ಪ್ರವಾಸ

ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 12

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಅಂತರ್ ರಾಷ್ಟ್ರೀಯ ಅಂಟಾರ್ಟಿಕಾ ಕೇಂದ್ರ

ಚೆಲುವಿನ ತಾಣ ನ್ಯೂಝೀಲ್ಯಾಂಡಿನ ಪ್ರವಾಸದ ಕೊನೆಯ ಹಂತ ತಲುಪಿದ್ದೆವು. ಫಾಕ್ಸ್ ಗ್ಲೇಸಿಯರ್‌ನಿಂದ ಕ್ರೈಸ್ಟ್ ಚರ್ಚಿಗೆ ಬಂದು ತಲುಪಿದ್ದೆವು. ಮುಂಜಾನೆ ‘ಬೊಟಾನಿಕಲ್ ಗಾರ್ಡನ್’ಗೆ ಭೇಟಿ ನೀಡಿ, ಅಲ್ಲಿನ ವಿವಿಧ ಜಾತಿಯ ಗಿಡ ಮರಗಳನ್ನು ನೋಡುತ್ತಾ, ಅಲ್ಲಿನ ಇತಿಹಾಸ ತಿಳಿಸುವ ಮ್ಯೂಸಿಯಮ್ ಮುಂದೆ ನಿಂತಿದ್ದೆವು. ಮ್ಯೂಸಿಯಮ್ ಕಟ್ಟಡದ ದುರಸ್ತಿ ನಡೆಯುತ್ತಿದ್ದುದರಿಂದ ಪ್ರವಾಸಿಗರಿಗೆ ಪ್ರವೇಶ ಇರಲಿಲ್ಲ. ಅಲ್ಲಿಂದ ಮುಂದೆ ಅಂತರ್ ರಾಷ್ಟ್ರೀಯ ಅಂಟಾರ್ಟಿಕಾ ಕೇಂದ್ರಕ್ಕೆ ನಮ್ಮ ಭೇಟಿ. ಇಲ್ಲಿರುವ ಅಂತರ್ ರಾಷ್ಟ್ರೀಯ ಅಂಟಾರ್ಟಿಕಾ ಕೇಂದ್ರವನ್ನು ವೀಕ್ಷಿಸುವುದೇ ಒಂದು ವಿಶಿಷ್ಠವಾದ ಅನುಭವ. ‘ನೋಡಿರಿ, ಪ್ರೀತಿಸಿ, ಸಂರಕ್ಷಿಸಿ’ ಎಂಬುದು ಇಲ್ಲಿನ ಘೋಷವಾಕ್ಯ. ಇಲ್ಲಿ ಕಂಡ ದೃಶ್ಯಗಳು ಜೀವನದಲ್ಲಿ ಮರೆಯಲಾಗದ ಅನುಭವ ಎಂದರೆ ತಪ್ಪಾಗಲಾರದು. ಪೆಂಗ್ವಿನ್ ಸಂರಕ್ಷಣಾ ಕೇಂದ್ರದ ಹಲವು ಸ್ವಯಂ ಸೇವಕರು ಈ ಪೆಂಗ್ವಿನ್ ಪಕ್ಷಿಗಳನ್ನು ಸಂರಕ್ಷಿಸಲು ಟೊಂಕ ಕಟ್ಟಿ ನಿಂತಿದ್ದರು. ಗೋಡೆಗಳ ತುಂಬಾ ಹಲವು ಬಗೆಯ ಪೆಂಗ್ವಿನ್‌ಗಳ ಬಗ್ಗೆ ವಿವಿರಗಳು, ಅವುಗಳ ಬಗ್ಗೆ ಉತ್ಸಾಹದಿಂದ ಮಾಹಿತಿ ನೀಡುತ್ತಿರುವ ತಜ್ಞರನ್ನು ಕಂಡೆವು. ಅಲ್ಲಿ ಹವಾಮಾನದ ತಾಪಮಾನವನ್ನು ಝೀರೋ ಡಿಗ್ರಿಗೆ ತಗ್ಗಿಸಿ, ಗಾಜಿನ ಆವರಣಗಳಲ್ಲಿ ನೀರಿನ ಕೊಳಗಳನ್ನು ನಿರ್ಮಿಸಿ ಪೆಂಗ್ವಿನ್‌ಗಳನ್ನು ಸಾಕಾಣಿಕೆ ಮಾಡುತ್ತಿರುವ ದೃಶ್ಯಗಳು ಅದ್ಭುತವಾಗಿದ್ದವು. ಅಂಟಾರ್ಟಿಕಾದಲ್ಲಿ ಸುರಿವ ಹಿಮಪಾತದಲ್ಲಿ ನೆನೆಯುತ್ತಾ, ಮೈಕೊರೆವ ಚಳಿಯಲ್ಲಿ ವಾಸಿಸುತ್ತಾ, ಹಿಮನದಿಗಳಲ್ಲಿ ಈಸುವ ಪುಟಾಣಿ ಪೆಂಗ್ವಿನ್ ಮರಿಗಳನ್ನು ನೋಡುತ್ತಾ ನಿಂತೆವು.

ನಮ್ಮ ಮುಂದಿದ್ದ ಕೊಠಡಿಯು ನಮ್ಮನ್ನೆಲ್ಲಾ ಇಂತಹ ಹಿಮಪಾತ ಸುರಿವ ಆವರಣದೊಳಗೇ ಕರೆದೊಯ್ದಿತ್ತು. ನಾವೆಲ್ಲಾ ಅಲ್ಲಿದ್ದ ಬೆಚ್ಚನೆಯ ಜಾಕೆಟ್‌ಗಳನ್ನು ಧರಿಸಿ ಅಂಟಾರ್ಟಿಕಾ ಪ್ರದೇಶವನ್ನು ಹೋಲುವ ವಾತಾವರಣದಲ್ಲಿ ಕಾಲಿಟ್ಟೆವು. ಆ ಕೊಠಡಿಯ ಬಾಗಿಲನ್ನು ಭದ್ರ ಪಡಿಸಿದ ನಂತರ ಒಂದು ಸ್ವಿಚ್ ಹಾಕಿದರು, ರ‍್ರೋ ಎಂದು ಚಳಿಗಾಳಿ ಬೀಸಲು ಆರಂಭ ಹಿಮಪಾತ. ಗೋಡೆಗಳ ಮೇಲೆಲ್ಲಾ ಅಂಟಾರ್ಟಿಕಾದ ಚಿತ್ರಗಳು ರಾರಾಜಿಸುತ್ತಿದ್ದವು. ಇಷ್ಟು ಸುಂದರವಾದ ಭೂಮಿಯ ಮೇಲೆ ಸಮತೋಲನವಾದ ವಾತಾವರಣವನ್ನು ಕಾಪಾಡಲು, ಎಲ್ಲಾ ಬಗೆಯ ಪ್ರಾಣಿ ಪಕ್ಷಿ ಸಂಕುಲಗಳನ್ನೂ ಹಾಗೂ ಗಿಡ ಮರಗಳನ್ನು ಸಂರಕ್ಷಿಸಲು ಅಂಟಾರ್ಟಿಕಾದ ಕೊಡುಗೆ, ಈ ಹಿಮಪದರುಗಳ ಮಹತ್ವ ಹಾಗೂ ಈ ಪ್ರದೇಶವನ್ನು ಸಂರಕ್ಷಿಸದಿದ್ದಲ್ಲಿ ಘೋರವಾದ ವಿಪತ್ತು ಖಚಿತ ಎಂಬ ಸಂದೇಶವನ್ನು ಸಾರುತ್ತಾ ನಿಂತಿತ್ತು, ಈ ಅಂತರ್ ರಾಷ್ಟ್ರೀಯ ಅಂಟಾರ್ಟಿಕಾ ಕೇಂದ್ರ.

(ಮುಗಿಯಿತು)
ಈ ಪ್ರವಾಸಕಥನದ ಹಿಂದಿನಪುಟ ಇಲ್ಲಿದೆ:
https://surahonne.com/?p=43552

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

4 Comments on “ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 12

  1. Beautiful. ಬಹಳ ಸೊಗಸಾಗಿ ಮೂಡಿ ಬಂತು ಪ್ರವಾಸ ಕಥನ. ಸುಂದರ ಜಾಗಗಳನ್ನು ನಿಮ್ಮ ಬರಹದ ಮೂಲಕ ದರ್ಶಿಸುವ ಭಾಗ್ಯ ನಮ್ಮದು. ಧನ್ಯವಾದಗಳು ಮೇಡಂ.

  2. ಚೆಲುವಿನ ನಾಡು ನ್ಯೂಝಿಲೆಂಡ್ ಪ್ರವಾಸ ಕಥನ.. ಸೊಗಸಾದ ನಿರೂಪಣೆ ಯಿಂದ..ನಮ್ಮ ಮನ ಸೆಳೆದಿದು ಮಾತ್ರವಲ್ಲ ನಾವು ಒಂದು ಸುತ್ತು..ನ್ಯೂಝಿಲೆಂಡ್ ಸುತ್ತಿ ಬಂದಹಾಗಾಯಿತು..ಮೇಡಂ..ಧನ್ಯವಾದಗಳು

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *