ಪೌರಾಣಿಕ ಕತೆ

ಸದ್ಗುಣ ಸಂಪನ್ನ ವಿಭೀಷಣ

Share Button


ಒಬ್ಬ ತಾಯಿಗೆ ನಾಲ್ಕು ಮಂದಿ ಮಕ್ಕಳಿದ್ದರೆ ಅವರೆಲ್ಲ ಒಂದೇ ತೆರನಾಗಿರಬೇಕೆಂದೇನೂ ಇಲ್ಲ. ವಿವಿಧ ರೂಪ ಮಾತ್ರವಲ್ಲ, ವಿವಿಧ ಗುಣದವರೂ ಆಗಿರುತ್ತಾರೆ. ಒಬ್ಬ ಸಾಧು ಸ್ವಭಾವದವನಾದರೆ ಇನ್ನೊಬ್ಬ ಮುಂಗೋಪಿ, ಮತ್ತೊಬ್ಬ ವಾಚಾಳಿ, ಮಗದೊಬ್ಬ ದುರ್ಗುಣಿ, ಹೀಗೆ ನಾನಾವಿದ, ಕೆಲವೊಮ್ಮೆ ಮಿಕ್ಕವರೆಲ್ಲ ಕೆಟ್ಟ ಸ್ವಭಾವದಿಂದ ಕೂಡಿದ್ದು ಅವರಲ್ಲೊಬ್ಬ ಸದ್ಗುಣಿಯಾಗಿರಬಹುದು, ಕೆಟ್ಟ ಸಮುದಾಯದಲ್ಲೂ ಸನ್ಮಾರ್ಗಿಯಾಗಿದ್ದವನೊಬ್ಬನಿದ್ದರೆ ಆತನನ್ನು ಆಯ್ದು ತೆಗೆಯಬೇಕು, ದುಷ್ಟರಿಗೆ ಬುದ್ಧಿ ಹೇಳಬೇಕು. ಪರಿವರ್ತನೆಯಾಗದಿದ್ದಲ್ಲಿ ಶಿಕ್ಷಿಸಬೇಕು ಎಂಬುದೇ ವಾಲ್ಮೀಕಿ ರಾಮಾಯಣದ ಮಾತ್ರವಲ್ಲ, ಮಹಾಭಾರತ ಮೊದಲಾದ ಪುರಾಣಗಳ ಮುಖ್ಯ ಸಂದೇಶಗಳಲ್ಲಿ ಒಂದಂಶ.

ಇಂತಹ ಪಾತ್ರಗಳ ಬಗ್ಗೆ ಚಿಂತನೆ ಮಾಡಿದಾಗ ವಿಭೀಷಣ ನಮ್ಮ ಮುಂದೆ ನಿಲ್ಲುತ್ತಾನೆ. ರಾಮಾಯಣದಲ್ಲಿ ಬರುವ ಈ ವಿಭೀಷಣನನ್ನು ಎಲ್ಲಿ ಹೇಗೆ ಕವಿ ಚಿತ್ರಿಸಿದ್ದಾನೆ ನೋಡೋಣ, ಬ್ರಹ್ಮನ ಮಾನಸಪುತ್ರರಾದ ‘ಪುಲಸ್ತ್ಯ’ ಅಥವಾ ವಿಶ್ವವಸು ಮುನಿಗೆ ನಾಲ್ವರು ಮಕ್ಕಳು, ರಾವಣ, ಕುಂಭಕರ್ಣ, ವಿಭೀಷಣ ಹಾಗೂ ಶೂರ್ಪನಖಿ . ವಿಶ್ವವಸುವಿನ ಪತ್ನಿಯ ಹೆಸರು ಕೈಕಸೆ, ಈಕೆಗೆ ‘ಪುಷ್ಪೋತ್ಕಟೆ’ ಎಂಬ ಹೆಸರೂ ಇತ್ತು, ರಾಕ್ಷಸವಂಶದ ‘ಸುಮಾಲಿ’ ಎಂಬವನ ಪತ್ನಿ ಕೈಕಸೆ, ಆದರೂ ಆಕೆಗೆ ಒಂದಿಷ್ಟು ದೈವಭಕ್ತಿ, ನಿಷ್ಠೆ ಇದ್ದಂತೆ ತೋರುತ್ತದೆ.

ಕೈಕಸೆಯು ಪುತ್ರಾರ್ಥಿಯಾಗಿ ಸಂಧ್ಯಾಕಾಲದಲ್ಲಿ ಪತಿ ಮಿಲನ ಹೊಂದಿದುದರಿಂದ ರಾವಣ, ಕುಂಭಕರ್ಣ, ಶೂರ್ಪಣಖಿಯರುಗಳು ರಾಕ್ಷಸಗುಣದವರಾಗಿ ಜನಿಸಿದರು ಎಂದು ಹೇಳಲಾಗುತ್ತದೆ. ಇವರ ಕ್ರೂರಬುದ್ದಿಗೆ ಖಿನ್ನಳಾದ ಕೈಕಸೆಯು ಬ್ರಹ್ಮನನ್ನು ಪ್ರಾರ್ಥಿಸಿ ತನಗೆ ಧರ್ಮಾತೃನೂ ತತ್ವಜ್ಞಾನಿಯೂ ಆದ ಪುತ್ರನು ಬೇಕೆಂದು ಕೋರಿಕೊಂಡಳು. ಇದರಿಂದ ಮುಂದೆ ಸದ್ಗುಣಸಂಪನ್ನನಾದ ವಿಭೀಷಣನು ಜನಿಸಿದನೆಂದು ತಿಳಿದುಬರುತ್ತದೆ. ಮಕ್ಕಳಾರ್ಥಿ ದಂಪತಿಗಳಿಗೆ ಪರೋಕ್ಷವಾಗಿ ಒಂದು ನೀತಿಯುಕ್ತ ಕಿವಿಮಾತನ್ನು ಇಲ್ಲಿ ವಾಲ್ಮೀಕಿ ಮಹರ್ಷಿ ಹೇಳುತ್ತಾನೆ. ಏನೆಂದರೆ…. ಸಂಧ್ಯಾಕಾಲವಂತೂ ದೇವರ ಪೂಜೆ, ಭಜನೆಗೆ ಮೀಸಲಿಟ್ಟ ಕಾಲ. ಅದು ಬಿಟ್ಟು ದಾಂಪತ್ಯ ಸಂಬಂಧಿ ಕೃತ್ಯಗಳು ನಡೇದರೆ ಅವರಿಂದ ಕಟ್ಟ ಪರಿಣಾಮವನ್ನೆದುರಿಸಬೇಕಾಗುತ್ತದೆ ಎಂಬುದು ಎಚ್ಚರಿಕೆಯ ಮಾತು. ಹಾಗೆಯೇ, ಯೋಗ್ಯ ಸಮಯದಲ್ಲಿ ಸತ್ಸಂತಾನವನ್ನು ಬಯಸಿ ದಾಂಪತ್ಯ ನಡೆಸಿದಲ್ಲಿ ಅದರಿಂದ ಸತ್ಪ್ರಜೆಗಳು ಜನಿಸಬಹುದು ಎಂಬುದನ್ನೂ ಈ ಕತೆ ನಿರೂಪಿಸುತ್ತದೆ.

ವಿಭೀಷಣ ತಾಯಿ ಬ್ರಹ್ಮನನ್ನು ಪ್ರಾರ್ಥಿಸಿದ ಪರಿಣಾಮವಾಗಿ ಒಲಿದು ಬಂದ ಗುಣವಂತ ಮಗನಿವನು. ತಾನೂ ಗೋಕರ್ಣದಲ್ಲಿ ಬ್ರಹ್ಮನ ಕುರಿತು ತಪಸ್ಸು ಮಾಡುತ್ತಾನೆ. ತನಗೆ ಎಂತಹ ಕಷ್ಟಕಾಲದಲ್ಲಿಯೂ ಧರ್ಮಮಾರ್ಗದಲ್ಲೇ ಬುದ್ಧಿಯೋಡುವಂತೆಯೂ ಮಂತ್ರಾಭ್ಯಾಸವಿಲ್ಲದೆ ಬ್ರಹ್ಮಾಸ್ತ್ರವು ಸ್ವಾಧೀನವಾಗುವಂತೆಯೂ ವರ ಬೇಡಿದನಂತೆ. ವಿಭೀಷಣದ ಸದ್ಗುಣಗಳಿಗೆ ಮೆಚ್ಚಿದ ಬ್ರಹ್ಮನು ಈತನು ಅಪೇಕ್ಷಿಸಿದ ವರವನ್ನಿತ್ತುದಲ್ಲದೆ ‘ಚಿರಂಜೀವಿಯಾಗು’ ಎಂಬ ವರವನ್ನೂ ಕರುಣಿಸಿವನಂತೆ. ಸಪ್ತ ಚಿರಂಜೀವಿಗಳಲ್ಲಿ ವಿಭೀಷಣ ಒಬ್ಬ.

ಹನುಮಂತನಿಂದ ಲಂಕಾದಹನವಾದ ಮೇಲೆ ಮಂತ್ರಾಲೋಚನಾ ಸಭೆ ಕರೆದ ರಾವಣ, ಆಂಜನೇಯನನ್ನು ವಧಿಸಲು ಆಜ್ಞೆ ಮಾಡಿದಾಗ ದೂತವಧೆಯು ಸಲ್ಲದು ಎಂದು ಹೇಳಿ ದುಷ್ಕಾರ್ಯವನ್ನು ವಿಭೀಷಣ ತಡೆಯುತ್ತಾನೆ. ‘ಅಣ್ಣ… ಪರಸತಿಗೆ ಆಸೆಪಟ್ಟು ಕಳ್ಳತನದಿಂದ ಸೀತೆಯನ್ನು ಹೊತ್ತು ತಂದಿರುವೆ. ಈಗ ಲಂಕಾದಹನವಾಗಿದೆ. ಇನ್ನು ಮುಂದೆ ವಾನರಸೇನೆ ಲಂಕೆಯನ್ನು ಮುತ್ತುವುದಕ್ಕೆ ಮೊದಲೇ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸಿಬಿಡೋಣ, ನನ್ನ ಮಾತು ಕೇಳು. ಇದರಿಂದ ಎರಡೂ ಕಡೆ ಶಾಂತಿ ಇರುತ್ತದೆ.’ ಎಂದು ಎಷ್ಟೇ ನೀತಿ ಬೋಧಿಸಿದರೂ ತಮ್ಮನ ಹಿತವಚನ ರಾವಣನಿಗೆ ರುಚಿಸುವುದಿಲ್ಲ. ಹಾಗೆಯೇ ವಿಭೀಷಣನ ಸಲಹೆ ಯಾವ ರಾಕ್ಷಸವೀರರಿಗೂ ಸರಿ ಕಾಣಲಿಲ್ಲ. ಸಭೆಯಲ್ಲಿದ್ದ ಎಲ್ಲರೂ ವಿಭೀಷಣನನ್ನು ಜರೆದು ಮಾತನಾಡಿದರಲ್ಲದೆ ರಾವಣನ ಮಗನಾದ ಇಂದ್ರಜಿತು, ಚಿಕ್ಕಪ್ಪನನ್ನು ಹೇಡಿಯೆಂದು ತಿರಸ್ಕರಿಸಲು ಇಂದ್ರಜಿತುವಿಗೂ ಬುದ್ದಿ ಹೇಳಿದಾಗ ರಾವಣ ಸಿಟ್ಟಿನಿಂದ ಕೆರಳಿ ‘ನಿನ್ನ ಮತ್ಸರ ಬುದ್ಧಿಯನ್ನು ತೋರಿಸಬೇಡ, ಇಲ್ಲಿಂದ ತೊಲಗಾಚೆ. ಇಲ್ಲದಿದ್ದರೆ ಈಗಲೇ ನಿನ್ನನ್ನು ಕೊಲ್ಲುವೆ’ ಎನ್ನುತ್ತಾನೆ, ತೀರಾ ವಿಷಾದದಿಂದ ವಿಭೀಷಣ ಶ್ರೀರಾಮನ ಪಾಳಯಕ್ಕೆ ಬಂದು ಅವನಿಗೆ ಶರಣಾಗತನಾಗುತ್ತಾನೆ. ಶರಣು ಬಂದ ವಿಭೀಷಣನಿಗೆ ಶ್ರೀರಾಮ ಅಭಯ ನೀಡುತ್ತಾನೆ,

ಕಾಳಗದಲ್ಲಿ ಇಂದ್ರಜಿತು ಮಾಯಾಸೀತೆಯನ್ನು ಸಂಹರಿಸಲು ಅದನ್ನು ನೋಡಿ ಪ್ರಲಾಪಿಸುತ್ತಿದ್ದ ಶ್ರೀರಾಮನನ್ನು ಸಮಾಧಾನಪಡಿಸುತ್ತಾನೆ. ಇಂದ್ರಜಿತುವನ್ನು ವಧಿಸಬೇಕಾದರೆ ಹನ್ನೆರಡು ವರ್ಷ ಬ್ರಹ್ಮಚರ್ಯ ಪಾಲಿಸಿದ ವೀರನಿಗೆ ಮಾತ್ರ ಸಾಧ್ಯವೆಂಬ ಮರಣ ರಹಸ್ಯವನ್ನು ವಿಭೀಷಣ ಲಕ್ಷ್ಮಣನಿಗೆ ಹೇಳಿ ತನ್ಮೂಲಕ ಲಕ್ಷ್ಮಣನಿಂದ ಇಂದ್ರಜಿತುವಿನ ಸಂಹಾರವಾಗುತ್ತದೆ.

ರಾವಣನ ಸಂಹಾರ ನಂತರ ಅಣ್ಣನ ಮರಣಕ್ಕಾಗಿ ದುಃಖಿಸುತ್ತಿದ್ದ ವಿಭೀಷಣ. ಆತನನ್ನು ಶ್ರೀರಾಮ ಸಮಾಧಾನಪಡಿಸಿ ಲಂಕೆಯ ಅರಸನನ್ನಾಗಿ ಪಟ್ಟಾಭಿಷೇಕ ಮಾಡುತ್ತಾನೆ. ವಿಭೀಷಣನು ರಾವಣನ ಪುಷ್ಪಕ ವಿಮಾನವನ್ನು ಶ್ರೀರಾಮನಿಗೆ ತಂದೊಪ್ಪಿಸುತ್ತಾನೆ. ಶ್ರೀರಾಮನು ಅಯೋಧ್ಯೆಗೆ ತಂದೊಪ್ಪಿಸುತ್ತಾನೆ. ಶ್ರೀರಾಮನು ಅಯೋಧ್ಯೆಗೆ ಹಿಂದಿರುಗುವಾಗ, ಲಂಕೆಗೆ ಮಾಯಾಸೇತುವೆಯ ಮುಂದೆಯೂ ಇದ್ದರೆ ತನಗೆ ಶತ್ರುಬಾಧೆ ತಪ್ಪಿದಲ್ಲವೆನ್ನಲು ಶ್ರೀರಾಮನು ಸೇತುವೆಯನ್ನು ಅಲ್ಲಲ್ಲಿ ಕಡಿಯುತ್ತಾನೆ. ಈ ಪ್ರದೇಶವನ್ನು ‘ಧನುಷೋಟಿ ತೀರ್ಥ’ವೆನ್ನುತ್ತಾರೆ. ಮುಂದೆ ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವಕ್ಕೆ ವಿಭೀಷಣನು ತೆರಳಿ ತಾನೂ ಭಾಗವಹಿಸಿದ್ದನಂತೆ. ರಾವಣ ಎಷ್ಟೇ ನೀಚನಾದರೂ ಅಣ್ಣ ಹೀಗೆ ಒಂದು ಹೆಣ್ಣಿನ ಮೇಲಿನ ವ್ಯಾಮೋಹದಿಂದ ರಾಜ್ಯ, ಕೋಶ ಬಂಧುಮಿತ್ರರನ್ನು ಕಳೆದುಕೊಳ್ಳಬೇಕಾಯಿತಲ್ಲ ಎಂದು ರೋಧಿಸುವುದಲ್ಲದೆ ಆತನ ಅಂತ್ಯಕ್ರಿಯೆಗಳನ್ನು ವಿಧಿವತ್ತಾಗಿ ಮಾಡುವುದು ವಿಭೀಷಣನ ಸದ್ಗುಣಗಳನ್ನು ಎತ್ತಿ ತೋರಿಸುತ್ತದೆ.

ವಿಜಯಾಸುಬ್ರಹ್ಮಣ್ಯ, ಕುಂಬಳೆ

5 Comments on “ಸದ್ಗುಣ ಸಂಪನ್ನ ವಿಭೀಷಣ

  1. ಧನ್ಯವಾದಗಳು ಶ್ರೀಮತಿ ಹೇಮಾ ಸುರಹೊನ್ನೆ ಹಾಗೂ ಓದುಗ ಬಳಗಕ್ಕೆ.

  2. ವಿಶಿಷ್ಟವಾದದ್ದು ರಾಮಾಯಣದಲ್ಲಿ ವಿಭೀಶಣನ ಪಾತ್ರ. Nice

  3. ರಾಮಾಯಣದ ಮುಖ್ಯ ಪಾತ್ರಗಳಲ್ಲಿ ಒಂದಾದ ವಿಭೀಷಣನ ಕುರಿತು ಮೂಡಿ ಬಂದ ಕಥಾ ಸನ್ನಿವೇಶಗಳು ಮನುಜರಿಗೆ ಉತ್ತಮ ಸಂದೇಶವನ್ನು ಹೊತ್ತು ತಂದಿವೆ. ಅವುಗಳನ್ನು ಯಥಾವತ್ತಾಗಿ ನಿರೂಪಿಸಿದ ಪೌರಾಣಿಕ ಲೇಖನವು ಚೆನ್ನಾಗಿದೆ.

  4. ವಿಭೀಷಣನ ಸದ್ಗುಣಗಳ ಜೊತೆಯಲ್ಲಿ ಪೌರಾಣಿಕ ಸೂಕ್ಮಗಳನ್ನೂ ತೆರೆದಿಟ್ಟ ಸುಂದರ ಲೇಖನ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *