ಲಹರಿ

ಎತ್ತೆಣಿಂದೆತ್ತ ಸಂಬಂಧವಯ್ಯಾ !- ಭಾಗ 1

Share Button

(ಮದ್ಯಪಾನದ ಸುತ್ತ ; ಬಂಧನಗಳ ಹುತ್ತ)

ಲೋಕದ ವಿದ್ಯಮಾನಗಳೇ ಬಲು ವಿಚಿತ್ರ. ಒಂದಕ್ಕೊಂದಕ್ಕೆ ಸಂಬಂಧವಿಲ್ಲದಂತೆ ಕಂಡರೂ ಆಲೋಚಿಸುತ್ತಾ ಹೋದರೆ ಎಲ್ಲವೂ ಸಹಸಂಬಂಧವೇ ಎನಿಸುವುದು. ಒಂದು ಬಟ್ಟೆಯ ನೇಯ್ಗೆಯಂತೆ. ಹಲವು ದಾರದ ಎಳೆಗಳು ಸೇರಿ ಅದು ವಸ್ತ್ರವಾಗಿದೆ. ವಸ್ತ್ರವನ್ನು ಬಳಸುವಾಗ ನಮಗೆ ಇದರ ಪರಿವೆಯೇ ಇರುವುದಿಲ್ಲ. ಎಲ್ಲಿಯೋ ಇದ್ದ ಯಾವುದೋ ಮರದ ‌ಕಚ್ಚಾಪದಾರ್ಥ, ಅದರಿಂದ ತಯಾರಿಸಿದ ನೂಲು, ಇನ್ನೆಲ್ಲಿಯೋ ಕಂಡು ಹಿಡಿದ, ಜೋಡಿಸಿದ ಸಾಗಣೆ ಮಾಡಿ ತಂದ ಯಂತ್ರಗಳು. ಇನ್ನಾರೋ ಸಿದ್ಧಪಡಿಸಿ ಡಬ್ಬಕ್ಕೆ ತುಂಬಿ ಕೊಟ್ಟ ಬಣ್ಣ. ಇದೆಲ್ಲವನ್ನೂ ಒಂದೆಡೆ ಇಟ್ಟುಕೊಂಡು ನೇಯ್ಗೆ ಮಾಡಿದ ನೇಕಾರರು. ಎಲ್ಲಿಯೋ ಮೋಡಕಟ್ಟಿ ಮಳೆಯಾದ ನೀರು ಹರಿದು, ಅದರಿಂದ ವಿದ್ಯುಚ್ಛಕ್ತಿ ಪಡೆದು, ಅದನ್ನು ಸಾಗಣೆ ಮಾಡಿ, ಆ ಯಂತ್ರಕ್ಕೆ ಜೋಡಿಸಿದ ತಾಂತ್ರಿಕತೆ! ಸಿದ್ಧವಾದ ಬಟ್ಟೆಯನ್ನು ಒಂದೆಡೆಯಿಂದ ಇನ್ನೊಂದೆಡೆ ತಂದು ಮಾರಾಟ ಮಾಡಿದ ಅಂಗಡಿಯವರು, ಹತ್ತಿ ಬೆಳೆದವರಿಗೆ ಗೊತ್ತಿಲ್ಲ, ಇದು ಎಲ್ಲಿಗೆ ಹೋಗುತ್ತದೆ? ಏನಾಗುತ್ತದೆ? ಇದರಿಂದ ತಯಾರಾದ ಬಟ್ಟೆಯನ್ನು ಯಾರು ಕೊಳ್ಳುತ್ತಾರೆ? ಕೊಂಡವರಿಗೂ ಗೊತ್ತಿಲ್ಲ. ಇದರ ಮೂಲವೇನು? ಅದು ಬೇಕಾಗಿಯೂ ಇಲ್ಲ! ಇದಲ್ಲವೇ ಲೋಕವೈಚಿತ್ರ‍್ಯ. ದುಡ್ಡು ಕೊಡುತ್ತೇವೆ, ಕೊಳ್ಳುತ್ತೇವೆ. ದರ್ಜಿಗೆ ನೀಡುತ್ತೇವೆ. ಬೇಕಾದ ರೀತಿಯಲ್ಲಿ ಹೊಲಿಸಿಕೊಳ್ಳುತ್ತೇವೆ. ನಮ್ಮದು ಎನ್ನುತ್ತೇವೆ. ಬಟ್ಟೆ, ಬಣ್ಣ, ಯಂತ್ರ, ನೇಕಾರಿಕೆ, ಮಾರಾಟ, ಸಾಗಣೆ, ದರ್ಜಿ ಹೀಗೆ ಎತ್ತಣಿದೆತ್ತ ಸಂಬಂ? ಅತ್ತಣದೇ ಸಂಬಂಧ. ಹಾಗೆಯೇ ನಾವು ವಾಸ ಮಾಡುವ ಮನೆಯೂ! ಎಲ್ಲಿಯದೋ ಕಲ್ಲು, ಯಾವುದೋ ಜಾಗದ ಮಣ್ಣಿನಿಂದ ಮಾಡಿದ ಇಟ್ಟಿಗೆ. ಎಲ್ಲೋ ಬೆಳೆದಿದ್ದ ಮರಮುಟ್ಟು, ಇನ್ನೆಲ್ಲಿಯೋ ಉತ್ಪಾದನೆಯಾದ ಸಿಮೆಂಟು, ಯಾವುದೋ ನದೀತೀರದ ಮರಳು! (ಈಗಷ್ಟೇ ಇದಕ್ಕೆ ಪರ್ಯಾಯ ಲಭಿಸಿ, ಮರಳಿನ ರಕ್ಷಣೆ ನಡೆದಿದೆ) ಎಲ್ಲವೂ ಒಟ್ಟಾಗಿ ಕುಶಲವಂತರಿಂದ ಕಟ್ಟಲ್ಪಟ್ಟ ಮನೆ. ಅದರಲ್ಲಿ ನಾವು ವಾಸಿಸುತ್ತೇವೆ. ನಮ್ಮದು ಎನ್ನುತ್ತೇವೆ. ಸ್ವಲ್ಪ ವಿಭಿನ್ನವಾಗಿ ವಿಚಾರಿಸಿ ನೋಡಿದರೆ ಈ ಲೋಕದ್ದೆಲ್ಲವೂ ಸಹಸಂಬಂಧವೇ! ನಮ್ಮ ಅಲ್ಲಮಪ್ರಭುದೇವರು ಉದ್ಗರಿಸಿದಂತೆ, ‘ಎತ್ತಣ ಮಾಮರ, ಎತ್ತಣ ಕೋಗಿಲೆ! ಎತ್ತಣಿಂದೆತ್ತ ಸಂಬಂಧವಯ್ಯಾ? ಸಮುದ್ರದೊಳಗಣ ಉಪ್ಪು, ಬೆಟ್ಟದ ನೆಲ್ಲೀಕಾಯಿ, ಎತ್ತಣಿಂದೆತ್ತ ಸಂಬಂಧ!?’ ಆತ ಕೇಳುವ ಪ್ರಶ್ನೆಯಲ್ಲೇ ಉತ್ತರವಿದೆ. ಆ ಉತ್ತರದಲೊಂದು ಎತ್ತರವಿದೆ. ಮೇಲು ಮೇಲೆ ಬದುಕಿದರೆ ಲೋಕವಿಚಿತ್ರ; ಒಳಗಿಳಿದು ನೋಡಿದರೆ ಸೂತ್ರದೊಳಗೇ ಸುತ್ತಾಡುವ ಲೋಕಸಚಿತ್ರ ! ಕೊನೆಗಾತ ಉದ್ಗರಿಸುವರು: ‘ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ?’ ಅಲ್ಲವೇ? ಅಂಥ ಗುಹೇಶ್ವರನ ಮೂಲಕ ಅಲ್ಲಮರು ನಮಗೆ ಕಲಿಸುವ ಪಾಠ ಎಂಥದು? ನಮಗೂ ಅಲ್ಲಮರಿಗೂ ಎತ್ತಣದ ಅನುಬಂಧ!? ಹೀಗೆ ಕೇಳಿಕೊಳ್ಳುತ್ತಾ ಹೇಳಿಕೊಳ್ಳುತ್ತಾ ಹೋದರೆ ಋಣದ ಪರಿಕಲ್ಪನೆ ಧುತ್ತನೆ ಅವತರಿಸುತ್ತದೆ. ‘ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ!’ ನಮಗೆ ದೊರೆಯುವ ಪ್ರತಿಯೊಂದೂ ಹಿಂದಿನ ಮತ್ತು ಮುಂದಿನ ಜನುಮಗಳ ಕೊಂಡಿಯೇನೋ ಎನಿಸಿ ಬಿಡುತ್ತದೆ. ಬಂಧುತ್ವ ಒಂದು ಕಡೆ ಇರಲಿ, ಮಿತ್ರತ್ವ ಕೂಡ ಇಂಥದೊಂದು ಬಂಧವೇ. ಸಾಮಾನ್ಯವಾಗಿ ಬಂಧುತ್ವದಲ್ಲಿ ಅಂಥದೊಂದು ಆತ್ಮೀಯತೆ ಇರದು. ಆದರೆ ಸ್ನೇಹತ್ವದಲ್ಲಿ ಇದು ನಳನಳಿಸುತ್ತಿರುತ್ತದೆ. ಒಂದು ಪಕ್ಷ ಸ್ನೇಹವು ಬಂಧುತ್ವಕ್ಕೆ ತಿರುಗಿದರೆ ಅಂಥಲ್ಲಿ ಸ್ನೇಹದ ಸೊಗಸು ಮಾಯವೂ ಆಗಿಬಿಡಬಹುದು. ಈ ವಿಚಾರವನ್ನು ಇಲ್ಲೇಕೆ ಪ್ರಸ್ತಾಪಿಸಿದೆನೆಂದರೆ, ದುರಭ್ಯಾಸ ಇರುವವರಲ್ಲಿ ಇರುವ ಗೆಳೆತನದ ಸಖ್ಯ ಅನೂಹ್ಯವಾದುದು. ಪ್ರಾಣ ಕೊಟ್ಟಾದರೂ ಸರಿ, ಜೀವ ಉಳಿಸುವ ಖದರು ಇದರದು. ಬಹುಶಃ ತಪ್ಪುಗಳಲ್ಲಿ ಸಮಾನಾಧಿಕಾರ ಇರುವುದರಿಂದಲೋ ಏನೋ ಇಂಥವರಲ್ಲಿ ಅಂಡರ್‌ಸ್ಟ್ಯಾಂಡಿಂಗ್ ಸಹ ಅಗಾಧ. ‘ಧೂಮಪಾನ ಮತ್ತು ಮದ್ಯಪಾನಗಳು ಆರೋಗ್ಯಕ್ಕೆ ಹಾನಿಕಾರಕ’ ಎಂಬುದನ್ನು ಎಲ್ಲರೂ ಬಲ್ಲರು. ಆದರೆ ಇಂಥ ಅಭ್ಯಾಸಿಗಳ ನಡುವೆ ಒಂದು ಬಗೆಯ ಪ್ರೇಮಭರಿತ ಸ್ನೇಹ ಇರುವುದನ್ನು ಬಲ್ಲವರೇ ಹೇಳಬೇಕು. ಸಮಾನಾಸಕ್ತಿಎಂಬುದೇ ಸ್ನೇಹದ ಅಳತೆಗೋಲು ಎನ್ನುವುದಾದರೆ ತಕ್ಷಣ ನೆನಪಿಗೆ ಬರುವುದು ಇಂಥ ವ್ಯಕ್ತಿಗಳೇ. ನನ್ನ ಆಲೋಚನೆಯೆಂದರೆ ಈ ಅಭ್ಯಾಸ ಇಲ್ಲದವರನ್ನು ಇತರ ಸಂಗತಿಗಳಲ್ಲಿ ಅದೆಷ್ಟೇ ಸಮಾನಾಸಕ್ತಿ ಇದ್ದರೂ ಅಂಥವರು ತೀರಾ ಸಮೀಪಕ್ಕೆ ಬಿಟ್ಟುಕೊಳ್ಳುವುದಿಲ್ಲ ಎಂಬುದು. ಅವರನ್ನು ಇವರೂ ಇವರನ್ನು ಅವರೂ ಒಂದು ಬಗೆಯ ದೂರೀಕರಣದಲ್ಲೇ ಇಟ್ಟು ನೋಡಲಾಗಿ, ದೂರ ಮತ್ತು ದೂರು ಎರಡೂ ಸಾಂಗವಾಗಿ ಸಂಭವಿಸುತ್ತಿರುತ್ತವೆ. ಇಲ್ಲೊಂದು ವಿಚಾರವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅದೆಂದರೆ ಇಂಥ ಅಭ್ಯಾಸಪ್ರಿಯರು ಬೇರೆ; ವ್ಯಸನಿಗಳು ಬೇರೆ ಎಂಬುದು. ಕೋವಿಡ್ ಸಂದರ್ಭದಲ್ಲಿ ಈ ವ್ಯತ್ಯಾಸ ಇನ್ನಷ್ಟು ಸ್ಪಷ್ಟಗೊಂಡಿತು. ಎಣ್ಣೆಯಂಗಡಿ ಮುಂದೆ ಕ್ಯೂ ನಿಂತು ಕಾದು, ಬದುಕಿನ ಅಮೂಲ್ಯವಾದ ಅಮೃತವನ್ನೇ ಗಳಿಸಿ ಗೆದ್ದಂತೆ ಬೀಗಿದವರು ಮದ್ಯಪ್ರಿಯರಲ್ಲ; ಮದ್ಯವ್ಯಸನಿಗಳು! ಒಂದು ದಿನವೂ ಬಿಟ್ಟಿರಲಾರದಂಥ ಬಂಧ ಇಂಥವರದು. ಮದ್ಯವ್ಯಸನಿಗಳೆಲ್ಲರೂ ಮದ್ಯಪ್ರಿಯರೇ. ಆ ಮಟ್ಟಿಗೆ ಇಷ್ಟಪಟ್ಟಿದ್ದರಿಂದಲೇ ಅವರು ವ್ಯಸನಿಗಳಾದದ್ದು! ಆದರೆ ಮದ್ಯಪ್ರಿಯರೆಲ್ಲರೂ ಮದ್ಯವ್ಯಸನಿಗಳಲ್ಲ! ಇವರು ಅಕೇಷನಲಿ ಡ್ರಿಂಕರ್ಸ್. ಅದೂ ಒತ್ತಾಯ ಮಾಡಿದರೆ, ಗೆಳೆಯರು ಗುಂಪುಗೂಡಿದರೆ, ಬ್ಯುಸಿನೆಸ್ ಮೀಟಿಂಗ್, ಲಕ್ಷ-ಕೋಟಿ ವ್ಯಾಪಾರ ವಹಿವಾಟು ವ್ಯವಹಾರ ನಿಮಿತ್ತಂ, ಸಂತೋಷಕೂಟ-ಪಾರ್ಟಿ ಇತ್ಯಾದಿ ಕಲಾಕಾರರ ಒಕ್ಕೂಟ! ಸಾಧನೆಯ ಚೀತ್ಕಾರ-ಝೇಂಕಾರ ಜರ್ಜರಿತ!! ಯಾರು ಸಿಗಲಿ, ಬಿಡಲಿ, ಆ ವೇಳೆಗೆ ಬೇಕೆನಿಸಿ, ಒಬ್ಬರೇ ಆದರೂ ಸರಿಯೆಂದು ತೀರ್ಮಾನಿಸಿ ಗಟಗಟನೆ ಗಂಟಲಿಗೆ ಸುರುವಿಕೊಳ್ಳುವ ಹೆಂಡಕುಡುಕರೇ ಮದ್ಯವ್ಯಸನಿಗಳು. ಮದ್ಯವರ್ಜನ ಶಿಬಿರಗಳಲ್ಲಿ ದಾಖಲಾಗಿ ಚಟ ಬಿಡಿಸಿಕೊಳ್ಳಲು ಲಾಯಕ್ಕಾದ ನಿಶಾಜೀವಿಗಳು. ನಾನು ಇಂಥ ದುರ್ವ್ಯಸನಿಗಳ ಬಗ್ಗೆ ಮಾತಾಡುತ್ತಿಲ್ಲ; ಮದ್ಯಪ್ರಿಯರ ಸ್ನೇಹೌದಾರ್ಯ ಕುರಿತು ಮಾತಾಡಲು ಹೊರಟಿರುವೆ. ಇಂಥವರ ಗೋಸುಂಬೆತನದ ಸ್ವರೂಪವನ್ನು ಮನಗಾಣಿಸಲು ಮನಸಾಗಿರುವೆ. ಆ ಮೂಲಕ ಮದ್ಯಪಾನದ ಸುತ್ತ ಹೆಣೆದುಕೊಂಡ ಬಂಧಗಳ ಹುತ್ತದೊಳಗೆ ಇಣುಕಿ ನೋಡುತ್ತಿರುವೆ.

ಹಾಗೆ ನೋಡಿದರೆ ಈ ಆಲ್ಕೋಹಾಲಿಗರಿಗೂ ಸ್ನೇಹ-ಪ್ರೀತಿ-ಮಮತೆ-ಸೇವೆ-ಸಹಾಯಕ್ಕೂ ವಿಪರೀತ ನಂಟು. ಜೀವಕ್ಕೆ ಜೀವ ಕೊಡುವ ಮತ್ತು ಜೀವ ಬಿಡುವ ಮಾತಾಡುವ ಇವರು ತಮ್ಮ ಕಕ್ಷೆಯಲ್ಲಿ ‘ಯಾರು ಇದ್ದಾರೆ; ಯಾರು ಇರಬೇಕು? ಯಾರನ್ನು ಸೇರಿಸಿಕೊಳ್ಳಬೇಕು?’ ಎಂದು ಸದಾ ಆಯ್ಕೆ ಪ್ರಕ್ರಿಯೆಯಲ್ಲಿ ಬಸವಳಿಯುತ್ತಿರುತ್ತಾರೆ. ಏನೇ ಆದರೂ ಹೋದರೂ ಕುಡಿಯದ ಮಂದಿಯನ್ನು ಇವರು ಒಂದು ಅಂತರದಲ್ಲಿಟ್ಟೇ ವ್ಯವಹರಿಸುತ್ತಾರೆ. ಮೂರ‍್ನಾಲ್ಕು ಜನರು ಒಟ್ಟಿಗಿದ್ದು ಮಾತಾಡುವಾಗ ಅವರಲ್ಲಿ ಒಬ್ಬ ಕುಡಿಯದ ಮನುಷ್ಯನಿದ್ದರೆ ಉಳಿದ ಮೂವರು ಕಣ್ಣುಸನ್ನೆ, ಬಾಯಿಸನ್ನೆಗಳಲ್ಲೇ ಕೋಡಿಂಗುಗಳನ್ನು ಡೆಲಿವರಿ ಮಾಡಿ, ಆ ಕುಡಿಯದ ಪಾಪಿ ಪರದೇಸಿಯು ಹೋಗುವತನಕ ತಮ್ಮ ಅಂತರಂಗದ ಮಾತು ಮತ್ತು ಪ್ಲಾನುಗಳನ್ನು ಕುರಿತು ಚರ್ಚಿಸುವುದಿಲ್ಲ. ಜೊತೆಗೆ ಯಾವ ಕಾರಣಕ್ಕೂ ತಮ್ಮ ಮೀನಿನ ಹೆಜ್ಜೆ ಗುರುತುಗಳು ಗೊತ್ತಾಗಬಾರದೆಂದು ಹರಸಾಹಸ ಪಟ್ಟು, ಮೇಲುನೋಟಕ್ಕೆ ಸಹಜವಾಗಿ ಮಾತಾಡುತಿದ್ದರೂ ಒಳಗೊಳಗೆ ಕೈ ಕೈ ಹಿಸುಕಿಕೊಳ್ಳುತ್ತಿರುತ್ತಾರೆ. ಅಂದರೆ ಕುಡಿಯದ ಆ ವ್ಯಕ್ತಿ ಅದೆಷ್ಟು ಮುಖ್ಯವಾದ ಗೌರವಾರ್ಹವಾದ ಸ್ನೇಹಜೀವಿಯಾದರೂ ಮನಸು ಬಿಚ್ಚಿ ಮಾತಾಡಲು ಇನ್ನೋರ್ವ ಆಲ್ಕೋಹಾಲಿಗರನ್ನೇ ಹುಡುಕಿಕೊಳ್ಳುವರು. ಇವರ ದೃಷ್ಟಿಯಲ್ಲಿ ಎರಡೇ ವಿಧ: ತೆಗೆದುಕೊಳ್ಳುವವರು ಮತ್ತು ತೆಗೆದುಕೊಳ್ಳುವ ಅಭ್ಯಾಸ ಇಲ್ಲದವರು ಅಷ್ಟೇ! ಇವರ ಸೈಕಾಲಜಿಯನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಏಕೆಂದರೆ ಕುಡಿದು ಕಿಕ್ ಏರಿಸಿಕೊಳ್ಳಲು ಬಯಸುವ ಈ ಜನರು ಅಷ್ಟು ಸುಲಭವಾಗಿ ಮದ್ಯಪಾನವಿರೋಧಿಗಳನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಬಿಟ್ಟುಕೊಂಡರೂ ಎಷ್ಟು ಬೇಕೋ ಅಷ್ಟೇ! ಇಷ್ಟಕೂ ‘ಅವರವರ ಅಭ್ಯಾಸ ಅವರವರಿಗೆ, ನಮಗೆ ಆ ಆಭ್ಯಾಸವಿಲ್ಲ’ ಎಂದು ತಮ್ಮ ಪಾಡಿಗೆ ತಾವು ಬದುಕುತ್ತಿದ್ದರೂ ಕುಡಿಯುವ ಮಂದಿಗೆ ಅದೇನೋ ಅಳುಕು ಮತ್ತು ಅಂಜಿಕೆ. ತಮಗೇ ಗೊತ್ತಿಲ್ಲದ ತಮ್ಮೊಳಗಿನ ಕೀಳರಿಮೆಯನ್ನು ಮೀರಲು ವ್ಯರ್ಥ ಸಾಹಸ ಪಡುತ್ತಿರುತ್ತಾರೆ. ಅವರುಗಳ ‘ಪಾರ್ಟಿ ಅನುಭವ’ಗಳಿಂದಾಚೆ ಬದುಕುವ ಮಂದಿಯಿಂದ ಅಂತರ ಕಾಪಾಡಿಕೊಳ್ಳುತ್ತಾ, ಕಣ್ಣಲ್ಲೇ ಕಳವಳಿಸುತ್ತಾರೆ; ಕುಡಿಯುವ ತಮ್ಮ ಸ್ನೇಹಿತರಿದ್ದರೆ ಕಣ್ಣಲ್ಲೇ ಕಾತರರಾಗುತ್ತಾರೆ; ಯಾವಾಗ ಸೇರಬಹುದು ಎಂಬ ಭವಿಷ್ಯದ ಪ್ಲಾನು ತಲೆಯಲ್ಲಿ ಸುತ್ತುತ್ತಿರುತ್ತದೆ. ವ್ಯಾಕರಣದಲ್ಲಿ ಅಸಂಬಂಧ ಸಂಬಂಧ ಅಂತ ಒಂದಿದೆ. ಸಂಬಂಧವಿಲ್ಲದಿದ್ದರೂ ಒಂದು ಬಗೆಯ ಸಂಬಂಧವು ಪದ ಪ್ರತ್ಯಯಗಳ ನಡುವೆ ಇದ್ದು, ಅವನ್ನು ಶೂನ್ಯ ಧ್ವನಿಮಾ ಎಂತಲೂ ಗುರುತಿಸುವರು. ಈ ರೀತಿಯಲ್ಲಿ ಕುಡಿಯುವ ಮತ್ತು ಕುಡಿಯದ ಮಂದಿಯ ನಡುವೆ ಇಂಥದೊಂದು ಅಸಂಬಂಧ ಸಂಬಂಧ ಚಾಲ್ತಿಯಲ್ಲಿರುತ್ತದೆ. ಕೆಲವೊಂದು ವಿಶೇಷ ಸಂದರ್ಭಗಳು ಎದುರಾದಾಗ ಕುಡಿಯುವ ಮಂದಿಯ ನಡುವಿನ ಆಪ್ತತೆ ಮತ್ತು ಆತ್ಮೀಯತೆಗಳು ಗರಿಗೆದರುತ್ತವೆ. ಒಟ್ಟಿನಲ್ಲಿ ಕುಡಿಯದ ಮಂದಿಯನ್ನು ದೂರವೇ ಇಟ್ಟು ಬದುಕುತ್ತಿರುತ್ತಾರೆ. ‘ನೀವು ನಮ್ಮ ಆಪ್ತವಲಯಕ್ಕೆ ಬರಬೇಕಾದಲ್ಲಿ ಕುಡಿಯುವುದನ್ನು ಕಲಿಯಬೇಕು’ ಎಂಬ ಒತ್ತಾಯವಿಲ್ಲದಿದ್ದರೂ ಅಪೇಕ್ಷೆಯೊಂದನ್ನು ಸದ್ದಿಲ್ಲದೇ ರವಾನಿಸುತ್ತಿರುತ್ತಾರೆ. ಹೀಗೆ ಈ ಜಗತ್ತಿನಲ್ಲಿ ಎಂಥೆಂಥದೋ ಸಂಬಂಧಗಳು ಗುಪ್ತವಾಗಿಯೂ ಸುಪ್ತವಾಗಿಯೂ ಇದ್ದು, ಕೊನೆಗೆ ‘ಸಂಬಂಜ ಅನ್ನೋದು ದೊಡ್ದು ಕನಾ’ ಎಂಬ ಕುಸುಮಬಾಲೆ ಕಾದಂಬರಿಯಲ್ಲಿ ಬರುವ ಉದ್ಗಾರವನ್ನು ನೆನೆದು ‘ನೆಪಗಳು ಏನೇ ಇರಲಿ, ಮಾನವೀಯ ನೆನಪು ಮುಖ್ಯ’ ಎಂದು ತೀರ್ಮಾನಿಸುವ ಹೊತ್ತಿಗೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಿರುತ್ತೇವೆ. ಬದುಕೇ ಹಾಗೆ; ನೆನಪುಗಳ ಸರಮಾಲೆ. ಹಲವು ರೀತಿಯ ಮಣಿಗಳು ದಾರವೊಂದರ ನೆರವಿನಿಂದ ಒಂದೆಡೆ ಕೂಡಿಕೊಂಡಂತೆ. ಮದ್ಯಪಾನಪ್ರಿಯರು ಹೀಗೆ ತಮ್ಮ ಒಂದೊಂದೂ ಪಾರ್ಟಿಯನ್ನು ಆಯಾಚಿತವಾಗಿ ಮತ್ತು ಸಹಜವಾಗಿ ನೆನಪಿನ ಕೋಶದಲ್ಲಿ ಭದ್ರವಾಗಿ ಇಟ್ಟುಕೊಂಡು, ಆಗಾಗ ಅವನ್ನು ಬತ್ತಳಿಕೆಯಿಂದ ಬಾಣ ತೆಗೆದಂತೆ ಒಂದೊಂದನ್ನೇ ಈಚೆ ಎಳೆದು ಪ್ರಯೋಗಿಸಿ, ಅಂಥದೊಂದು ಪಾರ್ಟಿಯ ವಿಶೇಷತೆಯನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ‘ಆಲ್ಕೋಹಾಲ್ ಇಲ್ಲದಿದ್ದರೆ ಇಂಥ ವಿಶೇಷಗಳು ಗೊತ್ತಾಗುತ್ತಿತ್ತೇ?’ ಎಂಬ ಅವ್ಯಕ್ತದನಿ ಮಾತಾಗಿ ಪದಗಳ ಹಂಗಿಗೆ ಸಿಲುಕದೇ ಹೋದರೂ ದೇಹದ ಆಂಗಿಕ ಅಭಿನಯ, ಹಾವಭಾವಗಳ ಮೂಲಕವೇ ಮುಟ್ಟಿಸುತ್ತಿರುತ್ತಾರೆ. ಅಷ್ಟರಮಟ್ಟಿಗೆ ಅವರು ಗ್ಲಾಸುಗಳಿಗೂ ಬಾಟಲಿಗಳಿಗೂ ಗೌರವ ಕೊಡುವವರು.

ಕುಡಿಯುವವರಿಗೆ ಮದ್ಯಪಾನ ಅಮೃತಕ್ಕೆ ಸಮಾನ. ಜೊತೆಗೆ ‘ಸರ್ವರೋಗಕ್ಕೂ ಸಾರಾಯಿ ಮದ್ದು’ ಎಂಬ ಸೂಕ್ತಿಯನ್ನು ಪುನರುಚ್ಚರಿಸಿ, ನಮ್ಮಿಂದ ದೇಶದ ಅರ್ಥವ್ಯವಸ್ಥೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಬೀಗುತ್ತಾರೆ. ಸಿರಿವಂತರು ಮೋಜು ಮಸ್ತಿಯ ಒಂದು ಭಾಗವಾಗಿ ನೋಡಿದರೆ, ಶ್ರಮಜೀವೀ ದೈಹಿಕ ಕೆಲಸಗಾರರು ನಮ್ಮ ಪಾಲಿನ ‘ರಾತ್ರಿಯೌಷಧ’ ಎಂದು ಸಮರ್ಥಿಸಿಕೊಳ್ಳುತ್ತಾರೆ. ಇವರಿಬ್ಬರ ನಡುವೆ ಮದ್ಯಪಾನಪ್ರಿಯರಾದವರು ‘ಸುರಾಪಾನವು ಜೀವನದ ಸೌಂದರ್ಯವನ್ನು ಹೆಚ್ಚಿಸುವ ಶೃಂಗಾರ ಪ್ರಸಾಧನವಿದ್ದಂತೆ’ ಎಂದು ಹೇಳುತ್ತಾ, ‘ಇಂಟಿಮಸಿ ಇರುವುದೇ ಈ ಕಾರಣಕ್ಕೆ’ ಎಂದು ಪ್ರತಿಪಾದಿಸುತ್ತಾರೆ. ಮದ್ಯಪಾನವೆಂಬುದೊಂದು ಬಹು ದೊಡ್ಡ ಇಂಡಸ್ಟ್ರಿ. ಜೊತೆಗೆ ಸಶಕ್ತ ಲಾಬಿ. ಸಾವಿರ ಲಕ್ಷ ಕೋಟಿ ಜನರು ಡಿಸ್ಟಿಲರೀಸ್‌ನಿಂದಾಗಿ ಉದ್ಯೋಗ ಪಡೆದಿದ್ದಾರೆ. ಅದರ ಉತ್ಪಾದನೆ, ಕಚ್ಚಾವಸ್ತುಗಳ ಪೂರೈಕೆ, ಸಾಗಣೆ, ಮಾರಾಟಜಾಲ, ಸಗಟು ವ್ಯಾಪಾರದಿಂದ ಚಿಲ್ಲರೆ ವ್ಯಾಪಾರದವರೆಗೆ ಜೇಡರಬಲೆಯಂತೆ ಹೆಣೆದುಕೊಂಡು, ಈ ಮೂಲಕ ಸರ್ಕಾರಗಳಿಗೆ ದೊರಕುವ ಅಬ್ಕಾರಿ ತೆರಿಗೆ ಗಣನೀಯವಾದದ್ದು. ಒಂದು ರೀತಿಯಲ್ಲಿ ಹೇಳುವುದಾದರೆ ಸರಕಾರಿ ಸಂಬಳ, ಪಿಂಚಣಿಗಳೇ ಮೊದಲಾದ ತಿಂಗಳ ಸಂದಾಯಕ್ಕೆ ಇದೇ ಬಹು ದೊಡ್ಡ ಮೂಲ. ಈಗಂತೂ ಜಿಎಸ್‌ಟಿ ಯುಗ. ಕಾಲಕಾಲಕ್ಕೆ ಅಬಕಾರಿ ಸುಂಕಗಳು ಹೆಚ್ಚಾಗುತ್ತಾ ಎಣ್ಣೆರೇಟು ಮುಗಿಲು ಮುಟ್ಟುತ್ತಿದೆ. ಆದರೂ ಪೆಟ್ರೋಲು ಡೀಸೆಲ್ಲುಗಳಂತೆ ಈ ಎಣ್ಣೆಯ ರೇಟು ಎಷ್ಟು ಹೆಚ್ಚಾದರೂ ಬದುಕಿಗೆ ಅನಿವಾರ್ಯ ಎಂಬಂತಾಗಿಬಿಟ್ಟಿದೆ. ‘ಓಡಾಡಲು ಆ ಕಲ್ಲೆಣ್ಣೆ; ತೂರಾಡಲು ಈ ಬಾಟಲಿಯೆಣ್ಣೆ’ ಎಂಬುದು ಹೊಸ ಗಾದೆ. ಈ ಎಣ್ಣೆ ಪ್ರಪಂಚದಲ್ಲಿ ನಾಗರಿಕ ಮನುಷ್ಯ ಎಂದೋ ಸೆರೆಯಾಳಾಗಿ ಜೀವಂತ ಯಂತ್ರವಾಗಿಬಿಟ್ಟಿದ್ದಾನೆ. ಸಂಜೆಯಾಯಿತೆಂದರೆ ಸಾಕು, ವೈನ್ ಸ್ಟೋರುಗಳು ಭರ್ತಿ. ಮರ್ಯಾದಸ್ತರು (ಹಾಗೆಂದರೇನು? ಎಂದು ಕೇಳುವಂತಾಗಿದೆ) ಓಡಾಡಲು ಅಸಹ್ಯಪಡುತ್ತಾ, ಒಳಗೊಳಗೆ ಭಯಭೀತರಾಗುವರು. ಇನ್ನು ಬಾರ್ ಮತ್ತು ರೆಸ್ಟೋರೆಂಟುಗಳ ಸ್ಟೋರಿಯೇ ಬೇರೆ. ಧೂಮಪಾನ, ಮದ್ಯಪಾನ, ವೆಜ್ಜೂ ನಾನ್‌ವೆಜ್ಜೂ, ಚಾಟ್ಸು, ಜೊತೆಗೆ ಡಿಲಕ್ಸ್ ರೂಮುಗಳು. ಕವಿ ಕಲಾವಿದರು ವರ್ಣಿಸುವ ಇಂದ್ರನ ಅಮರಾವತಿಯನ್ನು ಧರೆಗೇ ತಂದು ವೈಭೋಗದಲ್ಲಿ ತಲ್ಲೀನರಾಗಿ ಮದಿರೆಯ ಮಾಯಾಜಾಲದಲ್ಲಿ ಮಗ್ನರಾಗಿ ಸರ್ವಸ್ವವನ್ನೂ ಮರೆತು ‘ನಗುವೇನು? ನೃತ್ಯವೇನು? ಚರ್ಮಾನಂದವೇನು?’ ಅಬ್ಬಬ್ಬಾ ‘ದೇವಾನುವಾದೇವತೆಗಳೇ ಸುರಾಪಾನದಲ್ಲಿ ತೊಡಗಿ, ರಾಸಕ್ರೀಡೆಯಾಡುವಾಗ ನಮ್ಮದೇನು? ನಾವು ಹುಲುಮಾನವರು’ ಎಂದು ಹೇಳುತ್ತಾ ಹೀಗೆ ಭೋಗದಲ್ಲಿ ಆಸಕ್ತರಲ್ಲದ ಅಥವಾ ಅದರಲ್ಲಿ ತೊಡಗಿಸಿಕೊಳ್ಳಲು ಒಲ್ಲದ, ಮೌಲ್ಯ-ನೀತಿ-ಮರ್ಯಾದೆ-ಸಂಸ್ಕೃತಿ-ಸಂಸ್ಕಾರ-ಮನೆತನ ಎಂದೆಲ್ಲಾ ಬಡಬಡಿಸುವ ನಿಷ್ಠಾವಂತರ ನಿದ್ದೆಗೆಡಿಸುತ್ತಾರೆ. ಇಂಥ ಮದ್ಯಪ್ರಿಯರ ಜನಪ್ರಿಯ ಮಾತೊಂದಿದೆ: ‘ನಾವೇನೋ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳುತ್ತೇವೆ ಎಂಬುದು ತಾನೇ ನಿಮ್ಮ ಆಕ್ಷೇಪಣೆ. ಆದರೆ ನೀವೇನೂ ಕುಡಿಯದೇ ಹೆಚ್ಚೆಂದರೆ ನಮಗಿಂತ ಐದೋ ಆರೋ ವರುಷ ಹೆಚ್ಚು ಬಾಳಿಕೆ ಬರಬಹುದು! ಐದಾರು ವರುಷದ ಬೋನಸ್ ಆಯುಷ್ಯಕ್ಕಾಗಿ ಐವತ್ತು ವರುಷಗಳ ಕಾಲ ಸಂನ್ಯಾಸಿಯಂತೆ ಬದುಕಬೇಕೆ?’ ಇವರ ಮಾತಿನ ತರ್ಕಕ್ಕೆ ನಮ್ಮ ಬಾಯಿ ಕಟ್ಟಿ ಬಿಡುತ್ತದೆ. ‘ಯಾರು ಮೊದಲು? ಯಾರು ನಂತರ?’ ಎಂದು ಹೇಳುವವರು ಯಾರು? ಮೇಲೊಬ್ಬ ಬೊಂಬೆ ಆಡಿಸುವವನು ಅವನಿಚ್ಛೆಯಂತೆ ಸೂತ್ರಿಸಿ ಕುಣಿಸುವಾಗ ಅವನಿಟ್ಟಂತೆ ಬದುಕುವುದಷ್ಟೇ ನಮ್ಮ ಕೆಲಸ. ‘ಸಾಯುವ ತನಕ ಬದುಕಿರು’ ಎಂದು ಯಾರೋ ಆಶೀರ್ವಾದ ಮಾಡಿದರಂತೆ. ಹಾಗಾಯಿತು ನಮ್ಮ ಕತೆ!

(ಮುಂದುವರಿಯುವುದು)

ಡಾ. ಹೆಚ್ ಎನ್ ಮಂಜುರಾಜ್ , ಹೊಳೆನರಸೀಪುರ

4 Comments on “ಎತ್ತೆಣಿಂದೆತ್ತ ಸಂಬಂಧವಯ್ಯಾ !- ಭಾಗ 1

  1. ಎತ್ತಣಿದೆತ್ತ ಸಂಬಂಧವಯ್ಯಾ ಲೇಖನ ಪ್ರಾರಂಭ ಕುತೂಹಲ ಮೂಡಿಸುವಂತಿದೆ.. ಆನಂತರ ಎತ್ತಣ ಕ್ಕೆಳಿಯುತ್ತಾರೋ ಎಂಬ ತವಕವೂ ಇದೆ…ಕಾದು ನೋಡೋಣ…

  2. ಚೆನ್ನಾಗಿದೆ ಸರ್. ಸಿಂಪಲ್ ಮ್ಯಾಟರ್ ಆದ್ರೂ ಕುತೂಹಲಕಾರಿಯಾಗಿ ಬರೆದಿದ್ದೀರಿ.

  3. ಮದ್ಯಪ್ರಿಯರ, ಮದ್ಯವ್ಯಸನಿಗಳ ಪುರಾಣ, ಪುಣ್ಯಕಥೆ ಹೇಗೆ ಸಾಗುತ್ತದೋ ಕಾದು ನೋಡುವ ಕುತೂಹಲವನ್ನಂತೂ ಲೇಖನ ಮನದಲ್ಲಿ ಹುಟ್ಟು ಹಾಕಿದೆ.

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *