವುದು. ಇಲ್ಲೇ ದಾರಿ ತಪ್ಪಿದ್ದಾರೆ. ಇನ್ನು ಅಲ್ಲಿ! ಕೇಳಬೇಕೆ? ಹೇಳೋರು ಇಲ್ಲ; ಕೇಳೋರು ಇಲ್ಲ. ಕೈ ತುಂಬ ಸಂಪಾದನೆ, ಜೊತೆಗೆ ಸ್ವಚ್ಛಂದ ಜೀವನ. ಸುಮ್ನೆ ನಿಮ್ಮ ಸಮಾಧಾನಕ್ಕೆ ಹೀಗೆ ಹೇಳೀದಾನೆ ಅಷ್ಟೇ!’ ಎಂದು ವ್ಯಂಗ್ಯವಾಗಿ ನಕ್ಕು ತಮ್ಮ ಆಲ್ಕೋಹಾಲ್ ಅಡಿಕ್ಷನ್ನು ನೆನಪಾಗಿ ರಸ್ತೆಯಲ್ಲಿ ಕಾಯುತ್ತಿದ್ದ ತಮ್ಮ ಕುಡುಕಸ್ನೇಹಿಯನ್ನು ನೆನಪಿಸಿಕೊಂಡು ಜಾಗ ಖಾಲಿ ಮಾಡಿದರು. ತಮ್ಮ ಮೂಗಿನ ನೇರ ಮಾತಾಡುವ ಇಂಥವರು ಇರುವುದರಿಂದಲೇ ಇಂದು ಯುವಜನತೆಗೆ ಯಾರೂ ಮಾರ್ಗದರ್ಶಕರು ಇಲ್ಲದಂತಾಗಿದ್ದಾರೆ. ತಮ್ಮ ಚಟ ಮತ್ತು ತೆವಲುಗಳನ್ನು ಪ್ರಪಂಚದ ಜನರಿಗೇ ಅನ್ವಯಿಸಿ ಮಾತಾಡುವ ಮನೋರೋಗಿಗಳಿಗೇನೂ ಕಡಮೆಯಿಲ್ಲ. ‘ಯಾರಿಗೂ ಒಪ್ಪಿಸಬೇಕಿಲ್ಲ; ಯಾರಿಗೂ ವಿವರಿಸಬೇಕಿಲ್ಲ’ ಎಂಬಂತೆ ತನ್ನ ಸಾಧನೆಯ ಹಾದಿಯಲ್ಲಿ ಭರದಿಂದ ಮುಂಬರಿಯುತ್ತಿರುವ ನನ್ನ ಮಗನ ಬಗ್ಗೆ ಇನ್ನೂ ಹೆಮ್ಮೆ ಎನಿಸಿತು. ಜೊತೆಗೆ ಇಂಥ ಮಾದರಿಯನ್ನು ಅರ್ಥ ಮಾಡಿಕೊಳ್ಳಲಾಗದ ಎಣ್ಣೆಪ್ರಿಯರ ಸಂಕುಚಿತವೂ ಸಣ್ಣತನವೂ ಆದ ಮನೋಭಾವ ಅರಿವಾಯಿತು. ಹೊಟೆಲು, ಬಾರು, ರೆಸ್ಟೋರೆಂಟುಗಳಲ್ಲಿ ಕುಳಿತು ಕುಡಿಯತೊಡಗಿದರೆ ತಮ್ಮನ್ನು ಕುಡುಕರೆಂದು ಕರೆದಾರು? ಎಂಬ ಆತಂಕದಿಂದ ಕೆಲವರು ತಂತಮ್ಮ ಕಾರಿನ ಢಿಕ್ಕಿಯಲ್ಲಿ ತಮ್ಮ ಮಡದಿ ಮತ್ತು ಮಕ್ಕಳಿಗೆ ಕಾಣದಂತೆ ಬಾಟಲಿಗಳನ್ನು ಬಚ್ಚಿಟ್ಟು, ಸಂಜೆಯಾಯಿತೆಂದರೆ ನಗರದ ನಿರ್ಜನ ಪ್ರದೇಶಕ್ಕೆ ಹೋಗಿ, ಜೊತೆಯಲ್ಲಿದ್ದವರೊಂದಿಗೆ ಹರಟುತ್ತಾ, ಮಬ್ಬುಗತ್ತಲಾಗುವುದನ್ನೇ ಕಾಯುತ್ತಾ ಕುಡಿಯಲು ಹಪಹಪಿಸುವ ಇಂಥವರಿಗೆ ಬದುಕಿನ ಘನತೆಯಾಗಲೀ ಮಮತೆಯಾಗಲೀ ಅರಿವಾಗುವುದಾದರೂ ಹೇಗೆ? ನಗರಗಳ ನೂತನ ಬಡಾವಣೆಗಳಲ್ಲಿರುವ ನಿವೇಶನಗಳ ಅಕ್ಕಪಕ್ಕ ಇಂಥವರು ಕುಡಿದು ಬಿಸಾಡುವ ಬಿಯರ್ ಬಾಟಲಿಗಳು ಆಧುನಿಕ ಮಾನವನ ಅನಾಗರಿಕ ವರ್ತನೆಯನ್ನು ಸಾರಿ ಹೇಳುತ್ತಿರುತ್ತವೆ. ಕುಡಿಯುವುದು, ಜಗಳವಾಡಿ ಬಾಟಲಿ ಒಡೆಯುವುದು ಇಂಥಲ್ಲಿ ಕಾಮನ್ನು. ಹತ್ತಾರು ವರುಷಗಳಿಂದ ನಮ್ಮ ಕುಟುಂಬಮಿತ್ರರೂ ಹಿತೈಷಿಗಳೂ ಆದವರೊಬ್ಬರು ನಮ್ಮ ಮೈಸೂರು ಮನೆಯಲ್ಲಿ ಕಾರ್ಯ ನಿಮಿತ್ತ ತಂಗಿದ್ದಾಗ ‘ನೀವು ಕುಡಿಯಲು ಶುರು ಮಾಡಲೇಬೇಕಿದೆ. ನಿಮ್ಮ ಅನಾರೋಗ್ಯಕ್ಕೆ ಇದೇ ಮದ್ದು ಎಂಬುದನ್ನು ಪ್ರೂವ್ ಮಾಡಿಯೇ ಬಿಡೋಣ. ನಿಮಗಂಟಿದ ಅರೆತಲೆನೋವಿಗೆ ಇದೂ ಚಿಕಿತ್ಸೆಯಾಗಲಿ’ ಎಂದು ಒತ್ತಾಯಿಸಿದಾಗ ‘ಬೇಡ, ನನಗೆ ಈ ತಲೆನೋವೇ ಇರಲಿ, ಆ ಆಲ್ಕೋಹಾಲಿನ ತಲೆಶೂಲೆ ಬೇಕಿಲ್ಲ’ ಎಂದು ನಕ್ಕು ಸುಮ್ಮನಾದೆ. ಆಗ ನನ್ನ ಗುರುಗಳಾಗಿದ್ದವರೊಬ್ಬರ ಸಲಹೆಯೂ ಇದೇ ಆಗಿತ್ತು ಎಂದು ಈ ಮುಂಚೆ ದಾಖಲಿಸಿದ ಪ್ರಸಂಗವನ್ನು ಅರುಹಿದಾಗ ಬೆಚ್ಚಿದರು. ಆಗ ‘ಇಂಥ ಈ ಕಲ್ಯಾಣಗುಣಗಳಿಂದಲೇ ನನ್ನ ವಿದ್ಯಾಗುರುವಾದರೂ ಅವರ ಸಂಪರ್ಕಕ್ಕೆ ಸಿಗದೇ ನುಣುಚಿಕೊಂಡು’ ಬದುಕುತ್ತಿದ್ದುದನ್ನು ಹೇಳಿದೆ; ಮಾತು ಮೀರಿದ ಮೌನ ಅವರಲ್ಲಿ ತುಂಬಿ ತುಳುಕಿತು. ಹೀಗೆ ಇವರೂ ಅಂತಲ್ಲ, ಬಹಳ ಮಂದಿ ನನಗೆ ನಿಮ್ಮ ತಲೆನೋವಿಗೆ ಇದೂ ಪ್ರಯೋಗವಾಗಲಿ ಎಂದು ಕೆಲವೊಮ್ಮೆ ತಮಾಷೆಗೂ ಹಲವೊಮ್ಮೆ ಸೀರಿಯಸ್ಸಾಗೂ ಅಡ್ವೈಸು ಮಾಡುತ್ತಿರುತ್ತಾರೆ.
‘ನೀವು ತೆಗೆದುಕೊಳ್ಳುವ ಮಾತ್ರೆಗಳಲ್ಲಿ ಭಯಾನಕ ಕೆಮಿಕಲ್ಲುಗಳು ಇದ್ದು, ಅವು ಶಾಶ್ವತವಾಗಿ ಅಂಗಾಂಗಗಳನ್ನು ಡ್ಯಾಮೇಜ್ ಮಾಡುತ್ತವೆ. ಆ ಡ್ರಗ್ಸ್‌ಗಳಿಗಿಂತ ಈ ಆಲ್ಕೋಹಾಲೇ ವಾಸಿ’ ಎಂದು ವೈದ್ಯರೇ ಬೆರಗಾಗುವಂತೆ ಮಾತಾಡುವಾಗ ನಾನು ಕೈ ಮುಗಿಯುತ್ತೇನೆ. ‘ಈ ಅಮಲೇ ನನ್ನ ಪಾಲಿಗಿರಲಿ; ಆ ಅಮಲು ದೂರವೇ ಇರಲಿ. ಮುಟ್ಟಬಾರದೆನ್ನುವುದು ಹಟವೂ ಅಲ್ಲ; ಚಟವೂ ಅಲ್ಲ. ಕೇವಲ ಮುಟ್ಟಬಾರದು ಅಷ್ಟೇ’ ಎನ್ನುವೆ. ‘ನಿಮ್ಮ ಸಾಹಿತಿಗಳು ಭಯಂಕರ ಕುಡುಕರು, ಅದರಲ್ಲೂ ನವ್ಯಸಾಹಿತಿಗಳೆನಿಸಿಕೊಂಡವರು ಮೂರೂ ಬಿಟ್ಟವರು’ ಎಂದು ಛೇಡಿಸಿದಾಗಲೂ ನಾನು ಸಂಯಮ ಕಳೆದುಕೊಳ್ಳದೇ ‘ನನಗವರ ವೈಯಕ್ತಿಕ ಬೇಡ; ಅವರು ಬರೆದದ್ದು ಪುಸ್ತಕಗಳಲ್ಲಿವೆ, ಅಷ್ಟು ಸಾಕು’ ಎನ್ನುವಾಗ ನವೋದಯದ ಧೀಮಂತ ದಿಗ್ಗಜರು ಕಣ್ಣ ಮುಂದೆ ಹಾದು ಹೋದಾಗ ಅವರಿಗೆ ಮನದಲ್ಲೇ ವಂದಿಸುವೆ. ‘ಬರೆಯದಿದ್ದರೂ ಬೇಡ, ಕುಡಿದು ಬರೆಯಬೇಕಾದ ಅನಿವಾರ್ಯತೆ ಇಲ್ಲ’ ಎಂಬುದು ನನ್ನ ನಿಲವು. ಚಾರಿತ್ರ್ಯವನ್ನು ಕಳೆದುಕೊಂಡು ಏನು ಬರೆದರೇನು? ಎಷ್ಟು ಪ್ರಕಟಿಸಿದರೇನು? ‘ಸಾಯೋತನಕ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ’ ಎನ್ನುವಂತೆ, ನೆಟ್ಟಗೆ ಬಾಳಲಾರದವರು ಬದುಕಿನ ಬಗ್ಗೆ ನೂರು ಸಾವಿರ ಪುಟ ಬರೆದು ಪುರಸ್ಕಾರ ಪಡೆದರೆ ಯಾವ ದೇವರು ಮೆಚ್ಚಿಯಾನು? ಕೆಲವರಂತೂ ‘ಹೇಗೆ ಬರೆಯಬೇಕು? ಆದರೆ ಹೇಗೆ ಬದುಕಬಾರದು’ ಎಂಬುದಕೆ ಸಮರ್ಥ ನಿದರ್ಶನ. ಆದರೆ ಉಮರ್ ಖಯ್ಯಾಂ, ಬೊದಿಲೇರ್ ಮೊದಲಾದವರ ಅಮಲಿನ ಪದ್ಯಗಳು ಕಡು ಸಾಹಿತ್ಯ ಗುಣವನ್ನು ಹೊಂದಿವೆ ಎಂಬುದು ಬೇರೆ ಮಾತು. ‘ಗುಡುಗುಡಿಯ ಸೇದಿ ನೋಡು’ ಎಂದೇ ಶರೀಫರು ಹಾಡಿದ್ದಾರೆ. ಭೈರಾಗಿಗಳು ಭಂಗಿ ಸೇದುವುದು, ನಶೆಯ ಮೂಲಕ ಭಗವಂತನನ್ನು ದರ್ಶಿಸುತ್ತೇನೆಂದು ಭ್ರಮಿಸುವುದು ಬಹಳ ಹಿಂದಿನ ಕಾಲದಿಂದಲೂ ಬಂದಿರುವ ನಂಬಿಕೆ. ಅದಕಾಗಿಯೇ ಏನೋ ಆಲ್ಕೋಹಾಲನ್ನು ‘ಪರಮಾತ್ಮ’ ಎಂದೂ ಸಂಬೋಧಿಸುವರು. ಕುಡಿದು ತೂರಾಡಿ ತೊದಲುವ ಮಂದಿಯನ್ನು ಪರಮಾತ್ಮನ ಆಟ ಎಂದು ಬಣ್ಣಿಸುವುದುಂಟು. ಹೆಂಡಕುಡುಕ ‘ರತ್ನನ ಪದ’ಗಳನ್ನು ಜಿ ಪಿ ರಾಜರತ್ನಂ ಅವರು ಕುಡಿಯದೇ ಬರೆದಿದ್ದು ಅಭೂತಪೂರ್ವ ಇತಿಹಾಸ. ‘ಹೆಂಡ, ಹೆಂಡ್ತಿ, ಕನ್ನಡ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ; ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ ತಕ್ಕೋ ಪದಗೊಳ್ ಬಾಣ!’ ಎನ್ನುವನು ಈ ಕವಿತಾ ಸಂಕಲನದಲ್ಲಿ ಕಾಣಿಸಿಕೊಳ್ಳುವ ಶ್ರಮಜೀವಿ ರತುನ! ಈತನ ಅತ್ಯುಗ್ರ ಕನ್ನಡದ ಅಭಿಮಾನವನ್ನು ದರ್ಶಿಸಿ, ನಾವು ಕನ್ನಡಿಗರು ಧನ್ಯರಾಗುತ್ತೇವೆ; ಮೂಕವಿಸ್ಮಿತರಾಗುತ್ತೇವೆ. ಸಾಕ್ಷಾತ್ ದೇವರು ಪ್ರತ್ಯಕ್ಷವಾಗಿ, ‘ಯೆಂಡ ಕುಡಿಯೋದ್ ಬುಟ್ಬುಡ್ ರತ್ನ ಅಂದರೂ ಯೆಂಡ್ತಿಯನ್ನು ಸಹ ಬುಟ್ಬುಡ್ ಅಂದರೂ ಆತ ಬಿಡಲು ತಯಾರು; ಆದರೆ ಕನ್ನಡ ಪದಗೊಳ್ ಬುಟ್ಬುಡ್ ಅಂದರೆ ಮಾತ್ರ ಆತ ಬಿಡಲೊಲ್ಲ! ನರಕಕ್ಕೆ ಹಾಕಿ, ನಾಲಿಗೆ ಸೀಳಿಸಿ, ಬಾಯನ್ನು ಹೊಲಿಸಿ ಹಾಕಿದರೂ ಮೂಗಿನಲ್ಲೇ ಕನ್ನಡ ಪದವನಾಡುವ ಭೂಪನವನು! ಕೊನೆಗೆ ಅವನ ಅಂತಿಮ ಧ್ಯೇಯವನ್ನು ಕವಿತೆಯ ಕೊನೆಯ ಸಾಲುಗಳು ಹೀಗೆ ಧ್ವನಿಸುತ್ತವೆ: ‘ಯೆಂಡ ಓಗ್ಲಿ! ಯೆಡ್ತಿ ಓಗ್ಲಿ! ಎಲ್ಲಾ ಕೊಚ್ಕೊಂಡ್ ಓಗ್ಲಿ, ಪರ್ಪಂಚ್ ಇರೋ ತನಕ ಮುಂದೆ, ಕನ್ನಡ್ ಪದಗೊಳ್ ನುಗ್ಲಿ!’ ಇದು ಅವನ ಮನದಂತರಾಳ ಕೂಡ.
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=43621
(ಮುಂದುವರಿಯುವುದು)

ಡಾ. ಹೆಚ್ ಎನ್ ಮಂಜುರಾಜ್ , ಹೊಳೆನರಸೀಪುರ
ಎತ್ತಣಿಂದೆತ್ತ ಸಂಬಂಧ ವಯ್ಯಾ ಲೇಖನ ಎಲ್ಲಿಗೆ..ಕೊಂಡೊಯ್ಯತ್ತದೆ..ಎಂಬ ಕುತೂಹಲವಿದೆ..ವಿಚಾರಪೂರಿತ ಲೇಖನ ಸಾರ್..
ತುಂಬಾ ಚೆನ್ನಾಗಿದೆ
ಲೇಖನ ಚೆನ್ನಾಗಿದೆ ಗುರುಗಳೇ
ನಮಗೂ ಈ ತರಹದ ಅನುಭವಗಳಾಗಿವೆ..!! ಕುಡಿಯದಿದ್ದವರು ಪಾರ್ಟಿ ಸಮಾರಂಭ ಗಳಿಗೆ ಹೋಗುವುದು, ಅವರ ದೃಷ್ಟಿಯಲ್ಲಿ ನಾವು ನಿಷ್ಪ್ರಯೋಜಕರು…. ಈ ಕಾರಣದಿಂದಾಗಿಯೇ ಕೆಲವೊಮ್ಮೆ ಬಿಟ್ಟು ಹೋಗಿರುವ ಅಥವಾ ನಾನೇ ಹೋಗದಿರುವ ಸನ್ನಿವೇಶಗಳು ಇವೆ….!! ಮತ್ತೊಮ್ಮೆ ತಂಡದಲ್ಲಿ ಇರುವರೆಲ್ಲ ಕುಡಿಯುವವರೇ ಆಗಿದ್ದರೆ……. ನಮ್ಮನ್ನು ಕರೆಯುವುದುಂಟು….. ಏಕೆಂದರೆ ಅವರ ‘ಕಾರು ಬಾರಿ’ನಲ್ಲಿ ಕುಡಿದು ತೇಲಾಡುವಾಗ ಕೊನೆಗೆ ಮನೆಗೆ ತಲುಪಿಸಲು ಕಾರನ್ನ ಓಡಿಸುತ್ತಾರೆ ಎಂಬ ತಮ್ಮ ಅನುಕೂಲಕ್ಕಾಗಿ ನಮ್ಮನ್ನ ಕರೆಯುವುದುಂಟು…..!! ಇರಲಿ ಬಿಡಿ ಕಾಲಾಯ ತಸ್ಮೈ ನಮಃ
ಕುಡಿಯದೆ ಇದ್ದುಬಿಡೋಣ…..!!
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸ್ನೇಹಿತರೇ………..
ದೂರುವ ಬದಲು ದಾಟಿಬಿಡೋಣ ಎಂಬ ಭಾವ ನಿಮ್ಮ ಮಾತಲ್ಲಿದೆ. ಸರಿ………..
ನಾವೂ ಕುಡುಕರೇ; ನಮ್ಮ ಅಮಲೇ ಬೇರೆ
ಓದುವುದು ಮತ್ತು ಬರೆಯುವುದನ್ನು ಅಮಲು ಎಂದುಕೊಂಡರೆ!!
ಕುಡಿತದ ಕೆಡುಕುಗಳ ಕುರಿತು ಬಹಳಷ್ಟು ಮಾಹಿತಿಗಳನ್ನು ನೀಡುವ ಸುದೀರ್ಘ ಲೇಖನ ಚೆನ್ನಾಗಿ ಮೂಡಿಬರುತ್ತಿದೆ.
ಧನ್ಯವಾದಗಳು ಮೇಡಂ, ಕ್ಷಮಿಸಿ, ನಿಮ್ಮ ಪ್ರತಿಕ್ರಿಯೆಯನ್ನು ತಡವಾಗಿ ಗಮನಿಸಿದೆ.