(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಅಂತರ್ ರಾಷ್ಟ್ರೀಯ ಅಂಟಾರ್ಟಿಕಾ ಕೇಂದ್ರ
ಚೆಲುವಿನ ತಾಣ ನ್ಯೂಝೀಲ್ಯಾಂಡಿನ ಪ್ರವಾಸದ ಕೊನೆಯ ಹಂತ ತಲುಪಿದ್ದೆವು. ಫಾಕ್ಸ್ ಗ್ಲೇಸಿಯರ್ನಿಂದ ಕ್ರೈಸ್ಟ್ ಚರ್ಚಿಗೆ ಬಂದು ತಲುಪಿದ್ದೆವು. ಮುಂಜಾನೆ ‘ಬೊಟಾನಿಕಲ್ ಗಾರ್ಡನ್’ಗೆ ಭೇಟಿ ನೀಡಿ, ಅಲ್ಲಿನ ವಿವಿಧ ಜಾತಿಯ ಗಿಡ ಮರಗಳನ್ನು ನೋಡುತ್ತಾ, ಅಲ್ಲಿನ ಇತಿಹಾಸ ತಿಳಿಸುವ ಮ್ಯೂಸಿಯಮ್ ಮುಂದೆ ನಿಂತಿದ್ದೆವು. ಮ್ಯೂಸಿಯಮ್ ಕಟ್ಟಡದ ದುರಸ್ತಿ ನಡೆಯುತ್ತಿದ್ದುದರಿಂದ ಪ್ರವಾಸಿಗರಿಗೆ ಪ್ರವೇಶ ಇರಲಿಲ್ಲ. ಅಲ್ಲಿಂದ ಮುಂದೆ ಅಂತರ್ ರಾಷ್ಟ್ರೀಯ ಅಂಟಾರ್ಟಿಕಾ ಕೇಂದ್ರಕ್ಕೆ ನಮ್ಮ ಭೇಟಿ. ಇಲ್ಲಿರುವ ಅಂತರ್ ರಾಷ್ಟ್ರೀಯ ಅಂಟಾರ್ಟಿಕಾ ಕೇಂದ್ರವನ್ನು ವೀಕ್ಷಿಸುವುದೇ ಒಂದು ವಿಶಿಷ್ಠವಾದ ಅನುಭವ. ‘ನೋಡಿರಿ, ಪ್ರೀತಿಸಿ, ಸಂರಕ್ಷಿಸಿ’ ಎಂಬುದು ಇಲ್ಲಿನ ಘೋಷವಾಕ್ಯ. ಇಲ್ಲಿ ಕಂಡ ದೃಶ್ಯಗಳು ಜೀವನದಲ್ಲಿ ಮರೆಯಲಾಗದ ಅನುಭವ ಎಂದರೆ ತಪ್ಪಾಗಲಾರದು. ಪೆಂಗ್ವಿನ್ ಸಂರಕ್ಷಣಾ ಕೇಂದ್ರದ ಹಲವು ಸ್ವಯಂ ಸೇವಕರು ಈ ಪೆಂಗ್ವಿನ್ ಪಕ್ಷಿಗಳನ್ನು ಸಂರಕ್ಷಿಸಲು ಟೊಂಕ ಕಟ್ಟಿ ನಿಂತಿದ್ದರು. ಗೋಡೆಗಳ ತುಂಬಾ ಹಲವು ಬಗೆಯ ಪೆಂಗ್ವಿನ್ಗಳ ಬಗ್ಗೆ ವಿವಿರಗಳು, ಅವುಗಳ ಬಗ್ಗೆ ಉತ್ಸಾಹದಿಂದ ಮಾಹಿತಿ ನೀಡುತ್ತಿರುವ ತಜ್ಞರನ್ನು ಕಂಡೆವು. ಅಲ್ಲಿ ಹವಾಮಾನದ ತಾಪಮಾನವನ್ನು ಝೀರೋ ಡಿಗ್ರಿಗೆ ತಗ್ಗಿಸಿ, ಗಾಜಿನ ಆವರಣಗಳಲ್ಲಿ ನೀರಿನ ಕೊಳಗಳನ್ನು ನಿರ್ಮಿಸಿ ಪೆಂಗ್ವಿನ್ಗಳನ್ನು ಸಾಕಾಣಿಕೆ ಮಾಡುತ್ತಿರುವ ದೃಶ್ಯಗಳು ಅದ್ಭುತವಾಗಿದ್ದವು. ಅಂಟಾರ್ಟಿಕಾದಲ್ಲಿ ಸುರಿವ ಹಿಮಪಾತದಲ್ಲಿ ನೆನೆಯುತ್ತಾ, ಮೈಕೊರೆವ ಚಳಿಯಲ್ಲಿ ವಾಸಿಸುತ್ತಾ, ಹಿಮನದಿಗಳಲ್ಲಿ ಈಸುವ ಪುಟಾಣಿ ಪೆಂಗ್ವಿನ್ ಮರಿಗಳನ್ನು ನೋಡುತ್ತಾ ನಿಂತೆವು.
ನಮ್ಮ ಮುಂದಿದ್ದ ಕೊಠಡಿಯು ನಮ್ಮನ್ನೆಲ್ಲಾ ಇಂತಹ ಹಿಮಪಾತ ಸುರಿವ ಆವರಣದೊಳಗೇ ಕರೆದೊಯ್ದಿತ್ತು. ನಾವೆಲ್ಲಾ ಅಲ್ಲಿದ್ದ ಬೆಚ್ಚನೆಯ ಜಾಕೆಟ್ಗಳನ್ನು ಧರಿಸಿ ಅಂಟಾರ್ಟಿಕಾ ಪ್ರದೇಶವನ್ನು ಹೋಲುವ ವಾತಾವರಣದಲ್ಲಿ ಕಾಲಿಟ್ಟೆವು. ಆ ಕೊಠಡಿಯ ಬಾಗಿಲನ್ನು ಭದ್ರ ಪಡಿಸಿದ ನಂತರ ಒಂದು ಸ್ವಿಚ್ ಹಾಕಿದರು, ರ್ರೋ ಎಂದು ಚಳಿಗಾಳಿ ಬೀಸಲು ಆರಂಭ ಹಿಮಪಾತ. ಗೋಡೆಗಳ ಮೇಲೆಲ್ಲಾ ಅಂಟಾರ್ಟಿಕಾದ ಚಿತ್ರಗಳು ರಾರಾಜಿಸುತ್ತಿದ್ದವು. ಇಷ್ಟು ಸುಂದರವಾದ ಭೂಮಿಯ ಮೇಲೆ ಸಮತೋಲನವಾದ ವಾತಾವರಣವನ್ನು ಕಾಪಾಡಲು, ಎಲ್ಲಾ ಬಗೆಯ ಪ್ರಾಣಿ ಪಕ್ಷಿ ಸಂಕುಲಗಳನ್ನೂ ಹಾಗೂ ಗಿಡ ಮರಗಳನ್ನು ಸಂರಕ್ಷಿಸಲು ಅಂಟಾರ್ಟಿಕಾದ ಕೊಡುಗೆ, ಈ ಹಿಮಪದರುಗಳ ಮಹತ್ವ ಹಾಗೂ ಈ ಪ್ರದೇಶವನ್ನು ಸಂರಕ್ಷಿಸದಿದ್ದಲ್ಲಿ ಘೋರವಾದ ವಿಪತ್ತು ಖಚಿತ ಎಂಬ ಸಂದೇಶವನ್ನು ಸಾರುತ್ತಾ ನಿಂತಿತ್ತು, ಈ ಅಂತರ್ ರಾಷ್ಟ್ರೀಯ ಅಂಟಾರ್ಟಿಕಾ ಕೇಂದ್ರ.
ಅಲ್ಲಿಂದ ನಾವು ನೇರವಾಗಿ 4 ಡಿ ಥಿಯೇಟರ್ಗೆ ಹೋಗಿ ಕುಳಿತೆವು. ನಮ್ಮನ್ನೆಲ್ಲಾ ಅಂಟಾರ್ಟಿಕಾಕ್ಕೆ ಕರೆದೊಯ್ಯಲು ಈ ಥಿಯೇಟರ್ ಸಜ್ಜಾಗಿತ್ತು, ಹೊರಟೆವು ಸುಯ್ ಎಂದು, ಭೂಮಿಯ ದಕ್ಷಿಣ ಧೃವದತ್ತ. ಇಲ್ಲಿನ ಹವಾಮಾನ -8 ಡಿಗ್ರಿ ಸೆಲ್ಸಿಯಸ್ ಇದ್ದು ಚಳಿಗಾಳಿ ಬೀಸುವಾಗ -20 ಡಿಗ್ರಿ ಸೆಲ್ಸಿಯಸ್ವರೆಗೂ ಹೋಗುತ್ತಿತ್ತು. ನಾವು ಕುಳಿತಿದ್ದ ಆಸನಗಳು ಅಂಟಾರ್ಟಿಕಾದಲ್ಲಿ ಬೀಸುತ್ತಿದ್ದ ಚಳಿಗಾಳಿಯ ಜೊತೆಗೇ ಓಲಾಡುತ್ತಿತ್ತು. ನಾವು ಧರಿಸಿದ್ದ ಕನ್ನಡಕ ಹಾಗೂ ವಿಶೇಷವಾಗಿ ಸಜ್ಜಾಗಿದ್ದ ವಿದ್ಯುತ್ ದೀಪಗಳಿಂದ ಹೊಮ್ಮುತ್ತಿದ್ದ ಬಣ್ಣ ಬಣ್ಣದ ಬೆಳಕಿನ ಅಲೆಗಳು ನಮ್ಮನ್ನು ಜಗತ್ತಿನ ಎಂಭತ್ತು ಪ್ರತಿಶತ ಹಿಮವಿರುವ ಸ್ಥಳಕ್ಕೆ ಕರೆದೊಯ್ದಿತ್ತು. ನಾವೆಲ್ಲಾ ಸಂಭ್ರಮ ಸಡಗರದಿಂದ ಕಣ್ಣರಳಿಸಿ ನಗುತ್ತಾ ನಲಿಯುತ್ತಾ ಈ ಅಂಟಾರ್ಟಿಕಾ ಪಯಣದಲ್ಲಿ ಪಾಲ್ಗೊಂಡೆವು. ಇಂತಹ ಪ್ರದೇಶದಲ್ಲಿ ಹಿಮದ ಗುಹೆಗಳನ್ನು ರಚಿಸಿಕೊಂಡು ಹಲವು ಪ್ರಯೋಗಗಳನ್ನು ಮಾಡುತ್ತಿರುವ ವಿಜ್ಞಾನಿಗಳ ಪರಿಶ್ರಮ, ತಾಧ್ಯಾತ್ಮವನ್ನು ಏನೆಂದು ಕರೆಯಲಿ? ಇಲ್ಲಿರುವುದು ಎರಡೇ ಋತುಗಳು ಚಳಿಗಾಲ ಹಾಗೂ ಮಳೆಗಾಲ ಅಥವಾ ಹಿಮಪಾತ. ಜಗತ್ತಿನ ಐದನೇ ಸ್ಥಾನದಲ್ಲಿರುವ ಅತ್ಯಂತ ಚಳಿ ಇರುವ ಖಂಡವಾಗಿದ್ದು, ಅತ್ಯಂತ ವೇಗವಾಗಿ ಬೀಸುತ್ತಾ ಹಿಮವನ್ನು ಹೊತ್ತು ತರುವ ಬಿರುಗಾಳಿಯಿರುವ ಸ್ಥಳ. ಇಲ್ಲಿ ಕರೋರಾ ಎಂಬ ಹೆಸರುಳ್ಳ ಪುಟ್ಟದಾದ ನೀಲ ವರ್ಣದ ಪೆಂಗ್ವಿನ್ಗಳೂ, ಸೀಲ್ಗಳೂ ಹಾಗೂ ಹಸ್ಕೀಸ್ ಎಂಬ ಜಾತಿಯ ಶ್ವಾನಗಳೂ ವಾಸವಾಗಿರುವುದನ್ನು ಕಾಣಬಹುದು. ಅಂಟಾರ್ಟಿಕಾ ಖಂಡದ ಎಲ್ಲಾ ಮಗ್ಗುಲುಗಳನ್ನೂ ಈ ಸಿನೆಮಾ ಪದರು ಪದರಾಗಿ ಬಿಡಿಸಿ ತೋರುತ್ತಿತ್ತು. ಹಸ್ಕೀಸ್ ಎಳೆಯುತ್ತಿದ್ದ ಸ್ನೊ ಸ್ಲೆಡ್ಜ್, ಅಂತಹ ಹಿಮಗಡ್ಡೆಗಳ ನಡುವೆ ವಿಜ್ಞಾನಿಗಳಿಗೆ ನೆರವಾಗುತ್ತಿದ್ದ ಅ ಶ್ವಾನಗಳನ್ನು ಕಂಡಾಗ ಹೆಮ್ಮೆಯಾಗಿತ್ತು. ಈ ಪ್ರದೇಶದಲ್ಲಿ ಮಾಡಿದ ಮೊಟ್ಟ ಮೊದಲ ಡಾಕ್ಯುಮೆಂಟರಿ ಸಿನೆಮಾ ಇದು. ಸಾವಿರಾರು ವರ್ಷಗಳ ಹಿಂದೆ ಇದ್ದ ಚಿತ್ರಣದ ಜೊತೆಜೊತೆಗೇ ಬದಲಾಗುತ್ತಿರುವ ಹವಾಮಾನದಿಂದ ಉಂಟಾಗುತ್ತಿರುವ ಅನಾಹುತಗಳ ವಿವರಗಳೂ ಇಲ್ಲಿದ್ದವು.
ನಮ್ಮ ಮುಂದಿನ ಸವಾರಿ ಅಂಟಾರ್ಟಿಕಾದ ತಗ್ಗು ದಿಬ್ಬಗಳಲ್ಲಿ ಓಡುವಂತಹ ‘ಹ್ಯಾಗ್ಲಂಡ್’ ಎಂಬ ವಾಹನ. ಈ ವಾಹನ ಯುದ್ಧಗಳಲ್ಲಿ ಬಳಸುವ ಟ್ಯಾಂಕರ್ಗಳನ್ನು ಹೋಲುತಿತ್ತು. ಒಂದು ಕ್ಷಣ ಈ ವಾಹನ ಸವಾರಿ ಮಾಡದಿರುವುದೇ ಒಳಿತು ಎಂಬ ಭಾವ, ಮತ್ತೊಂದು ಕ್ಷಣ ಛೇ, ಇಲ್ಲಿವರೆಗೆ ಬಂದವಳು ಈ ಸವಾರಿಯನ್ನು ಮಾಡಲೇಬೇಕು ಎಂಬ ಛಲ. ಅಂತು ಇಂತೂ ವಾಹನದ ಹಿಂಬದಿಯಲ್ಲಿ ಕುಳಿತ ಐವರ ಜೊತೆಯಲ್ಲಿ ಆರನೆಯವಳಾಗಿ ಕುಳಿತೆ. ವಾಹನದ ಚಾಲಕನು ನಿಧಾನವಾಗಿ ಹೊರಟ, ಇದೇನು ಮಹಾ, ನಮ್ಮ ನಾಡಿನ ರಸ್ತೆಗಳಲ್ಲಿ ಓಡಾಡುವಾಗ ಇದಕ್ಕಿಂತ ಹೆಚ್ಚಿನ ಧಡಕಿ ಅಗುತ್ತಲ್ವಾ ಎಂದು ಎಲ್ಲರ ಜೊತೆ ನಗುತ್ತಾ ಸಾಗಿದೆ. ಚಾಲಕನು ಇದ್ದಕ್ಕಿದ್ದ ಹಾಗೆ ವಾಹನದ ವೇಗ ಹೆಚ್ಚಿಸಿದ, ರೊಯ್ ಎಂದು ಹೊರಟ ಗಾಡಿ ಎತ್ತರವಾದ ದಿಬ್ಬ ಏರಿತ್ತು. ಮುಂದೆ ನೋಡಿದರೆ ಜಾರು ಬಂಡಿಯ ಹಾಗಿದ್ದ ಪ್ರಪಾತ. ಸುಯ್ ಎಂದು ಗಾಡಿ ಕೆಳಕ್ಕೆ ಉರುಳಿತ್ತು. ನಾವೆಲ್ಲಾ ಜೋರಾಗಿ ಚೀರಿದೆವು. ಮತ್ತೆ ಬಲಬದಿಗೆ ತಿರುಗಿ ಗುಂಡಿಗಳಿದ್ದ ರಸ್ತೆಗಳಲ್ಲಿ ವೇಗವಾಗಿ ಓಡಿಸಿದ. ಹೀಗೆ ಇಪ್ಪತ್ತು ನಿಮಿಷಗಳ ಕಾಲ ಕಾಡು ರಸ್ತೆಗಳಲ್ಲಿ ವಾಹನವನ್ನು ಓಡಿಸಿದ ಅಲ್ಲ ಹಾರಿಸಿದ. ಹ್ಯಾಗ್ಲಂಡ್ನ ಸಂಚಾರ ಮುಗಿದಿತ್ತು. ಅಂಟಾರ್ಟಿಕಾದಲ್ಲಿ ಓಡಾಡಿದ ಅನುಭವ ನಮ್ಮಲ್ಲಿ ಉಲ್ಲಾಸ ಲವಲವಿಕೆ ಮೂಡಿಸುವುದರ ಜೊತೆಜೊತೆಗೇ ಅಂಟಾರ್ಟಿಕಾದ ಗ್ಲೇಸಿರ್ಸ್ಗಳನ್ನು ಸಂರಕ್ಷಿಸುವ ಜವಾಬ್ದಾರಿಯ ಅರಿವೂ ಮೂಡಿತ್ತು. ಅಲ್ಲಿ ಬರೆಯಲಾಗಿದ್ದ ವಾಕ್ಯಗಳು ಅಂತರಾಳದಲ್ಲಿ ಸೆರೆಯಾದವು, ‘ನಮ್ಮ ಅಂಟಾರ್ಟಿಕಾದ ಸುಂಟರಗಾಳಿಯಲ್ಲಿ ಚಳಿ ಚಳಿ ಎನ್ನಿರಿ, ಹ್ಯಾಗ್ಲಂಡ್ ನಲ್ಲಿ ವಿಹರಿಸಿ ಉತ್ಸಾಹದ ನಗೆ ಬೀರಿ, ಪೆಂಗ್ವಿನ್ ಮತ್ತು ಹಸ್ಕೀಸ್ ಜೊತೆ ಸ್ನೇಹ ಬೆಳೆಸಿ. ಜಗತ್ತಿನ ಹವಾಮಾನ ವೈಪರೀತ್ಯಗಳನ್ನು ಗಮನಿಸಿ, ಭವಿಷ್ಯದ ಬಗ್ಗೆ ಜಾಗೃತಿ ಇರಲಿ’.
‘ಅಂತರ್ ರಾಷ್ಟ್ರೀಯ ಅಂಟಾರ್ಟಿಕಾ ಕೇಂದ್ರ’ ನಮ್ಮ ನ್ಯೂಝೀಲ್ಯಾಂಡ್ ಪ್ರವಾಸದ ಕೊನೆಯ ಹೆಜ್ಜೆಯಾಗಿತ್ತು. ಕ್ರೈಸ್ಟ್ ಚರ್ಚಿನ ವಿಮಾನ ನಿಲ್ದಾಣದಿಂದ ಹೊರಟು ಮಲೇಶಿಯಾ ಮಾರ್ಗವಾಗಿ ಬಾಂಬೆಯ ವಿಮಾನ ನಿಲ್ದಾಣಕ್ಕೆ ಪಯಣಿಸಬೇಕಿತ್ತು. ಆದರೆ ಮಲೇಶಿಯಾ ಏರ್ಲೈನ್ಸ್ ಸುಮಾರು ಎಂಟುಗಂಟೆ ತಡವಾಗಿ ಬಂತು. ವಿಮಾನವು ಮಲೇಶಿಯಾ ರಾಜಧಾನಿ ಕೌಲಾಲಂಪರ್ ತಲುಪುವ ಹೊತ್ತಿಗೆ ನಾವು ಪಯಣಿಸಬೇಕಿದ್ದ ಬಾಂಬೆಗೆ ಹೋಗಬೇಕಾಗಿದ್ದ ವಿಮಾನ ಹೊರಟುಹೋಗಿತ್ತು. ಮುಂದಿನ ವಿಮಾನದ ವ್ಯವಸ್ಥೆ ಆಗಬೇಕಾಗಿತ್ತು. ಹಾಗಾಗಿ ನಮಗೆ ಮಲೇಶಿಯಾ ವೀಸಾವನ್ನು ಆನ್ಲೈನಿನಲ್ಲಿ ಪಡೆದು ಒಂದು ಪಂಚತಾರಾ ಹೋಟೆಲಿಗೆ ಕರೆದೊಯ್ದರು. ನಾವಿದ್ದ ಕೊಠಡಿ ಮೂವತ್ತಮೂರನೇ ಅಂತಸ್ತಿನಲ್ಲಿತ್ತು. ನಾವು ವಿಶ್ರಾಂತಿ ಪಡೆದು, ಊಟ ಮುಗಿಸಿ ಮತ್ತೆ ಕೌಲಾಲಂಪುರ್ ವಿಮಾನ ನಿಲ್ದಾಣಕ್ಕೆ ಬಂದಿಳಿದೆವು. ಬಾಂಬೆ ತಲುಪುವ ಹೊತ್ತಿಗೆ ನಾವು ಬೆಂಗಳೂರಿಗೆ ಹೋಗಬೇಕಿದ್ದ ವಿಮಾನ ತಪ್ಪಿಹೋಗಿತ್ತು. ಮತ್ತೆ ನನ್ನ ಗೆಳತಿಯ ಮಗ ಕಾರ್ತಿಕ್ ನೆರವಿನಿಂದ ಮುಂದಿನ ವಿಮಾನದ ಟಿಕೆಟ್ ಪಡೆದು ಬೆಂಗಳೂರು ತಲುಪಿದೆವು.
ಈ ಪ್ರವಾಸದ ಸಮಯದಲ್ಲಿ ನಡೆದ ಮತ್ತೊಂದು ಮರೆಯಲಾಗದ ಸಂಗತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಮನಸ್ಸು ತವಕಿಸುತ್ತಿದೆ. ಪುಟ್ಟದೊಂದು ಬಾಳೆಹಣ್ಣು ಎರಡು ದಿನ ನಮ್ಮ ನಿದ್ದೆಯನ್ನೇ ಕೆಡಿಸಿತ್ತು. ನ್ಯೂಝೀಲ್ಯಾಂಡಿನ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡುವಾಗ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬಳು ನಾಯಿ ಹಿಡಿದು ಬಂದಳು. ಆ ನಾಯಿ ಎಲ್ಲರ ವಸ್ತುಗಳನ್ನೂ ಮೂಸಿ ನೋಡುತ್ತಾ ಬಂತು. ನನ್ನ ಗೆಳತಿ ಕೈಲಿದ್ದ ಬ್ಯಾಗಿನ ಬಳಿ ನಿಂತು ಬೊಗಳತೊಡಗಿತು. ಆ ಬ್ಯಾಗನ್ನು ತೆರೆದು ನೊಡಿದಾಗ ಕಂಡಿದ್ದು ಕಪ್ಪಾಗಿದ್ದ ಪುಟ್ಟದೊಂದು ಬಾಳೆಹಣ್ಣು. ತಕ್ಷಣ ಎತ್ತರವಾಗಿದ್ದ ಇಬ್ಬರು ಬಿಳಿಯ ಪೊಲೀಸರು ಬಂದು ಅವಳನ್ನು ಒಂದು ಕೊಠಡಿಗೆ ಕರೆದೊಯ್ದರು. ನಾನೂ ಗಾಬರಿಯಿಂದ ಅವಳ ಜೊತೆ ಹೋದೆ, ಅವರು ನನ್ನೆಡೆಗೆ ಪ್ರಶ್ನಾರ್ಥಕವಾಗಿ ನೋಡಿದಾಗ, ಅವಳಿಗೆ ಇಂಗ್ಲಿಷ್ ಬರುವುದಿಲ್ಲವೆಂದು ಸಬೂಬು ಹೇಳಿದೆ. ಅವಳ ಪಾಸ್ಪೋರ್ಟ್ ತೆಗೆದುಕೊಂಡು ಹೋದರು. ಅರ್ಧ ಗಂಟೆಯ ಬಳಿಕ ಬಂದು, ‘ಹಣ್ಣುಗಳನ್ನೂ ಹಾಗೂ ಯಾವುದೇ ಬಗೆಯ ಬೀಜಗಳನ್ನೂ ತರುವುದು ಶಿಕ್ಷಾರ್ಹ ಅಪರಾಧ’ ಎಂದು ತಿಳಿಸಿ ನಾನ್ನೂರು ಡಾಲರ್ಸ್ ದಂಡ ತೆರಬೇಕೆಂದು ತಿಳಿಸಿದರು. ನಾವು ಹತ್ತು ದಿನಗಳ ಕಾಲ ಕೇಸರಿ ಪ್ರವಾಸ ಸಂಸ್ಥೆಯೊಂದಿಗೆ ನ್ಯೂಝೀಲ್ಯಾಂಡಿನ ಪ್ರವಾಸಕ್ಕೆ ಬಂದಿದ್ದೇವೆ. ಈ ನೆಲದ ಕಾನೂನು ನಮಗೆ ಗೊತ್ತಿಲ್ಲದೆ ಬಾಳೆಹಣ್ಣನ್ನು ತಂದಿದ್ದೇವೆ, ಬೇರೆ ಮಾರ್ಗ ಏನಾದರೂ ಇದೆಯೇ ಎಂದು ಕೇಳಿದಾಗ ಅವರು ನೀವು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅಪೀಲ್ ಮಾಡಬಹುದು ಎಂದರು. ನಾನು ಅವರು ನೀಡಿದ ಅರ್ಜಿಯಲ್ಲಿ, ‘ನನಗೆ ಮಲಬದ್ಧತೆ ಇರುವುದರಿಂದ ನಮ್ಮ ವೈದ್ಯರ ಸಲಹೆಯಂತೆ ಊಟದ ನಂತರ ನಿತ್ಯ ಒಂದು ಬಾಳೆಹಣ್ಣು ತಿನ್ನುವ ಅಭ್ಯಾಸ ಇರುವುದರಿಂದ ಹಣ್ಣನ್ನು ತಂದೆ. ದಯಮಾಡಿ ಕ್ಷಮಿಸಿ’ ಎಂದು ಬರೆದು ಗೆಳತಿಯ ಸಹಿ ಹಾಕಿಸಿ, ಅರ್ಜಿ ಸಲ್ಲಿಸಿ, ವಿಮಾನ ನಿಲ್ದಾಣದ ಸಿಬ್ಬಂದಿಯಿಂದ ಅವಳ ಪಾಸ್ ಪೋರ್ಟ್ ಪಡೆದು. ‘ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು’ ಎಂದು ಹೇಳುತ್ತಾ ಹೊರಗೆ ಬಂದೆವು. ಎರಡು ದಿನದ ನಂತರ, ‘ನಿಮ್ಮ ಅರ್ಜಿಯನ್ನು ಕೋರ್ಟ್ ಗೆ ವರ್ಗಾಯಿಸಲಾಗಿದೆ, ಮೂರು ವಾರಗಳ ನಂತರ ತೀರ್ಪನ್ನು ನೀಡಲಾಗುವುದು’ ಎಂಬ ಸಂದೇಶ ಹೊತ್ತ ಇ-ಮೇಲ್ ಬಂತು. ನಾವು ಅಲ್ಲಿರುವ ಅವಧಿ ಕೇವಲ ಹತ್ತು ದಿನ ಇದ್ದು, ಅವರು ತೀರ್ಪು ನೀಡಲಿಕ್ಕೇ ಮೂರು ವಾರ ಬೇಕು ಎಂದಾಗ ಸಲೀಸಾಗಿ ಉಸಿರಾಡಿದೆವು. ಆದರೂ ಹತ್ತು ದಿನಗಳ ಪಯಣದುದ್ದಕ್ಕೂ ಈ ಬಾಳೆಹಣ್ಣಿನ ಪ್ರಸಂಗ ಆಗಾಗ್ಗೆ ನಮ್ಮ ನೆಮ್ಮದಿ ಕೆಡಿಸುತ್ತಿತ್ತು.
ಪ್ರವಾಸ ಮುಗಿದಿತ್ತು, ನಮ್ಮ ದೇಶಕ್ಕೆ ಮರಳಲು ವಿಮಾನ ನಿಲ್ದಾಣಕ್ಕೆ ಬಂದೆವು. ನಾವು ಮುಂಜಾಗ್ರತಾ ಕ್ರಮವಾಗಿ ಸ್ವಲ್ಪ ಹಣವನ್ನು ಬೆಂಗಳೂರಿನಿಂದ ಬಂದಿದ್ದ ‘ಪ್ರಸಾದ್ ಲೀಲಾವತಿ’ ದಂಪತಿಗಳಿಂದ ಕಡ ತೆಗೆದುಕೊಂಡು, ಒಟ್ಟು 400 ಡಾಲರ್ಗಳನ್ನು ಒಂದು ಕವರ್ನಲ್ಲಿ ಹಾಕಿ ರೆಡಿ ಇಟ್ಟಿದ್ದೆವು. ಅಕಸ್ಮಾತ್ ವಿಮಾನ ನಿಲ್ದಾಣದ ಸಿಬ್ಬಂದಿ, ‘ನೀವು 400 ಡಾಲರ್ ದಂಡ ಕಟ್ಟಿಯೇ ಹೋಗಬೇಕು’ ಎಂದು ತಕರಾರು ಮಾಡಿದರೆ ನಮ್ಮ ಬಳಿ ಹಣ ಸಿದ್ಧವಿತ್ತು. ನಮ್ಮ ಗೈಡ್ ಪರಿಚಯಿಸಿದ ಒಬ್ಬ ಮಹಿಳಾ ಅಧಿಕಾರಿಯ ಬಳಿ ‘ಬಾಳೆಹಣ್ಣಿನ ಪ್ರಸಂಗದ’ ವಿವರಗಳನ್ನು ತಿಳಿಸಿ ಮುಂದೆ ಏನು ಕ್ರಮ ಕೈಗೊಳ್ಳಲಾಗುವುದು ಎಂದು ವಿಚಾರಿಸಿದೆವು. ಅವಳು ನಮ್ಮನ್ನು ಮತ್ತೊಬ್ಬ ಅಧಿಕಾರಿಯ ಬಳಿ ಕೊಂಡೊಯ್ದು ಅವನ ಬಳಿ ಎಲ್ಲಾ ವಿವರಗಳನ್ನೂ ತಿಳಿಸಿದಳು. ಅವನು, ‘ಕೋರ್ಟ್ ಆದೇಶ ಬರಲು ಇನ್ನೂ ಸಮಯವಿರುವುದರಿಂದ, ಈಗಲೇ ಏನೂ ಕ್ರಮ ಕೈಗೊಳ್ಳಲಾಗುವುದಿಲ್ಲ. ಮುಂದೆ ನಿಮಗೆ ಇ-ಮೇಲ್ ಮೂಲಕ ವಿಷಯ ತಿಳಿಸಲಾಗುವುದು’ ಎಂದಾಗ ‘ಬದುಕಿದೆಯೇ ಬಡಜೀವವೇ” ಎಂದು ಕಛೇರಿಯಿಂದ ಹೊರಬಂದೆವು. ಮುಂದೆ ಅವರ ಇ-ಮೇಲ್ಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಮತ್ತೆ ನನ್ನ ಗೆಳತಿ ನ್ಯೂಝೀಲ್ಯಾಂಡಿಗೆ ಹೋದರೆ ಅವರು ಪ್ರಶ್ನಿಸಬಹುದು ಎಂದು ನಮ್ಮ ಗೈಡ್ ಹೇಳಿದ. ಒಮ್ಮೆ ನಾಲ್ಕು ಲಕ್ಷ ರೂಗಳನ್ನು ಕಟ್ಟಿ ಪ್ರವಾಸ ಹೋದವರು ಮತ್ತೆಲ್ಲಿ ಅದೇ ದೇಶಕ್ಕೆ ಹೋಗಲು ಸಾಧ್ಯವೇ ಎಂದು ಅನ್ನಿಸಿತ್ತು. ಮುಂದೆ ಈ ನಾಡಿಗೆ ಪ್ರವಾಸ ಹೋಗುವವರು ಸ್ವಲ್ಪ ಎಚ್ಚರಿಕೆ ವಹಿಸಲಿ ಎಂಬ ಭಾವದಿಂದ ಈ ಪ್ರಸಂಗವನ್ನು ನಿಮ್ಮ ಬಳಿ ಹಂಚಿಕೊಂಡಿದ್ದೇನೆ.
(ಮುಗಿಯಿತು)
ಈ ಪ್ರವಾಸಕಥನದ ಹಿಂದಿನಪುಟ ಇಲ್ಲಿದೆ: https://surahonne.com/?p=43552

–ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ
Beautiful. ಬಹಳ ಸೊಗಸಾಗಿ ಮೂಡಿ ಬಂತು ಪ್ರವಾಸ ಕಥನ. ಸುಂದರ ಜಾಗಗಳನ್ನು ನಿಮ್ಮ ಬರಹದ ಮೂಲಕ ದರ್ಶಿಸುವ ಭಾಗ್ಯ ನಮ್ಮದು. ಧನ್ಯವಾದಗಳು ಮೇಡಂ.
Thank you
ಪ್ರವಾಸ ಕಥನ ಸೊಗಸಾಗಿ ಹರಿದು ಬಂತು
ಚೆಲುವಿನ ನಾಡು ನ್ಯೂಝಿಲೆಂಡ್ ಪ್ರವಾಸ ಕಥನ.. ಸೊಗಸಾದ ನಿರೂಪಣೆ ಯಿಂದ..ನಮ್ಮ ಮನ ಸೆಳೆದಿದು ಮಾತ್ರವಲ್ಲ ನಾವು ಒಂದು ಸುತ್ತು..ನ್ಯೂಝಿಲೆಂಡ್ ಸುತ್ತಿ ಬಂದಹಾಗಾಯಿತು..ಮೇಡಂ..ಧನ್ಯವಾದಗಳು