ಬೊಗಸೆಬಿಂಬ

ಸಮಾಜಕ್ಕೆ ಮಾರಕವಾದ ಮಹಾ ಪಿಡುಗು: ವಿವಾಹ ವಿಚ್ಛೇದನ

Share Button

“ ಮದುವೆಯ ಈ ಬಂಧ, ಅನುರಾಗದ ಅನುಬಂಧI  ಏಳೇಳು ಜನುಮದಲೂ ತೀರದ ಸಂಬಂಧII”

ಜಗತ್ತಿನ ಎಲ್ಲಾ ಜೀವಕೋಟಿಗಳಿಗೂ ಎಷ್ಟೋ ಜನ್ಮಗಳು ಬಂದು ಹೋಗಿ, ಕೊನೆಯ ಏಳು ಜನ್ಮಗಳು ಮಾನವ ಜನ್ಮ ಎನ್ನುತ್ತಾರೆ, ತಿಳಿದವರು. ಆ ಏಳು ಮಾನವ ಜನ್ಮಗಳಲ್ಲೂ ಗಂಡ – ಹೆಂಡಿರಾಗಿ ಬಾಳಿ, ಎಂಬ ಶುಭ ಹಾರೈಕೆಗಳನ್ನು ತಿಳಿಸುವ ಈ ಹಾಡಿನಂತೆ ವಿವಾಹ ಬಂಧನ ಇರಬೇಕು.

ಆದರೆ… ಇಂದು ವಿವಾಹ ಎಂಬುದೊಂದು ಆಡಂಬರದ ಪ್ರದರ್ಶನ ಎನಿಸಿಕೊಳ್ಳುವುದು, ಮಾತ್ರವಲ್ಲದೆ ಆ ಸಂಬಂಧ ಏಳು ವರ್ಷಗಳು ಯಾ ಏಳು ತಿಂಗಳುಗಳು, ಹೆಚ್ಚೇಕೆ ಏಳು ವಾರಗಳು ಕೂಡಾ  ಮುಂದುವರಿಯದಂತಹ ಎಷ್ಟೋ ಉದಾಹರಣೆಗಳನ್ನು ನಾವಿಂದು ನೋಡಬಹುದಾಗಿದೆ. ಅಂದರೆ ಅಷ್ಟು ಶೀಘ್ರವಾಗಿ ವಿಚ್ಛೇದನ ಪಡೆಯುವ ಜೋಡಿಗಳನ್ನು ಇತ್ತೀಚೆಗೆ ಬಹಳಷ್ಟು ಕಾಣಬಹುದು. ಇದಕ್ಕೆ ಏನು ಕಾರಣ? ಹುಡುಗಿಯೋ/ ಹುಡುಗಿಯ ಕುಟುಂಬದವರೋ,?ಅಥವಾ  ಹುಡುಗನೋ/ ಹುಡುಗನ ಕುಟುಂಬದವರೋ? ಚಿಂತಿಸೋಣ. ಇತ್ತೀಚಿಗಿನ ದಿನಗಳಲ್ಲಿ ವಿವಾಹ ವಿಚ್ಛೇದನಕ್ಕೆ ಹಲವಾರು ಕಾರಣಗಳನ್ನು ಗುರುತಿಸಬಹುದು. ಮುಖ್ಯವಾಗಿ :

ಸಾಮಾಜಿಕ ಬದಲಾವಣೆಗಳು ಮತ್ತು ವೈಯಕ್ತಿಕ ಪ್ರಭಾವ:
ಹಿಂದೂ ಪರಂಪರೆಯಲ್ಲಿ ವಿವಾಹ ಎಂಬುದೊಂದು ಪವಿತ್ರ ಬಂಧನ ಎಂದು ಪರಿಗಣಿಸಲಾಗಿತ್ತು, ಮತ್ತು ವಿಚ್ಛೇದನವನ್ನು ತೀವ್ರವಾಗಿ ವಿರೋಧಿಸುವುದು, ತಿರಸ್ಕರಿಸುವುದು ನಡೆಯುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ವಿವಾಹ ಬಂಧನ ಎಂಬುದರ ಬಗ್ಗೆ ಯುವ ಪೀಳಿಗೆಯ ದೃಷ್ಟಿಕೋನ ಬದಲಾಗುತ್ತಿದೆ. ಇಂದು ವಿವಾಹವನ್ನು ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸುವ ಬದಲು ಜನರು ವೈಯಕ್ತಿಕ ಸಂತೋಷ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ. ಇದರಿಂದಾಗಿ ವಿಚ್ಛೇದನಗಳ ಸಂಖ್ಯೆ ಅಧಿಕವಾಗುತ್ತಿದೆ.

ಮಹಿಳಾ ಸಬಲೀಕರಣ ಮತ್ತುಆರ್ಥಿಕ ಸ್ವಾತಂತ್ರ್ಯ:
ಇಂದು ಸ್ತ್ರೀಯರು ಶಿಕ್ಷಣ ಮತ್ತು ಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಸ್ವಾವಲಂಬಿಯಾದ ಅವಳು ಇತರರ ದಬ್ಬಾಳಿಕೆ, ದೌರ್ಜನ್ಯ ಇತ್ಯಾದಿಗಳನ್ನು ಸಹಿಸುವುದಿಲ್ಲ. ಅಲ್ಲದೆ ಆರ್ಥಿಕವಾಗಿ ಸಬಲಳಾದ ಆಕೆ “ತನ್ನ ಕಾಲ ಮೇಲೆ ನಿಲ್ಲುವಷ್ಟು” ಸಮರ್ಥಳಾಗಿರುತ್ತಾಳೆ.

ನಗರೀಕರಣ ಮತ್ತು ಸಂಸಾರದಲ್ಲಾದ ಬದಲಾವಣೆಗಳು:
ಉದ್ಯೋಗ ನಿಮಿತ್ತ ನಗರಗಳತ್ತ ವಲಸೆ ಹೋಗುವ ದಂಪತಿಗಳು ಹೊಸದಾಗಿ ಸಂಸಾರ ಹೂಡುತ್ತಾರೆ. ನಾವಿಬ್ಬರು, ನಮಗಿಬ್ಬರು ಅಥವಾ ನಮಗೊಂದು ಎಂಬ ಸಂಕುಚಿತ ಭಾವನೆಯಿಂದ ಹೊಸದಾಗಿ ಸಂಸಾರ ಹೂಡುವ  ಇಂದಿನ ಯುವ ಜನತೆ, ಪರಿಸ್ಥಿತಿಗೆ ಅನುಸಾರವಾಗಿ, ಜೀವನ ನಿರ್ವಹಣೆಗಾಗಿ ಇಬ್ಬರೂ ದುಡಿಯುವುದು ಅನಿವಾರ್ಯ ಎಂದು ಉದ್ಯೋಗ ಮಾಡುತ್ತಾರೆ. ಪರಂಪರೆಯಲ್ಲಾದ ಈ ಒಂದು ಬದಲಾವಣೆ  ದಂಪತಿಗಳ ನಡುವೆ ಒತ್ತಡವನ್ನು ಹೆಚ್ಚಿಸಿ, ವಿವಾಹದ ಸ್ಥಿರತೆಯನ್ನು ಅಲುಗಾಡಿಸುತ್ತದೆ.

ಕಾನೂನುನಲ್ಲಾದ ಸುಧಾರಣೆಗಳು ಮತ್ತು ವಿಚ್ಛೇದನ ಸುಲಭೀಕರಣ:
ಇಂದು ವಿಚ್ಛೇದನ ಪಡೆಯಲು ಕಾನೂನನಲ್ಲಾದ ಬದಲಾವಣೆಗಳು ಅವರಿಗೆ ಅನುಕೂಲಕರವಾಗಿದೆ. ವಿಶೇಷವಾಗಿ “ನೋ ಫಾಲ್ಟ್” ವಿಚ್ಛೇದನ ನಿಯಮಗಳು ದಂಪತಿಗಳಿಗೆ ಪರಸ್ಪರ ಒಪ್ಪಂದದ ಮೂಲಕ ಬೇರೆಯಾಗಲು ಅವಕಾಶ ನೀಡುತ್ತದೆ. ಅದು “ತೂಕಡಿಸುವವನಿಗೆ ಹಾಸಿಗೆ ಹಾಕಿಕೊಟ್ಟಂತೆ” ಅಲ್ಪಸ್ವಲ್ಪ ವೈಮನಸ್ಸು ಉಂಟಾದ ಸತಿಪತಿಗಳನ್ನು ಬೇಗನೆ ದೂರವಾಗಿಸಲು ಸಹಕಾರಿಯಾಗಿದೆ.

ಹೊಂದಾಣಿಕೆಯ ಕೊರತೆ,  ವೈಯಕ್ತಿಕ ಸಮಸ್ಯೆಗಳು:
ದಂಪತಿಗಳ ನಡುವೆ ಹೊಂದಾಣಿಕೆಯ ಕೊರತೆ “ಅಹಂ”, ಸ್ವಪ್ರತಿಷ್ಠೆಗಳ ಸಮಸ್ಯೆ, ಭಾವನಾತ್ಮಕ ಅಸಮಾಧಾನಗಳು. ಇತ್ತೀಚಿನ ಅಧ್ಯಯನಗಳ ಪ್ರಕಾರ ಸಂವಹನ ಕೊರತೆ ಮತ್ತು ವೈಯಕ್ತಿಕ ಸಮಸ್ಯೆಗಳು ವಿಚ್ಛೇದನಕ್ಕೆ ಪ್ರಮುಖ ಕಾರಣಗಳು ಎನ್ನುತ್ತದೆ.

ಮನೋವೈಜ್ಞಾನಿಕ ಅಂಶಗಳು ಮತ್ತು ಮಾನಸಿಕ ಆರೋಗ್ಯ:
ಈಗಿನ ಯುವ ಜನತೆಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಹೆಚ್ಚುತ್ತಿರುವುದರಿಂದ ದಂಪತಿಗಳು ತಮ್ಮ ಭಾವನಾತ್ಮಕ ಕ್ಷೇಮವನ್ನು ಮೊದಲಿಗೆ ಪರಿಗಣಿಸುತ್ತಿದ್ದಾರೆ. ಮಾನಸಿಕ ಒತ್ತಡ, ಖಿನ್ನತೆ,  ದಾಂಪತ್ಯ ದೌರ್ಜನ್ಯ ಇತ್ಯಾದಿಗಳು ವಿಚ್ಛೇದನಕ್ಕೆ ಕಾರಣವಾಗುತ್ತಿದೆ .

ಮಕ್ಕಳ ಮೇಲೆ ವಿಚ್ಛೇದನದ ಪರಿಣಾಮಗಳು:
ವಿಚ್ಛೇದನವು ಮಕ್ಕಳ ಮೇಲೆ ಭಾವನಾತ್ಮಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಉಂಟು ಮಾಡಬಹುದು. ಅಧ್ಯಯನಗಳ ಆಧಾರದಿಂದ ಹೇಳುವುದಾದರೆ ವಿಚ್ಛೇದಿತ ಕುಟುಂಬಗಳಲ್ಲಿ ಬೆಳೆದ ಮಕ್ಕಳು ಖಿನ್ನತೆ, ಆತ್ಮವಿಶ್ವಾಸದ ಕೊರತೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ವಿಚ್ಛೇದನದ ಪ್ರಕರಣಗಳು ಮಹಾ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ ಮುಂತಾದ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಣಬಹುದು. ಇದಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪ ಕಡಿಮೆ ಇದೆ. ನಿಧಾನವಾಗಿ ಅಲ್ಲಿಯೂ ಈ ಪಿಡುಗು ಹೆಚ್ಚಾಗುತ್ತಿದೆ. ಇದಕ್ಕೆ ಪಾಶ್ಚಿಮಾತ್ಯರ ಅನುಕರಣೆಯೂ ಒಂದು ಕಾರಣವಾಗಿದೆ.

ವಿಚ್ಛೇದನ ಪ್ರಕ್ರಿಯೆಯಲ್ಲಿ ಕಾನೂನು ಸಲಹೆ:
ಈ ವಿಚಾರದಲ್ಲಿ ವಕೀಲರ ಸಲಹೆ ಸಹಾಯ ಅತ್ಯಗತ್ಯ. ಕಾನೂನು ಸಲಹೆಗಾರರು ದಂಪತಿಗಳಿಗೆ ಸೂಕ್ತ ಸಲಹೆ, ಸೂಚನೆಗಳನ್ನಿತ್ತು ಸಹಕರಿಸುತ್ತಾರೆ.

PC: Internet

ಭವಿಷ್ಯದಲ್ಲಿ ಸಮಾಜದ ಮೇಲಾಗುವ ವಿಚ್ಛೇದನದ ಪರಿಣಾಮಗಳು:
ಮಕ್ಕಳ ಬೆಳವಣಿಗೆಯ ಮೇಲೆ ಇದು ಬಹಳಷ್ಟು ಪರಿಣಾಮ ಬೀರಬಹುದು. ಮಗು ತಂದೆ ಅಥವಾ ತಾಯಿ ಇಬ್ಬರ ಪ್ರೀತಿ ವಾತ್ಸಲ್ಯವನ್ನು ಪಡೆಯುವುದು ಅಸಾಧ್ಯ. ಕೆಲವೊಂದು ಬಾರಿ ಮಗು ಸ್ವಲ್ಪ ಕಾಲ ತಂದೆ ಅಥವಾ ತಾಯಿ ಬಳಿ ಇರುವಂತೆ ನ್ಯಾಯಾಧೀಶರು ತೀರ್ಮಾನಿಸುತ್ತಾರೆ. ಈ ಸ್ಥಿತಿಯಲ್ಲಿ ಮಗು ಒಂದು ಸ್ಥಳದಲ್ಲಿ  ಮಾನಸಿಕ ಹಿಂಸೆ ಅನುಭವಿಸ ಬೇಕಾಗಬಹುದು. ಇಂತಹ ಪರಿಸ್ಥಿತಿ ಆ ಮಗುವಿನ ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು.

ಭವಿಷ್ಯದ ಒಂದು ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕಾಗಿದ್ದ “ಹಸಿ ಮಣ್ಣಿನ ಮುದ್ದೆ”  ಹಾಗಿರುವ ಆ ಮಗು ಖಿನ್ನತೆ, ಒಂಟಿತನ, ಮೊಂಡು,  ಹಠಮಾರಿತನ ಇತ್ಯಾದಿಗಳಿಗೆ ಒಳಗಾಗಬಹುದು; ಅಥವಾ ದುರಭ್ಯಾಸಗಳ ದಾಸನಾಗಬಹುದು.

” ಇಂದಿನ ಮಕ್ಕಳೇ ಮುಂದಿನ ಜನಾಂಗ” ಅಂತಿರಬೇಕಾದರೆ ನಮ್ಮ ಮುಂದಿನ ಪೀಳಿಗೆಯ ತಳಹದಿಯಾಗಿರುವ ಇಂದಿನ ಮಕ್ಕಳು ಉತ್ತಮ ಭವಿಷ್ಯವನ್ನು ಕಾಣಬೇಕು. ಒಳ್ಳೆಯ ವಾತಾವರಣದಲ್ಲಿ ಬೆಳೆಯಬೇಕು.

ಪರಿಹಾರ ಕ್ರಮಗಳು ಮತ್ತುಮುನ್ನೆಚ್ಚರಿಕೆ:
ವಿಚ್ಛೇದನದ ಪ್ರಮಾಣವನ್ನು ಕಡಿಮೆ ಮಾಡಲು ದಂಪತಿಗಳಿಗೆ ಮದುವೆಗೆ ಮೊದಲು ಮತ್ತು ಮದುವೆಯ ನಂತರ ಸೂಕ್ತ ಸಲಹೆಗಳನ್ನು, ಸಂವಹನ ಕೌಶಲ್ಯ ತರಬೇತಿ, ಮನೋವೈಜ್ಞಾನಿಕ ಸಹಾಯ ನೀಡುವುದು ಅಗತ್ಯವಾಗಿದೆ. ಸರಕಾರ ಹಾಗೂ ಸಮಾಜ, ಮತ್ತು ಸ್ವಯಂಸೇವಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು. ಅವರಿಗೆ ವಿವಾಹ ಬಂಧನದ ಪ್ರಾಮುಖ್ಯತೆಯನ್ನು ಮನಮುಟ್ಟುವಂತೆ ತಿಳಿಸಬೇಕು. ಪಾಶ್ಚಿಮಾತ್ಯರ ಅನುಕರಣೆಯಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಸುತ್ತಾ, ದುಡುಕಿನ ನಿರ್ಧಾರದಿಂದಾಗುವ ಅನಾಹುತಗಳನ್ನು ತಿಳಿಸುವುದಲ್ಲದೆ, ಮಕ್ಕಳ ಭವಿಷ್ಯದ ಕುರಿತು ಅವರಿಗೆ ಮನದಟ್ಟು ಮಾಡಿಸಬೇಕು. ಅವರೀರ್ವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿ- ಅಡಚಣೆಗಳು ಆಗದಂತೆ ಒಬ್ಬರಿಗೊಬ್ಬರು ಹೊಂದಿಕೊಂಡು, ಕಷ್ಟ ಸುಖಗಳನ್ನು ಅನುಭವಿಸಿ, ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆಯನ್ನು ನೀಡಬೇಕಾದುದು  ಯುವ ಪೀಳಿಗೆಯ ಪ್ರಧಾನ ಕರ್ತವ್ಯ ಎಂಬುದನ್ನು ಮರೆಯಬಾರದು.

ಹಿಂದೂ ಸಂಸ್ಕೃತಿಯಲ್ಲಿರುವ ಕೂಡು ಕುಟುಂಬಗಳಲ್ಲಿ ಬೆಳೆದ ಮಕ್ಕಳಿಗೂ, ಈಗಿನ ವಿಘಟಿತ ಕುಟುಂಬದಿಂದ ಬಂದ ಮಗುವಿಗೂ ತುಂಬಾ ವ್ಯತ್ಯಾಸವನ್ನು ಕಾಣಬಹುದು. ಸಂಘಟಿತ ಕುಟುಂಬದ ಮಗು ಎಲ್ಲರೊಂದಿಗೆ ಹೊಂದಿ ಬಾಳುವುದನ್ನು ಅನುಭವದಲ್ಲಿ ಕಲಿತಿರುತ್ತದೆ. ಮಕ್ಕಳಾಗಲಿ, ಇತರರೇ ಆಗಿರಲಿ, ಕೇಳಿ ಕಲಿಯುವುದಕ್ಕಿಂತ, ನೋಡಿ ಕಲಿಯುವುದೇ ಅಧಿಕ. ಮನೆಯಲ್ಲಿ ಅಪ್ಪ- ಅಮ್ಮ, ಹಿರಿಯರಾದ ಅಜ್ಜ-ಅಜ್ಜಿ, ಚಿಕ್ಕಪ್ಪ- ದೊಡ್ಡಪ್ಪ, ಚಿಕ್ಕಮ್ಮ- ದೊಡ್ಡಮ್ಮ ಇತ್ಯಾದಿ ಇತರ ಸದಸ್ಯರ ಹೊಂದಾಣಿಕೆಯ ಜೀವನವನ್ನು ನೋಡಿದ ಅವರು ಕೂಡ ಅದನ್ನೇ ಅನುಸರಿಸುತ್ತಾರೆ. ಆದರೆ ಅಪ್ಪ ಅಮ್ಮನ ಜೊತೆ ಮಾತ್ರ ಜೊತೆಗೆ ಬೆಳೆದ ಮಗು, ದೊಡ್ಡ ಕುಟುಂಬದ ಮಗುವಿನಷ್ಟು ಅನುಭವಗಳನ್ನು, ಸಾಮಾನ್ಯ ಜ್ಞಾನವನ್ನು, ಗಳಿಸಲಾರದು.

ವಿವಾಹಿತರು ಒಂದು ವೇಳೆ ವಿಚ್ಛೇದನವನ್ನು ಬಯಸುತ್ತಾರೆ, ಎಂಬ ವಿಚಾರ ತಿಳಿದ ತಕ್ಷಣ ಎರಡೂ ಕುಟುಂಬದ ಸದಸ್ಯರು ಅವರಿಗೆ ಮನಃಪರಿವರ್ತನೆ ಮಾಡಿಕೊಳ್ಳುವಂತೆ, ತಮ್ಮ ಸಂಸಾರವನ್ನು ಉಳಿಸಿಕೊಳ್ಳುವಂತೆ, ಸಲಹೆ- ಸೂಚನೆಗಳನ್ನು ಕೊಟ್ಟು, ಸಹಾಯ ಹಸ್ತ ನೀಡಿ, ಅವರನ್ನು ಉದ್ಧರಿಸುವತ್ತ ಯೋಚಿಸಬೇಕು.

ಕೊನೆಯದಾಗಿ ಹೇಳುವುದಾದರೆ ಇಂದು ಹಿಂದಿನ ದಿನಗಳಂತಲ್ಲ. ಗಂಡು-ಹೆಣ್ಣು ಈರ್ವರು ಸಮಾನರು. ಅದೇ ರೀತಿಯಾಗಿ ಸಂಸಾರದಲ್ಲೂ ಈರ್ವರು ಸಮಾನ ರೀತಿಯ ಜವಾಬ್ದಾರಿಯನ್ನು ವಹಿಸಿಕೊಂಡು ಒಬ್ಬರಿಗೊಬ್ಬರು ಸಹಕರಿಸುತ್ತಾ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾ, ಬಾಳನ್ನು ಹಸನಾಗಿಸಿಕೊಳ್ಳಬೇಕು.

ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು.

6 Comments on “ಸಮಾಜಕ್ಕೆ ಮಾರಕವಾದ ಮಹಾ ಪಿಡುಗು: ವಿವಾಹ ವಿಚ್ಛೇದನ

  1. ಆಗಲಿ, ನಿಮ್ಮ ಅನಿಸಿಕೆ ಮತ್ತು ಸಲಹೆ ಸ್ವಾಗತಾರ್ಹ…….

    ಭಾರತೀಯ ಕುಟುಂಬ ವ್ಯವಸ್ಥೆ ಇಡೀ ಜಗತ್ತಿಗೆ ಮಾದರಿ ಆಗಿತ್ತು.
    ಈಗ “ಒದರಿ” ಹೋಗುವಂತಾಗಿದೆ. ನಮ್ಮ ಯುವಜನರಿಂದ
    ಎಲ್ಲರೂ ಅಲ್ಲ; ಕೆಲರು. ಈ ಕೆಲರು ಹಲರು ಆಗುವುದರೊಳಗೆ
    ತಾಯ್ತಂದೆಯರ ಹೊಣೆ ಅಧಿಕ. ನಾವು ಚೆನ್ನಾದ ಬಾಳನ್ನು
    ಬಾಳಿದಾಗಷ್ಟೇ ನಮ್ಮ ಮುಂದಿನ ಪೀಳಿಗೆ ಚೆನ್ನಾದೀತು. ಅಷ್ಟೇ.

    ಅರಿತರೆ ನಾಕ; ಅರಿಯದಿದ್ದರೆ ನರಕ.

  2. ಪ್ರಸ್ತುತ ಸಮಾಜದ ಆಧಾರಸ್ತಂಭವನ್ನು ಅಲುಗಾಡಿಸುತ್ತಿರುವ ಗಂಭೀರ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಚಿಂತನಯೋಗ್ಯ ಲೇಖನ…ಧನ್ಯವಾದಗಳು ವನಿತಕ್ಕ.

  3. ಪ್ರಸ್ತುತ ಸಮಸ್ಯೆಯ ಕುರಿತು ವಿಸ್ತೃತ ಲೇಖನ. ಚೆನ್ನಾಗಿದೆ

  4. ನನ್ನ ಚಿಂತನವನ್ನು ಮೆಚ್ಚಿದ ಶ್ರೀಮತಿ ನಾಗರತ್ನ ಮೇಡಂ , ಶ್ರೀಮತಿ ಶಂಕರ್ ಶರ್ಮ ಮೇಡಂ ಶ್ರೀಮತಿ ನಯನ ಮೇಡಂ ಮತ್ತು ಶ್ರೀಯುತ ಮಂಜು ರಾಜ್ ಅವರಿಗೆ ಹೃದಯಾಂತರಾಳದ ನಮನಗಳು. ಹಾಗೂ ಲೇಖನವನ್ನು ಪ್ರಕಟಿಸಿದಂತಹ ಹೇಮಮಾಲಾ ಮೇಡಂ ಅವರಿಗೂ ಅನಂತ ಧನ್ಯವಾದಗಳು

  5. ಚಿಂತನೆಗೆ ಹಚ್ಚುವ ಪರಿಣಾಮಕಾರಿ ಲೇಖನ.

Leave a Reply to ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು Cancel reply

 Click this button or press Ctrl+G to toggle between Kannada and English

Your email address will not be published. Required fields are marked *