ಲಹರಿ

ಅಲ್ಪವಿರಾಮದ ಸುತ್ತ

Share Button

ಜಗತ್ತಿನ ಎಲ್ಲ ಭಾಷೆಗಳಿಗೆ ಅನ್ವಯಿಸುವ ಹಾಗೆ ಹದಿನಾಲ್ಕು ವಿವಿಧ ಚಿಹ್ನೆಗಳು ಬಳಕೆಯಲ್ಲಿವೆ. ಇದು ಎಲ್ಲಾ ಭಾಷೆಗಳಲ್ಲೂ ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕಾಗಿರುವುದು ಅನಿವರ‍್ಯ. ಎಲ್ಲ ಚಿನ್ಹೆಗಳ ರಾಜ ‘ಅಲ್ಪವಿರಾಮ’ ಎಂದರೆ ಉತ್ಪ್ರೇಕ್ಷೆ ಎನಿಸದು.

ಅಲ್ಪವಿರಾಮ ಒಂದು ನಿಕೃಷ್ಟವಾಗಿ ಕಂಡ ಚಿಹ್ನೆ ಆದರೂ ಅದರ ಪ್ರಭಾವ ವರ್ಣನಾತೀತ. ಇದನ್ನು ಆಂಗ್ಲ ಭಾಷೆಯಲ್ಲಿ ‘COMMA’ ಎಂದು ಕರೆಯುತ್ತಾರೆ. ವಾಕ್ಯಗಳ ಮೇಲೆ ತೇಲುತ್ತಾ ತೇಲುತ್ತಾ ಸಾಗುವುದು ಅಲ್ಪವಿರಾಮ, ಸುರಕ್ಷಿತ ದಡ ಮುಟ್ಟಿಸುವುದು ಪೂರ್ಣ ವಿರಾಮ.

ಇನ್ನು ಪತ್ರಿಕಾ ರಂಗದಲ್ಲಂತೂ ಈ ಅಲ್ಪವಿರಾಮಕ್ಕೆ ಬಹಳ ಪ್ರಾಶಸ್ತ್ಯ. ಶಿವರಾಮ ಕಾರಂತರು ಯಾರಿಗೆ ಅಲ್ಪವಿರಾಮ, ಪೂರ್ಣವಿರಾಮದ ಮಹತ್ವ ಬಳಕೆ ಗೊತ್ತಿಲ್ಲವೋ ಅವರು ಲೇಖಕರಾಗುವುದಕ್ಕೆ ನಾಲಾಯಕ್ಕು ಎಂಬ ಖಡಕ್ ಮಾತನ್ನು ಹೇಳಿದ್ದಾರೆ. ಮತ್ತೂ ಮುಂದುವರಿದು ಕಾರಂತರು ಏಕ್ಸಿಲರೇಟರ್ ಹಾಗೂ ಬ್ರೇಕ್‌ನ ಬಳಕೆ ಗೊತ್ತಿಲ್ಲದವ ಹೇಗೆ ಚಾಲಕನಾಗಲು ಅನರ್ಹನೋ ಹಾಗೆ ಅಲ್ಪವಿರಾಮ ಹಾಗೂ ಪೂರ್ಣವಿರಾಮ ಮತ್ತು ಇನ್ನಿತರ ಚಿನ್ಹೆಗಳ ಬಳಕೆ ಗೊತ್ತಿಲ್ಲದವ ಪತ್ರಕರ್ತ, ವರದಿಗಾರ ಅಥವಾ ಸಾಹಿತಿಯಾಗಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ.

ಪತ್ರಿಕೆಯ ಹೆಡ್‌ಲೈನ್ ಅಥವಾ (ತಲೆಬರಹ) ದ ಕೊನೆಯಲ್ಲಿ ಪುಸ್ತಕಗಳ ಹೆಸರಲ್ಲಿ, ಕೃತಿಕಾರನ ಹೆಸರಿನ ಮುಂದೆ ಅಲ್ಪವಿರಾಮ ಯಾ ಪೂರ್ಣವಿರಾಮ ಪೂರಾ ನಿಷಿದ್ಧ. ಇವುಗಳು ಲೇಖಕರಲ್ಲಿ ಸಂಪಾದಕರಲ್ಲಿ, ವರದಿಗಾರರಲ್ಲಿ, ಆತಂಕ ತರುವ ಚಿಹ್ನೆ ಎಂದರೆ ಅತಿಶಯೋಕ್ತಿಯಲ್ಲ. ಧರ್ಮಶಾಸ್ತç ಎಂಬ ಅಪರೂಪದ ಗ್ರಂಥ ರಚನೆಗೆ ಭಾರತರತ್ನ ಪಿ.ವಿ. ಕಾಣೆಯವರು ೪೫ ವರ್ಷ ತೆಗೆದುಕೊಂಡರು. ಅದರ ಎರಡು ಕರಡು ಪ್ರತಿಯಲ್ಲಿ ಅಲ್ಪವಿರಾಮ, ಪೂರ್ಣವಿರಾಮ ಮೊದಲಾದ ಚಿನ್ಹೆಗಳ ಪರಿಷ್ಕರಣೆಗೆ ತಿದ್ದಲು ಬರೋಬ್ಬರಿ ಆರು ಸಲ ಪುನರ್ವಿಮರ್ಶೆ ಮಾಡಿ ಎಂಟು ವರ್ಷಗಳಲ್ಲಿ ಪುಸ್ತಕ ಪ್ರಕಟವಾಗಿದೆ ಎಂದರೆ ಅಲ್ಪವಿರಾಮ ಹಾಗೂ ಇನ್ನಿತರ ಚಿಹ್ನೆಗಳ ಪ್ರಾಮುಖ್ಯತೆಯ ಅರಿವಾಗುವುದು.

ಮಾತನಾಡುವಾಗಲೂ ನಮ್ಮ ಧ್ವನಿಯ ಏರಿಳಿತದಲ್ಲಿ ಅಲ್ಪವಿರಾಮದ ಸೊಗಡು ಇರುತ್ತದೆ. ಓತಪ್ರೋತವಾಗಿ ಮಾತನಾಡುವವರಿಗೆ ಆತ ಕಾಮ, ಫುಲ್‌ಸ್ಟಾಪ್ ಇಲ್ಲದೆ ಮಾತನಾಡುತ್ತಾನೆ ಎಂದು ಛೇಡಿಸುವುದುಂಟು. ಲಂಡನ್ನಿನ ‘ದಿ ಗಾರ್ಡಿಯನ್’ ಎಂಬ ಪತ್ರಿಕೆಯಲ್ಲಿ ಅಲ್ಪವಿರಾಮದ ಪ್ರಮಾದ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು. ಜನರು ಬ್ರಿಟನ್ ರಾಣಿಯ ಮುಖದಲ್ಲಿ ಮಚ್ಚೆ ಇರಬಹುದು, ಆದರೆ ಹೆಡ್‌ಲೈನ್ ಕೊನೆಯಲ್ಲಿ ಅಲ್ಪವಿರಾಮ, ಪೂರ್ಣ ವಿರಾಮ ನಿಷಿದ್ಧ ಎಂದು ಪ್ರತಿಕ್ರಿಯಿಸಿದರು. ಎಷ್ಟರಮಟ್ಟಿಗೆ ಎಂದರೆ ಅಲ್ಪವಿರಾಮ, ಪೂರ್ಣವಿರಾಮ ಮತ್ತು ಇನ್ನಿತರ ಚಿನ್ಹೆಗಳ ಬಳಕೆ ತಿಳಿಯದ ವರದಿಗಾರರನ್ನೂ, ಸಂಪಾದಕರನ್ನೂ ಗುಂಡಿಟ್ಟು ಸಾಯಿಸಿ ಫುಲ್‌ಸ್ಟಾಪ್ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕಾರಣ, ಭಾಷೆಯ ಕೊಲೆಯಾಗಬಾರದು ಎಂಬ ಕಳಕಳಿ.

ಫ್ರೀಪ್ರೆಸ್ ಜರ್ನಲ್‌ನ ಖ್ಯಾತ ಸಂಪಾದಕರಾಗಿದ್ದ ಸ್ಟಾಲಿನ್ ಶ್ರೀನಿವಾಸನ್ ರವರು ಈ ಅಲ್ಪವಿರಾಮ, ಪೂರ್ಣ ವಿರಾಮಗಳಿಗೆ ಎಷ್ಟು ಕಟ್ಟುನಿಟ್ಟಾಗಿದ್ದರೆಂದರೆ, ಅವರ ಬಳಿ ಬರುತ್ತಿದ್ದ ವರದಿಗಳಲ್ಲಿ ಈ ಚಿನ್ಹೆಗಳ ಬಳಕೆ ಏರುಪೇರಾಗಿದ್ದರೆ, ವರದಿಗಳನ್ನು ವರದಿಗಾರರ ಮುಖಕ್ಕೆ ಎಸೆಯುತ್ತಿದ್ದರು ಎಂಬ ಮಾತಿದೆ. ಅವರ ಮೇಜಿನ ಗಾಜಿನ ಕೆಳಗೆ ಒಂದು ಇಂಗ್ಲಿಷ್ ವಾಕ್ಯ ಇಟ್ಟಿದ್ದರು. ಅದರಲ್ಲಿ ಬರೋಬ್ಬರಿ ನಲವತ್ತೆರಡು ಅಲ್ಪವಿರಾಮಗಳಿದ್ದವು. ಎಲ್ಲಾ ವರದಿಗಾರರಿಗೂ ಅದನ್ನು ಓದಲು ಹೇಳುತ್ತಿದ್ದರು; ಇದರಿಂದ ಅಲ್ಪ ವಿರಾಮದ ಪ್ರಾಮುಖ್ಯತೆ ತಿಳಿಯಲಿ ಎಂಬ ಒಂದು ಧ್ಯೇಯ ಅಷ್ಟೇ.

ಇಷ್ಟೆಲ್ಲಾ ವ್ಯಾಖ್ಯಾನಗಳ ನಂತರ ಅಲ್ಪವಿರಾಮಗಳಿಂದ ಆದ ವಿಸ್ಮಯ, ಅನಾಹುತಗಳ ಕೆಲವು ಘಟನೆಗಳು ಉಲ್ಲೇಖನೀಯ.

ಒಂದು ಆಂಗ್ಲ ಹೇಳಿಕೆ ಪ್ರಕಾರ ಓರ್ವ ನ್ಯಾಯಾಧೀಶರು ಕೈದಿಗೆ ಬರೆಸಿದ ಆದೇಶ ‘HANG HIM, NOT LET HIM FREE’ ಎಂದಿತ್ತು. ಶೀಘ್ರ ಲಿಪಿಗಾರ ಅದನ್ನು ‘HANG HIM NOT, LET HIM FREE’ ಎಂದು ಬರೆದ. ಕೈದಿಯ ಜೀವ ಉಳಿಯಿತು. ಒಂದು ಅಲ್ಪವಿರಾಮಕ್ಕೆ ಜೀವ ಉಳಿಸುವ ಸಾಮರ್ಥ್ಯ ಇದೆ ಎಂಬುದು ಈ ಪ್ರಕರಣದಿಂದ ವೇದ್ಯವಾಗುತ್ತದೆ.

ಇನ್ನೊಂದು ವಿನೋದದ ಘಟನೆ. ಓರ್ವ ಅಧ್ಯಾಪಕರು ವ್ಯಾಕರಣ ತರಗತಿಯಲ್ಲಿ ಕರಿಹಲಗೆಯ ಮೇಲೆ ‘A WOMAN WITHOUT HER MAN IS NOTHING’ ಎಂಬ ವಾಕ್ಯ ಬರೆದು ಸರಿಯಾದ ಸ್ಥಳದಲ್ಲಿ ಅಲ್ಪವಿರಾಮ ಹಾಗೂ ಇನ್ನಿತರ ಚಿಹ್ನೆ ಹಾಕುವಂತೆ ಸೂಚಿಸಿದರು. ಹುಡುಗರು ಎಲ್ಲ ‘A WOMAN, WITHOUT HER MAN, IS NOTHING’ ಎಂದು ಬರೆದರಂತೆ. ಹುಡುಗಿಯರು ಬುದ್ಧಿವಂತರಲ್ಲವೇ? ಅವರು ‘A WOMAN : WITHOUT HER, MAN IS NOTHING’ ಎಂದು ಬರೆದರಂತೆ. ಒಂದೇ ವಾಕ್ಯ, ಅಲ್ಪವಿರಾಮದ ಸ್ಥಾನಪಲ್ಲಟದಿಂದ ಹೇಗೆ ಬದಲಾಗುತ್ತದೆ ಎಂಬುದು ಅಲ್ಪವಿರಾಮದ ಶಕ್ತಿ ಎಂಥದು ಎಂದು ತೋರಿಸುತ್ತದೆ.

ಇನ್ನೊಬ್ಬ ವಿದ್ಯಾರ್ಥಿ ಆಂಗ್ಲ ಭಾಷಾ ಅಧ್ಯಾಪಕರಿಗೆ ಅಲ್ಪವಿರಾಮದಿಂದ ಏನು ಪ್ರಯೋಜನ ಎಂದು ಉಡಾಫೆಯಿಂದ ಕೇಳಿದನಂತೆ. ಉಪಾಧ್ಯಾಯರು ಸಮಾಧಾನದಿಂದ ಹೇಳಿದರು. ‘I LIKE COOKING, DOGS, AND KIDS’ ಎಂಬ ವಾಕ್ಯದಲ್ಲಿ ಅಲ್ಪವಿರಾಮ ತೆಗೆದುಹಾಕಿ ಓದು ಎಂದರಂತೆ ಮತ್ತು ಏನು ಅರ್ಥ ಬರುತ್ತದೆ ಹೇಳು ಎಂದರು. ‘I LIKE COOKING DOGS AND KIDS’ ಅಲ್ಲವೇ? ವಿದ್ಯಾರ್ಥಿ ಮೂಕನಾದ. ಚಿಹ್ನೆ ಬಹಳ ಸಣ್ಣದಿರಬಹುದು. ಆದರೆ ಅದರ ಪ್ರಭಾವ ಅಪ್ರತಿಮ ಎಂಬ ಮನವರಿಕೆ ಮಾಡಿದರು.

ಅಲ್ಪವಿರಾಮ ಒಬ್ಬ ಚಾಲಕನನ್ನು ಲಕ್ಷಾಧೀಶ್ವರನನ್ನಾಗಿ ಮಾಡಿದ ಘಟನೆ ಅಮೇರಿಕದ ಕೋರ್ಟ್ಲೇಂಡ್‌ನ ಓಕ್‌ಹಹರ್ಸ್ಟ್ಸ್ (OAK HURST) ಎಂಬ ಡೈರಿ ಕಂಪೆನಿಗೆ ಸಂಬಂಧಿಸಿದ್ದು. ಅಲ್ಲಿಯ ಮೂವರು ಚಾಲಕರಿಗೆ ಕಾರ್ಖಾನೆಯ ಕರಾರು ಪತ್ರದಲ್ಲಿದ್ದ ಒಂದು ಅಲ್ಪವಿರಾಮದ ಅನುಪಸ್ಥಿತಿಯಿಂದಾಗಿ, ನ್ಯಾಯಾಲಯ ಚಾಲಕರಿಗೆ 50 ಲಕ್ಷ ಪರಿಹಾರ ಘೋಷಿಸಿದರು. ಮಾಲೀಕರು ತಕ್ಷಣ ಎಚ್ಚೆತ್ತು ಮುಂದಿನ ನಷ್ಟಗಳನ್ನು ತಡೆಯಲು ಕರಾರಿನಲ್ಲಿ ಒಂದು ಸರಿಯಾದ ಜಾಗದಲ್ಲಿ ಅಲ್ಪವಿರಾಮ ಅಳವಡಿಸಿದುದು ಇತಿಹಾಸ.

ಇಷ್ಟೆಲ್ಲಾ ವ್ಯಾಖ್ಯಾನಗಳ ನಂತರ ನಾವು ಕಲಿಯಬೇಕಾದ ಪಾಠ ಅಥವಾ ಸಂದೇಶ ಏನು ಎಂಬುದು ಈ ಜಗತ್ತಿನಲ್ಲಿ ಯಾವುದೂ ನಿಕೃಷ್ಟವಲ್ಲ. ಎಲ್ಲದರಲ್ಲೂ ಒಂದು ಉಪಯೋಗ ಇದೆ. ಅದು ಅಕ್ಷರವಾಗಿರಲಿ, ವಸ್ತುವಾಗಿರಲಿ, ಕಾಗುಣಿತವಾಗಿರಲಿ, ಅಂಕೆಗಳಾಗಿರಲಿ, ಗಿಡಮರಗಳಾಗಲಿ, ಪ್ರಾಣಿಪಕ್ಷಿಗಳಾಗಲೀ ಎಂಬುದು ಸ್ಪಷ್ಟ. ಎಲ್ಲದರಲ್ಲೂ ಒಂದು ಸೂಕ್ಷ್ಮ ಇದೆ ಎಂಬುದು ವೇದ್ಯ. ಆದ್ದರಿಂದ ಇನ್ನು ಮುಂದಾದರೂ ಎಲ್ಲರೂ ಈ 14 ಪ್ರಸಿದ್ಧ ಅನಾಮಿಕ ಚಿಹ್ನೆಗಳಿಗೆ ಸಾಕಷ್ಟು ಪ್ರಾಶಸ್ತ್ಯ ಕೊಟ್ಟು ಗೌರವಿಸಿ ಈ ಲೇಖನಕ್ಕೆ ಪೂರ್ಣ ವಿರಾಮ ಹಾಕೋಣವೇ?

ಕೆ.ರಮೇಶ್, ಮೈಸೂರು

10 Comments on “ಅಲ್ಪವಿರಾಮದ ಸುತ್ತ

  1. ಅಲ್ಪ ವಿರಾಮದ ಸುತ್ತ ಲೇಖನ ಓದಿ ನಾನು ಪೂರ್ಣ ವಿರಾಮ ಹಾಕುತಿದ್ದೇನೆ. ವಿಷಯ ಸಂಗ್ರಹ ನಿರೂಪಣೆ ಅಚ್ಚು ಕಟ್ಟಾಗಿ ಬಂದಿದೆ..ಚಿತ್ರ ವೂ ಪೂರಕವಾಗಿದೆ.

  2. ಚಿನ್ಹೆಗಳ ಬಗೆಗಿನ ನಿಮ್ಮ ಬರಹ ತುಂಬಾ ಚೆನ್ನಾಗಿದೆ ಸರ್. ಅಭಿನಂದನೆಗಳು.

  3. ಅಲ್ಪವಿರಾಮದ ಸುತ್ತ ಸುತ್ತಾಡಿ, ಇತರ ಚಿಹ್ನೆಗಳ ಮಹತ್ವವನ್ನು ಸಾರಿ, ಪೂರ್ಣವಿರಾಮದೊಂದಿಗೆ ವಿರಮಿಸಿದ ಲೇಖನ ಪರಿಪೂರ್ಣವಾಗಿದೆ ಸರ್…ಧನ್ಯವಾದಗಳು.

  4. ಕೌತುಕಮಯ ಉದಾಹರಣೆಗಳ ಸಹಿತ ಅಲ್ಪವಿರಾಮದ ಮಹತ್ವವನ್ನು ವಿವರಿಸುವ ಸುಂದರ ಲೇಖನ.

Leave a Reply to ಕೆ.ರಮೇಶ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *