ಜಾನಪದ ಲೋಕದಲ್ಲಿ ವಿಹಾರ
ಮೈಸೂರು – ಬೆಂಗಳೂರಿನ ಹೆದ್ದಾರಿಯಲ್ಲಿ 2 ಗಂಟೆ ಪ್ರಯಾಣಿಸಿದಾಗ ‘ರಾಮನಗರ’ ಸಿಗುತ್ತದೆ. ಇಲ್ಲಿ ಸುಮಾರು 15 ಎಕರೆಯಷ್ಟು ವಿಸ್ತಾರವಾದ ಜಾಗದಲ್ಲಿ ನಿರ್ಮಿಸಲಾದ ‘ಜಾನಪದ ಲೋಕ’ ಬಹಳ ಸೊಗಸಾಗಿದೆ. ಇದು ಶ್ರೀ. ಎಚ್. ಎಲ್. ನಾಗೇಗೌಡರ ಕನಸಿನ ಕೂಸು.
ಸುಂದರವಾದ ಕೊಂಬು-ಹರಿಗೆಗಳನ್ನೊಳಗೊಂಡ ಹೆಬ್ಬಾಗಿಲು ನಮ್ಮನ್ನು ಸಾಗತಿಸುತ್ತದೆ. ನಾವು ಅಲ್ಲಿಗೆ ಭೇಟಿ ಕೊಟ್ಟ ಸಂದ ರ್ಭದಲ್ಲಿ ಅಲ್ಲಿ ಕಲಾತಂಡವೊಂದು ‘ ಕಂಸಾಳೆ’ ಕಾರ್ಯಕ್ರಮ ನೀಡುತ್ತಿತ್ತು. ಇನ್ನು ಮುಂದೆ ಹೋದಾಗ ವಿವಿಧ ಜಾನಪದ ವಸ್ತು ಸಂಗ್ರಹಾಲಯಗಳು ಎದುರಾದವು. ಹಿಂದೆ ಬಳಸಲಾಗುತ್ತಿದ್ದ ಅಳತೆಯ ಮಾಪನಗಳು, ಅಡಿಗೆಯ ಪರಿಕರಗಳು, ಕೃಷಿಗೆ ಬಳಸುವ ಪರಿಕರಗಳು, ಮರದ ಮೊರ, ತೊಟ್ಟಿಲು, ಬೀಸಣಿಗೆ, ಬುಟ್ಟಿ..ಇತ್ಯಾದಿ ಜನಪದ ಜೀವನ ಶೈಲಿಯನ್ನು ಬಿಂಬಿಸುವ ವಸ್ತುಗಳನ್ನು ಓರಣವಾಗಿ ಜೋಡಿಸಲಾಗಿತ್ತು.
ಕಂಬಗಳನ್ನೊಳಗೊಂಡ ಮನೆಯಲ್ಲಿ ಭತ್ತ ಕುಟ್ಟುವ, ರಾಗಿ ಬೀಸುವ, ಬಾವಿಯಿಂದ ನೀರು ಸೇದುವ, ಗಾಣದಲ್ಲಿ ಎಣ್ಣೆ ತೆಗೆಯುವ ..ಜನರ ಮೇಣದ ಪ್ರತಿಮೆಗಳು ಅಂದಿನ ಜನಜೀವನ ಹೀಗಿತ್ತು, ಎಂದು ತೋರಿಸುತ್ತವೆ.
‘ಲೋಕಮಹಲ್’; ಎಂಬ ಭವ್ಯ ಕಟ್ಟಡದಲ್ಲಿ ಅದೆಷ್ಟೊ ಬಗೆಯ ಜನಪದ ಕಲೆಗಳ ಅನಾವರಣವಿದೆ. ತೊಗಲುಬೊಂಬೆ, ಬೊಂಬೆಯಾಟ, ಯಕ್ಷಗಾನ ಇತ್ಯಾದಿಗಳ ಬಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ.
ನಮ್ಮೆದುರೇ ಮರದ ಸಣ್ಣ ಪುಟ್ಟ ಮರದ ಬೊಂಬೆಗಳನ್ನು ತಯಾರಿಸಿ ಕೊಡುವವರು ಅಲ್ಲಿ ಇದ್ದರೆ. ಹಾಗೆಯೇ, ಮಣ್ಣಿನಿಂದ ಮಡಿಕೆ-ಕುಡಿಕೆ ಮಾಡುವ ಪ್ರಾತ್ಯಕ್ಷಿಕೆಯೂ ಇದೆ. ಮಕ್ಕಳಿಗೆ ಮನರಂಜನೆಗೆಂದು ದೋಣಿವಿಹಾರಕ್ಕೂ ಆಸ್ಪದವಿದೆ. ಒಟ್ಟಾರೆಯಾಗಿ, ಜನಪದ ಬದುಕಿನ ಬಗ್ಗೆ ಆಸಕ್ತಿಯಿರುವವರಿಗೆ ಅರಿಯಲು ಬಹಳಷ್ಟು ವಿಚಾರಗಳಿವೆ. ಹೆಚ್ಚಿನ ವಿವರಗಳು ಗೂಗಲ್ ನಲ್ಲಿ ಲಭ್ಯ.
– ಹೇಮಮಾಲಾ.ಬಿ
ನೀವು ಒಳ್ಳೆಯ ಕಲಾಭಿಮಾನಿಗಳು .
ಹೌದು ! ಅತ್ಯಂತ ವಿಶಿಷ್ಟ ವಾದ ಜಾನಪದ ಲೋಕ !
UNIQUE