ವಿಘ್ನೇಶ್ವರನಿಗೆ ಹಂಸಧ್ವನಿಯ ಆರತಿ….

Share Button
Photo-Shruthi

ಶ್ರುತಿ ಶರ್ಮಾ, ಮೈಸೂರು.

ಕಲಾವಿದರು ಕಛೇರಿಗೆ ಚಾಲನೆ ಕೊಟ್ಟು ಸಣ್ಣ ಆಲಾಪನೆಯೊಂದಿಗೆ ಗಾಯನವನ್ನು ಶುರುಹಚ್ಚಿದಾಗಲೇ ನೆರೆದ ಸಂಗೀತಾಸ್ವಾದಕರು ಕೃತಿ ಯಾವುದಿರಬಹುದೆಂದು ಲೆಕ್ಕ ಹಾಕುತ್ತಾ ಆಲಾಪನೆಯ ಗತಿಯನ್ನು ಅನುಸರಿಸುತ್ತಾರೆ. ಕರ್ಣಾಟ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ಯಾವುದಾದರೂ ವರ್ಣ ಅಥವಾ ವಿಘ್ಹ್ನೇಶ್ವರನ ಸ್ತುತಿಸುವ ಕೀರ್ತನೆಯಿಂದ ಆರಂಭಿಸುವುದು ಕ್ರಮ. ಪ್ರಾರಂಭದಲ್ಲಿ ವಿಘ್ಹ್ನನಿವಾರಕನನ ಸ್ತುತಿಸಿ ಅನುಗ್ರಹೀತರಾಗುವ ನಂಬಿಕೆ ಒಂದು ಕಾರಣವಾಗಿದ್ದರೆ, ಕಛೇರಿಯ ಆರಂಭವನ್ನು ರಾಗತಾಳಗಳಿಂದ ಲಯಗೊಳಿಸುವುದು ಇನ್ನೊಂದು ಉದ್ದೇಶ. ವಿಘ್ನೇಶ್ವರನನ್ನು ಅರ್ಚಿಸುವ ನೂರಾರು ಕೃತಿಗಳಿವೆ, ಅದರಲ್ಲೂ ಹೆಚ್ಚಿನವು ‘ಹಂಸಧ್ವನಿ‘ ಹಾಗೂ ‘ನಾಟ‘ ರಾಗಗಳಲ್ಲಿದ್ದು ಶ್ರೋತೃಗಳನ್ನೂ, ಕಲಾವಿದರನ್ನೂ ಒಮ್ಮಂದೊಮ್ಮೆಗೇ ಚುರುಕುಗೊಳಿಸುವುದು ದಿಟ. ಆರಂಭಿಕ ಕೀರ್ತನೆಯಲ್ಲಿ ಭಕ್ತಿ, ಗಾಂಭೀರ್ಯದ ಕ್ಷಿಪ್ರಗತಿಯ ಸಂಚಾರವು ತುಂಬಿ ನೆಲೆಗೊಂಡಾಗ ಮುಂದಿನ ಪ್ರಸ್ತುತಿಗಳು ಉತ್ತಮ ಗತಿ ಪಡೆದುಕೊಳ್ಳುತ್ತವೆ.

music

ಗಣೇಶನಿಗೆ ಅರ್ಪಿಸುವ ಹಾಡುಗಳಲ್ಲಿ ಬಹುವಾಗಿ ಹಂಸಧ್ವನಿ  ರಾಗವು ಬಳಕೆಯಾಗಿರುವುದು ಗಮನಸೆಳೆಯುತ್ತದೆ.ಗಾಯಕರೂ ವಾಗ್ಗೇಯಕಾರರೂ ಆಗಿದ್ದ ರಾಮಸ್ವಾಮಿ ದೀಕ್ಷಿತರು ಹದಿನೆಂಟನೆಯ ಶತಮಾನದ ಆದಿಯಲ್ಲಿ ಈ ರಾಗವನ್ನು ಪ್ರಚುರಪಡಿಸದೇ ಇದ್ದಿದ್ದರೆ ಇಂದು ನಾವು ಸಂಗೀತದ ಒಂದು ಚೈತನ್ಯಪೂರ್ಣ ಉಡುಗೊರೆಯೊಂದನ್ನು ಅರಿಯುತ್ತಲೇ ಇರಲಿಲ್ಲವೇನೋ!  ಭಕ್ತಿ, ವೀರ ರಸ ಪ್ರಧಾನವಾಗಿರುವ ಈ ರಾಗದ ಕೀರ್ತನೆಗಳು ಮಧ್ಯಮಕಾಲದಲ್ಲಿ ಸೂಕ್ತವೆನಿಸುತ್ತಾ ಕಛೇರಿಗಳಿಗೆ ಕಳೆಗಟ್ಟುತ್ತವೆ. ರಾಗ ಹಂಸಧ್ವನಿಯೇ ಹಾಗೆ.. ಅಂಧಕಾರದ ಕೂಪದಿಂದ ಬೆಳಕಿನ ಎತ್ತರಕ್ಕೆ ಎಳೆದೊಯ್ಯ್ಯುವಂಥ ಧುಮ್ಮಿಕ್ಕುವ ಧನಾತ್ಮಕತೆಯ ಸೆಳೆತವಿರುವ ರಾಗ..! ಕೆಲವು ಬಾರಿ ದೀರ್ಘವಾದ ಪ್ರೌಢ ಪ್ರಸ್ತುತಿಯ ಬಳಿಕ ಸಾಮಾನ್ಯ ಕೇಳುಗರಲ್ಲಿ ಮತ್ತೆ ಕಛೇರಿ ಕೇಳುವ ಹುಮ್ಮಸ್ಸು ಹುಟ್ಟಿಸುವುದಕ್ಕಾಗಿ ಹಂಸಧ್ವನಿಯನ್ನು ಕಛೇರಿಯ ಮಧ್ಯಕ್ಕೆ ತೆಗೆದುಕೊಳ್ಳುವ ಪರಿಪಾಠವೂ ಇದೆ. ಇದು ಕಛೇರಿಗೆ ಲಯವನ್ನೊದಗಿಸುವ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ.

ಕೇಳಿದಾಗ ಗುರುತಿಸಲೂ ಅತ್ಯಂತ ಸುಲಭವಾದ ರಾಗವಿದು. ರಾಮಸ್ವಾಮಿ ದೀಕ್ಷಿತರ ಪುತ್ರರಾದ ಮುತ್ತುಸ್ವಾಮಿ ದೀಕ್ಷಿತರ ರಚನೆ “ವಾತಾಪಿ ಗಣಪತಿಂ ಭ್ಹಜೇ .. “, ಪುರಂದರದಾಸರ “ಗಜವದನಾ ಬೇಡುವೇ.. “, ವೀಣೆ ಕುಪ್ಪಯ್ಯರವರ “ವಿನಾಯಕಾ..“, ಕೋಟೀಶ್ವರ ಅಯ್ಯರ್ ರವರ “ವಾರಣಮುಖವಾ“, ಜಿ. ಎನ್ ಬಾಲಸುಬ್ರಹ್ಮಣ್ಯಂ ರವರ “ವರವಲ್ಲಭ ರಮಣಾ..“, ಮುತ್ತಯ್ಯ ಭಾಗವತರ “ಗಂಗಣಪತೇ ನಮೋ..“, ಪಾಪನಾಶಂ ಶಿವನ್ ರವರ “ಮೂಲಾಧಾರ ಮೂರ್ತೇ..“, ರಾಮಲಿಂಗಸ್ವಾಮಿಗಳ “ಕಲೈ ನಿರೈ ಗಣಪತಿ ಶರಣಂ“, ತ್ಯಾಗರಾಜರ “ರಘುನಾಯಕ.. ” ಮತ್ತು “ಶ್ರೀ ರಘುಕುಲ..“, ಹೀಗೆ ಹಲವಾರು ಕೀರ್ತನೆಗಳು ಸಂಗೀತಪ್ರಿಯರು ಎಂದೆಂದಿಗೂ ಇಷ್ಟಪಡುವಂತಹವು. ಪ್ರತಿ ಬಾರಿ ಕೇಳಿದಾಗಲೂ ಶಕ್ತಿದಾಯಕವೆನಿಸುವ ಈ ಕೀರ್ತನೆಗಳ ಶಕ್ತಿ ಅದರ ರಾಗದ ಪ್ರೌಢಿಮೆಯನ್ನು ಎತ್ತಿಹಿಡಿಯುತ್ತದೆ,

ಈ ರಾಗದ ಕೆಲವು ಸುಂದರ ಪ್ರಸ್ತುತಿಗಳನ್ನು ಇಲ್ಲಿ ಕೇಳಿ:

ಮೊದಲಿಗೆ ಕೆ.ಜೆ ಯೇಶುದಾಸರು ಹಾಡಿದ “ವಾತಾಪಿ ಗಣಪತಿಂ ಭ್ಹಜೇ .. ”

ಡಾ|| ಎಂ. ಬಾಲಮುರಳೀಕೃಷ್ಣರವರು ಭಾವಪೂರ್ಣವಾಗಿ ಪ್ರಸ್ತುತಿಗೈದ “ರಘುನಾಯಕಾ.. ” ದ ಕೊಂಡಿ ಇಲ್ಲಿದೆ.

ಗಜವದನಾ ಬೇಡುವೇ.. “ಯ ಸುಂದರ ಪ್ರಸ್ತುತಿ.. ಕೆ.ಜೆ ಯೇಶುದಾಸ ಅವರಿಂದ 🙂

ಕೀರ್ತನೆ : ಶ್ರೀ ರಘುಕುಲ.. ಹಾಡಿದವರು : ಶಂಕರನ್ ನಂಬೂತಿರಿ

ತೃಶ್ಯೂರ್ ಸಹೋದರರ ಕಂಠದಲ್ಲಿ  “ಗಂಗಣಪತೇ ನಮೋ..


ಅಭಿಷೇಕ್ ರಘುರಾಮ್ ಅವರು ಹಾಡಿದ “ವಾರಣಮುಖವಾ”..

ಸುಧಾ ರಘುನಾಥನ್ ಹಾಡಿದ “ವರವಲ್ಲಭ ರಮಣಾ..

ಕೀರ್ತನೆ : ವಿನಾಯಕಾ ನಿನು ವಿನಾ .. ಗಾಯಕಿ: ಶ್ರೀಮತಿ ಅಪರ್ಣಾ ಬಾಲಜಿ

ಕೀರ್ತನೆ : ಕಲೈ ನಿರೈ ಗಣಪತಿ ಶರಣಂ ಗಾಯಕರು : ರಬೀಂದ್ರ


===

ಕರ್ಣಾಟ ಸಂಗೀತದ ಹೆಮ್ಮೆಯ ರಾಗಗಳಲ್ಲೊಂದಾದ ಹಂಸಧ್ವನಿಯು ಹಿಂದುಸ್ಥಾನಿ ಸಂಗೀತದಲ್ಲೂ ಜನಪ್ರಿಯ. ಇದರ ಹಿರಿಮೆಯು ಕಲಾವಿದರಾದ ಉಸ್ತಾದ್ ಅಮಾನ್ ಅಲಿ ಖಾನ್ ಅವರಿಗೆ ಸಲ್ಲುತ್ತದೆ.

ರಾಗಲಕ್ಷಣದ ವಿಚಾರಕ್ಕೆ ಬಂದರೆ, ೨೯ನೇ ಮೇಳಕರ್ತ ಧೀರಶಂಕರಾಭರಣ ರಾಗದಲ್ಲಿ ಜನ್ಯವಾದ ರಾಗ ಹಂಸಧ್ವನಿ. ಷಾಡವ ರಾಗ ಶಂಕರಾಭರಣದಲ್ಲಿ ಆರು ಸ್ವರಗಳಿದ್ದರೆ, ಅದರಿಂದ ‘ಮ’ ಮತ್ತು ‘ಧ’ ಗಳನ್ನು ಬದಿಗಿಟ್ಟು ಉಳಿದ ಐದು ಸ್ವರಗಳನ್ನು ಮಾತ್ರ ಎತ್ತಿಕೊಂಡರೆ ಅದುವೇ ಹಂಸಧ್ವನಿ.

ಆರೋಹಣ : ಷಡ್ಜ(ಸ), ಚತುಶ್ರುತಿ ರಿಷಭ(ರಿ೨), ಅಂತರ ಗಾಂಧಾರ(ಗ೩), ಪಂಚಮ(ಪ), ಕಾಕಲಿ ನಿಷಾದ(ನಿ೩), ಷಡ್ಜ(ಸ) : ಸ ರಿ೨ ಗ೩ ಪ ನಿ೩ ಸ
ಅವರೋಹಣ : ಷಡ್ಜ(ಸ), ಕಾಕಲಿ ನಿಷಾದ(ನಿ೩), ಪಂಚಮ(ಪ), ಅಂತರ ಗಾಂಧಾರ(ಗ೩), ಚತುಶ್ರುತಿ ರಿಷಭ(ರಿ೨), ಷಡ್ಜ(ಸ) : ಸ ನಿ೩ ಪ ಗ೩ ರಿ೨ ಸ

 

300px-Hamsadhwani_scale.svg

ಇನ್ನು ಸಿನಿಮಾ ಸಂಗೀತ ಲೋಕದಲ್ಲಿ, ಕನ್ನಡ ಸಿನಿಮಾಗಳಲ್ಲಿನ ಹಂಸಧ್ವನಿ ರಾಗವುಪಯೋಗಿಸಿದ ಹಾಡಿಗೆ ಒಳ್ಳೆಯ ಉದಾಹರಣೆ ಎಂದರೆ, ‘ನಂಜುಂಡಿ ಕಲ್ಯಾಣ’ದ “ಇನ್ನು ಗ್ಯಾರಂಟಿ”. ಕೆಳಗಿನ ಕೊಂಡಿಯಲ್ಲಿ ನೀವು ಇದನ್ನು ಲಕೇಳಬಹುದು 🙂

 

ಇತರೇ ಭಾಷೆಗಳಲ್ಲಿನ ಕೆಲವು ಸೂಪರ್ ಹಿಟ್ ಹಾಡುಗಳು ಇಲ್ಲಿವೆ. ಕೇಳಿ ಆನಂದಿಸಿ :

===
ಶ್ರೀ ವಿನಾಯಕಂ
ಚಿತ್ರ : ಭರತಂ (ಮಲಯಾಳಂ)

ಶ್ರೀ ರಂಗ ರಂಗನಾಥನ್
ಚಿತ್ರ : ಮಹಾನದಿ  (ತಮಿಳ್)

ಸುಮುಹೂರ್ತಮಾಯ್
ಚಿತ್ರ : ಕಮಲದಳಂ (ಮಲಯಾಳಂ)

ಜಾ ತೊಸೆ ನಹೀ ಬಲೂ..
ಚಿತ್ರ : ಪರಿವಾರ್ (ಹಿಂದಿ)

ರಾಗಂಗಳೇ ಮೋಹಂಗಳೇ
ಚಿತ್ರ : ತಾರಾಟ್ಟು  (ಮಲಯಾಳಂ)

ಓ ಚಾಂದ್ ಜಹಾನ್ ಜಾಯೆ..

ಚಿತ್ರ : ಶಾರದ (ಹಿಂದಿ)

ವೆಳ್ಳೈ ಪೂಕ್ಕಳ್
ಚಿತ್ರ : ಕಣ್ಣತ್ತಿಲ್ ಮುತ್ತಮಿಟ್ಟಾಲ್  (ತಮಿಳ್)

ಸದಾ ಇಷ್ಟವಾಗುವ ಹಂಸಧ್ವನಿಯು ನಿಜವಾದ ಹಂಸದ ಧ್ವನಿಯನ್ನು ಹೋಲದೆ ಸಂಗೀತ ಲೋಕದಲ್ಲಿ ಅತಿ ಮನೋಹರ ಹಾಗೂ ಪವಿತ್ರತೆಯ ಕುರುಹಾಗಿದೆ. 🙂

 

– ಶ್ರುತಿ ಶರ್ಮಾ, ಮೈಸೂರು.

5 Responses

  1. sangeetha raviraj says:

    ಸಂಗೀತದ ವಿಚಾರಾವಗಿ ಮೂಡಿಧ ಬರಹ ಅದ್ಭುತ. Keerthanegannu aasvadiside

  2. Dinesh Naik says:

    FINE

  3. VINAY KUMAR V says:

    ಚೆನ್ನಾಗಿದೆ ಚೆನ್ನಾಗಿದೆ! 🙂

  4. swathibhat says:

    ಲೇಖನವು ಬಹಳ ಸುಂದರವಾಗಿ ಮೂಡಿ ಬಂದಿದೆ. ಸಿನಿಮ ಹಾಡುಗಳ ಉದಾಹರಣೆಗಳೊಂದಿಗೆ,ಶಾಸ್ತ್ರಿಯ ಸಂಗೀತದಲ್ಲಿ ಆಸಕ್ತಿ ಇಲ್ಲದವರಿಗೂ ಆಸಕ್ತಿ ಮೂಡುವಂತೆ ಮಾಡಬಲ್ಲದು ಇಂಥಹ ಲೇಖನಗಳು. ಇಂಥಹ ಹಲವಾರು ಲೇಖನಗಳು ಪ್ರಕಟವಾಗಲಿ ಎಂದು ಆಶಿಸುತ್ತೇನೆ.

  5. Shruthi Sharma says:

    ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: