ಪ್ರವಾಸ

ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭೂತಾಯಿಯಒಡೆಯರುಯಾರು?

ಹತ್ತೊಂಭತ್ತನೆಯ ಶತಮಾನದಲ್ಲಿ ಬಂದರೋ ಬಂದರು ಪಾಶ್ಚಿಮಾತ್ಯರು, ಹಡಗುಗಳನ್ನು ಕಟ್ಟಿಕೊಂಡು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಈ ದ್ವೀಪರಾಷ್ಟ್ರಕ್ಕೆ ಬಂದಿಳಿದರು. ವಿಸ್ತಾರವಾದ ಬಯಲುಗಳನ್ನೂ, ಎತ್ತರವಾದ ಬೆಟ್ಟಗುಡ್ಡಗಳನ್ನೂ, ನೀಲವರ್ಣದ ಸರೋವರಗಳನ್ನೂ ಕಂಡು ಪುಳಕಿತರಾದರು. ಎಲ್ಲಿ ನೋಡಿದರೂ ಹಸಿರು ಹೊದ್ದ ಬೆಟ್ಟಗುಡ್ಡಗಳು, ಝುಳು ಝುಳು ಹರಿಯುವ ನದಿಗಳು, ಜಲಪಾತಗಳು, ಫಲವತ್ತಾದ ಭೂಮಿ. ಈ ನಿಸರ್ಗ ಸಿರಿಯನ್ನು ಕಂಡವರು ಅಲ್ಲಿಯೇ ನೆಲೆ ನಿಂತರು. ಈ ಪ್ರಕೃತಿಯಲ್ಲಿ ಅಡಗಿರುವ ನಿಧಿಯನ್ನು ತಮ್ಮದಾಗಿಸಿಕೊಳ್ಳಲು ಹಲವು ಬಗೆಯ ಯೋಜನೆಗಳನ್ನು ಸಿದ್ಧಪಡಿಸಿದರು.

ಕಾಡುಗಳನ್ನು ಬೆತ್ತಲೆಯಾಗಿಸಿದರು, ಮರಗಿಡಗಳ ಮಾರಣಹೋಮ ನಡೆದಿತ್ತು, ಅಲ್ಲಿದ್ದ ಕಾಡು ಪ್ರಾಣಿಗಳು ಬದುಕುಳಿಯಲಿಲ್ಲ. ಬೆಟ್ಟಗುಡ್ಡಗಳನ್ನು ಬೋಳಿಸಿ ಬೇಲಿಗಳನ್ನು ಹಾಕಿ ಕುರಿಗಳನ್ನು ಕೂಡಿದರು. ಆಧುನಿಕ ತಂತ್ರಜ್ಞಾನವನ್ನು ಬಳಸಿ ಕುರಿಗಳ ಸಂತತಿಯನ್ನು ಹೆಚ್ಚಿಸಿದರು. ಅವುಗಳ ಮಾಂಸ ಹಾಗೂ ಉಣ್ಣೆಯನ್ನು ರಫ್ತು ಮಾಡಿ ಸಾಕಷ್ಟು ಹಣ ಸಂಪಾದಿಸಿದರು. ನಂತರದಲ್ಲಿ ಗೋವುಗಳನ್ನು ಸಾಕಿದರು, ಗೋವುಗಳ ಹಾಲಿನಿಂದ ‘ಚೀಸ್’ ತಯಾರಿಸಿ ರಫ್ತು ಮಾಡಿದರು. ಗೋಮಾಂಸ ಹಾಗೂ ಡೈರಿ ಉತ್ಪನ್ನಗಳಿಂದ ಹೆಚ್ಚಿನ ಲಾಭ ಬಂದಿತು. ಮುಂದೆ ಸಾರಂಗಗಳನ್ನು ಸಾಕಿದರು, ಜಿಂಕೆ ಮಾಂಸ, ಅದರ ಚರ್ಮ ಹಾಗೂ ಅದರ ಕೋಡುಗಳಿಂದ ಮತ್ತಷ್ಟು ಲಾಭ ಗಳಿಸಿದರು. ಫಲವತ್ತಾದ ಭೂಪ್ರದೇಶದಲ್ಲಿ ದ್ರಾಕ್ಷಿ ಬೆಳೆದರು, ದ್ರಾಕ್ಷಾರಸ ತಯಾರಿಸಿ ರಫ್ತು ಮಾಡಿದರು. ಹೀಗೆ ಪ್ರಕೃತಿ ಸಂಪತ್ತನ್ನು ಒಂದು ಉದ್ದಿಮೆಯನ್ನಾಗಿ ಮಾಡಿ ಅಲ್ಲಿನ ಮೂಲನಿವಾಸಿಗಳನ್ನು ಮೂಲೆಗುಂಪಾಗಿ ಮಾಡಿದರು. ನಮ್ಮ ನಾಡಿನಲ್ಲಿ ಕಾಫಿ, ಟೀ, ರಬ್ಬರ್ ಎಸ್ಟೇಟುಗಳನ್ನು ಮಾಡಿ ರಫ್ತು ಮಾಡಲು ಬೆಟ್ಟಗುಡ್ಡಗಳನ್ನು ಬೋಳಿಸಿ ಲಾಭದಾಯಕವಾದ ವಾಣಿಜ್ಯ ಬೆಳೆಗಳನ್ನು ಬೆಳೆದದ್ದು ನೆನಪಾಗಿತ್ತು.

ಮಾವೊರಿಗಳು ಭೂಮಿಯನ್ನು ಎಂದಿಗೂ ತಮ್ಮ ಸ್ವತ್ತನ್ನಾಗಿ ಪರಿಗಣಿಸಿರಲಿಲ್ಲ. ಸಮುದಾಯದವರು ಒಟ್ಟಾಗಿ ವ್ಯವಸಾಯ ಮಾಡುತ್ತಿದ್ದರು, ಬೆಳೆದ ಬೆಳೆಯನ್ನು ಸಮನಾಗಿ ಹಂಚಿಕೊಂಡು ಶಾಂತಿಯಿಂದ ಬಾಳುತ್ತಿದ್ದರು. ತಮ್ಮ ಆಹಾರಕ್ಕಾಗಿ ಕಾಡಿನಲ್ಲಿ ಮೃಗಗಳನ್ನು ಬೇಟೆಯಾಡುತ್ತಿದ್ದರು. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುತ್ತಿದ್ದರು. ಪಾಶ್ಚಿಮಾತ್ಯರ ಆಗಮನದಿಂದ ಅವರ ಜೀವನದ ಮಾರ್ಗವೇ ಬದಲಾಗಿತ್ತು. ಪ್ರಜಾಪ್ರಭುತ್ವ ಸರ್ಕಾರ ಸ್ಥಾಪನೆಯಾದಾಗ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ತಮ್ಮ ಹೆಸರಿನಲ್ಲಿರುವ ಭೂಮಿಯನ್ನು ತೋರಿಸಬೇಕಾಗಿತ್ತು. ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಮಾವೊರಿಗಳು, ಹೇಗೆ ತಾನೆ ಭೂಮಿಯನ್ನು ತಮ್ಮ ಸ್ವತ್ತನ್ನಾಗಿ ಪರಿಗಣಿಸಬಲ್ಲರು? ಆದರೂ, ಚುನಾವಣೆಯಲ್ಲಿ ಸ್ಫರ್ಧಿಸಲಿಕ್ಕಾಗಿ ಸಮುದಾಯದ ಸಹಭಾಗಿತ್ವದಲ್ಲಿದ್ದ ಭೂಮಿಯ ಒಂದು ಭಾಗವನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಳ್ಳಲೇಬೇಕಾಯಿತು.

ಅಂದು ನಾವು ಸಾಗಿದ ಹಾದಿಯುದ್ದಕ್ಕೂ ಪಶುಸಂಗೋಪನೆಯ ದೃಶ್ಯಗಳೇ ಢಾಳಾಗಿ ಕಂಡು ಬರುತ್ತಿದ್ದವು. ಎಲ್ಲಾ ಬೆಟ್ಟಗುಡ್ಡಗಳನ್ನೂ ಸವರಿ ಎಕರೆಗಟ್ಟಲೇ ಭೂಮಿಗೆ ಬೇಲಿ ಹಾಕಿ ಕುರಿ, ಗೋವುಗಳು ಹಾಗೂ ಜಿಂಕೆಗಳನ್ನು ಕೂಡಿದ್ದರು. ಬಯಲಿನಲ್ಲಿ ಒಂದೇ ಗಾತ್ರದ ಕುರಿಗಳು ತಲೆ ಬಗ್ಗಿಸಿ ಹುಲ್ಲು ಮೇಯುತ್ತಿದ್ದವು, ಎಲ್ಲಿಯೂ ಕೊಟ್ಟಿಗೆಯ ಸುಳಿವಿಲ್ಲ, ಹುಲ್ಲು ಹಾಕುವ ಗೋಜಿಲ್ಲ. ಒಂದು ಎಕರೆ ಹುಲ್ಲುಗಾವಲಿಗೆ ಬೇಲಿ ಹಾಕಿ ಕುರಿಗಳನ್ನು ಕೂಡುತ್ತಾರೆ, ಆ ಜಾಗದಲ್ಲಿರುವ ಹುಲ್ಲನ್ನು ಕುರಿಗಳು ಮೆದ್ದು ಖಾಲಿ ಮಾಡಿದ ಮೇಲೆ, ಪಕ್ಕದಲ್ಲಿರುವ ಹುಲ್ಲು ಬೆಳೆದ ಜಮೀನಿಗೆ ಕೂಡುತ್ತಾರೆ. ರೈತನು ಹದವಾಗಿ ಬೆಳೆದ ಪೈರನ್ನು ಕಟಾವು ಮಾಡುವ ಹಾಗೆ, ಕುರಿಗಳ ತುಪ್ಪಳವನ್ನು ಯಂತ್ರಗಳಿಂದ ಕತ್ತರಿಸಲಾಗುವುದು. ಸೂಕ್ತವಾದ ಸಮಯದಲ್ಲಿ ಅವುಗಳನ್ನು ಕೊಂದು ಮಾಂಸವನ್ನು ಮಾರಾಟ ಮಾಡಲಾಗುವುದು. ಹೀಗೆಯೇ ಗೋವುಗಳ ವಿಲೇವಾರಿಯೂ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಗೋವುಗಳಿಂದ ಬರುವ ಆದಾಯ ಹೆಚ್ಚು ಎಂದು ಗೊತ್ತಾಗಿ ಕುರಿಗಳ ಬದಲಿಗೆ ಗೋವುಗಳನ್ನು ಹೆಚ್ಚು ಹೆಚ್ಚಾಗಿ ಸಾಕುತ್ತಿದ್ದಾರೆ. ಜಿಂಕೆಗಳನ್ನೂ ಸಾಕಿ, ಅವುಗಳ ಮಾಂಸವನ್ನೂ ಮಾರಾಟ ಮಾಡುತ್ತಾರೆ. ಬಹುಶಃ ಚಳಿಗಾಲದಲ್ಲಿ ಈ ಪಶುಗಳನ್ನು ಕೊಟ್ಟಿಗೆಗಳಲ್ಲಿ ಕೂಡಬಹುದು, ಇಲ್ಲವಾದರೆ ಹಿಮಪಾತವಾಗುವ ಆ ಪ್ರದೇಶಗಳಲ್ಲಿ ಅವು ಬದುಕುಳಿಯುವುದಾದರೂ ಹೇಗೆ?

ಪ್ರವಾಸಿಗರನ್ನು ಆಕರ್ಷಿಸಲು ‘ಆಗ್ರೋಡೋಮ್’ ಎಂಬ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸುತ್ತಾರೆ. ಸುಮಾರು 350 ಎಕರೆ ಪ್ರದೇಶದಲ್ಲಿದ್ದ ಆ ಕುರಿ ರೊಪ್ಪಕ್ಕೆ (ಶೀಪ್ ಫಾರ್ಮ್) ಭೇಟಿಯಿತ್ತೆವು. ಅಲ್ಲಿ ಸುಮಾರು ಹತ್ತೊಂಭತ್ತು ತಳಿಯ ಕುರಿಗಳಿದ್ದವು. ಒಂದೊಂದು ಕುರಿಯ ಆಕಾರ, ಗಾತ್ರ, ಕೊಂಬುಗಳು ವಿಭಿನ್ನವಾಗಿದ್ದವು. ನಾವೆಲ್ಲಾ ಆ ಸಭಾಂಗಣದಲ್ಲಿ ಕುಳಿತ ಮೇಲೆ ಅರಳು ಹುರಿದಂತೆ ಪಟಪಟನೇ ಮಾತಾಡುವ ಮಾವೊರಿ ತರುಣನು ವೇದಿಕೆಯ ಮೇಲೆ ಬಂದು ಆ ಕುರಿಗಳ ಜಾತಕವನ್ನು ನಮ್ಮ ಮುಂದೆ ತೆರೆದಿಟ್ಟನು. ಸಭಾಂಗಣದ ಅಕ್ಕಪಕ್ಕದಲ್ಲಿ ಇಪ್ಪತ್ತು ಕುರಿಗಳನ್ನು ಕಟ್ಟಲಾಗಿತ್ತು. ಒಂದೊಂದು ಕುರಿಗೂ ಒಂದೊಂದು ಹೆಸರಿಟ್ಟು ಕರೆದನು. ಅವನ ಸಹಾಯಕಿಯಾಗಿದ್ದ ಮಹಿಳೆಯೊಬ್ಬಳು, ಆ ಕುರಿಯನ್ನು ವೇದಿಕೆಯ ಮೇಲಿದ್ದ ಮೆಟ್ಟಿಲುಗಳ ಮೇಲೆ ನಿಲ್ಲಿಸಿ ಕಟ್ಟಿ ಹಾಕಿದಳು, ಅಲ್ಲಿದ್ದ ಬಟ್ಟಲಿನಲ್ಲಿದ್ದ ಕುರುಕಲು ತಿಂಡಿಯನ್ನು ಜಗಿದು ತಿನ್ನಲಾರಂಭಿಸಿತು. ಹತ್ತೊಂಭತ್ತು ಜಾತಿಯ ಕುರಿಗಳೂ ವೇದಿಕೆಗೆ ಬಂದು ನಿಂತ ಮೇಲೆ, ಸಭೆಯಲ್ಲಿ ಹಾಜರಿದ್ದ ಒಬ್ಬರನ್ನು ಕರೆದು, ಕುರಿಯ ತುಫ್ಪಳವನ್ನು ಒಂದು ಯಂತ್ರದ ನೆರವಿನಿಂದ ಅವರಿಂದಲೇ ಕತ್ತರಿಸಲಾಯಿತು. ಅವರಿಗೊಂದು ಬಹುಮಾನವನ್ನೂ ಕೊಡಲಾಯಿತು. ಎಲ್ಲರೂ ಜೋರಾದ ಚಪ್ಪಾಳೆ ತಟ್ಟಿದರು. ಮತ್ತೊಂದು ಸಾಹಸವನ್ನು ಸಭೆಯಲ್ಲಿದ್ದ ಹುಡುಗನಿಂದ ಮಾಡಿಸಲಾಯಿತು. ಒಂದು ಹಸುವನ್ನು ಕರೆತಂದು ಅದರ ಕೆಚ್ಚಲಿನಿಂದ ಹಾಲನ್ನು ಕರೆಸಿದರು. ಮತ್ತೆ ಜೋರಾದ ಕರತಾಡನ. ಆ ಹುಡುಗನಿಗಂತೂ ಎವರೆಸ್ಟ್ ಪರ್ವತವನ್ನು ಏರಿದಷ್ಟು ಸಂಭ್ರಮ. ಇಂದಿನ ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತದೆ ಅಂತ ಗೊತ್ತಿಲ್ಲ, ತಾವು ತೊಡುವ ಉಣ್ಣೆಯ ಜಾಕೆಟ್ ಯಾವುದರಿಂದ ಮಾಡುತ್ತಾರೆ ಎಂಬುದರ ಅರಿವಿಲ್ಲ. ಹಾಗಾಗಿ ಈ ಪ್ರಾತ್ಯಕ್ಷಿಕೆ ಉತ್ತಮವಾದ ಪ್ರದರ್ಶನವಾಗಿತ್ತು.

ಆಗ್ರೋಡೋಮ್ ಪ್ರದರ್ಶನ, PC: Internet

ಅಗ್ರೋಡೋಮ್ ಪಕ್ಕದಲ್ಲಿದ್ದ ಕ್ಯಾಂಟೀನ್‌ನಲ್ಲಿ ಕಾಫಿ ಕುಡಿದು ಅಲ್ಲಿದ್ದ ಟ್ರೇಲರ್‌ಗಳಲ್ಲಿ ಕುಳಿತು ಆ ಜಮೀನಿನ ಸುತ್ತ ಒಂದು ಸುತ್ತು ಹಾಕಿದೆವು. ಕುರಿಗಳು, ದನಗಳು, ಸಾರಂಗಗಳು ಹಾಗೂ ಆಲ್ಪೆಕಾ ಎಂಬ ಪಶುಗಳನ್ನೂ ನೋಡಿದೆವು. ಮಕ್ಕಳು ಖುಷಿಯಿಂದ ಕೂಗಾಡುತ್ತಿದ್ದರು. ಈ ಪಶುಗಳನ್ನು ಕಾಯಲು ಸಾಕಿದ್ದ ನಾಯಿಗಳು ಅಲ್ಲಲ್ಲಿ ಓಡಾಡುತ್ತಾ ಜಾಣ್ಮೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದವು. ನಮ್ಮೂರಿನಲ್ಲಿ ಬೀದಿಗಳಲ್ಲಿ ಬೀಡಾಡಿ ದನಗಳು, ನಾಯಿಗಳು, ಕುರಿಗಳು ಹಂದಿಗಳನ್ನು ನೋಡುತ್ತಾ ಬೆಳೆದ ಮಕ್ಕಳಿಗೆ ಇದೇನು ವಿಶೇಷ ಎನ್ನಿಸಲಿಲ್ಲ. ಆದರೆ ನಮಗೆ ಅವರ ಶಿಸ್ತು, ಯಂತ್ರಗಳ ಸಹಾಯದಿಂದಲೇ ಎಲ್ಲವನ್ನೂ ನಿರ್ವಹಿಸುವ ಜಾಣ್ಮೆ ಕಂಡು ತಲೆದೂಗಿದೆವು. ಜಮೀನಿನಲ್ಲಿ ಓಡಾಡಲು ಟ್ರೈಲರ್‌ಗಳು, ಕುರಿಗಳನ್ನು ಒಟ್ಟು ಮಾಡಿ ಮತ್ತೊಂದೆಡೆ ಸಾಗಿಸಲು ನಾಯಿಗಳು, ಕುರಿತುಪ್ಪಳ ತೆಗೆಯಲು, ದನಗಳ ಹಾಲು ಕರೆಯಲು ಯಂತ್ರಗಳು ಹಾಗೂ ಅವುಗಳನ್ನು ಮಾರ್ಕೆಟ್ಟಿಗೆ ಸಾಗಿಸಲು ಲಾರಿಗಳನ್ನೆಲ್ಲಾ ನೋಡಿ ಬೆರಗಾಗುವ ಸರದಿ ನಮ್ಮದಾಗಿತ್ತು. ಸುಮಾರು 350 ಎಕರೆ ಪ್ರದೇಶದಲ್ಲಿ ಸಾಕಿದ್ದ ಪಶುಗಳನ್ನು ನೋಡಿಕೊಳ್ಳಲು ಕೇವಲ ಐದಾರು ಜನ ಸಾಕಿತ್ತು.

ತಲೆ ಎತ್ತದೆ ಹುಲ್ಲು ಮೇಯುತ್ತಿದ್ದ ಕುರಿಗಳು, ದಿಗಂತದತ್ತ ದೃಷ್ಟಿ ಹಾಯಿಸುತ್ತಾ ಮೆಲುಕು ಹಾಕುತ್ತಿದ್ದ ದನಗಳನ್ನು ಕಂಡ ಮನಸ್ಸಿಗೆ ಒಂದು ಕ್ಷಣ ಗಲಿಬಿಲಿಯಾಗಿತ್ತು, ಇಂದೋ ನಾಳೆಯೋ ಯಾವ ಸೂಪರ್ ಮಾರ್ಕೆಟ್‌ನಲ್ಲಿ ಮಾಂಸದ ಚೂರುಗಳಾಗಿ ಜನರ ಹಸಿವನ್ನು ತಣಿಸಲು ಸಿದ್ದವಾಗಬೇಕೋ ಗೊತ್ತಿಲ್ಲ. ಇವರನ್ನು ಶ್ರೀಕೃಷ್ಣ ಗೀತೆಯಲ್ಲಿ ಅರ್ಜುನನಿಗೆ ಬೋಧಿಸಿದಂತೆ ಸ್ಥಿತಪ್ರಜ್ಞ ಎಂದು ಕರೆಯಬಹುದೇನೋ ಗೊತ್ತಿಲ್ಲ.

ಅಷ್ಟರಲ್ಲಿ ನಮ್ಮ ಗೈಡ್ ಅಲ್ಲಿ ನಡೆದಿದ್ದ ಸಿನೆಮಾ ಶೂಟಿಂಗ್ ಬಗ್ಗೆ ಹೇಳಲು ಆರಂಭಿಸಿದ. ‘ಹಾಬಿಟ್ ಟ್ರ‍್ರಯಾಲಜಿ’ ಹಾಗೂ ‘ಲಾರ್ಡ್ ಆಫ್ ದ ರಿಂಗ್ಸ್’ ಎಂಬ ಖ್ಯಾತ ಸಿನೆಮಾಗಳನ್ನು ತೆಗೆದ ಸ್ಥಳ ಇದು ಎಂದು ಹೇಳಿದ. ರೊಟೋರುವಾ ಸರೋವರದ ಬಳಿಯಿದ್ದ ಸರ್ಕಾರಿ ಉದ್ಯಾನವನದ ಬಳಿ ನಿಲ್ಲಿಸಿ, ‘ಇಲ್ಲಿ ಫೋಟೋ ತೆಗೆದುಕೊಳ್ಳಿ, ಸುಂದರವಾದ ಸ್ಥಳ’ ಎಂದು ಹೇಳುತ್ತಾ ಬಸ್ ನಿಲ್ಲಿಸಿದ. ನಾವು ಬಣ್ಣಬಣ್ಣದ ಹೂಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವಾಗ ಅಲ್ಲೊಂದು ಬ್ರಿಟಿಷ್ ದೊರೆಯ ಪ್ರತಿಮೆ ಕಣ್ಣಿಗೆ ಬಿತ್ತು. ಸರಿ, ಆ ಪ್ರತಿಮೆಯ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿದೆವು. ನಾನು ಆ ಫೋಟೋವನ್ನು ನಮ್ಮ ಕುಟುಂಬದ ಸದಸ್ಯರಿದ್ದ ವಾಟ್ಸ್ಆಪ್‌ಗೆ ಕಳುಹಿಸಿದ್ದೇ ತಡ ಅಮೆರಿಕ ನಿವಾಸಿಯಾದ ನನ್ನ ತಂಗಿ ಮೈನಾ ಕೇಳಿದಳು, ‘ಆ ದೊರೆಯ ಪ್ರತಿಮೆ ಮೇಲೆ ಪಕ್ಷಿಯ ಪ್ರತಿಮೆ ಇದೆಯಾ? ‘ಇಲ್ಲವಲ್ಲ, ಅದೊಂದು ನಿಜವಾದ ಸೀಗಲ್’ ಅವಳ ಮರು ಉತ್ತರ ಹೀಗಿತ್ತು, ‘ನನ್ನ ಗೆಳತಿ ನ್ಯೂಝಿಲ್ಯಾಂಡಿಗೆ ಪ್ರವಾಸ ಹೋಗಿದ್ದಾಗ ಅಂತಹದೇ ಫೋಟೋ ಹಾಕಿದ್ದಳು. ಆಗಲೂ ಆ ಪಕ್ಷಿ ಅವನ ತಲೆಯ ಮೇಲೆ ಕುಳಿತಿತ್ತು. ತಮಾಷೆ ಎನ್ನಿಸಿತ್ತು, ಈ ಪಕ್ಷಿಗೂ ಫೋಟೋ ಹುಚ್ಚಿರಬಹುದು ಎಂದು ನಗು ಬಂತು.

ರೊಟೋರುವಾ ಸರೋವರ, PC: Internet

ಆ ದಿನದ ಪ್ರವಾಸ ಮುಗಿದಿತ್ತು, ನ್ಯೂಝಿಲ್ಯಾಂಡಿನ ಕೇಂದ್ರಬಿಂದುವಾದ ಆಕ್‌ಲ್ಯಾಂಡಿನ ಕಡೆ ಬಸ್‌ನಲ್ಲಿ ಹೊರಟಿದ್ದೆವು. ಅಂದು ಕೇಳಿದ್ದ ಅರಾವ ಬುಡಕಟ್ಟು ಜನಾಂಗದ ಕಥೆಯೊಂದು ನೆನಪಾಗಿತ್ತು, ‘ಇನೆಂಗಾ ಯೋಧನೊಬ್ಬ ಗರ್ಭಿಣಿಯಾಗಿದ್ದ ತನ್ನ ಪತ್ನಿಗೆ ರುಚಿರುಚಿಯಾದ ತಿನಿಸನ್ನು ಹುಡುಕುತ್ತಾ ಬಂದಾಗ ದಾರಿ ತಪ್ಪಿ ಕಾಡಿನಲ್ಲಿ ಬಹಳ ದೂರ ಬಂದುಬಿಟ್ಟಿದ್ದ. ಬಹಳ ಬಾಯಾರಿಕೆ ಆಗಿತ್ತು, ಸುತ್ತಮುತ್ತ ಎಲ್ಲೂ ನೀರು ಕಾಣಲಿಲ್ಲ. ಅವನ ನಾಯಿ ಕಿವಿ ಪಕ್ಷಿಯ ಬೆನ್ನತ್ತಿ ಹೋಗಿ, ಹಿಂದಿರುಗುವಾಗ ಮೀನೊಂದನ್ನು ಕಚ್ಚಿಕೊಂಡು ಬಂತು. ಅಲ್ಲಿ ನೀರಿರಬಹುದೆಂದು ಊಹಿಸಿ, ನಾಯಿಯ ಜೊತೆ ಹೋದಾಗ ರೊಟೋರುವಾ ಸರೋವರ ಕಾಣಿಸಿತಂತೆ. ಆ ರಮಣೀಯವಾದ ಸ್ಥಳವನ್ನು ಕಂಡವನು ತನ್ನ ಕುಟುಂಬದೊಂದಿಗೆ ಅಲ್ಲಿಯೇ ನೆಲಸುತ್ತಾನೆ. ಹೌದು, ಈ ಸ್ಥಳದ ಮಹಿಮೆಯೇ ಹಾಗಿದೆ, ‘ಅಲ್ಲಿರುವ ಬಿಸಿನೀರಬುಗ್ಗೆಗಳು, ನೀಲವರ್ಣ ಹೊತ್ತ ಸರೋವರಗಳು, ದಟ್ಟವಾದ ಅರಣ್ಯ ಪ್ರದೇಶ ಎಂತಹವರನ್ನೂ ಮರುಳು ಮಾಡೀತು’

ಈ ಪ್ರವಾಸಕಥನದ ಹಿಂದಿನಪುಟ ಇಲ್ಲಿದೆ:  http://surahonne.com/?p=43085
(ಮುಂದುವರಿಯುವುದು)

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.

5 Comments on “ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-5

  1. ಪ್ರವಾಸ ಕಥನ ಎಂದಿನಂತೆ ಸೊಗಸಾದ ನಿರೂಪಣೆಯೊಂದಿಗೆ ಮನಕ್ಕೆ ಮುದ ಕೊಟ್ಟಿತು..ಪೂರಕ ಚಿತ್ರ ಗಳು ಕಣ್ಣಗೆ ಹಿತ ಕೊಟ್ಟ ವು ಮೇಡಂ

  2. ಅಗ್ರೋಡೋಮ್ ನಲ್ಲಿ ದನದ ಹಾಲು ಕರೆದು, ಕುರಿಯ ತುಪ್ಪಳ ತೆಗೆದು ನೀಡಿದ ಮನೋರಂಜನೆ, ಮಾವೊರಿಗಳ ದೀನ ಸ್ಥಿತಿಯ ಬದುಕಿನ ಅನಾವರಣ ಎಲ್ಲವೂ ಯಥಾಸ್ಥಿತಿಯಾಗಿ ಮೂಡಿ ಬಂದ ಪ್ರವಾಸ ಲೇಖನ ಚೆನ್ನಾಗಿದೆ ಮೇಡಂ.

  3. ಆಧುನಿಕತೆಯ ಅಳವಡಿಕೆಯ ಪರಿಣಾಮಗಳನ್ನು ತೆರೆದಿಡುತ್ತಾ ಚಂದದ ನಿರೂಪಣೆಯೊಂದಿಗೆ ಪ್ರವಾಸ ಕಥನ ಮುಂದುವರೆಯಿತು.

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *