(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮರುದಿನ ಬೆಳಿಗ್ಗೆ ಚಂದ್ರಾವತಿ ಡಿಸ್ಚಾರ್ಜ್ ಆದರು.
ಅಂದು ಶನಿವಾರ. ಮಧ್ಯಾಹ್ನ ವರು ಅವರ ಜೊತೆ ಊಟ ಮಾಡಿದಳು.
“ವಾರುಣಿ ಇನ್ನು ಮೇಲೆ ನೀನು ನಮ್ಮ ಮನೆಯಲ್ಲೇ ಇರು. ನನಗೆ ಮಲ್ಲಿ ನಿನ್ನ ಪರಿಸ್ಥಿತಿ ಬಗ್ಗೆ ಹೇಳಿದ್ದಾಳೆ. ನಿನಗೆ ತಿಳಿದಿರುವ ಹಾಗೆ ಶಾರದಾಗೆ ತಿಳಿವಳಿಕೆ ಕಡಿಮೆ. ಆ ದಿನ ನೀನು ರಾಗಿಣಿ ನನ್ನನ್ನು ನರ್ಸಿಂಗ್‌ಹೋಂಗೆ ಸೇರಿಸದಿದ್ರೆ ನಾನು ಏನಾಗುತ್ತಿದ್ದೆನೋ ಏನೋ?”
“ಹಾಗ್ಯಾಕಂದುಕೊಳ್ತೀರಾ?………”
“ನನಗೆ ಸಾಯುವುದಕ್ಕೆ ಭಯವಿಲ್ಲ. ಆದರೆ ನಾನು ಸಾಯುವ ಮೊದಲು ಶಾರದಾಗೆ ಒಂದು ವ್ಯವಸ್ಥೆ ಮಾಡಬೇಕಲ್ಲವಾ?”
“ನಾನು ಇದ್ದಕ್ಕಿದ್ದಂತೆ ಬಿಡ್ತೀನೀಂದ್ರೆ ಸಿಂಧು ಅವರಿಗೆಲ್ಲಾ ತೊಂದರೆ ಆಗಲ್ವಾ?”
“ನನ್ನ ತಮ್ಮನ ಮನೆಯವರಿಗೆ ಹೇಳಿದರೆ ಅವರೇ ಊಟ, ತಿಂಡಿ ಸಪ್ಲೈ ಮಾಡ್ತಾರೆ.”
“ನನಗೆ ಫ್ರೀಯಾಗಿ ಇರುವುದಕ್ಕೆ ಇಷ್ಟವಿಲ್ಲ…….”
“ನೀನು ನನ್ನ ಇನ್ನೊಬ್ಬ ಮಗಳೂಂತ ಭಾವಿಸಿದ್ದೀನಿ. ನನಗೆ ಹಣಕ್ಕೆ ಕೊರತೆಯಿಲ್ಲ. ಒಬ್ಬ ಓದುವ ವಿದ್ಯಾರ್ಥಿಗೆ ಸಹಾಯ ಮಾಡುವುದು ಧರ್ಮ ಅಲ್ವಾ?”
“ಸರಿ ಆಂಟಿ.”
“ಸಾಯಂಕಾಲ ಸಿಂಧು, ಕೃತಿಕಾನ್ನ ಕರ‍್ಕೊಂಡು ಬಾ. ನಾನೇ ಅವರಿಗೆ ಹೇಳ್ತೀನಿ.”
“ಆಗಲಿ ಆಂಟಿ.”
“ನಾಳೆ ಭಾನುವಾರ ಅಲ್ವಾ? ನಾಳೆ ಮಧ್ಯಾಹ್ನ ರಾಮಗೋಪಾಲ್ ರಾಗಿಣೀನ್ನ ಇಲ್ಲಿಗೇ ಊಟಕ್ಕೆ ಬರಲು ಹೇಳು. ನಾನು ನಿಮ್ಮಗಳಿಗೆ ಒಂದು ಮುಖ್ಯವಾದ ವಿಚಾರ ಹೇಳಬೇಕು.”
“ಆಗಲಿ ಆಂಟಿ ಹೇಳ್ತೀನಿ” ಎಂದಳು ವರು.
ಸಾಯಂಕಾಲ ಸಿಂಧು, ಕೃತಿಕಾ ಖುಷಿಯಿಂದ ಒಪ್ಪಿದರು. ಮರುದಿನದಿಂದಲೇ ಊಟ, ತಿಂಡಿ ಕಳುಹಿಸಲು ಚಂದ್ರಾವತಿ ತಮ್ಮ ಕೃಷ್ಣ ಒಪ್ಪಿದರು.
ಮರುದಿನ ಮಧ್ಯಾಹ್ನ ರಾಗಿಣಿ, ರಾಮಗೋಪಾಲ್ ಬಂದರು. ಮಾಮೂಲು ಊಟದ ಜೊತೆ, ಚಂದ್ರಾವತಿ ಜಾಮೂನು ಮಾಡಿದರು. ವರು ಪಕೋಡ ಮಾಡಿದಳು.
ಊಟದ ನಂತರ ಚಂದ್ರಾವತಿ ಇದ್ದಕ್ಕಿದ್ದಂತೆ ಮೂವರನ್ನೂ ಕೇಳಿದರು. “ನೀವು ರಾಮವರ್ಮ ಅನ್ನುವ ಹೆಸರು ಕೇಳಿದ್ದೀರಾ?”
ತಕ್ಷಣ ರಾಗಿಣಿ ಉತ್ತರಿಸಿದಳು. “ಕೇಳಿದ್ದೀನಿ ಮ್ಯಾಡಂ. ಅವರು ನಮ್ಮ ಡಿಪಾರ್ಟ್ಮೆಂಟ್‌ನಲ್ಲಿದ್ದರಂತೆ. ನಮ್ಮ ಆರಾಧ್ಯ ಸರ್ ಆಗಾಗ್ಗೆ ಅವರ ವಿಚಾರ ಹೇಳ್ತಿರ‍್ತಾರೆ.”
“ನಾನು ರಾಮವರ್ಮ ಹೆಂಡತಿ. ರಾಮವರ್ಮ ಮೂಲತಃ ಆಂಧ್ರಾದವರು. ತುಂಬಾ ಬುದ್ಧಿವಂತರು. ಇಂಗ್ಲೀಷ್ ಸಾಹಿತ್ಯದ ಬಗ್ಗೆ ಹುಚ್ಚು ವ್ಯಾಮೋಹ. ಶೇಕ್ಸ್ಪಿಯರ್ ನಾಟಕಗಳ ಸಂಭಾಷಣೆಗಳನ್ನು ಎಷ್ಟು ಚೆನ್ನಾಗಿ ಹೇಳ್ತಿದ್ರು ಗೊತ್ತಾ?”
“ಅವರು ಪದ್ಯಗಳನ್ನೂ ತುಂಬಾ ಚೆನ್ನಾಗಿ ಮಾಡ್ತಿದ್ರಂತೆ?” ರಾಮ್‌ಗೋಪಾಲ್ ಕೇಳಿದ.
“ಹೌದು. ಆದರೆ ಅವರಿಗೆ ಡ್ರಾಮಾ ತುಂಬಾ ಇಷ್ಟವಿತ್ತು. 40 ವರ್ಷವಾದ್ರೂ ಮದುವೆಯಾಗಿರಲಿಲ್ಲ. ನಾನಾಗ ಎಸ್.ಬಿ.ಐ. ಬ್ಯಾಂಕ್‌ನ ಮಾರ್ಕೆಟ್ ಬ್ರಾಂಚ್‌ನಲ್ಲಿದ್ದೆ. 35 ವರ್ಷವಾದರೂ ಮದುವೆಯಾಗಿರಲಿಲ್ಲ. ತಂದೆ ಪುರೋಹಿತರು. ನಾವು ಮೂವರು ಮಕ್ಕಳು. ಜೊತೆಗೆ ಅಜ್ಜ-ಅಜ್ಜಿ. ಆದಾಯ ಸಾಕಾಗ್ತಿರಲಿಲ್ಲ. ನಾನು ಬಿ.ಎ. ಮುಗಿಯುತ್ತಿರುವ ಹಾಗೆ ಬ್ಯಾಂಕ್‌ಗೆ ಕೆಲಸಕ್ಕೆ ಸೇರಿದೆ. ಮದುವೇನೇ ಬೇಡಾಂತ ನಿಶ್ಚಯಿಸಿದ್ದೆ. ರಾಮ್ ಆಗಾಗ್ಗೆ ನಮ್ಮ ಬ್ಯಾಂಕ್‌ಗೆ ರ‍್ತಾ ಇದ್ರು. ನನ್ನನ್ನು ಇಷ್ಟಪಟ್ರು. ನಾನು ಒಪ್ಪಲಿಲ್ಲ.”
“ಯಾಕೆ?”
“ನಾನು ಮದುವೆಯಾಗಿಬಿಟ್ರೆ ನನ್ನ ತವರಿನವರ ಗತಿಯೇನು ಅನ್ನಿಸ್ತಿತ್ತು. ರಾಮ್ ತುಂಬಾ ಶ್ರೀಮಂತರು. ಅಷ್ಟೇ ಶ್ರೀಮಂತ ಹೃದಯದವರು. ಅವರ ತಂದೆ-ತಾಯಿಗೆ ಮಗ ಮದುವೆಯಾದ್ರೆ ಸಾಕಾಗಿತ್ತು. ಅವರು “ನೀನು ನನ್ನ ಮಗನ್ನ ಮದುವೆಯಾಗಮ್ಮ.. ನಿನ್ನ ಸಂಸಾರದ ಜವಾಬ್ಧಾರಿ ನನ್ನದು” ಎಂದರು. ಅದೇ ರೀತಿ ನಡೆದುಕೊಂಡರು.”
“ನೀವು ಒಪ್ಪಿದ್ರಾ?”
“ಹೌದು. ಅವರು ನನ್ನ ಕಂಡಿಷನ್ಸ್ ಪೂರೈಸಿದ ಮೇಲೆ ನಾನು ಮದುವೆಯಾದೆ.”
“ಏನು ಕಂಡಿಷನ್ಸ್ ಹಾಕಿದ್ರಿ?
“ನಮ್ಮ ಸ್ವಂತ ಮನೆ ಬೀಳುವ ಸ್ಥಿತಿಯಲ್ಲಿತ್ತು. ಅದನ್ನು ಮಾರಿ ನಮ್ಮ ರಾಮನಾಥಪುರದಲ್ಲಿ ಬೇರೆ ಮನೆ ತೆಗೆದುಕೊಡಬೇಕು ಅಂದೆ” ಒಪ್ಪಿದರು. ‘ನನ್ನ ಮದುವೆಗಿಂತ ಮೊದಲು ನನ್ನ ತಂಗಿ ಮದುವೆಯಾಗಬೇಕು” ಅಂತ ಹೇಳಿದೆ. ಅದಕ್ಕೂ ಒಪ್ಪಿದರು. ನನ್ನ ತಮ್ಮನಿಗೆ ರಾಮನಾಥಪುರದಲ್ಲೇ ಹೋಟೆಲ್ ಹಾಕಿಕೊಟ್ಟರು.”
“ನಿಜವಾಗಿ ಗ್ರೇಟ್….” ಎಂದಳು ರಾಗಿಣಿ.
“ಸುಮಾರು ೬ ತಿಂಗಳಲ್ಲಿ ನನ್ನ ಕಂಡಿಷನ್ಸ್ ಪೂರೈಸಿದರು. ನಮ್ಮ ತಂದೆ-ತಾಯಿಗೆ ಹೊಸಮನೆ ಕೊಂಡುಕೊಟ್ಟರು. ನನ್ನ ತಂಗಿ ಒಂದು ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡ್ತಿದ್ದಳು. ಅವಳನ್ನು ಒಬ್ಬ ಹೈಸ್ಕೂಲು ಟೀಚರ್‌ಗೆ ಕೊಟ್ಟು ಮದುವೆ ಮಾಡಿದರು. ಆಮೇಲೆ ನಮ್ಮ ಮದುವೆ ಸರಳವಾಗಿ ನಡೆಯಿತು. ಬೋಗಾದಿಯಲ್ಲಿ ಮನೆ ಕೊಂಡುಕೊಂಡು ನೆಮ್ಮದಿಯಿಂದ ಸಂಸಾರ ಶುರು ಮಾಡಿದೆವು.”
“ವಂಡರ್‌ಫುಲ್” ರಾಮಗೋಪಾಲ್ ಹೇಳಿದ.
“ರಾಮ್‌ಗೆ ದೇಶ ಸುತ್ತುವ ಹುಚ್ಚು. ಅಮೇರಿಕಾ, ಸಿಂಗಪೂರ್, ಆಸ್ಟ್ರೇಲಿಯಾ, ಯೂರೋಪ್, ದುಬೈ, ಸಿಂಗಪೂರ್ ಎಲ್ಲಾ ನೋಡಿದೆವು. ಮದುವೆಯಾದ 3 ನೇ ವರ್ಷಕ್ಕೆ ಶಾರದಾ ಹುಟ್ಟಿದಳು. ಅವಳಿಗೆ 10 ತಿಂಗಳಾಗುವ ವೇಳೆಗೆ ಮಗು ನಾರ್ಮಲ್ ಆಗಿಲ್ಲ ಎನ್ನುವುದು ತಿಳಿಯಿತು. ಮಗುವನ್ನು ನೋಡಿಕೊಳ್ಳಲು ನಾನು ಕೆಲಸಬಿಟ್ಟೆ. ರಾಮ್ ತುಂಬಾ ಬೇಜಾರು ಮಾಡಿಕೊಂಡ್ರು. ಅವರ ಕಡೆ ಯಾರೋ ಒಬ್ಬರು ಇದೇ ರೀತಿ ಇದ್ದರಂತೆ. “ನಾವು ಮಗು ಬೇಡಾಂತ ನಿರ್ಧರಿಸಬೇಕಿತ್ತು ಅಂತಿದ್ರು.”
“ಛೆ ಹೀಗಾಗಬಾರದಿತ್ತು…..’ ವಾರುಣಿ ನುಡಿದಳು.
“ನಾನು ಮಗೂಗೆ ಎಲ್ಲಾ ಕಲಿಸಿದೆ. ಶಾರದೆ ಬುದ್ಧಿವಂತೆ ಅಲ್ಲ. ಆದರೆ ಕಲಿತ ಕೆಲಸ ಅಚ್ಚುಗಟ್ಟಾಗಿ ಮಾಡ್ತಿದ್ದಳು. ಓದು-ಬರಹ ಕಲಿಸಲಾಗಲಿಲ್ಲ. ಆದರೆ ನಮಗೆ ತೊಂದರೆ ಕೊಡ್ತಿರಲಿಲ್ಲ. ಟಿ.ವಿ. ನೋಡ್ತಿರೋಳು…..”
“ಆದರೆ ರಾಮ್‌ವರ್ಮ ಸರ್……….”
“ನಿಮ್ಮ ಪ್ರಶ್ನೆ ನನಗೆ ಗೊತ್ತು. ಅವರು ಆತ್ಮಹತ್ಯೆ ಮಾಡಿಕೊಂಡರು….”
“ಶಾರದಾಗೆ ೧೨ ವರ್ಷಗಳಾಗಿದ್ದಾಗ ಇಂಗ್ಲೀಷ್ ಎಂ.ಎ ಮಾಡಲು ಒಂದು ಹುಡುಗಿ ಗಂಗೋತ್ರಿಗೆ ಬಂದಳು. ಮಹಾರಾಷ್ಟçದ ಹುಡುಗಿ ಬಂದಳು. ಶಿಖಾ ಠಾಕೂರ್ ಅಂತ ಅವಳ ಹೆಸರು. ನೋಡಕ್ಕೆ ತುಂಬಾ ಮುದ್ದಾಗಿದ್ದಳು. ತುಂಬಾ ಬುದ್ಧಿವಂತೆ. ಅಷ್ಟೇ ಚುರುಕು. ರಾಮ್ ಅವಳನ್ನು ಪಾದರಸ ಅಂತ ಕರೆಯುತ್ತಿದ್ದರು. ಅವಳು ನಮ್ಮನೆಗೆ ತುಂಬಾ ರ‍್ತಿದ್ದಳು. “ಇವಳೇ ನಮ್ಮ ಮೊದಲನೇ ಮಗಳು’ ಅಂತಿದ್ರು. ನನಗೂ ಅವಳೂಂದ್ರೆ ತುಂಬಾ ಇಷ್ಟವಿತ್ತು. ಅವಳು ನನ್ನನ್ನು ‘ಮಾಮ್’ ಎಂದೇ ಕರೆಯುತ್ತಿದ್ದಳು.”
“ಸರ್ ಅವಳನ್ನು……….”
“ಅವಳನ್ನು ನಮ್ಮ ಮೊದಲನೇ ಮಗಳೂಂತ ಭಾವಿಸಿದ್ದರು. ಅವಳ ತಂದೆ-ತಾಯಿ ಕೂಡ ನಮ್ಮನೆಗೆ ಬಂದು ಹೋಗ್ತಿದ್ದರು. ಆದರೆ ಡಿಪಾರ್ಟ್ಮೆಂಟ್‌ನ ಕೆಲವರಿಗೆ ರಾಮ್ ಬಗ್ಗೆ ಅಸೂಯೆ ಇತ್ತು. ಅವರು ಇಲ್ಲಸಲ್ಲದ ಕಥೆಕಟ್ಟಿ ಹರಡಿದರು. ರಾಮ್, ಶಿಖಾ ನಡುವೆ ಅನೈತಿಕ ಸಂಬಂಧವಿದೇಂತ ಪುಕಾರು ಹಬ್ಬಿಸಿದರು. ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು. ಊರಿಗೆ ಹೋಗಿ ತಂದೆ-ತಾಯಿ ಹತ್ರ ಎಲ್ಲಾ ಹೇಳಿ ಕಾಗದ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳು. ಆದರೆ ರಾಮ್‌ಗೆ ಆ ಆಘಾತ ತಡೆದುಕೊಳ್ಳಲಾಗಲಿಲ್ಲ. ಅವರೂ ಆತ್ಮಹತ್ಯೆ ಮಾಡಿಕೊಂಡರು……”
“ಓ ಮೈಗಾಡ್……”
“ನನಗೆ ಬೋಗಾದಿಯಲ್ಲಿ ಇರಲು ಮನಸ್ಸಾಗಲಿಲ್ಲ. ನನ್ನ ತಮ್ಮನ್ನ ಮೈಸೂರಿಗೆ ಕರೆಸಿಕೊಂಡು ಮನೆ ಮಾರಾಟ ಮಾಡಿದೆ. ಸರಸ್ವತಿಪುರಂನಲ್ಲಿ ಮನೆ ತೆಗೆದುಕೊಂಡೆ. ನನ್ನ ತಂಗಿ ಅವಳ ಗಂಡ ರಾಮನಾಥಪುರದಲ್ಲೇ ಇರುವುದರಿಂದ ನಮ್ಮ ತಂದೆ-ತಾಯಿ ಬಗ್ಗೆ ಯೋಚನೆ ಇರಲಿಲ್ಲ. ಎಷ್ಟೋ ಸಲ ಸಾಯುವ ಯೋಚನೆ ಬರುತ್ತಿತ್ತು. ಶಾರದಾ ಗತಿ ಏನು ಅನ್ನುವ ಯೋಚನೆ ಕಾಡ್ತಿತ್ತು. ಇಬ್ಬರೂ ವಿಷ ತೆಗೆದುಕೊಂಡರೆ ಹೇಗೆ ಅಂದ್ಕೊಳ್ತಿದ್ದೆ. ಆದರೆ ಹೆತ್ತ ಮಗಳಿಗೆ ವಿಷ ಹಾಕಲು ಮನಸ್ಸು ಬರಲಿಲ್ಲ.”
“ಆಂಟಿ ಇನ್ನು ಯಾವತ್ತೂ ನೀವು ಸಾಯುವ ಯೋಚನೆ ಮಾಡಬಾರದು. ನಾವೆಲ್ಲಾ ನಿಮ್ಮ ಜೊತೆ ಇದ್ದೀವಿ ಅನ್ನುವುದನ್ನು ಮರೆಯಬೇಡಿ” ವಾರುಣಿ ಹೇಳಿದಳು.
“ನಿಮ್ಮ ಮೇಲೆ ನಂಬಿಕೆ ಇರುವುದರಿಂದಲೇ ನಾನು ಈ ವಿಚಾರ ನಿಮ್ಮ ಹತ್ತಿರ ಹೇಳಿದ್ದು. ನೋಡಿ ಆ ರೂಮ್‌ನಲ್ಲಿ ರಾಮ್ ಲೈಬ್ರರಿಯಿದೆ. ನೀವು ಆ ಬುಕ್ಸ್ ಉಪಯೋಗಿಸಿಕೊಳ್ಳಿ. ಅವರ ಲ್ಯಾಪ್‌ಟ್ಯಾಪ್ ಅಲ್ಲೇ ಇದೆ. ಅವರು ಬಹಳ ಪುಸ್ತಕಗಳನ್ನು ಬರೆದಿದ್ದಾರೆ…. ನೀವು ರೆಫರ್ ಮಾಡಬಹುದು.”
“ಥ್ಯಾಂಕ್ಸ್ ಆಂಟಿ…….”
“ನಿಮ್ಮ ಡಿಪಾರ್ಟ್ಮೆಂಟ್‌ನ ಆರಾಧ್ಯ, ಕೇಶವರಾಜ್, ಮೈಥಿಲಿರಾವ್ ನಮ್ಮನೆಯವರ ಒಳ್ಳೆಯ ಸ್ನೇಹಿತರು. ಆದರೆ ನನಗೆ ಅವರನ್ನು ಭೇಟಿಮಾಡುವ ಆಸಕ್ತಿಯಿಲ್ಲ. ದಯವಿಟ್ಟು ನೀವು ನನ್ನನ್ನು ಭೇಟಿ ಮಾಡಿದ ವಿಚಾರ ಅವರಿಗೆ ಹೇಳಬೇಡಿ” ಚಂದ್ರಾವತಿ ಕೈ ಮುಗಿದು ಕೇಳಿಕೊಂಡರು.
ಯಾರೂ ಏನೂ ಹೇಳಲಿಲ್ಲ.
“ರಾಗಿಣಿ, ನೀನೂ ಬಂದು ನಮ್ಮನೆಯಲ್ಲಿ ಇರಬಹುದು. ನನಗೆ ನೀವೆಲ್ಲಾ ಇಲ್ಲೇ ಇದ್ದರೆ ಸಂತೋಷಾನೇ.”
“ಇಲ್ಲ ಆಂಟಿ, ನಾನಿರುವ ಮನೆ ಅನುಕೂಲವಾಗಿದೆ. ಆಗಾಗ್ಗೆ ನಮ್ಮ ತಂದೆ-ತಾಯಿ ಬರ‍್ತಿರ‍್ತಾರೆ. ದಸರಾದಲ್ಲಿ ನನ್ನ ಕಸಿನ್ಸ್ ಬರ‍್ತಾರೆ……”
“ಹಾಗಿದ್ದರೆ ಸರಿ. ಒತ್ತಾಯವೇನಿಲ್ಲ.”
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43513
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು
ಕನಸೊಂದು ಧಾರಾವಾಹಿಯ ಈ ಕಂತಿನಲ್ಲಿ ಸಂಬಂಧಗಳನ್ನು ನಾವು ಹೇಗೆ ಬೆಳಸಿಕೊಂಡು ಬಾಳಿಸಿದರೆ ಹೇಗೆಂಬ ನಿಟ್ಟಿನಲ್ಲಿನ ಎಳೆ ಹೊರಬರುತ್ತಿದೆ ..ಮೇಡಂ ನನ್ನ ದೃಷ್ಟಿಯಿಂದ
ಓದುಗರ ಮನಸ್ಸಿಗೆ ನೆಮ್ಮದಿ ನೀಡುವಂತಹ ತಿರುವು ತೆಗೆದುಕೊಂಡ ಕಾದಂಬರಿಯ ಮುಂದಿನ ಈ ಭಾಗ ಮನಸ್ಸಿಗೆ ಮುದ ನೀಡಿತು.
Beautiful
ಕಥೆ ತುಂಬಾ ಚೆನ್ನಾಗಿ ಸಾಗುತ್ತಿದೆ.
ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಸಂಪಾದಕರಿಗೆ ಹಾಗೂ ಅಭಿಪ್ರಾಯ ತಿಳಿಸಿರುವ ಆತ್ಮೀಯ ಗೆಳತಿಯರೆಲ್ಲರಿಗೂ ಧನ್ಯವಾದಗಳು.
ಸರಳ ಸುಂದರ ಕಥಾಹಂದರ…
ಪ್ರತಿ ಕಂತು ಕುತೂಹಲಕಾರಿಯಾಗಿದೆ.