ಪುಸ್ತಕ-ನೋಟ

ಕಾದಂಬರಿ ‘ಬೆಳ್ಳಿಮೋಡ’, ಲೇಖಕಿ: ತ್ರಿವೇಣಿ.

Share Button

ಕನ್ನಡದ ಕಾದಂಬರಿ ಕ್ಷೇತ್ರದಲ್ಲಿ ತಮ್ಮ ಮನೋ ವೈಜ್ಞಾನಿಕ ಕಾದಂಬರಿಗಳಿಂದ ಜನಪ್ರಿಯತೆ ಗಳಿಸಿದ ಲೇಖಕಿ ಶ್ರೀಮತಿ ತ್ರಿವೇಣಿ. ಸಾಂಪ್ರದಾಯಕವಾಗಿ ರೂಢಿಯಲ್ಲಿದ್ದ ಕಟ್ಟುಪಾಡಿನಂತೆ ಪುರುಷನು ಸಾಂಸಾರಿಕ ಬಂಧನದಲ್ಲಿ ಮುಖ್ಯನಾದವನು. ಅವನ ಅಭಿಪ್ರಾಯವೇ ಮುಖ್ಯ. ಸ್ತ್ರೀ ಅವನ ಆಜ್ಞಾನುವರ್ತಿನಿ ಎಂಬ ಪದ್ಧತಿಯು ರೂಢಿಯಲ್ಲಿದ್ದ ಸಮಾಜದಲ್ಲಿ ಸ್ತ್ರೀಯರಿಗೂ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪುರುಷರಷ್ಟೇ ಸಮಾನ ಹಕ್ಕಿದೆ ಎಂದು ತಮ್ಮ ಕಾದಂಬರಿಗಳ ಮೂಲಕ ಪ್ರತಿಪಾದಿಸಿದವರು ತ್ರಿವೇಣಿ. ಇದಕ್ಕೆ ಉದಾಹರಣೆಯಾಗಿದೆ ಅವರ ಜನಪ್ರಿಯ ಕಾದಂಬರಿ ‘ಬೆಳ್ಳಿಮೋಡ’.

ಇಲ್ಲಿ ಕಾದಂಬರಿಯ ನಾಯಕಿಯು ಆಗರ್ಭ ಶ್ರೀಮಂತರ ಪುತ್ರಿ. ಅವರಲ್ಲಿಗೆ ನೆರವು ಕೇಳಲು ಬರುವ ಮಧ್ಯಮ ವರ್ಗದ ಒಬ್ಬ ತರುಣ ವಿದ್ಯಾವಂತನಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಸಹಾಯ ಮಾಡುತ್ತಾರೆ ಆಕೆಯ ತಂದೆ. ಅವನು ಸಂದರ್ಭಾನುಸಾರ ಆಕೆಯ ಕುಟುಂಬದಲ್ಲಿ ಕೆಲವುದಿನ ಇರಬೇಕಾದ ಪ್ರಸಂಗ ಬರುತ್ತದೆ. ವಿದ್ಯಾವಂತ, ಸದ್ಗುಣಿಯೆಂದು ಕಂಡುಬಂದ ಸುಂದರ ತರುಣನಿಗೆ ಮನೆಯವರೆಲ್ಲರೂ ಮರುಳಾಗುತ್ತಾರೆ. ಅವನನ್ನು ಮನೆ ಅಳಿಯನನ್ನಾಗಿ ಮಾಡಿಕೊಳ್ಳುವವರೆಗೆ ತೀರ್ಮಾನವಾಗುತ್ತದೆ. ನಾಯಕಿಯೂ ಅವನಿಗೆ ಮನಸೋಲುತ್ತಾಳೆ. ಆದರೆ ಆ ಯುವಕ ಆಸೆಪಟ್ಟಿದ್ದು ಏಕಮಾತ್ರ ಪುತ್ರಿಯಾದ ನಾಯಕಿಯ ತಂದೆಯಿಂದ ಬರಬಹುದಾದ ದೊಡ್ಡ ಆಸ್ತಿಗೆಂದು ಖಚಿತವಾದಾಗ ನಾಯಕಿ ತಿರುಗಿಬೀಳುತ್ತಾಳೆ. ಅವನನ್ನು ತಿರಸ್ಕರಿಸುತ್ತಾಳೆ. ಇದು ಕಥಾವಸ್ತು.

ಚಿಕ್ಕಮಗಳೂರಿನಿಂದ ಏಳೆಂಟು ಮೈಲಿ ದೂರದಲ್ಲಿದ್ದ ‘ಬೆಳ್ಳಿಮೋಡ’ ಎಂಬ ಎಸ್ಟೇಟಿನ ಯಜಮಾನರಾದ ಸದಾಶಿವರಾಯರು ಶ್ರೀಮಂತ ಜಮೀನುದಾರರು. ಅವರ ಧರ್ಮಪತ್ನಿ ಲಲಿತಮ್ಮ. ಇವರ ಪ್ರೀತಿಯ ಏಕೈಕ ಪುತ್ರಿಯೇ ನಮ್ಮ ಕಥಾನಾಯಕಿ ಇಂದಿರಾ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಅತಿ ಎತ್ತರದಲ್ಲಿತ್ತು ಅವರ ಮನೆ. ಮೋಡಗಳು ಆಡುತ್ತಾಡುತ್ತಾ ಇವರ ಮನೆಯನ್ನು ಮುಟ್ಟುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಬಿಳಿಮೋಡ ಮುಸುಕಿದ ಮನೆಯ ಮೇಲೆ ಬಿದ್ದ ಬಿಸಿಲು ಅದನ್ನು ಬೆಳ್ಳಿಯ ಹಾಗೆ ಥಳಥಳಿಸುತ್ತಿತ್ತು. ಹೀಗಾಗಿ ಬೆಳ್ಳಿಮೋಡ ಅನ್ವರ್ಥವಾಗಿತ್ತು. ಹಾಗೂ ಇವರ ಮನೆಯ ದೀಪದ ಪ್ರಕಾಶ ಸುತ್ತಲೂ ಹರಡಿ ಆಕಾಶದಲ್ಲಿ ಮಿನುಗುವ ತಾರೆಯಂತೆ ಕಂಗೊಳಿಸಿ ಮನೆಗೊಂದು ಹೆಸರು ‘ಮಿನುಗುತಾರೆ’ ಎನಿಸಿತ್ತು. ಇಂದಿರಾ ಶ್ರೀಮಂತರ ಮಗಳಾದರೂ ಸರಳ ಸ್ವಭಾವದ, ಸರಸ ನಡೆನುಡಿಯ, ಸಹಜಸುಂದರಿ ಸುತ್ತಮುತ್ತ ವಾಸವಿದ್ದ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ತರುಣಿಯಾಗಿದ್ದಳು. ಎಸ್ಟೇಟಿನ ಚಿಕ್ಕ ಯಜಮಾನಿತಿಯಾಗಿದ್ದಳು.

ಸದಾಶಿವರಾಯರು ಆ ಪ್ರದೇಶದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. ಅವರಲ್ಲಿಗೆ ಮೋಹನನೆಂಬ ಮಧ್ಯಮವರ್ಗದ ಒಬ್ಬ ವಿದ್ಯಾವಂತ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಅರ್ಹತೆಯಿದ್ದರೂ ಆರ್ಥಿಕವಾಗಿ ಸಶಕ್ತನಾಗಿಲ್ಲದೆ ಇದ್ದುದರಿಂದ ರಾಯರ ಸಹಾಯವನ್ನು ಅಪೀಕ್ಷಿಸಿ ಬರುತ್ತಾನೆ. ಪ್ರತಿಭಾವಂತ ಯುವಕನೊಬ್ಬನಿಗೆ ಸಹಾಯಮಾಡಲು ವಿಶಾಲ ಮನಸ್ಸಿನ ಸದಾಶಿವರಾಯರಿಗೆ ಮನಸ್ಸಾಗುತ್ತದೆ. ಅಲ್ಲಿ ಅವನಿಗೆ ಇಂದಿರೆಯ ಮೊದಲ ಭೇಟಿಯಾಗುತ್ತದೆ. ಮನೆಯೊಡೆಯರ ಅನುಪಸ್ಥಿತಿಯಲ್ಲಿ ಮನೆಯವರು ನೀಡಿದ ಆತಿಥ್ಯ ಪಡೆದು ತನಗೆ ನೆರವು ದೊರೆಯುತ್ತದೋ ಎಂಬುದು ಖಾತರಿಯಾಗದ್ದರಿಂದ ತನ್ನೂರಿಗೆ ಹಿಂದಿರುಗುವುದರಲ್ಲಿರುತ್ತಾನೆ ಮೋಹನ. ವಿದ್ಯಾವಂತ ಮತ್ತು ನೋಡಲು ಸುಂದರಾಕಾರನಾಗಿದ್ದವನನ್ನು ಏಕೆ ತಮ್ಮ ಮನೆ ಅಳಿಯನನ್ನಾಗಿ ಮಾಡಕೊಳ್ಳಬಾರದು ಎಂಬ ಆಸೆ ಅವರಲ್ಲಿ ಮೂಡುತ್ತದೆ. ಸದಾಶಿವರಾಯರು ಕೂಡ ಈ ಪ್ರಸ್ತಾವವನ್ನು ಒಪ್ಪುತ್ತಾರೆ. ಮುಖ್ಯ ನಿರ್ಧಾರವನ್ನು ಮಾಡಬೇಕಾದವನು ಈಗ ಮೋಹನ. ಅವನ ತಂದೆತಾಯಿಗಳು ಬಂದು ಇಂದಿರಾಳನ್ನು ನೋಡುತ್ತಾರೆ. ಅತಿಯಾಗಿ ಅಲಂಕಾರ ಮಾಡಿಕೊಳ್ಳದೆ ಎದುರಿಗೆ ಬಂದವಳನ್ನು ತಾಯಿ ಲಲಿತಮ್ಮನವರು ಒತ್ತಾಯಿಸಿದಾಗ “ಅಲಂಕಾರದಿಂದ ಯಾರನ್ನೂ ಸೆರೆಹಿಡಿಯಲಾಗದು. ಕ್ಷಣಿಕವಾದ ಈ ಸೌಂದರ್ಯವೇ ಗಂಡನ್ನು ಆಕರ್ಷಿಸುವ ಮಾನದಂಡವಾಗಬಾರದು” ಎಂಬ ಮಾತನಾಡುತ್ತಾಳೆ. ಮೋಹನ ಮತ್ತು ಇಂದಿರಾಳ ವಿವಾಹಕ್ಕೆ ಉಭಯತ್ರರೂ ಒಪ್ಪುತ್ತಾರೆ. ಮೊದಲು ವಿದೇಶಕ್ಕೆ ಹೋಗಿ ಉನ್ನತ ವಿದ್ಯಾಭ್ಯಾಸ ಮುಗಿಸಿ ಮೋಹನ ಹಿಂದಿರುಗಿದ ನಂತರವೇ ವಿವಾಹವೆಂದು ನಿರ್ಧರಿಸಲಾಗುತ್ತದೆ. ಇದಕ್ಕೆ ಇಂದಿರಾ ಮೋಹನನ ಏಳಿಗೆಗೆ ಪ್ರಥಮ ಆಧ್ಯತೆ ಕೊಟ್ಟು ಒಪ್ಪುತ್ತಾಳೆ. ಅಂತೂ ಸದಾಶಿವರಾಯರ ಭಾವಿ ಅಳಿಯನ ಪಟ್ಟಹೊತ್ತು ಮೋಹನ ಅಮೆರಿಕಾಕ್ಕೆ ಪ್ರಯಾಣಿಸುತ್ತಾನೆ.

ಇಂದಿರಾಳಿಗೆ ಮೋಹನ ಬರೆಯುತ್ತಿದ್ದ ಪ್ರೇಮಪತ್ರಗಳನ್ನು ಓದುತ್ತಾ ಮತ್ತು ಎಸ್ಟೇಟಿನ ಆರೈಕೆಯೇ ಕರ್ತವ್ಯವೆಂಬಂತೆ ಕೆಲಸಗಳನ್ನು ನಿರ್ವಹಿಸುತ್ತಾ ಕಾಲಹಾಕುತ್ತಾಳೆ. ಕೆಲವು ವರ್ಷಗಳು ಕಳೆದ ನಂತರ ಅನಿರೀಕ್ಷಿತವೆಂಬಂತೆ ಮಾಗಿದ ವಯಸ್ಸಿನ ಇಂದಿರಾಳ ತಾಯಿ ಮತ್ತೊಮ್ಮೆ ಗರ್ಭಧರಿಸುತ್ತಾರೆ. ಲಲಿತಮ್ಮನವರು “ಈ ಸ್ಥಿತಿ ನನಗಾಗುವ ಬದಲು ನಿನಗಾಗಿದ್ದರೆ ಎಷ್ಟು ಚೆನ್ನಾಗಿತ್ತು” ಎಂದು ಇಂದಿರಾಳನ್ನು ಕುರಿತು ಹೇಳುತ್ತಾರೆ. ತಾಯಿಯು “ಈ ವಯಸ್ಸಿನಲ್ಲಿ ನನಗೇಕೆ ಇದು ಬೇಕಿತ್ತೆಂದು” ಸಂಕೋಚಪಡುವಾಗ ತಾಯಿಯನ್ನು ಇಂದಿರಾಳೇ ಸಮಾಧಾನಪಡಿಸುತ್ತಾಳೆ. ಅವಳಿಗೇನೋ ತನಗೊಬ್ಬ ತಮ್ಮನೋ, ತಂಗಿಯೋ ಬರುವ ಸಂಭ್ರಮವನ್ನು ಆಕೆ ಎದುರುನೋಡುತ್ತಾಳೆ. ಮೊದಲಿನಿಂದಲೂ ಅಷ್ಟೇನೂ ಆರೋಗ್ಯವಂತಳಲ್ಲದ ಲಲಿತಮ್ಮ ನಿತ್ರಾಣತೆಯನ್ನು ಅನುಭವಿಸುತ್ತಾರೆ. ಅವರನ್ನು ಮಗಳೇ ಮಗುವಿನಂತೆ ಜೋಪಾನವಾಗಿ ನೋಡಿಕೊಳ್ಳುತ್ತಾಳೆ. ದಿನತುಂಬುವ ಮೊದಲೇ ಹೆರಿಗೆಯಾಗಿ ಗಂಡುಮಗುವಿಗೆ ಜನ್ಮನೀಡುತ್ತಾರೆ. ತಾಯಿ ದೈಹಿಕವಾಗಿ ಇದನ್ನೆಲ್ಲ ತಡೆದುಕೊಳ್ಳಲಾರದೆ ನಿಧನಳಾಗುತ್ತಾಳೆ. ಇಂದಿರಾ ತಾಯಿಯ ಸಾವಿನಿಂದ ತುಂಬ ನೊಂದುಕೊಳ್ಳುತ್ತಾಳೆ. ಆದರೆ ತನ್ನ ಕರ್ತವ್ಯವೆಂಬಂತೆ ತನ್ನ ತಮ್ಮನನ್ನು ತಾನೇ ತಾಯಿಯ ಸ್ಥಾನದಲ್ಲಿ ನಿಂತು ಆರೈಕೆ ಮಾಡುತ್ತಾಳೆ. ಅವನಿಗೆ ಯಾವುದೇ ಕೊರತೆಯಾಗದಂತೆ ಕಾಪಾಡುತ್ತಾಳೆ. ಅವಳಲ್ಲಿ ಸೋದರ ಪ್ರೇಮದ ಜೊತೆಗೆ ಮಾತೃತ್ವವೂ ಜಾಗೃತವಾಗುವುದನ್ನು ಇಲ್ಲಿ ಕಾಣಬಹುದಾಗಿದೆ. ತಾಯಿಯ ಅವಸಾನ, ತಮ್ಮನ ಜನನದ ಬಗ್ಗೆ ಮೋಹನನಿಗೆ ಬರೆದ ಪತ್ರದಲ್ಲಿ ತಿಳಿಸುತ್ತಾಳೆ. ಅವನಿಂದ ಸಹಾನುಭೂತಿಯ ಮಾತುಗಳನ್ನು ನಿರೀಕ್ಷಿಸುತ್ತಾಳೆ. ಅವನಿಂದ ಬಂದ ಚುಟುಕಾದ ಪ್ರತ್ಯುತ್ತರ ಕಂಡು ನಿರಾಸೆಯಾಗುತ್ತದೆ. ಆದರೆ ಇಂದಿರಾ ತನ್ನ ಕರ್ತವ್ಯದಲ್ಲಿ ಅದೆಲ್ಲವನ್ನೂ ಮರೆಯಲೆತ್ನಿಸುತ್ತಾಳೆ.

ಅಮೆರಿಕಾದಿಂದ ಮೋಹನ ಹಿಂದಿರುಗುತ್ತಾನೆಂಬ ಸುದ್ಧಿ ತಿಳಿದ ಇಂದಿರಾ ಸಂತಸಪಡುತ್ತಾಳೆ. ತಮ್ಮ ವಿವಾಹ, ಮುಂದಿನ ಜೀವನದ ಕನಸು ಕಾಣುತ್ತಾಳೆ. ತನ್ನ ಮೋಹನನಿಗಾಗಿ ಇದುವರೆಗೆ ತನ್ನ ಬದುಕಿನ ಉಸಿರಾಗಿದ್ದ ‘ಬೆಳ್ಳಿಮೋಡ’ವನ್ನು ತೊರೆಯಲು ಸಿದ್ಧಳಾಗುತ್ತಾಳೆ. ತನ್ನ ಪ್ರಾಣಸಮಾನವಾಗಿದ್ದ ತಮ್ಮ ಗಿರಿಯನ್ನು ಕೂಡ ದೂರಮಾಡಿಕೊಳ್ಳಲು ಉದ್ಯುಕ್ತಳಾಗುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ ಮೋಹನನು ಆಕೆಯನ್ನು ವರಿಸಲು ಮುಖ್ಯ ಉದ್ದೇಶ ಆಕೆಯ ತಂದೆಯಿಂದ ಏಕೈಕ ಪುತ್ರಿಗೆ ಬರಬಹುದಾದ ಅಪಾರ ಆಸ್ತಿಸಂಪತ್ತೇ ಎಂಬುದು ಮನದಟ್ಟಾಗುತ್ತದೆ. ಈಗ ಆಸ್ತಿಗೆ ಹಕ್ಕುದಾರನ ರೂಪದಲ್ಲಿ ಆಕೆಯ ತಮ್ಮ ಗಿರಿಯ ಆಗಮನ ಮೋಹನನ ವರ್ತನೆಯನ್ನೇ ಬದಲಿಸುತ್ತದೆ. ನಿಷ್ಕಲ್ಮಶವಾಗಿ ಅವನನ್ನು ಪ್ರೀತಿಸಿ ಪತಿಯೆಂದೇ ಭಾವನೆಯಿಟ್ಟುಕೊಂಡಿದ್ದ ಇಂದಿರೆಗೆ ಇದರಿಂದ ನಿರಾಸೆಯಾಗುತ್ತದೆ. ಮನುಷ್ಯರು ಹಣ, ಆಸ್ತಿಗಾಗಿ ಗುಣವನ್ನೇ ಕಡೆಗಣಿಸುತ್ತಾರೆಂಬ ಸತ್ಯ ತಿಳಿಯುತ್ತದೆ. ಮೋಹನನ ಬಗ್ಗೆ ತಿರಸ್ಕಾರ ಮೂಡುತ್ತದೆ. ಆಕೆ ತನ್ನನ್ನು ಮದುವೆಯಾಗಲಾರಳೆಂಬ ಅರಿವು ಬಂದಾಗ ಮೋಹನ ತನ್ನ ಮನಸ್ಸಿನ ನೈಜ ಭಾವನೆಗಳನ್ನು ತೆರೆದಿಡುತ್ತಾನೆ. ಸಾಮಾನ್ಯ ರೂಪಿನ ಇಂದಿರೆಯನ್ನು ಒಪ್ಪಿ ಆಕೆಯ ತಂದೆಯಿಂದ ನೆರವು ಪಡೆದಿದ್ದು ಮುಂದೆ ತಾನು ಮನೆಯ ಆಸ್ತಿಗೆ ಹಕ್ಕುದಾರನಾಗಬಹುದೆಂದು. ಆದರೆ ಈಗ ಆ ಆಸೆ ನೆರವೇರದಿರುವುದರಿಂದ ಆಕೆಯ ತಂದೆ ಸಹಾಯಮಾಡಿದ ಹಣವನ್ನು ಸಾಲವೆಂದು ಪರಿಗಣಿಸಿ ತೀರಿಸುವುದಾಗಿ ಹೇಳುತ್ತಾನೆ. ಈ ಮಧ್ಯೆ ದುರಾದೃಷ್ಟವಶಾತ್ ಮೋಹನ ಒಂದು ಅಪಘಾತಕ್ಕೆ ತುತ್ತಾಗುತ್ತಾನೆ. ಅನಿವಾರ್ಯವಾಗಿ ಇಂದಿರೆಯೇ ಆತನ ಶುಶ್ರೂಷೆ ಮಾಡಬೇಕಾಗುತ್ತದೆ. ಅದನ್ನವಳು ಮಾನವೀಯತೆಯ ದೃಷ್ಟಿಯಿಂದ ಯಾವಲೋಪವೂ ಇಲ್ಲದಂತೆ ಮಾಡುತ್ತಾಳೆ. ಅವಳು ಮಾಡುವ ನಿಸ್ವಾರ್ಥ ಸೇವೆಯು ಮೋಹನನ ಮನಸ್ಸನ್ನೂ ಕರಗಿಸುತ್ತದೆ. ಅವನು ಮತ್ತೆ ಇಂದಿರೆಯನ್ನು ಇಷ್ಟಪಡಲು ಪ್ರಾರಂಭಿಸುತ್ತಾನೆ. ಈ ಬಾರಿ ಅವನ ಬಯಕೆಯು ನೈಜವಾಗಿರುತ್ತದೆ. ಆಸ್ತಿಯು ಅವನ ಆಯ್ಕೆಯಾಗಿರುವುದಿಲ್ಲ. ಆದರೆ ಇಂದಿರೆಯ ನಿರ್ಧಾರ ಅಚಲವಾಗಿರುತ್ತದೆ. ಮೋಹನನ ಮರುಪ್ರಸ್ತಾಪವನ್ನು ಅವಳು ಸಾರಾಸಗಟಾಗಿ ನಿರಾಕರಿಸುತ್ತಾಳೆ. ಇಲ್ಲಿ ಮೋಹನನು ಮನಪರಿವರ್ತನೆಯಾಗಿ ಆಕೆಯನ್ನು ಹೃದಯಪೂರ್ವಕವಾಗಿ ಸಂಗಾತಿಯಾಗಿ ಬಯಸಿ ಇಂದಿರೆಯ ಮುಂದೆ ಬೇಡಿಕೆಯಿಟ್ಟಾಗ ಓದುಗರಿಗೆ ಮರುಕ ಹುಟ್ಟುವುದು ಸಹಜ. ಆದರೆ ತ್ರಿವೇಣಿಯವರ ನಿಲುವು ಬೇರೆ. ಗಂಡಿಗೊಂದು ನಿಯಮ, ಹೆಣ್ಣಿಗೊಂದು ನಿಯಮವನ್ನು ಅವರು ಒಪ್ಪುವುದಿಲ್ಲ. ಗಂಡಿನಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ಹೆಣ್ಣಿಗೂ ಇರಬೇಕೆಂಬ ಸಮಾನತೆಗೆ ಅವರು ಬದ್ಧರಾಗಿದ್ದಾರೆ. ಹೀಗಾಗಿ ಇಂದಿರೆಗೆ ತನ್ನ ಆಯ್ಕೆಯ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದಾರೆ. ಇಂದಿರೆಯ ಬಾಳಿನಲ್ಲಿ ಮೂಡಿದ ಬೆಳ್ಳಿಯಾಗಿ ಬಂದ ಮೋಹನ ಮರೆಯಾಗಿ ಉಳಿಯುವುದು ಬರಿಯ ಮೋಡಮಾತ್ರ. ಕಾದಂಬರಿಯ ಶೀರ್ಷಿಕೆಯೂ ಅರ್ಥಪೂರ್ಣವಾಗಿದೆ.

ಕಾದಂಬರಿಯಲ್ಲಿ ಮನಸ್ಸಿಗೆ ಮುದನೀಡುವ ಅನೇಕ ಹಾಸ್ಯ ಪ್ರಸಂಗಗಳು ಓದುವುದನ್ನು ಬೇಸರವಾಗದಂತೆ ನೋಡಿಕೊಳ್ಳುತ್ತವೆ. ಚೋಮನ ಹೊಟ್ಟೆಯನ್ನು ಹಾಸ್ಯ ಮಾಡುವ ಪುಟ್ಟಯ್ಯ, ಪುಟ್ಟಯ್ಯನ ನಶ್ಯದ ಚಟವನ್ನು ಆಡಿಕೊಳ್ಳುವ ಇಂದಿರಾ, ಮೋಹನ ಮತ್ತು ಇಂದಿರಾರನ್ನು ರೇಗಿಸುವ ಪುಟ್ಟಯ್ಯ, ಸದಾಶಿವರಾಯರು ಮತ್ತು ಲಲಿತಮ್ಮನವರ ನಡುವೆ ನಡೆಯುವ ಹಾಸ್ಯ ಚಟಾಕಿಗಳು ಕಥೆಯ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿವೆ.

ಮನುಷ್ಯ ಸಂಘಜೀವಿ. ಅವನು ಒಂಟಿಯಾಗಿ ಬದುಕಲಾರ ನಿಜ. ಆದರೆ ಎಲ್ಲರ ಸ್ವಭಾವಗಳೂ ಒಂದೇ ತೆರನಾಗಿರುವುದಿಲ್ಲ ಎಂಬುದನ್ನು ಮೋಹನನ ತಂದೆತಾಯಿಗಳ ಪಾತ್ರಗಳಲ್ಲಿ ನೋಡಬಹುದು.
ಬದುಕು ಮತ್ತು ಬರಹ ಒಂದಕ್ಕೊಂದು ನಿಕಟವಾದವು. ಈ ನಿಟ್ಟಿನಲ್ಲಿ ನೋಡಿದರೆ ಬದುಕಿನ ಬೇರು ಕುಟುಂಬ. ಕಾದಂಬರಿಯ ನಿರೂಪಣೆಯಲ್ಲಿ ಇದು ಎಷ್ಟರಮಟ್ಟಿಗೆ ಸಫಲವಾಗಿದೆ ಎಂಬುದನ್ನು ನೋಡಿದಾಗ ಕೆಳಕಂಡ ಅಂಶಗಳು ಕಂಡುಬರುತ್ತವೆ. ಇಂದಿರಾ ಆಗರ್ಭ ಶ್ರೀಮಂತರ ಮನೆಯ ಹೆಣ್ಣುಮಗಳು. ಅವಳಿಗೆ ಚಿಕ್ಕಂದಿನಿಂದ ತಂದೆತಾಯಿಗಳ ಅಮಿತವಾದ ಪ್ರೀತಿ ದೊರಕಿರುತ್ತದೆ. ಅವರು ಇವಳ ಅಭಿಪ್ರಾಯಗಳಿಗೆ ಮಹತ್ವ ನೀಡುತ್ತಾರೆ. ಆದಕಾರಣ ಅವಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ಹೀಗಾಗಿ ಆಕೆ ತಾನು ಮೆಚ್ಚಿದ ಗಂಡಿನ ದೌರ್ಬಲ್ಯವನ್ನು ಮನಗಂಡು ತನ್ನ ಶುದ್ಧವಾದ ಪ್ರೀತಿಗಾದ ಅವಮಾನವನ್ನು ಸಹಿಸದೆ ಅವನನ್ನು ತಿರಸ್ಕರಿಸುತ್ತಾಳೆ ಅಲ್ಲದೆ ಆತ ತನ್ನ ತಪ್ಪನ್ನು ಒಪ್ಪಿಕೊಂಡು ಮತ್ತೊಮ್ಮೆ ಬೇಡಿಕೊಂಡರೂ ದಿಟ್ಟವಾಗಿ ತನ್ನ ನಿರ್ಧಾರಕ್ಕೆ ಅಚಲಳಾಗಿ ಬದ್ಧತೆ ತೋರುತ್ತಾಳೆ. ಒಡೆದ ಕನ್ನಡಿಯನ್ನು ಮತ್ತೆ ಒಂದುಮಾಡುವ ಪ್ರಯತ್ನ ವ್ಯರ್ಥವೆಂದು ಅವನ ಕೋರಿಕೆಯನ್ನು ಒಪ್ಪುವುದಿಲ್ಲ. ಇಲ್ಲಿ ಇಂದಿರಾಳ ತಂದೆತಾಯಿಗಳ ಪಾತ್ರವೂ ಮುಖ್ಯವಾದುದೇ. ಅಲ್ಲಿಯವರೆಗೂ ಮೋಹನನನ್ನು ತಮ್ಮ ಭಾವೀ ಅಳಿಯನೆಂಬಂತೆ ಬಾವಿಸಿದ್ದವರಿಗೆ ತಮ್ಮ ಮಗಳ ನಿರ್ಧಾರದಿಂದ ಮುಜುಗರವಾಗಿರಬಹುದು. ಅದರಿಂದ ಉಂಟಾಗಬಹುದಾದ ಸಾಮಾಜಿಕ ಪ್ರತಿಕ್ರಿಯೆಗಳಿಗೆ ಅವರು ಸಿದ್ಧರಾಗುತ್ತಾರೆ. ಮೋಹನನನ್ನು ಒಬ್ಬ ಗಣ್ಯ ವ್ಯಕ್ತಿಯಾಗಿ ರೂಪಿಸುವ ತಮ್ಮ ಪ್ರಯತ್ನಕ್ಕಾದ ಹಿನ್ನಡೆ, ಇದರಿಂದ ಮಗಳ ಮುಂದಿನ ಭವಿಷ್ಯದ ಮೇಲೆ ಆಗಬಹುದಾದ ಪರಿಣಾಮ, ಅವರ ಕಣ್ಮುಂದೆ ಬಂದರೂ ಮಗಳ ನಿರ್ಧಾರವನ್ನು ಗೌರವಿಸುತ್ತಾರೆ. ಇಂತಹ ಕುಟುಂಬಗಳ ಸಂಖ್ಯೆ ಎಷ್ಟಿರಲು ಸಾಧ್ಯ.

ಲೇಖಕಿ ತ್ರಿವೇಣಿಯವರು ಸಮಾಜದಲ್ಲಿ ಒಂದು ಹೊಸ ಬದಲಾವಣೆಯನ್ನು ತರುವ ಸ್ತುತ್ಯ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಮಾಡಿದ್ದಾರೆ. ಖಡ್ಗಕ್ಕಿಂತಲೂ ಲೇಖನಿ ಹರಿತವೆನ್ನುವ ಮಾತಿನಲ್ಲಿ ಅವರಿಗೆ ನಂಬಿಕೆಯಿದೆ. ಹೆಣ್ಣು ಕೇವಲ ವಿಲಾಸಿನಿಯಲ್ಲ, ಪುರುಷನು ಹೇಳಿಕೊಂಡು ಬಿದ್ದಿರುವ ಆತನ ಕೈಗೊಂಬೆಯಲ್ಲ. ಆಕೆಗೂ ತನ್ನದೇ ಪ್ರತ್ಯೇಕ ಮನಸ್ಸಿದೆ, ವ್ಯಕ್ತಿತ್ವವಿದೆ, ತನ್ನ ಒಳ್ಳಿತು ಕೆಡಕುಗಳ ಬಗ್ಗೆ ಆಕೆಗೆ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ ಎಂಬುದನ್ನು ಇಂದಿರೆಯ ಪಾತ್ರದಲ್ಲಿ ತೋರಿಸಿದ್ದಾರೆ. ಹೆಣ್ಣನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದೆಂಬ ಗಂಡಿನ ಅಹಮಿಕೆಗೆ ಪೆಟ್ಟುಕೊಟ್ಟು ದಿಟ್ಟೆಯಾಗಿ ನಿಲ್ಲುವಲ್ಲಿ ಇಂದಿರಾ ಸಫಲಳಾಗಿದ್ದಾಳೆ. ಪುರುಷಪ್ರಧಾನ, ಸಾಂಪ್ರದಾಯಕ ಸಮಾಜದಲ್ಲಿ ಲೇಖಕಿಯ ಅಭಿಪ್ರಾಯಕ್ಕೆ ಎಷ್ಟರಮಟ್ಟಿಗೆ ಮನ್ನಣೆ ದೊರಕಿದೆ ಎಂಬುದು ಚರ್ಚಿಸಬೇಕಾದ ವಿಷಯವಾಗುತ್ತದೆ. ಹಾಗೆ ಸಮಾಜದಲ್ಲಿ ಬದಲಾವಣೆ ಆಗಲೇಬೇಕಾದರೆ ಕಥಾನಾಯಕಿಯಂಥಹ ನೂರಾರು ಇಂದಿರೆಯರು ಹುಟ್ಟಬೇಕಾಗುತ್ತದೆ. ಅಲ್ಲದೆ ಅಂಥವರಿಗೆಲ್ಲ ಆಧಾರಸ್ಥಂಭವಾಗಿ ನಿಲ್ಲಬಲ್ಲ ಪೋಷಕರೂ ದೊರಕಬೇಕಾಗುತ್ತದೆ. ಅದು ಸಾಧ್ಯವೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಅಸಾಧ್ಯವೆಂದರೆ ಅಂತಹ ಕಾಲ ಬಹುಬೇಗ ಬರಲಿ, ತ್ರಿವೇಣಿಯವರ ಬರಹದ ಆಶಯ ಕೈಗೂಡಲೆಂಬುದೇ ನಮ್ಮ ಹಾರೈಕೆ.

ಬಿ.ಆರ್.ನಾಗರತ್ನ, ಮೈಸೂರು

6 Comments on “ಕಾದಂಬರಿ ‘ಬೆಳ್ಳಿಮೋಡ’, ಲೇಖಕಿ: ತ್ರಿವೇಣಿ.

  1. ಪ್ರಕಟಣೆ ಹಾಗೂ ಅದಕ್ಕೆ ಹೊಂದುವ ಚಿತ್ರ ಹಾಕಿರುವುದಕ್ಕೆ ಸುರಹೊನ್ನೆಯ ಸಂಪಾದಕರಾದ ಹೇಮಾರವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು

  2. ಪುಸ್ತಕಾವಲೋಕನ ಸೊಗಸಾಗಿ ಮೂಡಿ ಬಂದಿದೆ. ʼಬೆಳ್ಳಿಮೋಡʼ ಕಾದಂಬರಿಯನ್ನು ಹಿಂದೆ ಓದಿದಾಗ ಮೂಡಿದ ಭಾವನೆಗಳು, ಚಲನಚಿತ್ರವನ್ನು ನೋಡಿದಾಗ ಕಾಡಿದ ಗೊಂದಲಗಳ ಮರುಅವಲೋಕನ ಮನದಲ್ಲಿ ಹುದುಗಿದ್ದ ನೆನಪುಗಳನ್ನು ಹೊರತಂದಂತಾಯಿತು.

    1. ನಿಮ್ಮ ಓದಿನ ಪ್ರತಿ ಕ್ರಿಯಗೆ ಧನ್ಯವಾದಗಳು ಪದ್ಮಾ ಮೇಡಂ

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *