ಸಣ್ಣದೊಂದು ಸೂಟ್‌ಕೇಸ್ ಮತ್ತು ಹ್ಯಾಂಡ್‌ಬ್ಯಾಗ್ ಹಿಡಿದು ಚೆನ್ನೈಯಿಂದ ಮೈಸೂರಿಗೆ ಹೊರಟಿದ್ದ ಟ್ರೈನ್ ಹತ್ತಿದಳು ಮೇರಿ. ಮೊದಲೇ ಟಿಕೆಟ್ ಕಾಯ್ದಿರಿಸಿದ್ದರಿಂದ ಧಾವಂತವಿಲ್ಲದೆ ಅತ್ತಿತ್ತ ಕಣ್ಣಾಡಿಸುತ್ತ ತನ್ನ ಸೀಟೆಲ್ಲಿದೆಯೆಂದು ಹುಡುಕಿದಳು. ಅದೃಷ್ಟವಶಾತ್ ಕಿಟಕಿಯ ಪಕ್ಕದಲ್ಲಿತ್ತು ಅವಳ ಜಾಗ. ಖುಷಿಯಾಯಿತು. ಅಕ್ಕಪಕ್ಕದವರಾಗಲೀ, ಹೊರಗಿನಿಂದ ಬಂದುಹೋಗುವ ವ್ಯಾಪಾರಿಗಳಿಂದಾಗಲೀ ತೊಂದರೆ ಆಗುವುದು ತಪ್ಪಿತು. ಈ ಟ್ರೈನ್ ಗೆ ಹೊರಟದ್ದೇ ಒಳ್ಳೆಯದಾಯಿತು. ಬೆಳಗಾಗುವಷ್ಟರಲ್ಲಿ ಮೈಸೂರು ಮುಟ್ಟುತ್ತೇನೆ. ಕೆಲಸ ಕಾರ್ಯಗಳು ಸಲೀಸಾಗಿ ಮುಗಿದರೆ ನೆಮ್ಮದಿಯಾಗಿ ನಾಳೆಯೇ ಹಿಂದಿರುಗಬಹುದು ಎಂಬ ಯೋಚನೆ. ನಾನಂದುಕೊಂಡಂತೆ ಎಲ್ಲವೂ ಆಗಲೆಂದು ಭಗವಂತನಲ್ಲಿ ಪ್ರಾರ್ಥಿಸಿಕೊಂಡು ಹಿಂದಕ್ಕೊರಗಿ ವಿರಾಮವಾಗಿ ಕುಳಿತಳು.
ಹತ್ತು ನಿಮಿಷಕ್ಕೆಲ್ಲಾ ಟ್ರೈನ್ ಹೊರಟಿತು. ಅದೃಷ್ಟಕ್ಕೆ ಅವಳ ಪಕ್ಕದ ಸೀಟಿಗೆ ಯಾರೂ ಬರಲಿಲ್ಲ. ಯಾರೋ ಕೊನೆಯ ನಿಮಿಷದಲ್ಲಿ ಕ್ಯಾನ್ಸಲ್ ಮಾಡಿರಬೇಕೆಂದುಕೊಂಡು ಆತಂಕವಿಲ್ಲದೆ ಹ್ಯಾಂಡ್ ಬ್ಯಾಗನ್ನು ತಲೆಗೆ ಆಸರೆಯಾಗಿಟ್ಟುಕೊಂಡು ಕಾಲನ್ನು ಸ್ವಲ್ಪ ಉದ್ದಕ್ಕೆ ಚಾಚಿ ಒರಗಿಕೊಂಡಳು. ಎದುರುಗಡೆಯ ಸೀಟಿನತ್ತ ಕಣ್ಣಾಡಿಸಿದಳು. ಯಾರೋ ನವಜೋಡಿಗಳೆನ್ನಿಸಿತು. ಅವರು ಬಾಹ್ಯದ ಗೊಡವೆಯೇ ಇಲ್ಲದಂತೆ ತಮ್ಮದೇ ಪಿಸುಪಿಸು ಗುಸುಗುಸು ಲೋಕದಲ್ಲಿ ಮುಳುಗಿದ್ದರು. ಟ್ರೈನು ಈಗ ವೇಗ ಹೆಚ್ಚಿಸಿಕೊಳ್ಳುತ್ತಾ ನಡೆದಿತ್ತು. ಅದರ ಕುಲುಕಾಟಕ್ಕೆ ಜೊಂಪು ಹತ್ತಿದಂತಾಗಿ ಕಣ್ಣಾಲಿಗಳು ಮುಚ್ಚತೊಡಗಿದವು. ಅದರೊಟ್ಟಿಗೆ ಮೇರಿಯ ಮನಃಪಟಲದ ಮೇಲೆ ಇದುವರೆಗಿನ ಎಲ್ಲ ಘಟನೆಗಳೂ ನಿಧಾನವಾಗಿ ಮೂಡತೊಡಗಿದವು.
ಆಕೆಯ ಗಂಡ ಸುಧೀರ ನಿಧನನಾಗಿ ಮೂರು ತಿಂಗಳಾಗುತ್ತ ಬಂತು. ಅವನು ಮೈಸೂರಿನಲ್ಲಿ ಸರ್ಕಾರಿ ಕೆಲಸದಲ್ಲಿದ್ದುದರಿಂದ ಅವನ ಹೆಂಡತಿಯಾಗಿ ಆಕೆಗೆ ಸರ್ಕಾರದಿಂದ ಬರಬೇಕಾದ ಗ್ರೂಪ್ ಇನ್ಶೂರೆನ್ಸ್, ಗ್ರ್ಯಾಚೂಟಿ, ಮತ್ತು ಫ್ಯಾಮಿಲಿ ಪೆನ್ಷನ್ ಯಾವುದೂ ದಕ್ಕಿರಲಿಲ್ಲ. ಅದಕ್ಕಾಗಿ ವಿಚಾರಿಸಲೆಂದೇ ಈಗಲೂ ಹೊರಟಿದ್ದಳು. ಗಂಡ ಕೆಲಸ ಮಾಡುತ್ತಿದ್ದ ಕಛೇರಿಯಿಂದ ಕೇಳಿದ್ದ ಎಲ್ಲ ದಾಖಲಾತಿಗಳನ್ನೂ ನೀಡಿ ಎಲ್ಲ ಆರ್ಥಿಕ ಸೌಲಭ್ಯಗಳಿಗೂ ಆತನ ಹೆಂಡತಿಯಾಗಿ ತಾನೇ ಬಾಧ್ಯಸ್ಥಳೆಂದು ಧೃಢೀಕರಿಸಿದ್ದಾಗಿತ್ತು. ಆದರೂ ಮತ್ತೆ ಮುಖ್ಯಸ್ಥರ ಕಚೇರಿಯಿಂದ ಮತ್ತೆ ಎಲ್ಲ ಕಾಗದ ಪತ್ರಗಳೊಡನೆ ಖುದ್ದಾಗಿ ಬರಬೇಕೆಂದು ಕೋರಿದ್ದರು. ಇದರಿಂದ ಅವಳಿಗೆ ಮತ್ತೇನಾದರೂ ಹೊಸ ಸಮಸ್ಯೆಯನ್ನು ತಂದೊಡ್ಡಿದೆಯೇನೋ ಎಂಬ ಆತಂಕ ಉಂಟುಮಾಡಿತ್ತು. ತನ್ನ ಮತ್ತು ಸುಧೀರನ ಮದುವೆಯು ರಿಜಿಸ್ಟರಾಗಿದ್ದ ದಾಖಲಾತಿ, ಅವಳ ಇಬ್ಬರು ಮಕ್ಕಳು ಹುಟ್ಟಿದಾಗ ಆಸ್ಪತ್ರೆಯಲ್ಲಿ ನೀಡಿದ್ದ ತಂದೆಯ ಹೆಸರಿನ ದಾಖಲಾತಿ, ಎಲ್ಲವನ್ನೂ ಮತ್ತೊಮ್ಮೆ ಜೆರಾಕ್ಸ್ ಪ್ರತಿಗಳೊಂದಿಗೆ ಮೂಲ ಪತ್ರಗಳನ್ನೂ ತೆಗೆದುಕೊಂಡು ಬರಬೇಕೆಂದು ಕೋರಿದಂತೆ ಸಿದ್ಧಳಾಗಿ ಹೊರಟಿದ್ದಳು.
ಬಾಲ್ಯಕಾಲದಿಂದ ಅವಳ ಗೆಳತಿಯಾಗಿ, ಈಗ ಸಹೋದ್ಯೊಗಿಯಾಗಿರುವ ಷೆರ್ಲಿ ಇದನ್ನೆಲ್ಲ ಕೇಳಿ ನಗುತ್ತಾ “ಅದ್ಯಾವ ಘಳಿಗೆಯಲ್ಲಿ ಆ ನಿನ್ನ ಮಹಾರಾಯನ ಬಲೆಗೆ ಬಿದ್ದು ಕೈಹಿಡಿದೆಯೋ ನಾ ಕಾಣೆ. ಮದುವೆಯಾಗಿ ಏಳು ವರ್ಷಳಾದರೂ ನಿನ್ನೊಟ್ಟಿಗಿದ್ದು ಸಂಸಾರ ಮಾಡಲಿಲ್ಲ. ಗೆಸ್ಟ್ ತರ ಆಗೀಗ ಕೆಲವು ದಿನಗಳು ಬಂದು ಹೋಗುತ್ತಿದ್ದ. ಎರಡು ಮಕ್ಕಳನ್ನೂ ಹಡೆದೆ. ಆದರೆ ಅಪ್ಪನೆನ್ನಿಸಿಕೊಂಡವನು ಅವರೊಡನಿದ್ದು ಅವುಗಳ ಅಟಪಾಟಗಳಲ್ಲಿ ಭಾಗಿಯಾಗಲಿಲ್ಲ. ಅಪ್ಪ, ಅಮ್ಮ ಎರಡೂ ನೀನೇ ಆಗಿ ಸಾಕುತ್ತಿದ್ದೀಯೆ. ಈ ಸಂಪತ್ತಿಗೆ ಅವನೊಡನೆ ಪ್ರೇಮ ವಿವಾಹ ಬೇಕಿತ್ತಾ? ಈಗ ನೋಡಿದರೆ ಆ ಮನುಷ್ಯನೇ ಇಲ್ಲವಾಗಿ ನಿನ್ನನ್ನು ಸಾವಿನ ಸುಳಿಯೊಳಕ್ಕೆ ಸಿಕ್ಕಿಸಿ ಹೋಗಿದ್ದಾನೆ” ಎಂದೆಲ್ಲಾ ವ್ಯಂಗ್ಯವಾಡಿದಳು. ಆದರೂ ಅವಳಿಗೆ ಮೇರಿಯ ಬಗ್ಗೆ ಅಪಾರ ಅಂತಃಕರಣ ಮತ್ತು ಆತ್ಮೀಯ ಮಮತೆ.
ಇದನ್ನೆಲ್ಲ ಯೋಚಿಸಿ ನೋಡಿದರೆ ನನಗೂ ಒಮ್ಮೊಮ್ಮೆ ಅವಳ ಮಾತು ನಿಜ ಅನ್ನಿಸಿದ್ದುಂಟು. ಆದರೇನು ಮಾಡಲು ಸಾಧ್ಯವಿತ್ತು. ಹಾಗೆಂದು ಇಲ್ಲಿನ ಎಲ್ಲ ಬಂಧನಗಳನ್ನು ಕಳಚಿಕೊಂಡು ಅವನೊಡನೆ ಹೋಗಿಬಿಡಲು ಸಾಧ್ಯವಿತ್ತೇ? ಅವಳ ಮನದಲ್ಲಿ ಮಡುಗಟ್ಟಿದ್ದ ನೆನಪಿನಾಳದ ಗಂಟು ನಿಧಾನವಾಗಿ ಬಿಚ್ಚಿಕೊಂಡಿತು.
ಮೇರಿ ಮತ್ತು ಷೆರ್ಲಿ ಚಿಕ್ಕಂದಿನಿಂದ ಒಟ್ಟಿಗೆ ಕೂಡಿ ಆಡಿ ಬೆಳೆದವರು, ಒಟ್ಟಿಗೆ ಓದಿದವರು. ವಿದ್ಯಾಭ್ಯಾಸದ ನಂತರ ಚೆನ್ನೈನಲ್ಲಿನ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕರಾಗಿ ಕೆಲಸಕ್ಕೆ ಸೇರಿ ಈಗ ಸಹೋದ್ಯೋಗಿಗಳೂ ಆಗಿದ್ದರು. ಇಬ್ಬರ ಮನೆಯ ಹಿರಿಯರುಗಳಲ್ಲಿಯೂ ಪರಸ್ಪರ ವಿಶ್ವಾಸದ ಒಡನಾಟವಿತ್ತು. ಷರ್ಲಿಗೆ ಒಬ್ಬ ಒಬ್ಬಣ್ಣನಿದ್ದರೆ, ಮೇರಿಗೆ ಒಬ್ಬ ತಮ್ಮ, ತಂಗಿ ಇದ್ದರು. ಮೇರಿಯ ತಂದೆ ಲಾರಿ ಚಾಲಕರಾಗಿದ್ದರೆ, ಷರ್ಲಿಯ ತಂದೆಯದ್ದು ಒಂದು ಸಣ್ಣ ಕಿರಾಣಿ ಅಂಗಡಿಯಿತ್ತು. ಷೆರ್ಲಿಯ ತಾಯಿ ಖಾಸಗಿ ಶಾಲೆೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಇರಲು ಒಂದು ಸ್ವಂತ ಮನೆ ಮತ್ತು ಹಳ್ಳಿಯಲ್ಲಿ ಸ್ವಲ್ಪ ಭೂಮಿಕಾಣಿ ಕೂಡ ಇತ್ತು. ಇದ್ದುದರಲ್ಲಿ ಅನುಕೂಲವಂತರೆಂದೇ ಹೇಳಬಹುದು. ಮೇರಿಯ ಕುಟುಂಬಕ್ಕೆ ಹಿರಿಯರಿಂದ ಬಂದಿದ್ದ ಚಿಕ್ಕದಾದ ಮನೆಯೊಂದಿತ್ತು. ಆಕೆಯ ತಾಯಿ ಹಾಸ್ಟೆಲೊಂದರಲ್ಲಿ ಅಡುಗೆ ಉಸ್ತುವಾರಿ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಇದ್ದದರಲ್ಲೇ ಹೇಗೋ ಹೊಂದಿಸಿಕೊಂಡು ಜೀವನ ನಡೆಸಿದ್ದರು. ಆದರೆ ಆಕೆಯ ತಂದೆಯು ಅಪಘಾತವೊಂದರಲ್ಲಿ ತೀರಿಹೋಗಿದ್ದು ಕುಟುಂಬವನ್ನು ಕಂಗೆಡಿಸುವಂತೆ ಮಾಡಿತು. ಮೇರಿಯೇ ಹಿರಿಯ ಮಗಳಾದ್ದರಿಂದ ಅವಳಿಗೆ ಕುಟುಂಬದ ಭಾರವೊದಗಿತ್ತು. ಇದರಿಂದ ಆಕೆಯ ತಾಯಿ ಮಾನಸಿಕವಾಗಿ ಕುಗ್ಗಿ ಹಾಸಿಗೆ ಹಿಡಿದರು. ತಮ್ಮ, ತಂಗಿಯರ ವಿದ್ಯಾಭ್ಯಾಸ ಇನ್ನೂ ಮುಗಿದಿರಲಿಲ್ಲ. ಇದರಿಂದ ಕಂಗಾಲಾಗಿದ್ದ ಗೆಳತಿಗೆ ಷೆರ್ಲಿಯೇ ಧೈರ್ಯ ತುಂಬುತ್ತಾ ಸಾಧ್ಯವಾದಷ್ಟೂ ಸಹಾಯಕಳಾಗಿದ್ದಳು. ಹೀಗಾಗಿ ಅವರಿಬ್ಬರ ನಂಟು ಮತ್ತಷ್ಟು ಭದ್ರವಾಗಿತ್ತು.
ಷೆರ್ಲಿಯ ಅಣ್ಣ ಸ್ಯಾಮುಯೆಲ್ ಇಂಜಿನಿಯರಿಂಗ್ ಡಿಪ್ಲೊಮಾ ಮಾಡಿದರೂ ಬೇರೆ ಕೆಲಸಕ್ಕೆ ಹೋಗದೆ ತನ್ನದೇ ಸ್ವಂತ ವರ್ಕ್ಷಾಪ್ ತೆಗೆದನು. ಇದರಿಂದ ಇನ್ನೂ ಕೆಲವರಿಗೆ ಕೆಲಸ ಕೊಡುವಂತಾದನು. ಅವನ ವಹಿವಾಟು ಉತ್ತಮವಾಗಿ ನಡೆದಿತ್ತು. ಅಲ್ಲಿಗೆ ಅವನ ಸಹಪಾಠಿಯಾಗಿದ್ದ ಸುಧೀರ ಆಗಿಂದಾಗ್ಗೆ ಬರುತ್ತಿದ್ದ. ಅವರಿಬ್ಬರೂ ಓದುವಾಗ ಬೆಳೆದಿದ್ದ ಸ್ನೇಹ ಹಾಗೇ ಮುಂದುವರೆದಿತ್ತು. ಸುಧೀರನಿಗೆ ಕರ್ನಾಟಕ ಸರ್ಕಾರದ ಲೊಕೋಪಯೊಗಿ ಇಲಾಖೆಯಲ್ಲಿ ಜ್ಯೂನಿಯರ್ ಇಂಜಿನಿಯರ್ ಕೆಲಸ ಸಿಕ್ಕಿತ್ತು. ಅಲ್ಲಿಯೇ ಕೆಲಸ ಮಾಡುತ್ತಿದ್ದ.
ಷೆರ್ಲಿಯ ಮೂಲಕ ಸುಧೀರನಿಗೆ ಮೇರಿಯ ಪರಿಚಯವಾಗಿತ್ತು. ಆಗೀಗ ಪರಸ್ಪರರು ಭೇಟಿಯಾಗುತ್ತಿದ್ದು ನಿಕಟವಾದ ಬಾಂಧವ್ಯಕ್ಕೆ ಮೂಲವಾಯಿತು. ಅಂತೂ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರರೆಂಬ ಸ್ಥಿತಿ ತಲುಪಿದಾಗ ವಿವಾಹ ಮಾಡಕೊಳ್ಳಲು ಸಿದ್ದರಾದರು. ಸುಧೀರನ ತಂದೆತಾಯಿಗಳು ಇದಕ್ಕೆ ಸಮ್ಮತಿಸಲಿಲ್ಲ. ಬಹಳ ಪ್ರಯತ್ನದ ನಂತರವೂ ಅವರು ಇದನ್ನು ವಿರೋಧಿಸಿದರು. ಗೆಳೆಯರ ನೆರವಿನಿಂದ ಸುಧೀರ ಮತ್ತು ಮೇರಿ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ಮಾಡಿಕೊಂಡು ಸತಿಪತಿಗಳಾದರು. ಮೇರಿಯು ಹೊತ್ತುಕೊಂಡಿದ್ದ ಅವಳ ಕುಟುಂಬದ ಜವಾಬ್ದಾರಿಯ ದೆಸೆಯಿಂದ ಅವಳು ನೌಕರಿಯನ್ನೂ ಮುಂದುವರೆಸಬೇಕಾಗಿತ್ತು ಹಾಗೂ ಚೆನ್ನೈನಲ್ಲಿಯೇ ಇರಬೇಕಾಗಿತ್ತು. ಇದರಿಂದಾಗಿ ಅವರಿಬ್ಬರೇ ಪ್ರತ್ಯೇಕ ಸಂಸಾರ ಹೂಡುವ ಅವಕಾಶ ಒದಗಲೇ ಇಲ್ಲ. ಇದೆಲ್ಲವನ್ನೂ ಮದುವೆಗೆ ಮೊದಲೇ ಚರ್ಚಿಸಿ ನಿರ್ಧಾರಕ್ಕೆ ಬಂದಿದ್ದರು. ಆದ್ದರಿಂದ ಸುಧೀರ ಬಿಡುವು ದೊರೆತಾಗಲೆಲ್ಲ ಚೆನ್ನೈಗೆ ಬಂದುಹೋಗುತ್ತಿದ್ದ. ಗಂಡಹೆಂಡಿರ ನಡುವಿನ ಪ್ರೀತಿಗೆ ಇದರಿಂದ ಏನೂ ತೊಡಕಾಗಿರಲಿಲ್ಲ. ಮಕ್ಕಳಿಗೆ ರಜೆಯಿದ್ದಾಗ ಅವರೂ ಅಮ್ಮನೊಡನೆ ಕೆಲವು ದಿನ ಮೈಸೂರಿಗೂ ಹೋಗಿ ಬರುತ್ತಿದ್ದರು. ಷೆರ್ಲಿ ತಾನು ವಿವಾಹ ಮಾಡಿಕೊಳ್ಳುವುದಿಲ್ಲವೆಂದೂ, ಸೇವೆಗೇ ತಾನು ಮುಡಿಪಾಗಿರುವುದಾಗಿ ತೀರ್ಮಾನಿದ್ದರಿಂದ ಅವಳ ಕುಟುಂಬದವರು ಹಿರಿಯ ಮಗ ಸ್ಯಾಮ್ಯುಯೆಲ್‌ಗೆ ಆತನಿಷ್ಟ ಪಟ್ಟಿದ್ದ ಗೆಳತಿ ಕ್ಲಾರಾಳ ಜೊತೆ ವಿವಾಹ ಮಾಡಿದರು. ಮೊದಲೇ ಪರಿಚಯವಿದ್ದ ಕುಟುಂಬದವಳಾದ್ದರಿಂದ ಅವಳೂ ಸಹಜವಾಗಿಯೇ ಗಂಡನ ಕುಂಟುಂಬದ ಹೊಸ ಸದಸ್ಯಳಂತೆ ಸೇರ್ಪಡೆಯಾಗಿದ್ದಳು. ಹೀಗೇ ಎರಡೂ ಪರಿಚಿತ ಕುಟುಂಬಗಳೂ ಮೊದಲಿನಂತೆಯೇ ಕಷ್ಟಸುಖಗಳಲ್ಲಿ ಭಾಗಿಯಾಗುತ್ತ ಮುನ್ನಡೆದಿದ್ದವು.
ಸುಧೀರ ತನ್ನ ಹೆಂಡತಿ ಮಕ್ಕಳೊಡನೆ ಖುಷಿಯಾಗಿದ್ದವನು ಕೆಲ ವರ್ಷಗಳ ನಂತರ ಮದ್ಯ ವ್ಯಸನಿಯಾಗಿದ್ದ. ಇದಕ್ಕೆ ಒಂಟಿತನ ಕಾರಣವೋ, ಅಥವಾ ಸಹವಾಸ ದೋಷವೋ ತಿಳಿಯದು. ಮೇರಿಯ ಪ್ರೀತಿಯ ಹಿತವಚನಗಳು ಅವನ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡಲಿಲ್ಲ. ಅವನ ಗೆಳೆಯ ಸ್ಯಾಮ್ಯುಯೆಲ್ ಅವನು ವರ್ಗಾವಣೆ ಪಡೆದು ಚೆನ್ನೈಗೆ ಬರುವುದು ಅಸಾಧ್ಯವಾದ್ದರಿಂದ ಆ ಕೆಲಸವನ್ನೇ ಬಿಟ್ಟು ಬಾ. ಹೇಗಿದ್ದರೂ ನನ್ನ ವರ್ಕ್ಷಾಪ್ ಚೆನ್ನಾಗಿ ನಡೆದಿದೆ, ಇಲ್ಲಿಯೇ ನೀನು ಕೆಲಸ ಮಾಡಬಹುದು. ಬೇಡವೆಂದರೆ ಇಲ್ಲಿಯೇ ಖಾಸಗಿ ಕಂಪನಿಗಳಲ್ಲಿ ಕೆಲಸ ಹುಡುಕಿಕೊಳ್ಳಬಹುದು. ಇಬ್ಬರೂ ಒಟ್ಟಿಗಿದ್ದರೆ ಅವನು ಸುಧಾರಿಸಬಹುದು ಎಂದು ಸಲಹೆ ನೀಡಿದನು. ಆದರೆ ಅಂತಹ ಯಾವುದೇ ಪ್ರಯತ್ನಕ್ಕೆ ಮುಂದಾಗದೆ ಸುಧೀರ ತನ್ನ ಕೆಲಸದಲ್ಲಿಯೇ ಮುಂದುವರಿದಿದ್ದ. ಮೇರಿಯ ಆತಂಕ ಮಾತ್ರ ಹೆಚ್ಚಾಗುತ್ತಿತ್ತು.
ಈ ಅವಧಿಯಲ್ಲಿ ಮೇರಿಯ ತಮ್ಮ, ತಂಗಿ ತಮಗಿಷ್ಟ ಬಂದ ಸಂಗಾತಿಗಳೊಡನೆ ತಮ್ಮ ಪ್ರತ್ಯೇಕ ಬದುಕನ್ನರಸಿಕೊಂಡು ಮನೆಯಿಂದ ನಡೆದುಬಿಟ್ಟರು. ಇದರಿಂದಾಗಿ ಮನನೊಂದ ಮೇರಿಯ ತಾಯಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಸಂಪೂರ್ಣ ಹಾಸಿಗೆ ಹಿಡಿದರು. ಇದರಿಂದ ಹೆಚ್ಚು ದುಃಖವಾಗಿದ್ದು ಮೇರಿಗೆ. ಆದರೂ ಏನಾದರೂ ಮಾಡಿ ಅವಳು ತನ್ನ ಗಂಡನನ್ನು ಒಲಿಸಿ ಚೆನ್ನೈಗೆ ಬರುವಂತೆ ಮಾಡುವ ಪ್ರಯತ್ನದಲ್ಲಿರುವಾಗಲೇ ಬರಸಿಡಿಲಿನಂತೆ ಬಂದಿತ್ತು ಸುಧೀರನ ಅಕಾಲಿಕ ಮರಣದ ಸುದ್ಧಿ. ಮೇರಿಯ ಹೃದಯವೇ ಒಡೆದಂತಾಯ್ತು.
ಹೂಂ ನಾನೆಂತಹ ನತದೃಷ್ಟೆ ! ಪರವಾಗಿಲ್ಲ ಎನ್ನುವಷ್ಟರಲ್ಲಿ ತಂದೆ ಅಕಾಲಿಕವಾಗಿ ಮರಣಿಸಿದರು. ಆ ನಂತರ ಈ ಪುಣ್ಯಾತ್ಮನನ್ನು ಇಷ್ಟಪಟ್ಟು ಮದುವೆಯಾದೆ. ಮತ್ತೆ ಎಲ್ಲವೂ ಸಮನಾಯಿತೆನ್ನುವಷ್ಟರಲ್ಲಿ ತಮ್ಮ, ತಂಗಿ ಮನೆತೊರೆದರು. ಈಗ ನೋಡಿದರೆ ನನ್ನ ಭರವಸೆಯ ಬೆನ್ನೆಲುಬೆಂದು ನಂಬಿದ್ದ ಗಂಡನೇ ಇಲ್ಲವಾಗಿದ್ದ. ಹೋಗಲಿ ಮಕ್ಕಳ ಭವಿಷ್ಯಕ್ಕೇನಾದರೂ ಆಸರೆಯಾದೀತೆಂದು ಗಂಡನ ಮರಣಾನಂತರ ಹೆಂಡತಿಗೆ ದಕ್ಕಬೇಕಾಗಿದ್ದ ಎಲ್ಲಾ ಹಣಕಾಸಿನ ಸೌಲಭ್ಯಗಳು ಮೂರು ತಿಂಗಳ ಪ್ರಯತ್ನದ ನಂತರವೂ ಕೈಸೇರಿಲ್ಲ. ನನ್ನ ಭವಿಷ್ಯ ಹಾಳಾದರೂ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡಬೇಕಲ್ಲಾ ಎಂಬ ಚಿಂತೆ ಬೆಟ್ದದಷ್ಟು. ಈ ಹಿನ್ನೆಲೆಯಲ್ಲಿ ಇನ್ನೇನು ಎಲ್ಲವೂ ಸರಿಹೋಯಿತೆಂದು ಅಧಿಕಾರಿಗಳೇ ಕಳೆದಬಾರಿ ಭರವಸೆ ಕೊಟ್ಟಿದ್ದರು. ಆದರೀಗ ಮತ್ತೇನೋ ಗೊತ್ತಿಲ್ಲ. ಖುದ್ದಾಗಿ ಬರುವಂತೆ ಕರೆ ಮಾಡಿದ್ದಾರೆ. ಭಗವಂತಾ ನನ್ನನ್ನು ಇನ್ನೆಷ್ಟು ರೀತಿಯಲ್ಲಿ ಪರೀಕ್ಷಿಸುತ್ತೀಯಪ್ಪಾ. ದಯವಿಟ್ಟು ಕರುಣೆತೋರು ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದಳು. ಏಕೋ ಟ್ರೈನ್ ನಿಂತಂತಾಯಿತು. ಏನು ಕಾರಣವೆಂದು ಕಿಟಕಿಯ ಪರದೆ ತೆರೆದು ಆಚೆ ಕಣ್ಣಾಡಿಸಿದಳು. ಮೈಸೂರು ಜಂಕ್ಷನ್ ಎಂಬ ಫಲಕ ಕಾಣಿಸಿತು. ಅದ್ಯಾವಗಲೋ ಎದುರು ಸೀಟಿನಲ್ಲಿದ್ದ ಜೋಡಿಗಳು ಇಳಿದು ಹೋಗಿದ್ದವು. ಮೇರಿಯೂ ತನ್ನ ವಸ್ತುಗಳನ್ನು ಕೈಯಲ್ಲಿ ಹಿಡಿದು ಪ್ಲಾಟ್‌ಫಾರಂಗಿಳಿದಳು.
ಹೊರಗಿದ್ದ ಕ್ಯಾಂಟೀನನಲ್ಲಿ ಒಂದು ಕಾಫಿ ಕುಡಿದು ನೇರವಾಗಿ ಕಛೇರಿಯ ಕಡೆ ನಡೆದಳು. ಹೋದ ತಕ್ಷಣ ಅಲ್ಲಿದ ಮ್ಯಾನೇಜರ್ “ಬನ್ನಿ ನಿಮ್ಮನ್ನು ಕರೆಸಬೇಕಾದ ಅನಿವಾರ್ಯ ಒಂದು ಎದುರಾಯ್ತು. ಅದಕ್ಕೇ ತೊಂದರೆ ಕೊಡಬೇಕಾಯ್ತು. ಚೇಂಬರಿನಲ್ಲಿ ಸಾಹೇಬರಿದ್ದಾರೆ ನಾನು ಹೋಗಿ ಅವರಿಗೆ ನೀವು ಬಂದಿರುವ ವಿಷಯ ತಿಳಿಸಿ ನಿಮ್ಮನ್ನು ಕರೆದುಕೊಂಡು ಹೊಗುತ್ತೇನೆ. ಇಲ್ಲಿಯೇ ಕುಳಿತಿರಿ” ಎಂದು ಕುರ್ಚಿಯೊಂದನ್ನು ತೋರಿಸಿದರು. ಮೇರಿಗೆ ಅಂತದ್ದೇನು ಅನಿವಾರ್ಯ ಕಾರಣ ಎಂದು ಹೊಳೆಯಲಿಲ್ಲ.
ಕೂಡಲೇ ಹಿಂದಿರುಗಿದ ಮ್ಯಾನೇಜರ್ ಅವಳನ್ನು ಹಿರಿಯ ಅಧಿಕಾರಿಗಳ ಬಳಿಗೆ ಕರೆದೊಯ್ದರು. ನಮಸ್ಕರಿಸಿದ ಅವಳನ್ನು ಕೂರಲು ಹೇಳಿ “ನೀವು ಕಳೆದ ಬಾರಿ ಬಂದಾಗ ನಮಗೆ ನೀಡಬೇಕಾದ ಎಲ್ಲ ವಿವರಗಳನ್ನು ಕೊಟ್ಟಿದ್ದಿರಿ. ಹಾಗಾಗಿ ನಿಮಗೆ ಬರಬೇಕಾದ ಎಲ್ಲ ಅರ್ಥಿಕ ಸೌಲಭ್ಯಗಳನ್ನು ನಿಮಗೆ ನೀಡಲು ಆದೇಶವನ್ನೂ ಸಿದ್ಧ ಪಡಿಸಲಾಗಿತ್ತು. ಅಷ್ಟರಲ್ಲಿ ಪ್ರಕರಣಕ್ಕೆ ಒಂದು ಅನಿರೀಕ್ಷಿತ ತಿರುವು ಉಂಟಾಯಿತು. ಒಬ್ಬರು ಯಜಮಾನ ಮನುಷ್ಯರು ಒಬ್ಬ ಗ್ರಾಮೀಣ ಮಹಿಳೆಯ ಜೊತೆಗೆ ಕಛೇರಿಗೆ ಬಂದರು. ಅವರು ತಮ್ಮನ್ನು ಮರಣಿಸಿದ ಸುಧೀರನ ತಂದೆ ಎಂದು ಪರಿಚಯ ಮಾಡಿಕೊಂಡರು. ಅವರೊಂದು ಅರ್ಜಿ ಕೊಟ್ಟು ತಮ್ಮೊಡನೆ ಕರೆದುಕೊಂಡು ಬಂದಿದ್ದ ಮಹಿಳೆಯನ್ನು. ಈಕೆ ನನ್ನ ಸೊಸೆ ಶಾಸ್ತ್ರೋಕ್ತವಾಗಿ ಮಗ ಸುಧೀರನನ್ನು ಮದುವೆಯಾಗಿರುವ ಆತನ ಪತ್ನಿ. ಈಕೆ ಹಳ್ಳಿ ಹುಡುಗಿ ವಿದ್ಯಾವಂತೆಯಲ್ಲ ಎಂದು ಮಗ ವಿವಾಹವಾಗಲು ಒಪ್ಪಿರಲಿಲ್ಲ. ಆದರೆ ಬಂಧುಬಳಗದವರ ಮಾತಿಗೆ ಮನ್ನಣೆ ಕೊಟ್ಟು ವಿವಾಹ ಮಾಡಿಕೊಂಡ. ಆದರೆ ಇವಳೊಡನೆ ಸಂಸಾರವನ್ನು ಮಾಡಲಿಲ್ಲ. ನಂತರ ನಮ್ಮ ಇಷ್ಟಕ್ಕೆ ವಿರುದ್ಧವಾಗಿ ಬೇರೆ ಯಾವುದೋ ಜಾತಿಯ ಹೆಣ್ಣನ್ನು ಮದುವೆಯಾದನೆಂದು ತಿಳಿಯಿತು. ಅವನು ನಮ್ಮೊಡನೆ ಸಂಬಂಧಗಳನ್ನೆಲ್ಲ ಕಡಿದುಕೊಂಡು ಬಿಟ್ಟಿದ್ದ. ಈಗ ಕೆಲವರ ಮೂಲಕ ಆತ ತೀರಿಹೋಗಿದ್ದಾನೆ ಎಂದು ತಿಳಿಯಿತು. ಕಷ್ಟಪಟ್ಟು ತಮ್ಮ ಕಚೇರಿಯ ವಿಳಾಸ ತಿಳಿದುಕೊಂಡು ಇಲ್ಲಿಗೆ ಬಂದಿದ್ದೇವೆ. ಆತನಿಗೆ ಮರಣಾನಂತರ ಬರಬೇಕಾದ ಹಣಕಾಸು, ಮತ್ತು ಆತನ ಹೆಂಡತಿಗೆ ಸರ್ಕಾರದಿಂದ ಒಂದು ಮಾನವೀಯತೆಯ ಆಧಾರದ ನೌಕರಿ ಸಿಗುತ್ತದೆಂಬುದು ತಿಳಿಯಿತು. ಆದ್ದರಿಂದ ನಿಮ್ಮಲ್ಲಿ ಅರ್ಜಿ ಸಲ್ಲಿಸಲು ಬಂದಿದ್ದೇವೆ. ಆ ಸೌಲಭ್ಯಗಳೆಲ್ಲ ನ್ಯಾಯವಾಗಿ ಅವನ ಹೆಂಡತಿಯಾದ ಈಕೆಗೇ ಕೊಡಿಸಿಕೊಡಬೇಕು ಎಂದು ಕೇಳಿಕೊಂಡರು. ಇದರಿಂದ ಹೊಸ ಸಮಸ್ಯೆ ಉದ್ಭವಿಸಿತು. ಅವರಿಗೆ ಆ ಹೆಂಗಸು ನಿಜವಾಗಿ ಸುಧೀರನ ಹೆಂಡತಿಯೆಂದು ನಂಬಲು ಬೇಕಾದ ದೃಢೀಕೃತ ದಾಖಲಾತಿಗಳನ್ನು ತಪ್ಪದಂತೆ ಈ ಕಚೇರಿಗೆ ಹದಿನೈದು ದಿನಗಳೊಳಗೆ ತಂದೊಪ್ಪಿಸಿ. ನಂತರ ನಮ್ಮ ಕ್ರಮ ತೆಗೆದುಕೊಳ್ಳುತ್ತೇವೆ. ಒಂದುವೇಳೆ ನೀವು ದಾಖಲಾತಿಗಳನ್ನು ಒದಗಿಸದಿದ್ದರೆ ನಮ್ಮಲ್ಲಿ ಲಭ್ಯವಿರುವ ಆಧಾರಗಳ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಪ್ರಕರಣ ಬಹಳ ವಿಳಂಬವಾಗಿದೆ. ಬೇಗನೆ ಬಗೆಹರಿಸಿ ವರದಿ ಕೊಡಿರೆಂದು ಸರ್ಕಾರದಿಂದ ನಮಗೆ ಒತ್ತಾಯದ ಆದೇಶ ಬಂದಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇನ್ನು ತಡಮಾಡಲಾಗುವುದಿಲ್ಲ. ಬೇಗನೆ ಒದಗಿಸಿ ಎಂದು ತಿಳಿಸಿ ಅವರನ್ನು ಕಳುಹಿಸಿದ್ದೆವು. ಇದಾಗಿ ಈಗಾಗಲೇ ಒಂದು ತಿಂಗಳಾಗುತ್ತಿದೆ. ಇದುವರೆಗೆ ಆ ವ್ಯಕ್ತಿಯಿಂದ ಯಾವುದೇ ಪ್ರತ್ಯುತ್ತರವಿಲ್ಲ. ಸಾಕಷ್ಟು ಅವಕಾಶ ನೀಡಿದ ಮೇಲೆ ನಿಮ್ಮ ಪರವಾಗಿ ಎಲ್ಲ ಆದೇಶಗಳನ್ನೂ ನೀಡಲಾಗಿದೆ. ನಿಮಗೆ ಬರಬೇಕಾದ ಹಣಕ್ಕೆ ಚೆಕ್ಕನ್ನೂ ತಯಾರುಮಾಡಿದ್ದಾರೆ. ನಮ್ಮ ಮ್ಯಾನೇಜರ್ ಬಳಿ ಅವುಗಳನ್ನು ಪಡೆದುಕೊಳ್ಳಿ. ಹಾಗೂ ನಿಮ್ಮ ಕುಟುಂಬ ಪೆನ್ಷನ್ ಆರ್ಡರ್ ಕೂಡ ಸಿದ್ಧವಾಗಿದೆ. ನಿಮಗೆ ಅನುಕೂಲವಾದ ಬ್ಯಾಂಕಿನ ಮೂಲಕ ಅದರ ವ್ಯವಸ್ಥೆ ಮಾಡಿಕೊಳ್ಳಬಹುದು. ನಿಮ್ಮನ್ನು ಅಲ್ಲಿಂದ ಕರೆಸಬೇಕಾದ ಕಾರಣ ಇದಾಗಿತ್ತು. ಸರ್ಕಾರದ ಕಚೇರಿಯ ಪ್ರಕರಣದಲ್ಲಿ ಯಾವುದೇ ಅನುಮಾನಗಳು ಇರದಂತೆ ಬಗೆಹರಿಸುವುದು ನಮ್ಮ ಕರ್ತವ್ಯವಾಗುತ್ತದೆ. ನಿಮಗೇನಾದರೂ ನಮ್ಮಿಂದ ಸಹಾಯ ಬೇಕಾದರೆ ಸಂಕೋಚವಿಲ್ಲದೆ ನಮ್ಮ ಕಚೇರಿಯನ್ನು ಸಂಪರ್ಕಿಸಬಹುದು. ಬಂದದ್ದಕ್ಕೆ ಧನ್ಯವಾದಗಳು.” ಎಂದರು.
ಅಧಿಕಾರಿಯ ಮಾತನ್ನು ಕೇಳುತ್ತಿದ್ದಂತೆ ಮೇರಿಯ ಒಳ ಮನಸ್ಸಿನಲ್ಲೊಂದು ಆಲೋಚನೆ ಪಕ್ಕನೆ ಹೊಳೆದು ಮರೆಯಾಯಿತು. ಆ ಮನುಷ್ಯ ಜಾತಿಯ ಭೂತವನ್ನು ಮುಂದಿಟ್ಟು ಮಗನ ಮದುವೆಗೆ ಅಡ್ಡಗಾಲಾಕಿದ್ದನು. ಅವನೇ ಮಗನೊಡನೆ ಎಲ್ಲ ಸಂಬಂಧಗಳಿಗೂ ತಿಲಾಂಜಲಿ ಬಿಟ್ಟಿದ್ದ. ಮತ್ತೆ ತನ್ನ ಮಗನನ್ನಾಗಲೀ ಮೊಮ್ಮಕ್ಕಳನ್ನಾಗಲೀ ಕಣ್ಣಿಂದ ನೋಡಿಯೇ ಇಲ್ಲ. ಈಗ ಮಗ ಸತ್ತಿದ್ದಾನೆ. ಅವನಿಗೆ ಸರ್ಕಾರದಿಂದ ಹಣಕಾಸು ಬರುತ್ತದೆ ಎಂದು ತಿಳಿದುಕೊಂಡು ತನ್ನ ಮಗನೆಂದು ಕಡಿದುಕೊಂಡಿದ್ದ ಸಂಬಂಧವನ್ನು ಹೇಳಿಕೊಂಡು ಒಬ್ಬ ಹೆಣ್ಣುಮಗಳನ್ನೂ ಕರೆತಂದು ಎಂತಹ ಸುಳ್ಳು ಕಥೆ ಹೆಣೆದಿದ್ದಾನೆ. ಅಂತೂ ಸುಧೀರನ ಸಾವನ್ನು ಮುಂದಿಟ್ಟುಕೊಂಡು ನನಗೆ ಮತ್ತು ನನ್ನ ಮಕ್ಕಳಿಗೆ ನ್ಯಾಯವಾಗಿ ಸಿಗಬೇಕಾದ ಸವಲತ್ತುಗಳಿಗೂ ಕಲ್ಲು ಹಾಕಲು ಸಂಚು ಹೂಡಿದ್ದಾನಲ್ಲಾ ! ಎಂಥಹ ನೀಚನಿವನು. ಸದ್ಯ ಅಧಿಕಾರಿಯ ರೂಪದಲ್ಲಿ ನಮ್ಮನ್ನು ಭಗವಂತ ಕಾಪಾಡಿದ ಎಂದಿತು ಒಳ ಮನಸ್ಸು.
ಹಿರಿಯ ಅಧಿಕಾರಿಗಳಿಗೆ ಕೈಮುಗಿದು ಮ್ಯಾನೇಜರ್ ರವರಿಂದ ನೀಡಿದ ಕಾಗದಪತ್ರಗಳು, ಮತ್ತು ಗ್ರ್ಯಾಚೂಟಿ, ಗ್ರೂಪ್ ಇನ್ಸೂರೆನ್ಸ್ ಹಣದ ಚೆಕ್ಕುಗಳನ್ನು ಪಡೆದುಕೊಂಡು ಅವರು ನೀಡಿದ ಸಹಕಾರಕ್ಕಾಗಿ ವಂದನೆಗಳನ್ನು ಸಲ್ಲಿಸಿ ಮೇರಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಕಚೇರಿಯ ಮೆಟ್ಟಿಲುಗಳನ್ನು ಇಳಿದಳು. ಹೊರಡುವಾಗ ಎದೆತುಂಬ ದುಗುಡವನ್ನು ಹೊತ್ತುಬಂದಿದ್ದ ಮೇರಿ ಈಗ ಭಗವಂತ ನನ್ನ ಕೈ ಬಿಟ್ಟಿಲ್ಲ ಎಂದು ಮನಸಾರೆ ಮೌನವಾಗಿ ಪ್ರಾರ್ಥಿಸಿದಳು.
–ಬಿ.ಆರ್ .ನಾಗರತ್ನ , ಮೈಸೂರು .
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾರವರಿಗೆ
ಕುತೂಹಲ ಹುಟ್ಟು ಹಾಕುತ್ತ ಸಾಗಿದೆ ಕಥೆ. ಇನ್ನೊಬ್ಬರ ಬದುಕನ್ನು ಹಾಳು ಮಾಡಲು ತುದಿ ಗಾಲಲ್ಲಿ ನಿಂತಿರುತ್ತಾರೆ ಮಂದಿ. ಆದರೆ ದೇವರ ಸಹಕಾರ ಇದ್ದರೆ ಎಲ್ಲವನ್ನು ಜಯಿಸಬಹುದು.
ಕಥಾವಸ್ತು ಕುತೂಹಲಕರವಾಗಿದೆ.ನಿರೂಪಣೆ ಚೆನ್ನಾಗಿದೆ. ಅನಿರೀಕ್ಷಿತ ಸುಖಾಂತ್ಯ ಖುಷಿ ಕೊಟ್ಟಿತು.
ಧನ್ಯವಾದಗಳು ಮುಕ್ತಾ ಮೇಡಂ
ಸರಾಗವಾಗಿ ಒಂದೇ ಕ್ಷಣ ಆಚೆ ಈಚೆ ನೋಡದಂತೆ ಓದುವಂತೆ ಮಾಡಿದ ಸುಂದರ ಸರಳ ಕಥೆ. ಕಲ್ಪನೆಗೆ ಇಂಬು ನೀಡುತ್ತ… ಸುಖಾಂತ್ಯ ನೀಡಿದ್ದು ಖುಷಿ ನೀಡಿತು..
ಧನ್ಯವಾದಗಳು ಸಾರ್
ಸರಾಗವಾಗಿ ಒಂದೇ ಕ್ಷಣ ಆಚೆ ಈಚೆ ನೋಡದಂತೆ ಓದುವಂತೆ ಮಾಡಿದ ಸುಂದರ ಸರಳ ಕಥೆ. ಕಲ್ಪನೆಗೆ ಇಂಬು ನೀಡುತ್ತ… ಸುಖಾಂತ್ಯ ನೀಡಿದ್ದು ಖುಷಿ ನೀಡಿತು..
ನಿಮ್ಮ ಸಹೃದಯ ಪ್ರತಿಕ್ರಿಯೆಯಾಗಿ ಧನ್ಯವಾದಗಳು ನಯನಮೇಡಂ
ಮೇರಿಯ ಜೀವನದ ಏರುಪೇರುಗಳೊಂದಿಗೆ ಕೌತುಕದ ತಿರುವುಗಳನ್ನು ಪಡೆಯುತ್ತಾ ಸಾಗಿದ ಕಥೆ ಅಂತೂ ಸುಖಾಂತ…. ಎಂದಿನಂತೆ ಚಂದದ ಕಥೆ, ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ವಿಶಿಷ್ಟ ಕಥಾಹಂದರವುಳ್ಳ ಸೊಗಸಾದ ಕತೆ.
ಧನ್ಯವಾದಗಳು ಶಂಕರಿ ಮೇಡಂ
ನಿಮ್ಮ ಸ್ಪಂದನೆಗೆ ಹೃತ್ಪೂರ್ವಕವಾದ ಧನ್ಯವಾದಗಳು ಹೇಮಾ
ಕಥೆ ಚೆನ್ನಾಗಿದೆ.ಇದೇತರ ನನ್ನ ಪರಿಚಯದವರ ನಿಜ ಜೀವನದಲ್ಲಿ ನಡೆದಿದೆ
ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ
ನಾನು ಎಲ್ಲಿ ಮೇರಿಗೆ ಗ್ರಾಚ್ಯೂಟಿ,ಗ್ರೂಪ್ ಇನ್ಶುರೆನ್ಸ್ ಹಣ ತಪ್ಪಿಬಿಡುತ್ತದೆಯೋ ಅಂದುಕೊಂಡಿದ್ದೆ ನ್ಯಾಯಯುತವಾಗಿ ಅವಳಿಗೆ ಹಣ ಸೇರುವಂತೆ ಮಾಡಿ ಸುಖಾಂತ್ಯ ನೀಡಿದ ಕಥೆ ಚೆನ್ನಾಗಿದೆ ಮೇಡಂ…….
ಧನ್ಯವಾದಗಳು ಸಾರ್
ಕಥೆ ಸುಖಾಂತವಾದದ್ದು ನೆಮ್ಮದಿಯೆನಿಸಿತು. ಕುತೂಹಲದಿಂದ ಓದಿಸಿಕೊಂಡಿತು.
ನಿಮ್ಮ ಸ್ಪಂದನೆಗೆ ಧನ್ಯವಾದಗಳು ಪದ್ಮಾ ಮೇಡಂ