ಲಹರಿ

ಹಲ್ಲಿನ ಹಗರಣ

Share Button

ಮುಖಕ್ಕೆ  ಎರಡು ಕಣ್ಣುಗಳು ಹೇಗೆ ಲಕ್ಷಣವೋ ಹಾಗೆಯೇ ಬಾಯಿಗೆ ಎರಡು ಸಾಲು ಹಲ್ಲುಗಳು ಲಕ್ಷಣವಂತೆ. ಹವಳದ ತುಟಿಯಂತೆ, ದಾಳಿಂಬದ ಬೀಜವಂತೆ-ಇವೆಲ್ಲ ಕವಿಗಳ ವರ್ಣನೆಯಾದರೆ ,ಈಗಿನ ಮೋಡರ್ನ್ ಪ್ರಪಂಚದಲ್ಲಿ ಕಾಲ್ಗೇಟ್ ಹಲ್ಲು,ಬಿನಾಕಾಹಲ್ಲು, ಪೆಪ್ಸೊಡೆಂಟ್ ಹಲ್ಲು, ಕ್ಲೋಸಪ್ ಹಲ್ಲು ,ಹೀಗೆ ಟೂತ್ ಪೇಸ್ಟಿಗೋ ಹಲ್ಲಿನ ಪುಡಿಗೋ  ಒಂದೊಂದು ರೀತಿಯ ಹಲ್ಲಿನ ಹಯವದನ ಜಾಹೀರಾತುಗಳು. ನಮ್ಮದು ಕುದುರೆಯ ಓಟದಿಂದ ಓಡುವ ದಿನಗಳು ತಾನೇ!? ಇರಲಿ, ಕೆಲವು ಜಾಹೀರಾತುಗಳಲ್ಲಿ ಗಂಡ-ಹೆಂಡತಿ ಸಹಿತ ಮಕ್ಕಳ ಹಲ್ಲುಗಳ ಪ್ರದರ್ಶನವಾದರೆ,ಇನ್ನು ಕೆಲವುಗಳಲ್ಲಿ ಯುವ ಜೋಡಿಯ ಹಲ್ಲು ಕಿಸಿಯುವಿಕೆ!. ಬೇರೆ ಕೆಲವರಲ್ಲಿ ಮಕ್ಕಳ ಹಾಲು ಹಲ್ಲಿನ ಮೋಹ. ಬಹುಶಃ ಯಾವ ಜಾಹೀರಾತು ಯಾರಿಗೆ ಇಷ್ಟವಾಗಿ ನಷ್ಟ-ಕಷ್ಟವಿಲ್ಲದೆ ಉತ್ಕೃಷ್ಟ ಲಾಭಗಳಿಸಬಹುದು ಎಂಬ ಉದ್ದೇಶವೇ!?. ಮಕ್ಕಳಂತೂ ಅದರ ಬಣ್ಣಕ್ಕೇ ಮಾರು ಹೋಗುತ್ತಾರೆಂದು ಅವರಿಗೆ ತಿಳಿದಿದೆ.ಅದಕ್ಕಾಗಿ ಅವರು ತರ-ತರದ ಕಲರುಗಳಲ್ಲಿ ವಿನ್ಯಾಸಗೊಳಿಸುತ್ತಾರೆ.

ಒಂದು ದಿನ ನನ್ನ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದೆ, ರಾತ್ರಿ ತಂಗಿದ್ದೆ. ಬೆಳಗ್ಗೆ ನಾನು ಏಳುವಾಗ ಏಳುಗಂಟೆ!. ಚಿಂತಿಲ್ಲ, ಏಳುಗಂಟೆ ಹೊಡೆಯುವುದು ಎಬ್ಬಿಸುವುದಕ್ಕೆ ತಾನೇ ಅಂದುಕೊಂಡು ಇನ್ನು ಬೇಗ ಬೇಗನೆ ಪ್ರಾತಃವಿಧಿಗಳನ್ನು ತೀರಿಸೋಣವೆಂದು ಬ್ರೆಶ್ ಮಾಡಲು ಬಾತ್ ರೂಮ್ ಒಳಹೊಕ್ಕು ಅಲ್ಲೇ ಸ್ಟ್ಯಾಂಡಿನಲ್ಲಿದ್ದ ಪೇಸ್ಟ್ ಒಂದನ್ನು ನನ್ನ ಟೂತ್ ಬ್ರಶ್ ಗೆ ಹಚ್ಚಿಕೊಂಡು ಉಜ್ಜತೊಡಗಿದೆ.ಅರೆ! ಇದು ಯಾವ ಮಾಡೆಲ್ ಟೂತ್‌ಪೇಸ್ಟ್!! ಬಾಯಿಗೆ ಏನೇನೋ ಸಾಬೂನು ತರ ಆಗ್ತಿದೆ! ಮನೆಯಾಕೆಯಲ್ಲಿ ಕೇಳಿದೆ ಅದು “ಕ್ಲೋಸಪ್” ಎಂದರು ಆಕೆ. ಇದರಲ್ಲಿ ಉಜ್ಜಿದರೆ ನನ್ನ ಬಾಯಿ ಕ್ಲೋಸ್! ಅಂದುಕೊಂಡವಳೇ ಬನ್ನಿ ನೋಡಿ ಎಂದೆ. ಅವರು ನೋಡಿದವರೇ  “ಅರೇ ಅದು ಶೇವಿಂಗ್ ಕ್ರೀಮ್” ಎಂದರು. ಹೌದಲ್ಲ! ನಾನು ಸರಿಯಾಗಿ ಓದಿಲ್ಲ. ನನ್ನನ್ನೇ ಹಳಿದುಕೊಂಡೆ. ಕರೆಂಟು ಸಪ್ಲೈ ಹೋಗಿತ್ತು. ಕತ್ತಲೆ ಬೇರೆ, ಸಮಜಾಯಿಸುತ್ತಾ ಹೊರಬಂದೆ.

ಇನ್ನೊಮ್ಮೆ ಪರಿಚಯದವರ ಮನೆಯಲ್ಲಿ ಉಳಿದ ಸಂದರ್ಭ .ಬೆಳಗ್ಗೆ ನಾನು ಏಳುವ ಹೊತ್ತಿಗೆ ಮನೆಯೊಡತಿ ಆಕೆಯ ಅರೆಯುವುದು,ಎರೆಯುವುದು, ಕುದಿಸುವುದು(ಚಹಾ) ತೀರಿದಮೇಲೆ ತನ್ನ ಬಾಲವಾಡಿ ಕಂದನನ್ನು ಎಬ್ಬಿಸುತ್ತಿದ್ದಳು. “ಏಳು ಮಗಾ ಸ್ಕೂಲಿಗೆ ಹೊತ್ತಾಗುತ್ತೆ.ಹಲ್ಲುಜ್ಜಿ ಸ್ನಾನ,ಡ್ರೆಸ್ ಆಗಿ ರೆಡಿಯಾಗಬೇಕಲ್ಲಾ” ಎನ್ನುತ್ತಾ “ನಿನಗಾಗಿ ಕೆಂಪು ಬ್ರೆಶ್, ಕೆಂಪು ಪೇಸ್ಟ್, ಇದೆನೋಡು ಬಾ ಹಲ್ಲುಜ್ಜುವಿಯಂತೆ” ಎನ್ನುತ್ತಾ ಕಣ್ಣರಳಿಸಿ ಎದ್ದು ನಿಂತ ಮಗುವನ್ನು ಬಾತ್ ರೂಮಿಗೆ ಎಳಕೊಂಡು ಬಂದಿದ್ದಳು. ಅಲ್ಲಿ ಟೂತ್‌ಪೇಸ್ಟ್ ಟ್ಯೂಬನ್ನ ತನ್ನ ಕೈಗೇ ಕೊಡಬೇಕೆಂದು ಹಠ ಹಿಡಿಯುತ್ತಿತ್ತು ಮಗು.

“ಏನಂತೆ ಅಮ್ಮನ ಮಗನ ಗಲಾಟೆ?” ಎನ್ನತ್ತಾ ಬಳಿ ಹೋದೆ.

“ನೋಡಿ ಅಕ್ಕಾ, ಪೇಸ್ಟ್ ಟ್ಯೂಬನ್ನ ಅವನ ಕೈಯಲ್ಲೇ ಕೊಡಬೇಕೆಂದು ಹಠ ಹಿಡಿಯುತ್ತಾನೆ. ಕೊಟ್ಟಿತೋ ಅದನ್ನೆಲ್ಲ ಹಿಸುಕಿ ಹನುಮಂತನ ಬಾಲದಂತೆ ಮಾಡಿ ಮುಖ ಮೂತಿ ಮೆತ್ತುವುದಲ್ಲದೆ ನಾಳೆಗೆ ಇಲ್ಲ ನೋಡಿ” ಎಂದವರೇ ನನ್ನತ್ತ ತಿರುಗಿ “ನಿಮಗಾಗಿ ಬೆಡ್ ಟೀ ಮಾಡಿ ಡೈನಿಂಗ್ ಟೇಬಲಲ್ಲಿ ಇಟ್ಟಿದ್ದೀನಿ ಕುಡಿಯಿರಿ” ಎಂದರು. ಅದನ್ನೇ ಬಯಸಿದ್ದ ನಾನು ಹೋಗಿ ಕೈಗೆತ್ತಿಕೊಂಡೆ. ಬೆಡ್ ಟೀ ಹೋಗಿ ಅದು ‘ಡೆಡ್ ಟೀ’ (ತಣ್ಣಗೆ) ಆಗಿತ್ತು. ಮಗನ ಆರೈಕೆಯನ್ನು ಪೂರೈಸಿ ಅವರ ಪತಿಯನ್ನೂ ನನ್ನನ್ನೂ ತಿಂಡಿಗೆ ಕರೆದರು. ದೋಸೆ ತಟ್ಟೆಗೆ ಹಾಕುತ್ತಿದ್ದ ಪತ್ನಿಯನ್ನು ನೋಡಿದವರೇ “ಅದೇನೇ ನಿನ್ನ ಅವತಾರ! ನಿನ್ನ ನೈಟಿಗೆಲ್ಲಏನು ಮೆತ್ತಿಕೊಂಡಿದೆ ನೋಡಿದೆಯಾ?” ಅಂದರು. “ಏನು ಹೇಳಲಿ ನಿಮ್ಮ ಮಗನ ಲೂಟಿಯಾ!. ಟೂತ್ ಪೇಸ್ಟನ್ನೆಲ್ಲ ನನ್ನ ಬಟ್ಟೆಗೆ ಮೆತ್ತಿ  ಬಿಟ್ಟಿದ್ದಾನೆ” ಎಂದು ಗೊಣಗುತ್ತಾ ತೊಳೆಯುವುದಕ್ಕೆ ಹೋದರು. ನಾನು ತಿನ್ನುವುದಕ್ಕೆಂದು ತಟ್ಟೆಯಲ್ಲಿದ್ದ ದೋಸೆಗೆ ಕೈ ಹಾಕಿದರೆ ಅದರಲ್ಲೂ ಬಿದ್ದಿದೆ ಟೂತ್ ಪೇಸ್ಟ್!. ಅಯ್ಯೋ ದೇವರೇ ಇವನ ಹಗರಣವೇ! ನಿಮಗೆ ಬೇರೆ ದೋಸೆ ಹಾಕ್ತೀನಿ ಅದು ಬೇಡ ಬಿಡಿ” ಎಂದರು. “ಬೇಕೆಂದರೆ ನಾನದನ್ನು ತಿನ್ನುವುದುಂಟೇ!?”.

ಹುಡುಗಿ, ಮನೆತನ, ಅಂದ-ಚಂದ ಎಲ್ಲವೂ ನಮಗೆ ಅನುಕೂಲವಾಗೇ ಇದೆ. ಆದರೆ ಮುಂದಿನ ನಾಲ್ಕು ಹಲ್ಲುಗಳು ಮಾತ್ರ ಬಾಯಿ ಮುಚ್ಚಿದರೂ ಒಳಗೆ ಹೋಗಲ್ಲ ಎಂದು ವಧುವನ್ನು ನೋಡಿ ಬಂದ ವರನ ಕಡೆಯಿಂದ  ಹೇಳಿದರೆ; ಅದಕ್ಕೂ ಈಗ ಪರಿಹಾರವಿದೆಯಲ್ಲವೇ? ಸರಿಗೆ ಹಾಕಬಹುದು, ತಂತಿ ಕಟ್ಟಬಹುದು ಎಂದಿರೋ…,ಕೆಲವು ವೇಳೆ ಹುಡುಗಿಯ ವಯಸ್ಸು ಮುಂದೆ ನಿಂತರೆ; ಅದಕ್ಕೆ ಹಲ್ಲು, ತಾನೂ ಹಿಂಜರಿಯಲಾರೆ ಎಂದು ಭಿಮ್ಮನೆ ಕುಳಿತಿರುತ್ತದೆ!.

ಇದೆಲ್ಲದರಿಂದ ಮಿಗಿಲಾಗಿ ಇನ್ನೊಂದಿದೆ. ಅದುವೇ ಹುಳುಕು ಹಲ್ಲು. ಮನುಷ್ಯ ಒಳ್ಳೆಯವನಾಗಿರುತ್ತಾನೆ ಪಾಪ!  ಆದರೆ ಅವನ ಹಲ್ಲು ಹುಳುಕು ಮಾಡಿರುತ್ತದೆ. ತನ್ನ ಕೇಡಿಗೆ ತಾನೇ ಬಲಿ ಎಂಬಂತೆ ಅರ್ಧಕ್ಕರ್ಧ ಹೋಗಿ ಹುಳುಕಿನ ಕುರುಹು ಎಂಬಂತೆ ಬೇರು ಮಾತ್ರ ಉಳಿದಿದೆ ಎಂದರೆ ಚಿಂತಿಸಬೇಕೇ? ಬಿಡಿ ಹಲ್ಲುಗಳ ಜೋಡಣೆ, ಹಲ್ಲಿನ ಸೆಟ್ ಜೋಡಣೆ, ಎಂದೆಲ್ಲಾ ಇದೆಯಲ್ಲ!. ಹಲ್ಲೆಲ್ಲ ಬಿದ್ದುಹೋದ ಹಣ್ಣು ಹಣ್ಣು ಮುದುಕರನ್ನೂ ನವ ಯುವಕರನ್ನಾಗಿಸುವ ತಂತ್ರಕ್ಕೆ ದಂತ ವೈದ್ಯರುಗಳಿಗೆ ನಮಿಸಬೇಕು. ಕೃತಕ ಯುವಕರಲ್ಲೂ ಕೆಲವೊಂದು ತೊಂದರೆಗಳು ತೋರಿ; ಹಗರಣಗಳಾಗಿ ನಗೆಪಾಟಲಿಗೆ ವಸ್ತುಗಳಾಗಿ ಕಾಣಸಿಗುತ್ತವೆ.ಬೇಕೇ ಉದಾಹರಣೆ?

ರಂಗರಾಯರು-ನೇತ್ರಾವತಮ್ಮ ಗ್ರಾಮೀಣ ಪ್ರದೇಶದ ಮಾಗಿದ ದಂಪತಿಗಳು ಪುರೋಹಿತ ವೃತ್ತಿ ಮಾಡುತ್ತಿದ್ದ ರಾಯರು ಇತ್ತೀಚೆಗೆ ಅದನ್ನೂ ಕಡಿಮೆ ಮಾಡಿದ್ದಾರೆ. ಇರುವ ಒಬ್ಬನೇ ಒಬ್ಬ ಮಗ ಇಂಜಿನಿಯರ್ ಓದಿದವ ಅಮೇರಿಕದಲ್ಲಿದ್ದಾನೆ. ನಮ್ಮ ರಾಷ್ಟ್ರಕ್ಕಾಗಿಯೇ ದುಡಿದರೆ ಸಾಕೇ? ಅದು ಸ್ವಾರ್ಥವಾಗುವುದಿಲ್ಲವೇ?.ಬೇರೆ ದೇಶದ ಮೇಲೂ ಕನಿಕರ ತೋರಿಸಬೇಡವೇ ಎಂಬ ನಿಸ್ವಾರ್ಥ ಅವನದು.

“ರೀ…., ನನ್ನ ಓರಗೆಯವರ  ಹಲ್ಲಿನ ಸೆಟ್ ಬಂತು. ನನಗೆ ಮಾತ್ರ ಈ ಹುಳುಕು ಹಲ್ಲೇ ಗತಿ”. ಗಂಡನೊಡನೆ ತನ್ನ ಬೇಡಿಕೆ ಬಿಚ್ಚಿದ ನೇತ್ರಾವತಮ್ಮನಿಗೆ ರಾಯರು “ಅದೇನೇ ಎಲ್ಲರಿಗೂ ಆಯ್ತು.ನಂಗೆ ಆಗಿಲ್ಲ ಅನ್ನೋದಕ್ಕೆ ಏನದು ತಿಂಡಿಯಾ?” ಎಂದಾಗ  “ಅಲ್ಲಾರೀ….,ಮಗ ಪ್ರತಿಬಾರಿ ಫೋನ್ ಮಾಡುವಾಗಲೂ ಅಮ್ಮನಿಗೆ ಹಲ್ಲು ಕಟ್ಟಿಸಿ ಆಯ್ತಾ” ಅಂತ  ಕೇಳುತ್ತಿರುತ್ತಾನೆ. ನೀವು ಕಿವಿಗೇ ಹಾಕೊಳ್ಳೋದಿಲ್ಲ!”.

ಪತ್ನಿಯ ಆಕ್ಷೇಪಣೆಗೆ….. “ಹಲ್ಲು ಕಟ್ಟಿಸಿ ಆಯ್ತಾ ಎನ್ನುವುದಕ್ಕೇನದು ನೇತ್ರಾವತಿ ನದಿಗೆ ಅಣೆಕಟ್ಟು ಕಟ್ಟುವುದೇ?.ಅಲ್ಲ ಕಣೇ ಅವರೆಲ್ಲ ಕಟ್ಟಿಸಿದರು ಸರಿ.ಅದೇನು ಒರಿಜಿನಲ್ ಹಲ್ಲೇ?.ಚಕ್ಕುಲಿ ತಿನ್ನಬೇಕು ಅಂದ್ರೆ ಆಗೋಲ್ಲ, ಬಾಯಿ ತೊಳೀಬೇಕು ಅಂದ್ರೆ ತೆಗಿಬೇಕು.ರಾತ್ರಿ ಮಲಗುವಾಗ ನೀರಿನಲ್ಲಿ ಹಾಕಿಡ್ಬೇಕು.ಸೆಟ್ ಸರಿಯಾಗಿ ಕೂತರೆ ಸರಿ.ಇಲ್ಲಾಂದ್ರೆ ವಸಡು ನೋವು, ದವಡೆನೋವು. ಅದರ

ತೊಂದರೆಗಳು ಒಂದೇ ಎರಡೇ? ಮಾಡಿದ್ದು ಸರಿಯಾಗದಿದ್ರೆ,ಡಾಕ್ಟ್ರ ಅಜಾಗರೂಕತೆಯಾದರೆ,ಕೆಲವು ವೇಳೆ ಗ್ರಹಚಾರ ನೆಟ್ಟಗಿಲ್ಲದಿದ್ರೆ, ಮತ್ತೆ ಕೆಲವರಿಗೆ ಹೊಸತರಲ್ಲಿ ಒಂದಲ್ಲ ಒಂದು ತೊಂದರೆ ಇರುತ್ತಪ್ಪ ನೋಡು”.

 “ಯಾರೋ ಒಬ್ಬರಿಗೆ ಹಾಗಾಯ್ತು ಎಂದು ನಂಗೂ ಹಾಗಾಗ್ಬೇಕಾ? ನಿಮಗೆ ಮನಸ್ಸಿಲ್ಲಾಂದ್ರೆ ಬೇಡ ಬಿಡಿ” ಮೂತಿ ಉದ್ದ ಮಾಡಿದಳು ಅರ್ಧಾಂಗಿ.

 ಪತ್ನಿಯ ಮಾತುಗಳು ರಾಯರ ಚಿತ್ತವನ್ನು ಕಲಕಿತು.ಆದಷ್ಟು ಬೇಗ ಇವಳ ಹಲ್ಲಿನ ಸೆಟ್ಟಿಗೆ ವ್ಯವಸ್ಥೆ ಮಾಡಬೇಕೆಂದುಕೊಂಡರು ರಾಯರು. ಅವರಿಗೆ ಏಳು ದಶಕಗಳ ಆಯಸ್ಸು ಸರಿದು ಹೋದರೂ ಬಾಯೊಳಗೆ ಮೂವತ್ತೆರಡು ಹಲ್ಲುಗಳೂ ಆರೋಗ್ಯವಾಗಿದೆ.ನಕ್ಕರೆ ನವಯುವಕರನ್ನೂ ನಾಚಿಸುವಂತಹ ಹಲ್ಲುಗಳು ರಾಯರದು.ಪರಿಚಯದವರೋ ಸ್ನೇಹಿತರೋ ಹಲ್ಲು ಜೋಡಿಸಿಕೊಂಡ ಬಾಯಿಯನ್ನು ನೋಡಿದ್ದಾರೆ. ಅದು ಬಿಟ್ಟರೆ ಬೇರೆ ಆ ಬಗ್ಗೆ  ವಿವರಗಳು ಅವರಿಗೆ ತಿಳಿಯದು.ನೇತ್ರಾವತಮ್ಮನೂ ಇದಕ್ಕೆ ಹೊರತಾಗಿಲ್ಲ. ಹೀಗೊಂದು ದಿನ ದಂತ ಚಿಕಿತ್ಸಾಲಯದೊಳಗೆ ನುಗ್ಗಿ ಡಾಕ್ಟ್ರ ಬೇಟಿಯಾದರು. “ಡಾಕ್ಟ್ರೇ ನನಗೆ ಹಲ್ಲಿನ ಸೆಟ್ ಬೇಕಿತ್ತು”.
“ನಿಮಗೆ ಹಲ್ಲುಗಳೆಲ್ಲ ಸರಿಯಾಗಿಯೇ ಇವೆಯಲ್ಲಾ?”
“ನನಗಲ್ಲ ಡಾಕ್ಟ್ರೇ ನನ್ನ ಪತ್ನಿ ನೇತ್ರಾವತಿಗೆ”
“ಓಹ್. ನಾಳೆ ಅವರನ್ನೆ ಇಲ್ಲಿಗೆ ಕರಕ್ಕೊಂಬನ್ನಿ ನೋಡೋಣ”.

ಮುಂದಿನ ದಿನ ರಾಯರು ಪತ್ನಿಯ ಜೊತೆಗೆ ಪ್ರತ್ಯಕ್ಷರಾದರು. ವೈದ್ಯರು ನೇತ್ರಾವತಿಯಮ್ಮನ ಬಾಯರಳಿಸಿ ನೋಡಿದರು.ನೋಡಿದವರಿಗೆ ತಾನು ಇತ್ತೀಚೆಗೆ ನೋಡಿದ ಯಕ್ಷಗಾನದ ಮಂಥರೆಯ ಪಾತ್ರ ನೆನಪಾಯ್ತು!. ನಾಯಿಹಲ್ಲಿನಂತೆ ಎರಡು ಕೋರೆಹಲ್ಲುಗಳು!!. ನಡುವೆ ಒಂದೆರೆಡು ಕಪ್ಪಾದ ಹುಳುಕು ಹಲ್ಲು.

 “ನೇತ್ರಾವತಮ್ಮ.., ನೀವು ಹಲವಾರು ಬಾರಿ ಕ್ಲಿನಿಕ್ಕಿಗೆ ಬರಬೇಕು. ನಿಮ್ಮ ಹಲ್ಲುಗಳನ್ನು ದಿನದಲ್ಲಿ ಒಂದೋ ಎರಡೋ ಕೀಳಬೇಕು.ಹೀಗೆ ಎಲ್ಲವೂ ಕಿತ್ತಮೇಲೆ ವಸಡು ಒಣಗಬೇಕು. ಮತ್ತೆ ನಿಮ್ಮ ವಸಡಿಗೆ ಕೂರುವಂತೆ ಸರಿಯಾದ ಅಳತೆಯಲ್ಲಿ ಹಲ್ಲಿನ ಸೆಟ್ ತಯಾರಿಸುತ್ತೇವೆ”.
 “ಡಾಕ್ಟ್ರೇ.., ಈ ಹುಳುಕು ಹಲ್ಲುಗಳನ್ನು ತೆಗೆದು ಬಿಸಾಡೋಕೆ ಯಾಕೆ ದೀರ್ಘ ದಿವಸಗಳನ್ನು ತಕ್ಕೊಳ್ತೀರಿ.ಒಂದೇ ದಿವಸದಲ್ಲಿ ಎಲ್ಲವನ್ನೂ ಕೀಳಬಹುದಲ್ಲ, ಕಿತ್ತು ಬಿಸಾಕಿ”.
“ಆಗೋದಿಲ್ಲಮ್ಮ…, ಅದೇನು ಬಾಳೆಗೊನೆಯಿಂದ ಬಾಳೆಹಣ್ಣು ಕೀಳುವುದೇ!? ಈ ದಿನ ಒಂದು ಹಲ್ಲು ಕೀಳ್ತೀನಿ, ಆ ಮೇಲೆ ಹೇಳುವಿರಂತೆ”.

“ಅಯ್ಯೋ ದೇವರೇ ನೋವು ತಡೆಯೋಕಾಗೋದಿಲ್ಲಾರೀ” ಹಲ್ಲು ಕೀಳಿಸಿದ ನೇತ್ರಾವತಮ್ಮ ನೋವಿಗೆ ಚುಚ್ಚಿದ ಇಂಜೆಕ್ಷನ್ ಪ್ರಭಾವ ಇಳಿದ ಮೇಲೆ ಒದ್ದಾಡಿದರು. ಅಂತೂ ವೈದ್ಯರು ಹೇಳಿದ ಪ್ರಕಾರವೇ ನೇತ್ರಾವತಮ್ಮನ ಹಳೆಹಲ್ಲು ತೆಗೆದಿದ್ದೂ ಆಯ್ತು, ಹೊಸಹಲ್ಲು ಬಂದಿದ್ದೂ ಆಯ್ತು. ಹೊಸಹಲ್ಲು ಬಂದ ಹೆಮ್ಮೆಯಲ್ಲಿ ಎಲ್ಲಿಗಾದರೂ ಹೋಗಬೇಡವೇ?. ರಾಯರನ್ನು ಹುರಿದುಂಬಿಸಿಕೊಂಡು ತಂಗಿ ಮನೆಗೆ ತಲುಪಿದರು ನೇತ್ರಾವತಮ್ಮ. ಅಲ್ಲಿ ನೋಡಿದರೆ ತಂಗಿಯ ಅತ್ತೆ ಶಾಂತಮ್ಮನಿಗೂ ಹಲ್ಲಿನ ಸೆಟ್!.

ಇಬ್ಬರೂ ಅವರವರ ಅನುಭವಗಳನ್ನು ಹೇಳಿಕೊಂಡರು. ರಾತ್ರಿ ಮಲಗುವಾಗ ಹಲ್ಲನ್ನು ನೀರಿನಲ್ಲಿ ಹಾಕಿಡುವುದಕ್ಕೆ ಸ್ಟೀಲಿನ ಬೌಲ್ ಬಂತು. ಇಬ್ಬರ ಹಲ್ಲುಗಳೂ ಅಕ್ಕ-ಪಕ್ಕ ಕುಳಿತುಕೊಂಡು ಸ್ನೇಹಸೇತು ಮಾಡಿಕೊಂಡವು. ತಡರಾತ್ರಿಯಲ್ಲಿ  ಮಾಡಿನಿಂದ ಇಲಿಗಳ ಕಿಚಕ್ ಕಿಚಕ್ ಸದ್ದಿಗೆ ನೇತ್ರಾವತಮ್ಮನಿಗೆ ಅರೆನಿದ್ದೆಯಲ್ಲೂ  ತಮ್ಮ ಹಲ್ಲು ಸೆಟ್ ನೆನಪಿಗೆ ಬಂತು. ಸ್ಟೀಲು ಬೌಲಿನಿಂದ ಇಲಿ ಕೊಂಡೋಗಿ ಬಿಟ್ಟರೆ ತನ್ನ ಗತಿ!.ಅರೆ ಎಚ್ಚರದಲ್ಲೇ ಹಲ್ಲಿನ ಸೆಟ್ಟನ್ನು ಬೌಲಿನಿಂದ ತೆಗೆದು ತನ್ನ ಬ್ಯಾಗಿನೊಳಗಿಟ್ಟು ನಿದ್ದೆಗೆ ಜಾರಿದರು.

ಬೆಳಗ್ಗೆ ಎದ್ದ ರಾಯರು ಪತ್ನಿಯೊಂದಿಗೆ “ಏನೇ ಒಂದೇ ಸಮ ಬಾಯರಳಿಸಿ ಕನ್ನಡಿ ನೋಡ್ತಾ ಇದ್ದಿಯಾ?”.
“ಅಲ್ಲ ಕಣ್ರೀ ..,ನಿನ್ನೆವರೆಗೆ ಬಾಯೊಳಗೆ ಸರಿಯಾಗಿ ಕೂತಿದ್ದ ಹಲ್ಲು ಇಂದು ಜಾರುತ್ತಿದೆ ಸರಿಯಾಗಿ ಸೆಟ್ಟೇ ಆಗುವುದಿಲ್ಲ!!”.
” ಅದು ಹೊಸತರಲ್ಲಿ ಹಾಗೇ ಕಣೇ. ದಿನ ಹೋಗುತ್ತಾ ಸರಿಯಾಗಿ ಕೂತಿರುತ್ತದೆ”.

ಇತ್ತ ಶಾಂತಮ್ಮ ತನ್ನ ಹಲ್ಲು ಇಲಿ ಕೊಂಡೋಯ್ತು ಎಂದು ಹಲುಬುತ್ತಿದ್ದರು. ಮನೆಯಿಡೀ ಹುಡುಕಾಡಿದರು.ಎಲ್ಲೂ ಇಲ್ಲ. “ಇಲಿ ಎಲ್ಲಿ ಕೊಂಡೋಗಿ ಹಾಕ್ತೋ, ಹಾಳು ಇಲಿಗಳ ಕಾಟ”. ಒಂದೇ ಸಮ ಗೊಣಗುತ್ತಿದ್ದರು. ತಿಂಡಿ ತೀರಿಸಿದ ರಾಯರು+ನೇತ್ರಾವತಮ್ಮ ಊರಿಗೆ ಹೊರಟು ನಿಂತರು.

“ಬ್ಯಾಗ್ ತೆಗಿಯೋ ಆ ಪರ್ಸ್ ಕೊಡು” ರಾಯರು ಪತ್ನಿಗೆ ಹೇಳಿದರು. ಪರ್ಸ್ ಕೈಗೆ ಬರುತ್ತಲೇ ಉಬ್ಬಿದ ಪರ್ಸನ್ನು ನೋಡುತ್ತಾರೆ! ಅದರೊಳಗೆ ಹಲ್ಲಿನ ಸೆಟ್ ಭದ್ರವಾಗಿ ಕುಳಿತಿತ್ತು.
ಅದು ಯಾರದ್ದೆಂದು ಓದುಗರು ನೀವೇ ಹೇಳಿ ಶಾಂತಮ್ಮಂದೋ ನೇತ್ರಾವತಮ್ಮಂದೋ?.

ವಿಜಯಾಸುಬ್ರಹ್ಮಣ್ಯ ಕುಂಬಳೆ.

10 Comments on “ಹಲ್ಲಿನ ಹಗರಣ

  1. ಚೆನ್ನಾಗಿದೆ ನಿಮ್ಮ ಹಲ್ಲಿನ ಬರಹ…ಹಾಸ್ಯ ಲೇಖನ ಸೂಪರ್

  2. ಲಘು ಹಾಸ್ಯ ಮಿಶ್ರಿತ ಹಲ್ಲಿನ ಪುರಾಣ ಚೆನ್ನಾಗಿದೆ.

  3. ಹಲ್ಲಿನ ಹಗರಣ ಓದಿ ನಾನೂ ಹಲ್ಲು ಕಿಸಿಯುವಂತಾಯಿತು. ತಿಳಿಹಾಸ್ಯ ಮಿಶ್ರಿತ ಲೇಖನ ಚೆನ್ನಾಗಿದೆ.

  4. ಲೇಖನ ಓದಿ ನಕ್ಕು ಸಾಕಾಯಿತು.ಹಲ್ಲಿನಪುರಾಣ ಸೊಗಸಾಗಿದೆ

  5. ಕೃತಕ ಹಲ್ಲುಗಳು ಮಾಡಿದ ಉಪಕಾರಕ್ಕಿಂತ ನೀಡಿದ ಉಪಟಳವೇ ಹೆಚ್ಚಾಗಿಬಿಡ್ಟಿತಲ್ಲಾ! ಲೇಖನದ ತಿಳಿಹಾಸ್ಯ ಮುದ ನೀಡಿತು.

  6. ಓದಿ ಮೆಚ್ಚಿದ, ತಾವೂ ನಕ್ಕು, ನನಗೂ ಕೃತಜ್ಞತಾಭಾವ ಮೂಡಿಸಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು.

  7. ಓದಿ ಲೈಕ್ ಕೊಟ್ಟ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.

  8. ಓದಿ ಲೈಕ್ ಕೊಟ್ಟ ಎಲ್ಲರಿಗೂ ವಂದನೆಗಳು.

Leave a Reply to C.N.Muktha Cancel reply

 Click this button or press Ctrl+G to toggle between Kannada and English

Your email address will not be published. Required fields are marked *