ಹಾಲ್‌ನಲ್ಲಿ ಹಾಕಿದ್ದ ಸೋಫಾದಲ್ಲಿ ಕೃತ್ತಿಕಾ, ಸಿಂಧು ಕುಳಿತು ಮನೆಯನ್ನು ಅವಲೋಕಿಸಿದರು. ಅವರ ಎದುರು ಕುಳಿತಿದ್ದ ವಾರುಣಿ ಟೇಬಲ್ ಮೇಲೆ ಇಟ್ಟಿದ್ದ ಹಳೆಯ ಮ್ಯಾಗಝೀನ್ ನಲ್ಲಿ ಮುಳುಗಿದ್ದಳು.
“ವಾರುಣಿ, ಮನೆ ಚೆನ್ನಾಗಿದೆಯಲ್ವಾ?”
“ತುಂಬಾ ಚೆನ್ನಾಗಿದೆ. ಫು಼ಲ್ ಫರ್ನಿಷ್ಡ್. ಅಡಿಗೆ ಮನೆಯಲ್ಲೂ ಎಲ್ಲಾ ಪಾತ್ರೆಗಳಿವೆ. ಮೂರು ರೂಂಗಳಲ್ಲೂ ಮಂಚ, ಫ್ಯಾನ್ ಇದೆ. ಈ ಮನೆ ಸಿಕ್ಕಿದರೆ ನಿಮ್ಮ ಪುಣ್ಯ………”
“ಯಾಕೆ ಹಾಗಂತೀಯಾ?”
“ಸರಸ್ವತಿಪುರಂ ಆಗಿರೋದ್ರಿಂದ ಗಂಗೋತ್ರಿಗೆ ಹತ್ತಿರವಾಗಿದೆ. ಸವiಯ ಬಂದ್ರೆ ನಡೆದೂ ಹೋಗಬಹುದು……..”
ಅಷ್ಟರಲ್ಲಿ ಮಾನಸ ಬಂದು ಹೇಳಿದಳು. “ಮನೆಕೊಡಲು ಒಪ್ಪಿದ್ದಾರೆ. ಅವರಿಗೆ ಅಡ್ವಾನ್ಸ್ ಬೇಕಂತೆ. ಹದಿನೈದು ಸಾವಿರ ಬಾಡಿಗೆ.”
“ಎಷ್ಟು ವಿಚಿತ್ರ ಅಲ್ವಾ?”
“ವಿಚಿತ್ರವೇನಿಲ್ಲ ಕೆಳಗಡೆ ತಾಯಿ-ಮಗಳು ಮಾತ್ರ ಇರುವುದು, ಅವರಿಗೆ ಹುಡುಗರಿಗೆ ಬಾಡಿಗೆಗೆ ಕೊಡುವುದಕ್ಕೆ ಭಯ. ಮೇಲಿನ ಮನೆ ಬಾಡಿಗೆಗೆ ಕೊಟ್ಟಿದ್ದರಲ್ಲಾ ಅವರು ಈಗ ಅಮೇರಿಕಾದಲ್ಲಿದ್ದಾರೆ. ಅವರು ಮಿನಿಮಮ್ ರೆಂಟ್ ಅಂತ 10,000 ರೂ. ಕೊಡ್ತಿದ್ದಾರಂತೆ. ಅವರೇ “ನಮಗೆ ಮನೆ ಬಿಡಲು ಇಷ್ಟವಿಲ್ಲ. ನೀವು ಯಾರಿಗಾದರೂ ಬಾಡಿಗೆಗೆ ಕೊಡಿ. ‘ಅವರು ನಮ್ಮ ಸಾಮಾನುಗಳನ್ನು ಉಪಯೋಗಿಸಲಿ. ಎರಡು ವರ್ಷ ನಾವು ಬರಲ್ಲ. ಆಮೇಲೆ ನೋಡೋಣ’ ಅಂದಿದ್ದಾರಂತೆ.”
“ಹಾಗಾದರೆ ನಮಗೆ ತಿಂಗಳಿಗೆ 4 ಸಾವಿರಾನೂ ಬೀಳಲ್ಲ” ಎಂದಳು ಕೃತ್ತಿಕಾ ಖುಷಿಯಿಂದ.
“ವಾರುಣಿ ನಮ್ಮ ಜೊತೆ ಬರ್ತಾ ಇಲ್ಲ” ಮಾನಸ ಹೇಳಿದಳು.
“ಯಾಕೆ ವಾರಿಣಿ?”
“ನಮ್ಮ ತಂದೆ ಅಕ್ಕ ಇದೇ ಊರಿನಲ್ಲಿ ವಿದ್ಯಾರಣ್ಯಪುರಂನಲ್ಲಿದ್ದಾರೆ. ನಾನು ಅಲ್ಲಿರಬೇಕು. ಅಲ್ಲಿದ್ದರೆ ಹಣ ಕೊಡುವ ಹಾಗಿಲ್ಲ.”
“ಓ ನೀನೇನು ಅವರಮನೆ ಭಾವೀ ಸೊಸೇನಾ?”
“ಅವರು ಹಾಗೆ ಅಂದುಕೊಂಡಿದ್ದಾರೆ. ಅವರ ಮಗ ಬಿ.ಎ. ಕೂಡ ಪಾಸ್ ಮಾಡಿಲ್ಲ……..”
“ಓದಿರುವ ಸೊಸೇಂತ ನಿನ್ನ ಮುದ್ದು ಮಾಡ್ತಾರಾ?”
“ಹುಂ. ತುಂಬಾ ಮುದ್ದು ಮಾಡ್ತಾರೆ. ನಾನು ಅವರ ಮನೆಯಲ್ಲಿ ಇರ‍್ತೀನೀಂತ ಗೊತ್ತಾದ ತಕ್ಷಣ ಕೆಲಸದವರನ್ನು ಬಿಡಿಸ್ತಾರೆ. ಆ ಮನೆಯಲ್ಲಿದ್ದರೆ ಪಾತ್ರೆ ತೊಳೆಯೋದು, ಬಟ್ಟೆ ಒಗೆಯೋದು, ಕಸ ಗುಡಿಸೋದು ಎಲ್ಲಾ ನಾನೇ ಮಾಡಬೇಕು…….”
“ಆ ಮನೆಯಲ್ಲಿ ಯಾರ‍್ಯಾರಿದ್ದಾರೆ?”
“ನಮ್ಮತ್ತೆ, ಅವರ ಮಗಳು, ಇಬ್ಬರು ಗಂಡು ಮಕ್ಕಳು. ಮಾವ ಹೋಗಿಬಿಟ್ಟಿದ್ದಾರೆ. ನಮ್ಮತ್ತೆ ಗಂಡು ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಲ್ಲ.”
“ಮಗಳು ಏನ್ಮಾಡ್ತಿದ್ದಾಳೆ?”
“ಪಿ.ಯು.ಸಿ ದಂಡಯಾತ್ರೆ ಹೊಡೆಯುತ್ತಿದ್ದಾಳೆ. ಮದುವೆಯಾಗಿ ಹೋಗುವ ಹುಡುಗೀಂತ ಅವಳ ಕೈಲಿ ಕೆಲಸ ಮಾಡಿಸಲ್ಲ.”
“ಈ ವಿಚಾರ ನಿಮ್ತಂದೆ-ತಾಯಿಗೆ ಗೊತ್ತಿಲ್ವಾ?”
“ನಮ್ಮ ತಂದೆ ಶ್ರೀರಾಮಚಂದ್ರನ ತರಹ. ಅವರ ತಂದೆಗೆ ತಮ್ಮ-ತಂಗಿ-ಅಕ್ಕ ಎಲ್ಲರನ್ನೂ ನೋಡಿಕೊಳ್ತೀನಿ” ಅಂತ ಮಾತುಕೊಟ್ಟಿದ್ದರಂತೆ. ಅದನ್ನು ಚಾಚೂ ತಪ್ಪದೆ ಪಾಲಿಸ್ತಾರೆ. ಇನ್ನು ನಮ್ಮಮ್ಮ ಸತಿ ಸಾವಿತ್ರಿ. ಗಂಡ ಹಾಕಿರುವ ಗೆರೆ ದಾಟಲ್ಲ. ನನಗೆ ನಮ್ಮತ್ತೆ ಮನೆಯಲ್ಲಿ ಇರಲು ಇಷ್ಟವಿಲ್ಲ. ಆದರೆ ಅನಿವಾರ್ಯ……”
“ಸ….ರಿ ಮನೆ ಗೊತ್ತು ಮಾಡಿದ್ದಾಯ್ತು. ಹತ್ತಿರದಲ್ಲಿ ಒಳ್ಳೆಯ ಮೆಸ್ ಇದೆಯಾ?” ಸಿಂಧು ಕೇಳಿದಳು.
“ಓನರ್‌ನ ಕೇಳ್ದೆ. ಹತ್ತಿರ ಯಾವುದೂ ಒಳ್ಳೆಯ ಮೆಸ್ ಇಲ್ಲವಂತೆ. ಮೆಸ್‌ನ ನಂಬುವುದರ ಬದಲು ನೀವೇ ನೀವೇ ಅಡಿಗೆ ಮಾಡಿಕೊಳ್ಳಿ ಅಥವಾ ಯಾರನ್ನಾದರೂ ಅಡಿಗೆಯವರನ್ನು ಇಟ್ಟುಕೊಳ್ಳಿ” ಅಂದ್ರು.
“ಹೋಗೇ ಯಾರು ಅಡಿಗೆ ಮಾಡ್ತಾರೆ?” ಎಂದಳು ಕೃತ್ತಿಕಾ.
“ನಾನೊಂದು ಮಾತು ಹೇಳಲಾ? ಯಾರೂ ತಪ್ಪು ತಿಳಿಯಬಾರದು? ಎಂದಳು ಸಿಂಧು.
“ಏನು ಹೇಳು……..”
“ವಾರುಣಿ ನಿನಗೆ ಅಡಿಗೆ ಮಾಡಕ್ಕೆ ಬರತ್ತೆ ಅಲ್ವಾ? ನಾವು ತರಕಾರಿ ಹೆಚ್ಚಿಕೊಡ್ತೇವೆ. ನೀನು ತಿಂಡಿ, ಅಡಿಗೆ ಜವಾಬ್ದಾರಿ ತೊಗೋ. ನೀನು ಏನೂ ಹಣ ಕೊಡಬೇಡ. ನಮ್ಮ ಜೊತೆ ಇರು. ಮನೆ ಕಸ ಗುಡಿಸಕ್ಕೆ, ಪಾತ್ರೆ ತೊಳೆಯಲು ಕೆಲಸದವರನ್ನು ಇಟ್ಟುಕೊಳ್ಳೋಣ. ವಾಷಿಂಗ್ ಮಿಷನ್‌ಗೆ ಬಟ್ಟೆ ಹಾಕಿದರಾಯ್ತು.”
“ನೀವು ವಾರುಣೀನ್ನ ಏನಂದುಕೊಂಡಿದ್ದೀರಾ?” ಮಾನಸ ರೇಗಿದಳು.
“ಅವಳು ಹೇಳಿದ್ದರಲ್ಲಿ ತಪ್ಪೇನಿಲ್ಲ. ನನಗೆ ನಮ್ಮತ್ತೆ ಮನೆಗಿಂತ ಇಲ್ಲಿರೋದು ಆರಾಮ ಅನ್ನಿಸತ್ತೆ. ಆದರೆ ನನ್ನದು ಒಂದೆರಡು ಕಂಡಿಷನ್ಸ್ಗಳಿವೆ.”
“ಏನು ಕಂಡಿಷನ್ಸ್?”
“ಕಾಲೇಜ್‌ನಲ್ಲಿ ನಾನು ಅಡಿಗೆ ಮಾಡುವ ವಿಚಾರ ಯಾರಿಗೂ ಹೇಳಬಾರದು. ಮೆಸ್‌ನಲ್ಲಿ ಊಟ ಮಾಡ್ತೀವೀಂತ ಹೇಳಬೇಕು.”
“ಓ.ಕೆ.”
“ಊಟಕ್ಕೆ ಫ್ರೆಂಡ್ಸ್ನ ಕರೆತರಬಾರದು. ನಿಮ್ಮ ತಂದೆ-ತಾಯಿ ಓ.ಕೆ. ಬೇರೆ ಯಾರೂ ಊಟಕ್ಕೆ ಬರಬಾರದು.”
“ಅಷ್ಟೆ ತಾನೆ?”
“ಇಲ್ಲ. ಇನ್ನೊಂದು ಮುಖ್ಯವಾದ ಕಂಡಿಷನ್ ಇದೆ.”
“ಕಾಫಿ, ಟೀ ಬೇಕಾದಾಗ ನೀವೇ ಮಾಡಿಕೊಳ್ಳಬೇಕು. ನನ್ನನ್ನು ಕೆಲಸದವಳ ತರಹ ಟ್ರೀಟ್ ಮಾಡಬಾರದು.”
“ಆಗಲಿ ತಾಯಿ. ನಿಮ್ಮನೆಯಲ್ಲಿ ಇದಕ್ಕೆ ಒಪ್ತಾರಾ?”
“ಅವರಿಗೆ ನಾನೇನಾದರೂ ಹೇಳ್ತೀನಿ ಬಿಡಿ.”
“ವಾರುಣಿ ಇನ್ನೊಂದು ಸಲ ಈ ಬಗ್ಗೆ ಯೋಚಿಸು.”
“ಯೋಚಿಸಕ್ಕೇನಿಲ್ಲ ಮನು. ನಮ್ಮಲ್ಲಿ ಭಿನ್ನಾಭಿಪ್ರಾಯ ಬಂದರೆ ನಾನು ನಮ್ಮತ್ತೆ ಮನೆಗೆ ಹೋಗ್ತೀನಷ್ಟೆ.”
“ಸರಿ. ಅಡ್ವಾನ್ಸ್ ಕೊಟ್ಟುಬಿಡೋಣ. ಬರುವ ಸೋಮವಾರದಿಂದ ನಿನ್ನ ನಳಪಾಕ. ಸಾಮಾನುಗಳನ್ನು ನೀನೇ ಲಿಸ್ಟ್ ಮಾಡು. ಆನ್ ಲೈನ್‌ನಲ್ಲಿ ತರಿಸೋಣ.”
“ಓ.ಕೆ.”
ಬೆಂಗಳೂರಿಗೆ ಹೊರಡುವ ರೈಲಿನಲ್ಲಿ ವಾರುಣಿ, ಮಾನಸ ಕುಳಿತರು. ಸಿಂಧು ಕೆ.ಆರ್. ಪೇಟೆಯವಳು. ಕೃತ್ತಿಕಾ ಕೊಡಗಿನವಳು. ಪ್ರಸ್ತುತ ಕುಶಾಲನಗರದ ವಾಸಿ. ವಾರುಣಿಗೆ ಮಾನಸ ಹೈಸ್ಕೂಲ್‌ನಿಂದ ಸಹಪಾಠಿ. ಒಟ್ಟಿಗೆ ಕಾಲೇಜು ಓದಿದ್ದರು. ಅವಳ ಬಲವಂತಕ್ಕೆ ವಾರುಣಿ ಇಂಗ್ಲೀಷ್ ಎಂ.ಎ.ಗೆ ಅಪ್ಲೈ ಮಾಡಿದ್ದಳು. ಪ್ರವೇಶ ಪರೀಕ್ಷೆಗೆ ಬಂದಾಗ ಸಿಂಧು, ಕೃತ್ತಿಕಾ ಪರಿಚಯವಾಗಿದ್ದರು. ನಾಲ್ಕಾರು ಸಲ ಭೇಟಿಯಾದ ಮೇಲೆ ಒಟ್ಟಿಗೆ ಇರುವ ನಿರ್ಧಾರ ತೆಗೆದುಕೊಂಡಿದ್ದರು.
ಸಿಂಧು ತಂದೆ ಬಟ್ಟೆ ಅಂಗಡಿ ಇಟ್ಟಿದ್ದರು. ಕೃತ್ತಿಕಾ ತಂದೆ ಇಂಜಿನಿಯರ್, ತಾಯಿ ಲೆಕ್ಚರರ್. ಕೃತ್ತಿಕಾ ಒಬ್ಬಳೇ ಮಗಳು. ಮಾನಸ ತಂದೆ ಕೈಗಾರಿಕೋದ್ಯಮಿ. ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ್ದ ಮಾನಸ ಅಷ್ಟೇ ಶ್ರೀಮಂತ ಹೃದಯ ಹೊಂದಿದ್ದಳು. ವಾರುಣಿಗೆ ತುಂಬಾ ಸಂದರ್ಭಗಳಲ್ಲಿ ಸಹಾಯ ಮಾಡಿದ್ದಳು.
ವಾರುಣಿ ಮಧ್ಯಮವರ್ಗದ ಕುಟುಂಬದ ಮಗಳು. ತಂದೆ ಶ್ರೀನಿವಾಸರಾವ್ ಪ್ರೌಢಶಾಲಾ ಶಿಕ್ಷಕರಾಗಿ ನಿವೃತ್ತರಾಗಿದ್ದರು. ತಾಯಿ ಶಕುಂತಲಾ ಗೃಹಿಣಿ. ಅವರ ಮೂರು ಮಕ್ಕಳಲ್ಲಿ ವಾರುಣಿ ದೊಡ್ಡವಳು. ಅವಳ ತಂಗಿ ಶ್ರಾವಣಿ ಪಿ.ಯು.ಸಿ. ಮುಗಿಸಿ ೨ ವರ್ಷ ಮನೆಯಲ್ಲಿದ್ದು ಕಂಪ್ಯೂಟರ್ ಕಲಿತಿದ್ದಳು. ಆದರೆ ಕೆಲಸ ಸಿಕ್ಕಿರಲಿಲ್ಲ. ಅಲ್ಪಸ್ವಲ್ಪ ಬರುವ ಹಣದಲ್ಲಿ ತನಗೆ ಬೇಕಾಗಿದ್ದು ಕೊಳ್ಳುತ್ತಿದ್ದಳು. ಈಗ ಯಾವುದೋ ಕಂಪ್ಯೂಟರ್ ಸೆಂಟರ್‌ನಲ್ಲಿ ಕೆಲಸ ಸಿಕ್ಕಿತ್ತು. ತಮ್ಮ ಶಂಕರ ಹೈಸ್ಕೂಲ್‌ನಲ್ಲಿದ್ದ.
ಅವರ ಮನೆಯಲ್ಲಿ ಶ್ರೀನಿವಾಸರಾವ್, ಇಬ್ಬರು ತಮ್ಮಂದಿರು ಶಿವಶಂಕರ್ ಹಾಗೂ ಸುಧಾಕರರ ಕುಟುಂಬವಿತ್ತು. ತಂಗಿ ದೇವಕಿ ಕೆ.ಇ.ಬಿಯಲ್ಲಿದ್ದಳು. ಅವಳ ಗಂಡ ಚೆನ್ನರಾಯ ಪಟ್ಟಣದಲ್ಲಿ ಪಿ.ಡಬ್ಲ್ಯೂ.ಡಿ ಯಲ್ಲಿ ಗುಮಾಸ್ತರು. ಮದುವೆಯ ನಂತರ ಬೆಂಗಳೂರಿಗೆ ವರ್ಗಮಾಡಿಸಿಕೊಂಡು ಹೆಂಡತಿಯ ಮನೆಯಲ್ಲೇ ಇದ್ದರು. ಶಿವಶಂಕರ್ ಲೆಕ್ಚರರ್. ಅವನ ಹೆಂಡತಿ ಶೋಭಾ ಗೃಹಿಣಿ. ಒಳ್ಳೆಯ ಸ್ವಭಾವದ ಹೆಣ್ಣು ಮಗಳು. ಅವಳಿಗೆ ಒಬ್ಬ ಮಗನಿದ್ದ. ಸುಧಾಕರ ಟ್ರೆಷರಿಯಲ್ಲಿ ಗುಮಾಸ್ತ. ತನ್ನ ಸಹೋದ್ಯೋಗಿ ಜಾನಕಿಯನ್ನು ಮೆಚ್ಚಿ ಮದುವೆಯಾಗಿದ್ದ. ಅವರಿಗೆ ೨ ವರ್ಷದ ಮಗಳಿದ್ದಳು. ಮನೆಯಲ್ಲಿ ಕೆಲಸದವರಿರಲಿಲ್ಲ. ಒಂದೆರಡು ತಿಂಗಳು ಕೆಲಸದವರನ್ನಿಟ್ಟುಕೊಂಡು ಆ ಸುಖ ಅನುಭವಿಸಿದ್ದಾಗಿತ್ತು.
ತಂದೆ-ತಾಯಿಯ ಭೋಳೆಯ ಸ್ವಭಾವದಿಂದ ಕುಟುಂಬದ ಆರ್ಥಿಕ ಸಮಸ್ಯೆ ಬಗೆಹರಿಯುವುದಿಲ್ಲವೆಂದು ವಾರುಣಿಗೆ ಚೆನ್ನಾಗಿ ಅರ್ಥವಾಗಿತ್ತು. ಶಿವಶಂಕರ್ ಕಡು ಜಿಪುಣ. ಶೋಭಾ, ಶಕುಂತಲಾ ಜೊತೆ ಪೈಪೋಟಿಗೆ ಬಿದ್ದಂತೆ ಕೆಲಸ ಮಾಡುತ್ತಿದ್ದರು. ಆದರೆ ಆರ್ಥಿಕ ಸ್ವಾತಂತ್ರ್ಯವಿರಲಿಲ್ಲ. ಸುಧಾಕರ-ಜಾನಕಿ ತುಂಬಾ ಜಾಣರು. ಹಾಲು, ಕಾಫಿಪುಡಿಯ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಬೇರೆ ಯಾವುದಕ್ಕೂ ಖರ್ಚು ಮಾಡುತ್ತಿರಲಿಲ್ಲ. ಜಾನಕಿ ಯಾವ ಕೆಲಸಕ್ಕೂ ಕೈ ಹಾಕುತ್ತಿರಲಿಲ್ಲ. ಬೆಳಿಗ್ಗೆ ರೆಡಿಯಾಗಿ, ಗಂಡನ ಜೊತೆ ಹೊರಡುವುದೇ ದೊಡ್ಡ ಕೆಲಸ ಎನ್ನುವಂತಿದ್ದಳು. ಅವಳ ಎರಡು ವರ್ಷದ ಮಗಳು ಶರಣ್ಯ ದೊಡ್ಡಮ್ಮಂದಿರ ಕಣ್ಣುಗೊಂಬೆಯಾಗಿದ್ದಳು.
ದೇವಕಿ-ಅವಳ ಗಂಡ ಮನೆಗೆ ಬೇಕಾದ ತರಕಾರಿ, ತೆಂಗಿನಕಾಯಿ, ಹಬ್ಬಗಳಲ್ಲಿ ಹಣ್ಣು, ಹೂವು ತರುತ್ತಿದ್ದರು. ದೇವಕಿ ತನಗೆ ಸಾಕಷ್ಟು ಖರ್ಚು ಮಾಡಿಕೊಳ್ಳುತ್ತಿದ್ದಳು. ಅಣ್ಣನ ಮಕ್ಕಳಿಗೆ ಒಂದು ಮಾರು ಹೂವು ತೆಗೆದುಕೊಟ್ಟವಳಲ್ಲ. ಕೆಲಸಕ್ಕೆ ಕೈ ಹಾಕುತ್ತಲೇ ಇರಲಿಲ್ಲ. ತನ್ನ ಕೆಲಸ ಆಗಬೇಕಾದಾಗ ಮಾತ್ರ ಅಣ್ಣನ ಮಕ್ಕಳಿಗೆ ಏನಾದರೂ ಕೊಡಿಸುತ್ತಿದ್ದಳು. ಸಿನಿಮಾಗೆ ಕಳುಹಿಸುತ್ತಿದ್ದಳು.
ವಾರುಣಿಗೆ ತಾಯಿ-ತಂದೆಯರ ಬಗ್ಗೆ ಅತಿ ಪ್ರೀತಿ. ಅವರ ಒಳ್ಳೆಯತನ ದುರುಪಯೋಗ ಮಾಡಿಕೊಳ್ಳುತ್ತಾರಲ್ಲಾ ಎಂಬ ಸಂಕಟವೂ ಇತ್ತು. ತಾಯಿಯ ಕೆಲಸದ ಹೊರೆ ಕಡಿಮೆ ಮಾಡಲು ಅವಳು ಬೇಗ ಎದ್ದು ಬಾಗಿಲಿಗೆ ನೀರುಹಾಕಿ, ಮನೆಗುಡಿಸಿ, ಸಾರಿಸಿ, ಪಾತ್ರೆತೊಳೆಯುತ್ತಿದ್ದಳು. ಅಷ್ಟರಲ್ಲಿ ಸುಧಾಕರ ಹಾಲು ತರುತ್ತಿದ್ದ. ಫಸ್ಟ್ಡೋಸ್ ಕಾಫಿ ಕುಡಿದು ಹೊರಗೆ ಬರುತ್ತಿದ್ದಳು. ಅಷ್ಟರಲ್ಲಿ ಶಕುಂತಲಾ-ಶೋಭಾ ಸ್ನಾನ ಮುಗಿಸಿ ಕೆಲಸ ಶುರು ಮಾಡುತ್ತಿದ್ದರು. ಶ್ರೀನಿವಾಸರಾವ್ ಸ್ನಾನ ಮುಗಿಸಿ ಬರುವುದರೊಳಗೆ ವಾರುಣಿ ಸ್ನಾನಮಾಡಿ, ದೇವರ ಮನೆ ಕ್ಲೀನ್ ಮಾಡುತ್ತಿದ್ದಳು.
ವಾರುಣಿಯ ತಂಗಿ ಶ್ರಾವಣಿ ಚಿಕ್ಕಪ್ಪನ ಮಕ್ಕಳಿಗೆ ಸ್ನಾನಮಾಡಿಸಿ ಡ್ರೆಸ್ ಮಾಡಬೇಕಿತ್ತು. ಸ್ನಾನ ಆದವರ ಬಟ್ಟೆಗಳನ್ನು ವಾಷಿಂಗ್ ಮಿಷನ್‌ಗೆ ಹಾಕುವ ಕೆಲಸ ಶೋಭಾಳದು. ಸಣ್ಣಪುಟ್ಟ ಬಟ್ಟೆಗಳನ್ನು ತಾನೇ ಒಗೆದು ಗಂಡಸರದೊಂದು ದಿನ, ಹೆಂಗಸರದೊಂದು ದಿನ ಎಂದು ನಿಗಧಿ ಮಾಡಿಕೊಂಡು ವಾಷಿಂಗ್ ಮಿಷನ್‌ಗೆ ಹಾಕುತ್ತಿದ್ದಳು.
ಸಾಯಂಕಾಲ ಅಕ್ಕ-ತಂಗಿಯರು ಸೇರಿ ಬಟ್ಟೆಗಳನ್ನು ಮಡಿಸಿ, ಅವರವರ ರೂಮ್‌ನಲ್ಲಿ ಇಡುತ್ತಿದ್ದರು. ಶಕುಂತಲಾಗೂ ಮಕ್ಕಳ ಕಷ್ಟ, ಗಂಡನ ಪರದಾಟ ನೋಡಿ ಬೇಸರವಾಗುತ್ತಿತ್ತು. ಅವರ ಮನೆಯ ಬಾಡಿಗೆ ಹೆಚ್ಚಿರಲಿಲ್ಲ. ಶ್ರೀನಿವಾಸರಾವ್ ಬೆಂಗಳೂರಿಗೆ ವರ್ಗವಾಗಿ ಬಂದಾಗ ಅವರ ತಂದೆ-ತಾಯಿ ಹೊಳೆನರಸೀಪುರದ ಹತ್ತಿರ ಹಳ್ಳಿಯಲ್ಲಿದ್ದರು. ಪ್ರೈಮರಿಶಾಲಾ ಉಪಾಧ್ಯಾಯರಾಗಿದ್ದ ಅವರು ಮಗನನ್ನು ಬಿ.ಎಸ್.ಸಿ., ಬಿ.ಎಡ್ ಓದಿಸಿದ್ದರು.
“ನಿನ್ನ ತಮ್ಮ-ತಂಗಿ ಓದಿಗಾಗಿ ನೀನು ಬೆಂಗಳೂರಿನಲ್ಲಿರುವುದು ಒಳ್ಳೆಯದು” ಎಂದು ಅವರಿವರ ಕೈಕಾಲು ಹಿಡಿದು ಮಗನನ್ನು ಬೆಂಗಳೂರಿಗೆ ವರ್ಗಮಾಡಿಸಿದ್ದರು. ಮದುವೆಯಾದ ಹೊಸದು. ಗಂಡ-ಹೆಂಡತಿ ವಠಾರದೊಂದು ಸಣ್ಣ ಮನೆಯಲ್ಲಿದ್ದರು.
(ಮುಂದುವರಿಯುವುದು)
ಸಿ.ಎನ್. ಮುಕ್ತಾ
ಕಾದಂಬರಿ ಪ್ರಕಟಣೆ ಆರಂಭಿಸಿರುವುದಕ್ಕೆ ಧನ್ಯವಾದಗಳು ಹೇಮಮಾಲಾ ಅವರೇ..
ಕಾದಂಬರಿಯು ಆರಂಭದಲ್ಲಿಯೇ ಕುತೂಹಲ ಮೂಡಿಸುತ್ತಿದೆ…ಧನ್ಯವಾದಗಳು.
ಕನಸೊಂದು ಪ್ರಾರಂಭವಾಗಿದೆ..ಕುತೂಹಲ ಕಾರಿಯಾಗಿದೆ.. ಮುಂದೆ ನೋಡುವ… ಓದುವ ಬಯಕೆ ಉಂಟಾಗುವ ಹಾಗಿದೆ..ಮೇಡಂ ಅಭಿನಂದನೆಗಳು..
ಕಥೆಯ ಕನಸಿನೊಂದಿಗೆ ನಮಗೂ ಓದುವ ಆಸೆ ಮೂಡಿದೆ… ವಾರುಣಿಯ ನಳಪಾಕ ಹೇಗಿದೆಯೋ ನೋಡೋಣ…ಮುಂದೆ. ಆಸಕ್ತಿಕರ ಆರಂಭ…ಧನ್ಯವಾದಗಳು ಮುಕ್ತಾ ಮೇಡಂ.
ಕುತೂಹಲಕರ ಆರಂಭ. ವಾರುಣಿಯ ಸ್ವಭಾವ ಇಷ್ಟವಾಯಿತು.
ಸುಜಾತಾ ರವೀಶ್
ಕಾದಂಬರಿಯ ಶುರು ಚೆನ್ನಾಗಿದೆ.
ಅಭಿಪ್ರಾಯ ತಿಳಿಸಿದ ಆತ್ಮೀಯ ಗೆಳತಿಯರೆಲ್ಲ ರೀತಿಗೂ ಧನ್ಯವಾದಗಳು.
ಹೊಸ ಕಥೆ. ಓದುಗರಿಗೆ ಮತ್ತೊಂದು ಸಂಭ್ರಮ
ಆಸಕ್ತಿದಾಯಕ ಪ್ರಾರಂಭ ಮುದ ನೀಡಿತು.