ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದ ಒಬ್ಬ ಹುಡುಗನಿಗೆ ಅವರ ತಂದೆ ತಾಯಿಯ ಕೊರತೆ ಮಗನನ್ನು ಕಾಡಬಾರದೆಂದು ಇನ್ನೊಂದು ಮದುವೆ ಮಾಡಿಕೊಂಡು ಅವನಿಗೆ ಒಬ್ಬಳು ಚಿಕ್ಕಮ್ಮನನ್ನು ಕರೆತಂದ. ಸ್ವಲ್ಪ ಕಾಲ ಹೀಗೇ ಕಳೆಯಿತು. ಮಗ ದಿನೇದಿನೇ ಏನೋ ಕಳೆದುಕೊಂಡವನಂತೆ ಮಂಕಾಗುತ್ತಿದ್ದ. ಒಂದುದಿನ ಮಗನನ್ನು ಪ್ರತ್ಯೇಕವಾಗಿ ಕೂರಿಸಿಕೊಂಡು “ಮಗೂ, ನಿನ್ನ ಚಿಕ್ಕಮ್ಮ ನಿನ್ನನ್ನು ಹೇಗೆ ಕಾಣುತ್ತಾಳೆ. ಅವಳಲ್ಲಿ ಯಾವ ಗುಣವನ್ನು ನೀನು ಗುರ್ತಿಸಿದೆ?” ಎಂದು ಕೇಳಿದನು.
ಅದಕ್ಕೆ ಸ್ವಲ್ಪ ಹೊತ್ತು ಯೋಚಿಸಿ ಪುಟ್ಟ ಬಾಲಕ ಉತ್ತರಿಸಿದ. “ ಅಪ್ಪಾ ನನ್ನಮ್ಮ ಬಹಳ ಸುಳ್ಳು ಹೇಳುತ್ತಿದ್ದಳು. ಆದರೆ ಚಿಕ್ಕಮ್ಮ ಸುಳ್ಳು ಹೇಳುವುದೇ ಇಲ್ಲ” ಎಂದ. ಅದನ್ನು ಕೇಳಿ ತಂದೆಗೆ ಏನೆಂಬುದು ಸರಿಯಾಗಿ ಅರ್ಥವಾಗಲಿಲ್ಲ. “ಮಗೂ ಅದು ಹೇಗೆ ನಿನಗೆ ಅನುಭವಕ್ಕೆ ಬಂತು?” ಎಂದು ಮತ್ತೆ ಪ್ರಶ್ನಿಸಿದ.
ಮಗ ಹೇಳಿದ “ನಾನು ಏನಾದರೂ ತಪ್ಪು ಮಾಡಿದರೆ ಅಥವಾ ಹೇಳಿದ ಮಾತನ್ನು ಕೇಳದಿದ್ದರೆ ನನ್ನಮ್ಮ ನೋಡು ಇವತ್ತು ನಾನು ನಿನಗೆ ಊಟವನ್ನು ಕೊಡುವುದಿಲ್ಲ ಎಂದು ಹೇಳುತ್ತಿದ್ದಳು. ನನಗೆ ದುಃಖವಾಗುತ್ತಿತ್ತು. ಆದರೆ ಅಮ್ಮನ ಕೋಪ ಸ್ವಲ್ಪ ಸಮಯ ಮಾತ್ರ. ಆಮೇಲೆ ಅವಳೇ ನನ್ನನ್ನು ಕರೆದು ಮುದ್ದುಮಾಡಿ ತೊಡೆಯಮೇಲೆ ಕೂಡಿಸಿಕೊಂಡು ಬಲವಂತವಾಗಿ ಹೊಟ್ಟೆ ತುಂಬ ಊಟ, ತಿಂಡಿ ಕೊಡುತ್ತಿದ್ದಳು. ಆದರೆ ಚಿಕ್ಕಮ್ಮ ಹಾಗಲ್ಲ. ಅವಳು ಊಟ ಕೊಡುವುದಿಲ್ಲ ಎಂದರೆ ನಿಜವಾಗಿಯೂ ಊಟವನ್ನು ಕೊಡುವುದೇ ಇಲ್ಲ. ನನಗೆ ಎರಡು ದಿನಗಳಿಂದ ತಿನ್ನಲು ಏನೂ ಕೊಟ್ಟಿಲ್ಲ. ತುಂಬ ಹೊಟ್ಟೆ ಹಸಿದಿದೆ. ಆದರೆ ಚಿಕ್ಕಮ್ಮ ತನ್ನ ಮಾತಿಗೆ ಬದ್ಧಳಾಗಿದ್ದಾಳೆ. ಇದೇ ಅಮ್ಮನಿಗೂ ಚಿಕ್ಕಮ್ಮನಿಗೂ ವ್ಯತ್ಯಾಸ” ಎಂದುತ್ತರಿಸಿದ. ಇದನ್ನು ಕೇಳಿದ ತಂದೆಯ ಕಣ್ಣಿನಲ್ಲಿ ನೀರು ಬಂತು. ತಾನೆಂತಹ ತಪ್ಪು ಮಾಡಿದೆನೆಂದು ಪಶ್ಚಾತ್ತಾಪ ಪಟ್ಟನು.
ತಾಯಿಗೆ ಸಾಟಿ ತಾಯಿ ಮಾತ್ರವೇ. ಭೂಮಿಯಮೇಲೆ ಕಣ್ಣಿಗೆ ಕಾಣುವ ಸ್ನೇಹ, ವಾತ್ಸಲ್ಯ, ಮಮತೆಯ ಪ್ರತಿಮೂರ್ತಿಯೇ ತಾಯಿ. ಅದಕ್ಕಾಗಿಯೇ ತಾಯಿಯೇ ದೇವರು ಎನ್ನುತ್ತಾರೆ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ಹೃದಯ ಸ್ಪರ್ಶಿ ಕಥೆ
ಕಣ್ಣೀರು ಹರಿದು ಬಂತು
ಮನ ಮಿಡಿಯುವ ಕಥೆ
ಧನ್ಯವಾದಗಳು ಗಾಯತ್ರಿ ಮೇಡಂ
ಧನ್ಯವಾದಗಳು ನಯನಮೇಡಂ
ಮನವನ್ನು ಆರ್ದ್ರಗೊಳಿಸುವ ಕಥಾ ನಿರೂಪಣೆಯೊಂದಿಗೆ ಮೂಡಿಬಂದ ಸೂಕ್ತ ಚಿತ್ರವು ಎಂದಿನಂತೆ ಚಂದ, ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಮಾತೆಯ ಮಮತೆಯನ್ನು ಮಗುವಿನ ಬಾಯಲ್ಲಿ ಅತ್ಯಂತ ಪ್ರಭಾಶಾಲಿಯಾಗಿ ಬಿಂಬಿಸಿದ ಚಂದದ ಕಥೆ.