ನವಮ ಸ್ಕಂದ – ಅಧ್ಯಾಯ -2
ಅಂಬರೀಶ – 2
ಒಂದು ಸಂವತ್ಸರ ಕಾಲ
ಅತಿಪವಿತ್ರ ದ್ವಾದಶ ವ್ರತಾಚರಣೆಯ
ಸಂಕಲ್ಪದಿಂ
ದಶಮ ಏಕಭುಕ್ತ, ಏಕಾದಶಿ ನಿರಾಹಾರ
ದ್ವಾದಶಿಯ ಭಗವಧಾರಾಧನೆ
ಬ್ರಾಹ್ಮಣ ಭೋಜನ, ಪಾರಣೆ – ಏಕಭುಕ್ತ
ನಿಯಮದಲಿ ಒಂದು ವರ್ಷದ ವ್ರತವ ಪಾಲಿಸಿ
ಕಾರ್ತೀಕಮಾಸ ಶುದ್ಧ ದ್ವಾದಶಿಯಲಿ
ಯಮುನಾನದಿಯಲಿ ಸ್ನಾನಮಾಡಿ
ಸಕಲ ಪೂಜೆ ದಾನ ಧರ್ಮ
ವಿಧಿ ವಿಧಾನಗಳ ಪೂರೈಸಿ
ಪಾರಣೆಗೆ ಸಿದ್ಧವಾಗಿರೆ
ದೈವಯೋಗದಿಂ
ಪರಶಿವನ ಅಪರಾವತಾರ
ದೂರ್ವಾಸ ಮುನಿಗಳಾಗಮನ
ಅಘ್ಯ ಪಾದ್ಯಾದಿ ಷೋಡಶೋಪಚಾರ
ಸ್ವೀಕರಿಸಿ ಭೋಜನಕೆ
ಸ್ನಾನಾದಿ ಕ್ರಿಯೆ ಪೂರೈಸಿ ಬರುವೆನೆಂದ ಮುನಿ
ದ್ವಾದಶೀ ತಿಥಿಯ ಘಳಿಗೆ ಮೀರುತ್ತಿರಲು
ವ್ರತಭಂಗವಾಗುವುದ ತಡೆಯಲು
ಕೇವಲ ಜನಪಾರಣೆ ಮಾಡಿ
ಮುನೀಂದ್ರಗೆ ಕಾಯುತಿರೆ
ತಡವಾಗಿ ಬಂದ ದೂರ್ವಾಸ
ಅಂಬರೀಶ ಜಲಪಾರಣೆ ಮಾಡಿದುದ ತಿಳಿದು
ಉಗ್ರನಾಗಿ ಹಲ್ಕಡಿಯುತ್ತಾ
ತನ್ನ ಜಟೆಯ ನೆಲಕ್ಕೆ ಅಪ್ಪಳಿಸಿ
ಸೃಷ್ಟಿಸಿದ ಶಕ್ತಿ
ಅಂಬರೀಶನ ಸಂಹರಿಸಲು
ಅವನತ್ತ ಧಾವಿಸಲು
ನಿಶ್ಚಲನಾಗಿ ನಿಂತ ಅಂಬರೀಶ
ಭಗವತ್ ನಾಮಸ್ಮರಣೆಯಲ್ಲಿರಲು
ಅವನ ರಕ್ಷಣೆಗಾಗಿದ್ದ ವಿಷ್ಣುವಿನ
ಸುದರ್ಶನ ಚಕ್ರ
ಕ್ಷಣಮಾತ್ರದಿಂ ಆ ಶಕ್ತಿಯ ನಾಶಮಾಡಿ
ಅದ ಸೃಷ್ಟಿಸಿದ ದೂರ್ವಾಸನ ಬೆನ್ನೆಟ್ಟಲು
ಭಯಬೀತ ದೂರ್ವಾಸ ಮೇರುಪರ್ವತದ ಗುಹೆ
ಸಮುದ್ರಜಲದ ಪಾತಾಳ
ಬ್ರಹ್ಮದೇವನ ಸತ್ಯಲೋಕ
ಕೈಲಾಸವಾಸಿ ಶಂಕರನ
ಮೊರೆಹೊಕ್ಕರೂ
ಯಾವ ಪರಿಹಾರವೂ ಕಾಣದೆ
ನೇರವಾಗಿ ವಿಷ್ಣು ಸಾನಿಧ್ಯಕೆ
ಮೊರೆಹೋಗಲು
ಆ ಭಗವಂತ ತಾನು
ಭಕ್ತರಾದೀನನೆಂದೂ
ಭಕ್ತರ ವಶವರ್ತಿಯಾಗಿ
ಅವರಿಗಾದ ಅಪರಾಧವ ಸಹಿಸಲಿಕ್ಕಾಗದವನು,
ಭಕ್ತ ಅಂಬರೀಶನ ಕ್ಷಮೆಯೇ
ನಿನಗುಳಿದ ಏಕೈಕ ದಾರಿ ಎಂದರುಹಿದಾಗ
ದೂರ್ವಾಸ ತನ್ನೊಂದು ವರುಷದ
ದುಗುಡದೋಟದಿಂ ಬಿಡುಗಡೆ ಹೊಂದಲು
ಅಂಬರೀಶಗೆ ಶರಣಾಗಿ ಪ್ರಾರ್ಥಿಸಲು
ಅವ ಸುದರ್ಶನ ಚಕ್ರಕೆ
ದೀರ್ಘದಂಡ ನಮಸ್ಕರಿಸಿ
ದೂರ್ವಾಸರನು ರಕ್ಷಿಸಿ, ಕ್ಷಮಿಸಿ
ತನ್ನ ಪಾಶವಂ ಬ್ರಾಹ್ಮಣಹತ್ಯೆಯ
ದೋಷದಿಂ ಪಾರುಮಾಡಬೇಕೆಂಬ ನುಡಿಗೆ
ತೃಪ್ತವಾಗಿ ಸುದರ್ಶನ ಚಕ್ರ ಶಾಂತವಾಗೆ
ಅಂಬರೀಶ ಪ್ರಸನ್ನನಾಗಿ ದೂರ್ವಸರಿಗೆ
ಭೂರಿಭೋಜನವ ನೀಡಿ
ವರ್ಷದಿಂದಲೂ ಕೇವಲ ಜಲಪಾನದಿಂ
ದ್ವಾದಶವ್ರತವ ಮಾಡುತ್ತಿದ್ದ ಅಂಬರೀಶ
ಪಾರಣೆಯ ಮಾಡಿ ವ್ರತವ ಪೂರೈಸಿದ ಪರಿ
ವಿಷ್ಣು ಭಕ್ತಿ ಶಕ್ತಿಗೊಂದು ನಿದರ್ಶನ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : http://surahonne.com/?p=43101
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಎಂದಿನಂತೆ ಕಾವ್ಯ ಭಾಗವತ ಓದಿಸಿಕೊಂಡುಹೋಯಿತು.. ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸಾರ್..
Nice
ಕಾವ್ಯ ಭಾಗವತದಲ್ಲಿ ವಿಷ್ಣುಭಕ್ತ ಅಂಬರೀಶನ ಕಥೆ ಚೆನ್ನಾಗಿ ಮೂಡಿಬಂದಿದೆ… ಧನ್ಯವಾದಗಳು ಸರ್.
ವಿಷ್ಣು ಭಕ್ತಿ ಶಕ್ತಿಯನ್ನರಿಯುನ್ನು ತಿಳಿಸುವ ಅಂಬರೀಶನ ಕಥಾನಕವು ಪರಿಣಾಮಕಾರಿಯಾಗಿದೆ.