ಹೇಳುವುದ ಹೇಳಿ ಮುಗಿದ ಮೇಲೆ
ಇನ್ನೂ ಏನೋ ಹಾಗೇ ಉಳಿದಿದೆ
ಮನಸು ಸುಮ್ಮನೆ ತಡಕಾಡಿದೆ
ಹೇಳಬೇಕಾದುದ ಹೇಳುವುದಬಿಟ್ಟು
ಬೇರೆ ಏನೇನೋ ಹೇಳಿ ಮುಗಿಸಿದೆ
ಹೇಳಲೇ ಬೇಕಾದುದನ್ನು ಮರೆತಿದೆ
ಮನಸಿನೊಳಗೆ ಹತ್ತು ಹಲವುಬಾರಿ
ಹೀಗೆ ಹಾಗೆ ಎಂದುಕೊಳ್ಳುತ್ತೇವೆ
ಎದುರಲ್ಲಿ ಸುಮ್ಮನೆ ಬರಿದಾಗುತ್ತೇವೆ
ಎಲ್ಲ ಲೆಕ್ಕಾಚಾರವೂ ಸರಿಯಾಗಿಯೇ
ವಿಶ್ಲೇಷಣೆಗೊಂಡು ಹದವಾಗಿರುತ್ತದೆ
ಹೇಳುವಾಗ ಎಲ್ಲವೂ ಉಲ್ಟಾ ಪಲ್ಟಾ
ಮತ್ತೆ ಮತ್ತೆ ಪುನಃ ಪ್ರಯತ್ನಿಸುತ್ತೇವೆ
ಆದರೂ ಯಾಕೋ ವಿಫಲರಾಗುತ್ತೇವೆ
ಕೊನೆಗೆ ಸಾಕೆಂದು ಸುಮ್ಮನಾಗುತ್ತೇವೆ
ಬದುಕಿನಲ್ಲಿ ನಾವು ಸದಾ ಹೀಗೆಯೇ
ನೀವೆಲ್ಲಾ ನಮ್ಮ ಹಾಗೆಯೋ ಹೇಗೆ
ಯೋಚನೆಯಲ್ಲೇ ಕಳೆದುಹೋಗುವೆವು
ಹೀಗಾದರೆ ಹಾಗೆ ಹಾಗಾದರೆ ಹೀಗೆ
ನಮಗೆ ನಾವೇ ಸಂತೈಸಿಕೊಳ್ಳುತ್ತ
ಸಮಾಧಾನ ಹೊಂದುವೆವೆವು ಹೀಗೆ
ಯಾರು ಏನೆಂದುಕೊಳ್ಳುತ್ತಾರೋ
ತಪ್ಪು ತಿಳಿದುಕೊಳ್ಳುತ್ತಾರೋ ಎಂದು
ಎಣಿಸಿಕೊಂಡು ಸುಮ್ಮನಾಗುತ್ತೇವೆ
ಹೊಯ್ದಾಟದಲಿ ಮನಸು ತೊಳಲಾಡುವುದು
ಬದುಕು ಬಳಲಿ ಬೆಂಡಾಗುವುದು
ದ್ವಂದ್ವದಲ್ಲಿಯೇ ಎಲ್ಲ ಮುಗಿದುಹೋಗುವುದು

ನಾಗರಾಜ ಜಿ. ಎನ್. ಬಾಡ
ಕುಮಟ





ಬದುಕಿನಲ್ಲಿ ಹೇಳಿ ಕೊಳ್ಳುವ ಹೇಳಲಾಗದ್ದೂ ಎಷ್ಟೋ.. ಹೌದು ಅಷ್ಟೇ.. ಅದನ್ನು ಕವನದಲ್ಲಿ ಮೂಡಿಸಿರುವ ಪರಿ ಚೆನ್ನಾಗಿ ದೆ ಸಾರ್.
ಧನ್ಯವಾದಗಳು ಮೇಡಂ
Nice
ಧನ್ಯವಾದಗಳು ಮೇಡಂ
ಹೌದು ಬದುಕಿನಲ್ಲಿ ಹೇಳಲಾಗದ್ದು ತುಂಬಾ ಇದೆ
ಹೇಳಿದರೆ ಸಂಬಂಧಗಳು ಮುರಿದಾವು ಎಂದಾತಂಕ
ಚಂದದ ಕವನ
ಧನ್ಯವಾದಗಳು ಮೇಡಂ
ಮರ್ಕಟ ಮನಸ್ಸಿನ ಸುಂದರ ಚಿತ್ರಣವನ್ನು ಕಾವ್ಯದಲ್ಲಿ ಚೆಂದವಾಗಿ ಸೆರೆಹಿಡಿಯಲಾಗಿದೆ.
ಧನ್ಯವಾದಗಳು ಮೇಡಂ
ಜೀವನದಲ್ಲಿ ದಿನಾ ನೂರಾರು ದ್ವಂದ್ವಗಳನ್ನು ಎದುರಿಸುತ್ತಲೇ ಕಳೆದು ಹೋಗುವುದೇ ಬದುಕಿನ ಕಣ್ಣು ಮುಚ್ಚಾಲೆಯಾಟ! ಅರ್ಥಗರ್ಭಿತ ಕವನ.