ಬೆಳಕು-ಬಳ್ಳಿ

ಆ – ಪೋಶನ !

Share Button


ಕಿಟಕಿಯಾಗು ಎಂದೆ
ಬಾಗಿಲಾದೆ ; ಸರಾಗ ಹೋಗಿ ಬರಲು !

ಕಣ್ಣ ಬೆಳಕಾಗು ಎಂದೆ
ಸೂರ್ಯೋದಯವಾದೆ ; ಮಿಂದೇಳಲು

ಗೀತಗುನುಗಾಗು ಎಂದೆ
ಸ್ವರಸಂಗೀತವಾದೆ ; ಹಾಡ ಮಣಿಸಲು

ತುಷಾರವಾಗು ಎಂದೆ
ಸುರಿವ ಮಂಜಾದೆ ; ಹಸಿರ ನಗಿಸಲು

ಬಿಡಿಹೂವಾಗು ಎಂದೆ
ಮಾಲೆಯೇ ಆದೆ ; ಮುಡಿಯ ಸಿಂಗರಿಸಲು !

ಹಣ್ಣಿನ ರುಚಿಯಾಗು ಎಂದೆ
ಫಲಭರಿತ ಮರವೇ ಆದೆ ; ತಿಂದು ತೇಗಲು!

ಬೆಳ್ಮುಗಿಲಾಗು ಎಂದೆ
ಜೋರುಮಳೆಯೇ ಆದೆ ; ತಣಿಸಿ ದಣಿಸಲು

ಹರಿವ ನೀರಾಗು ಎಂದೆ
ಜಲಪಾತವೇ ಆದೆ ; ಪ್ರವಹಿಸಿ ಆಕ್ರಮಿಸಲು

ಖಾಲಿ ಹಾಳೆಯಾಗು ಎಂದೆ
ಅಕ್ಷರವಾದೆ ; ಕವಿತೆಯಾಗಿ ಕಂಗೊಳಿಸಲು

ಸದಾ ಜೊತೆಗಿರು ಎಂದೆ
ಉಸಿರ ಬಿಸಿಯಾದೆ ; ಜೀವಾತ್ಮವ ನೇವರಿಸಲು

ಕೊನೆಗೆ ನೀನೆಂದೆ :
ಅಲ್ಲ, ‘ನಾ ಕೇಳಿದ್ದೇನು ? ನೀನಾಗಿದ್ದೇನು ?ʼ

ಇಷ್ಟಾಗೆಂದರೆ ಅಷ್ಟಾಗುವೆ ;
ನನ್ನೊಡನಿರದೇ ಜಗವಾಗುವೆ

ನಿನ್ನಾಯ್ಕೆ ಸಂಭ್ರಮಕೆ ನಾ ಸಡಗರಿಸಲಾರೆ ;
ಅಳತೆ ಮೀರಿದ ಬದುಕನೆಂದೂ ಧರಿಸಲಾರೆ ! ’

ಆಗಂದುಕೊಂಡೆ : ‘ನಿನ್ನಂಥವರೇ ಹೀಗೆ ;
ಹತ್ತಿರಕೆ ಕರೆದು , ದೂರವಾಗುವ ಸಲುಗೆ ! ’

ಈ ಧಾವಂತದಲಿ ಕಡಲುಕ್ಕಿ ಪೂರ ಕಿನಾರೆಯನೇ ನುಂಗಿತ್ತು
ಅದು ಬಿಕ್ಕಳಿಸಿದ ಶಬ್ದಕೆ, ಜೀವಕೋಟಿ ಮಮ್ಮಲ ಮರುಗಿತ್ತು !!

ಹೆಚ್ ಎನ್ ಮಂಜುರಾಜ್, ಮೈಸೂರು.

11 Comments on “ಆ – ಪೋಶನ !

  1. ತುಂಬ ದಿನಗಳ ನಂತರ ಬರೆದ “ಆಪೋಶನ”ವನ್ನು
    ಪ್ರಕಟಿಸಿದ ಸುರಹೊನ್ನೆಗೆ ಧನ್ಯವಾದ…

  2. ಅತಿ ಆಮೃತವೂ ವಿಷವೆ.
    ನಮ್ಮ ಊರಿನ ಸಮೀಪ ಅಂದರೆ ಎರಡೇ ಫರ್ಲಾಂಗ್ ದೂರದಲ್ಲಿ ಕಾವೇರಿ ಹೊಳೆ ಇಬ್ಭಾಗವಾಗಿ ನಡುಗಡ್ಡೆ ನಿರ್ಮಾಣವಾಗಿದೆ, ಸು. ಒಂದು ನೂರು ಎಕರೆಯ ಭೂ ಪ್ರದೇಶದ ದ್ವೀಪ. ಅಲ್ಲೊಂದು ಪುಟ್ಟ ದೇವಸ್ಥಾನ. ಒಂದುಚಿಕ್ಕ ಆಶ್ರಮ. ನೀರಿನ ಹರಿವು ಕಡಿಮೆ ಇರುವ ಸಂದರ್ಭದಲ್ಲಿ ಆ ಆಶ್ರಮಕ್ಕೆ ವಾಹನದಲ್ಲಿ ಹೋಗಿ ಬರಲೆಂದು ಒಂದು ಉಳಾಣಿ ಸೇತುವೆ ಇತ್ತೀಚೆಗೆ, ಒಂದು ವರ್ಷದ ಹಿಂದೆ, ಅದು ಈ ಸಲದ ಪ್ರವಾಹದಲ್ಲಿ ಕೊಚ್ಚಿ ಹೋಯಿತು. ಇದು ಸರ್ಕಾರದ ಲೆಕ್ಕದಲ್ಲಿ ಆದದ್ದು.
    ಆದರೆ ಸುಮಾರು ಐದು ವರ್ಷಗಳ ಹಿಂದೆ ಊರ ಜನರ ಕೊಡುಗೆಯಾಗಿ ಸ್ವಂತ ನಿಗಾದಲ್ಲಿ ನಿರ್ಮಿಸಿದ್ದ ಅರ್ಧ ಸೇತುವೆಗೆ ಹಾನಿಯಾಗಿಲ್ಲ.
    ಒಂದೋ ತಿನ್ನುವುದು ಅತಿಯಾದಾಗ ಆಗಬೇಕಾದ್ದು ನಿಕೃಷ್ಟ. ಇನ್ನೊಂದೋ ಅತಿವೃಷ್ಟಿಗೆ ಅಡೆತಡೆಯಿರುವುದಿಲ್ಲ.
    ನಿಮ್ಮೀ ಗದ್ಯಕವನ ಸೊಗಸಾಗಿದೆ. ಅಭಿನಂದನೆಗಳು.

    1. ಹೊಸ ಸಂಗತಿ……

      ಪ್ರತಿಸ್ಪಂದನೆಗೆ ಧನ್ಯವಾದ ಗುರುಗಳೇ….

  3. ವಾವ್..ನಮ್ಮ ಬೇಡಿಕೆ ಗಿಂತ ಹಿರಿದಾದುದನ್ನು ನೀಡುವ ಪ್ರಕೃತಿ ಯ ವಿಶಾಲ ಹೃದಯದಮುಂದೆ ನಮ್ಮನ್ನು ನಾವು… ವಿಮರ್ಶೆ ಮಾಡುಕೊಳ್ಳುವಂತಿದೆ ..ಸಾರ್ ಅರ್ಥಪೂರ್ಣ ವಾದ ಕವನ

  4. ದಣಿಸಿ ತಣಿಸಿದರೆ ಆಗುವುದು ಇಷ್ಟ.. ತಣಿಸಿ ದಣಿಸಿದರೆ ಕಷ್ಟ ಕಷ್ಟ… ಅಂದುಕೊಳ್ಳುವುದು ಒಂದು ಆಗುವುದು ಇನ್ನೊಂದು… ವಾಸ್ತವ ಅಲ್ವಾ ಸರ್. ಕವಿತೆ ತುಂಬಾ ಅರ್ಥಪೂರ್ಣವಾಗಿದೆ

    1. ತಣಿಸುವ
      ದಣಿಸುವ
      ಒಟ್ಟಾರೆ ಬದುಕ ಮಣಿಸುವ

      ಎಷ್ಟು ಮಜಲು!

      ಧನ್ಯವಾದ ಸರ್ ನಿಮ್ಮ ಸೃಜನ ಪ್ರತಿಕ್ರಿಯೆಗೆ!!

  5. ಎಲ್ಲವನ್ನೂ ಸಮೃದ್ಧವಾಗಿ ನೀಡಿರುವ ಪ್ರಕೃತಿಮಾತೆಗೆ ನಾವೇನೂ ನೀಡಿಲ್ಲ..‌
    ನೀಡಿದ್ದು ಬರೇ ನೋವು…
    ಅಂತರಾಳದ ಭಾವವು ಹದವಾಗಿ ಹೊರಸೂಸಿದ ಚಿಂತನಯೋಗ್ಯ ಕವನ.

  6. ತುಂಬ ಅರ್ಥವತ್ತಾದ ಕವನ ಮನತಟ್ಟಿತು.

Leave a Reply to Nagaraj Ningegowda Cancel reply

 Click this button or press Ctrl+G to toggle between Kannada and English

Your email address will not be published. Required fields are marked *